‘ಬಹುವಚನಂ’- ದಕ್ಷಿಣ ಕನ್ನಡ, ಉಡುಪಿ ಪರಿಸರದ ಸಂಗೀತ, ಸಂಸ್ಕೃತಿ, ಸಾಹಿತ್ಯಾಸಕ್ತರ ನಡುವೆ ಇತ್ತೀಚೆಗೆ ಸದ್ದಿಲ್ಲದೆ ಸುದ್ದಿಯಾಗು ತ್ತಿರುವ ಹೆಸರು. ಬಹಳಷ್ಟು ಜನರ ವಾಟ್ಸಪ್ ವಿಳಾಸಗಳಲ್ಲಿ, ಫೇಸ್ಬುಕ್ ಪೇಜ್ಗಳಲ್ಲಿ ಈ ಹೆಸರು ದಾಖಲಾಗಿರುತ್ತದೆ. ಖ್ಯಾತನಾಮರು ಹಾಗೂ ಉದಯೋನ್ಮುಖರಿಂದ ಪ್ರದರ್ಶನ, ಪ್ರಾತ್ಯಕ್ಷಿಕೆ, ಉಪನ್ಯಾಸ, ಪ್ರೇಕ್ಷಕರೊಂದಿಗೆ ಆರೋಗ್ಯಕರ ಚರ್ಚೆ ಮುಂತಾದುವು ಈ ಹೆಸರಿನಡಿ ನಿರಂತರವಾಗಿ ನಡೆಯುತ್ತಲೇ ಇದೆ.

ಇವೆಲ್ಲ ನಡೆಯುವುದು ದಕ್ಷಿಣ ಕನ್ನಡದ ಪುತ್ತೂರು ನಗರದ ಹೊರವಲಯದ ಪ್ರಶಾಂತ ಪರಿಸರದಲ್ಲಿನ ಡಾ. ಶ್ರೀಶಕುಮಾರ್.ಎಂ.ಕೆ. ಇವರ ಮನೆಯ ಪುಟ್ಟ, ಸುಸಜ್ಜಿತ ‘ಪದ್ಮಿನಿ ಸಭಾಭವನ’ದಲ್ಲಿ.

ಈ ಬಹುವಚನಂ– ಸಾಂಸ್ಕೃತಿಕ ಸಂಘಟನೆ ಡಾ.ಶ್ರೀಶಕುಮಾರರ ಏಕವ್ಯಕ್ತಿ ಸಾಹಸ. ಹಲವು ವರ್ಷಗಳಿಂದ ತಮ್ಮ ಮನೆಯಾದ ‘ಬಹುವಚನಂ’ನಲ್ಲಿ ಕುಟುಂಬಿಕರು, ಬಂಧು ಮಿತ್ರರೊಡನೆ ರಾಮನವಮಿಯನ್ನು ಆಚರಿಸುತಿದ್ದರು. ಧಾರ್ಮಿಕ ವಿಧಿಗಳ ಜೊತೆ ಸಂಜೆ ಒಂದು ಉಪನ್ಯಾಸ, ಜೊತೆಗೆ ಸಂಗೀತ ಕಛೇರಿ ಇರುತಿತ್ತು. ಕ್ರಮೇಣ ಈ ಕಾರ್ಯಕ್ರಮಗಳು ವಿಸ್ತಾರಗೊಂಡವು. ಆಸಕ್ತರ ಸಂಖ್ಯೆ ಹೆಚ್ಚಿತು. ಕಾರ್ಯಕ್ರಮಗಳೆಲ್ಲ ಮನೆಯ ಟೆರೇಸಿಗೆ ಏರಿದವು.

