ಬೆಂಗಳೂರಿನ ರಾಜಾಜಿನಗರದಲ್ಲಿರುವ ಹೋಟೆಲ್ ‘ಮ್ಯಾರಿಯೆಟ್’ನಲ್ಲಿ ಶ್ರೀಮತಿ ಪೃಥ್ವಿ ಬಾನ್ರವರಿಗಾಗಿ ಕಾಯುತ್ತಾ ಕುಳಿತಿದ್ದೆ. ಎರಡು ದಿನಗಳಿಂದ ಎಲ್ಲಾ ಪತ್ರಿಕೆಗಳಲ್ಲೂ, ದೂರದರ್ಶನದ ವಾಹಿನಿಗಳಲ್ಲೂ ಅವರದೇ ಸುದ್ದಿ. ಅಂತರರಾಷ್ಟ್ರೀಯ ವಿಚಾರ ಸಂಕಿರಣವೊಂದರ ಆಹ್ವಾನಿತ ಉಪನ್ಯಾಸಕಿಯಾಗಿ ವಿಶಾಖಪಟ್ಟಣದಿಂದ ಬಂದಿದ್ದ ಅವರನ್ನು ಸಂದರ್ಶಿಸಲು ಉತ್ಸುಕಳಾಗಿದ್ದೆ. ವೇಶ್ಯಾವೃತ್ತಿಗಾಗಿ ಅಪಹರಣ, ಹೆಣ್ಮಕ್ಕಳ ಮೇಲಿನ ದೌರ್ಜನ್ಯ, ಅವರ ಕರಾಳ ಬದುಕಿನ ಬಗ್ಗೆ ಕಾಳಜಿ ವಹಿಸಿ ತಮ್ಮದೇ ಸಂಸ್ಥೆ- ಸಬಲಾ ನಡೆಸುತ್ತಿರುವ ಅವರ ಬದುಕನ್ನು ನನ್ನದೇ ಸ್ತ್ರೀವಾದಿ ಪತ್ರಿಕೆಗೆ ಒಂದು ‘ಕವರ್ ಸ್ಟೋರಿ’ಯಾಗಿ ಬರೆಯುವ ಉದ್ದೇಶದಿಂದ ಬಂದಿದ್ದೆ.

ದೇಶ-ವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ಮಹಿಳೆ ನನ್ನನ್ನು ಪುರಸ್ಕರಿಸುತ್ತಾರೋ ಇಲ್ಲವೋ ಎಂಬ ಶಂಕೆಯಲ್ಲೇ ನಿನ್ನೆ ಅವರಿಗೆ ಫೋನಾಯಿಸಿದ್ದೆ. ಈ ದಿನವೇ ತಾವು ಹಿಂತಿರುಗುವುದರಿಂದ ಬೆಳಿಗ್ಗೆ ಹತ್ತು ಗಂಟೆಗೆ ಹೋಟೇಲಿಗೆ ಬರುವಂತೆ ಆಹ್ವಾನಿಸಿದಾಗ ನನಗೆ ಆದ ಆನಂದ ಹೇಳತೀರದು. ಹೇಳಿದ ಸಮಯಕ್ಕೆ ಸರಿಯಾಗಿ ಕೋಣೆಯಿಂದ ಹೊರಬಂದ ಪೃಥ್ವಿ ಬಾಲನ್ ನನ್ನನ್ನು ಸಂದರ್ಶಕರ ಕೊಠಡಿಯಲ್ಲಿ ಭೇಟಿಯಾದರು. ಸರಳವಾದ ಉಡುಗೆ-ತೊಡುಗೆ, ಚೂಡಿದಾರ್ ಮೇಲೆ ವೇಸ್ಟ್ ಕೋಟ್ ಧರಿಸಿದ್ದ ಕನ್ನಡಕಧಾರಿಯ ಮೂಗಿನಲ್ಲಿ ವಜ್ರದ ಮೂಗುತಿ, ಕಿವಿಗಳಲ್ಲಿ ಚಿಕ್ಕದಾದ ವಜ್ರದ ಕಡುಕು, ಹಸನ್ಮುಖಿಯಾಗಿ ನನಗೆ ವಂದಿಸುತ್ತಾ ನನ್ನೆದುರಿಗೆ ಕುಳಿತರು ಪೃಥ್ವಿ.

‘ಮೇಡಂ ನಾನು ಆರ್ಯಭಟ್. ನನ್ನದೇ ಸ್ವಂತ ಸ್ತ್ರೀವಾದಿ ಪತ್ರಿಕೆ ನಡೆಸುತ್ತಿದ್ದೇನೆ. ಅದರ ಕೆಲವು ಪ್ರತಿಗಳನ್ನು ನಿಮಗಾಗಿ ತಂದಿದ್ದೇನೆ. ಮುಂಬರುವ ಸಂಚಿಕೆಗೆ ತಮ್ಮದೊಂದು ‘ಕವರ್ ಸ್ಟೋರಿ’ ಬರೆಯಬೇಕೆಂದಿದ್ದೇನೆ. ಒಂದೆರಡು ಭಾವಚಿತ್ರಗಳನ್ನು ತೆಗೆದುಕೊಳ್ಳುತ್ತೇನೆ. ಹಾಗೇ ತಮ್ಮ ‘ಸಬಲ’ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಏನಾದರೂ ದಾಖಲೆಗಳಿದ್ದರೆ ದಯವಿಟ್ಟು ತಿಳಿಸಿ’ ಎಂದೆ ಸವಿನಯದಿಂದ.

