ಇತ್ತೀಚೆಗೆ ನಿಧನರಾದ ರಂಗನಟ, ಮಾತಿನ ಮೋಡಿಗಾರ ಮಾಸ್ಟರ್ ಹಿರಣ್ಣಯ್ಯ ಮನುಷ್ಯರ ಬಗ್ಗೆ ಒಂದು ಮಾತನ್ನು ಪದೇ ಪದೇ ಹೇಳುತ್ತಿದ್ದರು. ಮನುಷ್ಯರಲ್ಲಿ ಎರಡು ವಿಧ. ಒಂದು ಇದ್ದೂ ಸತ್ತಂತೆ ಇರುವವರು. ಇನ್ನೊಂದು ವಿಧ ಎಂದರೆ ಸತ್ತ ಮೇಲೂ ಬದುಕಿರುವವರು. ಇದ್ದೂ ಸತ್ತಂತೆ ಇರುವವರು ವಿಧಾನಸೌಧ, ವಿಕಾಸಸೌಧದಲ್ಲಿ ಇರುತ್ತಾರೆ. ಟೇಬಲ್ ಕೆಳಗೆ ಆಗಾಗ ಕೈ ಚಾಚುತ್ತಿರುವುದರಿಂದ ಅವರು ಬದುಕಿದ್ದಾರೆ ಎನ್ನಬಹುದೇ ವಿನಾ ಯಾರ ಪಾಲಿಗೆ ಅವರು ಬದುಕಿರಬೇಕಿತ್ತೋ ಅವರ ಪಾಲಿಗೆ ಅವರು ಯಾವಾಗಲೋ ಸತ್ತು ಹೋಗಿದ್ದಾರೆ. ಇನ್ನು ಸತ್ತ ಮೇಲೂ ಬದುಕಿರುವವರು ಎಂದರೆ ಶ್ರೇಷ್ಠ ಕಲಾವಿದರು. ಅವರು ಸತ್ತ ನಂತರವೂ ಕಲೆಯ ರೂಪದಲ್ಲಿ ಬದುಕಿರುತ್ತಾರೆ. ಇದು ಹಿರಣ್ಣಯ್ಯ ಅವರ ಮಾತು.

ಮೊನ್ನೆ ಮೊನ್ನೆಯಷ್ಟೇ ನಿಧನರಾದ ಬಡಗುತಿಟ್ಟಿನ ಶ್ರೇಷ್ಠ ಭಾಗವತ ಈ ಎರಡೂ ವರ್ಗಕ್ಕೆ ಸೇರಿದವರಲ್ಲ. ಅವರದ್ದು ಮತ್ತೊಂದು ವಿಧ. ಅವರು ಸತ್ತ ಮೇಲೂ ಬದುಕಿರುತ್ತಾರೆ ನಿಜ. ಅದರ ಜೊತೆಗೆ ಅವರು ಬದುಕಿದ್ದಷ್ಟೂ ಕಾಲ ಇನ್ನೊಬ್ಬ ಶ್ರೇಷ್ಠ ಕಲಾವಿದರನ್ನೂ ಬದುಕಿಸಿದ್ದರು. ಇಡಗುಂಜಿಯಲ್ಲಿ ಶ್ರೀರಾಮನ ಪಾತ್ರ ವಹಿಸಿದ್ದಾಗಲೇ 2009ರಲ್ಲಿಯೇ ಕೆರೆಮನೆ ಶಂಭು ಹೆಗಡೆ ಅವರು ರಂಗದಲ್ಲಿಯೇ ನಿಧನರಾದರು. ಆದರೆ, 2019ರ ಮೇ 11ರವರೆಗೆ ಅವರನ್ನು ತಾಜಾ ತಾಜಾ ಜೀವಂತ ಇಟ್ಟವರು ನೆಬ್ಬೂರು ನಾರಾಯಣ ಭಾಗವತರು.

