ಪಾರಂಪರಿಕ ಸಂಗೀತದ ಜೊತೆಗೆ ಫ್ಯೂಷನ್ ಬೆಸೆದಿದೆ. ಸಾಂಪ್ರದಾಯಿಕ ನೃತ್ಯದ ಜೊತೆಗೆ ಸಮಕಾಲೀನ ನೃತ್ಯ ತಳುಕು ಹಾಕಿಕೊಂಡಿದೆ. ಈ ವಿಭಿನ್ನ ಫ್ಯೂಷನ್ ಸಂಗೀತ ಉತ್ಸವ ನಡೆದದ್ದು ಬೆಂಗಳೂರಿನಲ್ಲಿ.

ಜಗತ್ತು ಡಿಜಿಟಲ್ ಯುಗದತ್ತ ಮುಖ ಮಾಡಿದಂತೆ ಸಾಂಸ್ಕೃತಿಕ ಲೋಕದಲ್ಲೂ ಹೊಸತನದ ಹೊಳಪು. ಸಾಂಪ್ರದಾಯಿಕ ಶಾಸ್ತ್ರೀಯ ಸಂಗೀತದ ಜೊತೆಗೆ ವಿಶ್ವ ವ್ಯಾಪಿ ಫ್ಯೂಷನ್ ತಳುಕು ಹಾಕಿಕೊಂಡಿದೆ. ಅದೇ ರೀತಿ ಪಾರಂಪರಿಕ ಭರತನಾಟ್ಯ, ಕಥಕ್ ನೃತ್ಯಗಳ ಜೊತೆಗೆ ಫ್ಯೂಷನ್ ನೃತ್ಯ, ಸಮಕಾಲೀನ ನೃತ್ಯಗಳು ಒಂದರೊಳಗೊಂದು ಬೆಸೆದು ಅದ್ಭುತ ರಸಪಾಕ ಸೃಷ್ಟಿಸುತ್ತಿವೆ.

ಷಡ್ಜ, ರಿಷಭ, ಗಾಂಧಾರ... ಆಧಾರಿತ ಶಾಸ್ತ್ರೀಯ ಸಂಗೀತದ ಜೊತೆಗೆ ಫ್ಯೂಷನ್, ಶಾಸ್ತ್ರೀಯ ನೃತ್ಯದ ಜೊತೆಗೆ ಫ್ಯೂಷನ್ ನೃತ್ಯಗಳೆರಡೂ ಸಮಾಗಮವಾಗಿ ಕೇಳುಗ–ನೋಡುಗರಲ್ಲಿ ಸಂಚಲನ ಮೂಡಿಸಿದ್ದು ಕಳೆದ ವಾರವಿಡೀ ಬೆಂಗಳೂರಿನಲ್ಲಿ ನಡೆದ ಫ್ಯೂಷನ್ ಸಂಗೀತ ಮತ್ತು ನೃತ್ಯ ಉತ್ಸವ.

ಭಾರತೀಯ ವಿದ್ಯಾ ಭವನ ಸಭಾಂಗಣದಲ್ಲಿ ಉತ್ಸವ ಆಯೋಜಿಸಿ ಸಂಗೀತಕ್ಕೆ, ನೃತ್ಯಕ್ಕೆ ಒಟ್ಟಾರೆಯಾಗಿ ‘ಲಲಿತ ಕಲೆಗೆ ಯಾವುದೇ ಎಲ್ಲೆ ಇಲ್ಲ, ಕಲಾಸ್ವಾದನೆಯೇ ಎಲ್ಲ’ ಎಂಬುದನ್ನು ಸಾಬೀತುಪಡಿಸಿತು. ಈ ಉತ್ಸವದಲ್ಲಿ 75 ಕಲಾವಿದರು ಭಾಗವಹಿಸಿದ್ದು, 16 ವಿವಿಧ ಕಾರ್ಯಕ್ರಮಗಳು ನಡೆದು ರಂಜಿಸಿದವು.