‘ಉಪನ್ಯಾಸದಲ್ಲಿ ಮಂಡಿಸುವ ಸಲುವಾಗಿ ನಮ್ಮ ಸಂಸ್ಥೆಯ ಚಟುವಟಿಕೆಗಳನ್ನು ಕುರಿತು ಒಂದು ವೀಡಿಯೋ ತಂದಿದ್ದೇನೆ. ಅದನ್ನೇ ನಿಮಗೆ ಕೊಡುತ್ತೇನೆ. ಅದರಲ್ಲಿ ನಿಮಗೆ ಸಾಕಷ್ಟು ಮಾಹಿತಿ ದೊರೆಯುತ್ತದೆ’ ಎನ್ನುತ್ತಾ ತಮ್ಮ ಕೈಚೀಲದಲ್ಲಿದ್ದ ವೀಡಿಯೋ ತೆಗೆದುಕೊಟ್ಟರಾಕೆ.

‘ಥ್ಯಾಂಕ್ಸ್ ಮೇಡಂ. ನೀವು ಭಾಗವಹಿಸಿದ ವಿಚಾರ ಸಂಕಿರಣ ಹೇಗನ್ನಿಸಿತು?’

‘ಫಲಪ್ರದವೆಂದೇ ಹೇಳಬಹುದು ಆರ್ಯ! ಅನೇಕರು ಹೊಸ ಹೊಸ ವಿಚಾರಗಳನ್ನು ಮಂಡಿಸಿದರು. 2018ರಲ್ಲಿ ನೊಬಲ್ ಪಾರಿತೋಷಕ ಪಡೆದ ಇರಾಕಿ ಮಹಿಳೆ ನಾದಿಯಾ ಮುರಾದ್ ಎಂಬಾಕೆ ಹೇಗೆ ಯುದ್ಧ ಪ್ರದೇಶಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಬಗ್ಗೆ ದನಿಯೆತ್ತಿದಳು ಎಂಬುದನ್ನು ಒಬ್ಬರು ವಿವರಿಸಿದರು. ಅಂತೆಯೇ ಮತ್ತೊಬ್ಬರು 1987ರಲ್ಲಿ ಸ್ಥಾಪಿಸಲ್ಪಟ್ಟ ನ್ಯಾಷನ್ ಲೀಗಲ್ ಸರ್ವಿಸಸ್ ಅಥಾರಿಟಿ (ನಾಲ್ಸಾ) ತುಳಿಯಲ್ಪಟ್ಟ ಹೆಂಗಸರ ಪರವಾಗಿ ಹೇಗೆ ಕೆಲಸ ಮಾಡುತ್ತಿದ್ದೆ ಎಂದು ವಿಶದೀಕರಿಸಿದರು. ನಮ್ಮ ಸಂಸ್ಥೆಯ ಚಟುವಟಿಕೆಗಳನ್ನೆಲ್ಲಾ ನಾನೂ ವೀಡಿಯೋದೊಂದಿಗೆ ವಿಶದೀಕರಿಸಿದೆ. ಬಹಳ ಜನ ಮೆಚ್ಚುಗೆ ವ್ಯಕ್ತಪಡಿಸಿದರು’.

‘ಮೇಡಂ ನೀವು ಈ ರೀತಿಯ ವೇಶ್ಯಾವಾಟಿಕೆಗಳಲ್ಲಿರುವ ಹೆಣ್ಣು ಮಕ್ಕಳ ‘ರೆಸ್ಕ್ಯೂ ಆಪರೇಷನ್’ ನಡೆಸುವುದಕ್ಕೆ ಯಾವುದಾದರೂ ಬಲವಾದ ಕಾರಣವಿತ್ತೆ? ಅಥವಾ ಸಮಾಜ ಸೇವೆ ಎಂದೋ?‛

ಇದಕ್ಕೆ ನಾನು ನನ್ನ ಬದುಕನ್ನು ‘ರೀವೈಂಡ್’ ಮಾಡಿ (ಹಿನ್ನೋಟ) ನಿಮಗೆ ತೋರಿಸಬೇಕು‛ ಎನ್ನುತ್ತಾ ಕೆಲಕ್ಷಣ ಕಣ್ಮುಚ್ಚಿ ಕುಳಿತರು ಪೃಥ್ವಿ.