ರಾಮ ನಿರ್ಯಾಣ ಪ್ರಸಂಗದಲ್ಲಿ ಯಾರೇ ರಾಮನ ಪಾತ್ರ ಹಾಕಿರಲಿ, ನೆಬ್ಬೂರು ಭಾಗವತರು ಪದ್ಯ ಹೇಳುತ್ತಿದ್ದಾರೆ ಎಂದರೆ ಅಲ್ಲಿದ್ದ ಬಹುತೇಕ ಪ್ರೇಕ್ಷಕರ ಮನದಲ್ಲಿ ಮೂಡುತ್ತಿದ್ದುದು ಶಂಭು ಹೆಗಡೆ ಅವರ ರಾಮ. ಅದೇ ರೀತಿ ಕರ್ಣ, ಕೃಷ್ಣ, ಹರಿಶ್ಚಂದ್ರ, ನಳ ಮುಂತಾದ ಯಾವುದೇ ಪ್ರಸಂಗದಲ್ಲಿ ನೆಬ್ಬೂರು ಪದ್ಯ ಹೇಳಿದರೂ ಅಲ್ಲೆಲ್ಲಾ ಶಂಭು ಹೆಗಡೆ ಪ್ರತ್ಯಕ್ಷರಾಗುತ್ತಿದ್ದರು. ಇದೇ 11ರಂದು ನೆಬ್ಬೂರು ನಾರಾಯಣ ಭಾಗವತರು ನಿಧನರಾದಾಗ ಅವರ ಜೊತೆಗೆ ಕೆರೆಮನೆ ಶಂಭು ಹೆಗಡೆ ಅವರೂ ನಿಜವಾದ ಅರ್ಥದಲ್ಲಿ ದಿವಂಗತರಾದರು.

ನೆಬ್ಬೂರು ಭಾಗವತರು ರಂಗದಲ್ಲಿಯೇ ಇರಲಿ, ರಂಗದ ಹೊರಗೇ ಇರಲಿ ಅಲ್ಲೊಂದು ಸಂಭ್ರಮದ ವಾತಾವರಣ ಸೃಷ್ಟಿಯಾಗುತ್ತಿತ್ತು. ಸ್ವರ ಮಾಧುರ್ಯ ಅವರಿಗೆ ಹೇಗೆ ದೈವದತ್ತವೋ ಹಾಗೆ ಕುಶಾಲು ಕೂಡ ದೈವದತ್ತ. ಜೀವನದ ಎಲ್ಲ ಪ್ರಸಂಗಗಳನ್ನೂ ಅವರು ತಮಾಷೆಯಲ್ಲಿಯೇ ತೇಲಿಸುತ್ತಿದ್ದರು. ಅದಕ್ಕೇ ಬಡತನದ ಬೇಗೆಯಲ್ಲಿ, ಸಾಂಸಾರಿಕ ಕಷ್ಟದಲ್ಲಿ ಅವರಿದ್ದರೂ ತುಂಬು ಸಂತೃಪ್ತ ಜೀವನವನ್ನು ನಡೆಸುವುದು ಅವರಿಗೆ ಸಾಧ್ಯವಾಗಿತ್ತು.

ಶಿರಸಿ–ಕುಮಟಾ ರಸ್ತೆಯ ನೆಬ್ಬೂರು ಎಂಬ ಚಿಕ್ಕ ಗ್ರಾಮದಲ್ಲಿ ಹುಟ್ಟಿ ಹಣಗಾರು ಎಂಬ ಇನ್ನೂ ಚಿಕ್ಕ ಗ್ರಾಮದಲ್ಲಿ ಬದುಕನ್ನು ಕಟ್ಟಿಕೊಂಡ ನಾರಾಯಣ ಭಾಗವತರು ಹಣೆಬರಹವನ್ನು ತಾವೇ ಸೃಷ್ಟಿಸಿಕೊಂಡಿದ್ದರು. ಬದುಕು ವಿಕ್ಷಿಪ್ತಗಳ ಮೂಟೆಯಾಗಿತ್ತು. ನಾಲ್ಕನೇ ತರಗತಿಗೆ ಶಾಲೆಯ ಮೆಟ್ಟಿಲನ್ನು ಇಳಿದು ಅಡಿಕೆ ಗೊನೆಗಳಿಗೆ ಕೊಟ್ಟೆ ಕಟ್ಟುವ ಮಟ್ಟಕ್ಕೆ ಏರಿದ ನಾಣಿ ಬಡಗು ತಿಟ್ಟಿನಲ್ಲಿ ನೆಬ್ಬೂರು ಶೈಲಿಯನ್ನೇ ಸೃಷ್ಟಿಸಿದ್ದು ಅದ್ಭುತ ರಮ್ಯ ಕಥನ.

