ಠುಮ್ರಿ ಗಾಯನದಲ್ಲಿ ಜನಪ್ರಿಯರಾಗಿದ್ದ ರಸೂಲನ್ ಬಾಯಿ ಬದುಕೊಂದು ದುರಂತ ಕಥನ. ದೇಶದ ಮೇಲಿನ ಅಭಿಮಾನದಿಂದ ಮದುವೆಯಾದ ಗಂಡನಿಂದಲೇ ದೂರ ಉಳಿದ ಅವರು ಅನುಭವಿಸಿದ ಸಂಕಟಗಳು ಅಷ್ಟಿಷ್ಟಲ್ಲ..

ಇದು ಎಪ್ಪತ್ತರ ದಶಕದ ಕಥೆ.

ಉತ್ತರ ಪ್ರದೇಶದ ಅಲಹಬಾದ್ ನಗರದ ಆಕಾಶವಾಣಿ ಕಟ್ಟಡಕ್ಕೆ ಹೊಂದಿಕೊಂಡಿದ್ದ ಜಾಗದಲ್ಲಿ ವೃದ್ಧೆಯೊಬ್ಬರು ಚಹಾ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ತಮ್ಮ ಅಂಗಡಿಯಲ್ಲಿ ಇದ್ದ ರೇಡಿಯೊದಲ್ಲಿ ಪ್ರಸಾರವಾಗುತ್ತಿದ್ದ ಅಪೂರ್ವ ಗಾಯಕಿಯೊಬ್ಬರ ಠುಮ್ರಿ ಹಿಂದೂಸ್ತಾನಿ ಗಾಯನವನ್ನು ಕೇಳುತ್ತಿದ್ದ ಅವರು ಅದ್ಭುತ ಕಂಠಸಿರಿಗೆ ಮನಸೋತು ತಲೆದೂಗುತ್ತಿದ್ದರು. ಆ ವೃದ್ಧೆಯ ದುರಂತವೆಂದರೆ, ಆ ಕಂಠಸಿರಿಯ ಗಾಯಕಿ ರಸೂಲನ್ ಬಾಯಿ ನಾನೇ ಎಂದು ಹೇಳಿಕೊಳ್ಳಲಾಗದ ಅಸಹಾಯಕತೆ ಅವರನ್ನು ಕಾಡುತ್ತಿತ್ತು. ಐವತ್ತು ಮತ್ತು ಅರವತ್ತರ ದಶಕಗಳಲ್ಲಿ ತಮ್ಮ ಸುಮಧುರ ಕಂಠದ ಠುಮ್ರಿ ಗಾಯನದ ಮೂಲಕ ಭಾರತದಲ್ಲಿ ಹೆಸರಾಗಿದ್ದ ರಸೂಲನ್ ಬಾಯಿ ಅವರು ತೀವ್ರ ಬಡತನದಲ್ಲಿ ಬದುಕಿದ ದುರಂತ ಕಥನವಿದು.