ಹದಿನೈದು ವರ್ಷದ ಪೃಥ್ವಿ ತಮಿಳುನಾಡಿನ ಕರ್ನಲ್ ಬಾಲನ್ರವರ ಪ್ರೀತಿಯ ಪುತ್ರಿ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಪೃಥ್ವಿಗೆ ತಂದೆಯೇ ಸರ್ವಸ್ವ, ಕೆಲಸದ ಸಲುವಾಗಿ ದೇಶದಾದ್ಯಂತ ತಿರುಗಾಡುತ್ತಿದ್ದ ಬಾಲನ್ರವರು ಸರ್ವಿಸ್ನ ಕೊನೆಯ ವೇಳೆಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೆಹಲಿಯಲ್ಲಿ ನೆಲೆಸಿದ್ದರು.
ದೆಹಲಿ ಪಬ್ಲಿಕ್ ಶಾಲೆಯಲ್ಲಿ ಹತ್ತನೆಯ ತರಗತಿ ಓದುತ್ತಿದ್ದ ಪೃಥ್ವಿ ಓದಿನಲ್ಲೂ, ಕ್ರೀಡೆಗಳಲ್ಲೂ ಸದಾ ಮುಂದು. ಅವಳ ತರಗತಿಗೆ ಅವಳೇ ‘ಸ್ಟೂಡೆಂಟ್ ರೆಪ್ರೆಸೆಂಟಿಟಿವ್ (ಪ್ರತಿನಿಧಿ). ಹೀಗೆ ಹಕ್ಕಿಯಂತೆ ಹಾರುತ್ತಿದ್ದ ಪೃಥ್ವಿ ಪ್ರತಿದಿನ ತಂದೆ ಕಳುಹಿಸಿದ್ದ ಕಾರಿನಲ್ಲಿಯೇ ಶಾಲೆಗೆ ಹೋಗಿ ಬರುತ್ತಿದ್ದಳು. ಅಂದೂ ಹಾಗೆಯೇ ಶಾಲೆಗೆ ಬಂದವಳಿಗೆ ತಂದೆಗೆ ಕಾರು ಅಪಘಾತವಾಗಿ ಅಪೋಲೋ ಆಸ್ಪತ್ರೆಯಲ್ಲಿದ್ದಾರೆ ಎಂಬ ಸಂದೇಶ ಪ್ರಿನ್ಸಿಪಾಲರ ಕೋಣೆಯ ದೂರವಾಣಿಯ ಮೂಲಕ ತಿಳಿಯಿತು. ಪೃಥ್ವಿ ತಡಮಾಡದೆ ಪರವಾನಗಿ ಪಡೆದು ಒಂದು ಆಟೋ ಹಿಡಿದು ಆಸ್ಪತ್ರೆಯ ಕಡೆ ಹೊರಟಳು. ಮಾರ್ಗಮಧ್ಯದಲ್ಲಿ ಆಟೊ ಕೆಟ್ಟು ನಿಲ್ಲಲು ಏಳೆಂಟು ಯುವಕರು ಅವಳ ಆಟೋದ ಬಳಿ ಬಂದು ಅವಳನ್ನು ಅನಾಮತ್ತು ಎತ್ತಿ ತಮ್ಮ ವ್ಯಾನಿಗೆ ಸಾಗಿಸಿದರು. ಬಾಯಿಗೆ ಕಣ್ಣಿಗೆ ಬಟ್ಟೆ ಕಟ್ಟಿದರು. ಆಟೋದವ ಹಿಂದೆ ರಿಪೇರಿ ಮಾಡುತ್ತಿದ್ದ. ಹಾಗಾಗಿ ಅವನಿಗೆ ಇದು ತಿಳಿಯಲಿಲ್ಲ. ತಂದೆಯ ಅಪಘಾತ ಸುಳ್ಳು ಸುದ್ದಿಯೆಂದೂ, ತನ್ನನ್ನು ಅಪಹರಿಸುವ ಸಲುವಾಗಿ ಮಾಡಿದ ಕುತಂತ್ರವೆಂದೂ ಅರಿವಾದಾಗ ಪೃಥ್ವಿ ಯಾವುದೋ ಕಾಣದ ಬಂಗಲೆಯ ಕೋಣೆಯಲ್ಲಿ ಬಂಧಿಯಾಗಿದ್ದಳು. ಒಬ್ಬರ ನಂತರ ಒಬ್ಬರು ಹೀಗೆ ಎಂಟು ಜನ ಧಾಂಡಿಗ ಯುವಕರು ಅವಳನ್ನು ‘ಗ್ಯಾಂಗ್ ರೇಪ್’ ಮಾಡಿದರು. ಅವಳ ಬಳ್ಳಿ ದೇಹದ ಮೇಲೆರಗಿ ಹೂ ಹೊಸಕಿದಂತೆ ಹೊಸಕಿ ಹಾಕಿದಾಗ ಪೃಥ್ವಿ ಏನೂ ಮಾಡಲಾರದೆ ಕಂಗೆಟ್ಟಳು. ತನ್ನ ದೇಹದ ಮೇಲಾದ ದೌರ್ಜನ್ಯಕ್ಕಿಂತ ಅವಳ ಮುಗ್ಧ ಮನಸ್ಸಿನ ಮೇಲಾದ ಪರಿಣಾಮ ವರ್ಣನಾತೀತ! ಹೊಸಕಿದ ಹೂ ದೇಹವನ್ನು ಯುವಕರು ಅವಳ ಶಾಲೆಯ ಬಳಿಯ ಪಾರ್ಕ್ವೊಂದರಲ್ಲಿ ಇಳಿಸಿ ಹೋಗಿದ್ದರು.