ಕೂಲಿ ಮಾಡಿಕೊಂಡು ಇದ್ದ ನಾರಾಯಣ ಭಾಗವತರ ಕಂಠಶ್ರೀಗೆ ತಲೆಬಾಗಿ ಅವರಿಗೆ ಕೆರೆಮನೆಯ ದಾರಿ ತೋರಿದ್ದು ಕೊಡಗೀಪಾಲ ಗಣಪತಿ ಹೆಗಡೆ. ಯಕ್ಷಗಾನ ಭಾಗವತಿಕೆಯನ್ನು ಕಲಿಯಲು ಅವರು ಆರಿಸಿಕೊಂಡಿದ್ದು ಕೆರೆಮನೆ ಶಿವರಾಮ ಹೆಗಡೆ ಅವರನ್ನು. ಶಿವರಾಮ ಹೆಗಡೆ ಪ್ರಸಿದ್ಧ ಯಕ್ಷಗಾನ ನಟ. ನಾರಾಯಣ ಭಾಗವತರು ಅವರ ಬಳಿಗೆ ಹೋಗಿದ್ದು ಭಾಗವತಿಕೆ ಕಲಿಯಲು. ಅವರು ಕಲಿಸಿದರು. ಇವರು ಕಲಿತರು. ನಂತರ ಶಿವರಾಮ ಹೆಗಡೆ ಅವರನ್ನಷ್ಟೇ ಅಲ್ಲ ಅವರ ಮಗ ಶಂಭು ಹೆಗಡೆ, ಅವರ ಮಗ ಶಿವಾನಂದ ಹೆಗಡೆ, ಅವರ ಮಗ ಶ್ರೀಧರ ಹೆಗಡೆ ಅವರನ್ನೂ ರಂಗದಲ್ಲಿ ಕುಣಿಸಿದರು. ಜೊತೆಗೆ ಕೆರೆಮನೆ ಮಹಾಬಲ ಹೆಗಡೆ, ಗಜಾನನ ಹೆಗಡೆ ಅವರಿಗೂ ಇವರ ಭಾಗವತಿಗೆಯ ರುಚಿ ತೋರಿದರು. ಯಕ್ಷಲೋಕದಲ್ಲಿ ಮೊದಲ ಪದ್ಮಶ್ರೀ ಪಡೆದ ಚಿಟ್ಟಾಣಿ ರಾಮಚಂದ್ರ ಹೆಗಡೆ ಕೂಡ ಇವರ ಭಾಗವತಿಗೆಯ ಮೆರುಗಿನಲ್ಲಿಯೇ ಬೆಳೆದರು.

ಬಡಗುತಿಟ್ಟಿನ ಬಹುತೇಕ ಶ್ರೇಷ್ಠ ಕಲಾವಿದರನ್ನು ನೆಬ್ಬೂರು ಭಾಗವತರು ಕುಣಿಸಿದ್ದರೂ ಶಂಭು ಹೆಗಡೆ ಮತ್ತು ನೆಬ್ಬೂರು ಭಾಗವತರ ಜೋಡಿ ಯಕ್ಷ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಶಂಭು ಹೆಗಡೆ ಅವರ ಬೆಳವಣಿಗೆಯಲ್ಲಿ ಬಹಳ ದೊಡ್ಡ ಪಾಲು ನೆಬ್ಬೂರು ಭಾಗವತರದ್ದು ಇತ್ತು. ನೆಬ್ಬೂರರ ಬೆಳವಣಿಗೆಯಲ್ಲಿ ಶಂಭು ಹೆಗಡೆ ಪಾಲಿತ್ತು. ಅದು ಒಬ್ಬರಿಗೊಬ್ಬರು ಅಂಟಿದ ಜೋಡಿ. ಅವರಿಲ್ಲದೆ ಇವರಿಲ್ಲ. ಇವರಿಲ್ಲದೆ ಅವರಿಲ್ಲ.