ಬನಾರಸ್ ಘರಾಣೆಯ ಪ್ರಸಿದ್ಧ ಠುಮ್ರಿ ಗಾಯನಕ್ಕೆ ಹೆಸರಾಗಿದ್ದ ರಸೂಲನ್ ಬಾಯಿಯವರು ಭೈರವಿ ರಾಗದಲ್ಲಿ ಹಾಡಿರುವ ‘ಹೃದಯ ಘಾಸಿಗೊಂಡಿದೆ ಪ್ರಿಯಾ, ಹೂ ಪಕಳೆಗಳನ್ನು ನನ್ನತ್ತ ಎಸೆಯಬೇಡ’ ಎನ್ನುವ ಶೋಕಗೀತೆ ಆ ಕಾಲದಲ್ಲಿ ಪ್ರಸಿದ್ಧವಾಗಿತ್ತು. ಈ ಗೀತೆ 1947 ರ ಸ್ವಾತಂತ್ರ್ಯ ನಂತರ ದೇಶದಲ್ಲಿ ಜಾರಿಗೆ ಬಂದ ದೇವದಾಸಿ ವೃತ್ತಿಯ ಮೇಲಿನ ನಿಷೇಧದ ನಂತರ ಬೀದಿಗೆ ಬಿದ್ದ ಅನೇಕ ನುರಿತ ಕಲಾವಿದೆಯರ ಎದೆಯ ಪಾಡಾಗಿರದೆ, ಸ್ವತಃ ರಸೂಲನ್ ಬಾಯಿಯವರ ವೈಯಕ್ತಿಕ ಬದುಕಿನ ಶೋಕಗೀತೆಯಾಗಿತ್ತು. ಒಂದು ಕಾಲದಲ್ಲಿ ತಮ್ಮ ಮಧುರಕಂಠದಲ್ಲಿ ಠುಮ್ರಿ ಗಾಯನದ ಮೂಲಕ ಲಕ್ನೋ ಸಂಸ್ಥಾನದ ಆಸ್ಥಾನ ಗಾಯಕಿಯಾಗಿದ್ದ ರಸೂಲನ್ ಬಾಯಿಯವರು ಬನಾರಸ್ ನಗರದಲ್ಲಿ ವಾಸವಾಗಿದ್ದುಕೊಂಡು ಆ ಕಾಲದ ಶ್ರೇಷ್ಠ ಗಾಯಕಿಯಾಗಿ ಹಲವಾರು ಕಲಾವಿದರು ಮತ್ತು ಕಲಾವಿದೆಯರ ಪಾಲಿಗೆ ಮಾದರಿಯಾಗಿದ್ದರು. 1974 ರಲ್ಲಿ ಅವರು ನಿಧನರಾಗುವ ವೇಳೆಗೆ ಸರ್ವಸ್ವವನ್ನು ಕಳೆದುಕೊಂಡು ಏಕಾಂಗಿಯಾಗಿದ್ದರು.

1902 ರಲ್ಲಿ ಉತ್ತರ ಪ್ರದೇಶದ ಮಿರ್ಜಾಪುರ ಎಂಬ ಊರಿನ ಕಚ್ಚಾಬಜಾರ್ ಎಂಬ ಪ್ರದೇಶದಲ್ಲಿ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ರಸೂಲನ್ ಬಾಯಿಯವರಿಗೆ ಸಂಗೀತವು ಅವರ ತಾಯಿ ಅದಾಲತ್ ಬಾಯಿಯವರಿಂದ ಬಳುವಳಿಯಾಗಿ ಬಂದಿತ್ತು. ಕೇವಲ ಐದನೇ ವಯಸ್ಸಿನಲ್ಲಿ ಹಿಂದೂಸ್ತಾನಿ ರಾಗಗಳನ್ನು ಗುರುತಿಸುವ ಸಾಮರ್ಥ್ಯ ಅವರಿಗಿತ್ತು. ತವೈಪ್ ಎಂದು ಕರೆಯಲಾಗುತ್ತಿದ್ದ ನೃತ್ಯ ಮತ್ತು ಸಂಗೀತವನ್ನೇ ವೃತ್ತಿಯಾಗಿಸಿಕೊಂಡ ಕುಟುಂಬದಲ್ಲಿ ಜನಿಸಿದ ರಸೂಲನ್ ಬಾಯಿ ಪಾರಂಪರಿಕವಾಗಿ ಬಂದ ಪದ್ಧತಿಯಂತೆ ಸಂಗೀತವನ್ನು ಮುಂದುವರಿಸಿದರು. 1864 ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರವು ಸಿಫಿಲಿಸ್ ಎಂಬ ಲೈಂಗಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಕ್ನೋ, ಬನಾರಸ್, ದೆಹಲಿ, ಕೊಲ್ಕತ್ತ ಮುಂತಾದ ನಗರಗಳಲ್ಲಿ ತವೈಪ್ ವೃತ್ತಿಯಲ್ಲಿರುವ ಕಲಾವಿದೆಯರು ಮತ್ತು ವೇಶ್ಯೆಯರು ಕಟ್ಟುನಿಟ್ಟಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕೆಂದು ನಿಯಮವನ್ನು ಜಾರಿಗೆ ತಂದಾಗ, ಅನೇಕ ಕಲಾವಿದೆಯರು ಬಿಹಾರ ಮತ್ತು ಉತ್ತರ ಪ್ರದೇಶದ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಅಲ್ಲಿನ ಜಮೀನ್ದಾರರ ಆಶ್ರಯದಲ್ಲಿ ಬದುಕತೊಡಗಿದರು. ಅಂತಹ ಕುಟುಂಬಗಳಲ್ಲಿ ರಸೂಲನ್ ಬಾಯಿಯವರ ಕುಟುಂಬವೂ ಒಂದಾಗಿತ್ತು.