ವಸ್ತುಸ್ಥಿತಿ ಅರಿವಾದಾಗ ಆ ವಯಸ್ಸಿನ ಬಾಲೆಯರಿಗೆ ಮೊದಲಾಗುವುದು ಆಘಾತ. ನಂತರ ತಮ್ಮ ದೇಹದ ಬಗ್ಗೆ ಜಿಗುಪ್ಸೆ, ಅಸಹ್ಯ. ಮುಂದೆ ಮನದಲ್ಲಿ ಅತೀವ ಖಿನ್ನತೆಯುಂಟಾಗಿ ಆತ್ಮಹತ್ಯೆಗೆ ಪ್ರಯತ್ನ. ಆದರೆ ಪೃಥ್ವಿಗೆ ಇದೊಂದೂ ಆಗಲಿಲ್ಲ. ಅವಳಿಗೆ ಉದಿಸಿದ ಒಂದೇ ಭಾವನೆ ಕ್ರೋಧ! ಇಡೀ ಸಮುದಾಯದ ವ್ಯವಸ್ಥೆಯ ಕುರಿತು ಅಸಾಧ್ಯ ಕೋಪ! ಅವಳು ಅಳಲಿಲ್ಲ, ದೈಹಿಕವಾಗಿ ಆದ ಅಸಾಧ್ಯ ನೋವನ್ನು ಸಹಿಸಿ ಕಷ್ಟದಿಂದ ಎದ್ದವಳು ಆಟೋ ಹಿಡಿದು ಮನೆಗೆ ಬಂದಳು. ದುಃಖ ತೋಡಿಕೊಳ್ಳಲು ಅಮ್ಮ ಬದುಕಿರಲಿಲ್ಲ. ತನ್ನನ್ನು ಸಾಕಿದ ಅಡುಗೆಯ ಮರಕತಂ ಮಾತ್ರ ಇದ್ದಳು ಮನೆಯಲ್ಲಿ. ಕಾಲೇಜ್ ಓದುತ್ತಿದ್ದ ಅಣ್ಣ, ಕೆಲಸಕ್ಕೆ ಹೋಗಿದ್ದ ತಂದೆ ಇನ್ನೂ ಬಂದಿರಲಿಲ್ಲ. ಮನದ ಮೂಲೆಯಲ್ಲೊಂದು ಶಂಕೆ. ಅಪ್ಪನಿಗೆ ನಡೆದದ್ದು ಹೇಳಲೋ ಬೇಡವೋ? ಮೌನವಾಗಿ ಏನೂ ನಡೆಯದಂತೆ ಇದ್ದುಬಿಡಲೇ? ನನ್ನಿಂದಾಗಿ ಮನೆಯಲ್ಲಿ ಎಲ್ಲರ ನೆಮ್ಮದಿಯನ್ನೇಕೆ ಹಾಳು ಮಾಡಬೇಕು? ಆದರೆ ಅವಳ ಅಂತರಾತ್ಮ ಹೇಳಿತು. ‘ಇಲ್ಲ, ಪ್ರಪಂಚ ಹೀಗೇ ಮುಂದುವರೆಯಬಾರದು, ಎಲ್ಲಿಯವರೆಗೆ ನಾವು ಹೆಣ್ಮಕ್ಕಳು ಎಲ್ಲವನ್ನು ಮೌನದಿಂದ ಸಹಿಸುತ್ತೇವೋ, ಎಲ್ಲಿಯವರೆಗೆ ನಮ್ಮ ಮೇಲೆ ನಡೆಯುವ ದೌರ್ಜನ್ಯಗಳನ್ನು ಸಮಾಜದ ಮುಂದೆ ಹೊರಹಾಕದೆ ಬಚ್ಚಿಡುತ್ತೇವೋ ಅಲ್ಲಿಯವರೆಗೆ ಇಂತಹ ರಾಕ್ಷಸರು ತಮ್ಮ ದುಷ್ಕರ್ಮಗಳನ್ನು ಮಾಡುತ್ತಲೇ ಇರುತ್ತಾರೆ. ಇಲ್ಲ! ಇದಾಗಲು ಬಿಡಬಾರದು, ನಾನು ಅಪ್ಪನಿಗೆ ಎಲ್ಲವನ್ನೂ ಹೇಳಿಬಿಡುತ್ತೇನೆ. ಪ್ರಪಂಚವನ್ನು ಎದುರಿಸಿ ಬದುಕುತ್ತೇನೆ. ಹೀಗೆ ನಿರ್ಧರಿಸಿದ ಪೃಥ್ವಿ ತನ್ನ ಅತ್ಯಂತ ಆಪ್ತರಾದ ತಂದೆಗೆ ನಡೆದದ್ದನ್ನೆಲ್ಲಾ ಹೇಳಿದಳು. ತಂದೆಯೂ, ಅಣ್ಣನೂ ಅವಳಿಗೆ ಬೆನ್ನೆಲುಬಾಗಿ ನಿಂತರು. ಅವಳ ಮೇಲೆ ದೌರ್ಜನ್ಯ ನಡೆಸಿದವರು ಯಾರೆಂದು ಅವಳು ಗುರುತಿಸುವ ಸ್ಥಿತಿಯಲ್ಲಿ ಇಲ್ಲವಾಗಿ, ಅವರಿಗೆ ಶಿಕ್ಷೆಯಾಗಲಿಲ್ಲ.