ಒಮ್ಮೆ ಶಂಭು ಹೆಗಡೆ ಮನೆಯಲ್ಲಿ ಯಾರೂ ಇರಲಿಲ್ಲ. ಎಲ್ಲರೂ ಧರ್ಮಸ್ಥಳಕ್ಕೆ ಹೋಗಿದ್ದರು. ನೆಬ್ಬೂರು ಭಾಗವತರು ಮತ್ತು ಶಂಭು ಹೆಗಡೆ ಮನೆ ಕಾಯಲಿಕ್ಕೆ ಇದ್ದರು. ಬೆಳಿಗ್ಗೆ ಚಹಾ ಕುಡಿದು ಹೆಚ್ಚು ಉಳಿದಿದ್ದ ಹಾಲನ್ನು ಒಲೆಯ ಮೇಲೆ ಇಟ್ಟು ಹೊರ ಬಂದರು. ಅಂಗಳದಲ್ಲಿ ಭಾಗವತರು ಪದ್ಯ ಹೇಳಿದರು. ಶಂಭು ಹೆಗಡೆ ಅದಕ್ಕೆ ಕುಣಿದರು. ಸುಮಾರು ಎರಡು ಗಂಟೆಯವರೆಗೆ ಈ ಜುಗಲ್ಬಂದಿ ನಡೆಯಿತು. ನಂತರ ಒಳಕ್ಕೆ ಹೋಗಿ ನೋಡಿದರೆ ಒಲೆಯ ಮೇಲಿಟ್ಟ ಹಾಲು ಕಾದು ಕಾದು ತುಪ್ಪವಾಗಿತ್ತು. ‘ಹಾಲನ್ನು ನಿರಂತರವಾಗಿ ಕಾಯಿಸಿದರೆ ತುಪ್ಪವಾಗುತ್ತದೆ’ ಎನ್ನುವುದು ನನಗೆ ಆಗಲೇ ಗೊತ್ತಾಗಿದ್ದು ಎಂದು ಶಂಭು ಹೆಗಡೆ ಹೇಳುತ್ತಿದ್ದರು. ಈ ಜೋಡಿಯೂ ಹಾಗೆ ಒಬ್ಬರು ಕುಣಿಸಿದರು, ಇನ್ನೊಬ್ಬರು ಕುಣಿದರು. ಹೀಗೆ ಯಕ್ಷರಂಗದಲ್ಲಿ ಕುಣಿಯುತ್ತಾ ಕುಣಿಸುತ್ತಾ ಯಕ್ಷತುಪ್ಪವಾದರು.

‘ಯಕ್ಷಗಾನ ರಂಗದಲ್ಲಿ ಎಷ್ಟೇ ಚೆನ್ನಾಗಿ ಪದ್ಯ ಹೇಳಿ ಸೈ ಎನಿಸಿಕೊಳ್ಳಬಹುದು. ಕೆಲವು ಕಸರತ್ತುಗಳನ್ನು ಮಾಡಿ ಪ್ರಸಿದ್ಧಿಯನ್ನೂ ಪಡೆಯಬಹುದು. ಆದರೆ ನನಗೆ ನಾನು ಪ್ರಸಿದ್ಧನಾಗುವುದಕ್ಕಿಂತ ಪ್ರಸಂಗ ಚೆನ್ನಾಗಿ ಆಗುವುದು ಮುಖ್ಯವಾಗಿತ್ತು. ಪ್ರಸಂಗದ ಕತೆ, ಪಾತ್ರ, ಪಾತ್ರದ ಭಾವ ಮುಖ್ಯ. ಅದಕ್ಕೆ ಹಿಮ್ಮೇಳ ಒದಗಬೇಕು. ನನ್ನ ಭಾಗವತಿಕೆಯಲ್ಲಿ ಭಾವನೆಗೇ ಒತ್ತು. ದುಃಖ, ಸಂತೋಷ, ಭಕ್ತಿ ಇವಕ್ಕೆ ಆದ್ಯತೆ ನೀಡಿ ಹಾಡಿದ್ದೇನೆ’ ಎಂದು ಅವರು ಹೇಳುತ್ತಿದ್ದರು.