ಶ್ರೀಶಕುಮಾರರು ನಗರದ ಕಾಲೇಜೊಂದರ ಸಂಸ್ಕೃತ ಉಪನ್ಯಾಸಕರು. ಮಾಧ್ವ ತತ್ವದಲ್ಲಿ ಡಾಕ್ಟರೇಟ್ ಪಡೆದವರು. ಚಿಂತಕರು. ಒಳ್ಳೆಯ ಭಾಷಣಕಾರರು. ಅದಾಗಲೇ ಅವರ ಮನಸ್ಸಿನಲ್ಲಿ ನಿರ್ದಿಷ್ಟ ಯೋಜನೆಯೊಂದು ಮೂಡತೊಡಗಿತ್ತು. ಸಂಗೀತ, ಸಾಹಿತ್ಯ, ಸಂಸ್ಕೃತಿ ಅಧ್ಯಾತ್ಮಗಳ ವಿಷಯದಲ್ಲಿ ಸದಭಿರುಚಿಯ ಪ್ರೇಕ್ಷಕರನ್ನು ಹೆಚ್ಚಿಸುವ ಅಥವಾ ಪ್ರೇಕ್ಷಕರಲ್ಲಿ ಸದಭಿರುಚಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಇರಾದೆ ಅವರಲ್ಲಿತ್ತು. ಇದಕ್ಕಾಗಿ ತಮ್ಮ ಮನೆಯ ಮೇಲಂತಸ್ತಿನಲ್ಲಿ ಸುಸಜ್ಜಿತ, ಪುಟ್ಟ ಸಭಾಭವನ ನಿರ್ಮಿಸುವ ಕೆಲಸಕ್ಕೆ ಮುಂದಾದರು. ಈ ನಡುವೆ ಅವರ ಪತ್ನಿ ಪದ್ಮಿನಿ ಅಕಾಲಿಕವಾಗಿ ನಿಧನರಾದರು. ಅವರ ಹೆಸರಿನಲ್ಲೇ ಈ ಯೋಜನೆಯನ್ನು ಮುಂದುವರಿಸಿದ ಶ್ರೀಶಕುಮಾರರು, ನೂರು ಆಸನ ಸಾಮರ್ಥ್ಯದ ಪುಟ್ಟ ವೇದಿಕೆ, ಧ್ವನಿ, ಬೆಳಕು, ಪ್ರೊಜೆಕ್ಟರ್ ವ್ಯವಸ್ಥೆ, ಶೌಚಾಲಯ, ವಿಶ್ರಾಂತಿ ಕೋಣೆಗಳನ್ನೊಳಗೊಂಡ ‘ಪದ್ಮಿನಿ ಸಭಾಭವನ’ವನ್ನು ಪೂರ್ಣಗೊಳಿಸಿಯೇಬಿಟ್ಟರು.

2017ರ ರಾಮನವಮಿಯಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರಿಂದ ಉತ್ತರಕಾಂಡದ ಕುರಿತು ಉಪನ್ಯಾಸ ಹಾಗೂ ಸದ್ಗುಣ ಐತಾಳ್ ಮತ್ತು ಬಳಗದವರ ಮ್ಯಾಂಡೋಲಿನ್ ಕಛೇರಿಯೊಂದಿಗೆ ಸಭಾಭವನ ಅಧಿಕೃತವಾಗಿ ಉದ್ಘಾಟನೆಯಾಯಿತು. ಅಂದಿನಿಂದ ಇಂದಿನವರೆಗೂ ‘ಬಹುವಚನಂ‘ ಸಂಘಟನೆಯ ಆಶ್ರಯದಲ್ಲಿ, ತಿಂಗಳಿಗೊಂದಕ್ಕೆ ಕಡಿಮೆಯಿಲ್ಲದಂತೆ ಅರ್ಥಪೂರ್ಣ ಕಾರ್ಯಕ್ರ ಮಗಳು ನಡೆಯುತ್ತಿವೆ. ಸಂಗೀತದಿಂದ ಭರತನಾಟ್ಯದವರೆಗೆ,ಭೂತಾರಾಧನೆಯಿಂದ ಹಿಡಿದು ರಂಗಸಂಗೀತದವರೆಗೆ; ಪರಿಸರದಿಂದ ಹಿಡಿದು ಪ್ರಾಚ್ಯವಸ್ತು ಪರಂಪರೆಯವರೆಗೆ, ಕಾನೂನು ಮಾಹಿತಿಯಿಂದ ಹಿಡಿದು ಪ್ರವಾಸ ಕಥನದವರೆಗೆ ವೈವಿಧ್ಯಮಯ ವಿಷಯಗಳ ಬಗ್ಗೆ, ಪ್ರಯೋಗ, ಪ್ರಾತ್ಯಕ್ಷಿಕೆ, ಪ್ರದರ್ಶನ,ಉಪನ್ಯಾಸ, ಸಂವಾದಗಳು ನಡೆದಿವೆ.

