'ಎರಡು ಬಾವಿಗಳ ನಡುವೆಯೊಂದು ಸೇತುವೆ'- ಮೂಗಿನ ಬಗ್ಗೆ ವಿಶೇಷ ಆಸ್ಥೆ ಉಂಟಾಗಿದ್ದು ಮೂರು ಕಾರಣಗಳಿಗಾಗಿ. ಮೊದಲನೆಯದಾಗಿ-ರಾಮಾಯಣದಲ್ಲಿ ಬರುವ ಶೂರ್ಪನಖಿಯ ಕತೆ. ಕಾಳಗ ಎಂದರೆ ವೈರಿಗಳ ಕೈಯನ್ನೋ ಕಾಲನ್ನೋ ಮುರಿಯುವುದು ಸಾಮಾನ್ಯ. ಆದರೆ ಇಲ್ಲಿ ಲಕ್ಷ್ಮಣ, ಎಲ್ಲಾ ಬಿಟ್ಟು ಶೂರ್ಪನಖಿಯ ಮೂಗು, ಮೊಲೆಗಳನ್ನೇ ಏಕೆ ಕತ್ತರಿಸಿದ ಎಂಬ ಪ್ರಶ್ನೆ ಬಾಲ್ಯದಲ್ಲಿ ಬಹುವಾಗಿ ಕಾಡಿತ್ತು. ಅಯೋಧ್ಯ ಕುಮಾರರ ವಿಷಯದಲ್ಲಿ ಅನವಶ್ಯಕವಾಗಿ 'ಮೂಗು ತೂರಿಸಿದಳು' ಎಂಬ ಕಾರಣ ಹೌದಾದರೂ, ಅವನು ಮೂಗನ್ನೇ ಏಕೆ ಛೇದಿಸಿದ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಮಕ್ಕಳ ಕಾದಂಬರಿ ‘ಪಿನೋಕಿಯೋ’ದಲ್ಲಿ ಕಥಾಬಾಲನಾಯಕ ಸುಳ್ಳು ಹೇಳಿದರೆ ಮೂಗು ಬೆಳೆಯುತ್ತದೆ ಎಂದು ಗೊತ್ತಿದ್ದೂ ಪ್ರತೀ ಬಾರಿ ಸುಳ್ಳು ಹೇಳುತ್ತಾನಲ್ಲ, ಇವನೇಕೆ ಪಾಠ ಕಲಿಯುವುದಿಲ್ಲ ಎಂದು ಬೇಸರಪಟ್ಟುಕೊಳ್ಳುತ್ತಿದ್ದೆ. ಮೂರನೆಯದ್ದು ವಿವೇಕಾನಂದರ ನೀತಿಕತೆಗಳಲ್ಲಿನ 'ಮೊಂಡುಮೂಗಿನ ದಂಪತಿಗಳ' ಕತೆಯಲ್ಲಿ- ಒದಗಿಬಂದ ಅವಕಾಶವನ್ನು ತಮ್ಮ ಮೂರ್ಖತನದಿಂದಾಗಿ ಕಳೆದುಕೊಳ್ಳುವ ಕತೆ ಹಾಸ್ಯದ ಜೊತೆ ಕರುಣೆಯನ್ನೂ ಮೂಡಿಸಿ, ಮನಸ್ಸಿನ ಬಹಳ ಪರಿಣಾಮ ಬೀರಿತ್ತು.

'ಮುಖಕ್ಕೆ ಮೂಗು ಚಂದ, ಮೂಗಿಗೆ ಮೇಲೆರಡು ಕಣ್ಣು ಚಂದ' ನಿಜವಾದರೂ ಜನ್ಮಜಾತವಾಗಿ ಬಂದ ಗಿಣಿಮೂಗು, ಓರೆಮೂಗು, ಸೊಟ್ಟಮೂಗು, ಉದ್ದಮೂಗನ್ನು ಸುಂದರವಾಗಿಸಿಕೊಳ್ಳಲು ವೈದ್ಯರ ಮೊರೆ ಹೋಗುವುದುಂಟು. ಶ್ರೀದೇವಿ, ರೇಖಾ, ಹೇಮಾಮಾಲಿನಿ, ರಮ್ಯಾರ ನಟನಾ ಪ್ರತಿಭೆಯಂತೆಯೇ ರೈನೋಪ್ಲಾಸ್ಟಿಯಿಂದ ಮೂಗನ್ನು ಸರಿ ಮಾಡಿಕೊಂಡಿದ್ದು ಅಷ್ಟೇ ಗುಲ್ಲೆಬ್ಬಿಸಿತ್ತು. ರಾಜ್ಕುಮಾರ್, ಇಂದಿರಾಗಾಂಧಿಯವರ ವ್ಯಂಗ್ಯಚಿತ್ರಗಳಲ್ಲಿ ಮೂಗೇ ಹೆಗ್ಗುರುತು. ಮೂಗು ಎಷ್ಟೇ ಚಂದದ ಸಂಪಿಗೆಯಂತಿದ್ದರೂ ಮೂಗುತಿ ಇಲ್ಲದಿದ್ದರೆ ಅಪೂರ್ಣ. ಸಾನಿಯಾ ಮಿರ್ಜಾಳ ಆಟದ ವೈಖರಿಗಿಂತ ಅವಳ ಮೂಗುತಿಯೇ ಆಕರ್ಷಣೀಯವಾಗಿ, ಅವಳ ಅನುಯಾಯಿಯಾದವರು ಹಲವು ತರಳೆಯರು.