ಪೃಥ್ವಿ ಧೃತಿಗೆಡದೆ ತನ್ನ ವಿದ್ಯಾಭ್ಯಾಸ ಮುಂದುವರೆಸಿ ವಕೀಲಳಾದಳು. ಕರಾಟೆ-ಕುಂಗ್ ಫೂಗಳಂತಹ ಸ್ವರಕ್ಷಣಾ ವಿದ್ಯೆಗಳನ್ನು ಕಲಿತಳು. ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಯಾದಳು. ವೃತ್ತಿಯಲ್ಲಿ ವಕೀಲಳೇ ಆದರೂ ಅವಳ ಹೃದಯದ ತುಡಿತ ಬೇರೆಯೇ ಆಗಿತ್ತು. ಅವಳಲ್ಲಿನ ಕ್ರೋಧವೇ ಅವಳ ಶಕ್ತಿಯಾಯಿತು. ತನ್ನಂತೆ ದೌರ್ಜನ್ಯಕ್ಕೆ ಒಳಗಾದ ನಾಲ್ಕಾರು ಹೆಣ್ಣು ಮಕ್ಕಳನ್ನೂ, ಸಂವೇದನಾಶೀಲರಾದ ಇಬ್ಬರು ಯುವಕರನ್ನೂ ಸೇರಿಸಿಕೊಂಡು ಒಂದು ‘ರೆಸ್ಕ್ಯೂ ಸ್ಕ್ವಾಡ್’ (ರಕ್ಷಣಾಪಡೆ) ಕಟ್ಟಿಕೊಂಡಳು. ಅವರಿಗೆ ಆಪತ್ತಿನಲ್ಲಿರುವವರ ರಕ್ಷಣೆ ಮಾಡುವ ಕ್ಲಿಷ್ಟವಾದ ತರಬೇತಿಗಳನ್ನು ಕೊಡಿಸಿದಳು. ದೇಶದಲ್ಲಿ ಎಲ್ಲೆಲ್ಲಿ ಮಕ್ಕಳ ಅಪಹರಣ ಮಾಡಿ ವೇಶ್ಯಾವಾಟಿಕೆಗಳಿಗೆ ಹಣಕ್ಕಾಗಿ ಒಪ್ಪಿಸುತ್ತಿದ್ದಾರೆ ಎಂದು ತಿಳಿಯಲು ಗುಪ್ತಚರರನ್ನೂ ಎಲ್ಲೆಡೆಯಲ್ಲೂ ನೇಮಿಸಿದಳು. ಅವರಿಂದ ಸುದ್ದಿ ತಿಳಿದುಬಂದ ತಕ್ಷಣ ಆ ಸ್ಥಳಕ್ಕೆ ತನ್ನ ‘ರೆಸ್ಕ್ಯೂ ಸ್ಕ್ವಾಡ್’ನೊಂದಿಗೆ ಹೋಗಿ ಅಲ್ಲಿಯ ಹೆಣ್ಮಕ್ಕಳನ್ನು ರಕ್ಷಿಸುತ್ತಿದ್ದಳು. ಈ ಕೆಲಸ ಮೊದಲು ಹೈದರಾಬಾದ್, ವಿಶಾಖಪಟ್ಟಣಗಳಲ್ಲಿ ನಡೆಯಿತು. ಹಾಗೆ ರೈಡ್ ನಡೆಸಿದಾಗ ಅಲ್ಲಿಂದ ಪಾರಾದ ನಾಲ್ಕು ನೂರು ಹೆಂಗಸರು, ತಮ್ಮ ಮಕ್ಕಳಿಗೊಂದು ರಕ್ಷಣಾ ಸ್ಥಳ ಕಲ್ಪಿಸಿಕೊಡಬೇಕೆಂದು ಬೇಡಿಕೊಂಡರು. ಮೂಲ ಧನವಾಗಿ ಅವರುಗಳೇ ನೀಡಿದ ಬಳೆಗಳು, ಓಲೆಗಳು, ಸರಗಳು ಇವುಗಳನ್ನಿಟ್ಟುಕೊಂಡು ಚಿಕ್ಕದಾಗಿ ‘ಸಬಲ’ ಸಂಸ್ಥೆಯನ್ನು ಆರಂಭಿಸಿದಳು ಪೃಥ್ವಿ. ಇಂದು ಇದು ದೇಶದಾದ್ಯಂತ ನಡೆಸಿದ ಅನೇಕ ‘ರೈಡ್’ಗಳ ಫಲವಾಗಿ ಸಿಕ್ಕ ಇಪ್ಪತ್ತು ಸಹಸ್ರ ನಿರಾಶ್ರಿತ, ಶೋಷಿತ ಹೆಣ್ಮಕ್ಕಳುಗಳಿಗೆ ಆಶ್ರಮಧಾಮವಾಗಿದೆ.