ಹಾಗೆ ನೋಡಿದರೆ ಬೆಂಗಳೂರೂ ಸೇರಿದಂತೆ ರಾಜ್ಯದ ಯಾವುದೇ ಭಾಗಗಳಲ್ಲಿ ಫ್ಯೂಷನ್ ಸಂಗೀತ ಪ್ರತ್ಯೇಕವಾಗಿ ನಡೆಯುವುದು ಕಡಿಮೆಯೇ. ಜೊತೆಗೆ ಇದು ‘ಥೀಮ್ ಆಧಾರಿತ’ ಕಾರ್ಯಕ್ರಮಗಳಾಗಿದ್ದು, ನಶಿಸಿ ಹೋಗುತ್ತಿವೆ ಎಂಬ ಆತಂಕದಲ್ಲಿರುವ ನಮ್ಮ ಸಂಗೀತ, ಪರಂಪರೆಯನ್ನು ಪುನಶ್ಚೇತನಗೊಳಿಸಲೆಂದೇ ಆಯೋಜಿಸಿದ ಕಾರಣ ಈ ಸಂಗೀತ ಉತ್ಸವಕ್ಕೆ ಮಹತ್ವ ಬಂದಿದೆ.

ವೈವಿಧ್ಯಮಯ ಕಛೇರಿಗಳು: ಏಳು ದಿನಗಳ ಸಂಗೀತ–ನೃತ್ಯ ಹಬ್ಬದಲ್ಲಿ ಥರಾವರಿ ಕಾರ್ಯಕ್ರಮಗಳು ಮುದ ನೀಡುವಂತಿದ್ದವು. ಬ್ಯಾಗ್ಪೈಪರ್ಸ್ ಸಂಗೀತ, ಕಿಂಗ್ಸ್ ಬ್ಯಾಂಡ್ ಜೈಪುರ ಫ್ಯೂಷನ್ ಸಂಗೀತ, ಶ್ರೀಧರ ಸಾಗರ ಅವರ ಸ್ಯಾಕ್ಸೊಫೋನ್ ಜೊತೆಗೆ ಒಡಿಸ್ಸಿ ನೃತ್ಯ ಕಲಾವಿದೆ ಮಧುಲಿತಾ ಮೊಹಾಪಾತ್ರ ಅವರ ನೃತ್ಯ, ಪ್ರವೀಣ್ ಡಿ. ರಾವ್ ತಂಡದಿಂದ ಚಕ್ರಫೋನಿಕ್ಸ್ ಟ್ರಯೊ, ಮಧು ನಟರಾಜ್ ತಂಡದಿಂದ ಪಾಲಿಂಪ್ಸೆಸ್ಟ್ ನೃತ್ಯ ಕಲಾರಸಿಕರಿಗೆ ವಿಭಿನ್ನ ಅನುಭವ ನೀಡಿತು.

ಮರಳು ಕಲಾವಿದ ರಾಘವೇಂದ್ರ ಹೆಗಡೆ ಅವರ ಮರಳು ಮಾಧುರ್ಯ ಮತ್ತು ಮೌನ ರಾಮಚಂದ್ರ ಅವರ ಗಾಯನ, ಸಂಧ್ಯಾ ಉಡುಪ ತಂಡದವರಿಂದ ‘ನವರಾತ್ರಿ’ ನೃತ್ಯ, ಅಮಿತ್ ನಾಡಿಗ್ ಕೊಳಲು, ಮಥಿಯಾಸ್ ಸ್ಕ್ರಿಫ್ಲ್ ಟ್ರಂಪೆಟ್, ಮುತ್ತು ಕುಮಾರ್ ತಬಲಾ ಮತ್ತು ತಂಡದಿಂದ ಮಥಿಯಾಸ್ ಸ್ಕ್ರಿಫ್ಲ್ ಒಳಗೊಂಡ ಮಿಸ್ಟಿಕ್ ವೈಬ್ಸ್ ಕೂಡ ಫ್ಯೂಷನ್ ಸಂಗೀತದ ಅಸ್ತಿತ್ವವನ್ನು ಒತ್ತಿ ಹೇಳಿದಂತಿತ್ತು. ‘ಸಖಿ’ ಶೀರ್ಷಿಕೆಯ ನೃತ್ಯ ಕಾರ್ಯಕ್ರಮ ಚಿತ್ರಾ ಅರವಿಂದ್ ತಂಡದಿಂದ ನೃತ್ಯ ಮತ್ತೊಂದು ಕಾರ್ಯಕ್ರಮ ಆಸ್ವಾದಿಸುವ ಅವಕಾಶ ಸಹೃದಯರಿಗೆ ಒದಗಿತು.