ಬಾಲ್ಯದಲ್ಲಿ ಉಸ್ತಾದ್ ಶಮಿಖಾನ್ ಮತ್ತು ಸಾರಂಗಿ ಕಲಾವಿದರಾದ ಆಶಿಕ್ ಖಾನ್ ಹಾಗೂ ನಜ್ಜುಖಾನ್ ಬಳಿ ಅಭ್ಯಾಸ ಮಾಡಿದ ರಸೂಲನ್ ಬಾಯಿ ತಾರುಣ್ಯದಲ್ಲಿ ಹೆಸರಾಂತ ಗಾಯಕಿಯಾಗಿ ಪ್ರಸಿದ್ಧಿಯಾದರು. ಧನಂಜಯ ಘರ್ ಎಂಬ ಪುಟ್ಟ ಸಂಸ್ಥಾನವೊಂದರಲ್ಲಿ ಅವರು ನೀಡಿದ ಕಾರ್ಯಕ್ರಮವು ರಸೂಲನ್ ಬಾಯಿಯವರ ಪ್ರತಿಭೆಯನ್ನು ಬೆಳಕಿಗೆ ತಂದಿತು. ಲಕ್ನೋ ಸೇರಿದಂತೆ ಉತ್ತರ ಪ್ರದೇಶದ ಐದು ಸಂಸ್ಥಾನಗಳಲ್ಲಿ ಆಸ್ಥಾನ ಗಾಯಕಿಯಾಗಿ ಕಾರ್ಯನಿರ್ವಹಿಸುತ್ತಾ, ವಾರಾಣಸಿ ನಗರದಲ್ಲಿ ನೆಲೆಸಿ ತಮ್ಮ ಸೊಗಸಾದ ಹಾಡುಗಾರಿಕೆಯ ಮೂಲಕ ಠುಮ್ರಿ, ಟಪ್ಪಾ, ಖಜ್ರಿ, ಹೋರಿ, ಚೈತಿ ಪ್ರಕಾರದ ಲಘು ಸಂಗೀತವನ್ನು ಶೋತ್ರುಗಳಿಗೆ ಉಣಬಡಿಸುವುದರ ಜೊತೆಗೆ ಲೋಕ ಸಂಗೀತ ಎಂದು ಕರೆಯಲಾಗುತ್ತಿದ್ದ ಜನಪದ ಪ್ರೇಮಗೀತೆಗಳನ್ನು ಸಹ ಹಾಡುತ್ತಿದ್ದರು.