ಪೃಥ್ವಿ ಬಾಲನ್ ಹೇಳಿದ ತಮ್ಮ ಆತ್ಮಕಥೆ ಕೇಳಿ ನಾನು ಕಣ್ಣೊರೆಸಿಕೊಂಡೆ. ಯಾರದ್ದೋ ಕಥೆ ಹೇಳುವಂತೆ ತನ್ನ ದಾರುಣ ಬದುಕಿನ ಚಿತ್ರಣ ನೀಡಿದಳಲ್ಲ ಈ ಮಹಾತಾಯಿ ಎನಿಸದಿರಲಿಲ್ಲ. ಮತ್ತೆ ಕೇಳಿದೆ ‘ಮೇಡಂ, ನಿಮ್ಮ ಇಷ್ಟು ವರ್ಷಗಳ ಅನುಭವದಲ್ಲಿ ಮರೆಯಲಾಗದ ಕೆಲವು ಘಟನೆಗಳಿದ್ದರೆ ದಯವಿಟ್ಟು ಹಂಚಿಕೊಳ್ಳಿ.’
ಎರಡು ಕ್ಷಣ ಕಣ್ಮುಚ್ಚಿ ಹೇಳಿದರು ಆಕೆ ‘ಒಬ್ಬೊಬ್ಬರದೂ ಒಂದೊಂದು ದಾರುಣ ಕಥೆಯೇ. ಮೂವತ್ತೆರಡು ವರ್ಷಗಳು ಕಳೆದರೂ ನನ್ನ ಮೇಲೆ ದೌರ್ಜನ್ಯ ನಡೆದ ದಿನ ಉಂಟಾದ ಕ್ರೋಧ ಇನ್ನೂ ಹೆಚ್ಚುತ್ತಲೇ ಇದೆ. ನನ್ನ ‘ರೆಸ್ಕ್ಯೂ ರೈಡ್’ಗಳಲ್ಲಿ ದೊರೆತ ಹೆಣ್ಮಕ್ಕಳಲ್ಲಿ ಅತಿ ಚಿಕ್ಕವಳೆಂದರೆ ಮೂರೂವರೆ ವರ್ಷದ ಕಿಶೋರಿ. ಮಿಕ್ಕವರೆಲ್ಲಾ ಹತ್ತರಿಂದ ಹದಿನಾರು ವರ್ಷ ಪ್ರಾಯದ ಕಿಶೋರಿಯರು. ಅದರಲ್ಲಿ ಅನೇಕರು ತಿಳಿದವರಿಂದಲೇ ಅಂದರೆ ನೆರೆಹೊರೆಯ ಹುಡುಗರು, ಮನೆಗೆ ಬಂದು ಹೋಗುವ ಬಂಧು-ಮಿತ್ರರು, ಡ್ರೈವರ್ಗಳು, ಅಡುಗೆಯವರು, ಕೆಲಸದಾಳುಗಳು, ಕಡೆಗೆ ಬಲ ತಂದೆ, ಬಲ ಅಣ್ಣ ಮುಂತಾದವರಿಂದಲೂ ಕೂಡ ‘ರೇಪ್’ (ಬಲಾತ್ಕಾರ)ಗೆ ಒಳಗಾದವರು. ಇದಲ್ಲದೆ ಸಿನೆಮಾ ತಾರೆಯಾಗುವ ಆಸೆ, ಮಾಡೆಲಿಂಗ್ ಹುಚ್ಚು, ದೈಹಿಕ-ಮಾನಸಿಕ ಆಮಿಷಗಳು, ಹಣದ ಆಸೆ ಮುಂತಾದವುಗಳಿಗೆ ಬಲಿಯಾಗಿ ತಾವಾಗಿಯೇ ಮನೆಬಿಟ್ಟು ಬಂದು ಇಂತಹ ವೇಶ್ಯಾವಾಟಿಕೆಗಳಿಗೆ ವಿಕ್ರಯಗೊಂಡು, ಹಿಂತಿರುಗಿ ಹೋಗಲಾರದೆ ಪರಿತಪಿಸಿದವರೂ ಉಂಟು.

ಒಮ್ಮೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆಸಿದ ಒಂದು ‘ರೈಡ್’ನಲ್ಲಿ ಐವತ್ತು ಹೆಣ್ಮಕ್ಕಳು ದೊರೆತರು. ವೇಶ್ಯಾವಾಟಿಕೆಯವರು ಅವರನ್ನೆಲ್ಲಾ ನೆಲಮಾಳಿಗೆಯಲ್ಲಿ, ಅಟ್ಟಗಳಲ್ಲಿ, ಸ್ನಾನಗೃಹಗಳಲ್ಲಿ ಬಚ್ಚಿಟ್ಟು ಬಿಟ್ಟಿದ್ದರು. ಆದರೂ ನಾವು ಅವರನ್ನೆಲ್ಲಾ ಹುಡುಕಿ ತೆಗೆದೆವು. ಒಂದು ಹುಡುಗಿ ಮಾತ್ರ ನಮ್ಮೊಂದಿಗೆ ಬರಲು ಒಪ್ಪಲಿಲ್ಲ. ಕಾರಣ ಕೇಳಿದಾಗ ಅವಳು ತನ್ನ ಮಗು ವ್ಯವಸ್ಥಾಪಕರ ಬಳಿ ಇದೆ ಎಂದಳು. ಕೊನೆಗೂ ನೀರಿನ ಟ್ಯಾಂಕ್ನಲ್ಲಿ ಮುಳುಗಿಸಿಟ್ಟಿದ್ದ ಒಂಭತ್ತು ತಿಂಗಳ ಮಗುವನ್ನು ನಾವು ಹುಡುಕಿ ಆಸ್ಪತ್ರೆಗೆ ಸೇರಿಸಿ ರಕ್ಷಿಸಿದೆವು. ಮಗು ಬದುಕಿಕೊಂಡಾಗ ನೋಡಿದರೆ ಅದರ ಮೈಮೇಲೆ ಅನೇಕ ಗಾಯಗಳು. ಅದರ ತಾಯಿಯನ್ನು ವಿಚಾರಿಸಿದಾಗ ತಿಳಿದ ವಿಷಯವಿದು: ಪ್ರತಿದಿನ 30-40 ಮಂದಿ ಗಿರಾಕಿಗಳಿಗೆ ಮೈ ಒಡ್ಡಬೇಕಾಗಿ ಬಂದ ಅವಳು, ಆಯಾಸದಿಂದ ದಂಧೆಗೆ ನಿರಾಕರಿಸಿದರೆ ಆ ವ್ಯವಸ್ಥಾಪಕ ಸೇಠಾಣಿಯ ನಾಯಿ ಆ ಮಗುವನ್ನು ಕಚ್ಚುತ್ತಿತ್ತು ಎಂದು! ಇಂತಹ ಹೃದಯ ಹೀನರೂ ಈ ಭುವಿಯ ಮೇಲೆ ಇದ್ದಾರೆಯೇ ಎಂದು ನಮಗೆ ಆಘಾತವಾಗದಿರಲಿಲ್ಲ!’ ಗಂಟಲಿಗೆ ಒತ್ತರಿಸಿಕೊಂಡು ಬಂದಿತು ದುಃಖ ಪೃಥ್ವಿಯವರಿಗೆ.