ಪುರಂದರದಾಸರ ಪೂರ್ವಾಶ್ರಮದ ಮೂಗುತಿ ಕತೆ ಜನಜನಿತ. ಕನ್ಯಾಕುಮಾರಿಯ ದೇದಿಪ್ಯಮಾನವಾದ ವಜ್ರದ ಮೂಗುತಿ ಅನೇಕ ಸಮುದ್ರಯಾನಿಗಳ ದಿಕ್ಕುಗೆಡಿಸುತ್ತಿತಂತೆ. ಈ ಮೂಗಿನ ಆಕರ್ಷಣೆ ಕನಕದಾಸರನ್ನೂ ಬಿಡಲಿಲ್ಲ. ಮನಸ್ಸಿನ ಸ್ವಭಾವವನ್ನು ನಿಯಂತ್ರಿಸುವ ಬಗ್ಗೆ 'ಕೆಂಪುಮೂಗಿನ ಪಕ್ಷಿ' ಎಂಬ ಮುಂಡಿಗೆಯನ್ನೇ ಬರೆದು, ಪಂಡಿತರಿಗೆ ಸವಾಲು ಹಾಕಿದರು. ಮೋಹನ ತರಂಗಿಣಿಯಲ್ಲಿ ನೀರು ತರುವ ಆಳುಗಳನ್ನು ಉದ್ದೇಶಿಸಿ 'ವೀರರ ಮೂಗಿಗೆ ಕವಡೆಯಿಕ್ಕಿ ನೀರ್ತರಿಸಿ' ಎನ್ನುತ್ತಾರೆ. ಇಷ್ಟೇ ಅಲ್ಲದೆ ಹಟಹೂಡುವ, ಹೇಳಿದ ಮಾತನ್ನು ಕೇಳದ ದನಗಳಿಗೆ ಗೌಳಿಗರು ‘ಮೂಗುದಾರ’ ಹಾಕಿ ಅವುಗಳನ್ನು ಹದಕ್ಕೆ ತರುತ್ತಾರೆ. ಮೂಗನ್ನು ಸುರಿಯದೇ ಹಾಗೆಯೇ ಮುಖಕ್ಕೆ ಬಲವಾದ ಹಗ್ಗ ಕಟ್ಟಿ ಚೇಷ್ಟೆ ಮಾಡುವ ದನಗಳನ್ನು ಹಿಡಿತಕ್ಕೆ ತರುವಲ್ಲಿ 'ದುಡಿ'ಯ ಪಾತ್ರ ಹಿರಿದು. ವಿಮರ್ಶಕರು 'ಚೋಮನ ದುಡಿ' ಎಂಬ ಹೆಸರಿನ ಔಚಿತ್ಯವನ್ನೂ ಹೀಗೂ ಕಂಡುಕೊಂಡಿದ್ದಾರೆ. ಏಕೆಂದರೆ ವಿಮರ್ಶಕರ ವಿಮರ್ಶೆ ಎಂದರೆ ಯಾವತ್ತೂ ‘ಮೂಗಿನ ನೇರ’. ಅಲ್ಲವೇ? 500 ರೂಪಾಯಿಯ ಸೀರೆಯ ರವಿಕೆ ಹೊಲಿದು, ಪ್ರತೀ ಸಲ ನಾಲ್ಕಂಕಿಯ ಬಿಲ್ಲನ್ನು ದರ್ಜಿ ಕೊಡುವಾಗ ನನ್ನವರು 'ಮೂಗಿಗಿಂತ ಮೂಗುತಿ ಭಾರ' ಎಂದು ಗೊಣಗಿಕೊಳ್ಳುವುದು ನನಗೆ ಕೇಳಿಸಲಿಲ್ಲವೆಂದೆಣಿಸಿಕೊಳ್ಳುತ್ತಾರೆ.

(ಮೂಗುತಿಯ ಬಗ್ಗೆ ಜೋಕೊಂದು ಶಾಲೆಯಲ್ಲಿರುವಾಗ ಪ್ರಚಲಿತದಲ್ಲಿತ್ತು. ಒಬ್ಬಳಿಗೆ ಯಾವತ್ತೂ ಮೈಯಲ್ಲಿ ತುರಿಕೆ, ಅದಕ್ಕೆ ಎಡಕೈಮೇಲೆ ಬಲಗೈ ಹಾಕಿ ‘ನಮ್ಮನೆಯ ಪಡುವಲಕಾಯಿ ಈ..ಷ್ಟುದ್ದ, ಈ..ಷ್ಟುದ್ದ’ ಎಂದು ಎಳೆದೂ ಎಳೆದೂ ಅಳತೆ ತೋರಿಸುತ್ತಿದ್ದಳಂತೆ. ಜೊತೆಗೆ ತುರಿಸಿಕೊಂಡಂತೆಯೂ ಆಯಿತು. ಮತ್ತೊಬ್ಬಳು, ಹೊಸತಾಗಿ ಮೂಗು ಚುಚ್ಚಿಸಿಕೊಂಡವಳು 'ನನಗೆ ಇವತ್ತು ಜೋರು ಶೀತ' ಎಂದು ಪದೇ ಪದೇ ಮೂಗನ್ನು ಸವರಿಕೊಳ್ಳುತ್ತಿದ್ದಳಂತೆ.)