ಠುಮ್ರಿ ಗಾಯನದಲ್ಲಿ ರಸೂಲನ್ ಬಾಯಿ ಹಾಗೂ ಸಿದ್ದೇಶ್ವರಿ ದೇವಿ ಇಬ್ಬರೂ ಬನಾರಸ್ ಘರಾಣೆಯ ಸಂಗೀತದಲ್ಲಿ ಪ್ರಸಿದ್ಧಿಯಾಗಿದ್ದರು. ಸಿದ್ದೇಶ್ವರಿಯವರ ಠುಮ್ರಿ ಗಾಯನದಲ್ಲಿ ಹೆಚ್ಚಾಗಿ ಕೃಷ್ಣ ಮತ್ತು ರಾಧೆಯ ಗೀತೆಗಳ ಜೊತೆಗೆ ಭಜನೆಗಳಂತಹ ಕೃತಿಗಳು ಪ್ರಾಧಾನ್ಯತೆ ಪಡೆದಿದ್ದರೆ, ರಸೂಲನ್ ಬಾಯಿಯವರ ಸಂಗೀತದಲ್ಲಿ ಪ್ರೇಮ ಮತ್ತು ವಿರಹಗೀತೆಗಳು ಹೆಚ್ಚು ಬಳಕೆಯಾಗುತ್ತಿದ್ದವು.

ಆ ಕಾಲಘಟ್ಟದಲ್ಲಿ ರಸೂಲನ್ ಬಾಯಿ, ಬಡಿ ಮೋತಿಬಾಯಿ, ನೈನಾದೇವಿ ಮತ್ತು ಸಿದ್ದೇಶ್ವರಿ ದೇವಿ ಹಾಗೂ ಗಜಲ್ ರಾಣಿ ಎಂದು ಕರೆಯಲಾಗುತ್ತಿದ್ದ ಬೇಗಂ ಅಕ್ತರ್ ಇವರಿಂದಾಗಿ ಬನಾರಸ್ ಘರಾಣೆಯು ಜನಪ್ರಿಯತೆಯ ಶಿಖರವನ್ನು ಮುಟ್ಟಿತ್ತು. ಇಂತಹ ಲಘು ಸಂಗೀತದ ಪ್ರಕಾರಗಳಿಂದಾಗಿ ವಿಷ್ಣುದಿಗಂಬರ್ ಪಲುಸ್ಕರ್ ಮತ್ತು ವಿಷ್ಣುನಾರಾಯಣ ಭಕ್ತಾಂಡೆಯಂತಹ ಮಹಾನುಭಾವರಿಂದ ಶುದ್ಧ ಹಿಂದೂಸ್ತಾನಿ ಸಂಗೀತಕ್ಕೆ ಹಾಕಿದ್ದ ಭದ್ರ ಬುನಾದಿ ಕುಸಿಯುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬಂದವು.

ವಾರಾಣಸಿ ನಗರದಲ್ಲಿದ್ದ ಸಮಯದಲ್ಲಿ ರಸೂಲನ್ ಬಾಯಿ ಸುಲೇಮಾನ್ ಎಂಬ ರೇಷ್ಮೆ ವ್ಯಾಪಾರಿಯನ್ನು ವಿವಾಹವಾಗಿದ್ದರು. ವಜೀರ್ ಎಂಬ ಪುತ್ರನೂ ಜನಿಸಿದ್ದ. ಆದರೆ, 1947ರಲ್ಲಿ ಭಾರತ ಮತ್ತು ಪಾಕ್ ವಿಭಜನೆಯಾದಾಗ ಸುಲೇಮಾನ್ ತನ್ನ ಪುತ್ರನೊಂದಿಗೆ ಪಾಕಿಸ್ತಾನಕ್ಕೆ ಹೊರಟು ನಿಂತಾಗ, ತಾನು ಹುಟ್ಟಿಬೆಳೆದ ನೆಲವನ್ನು ತ್ಯಜಿಸಲಾರದೆ ರಸೂಲನ್ ಬಾಯಿ ಭಾರತದಲ್ಲಿ ಏಕಾಂಗಿಯಾಗಿ ಉಳಿದರು. ಗ್ರಾಮಾಫೋನ್ ಧ್ವನಿಮುದ್ರಿಕೆಗಳಲ್ಲಿ ಹೆಚ್ಚಿನ ಅವಕಾಶ ಅರಸಿಕೊಂಡು 1960 ರ ದಶಕದಲ್ಲಿ ಗುಜರಾತಿನ ಅಹಮದಾಬಾದ್ ನಗರಕ್ಕೆ ಬಂದು ನೆಲೆ ನಿಂತ ರಸೂಲನ್ ಬಾಯಿ, ಸ್ವಂತ ಮನೆ ನಿರ್ಮಿಸಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು.