ರವೀಂದ್ರ ಕಾಟೋಟಿ ಮತ್ತು ತಂಡದವರಿಂದ ಹಾರ್ಮೋನಿಯಂ ಮತ್ತು ಅಕಾರ್ಡಿಯನ್ ಫ್ಯೂಷನ್ ನಂತರ ಅಭಿಷೇಕ್ ಅಯ್ಯಂಗಾರ್ ಅವರ ನಿರ್ದೇಶನದ ‘ಬೈ 2 ಕಾಫಿ’ ನಾಟಕವೂ ಸಾಂಸ್ಕೃತಿಕ ಲೋಕದಲ್ಲಿ ಹೊಸ ಭಾಷ್ಯ ಬರೆಯಿತು. ಕೆ.ಜೆ.ದಿಲೀಪ್ ಮತ್ತು ತಂಡದಿಂದ ಪಿಟೀಲು ಮತ್ತು ಪಿಯಾನೊ ನಂತರ ಶ್ರೀವಿದ್ಯಾ ಅಂಗಾರ, ಗೌರಿ ಮತ್ತು ಶುಭಾ ನಾಗರಾಜನ್ ಮತ್ತು ತಂಡದಿಂದ ಜಯದೇವರ ಗೀತ ಗೋವಿಂದ ಮೂಲಕ ‘ಸಮ್ಯಾನ’ ಎಂಬ ನೃತ್ಯ ಕಾರ್ಯಕ್ರಮ, ಕೂಚಿಪುಡಿ, ಒಡಿಸ್ಸಿ ಮತ್ತು ಭರತನಾಟ್ಯದ ಮೂಲಕ ಅಷ್ಟಪದಿಗಳ ಪ್ರದರ್ಶನ, ಪ್ರವೀಣ್ ಗೋಡ್ಖಿಂಡಿ ಅವರ ಕೊಳಲು ‘ರಾಗ್ ರಂಗ್ ಫ್ಯೂಷನ್’ ಕಛೇರಿ ನಾದಲೋಕದಲ್ಲಿ ವಿಹರಿಸುವಂತಿತ್ತು.

ನಾಡಿನ ಭಾಷೆ, ಸಂಸ್ಕೃತಿ, ಸಂಗೀತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇನ್ಫೋಸಿಸ್ ಹಾಗೂ ಭಾರತೀಯ ವಿದ್ಯಾ ಭವನ ಎರಡೂ ಸಂಸ್ಥೆಗಳ ನಡುವಿನ ಸಂಬಂಧಕ್ಕೆ 25 ವರ್ಷ ಕಳೆದಿದೆ. ಇದರ ನೆನಪಿಗಾಗಿ ದೇಶದಾದ್ಯಂತ ವರ್ಷವಿಡೀ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರೀಡ್ಸ್ ವಾದ್ಯಗಳ ಚಮತ್ಕಾರ