ಈ ಮುಂಚೆ ಹೇಳಿದಂತೆ ವೈದ್ಯರಿಗೂ, ಮೂಗಿಗೂ ಅವಿನಾಭಾವ ಸಂಬಂಧ. ಬಾಯಿಯನ್ನು ಬಿಟ್ಟರೆ ಕೀಟಾಣುಗಳು ಬಲುಬೇಗ ದೇಹ ಸೇರಿಕೊಳ್ಳುವುದು ಮೂಗಿನ ಮೂಲಕ. ಹೀಗಾಗಿ ಕೆಮ್ಮುವಾಗ, ಸೀನುವಾಗ ಮೂಗು ಮುಚ್ಚಿಕೊಳ್ಳಬೇಕೆಂದು ಸಲಹೆ ನೀಡುತ್ತಾರೆ. ಮೂಗಿನ ವಾಸನೆ ಮೂಸಿ ರೋಗ ನಿರ್ಧಾರ ಮಾಡುವಲ್ಲೂ ಚತುರಮತಿಯರಂತೆ ವೈದ್ಯರು. ಆದರೆ ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಯಾವಾಗಲೂ ಶೇಖರವಾಗಿರುವ ಕಸದ ವಾಸನೆಯಿಂದ ತಪ್ಪಿಸಿಕೊಳ್ಳಲು ಎಲ್ಲರೂ 'ಮೂಗು ಮುಚ್ಚಿಕೊಂಡೇ' ಓಡಾಡುವ ಪರಿಸ್ಥಿತಿ. ಕರಾವಳಿಯಲ್ಲಿ, ಹಲಸಿನಹಣ್ಣಿನ ಸೀಸನ್ನಲ್ಲಿ ‘ಓಹೋ! ಯಾರದ್ದೋ ಮನೆಯಲ್ಲಿ ಇವತ್ತು ಮುಳುಕ, ಕಡಬು, ಪಾಯಸ’ ಎಂದು 'ಮೂಗರಳಿಸಿಕೊಂಡೇ' ಇರುವ ಸ್ಥಿತಿ. ಮದುವೆ ಊಟದಲ್ಲಿ ಹೋಳಿಗೆ, ಜಿಲೇಬಿ ಎಂದು 'ಮೂಗಿನವರೆಗೆ' ತಿಂದಿದ್ದರೂ ಐಸ್ಕ್ರೀಂ, ಹಣ್ಣು, ಬೀಡಾಗಳಿಗೆ ಸ್ವಲ್ಪವಾದರೂ ಜಾಗ ಹೊಟ್ಟೆಯಲ್ಲಿ ಇದ್ದೇ ಇರುತ್ತದೆ.

ಇಷ್ಟು ಓದಿದ ಮೇಲೆ ‘ಇನ್ನೂ ಮುಗಿಯಲಿಲ್ಲವೇ ನಿನ್ನ ಪುರಾಣ’ಎಂದು ಮೂಗು ಮುರಿದಿರೇ? ಅಥವಾ ಮೂಗಿನ ತುದಿ ಕೋಪ ಬಂತೇ? ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಾರದು, ನೆನಪಿರಲಿ. ಕೊಯ್ದುಕೊಳ್ಳಬೇಕೆನಿಸಿದರೂ ನಿಮ್ಮ ಕತ್ತಿ ಹೆಣದ ಮೂಗನ್ನು ಕೊಯ್ಯಬಲ್ಲಷ್ಟು ಹರಿತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಒಂದೊಮ್ಮೆ ಕೊಯ್ದುಕೊಂಡರೂ ನಿಮ್ಮ ಸುಲೋಚನ ಜಾಗ ಇಲ್ಲದೆ ನಿರ್ವಸತಿಳಾಗುತ್ತಾಳೆ. ಅಬ್ಬಬ್ಬಾ! ಇಷ್ಟೆಲ್ಲಾ ಮೂಗಿನ ಬಗ್ಗೆ ಇದೆಯೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿರೇ?ನೀವೇನೋ ಬೆರಳಿಟ್ಟುಕೊಂಡಿರಿ; ಆದರೆ ಏಡಿ, ಚಿಟ್ಟೆ, ಅಕ್ಟೋಪಸ್, ಹಾವುಗಳಿಗೆ ಮೂಗೇ ಇಲ್ಲದಿರುವ ವಿಷಯ ನಿಮಗೆ ಗೊತ್ತಿತ್ತೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.