ನೆಬ್ಬೂರು ಭಾಗವತರು ಮತ್ತು ಬಡತನ ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳು. ಅವರು ತಮ್ಮ ಸಂಬಳ ಎಷ್ಟು ಎಂದು ಯಾರನ್ನೂ ಕೇಳಲಿಲ್ಲ. ಕೊಟ್ಟಿದ್ದು ಕಡಿಮೆ ಆಯಿತು ಎಂದು ಬೇಸರಿಸಿಕೊಳ್ಳಲೂ ಇಲ್ಲ. ಶ್ರೀಮಂತರ ಮನೆಯಿಂದ ಬಂದ ಅವರ ಪತ್ನಿ ಶರಾವತಿಗೂ ಅದನ್ನೇ ಅಭ್ಯಾಸ ಮಾಡಿಸಿದರು. ‘ನಾನೊಬ್ಬಳು ಬಡವರ ಮನೆ ಸೇರಿದೆ ಎಂಬ ಭಾವನೆ ನನ್ನ ಪತ್ನಿಗೆ ಇರಲಿಲ್ಲ. ಅಗದಿ ಖುಷಿಯಿಂದ ಸಂಸಾರ ಮಾಡಿದಳು. ನನ್ನ ಬದುಕಿನ ಗೆಲುವು ಅಂದರೆ ಅದೆ’ ಎಂದು ಮೆಚ್ಚುತ್ತಿದ್ದರು. ಒಮ್ಮೆ ಶಿರಸಿ ತಾಲ್ಲೂಕಿನ ಶೀಗೆಹಳ್ಳಿಯಲ್ಲಿ ನೆಬ್ಬೂರು ಭಾಗವತ ದಂಪತಿಗೆ ಸನ್ಮಾನ. ಅಪರೂಪಕ್ಕೆ ಎನ್ನುವಂತೆ ಶರಾವತಿ ಅವರು ಮಾತನಾಡಿದರು. ‘ಹೆಂಚು ಕಾಣದವಳು ಕಂಚು ಕಂಡ ಹಾಗೆ ನನಗೆ ಆಗಿದೆ. ನಾನು ಹೆಂಚನ್ನೇ ಕಾಣದವಳು. ನೆಬ್ಬೂರು ಭಾಗವತರನ್ನು ಮದುವೆಯಾಗಿ ಕಂಚೇನು ಬಂಗಾರವನ್ನೇ ಕಂಡೆ’ ಎಂದಾಗ ನೆಬ್ಬೂರು ಭಾಗವತರಿಗೂ ಶ್ರುತಿ ತಪ್ಪಿತ್ತು.

ಇಂತಹ ಹೊಂದಾಣಿಕೆಯ ಸಂಸಾರದಲ್ಲಿಯೂ ಒಂದು ದುಃಖದ ಕತೆ ಇದೆ. ಈ ದಂಪತಿಯ ಮೊದಲ ಮಗಳು ಶಾಂತಲಾಳಿಗೆ ಎರಡೂವರೆ ವರ್ಷ ಇರುವಾಗ ಜಾಂಡಿಸ್ ಆಗಿತ್ತು. ಆಗ ನೆಬ್ಬೂರರು ಮನೆಯಲ್ಲಿ ಇರಲಿಲ್ಲ. ಮೇಳಕ್ಕೆ ಹೋಗಿದ್ದರು. ಮಗು ಸತ್ತು ಹೋಯಿತು. ಈ ವಿಷಯ ನೆಬ್ಬೂರರಿಗೆ ಗೊತ್ತಾಗಿದ್ದು ಮೂರು ದಿನದ ಮೇಲೆ. ಆಗ ಫೋನಿನ ವ್ಯವಸ್ಥೆ ಇರಲಿಲ್ಲ. ಇದ್ದರೂ ಎಲ್ಲಿಗೆ ಎಂದು ಫೋನ್ ಮಾಡುವುದು. ಅಂತೂ ಸುದ್ದಿ ಗೊತ್ತಾದರೂ ಅವರು ಮನೆಗೆ ಬರಲಿಲ್ಲ. ಯಕ್ಷರಂಗದಲ್ಲಿ ಕೃಷ್ಣನನ್ನೋ, ರಾಮನನ್ನೋ ಕುಣಿಸಿದರು.