ಎರಡೂ ವಾದ್ಯಗಳು ಯುರೋಪ್ ಮೂಲದ್ದು. ಹಾರ್ಮೋನಿಯಂ ಭಾರತೀಯ ಶಾಸ್ತ್ರೀಯ ಸಂಗೀತದೊಂದಿಗೆ ಹಾಸುಹೊಕ್ಕಾಗಿದೆ. ನಮ್ಮ ಸಂಸ್ಕೃತಿಗೆ ಒಗ್ಗಿಕೊಂಡಿದೆ. ಅಕಾರ್ಡಿಯನ್ನಲ್ಲಿ ನಾದದ ಹೊಂದಾಣಿಕೆ ಇರುತ್ತದೆ. ಇದರಲ್ಲಿ ಯುರೋಪಿನ ಪಾಪ್ ಸಂಗೀತವನ್ನು ಮಾಧುರ್ಯಭರಿತವಾಗಿ ನುಡಿಸಬಹುದು. ರಾಗ ಮತ್ತು ಸ್ಕೇಲ್ ಅನ್ನು ಮ್ಯಾಚ್ ಮಾಡಿಕೊಂಡು ಫ್ಯೂಷನ್ ಸಂಗೀತವನ್ನು ನುಡಿಸಿದಾಗ ಕೇಳುಗರಲ್ಲಿ ವಿಶಿಷ್ಟ ಮೂಡ್ ಸೃಷ್ಟಿಯಾಗುತ್ತದೆ.

ಹಾರ್ಮೋನಿಯಂನಲ್ಲಿ ಪಂ. ರವೀಂದ್ರ ಕಾಟೋಟಿ ಅವರು ಜನಪ್ರಿಯ ವಾದಕ. ಎಂ.ಬಿ. ಪ್ರಕಾಶ್ ಹಾಗೂ ರವಿ ಬೆಣ್ಣೆ ಅವರು ಅಕಾರ್ಡಿಯನ್ನಲ್ಲಿ ಪಳಗಿದವರು. ಸುಮಾರು ಒಂದು ಗಂಟೆ ಕಾಲ ನಡೆದ ಕಛೇರಿಯಲ್ಲಿ ಹಾರ್ಮೋನಿಯಂನಲ್ಲಿ ಕಾಟೋಟಿ ಅವರು ರಾಗ ಕಿರವಾಣಿ, ಬಿಹಾಗ್ ಹಾಗೂ ಪಹಾಡಿಯನ್ನು ನುಡಿಸಿದರು. ಹಾಗೂ ಸ್ವತಂತ್ರವಾಗಿ ರಾಗ ಪೂರಿಯಾ ಧನಾಶ್ರೀ ಆಪ್ಯಾಯಮಾನವಾಗಿತ್ತು.

ರಾಗಕ್ಕೆ ತಕ್ಕಂತೆ ಅಕಾರ್ಡಿಯನ್ ಮಧುರಾತಿಮಧುರವಾಗಿ ನಾದದ ಹೊನಲನ್ನು ಹರಿಸಿದ್ದು ‘ಫ್ಯೂಷನ್ ಸಂಗೀತ’ದ ಸವಿಯನ್ನು ಕೇಳುಗರು ಕೊಂಡಾಡುವಂತಾಯಿತು. ಈ ಕಛೇರಿಯ ಹೆಸರು ‘ಧಾತ್ರಿ’. ಹೊಸ ಪರಿಕಲ್ಪನೆ. ಇದು ಹಾರ್ಮೋನಿಯಂ ಹಾಗೂ ಅಕಾರ್ಡಿಯನ್ಗಳೆರಡರ ನಾದವನ್ನೂ ಬೆಸೆಯುವ ಹೊಸ ಪ್ರಯೋಗ. ಎರಡೂ ವಾದ್ಯಗಳಲ್ಲಿ ಇರುವ ರೀಡ್ಸ್ ಒಂದೇ ತೆರನವು. ವಾದನಕ್ರಮವೂ ಹೆಚ್ಚು ಕಡಿಮೆ ಒಂದೇ. ಹಿಂದೂಸ್ತಾನಿ ಸಂಗೀತ ಹಾರ್ಮೋನಿಯಂನ ಮೊಳಗಿದರೆ, ಜಾನಪದ ಸಂಗೀತದ ಸೊಗಡು ಅಕಾರ್ಡಿಯನ್ನಲ್ಲಿ ವಿಜೃಂಭಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.