1969 ರಲ್ಲಿ ಗುಜರಾತಿನ ಕೋಮುಗಲಭೆಯಲ್ಲಿ ಅವರ ಮನೆಯನ್ನು ಸುಟ್ಟುಹಾಕಲಾಯಿತು. ತಮ್ಮ ಹಣ, ಒಡವೆ, ಆಸ್ತಿಯ ದಾಖಲೆಗಳನ್ನು ಕಳೆದುಕೊಂಡ ರಸೂಲನ್ ಬಾಯಿ ಅಕ್ಷರಶಃ ಅನಾಥರಾದರು. ಈ ಸಂದರ್ಭದಲ್ಲಿ ವಾರಾಣಸಿಯ ಕಲಾವಿದೆ ಹಾಗೂ ದೆಹಲಿಯ ವಾಸಿಯಾಗಿದ್ದ ನೈನಾದೇವಿಯವರು ರಸೂಲನ್ ಬಾಯಿ ಅವರಿಗೆ ಆಶ್ರಯ ನೀಡಿದರು. ಸಂಗೀತ ಕಛೇರಿಗಳಲ್ಲಿ ಅವರು ಹಾಡುತ್ತಿದ್ದ ಒಂದು ಶೋಕಗೀತೆ ‘ಓ ರಾಮಾ, ಈ ರಾತ್ರಿ ನನ್ನ ಅಮೂಲ್ಯವಾದ ಮುತ್ತನ್ನು ಇಲ್ಲಿ ಕಳೆದುಕೊಂಡಿದ್ದೀನಿ. ಅದನ್ನು ಹುಡುಕಿ ಕೊಡುವಿಯಾ?’ ಅವರ ಬದುಕಿನ ಶೋಕಗೀತೆಯಂತೆ ಕೇಳುಗರಿಗೆ ಭಾಸವಾಗುತ್ತಿತ್ತು. ಅವರಿಗೆ ಅರಿವಿಲ್ಲದಂತೆ ಕಣ್ಣಂಚಿನಿಂದ ನೀರು ಜಾರುತ್ತಿತ್ತು.

ಅವರ ಕಷ್ಟ ಹಾಗೂ ಅನಾರೋಗ್ಯದ ಸಂದರ್ಭದಲ್ಲಿ ಸಮಕಾಲೀನ ಕಲಾವಿದೆಯರಾದ ಸಿದ್ದೇಶ್ವರಿದೇವಿ, ಬೇಗಂ ಅಕ್ತರ್ ಹಾಗೂ ನೈನಾದೇವಿ ಅವರು ರಸೂಲನ್ ಬಾಯಿಯವರಿಗೆ ಆಸರೆಯಾಗಿ ನಿಂತರು. ಹೀಗೆ ತಮ್ಮ ಕೊನೆಯ ದಿನಗಳನ್ನು ಅನಾಮಿಕರಂತೆ ಬದುಕಿದ ರಸೂಲನ್ ಬಾಯಿ 1974 ರಲ್ಲಿ ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾದರು.

ಕಲಾವಿದರಿಗೆ ಸಾವಿಲ್ಲ, ಅವರು ಗಂಧರ್ವರು ಎಂಬ ಮಾತಿನಂತೆ ರಸೂಲನ್ ಬಾಯಿ ಇಂದಿಗೂ ತಮ್ಮ ಠುಮ್ರಿ ಗಾಯನದ ಧ್ವನಿಮುದ್ರಿಕೆಗಳ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.