ನೆಬ್ಬೂರಿನ ನಾಣಿ, ನೆಬ್ಬೂರು ನಾರಾಯಣ ಭಾಗವತರಾಗಿ, ಬಡಗುತಿಟ್ಟಿನ ಯಕ್ಷಗಾನದಲ್ಲಿ ನೆಬ್ಬೂರು ಶೈಲಿಯನ್ನೇ ಹುಟ್ಟು ಹಾಕಿದ್ದು ಕಡಿಮೆ ಸಾಧನೆ ಅಲ್ಲ. ಅಷ್ಟೊಂದು ದೊಡ್ಡ ಭಾಗವತರಾಗಿದ್ದರೂ ಅವರು ಬೀಗಲಿಲ್ಲ. ಬಾಗಿದರು. ಸರಳ ಸಜ್ಜನಿಕೆಯ ನಡವಳಿಕೆ. ಯಾರ ಮನಸ್ಸನ್ನೂ ನೋಯಿಸಲಿಲ್ಲ. ಎಲ್ಲವನ್ನೂ ಸಮಚಿತ್ತದಿಂದ ತೆಗೆದುಕೊಂಡರು. ಪ್ರಶಸ್ತಿಗಳು ಬಂದಾಗ ಹಿಗ್ಗಲಿಲ್ಲ. ಬಾರದ ಪ್ರಶಸ್ತಿಗಳಿಗೆ ಹಂಬಲಿಸಲೂ ಇಲ್ಲ. ಯಕ್ಷಲೋಕದ ಲಕ್ಷ ಲಕ್ಷ ಪ್ರೇಕ್ಷಕರ ಹೃದಯದಲ್ಲಿ ಈಗಲೂ ತಂಪಾಗಿ ಕುಳಿತಿರುವ ಅವರಿಗೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಇಲ್ಲ.

ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಅಲ್ಲದೆ ದೇಶದ ಇತರ ಭಾಗಗಳಲ್ಲಿಯೂ ಭಾಗವತಿಕೆ ಮಾಡಿದ ಅವರು ವಿದೇಶದಲ್ಲಿಯೂ ತಮ್ಮ ಕಂಪನ್ನು ಹರಿಸಿದ್ದಾರೆ. ಶಿವರಾಮ ಕಾರಂತರ ಯಕ್ಷಗಾನ ಪ್ರಯೋಗಗಳಿಗೂ ನೆಬ್ಬೂರರು ನೆರವಾಗಿದ್ದರು. ರಂಗದಲ್ಲಿ ಶಿಸ್ತು ಬಹಳ ಮುಖ್ಯ ಎಂದು ನಂಬಿಕೊಂಡಿದ್ದ ಅವರು ಕೊನೆಯ ಕಾಲದವರೆಗೂ ಅದನ್ನು ಬಿಡಲಿಲ್ಲ.