‘ಮೇಡಂ! ‘ಸೈಬರ್ ಸೆಕ್ಸ್ ಟ್ರಾಫಿಕಿಂಗ್’ ಅಥವಾ ‘ಸೈಬರ್ ಕ್ರೈಂ’ ಎನ್ನುತ್ತಾರಲ್ಲ ಅದೇನು? ಸ್ವಲ್ಪ ವಿವರಿಸುವಿರಾ?’
‘ನಿಮಗೊಂದು ಉದಾಹರಣೆ ಕೊಟ್ಟರೆ ಅರ್ಥವಾಗುತ್ತದೆ. ತಂದೆ ತಾಯಿಯರಿಬ್ಬರೂ ಉನ್ನತ ಹುದ್ದೆಗಳಲ್ಲಿದ್ದು ತುಂಬಾ ಅನುಕೂಲಸ್ಥ ಕುಟುಂಬದ ಹದಿಮೂರು ವರ್ಷದ ಹುಡುಗಿಯೊಬ್ಬಳಿಗೆ ಅವಳ ಹುಟ್ಟುಹಬ್ಬಕ್ಕೆ ‘ಲ್ಯಾಪ್ಟಾಪ್’ ಉಡುಗೊರೆಯಾಗಿ ದೊರೆಯಿತು ತಂದೆ ತಾಯಿಯರಿಂದ. ಅವಳು ಫೇಸ್ಬುಕ್ನಲ್ಲಿ ಗೆಳೆಯ-ಗೆಳತಿಯರನ್ನು ಮಾಡಿಕೊಂಡಳು. ಒಬ್ಬ ಹಿರಿಯ ಹೆಂಗಸಿನೊಡನೆ ಅವಳ ‘ಚಾಟ್’ ಹೆಚ್ಚಾಯಿತು. ತನ್ನ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದರ ಬಗ್ಗೆ ಆಕೆಯೊಡನೆ ಸಂಭಾಷಿಸಿದಾಗ ಆ ಹೆಂಗಸು ಆ ಹುಡುಗಿಯನ್ನು ತನ್ನ ದೇಹದ ವಿವಿಧ ಭಾಗಗಳನ್ನು ‘ವೆಬ್ಕ್ಯಾಮ್’ ಮುಂದೆ ತೋರಿಸುತ್ತಾ ಹೋದರೆ ತಾನು ಸೌಂದರ್ಯ ಸಲಹೆಗಳನ್ನು ನೀಡುವುದಾಗಿ ಹೇಳಿದಳು. ಆ ಹುಡುಗಿ ಮುಗ್ಧಳಾಗಿ ಹಾಗೇ ಮಾಡಿದಳು. ಇದು ಸುಮಾರು ಐದಾರು ವಾರಗಳು ಕಳೆದಾಗ ಹುಡುಗಿಯ ಅಣ್ಣನಿಗೆ, ಅವನ ಲ್ಯಾಪ್ಟಾಪ್ನಲ್ಲಿ ಒಂದು ಪೋರ್ನ್ ಸೈಟ್ನಲ್ಲಿ ನಗ್ನ ಹುಡುಗಿಯ ವಿಡಿಯೋ ಕಂಡಿತು. ನೋಡಿದರೆ ಅದು ತನ್ನ ತಂಗಿಯೇ. ಸುಮಾರು ಪೋರ್ನ್ ಸೈಟ್ಗಳಲ್ಲಿ ವಿಶ್ವದಾದ್ಯಂತ ಆ ವೀಡಿಯೋ ವೈರಲ್ ಆಗಿ ಹರಡಿಹೋಗಿತ್ತು. ವಿಷಯ ತಿಳಿದಾಗ ಹೆತ್ತವರೂ, ಹುಡುಗಿಯೂ ಅತೀವ ಮಾನಸಿಕ ಖಿನ್ನತೆಗೆ ಒಳಗಾದರು. ಇಂದು ಆ ಹುಡುಗಿಯೂ ನಮ್ಮ ಸಂಸ್ಥೆಯಲ್ಲಿದ್ದಾಳೆ. ಅವಳ ದೇಹದ ಯಾವ ಭಾಗವನ್ನೂ ಯಾರೂ ಮುಟ್ಟದಿದ್ದರೂ ಅವಳು ತಾನು ವ್ಯಭಿಚಾರಿಣಿಯಾದಂತೆ ಭಾವಿಸುತ್ತಾಳೆ. ಇದೇ ‘ಸೈಬರ್ ಟ್ರಾಫಿಕಿಂಗ್’ ಹೆತ್ತವರು ಮಕ್ಕಳಿಗೆ ಮೊಬೈಲ್, ಲ್ಯಾಪ್ಟಾಪ್ಗಳನ್ನು ಕೊಡುವಾಗ ಅಪರಿಚಿತರೊಡನೆ ಅಸಾಧ್ಯ ಸಂಪರ್ಕಗಳನ್ನು ಬೆಳೆಸಿಕೊಳ್ಳಬಾರದೆಂದೂ, ತಮ್ಮ ಇತಿ-ಮಿತಿಗಳನ್ನು ಅರಿತಿರಬೇಕೆಂದೂ ಬುದ್ಧಿ ಹೇಳುವುದು ಅತ್ಯಗತ್ಯ’ ಎಂದರು ಪೃಥ್ವಿ.