ವಿದೂಷಿ ಕಲಾಪಿನೀ ಕೋಂಕಲಿ, ವಿದ್ವಾನ್ ಮಹಾರಾಜಪುರಂ ಸಂತಾನಂ ಶ್ರೀ ರಾಮಚಂದ್ರನ್, ವಿದೂಷಿ ನೀಲಾ ರಾಮಗೋಪಾಲ್, ವಿದೂಷಿ ಸುಚಿತ್ರಾ ಹೊಳ್ಳರಂಥ ಸುಪ್ರಸಿದ್ಧರು ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ವಿದ್ವಾನ್ ನರಸಿಂಹನ್ ಮತ್ತು ಬಳಗದವರು ವೀಣೆಯ ಬಗ್ಗೆ ವಿಸ್ತೃತ ಪ್ರಾತ್ಯಕ್ಷಿಕೆ ನೀಡಿದ್ದಾರೆ. ವಿದೂಷಿ ರಾಧಿಕಾ ಶೆಟ್ಟಿ, ವಿದೂಷಿ ಮಂಜುಳಾ ಸುಬ್ರಹ್ಮಣ್ಯರಂಥ ಕಲಾವಿದರು ಭರತನಾಟ್ಯ ಪ್ರಯೋಗ, ಪ್ರದರ್ಶನಗಳನ್ನು ನೀಡಿದ್ದಾರೆ. ಪದ್ಮಶ್ರೀ ಗಿರೀಶ್ ಭಾರಧ್ವಾಜ್, ಸೀತಾರಾಮ ಕೆದಿಲಾಯ, ದಿನೇಶ್ ಹೊಳ್ಳ, ಮಹಮ್ಮದ್ ಕಲೀಮುಲ್ಲಾ, ತೀರ್ಥರಾಮ ವಳಲಂಬೆ ಮುಂತಾದ ತಜ್ಞರು ತಮ್ಮ ತಮ್ಮ ಕ್ಷೇತ್ರಗಳ ಬಗ್ಗೆ ಉಪನ್ಯಾಸ, ಸಂವಾದ, ಚರ್ಚೆಗಳನ್ನು ನಡೆಸಿಕೊಟ್ಟಿದ್ದಾರೆ.

ಕಾರ್ಯಕ್ರಮ ಉಚಿತವಾದರೆ, ಅಂಥವರಿಗೆ ಸಭಾಭವನವೂ ಉಚಿತ. ಸಾಂಸ್ಕೃತಿಕ, ಸದಭಿರುಚಿಯ ಕಾರ್ಯಕ್ರಮಗಳಿಗೆ ಈ ಸಭಾಭವನ ಸಂಪೂರ್ಣ ಉಚಿತ.ಶ್ರೀಶಕುಮಾರರ ಈ ಆಹ್ವಾನವನ್ನು ಮಹಾಬಲ ಸಂಗೀತಸಭಾ, ಸಾಮಾಜಿಕ ನ್ಯಾಯ ಸಮಿತಿ, ಮಣಿಕೃಷ್ಣ ಅಕಾಡೆಮಿ,ಸಪ್ತಸ್ವರ ಸಂಗೀತಕಲಾಶಾಲೆ, ನಾಟ್ಯರಂಗ ಮುಂತಾದ ಸಂಸ್ಥೆಗಳು ಸದುಪಯೋಗಪಡಿಸಿಕೊಂಡಿವೆ.