ನೆಬ್ಬೂರರಿಗೆ ಇಸ್ಪೀಟ್ ಆಡುವ ಚಟ ಇತ್ತು. ‘ನೀವು ಇಷ್ಟು ದೊಡ್ಡ ಭಾಗವತರು. ನಿಮಗೆ ಹ್ಯಾಗೆ ಇದು ಅಂಟಿಕೊಂಡಿತು?’ ಎಂದು ಕೇಳಿದರೆ ‘ಅದು ಅಂಟಿಕೊಂಡಿದ್ದಲ್ಲ. ಅಂಟಿಸಿಕೊಂಡಿದ್ದು. ದುಡ್ಡು ಹಾಕಿ ಇಸ್ಪೀಟು ಆಡುವವರು ಸಾಧಾರಣವಾಗಿ ದೊಡ್ಡ ಜನ. ಅಂತ ದೊಡ್ಡ ಜನರ ಸಂಪರ್ಕ ಬೇಕು ಎಂದು ನಾನೂ ದುಡ್ಡು ಹಾಕಿ ಇಸ್ಪೀಟು ಆಡುತ್ತಿದ್ದೆ’ ಎಂದು ಅವರು ತಮಾಷೆ ಮಾಡುತ್ತಿದ್ದರು. ತಮ್ಮ ಬದುಕಿನ ಯಾವ ಕಾಲದಲ್ಲಿಯೂ ಯಾವ ವಿಷಯದಲ್ಲಿಯೂ ಸಮತೋಲನವನ್ನು ಕಳೆದುಕೊಳ್ಳದ ನೆಬ್ಬೂರರು ಈಗ ಇಲ್ಲವಾಗಿದ್ದಾರೆ. ಆದರೆ ಯಕ್ಷಲೋಕದಲ್ಲಿ ನೆಬ್ಬೂರು ಶೈಲಿ ಚಿರಸ್ಥಾಯಿಯಾಗಿದೆ.

ನೆಬ್ಬೂರರಿಗಿಂತ ಚೆನ್ನಾಗಿ ಹಾಡುವ ಭಾಗವತರು ಬರಬಹುದು. ಬರಲಿ ಎಂಬುದು ಎಲ್ಲರ ಹಾರೈಕೆ. ಅವರಿಗಿಂತ ಹೆಚ್ಚು ಶಾಸ್ತ್ರೀಯವಾಗಿ ಹಾಡುವವರೂ ಇರಬಹುದು. ಸ್ವರದ ಇಂಪಿನ ದೃಷ್ಟಿಯಲ್ಲಿ ನೆಬ್ಬೂರರನ್ನು ಮೀರಿಸುವವರೂ ಇರಬಹುದು. ಆದರೆ ರಂಗದಲ್ಲಿ ಕುಳಿತು ‘ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು’ ಎಂಬ ಪದ್ಯ ಎತ್ತುಗಡೆ ಮಾಡಿದಾಗ, ‘ಮಾತೆ ಬಲ್ಲಳು ವಾರಳಿತವ’ ಎಂಬ ಪದ್ಯಕ್ಕೆ ದನಿಯಾದಾಗ, ‘ನೋಡಿ ನಿರ್ಮಲ ಜಲ ಸಮೀಪದಿ’ ಎಂದು ಹಾಡಿದಾಗ ‘ಎಲೆ ಕಾಲಪುರುಷ ಕೇಳ್’ ಎಂದು ಕಿವಿಗೆ ಕೈಕೊಟ್ಟಾಗ ಕಣ್ ಮುಂದೆ ಶಂಭು ಹೆಗಡೆ ಅವರನ್ನು ತಂದು ನಿಲ್ಲಿಸುತ್ತಿದ್ದುದು ನೆಬ್ಬೂರು ಭಾಗವತರು ಮಾತ್ರ.

ನೆಬ್ಬೂರರು ತೀರಿಕೊಂಡಾಗ ‘ನಾಣ್ಬಾವ ಬಹಳ ದಿನ ಆತಲೋ ನೋಡ್ದೆ, ಬೇಗ ಬಂದು ಬಿಡೋ’ ಎಂದು ಶಂಭು ಹೆಗಡೆ ಕರೆದಿರಬೇಕು. ಅದಕ್ಕೇ ನೆಬ್ಬೂರರು ನಡೆದೇ ಬಿಟ್ಟರು ಎಂದು ಅಭಿಮಾನಿಯೊಬ್ಬರು ಉದ್ಗರಿಸಿದ್ದರು. ನಿಜ ಇದ್ದರು ಇರಬಹುದು. ಅವರು ಹೊರಟರು ಯಕ್ಷಭಾವ ಇಲ್ಲಿಯೇ ಬಿಟ್ಟು. ನೆಬ್ಬೂರು ಶೈಲಿಯನ್ನು ನಮಗೆ ಕೊಟ್ಟು.

ಚಿತ್ರಗಳು: ಮನೋಹರ್ ಕುಂದರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.