ತಮ್ಮ ವಾಟ್ಸಪ್ ಗುಂಪು, ಫೇಸ್ಬುಕ್ ಪೇಜ್ಗಳಲ್ಲದೆ, ವೈಯಕ್ತಿಕ ಸಂದೇಶಗಳ ಮೂಲಕವೂ ಶ್ರೀಶಕುಮಾರರು ಆಸಕ್ತರಿಗೆ ಕಾರ್ಯಕ್ರಮಗಳ ಮಾಹಿತಿಯನ್ನು ತಲುಪಿಸುತ್ತಾರೆ. ಬಹುವಚನಂನ ಕಾರ್ಯಕ್ರಮಗಳಿಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಕಾಯಂ ಪ್ರೇಕ್ಷಕರಿದ್ದಾರೆ.

ಇವೆಲ್ಲ ಕಾರ್ಯಕ್ರಮಗಳ ಖರ್ಚುವೆಚ್ಚಗಳನ್ನು ಶ್ರೀಶಕುಮಾರರು ಬಹುತೇಕ ಏಕಾಂಗಿಯಾಗಿಯೇ ಭರಿಸುತ್ತಾರೆ. ‘ಕೆಲವು ಕಾರ್ಯಕ್ರಮಗಳಿಗೆ ಸಹೃದಯಿಗಳು ತಾವಾಗಿಯೇ ಧನಸಹಾಯ ಮಾಡಿದಾಗ ಸ್ವೀಕರಿಸಿದ್ದಿದೆ. ಆದರೆ ಎಲ್ಲೂ ಕೇಳಿಕೊಂಡು ಹೋದದ್ದಿಲ್ಲ‘ ಎನ್ನುವ ಇವರು, ತಮ್ಮ ಸಂಪಾದನೆಯ ಶೇ10 ಸಮಾಜಕ್ಕಾಗಿ ವಿನಿಯೋಗಿಸಬೇಕೆನ್ನುವ ತನ್ನ ಯೋಚನೆಯ ಒಂದು ಭಾಗವಿದು ಎನ್ನುತ್ತಾರೆ.

ಇದಿಷ್ಟೇ ಅಲ್ಲದೆ ಪದ್ಮಿನಿ ಸಭಾಭವನದಲ್ಲಿ ತತ್ವಶಾಸ್ತ್ರ, ಪುರಾಣ, ಸಂಗೀತ, ಸಾಹಿತ್ಯ, ಪರಿಸರ, ಪ್ರವಾಸಗಳಿಗೆ ಸಂಬಂಧಿಸಿದ ಗ್ರಂಥಗಳಿರುವ ಗ್ರಂಥಾಲಯವಿದೆ. ಸಂಶೋಧನಾ ವಿದ್ಯಾರ್ಥಿಗಳು, ಆಸಕ್ತರು ಇವುಗಳ ಪ್ರಯೋಜನ ಪಡೆಯಬಹುದು. ಆದರೆ ಇವು ಕೇವಲ ಪರಾಮರ್ಶನ ಗ್ರಂಥಗಳು.. ಹಿಂದಿರುಗಿ ಬರದಿರುವ ಉದಾಹರಣೆಗಳಿರುವುದರಿಂದ ಅವರು ಪುಸ್ತಕಗಳನ್ನು ಹೊರಗೊಯ್ಯಲು ಬಿಡುವುದಿಲ್ಲ.

ಇಷ್ಟೆಲ್ಲ ವಿಶೇಷಗಳಿರುವ ಬಹುವಚನಂ ಇದೇ ರಾಮನವಮಿಯಂದು ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದೆ. ಕೊರೊನಾ ಆತಂಕದಿಂದಾಗಿ ರಾಮನವಮಿ ಕಾರ್ಯಕ್ರಮಗಳನ್ನು ಮುಂದಿನ ಪ್ರಕಟಣೆಯವರೆಗೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.