ಆ ವೇಳೆಗೆ ತಲೆಗೆ ಆಂಗ್ಲರಂತೆ ಹ್ಯಾಟ್ ಧರಿಸಿದ ಗಡ್ಡಧಾರಿ ನಮ್ಮ ಕೊಠಡಿಗೆ ಬಂದರು. ಶ್ಯಾಮಲ ವರ್ಣದ ಆ ಕನ್ನಡಕಧಾರಿ ನನ್ನನ್ನು ನೋಡಿ ಮುಗುಳ್ನಕ್ಕು ಕೈ ಮುಗಿದರು. ಆಂಗ್ಲ ಚಿತ್ರದ ಪತ್ತೇದಾರರಂತೆ ಕಂಡರು ಅವರು ನನಗೆ! ‘ಇವರೇ ನನ್ನ ಪತಿ ಸೂರ್ಯ ಮೆನನ್. ಪತಿ ಮಾತ್ರವಲ್ಲ ನನ್ನ ಪಾಲಿನ ದೈವ; ನನ್ನ ಸರ್ವಸ್ವ; ನನ್ನ ಆಪ್ತಮಿತ್ರ, ಮಾರ್ಗದರ್ಶಿ ಎಲ್ಲವೂ. ಬರೀ ಸಪ್ತಪದಿಯಲ್ಲಲ್ಲ, ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಹೆಜ್ಜೆ ಹಾಕುವ ಶಪಥ ಮಾಡಿದವರು’ ಎನ್ನುತ್ತಾ ಹೆಮ್ಮೆಯಿಂದ ತಮ್ಮ ಪತಿಯನ್ನು ಪರಿಚಯಿಸಿದರು ಪೃಥ್ವಿ.

‘ನಿಮ್ಮ ವಿವಾಹ ಹೇಗಾಯಿತೆಂದು ತಿಳಿಯುವ ಕುತೂಹಲ.....’ ಮೆಲ್ಲನೆ ಕೇಳಿದೆ.

‘ಅದೂ ಒಂದು ಸಿನಿಮೀಯ ಘಟನೆಯೇ. ನಾನು ವಿಶಾಖಪಟ್ಟಣದಲ್ಲಿ ನನ್ನ ಸಂಸ್ಥೆಗಾಗಿ ಹಣ ಸಂಗ್ರಹಿಸುತ್ತಿದ್ದಾಗ, ಹತ್ತಾರು ವರ್ಷ ಲಂಡನ್ನಲ್ಲಿ ವಾಸಿಸುತ್ತಾ ಅನೇಕ ‘ಹಾಲಿವುಡ್’ ಚಿತ್ರಗಳ ನಿರ್ಮಾಪಕರಾದ ಸೂರ್ಯ ಮೆನನ್ ಅಲ್ಲಿಗೆ ಬಂದಿರುವುದು ತಿಳಿಯಿತು. ಮೂಲತಃ ಅವರು ಕೇರಳದವರಾದ್ದರಿಂದ ತಮಿಳು, ಮಲಯಾಳಂ ಬಲ್ಲ ನಾನು ಅವರನ್ನು ಹೋಗಿ ಭೇಟಿಯಾದೆ. ನಾನು ಮಾಡುತ್ತಿರುವ ಮಹತ್ತರ ಕಾರ್ಯಕ್ಕೆ ತಮ್ಮ ಪಾಲೂ ಇರಲಿ ಎಂದು ದೊಡ್ಡದೊಂದು ಮೊತ್ತವನ್ನು ನೀಡಿದರು. ಹಣ ಸಿಕ್ಕ ಸಂಭ್ರಮದಲ್ಲಿ ನಾನು ಅವರಿಗೆ ಧನ್ಯವಾದ ಹೇಳುವುದನ್ನೂ ಮರೆತು ಹೋಗಿಬಿಟ್ಟೆ.

ಮರುದಿನ ಅವರು ಇಳಿದುಕೊಂಡಿದ್ದ ಹೋಟೆಲಿಗೆ ಧನ್ಯವಾದ ತಿಳಿಸೋಣವೆಂದು ಹೋದಾಗ, ಅವರು ಚಲಿಸುತ್ತಿದ್ದ ಕಾರು, ಲಾರಿಗೆ ಡಿಕ್ಕಿ ಹೊಡೆದು ಗಡ್ಡಧಾರಿ ಮಡಿದರೆಂದು ಸುದ್ದಿ ತಿಳಿಯಿತು. ಯಾವ ಆಸ್ಪತ್ರೆಗೆ ಕರೆದೊಯ್ದರೆಂದು ಶೋಧಿಸಿ, ಹೋಗಿ ನೋಡಿದಾಗ ಅವರು ಸತ್ತಿರಲಿಲ್ಲ. ಹನ್ನೆರಡು ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕೆಂದೂ, ಎಲ್ಲವೂ ಫಲಪ್ರದವಾದರೆ ಬದುಕುವರೆಂದೂ ಹೇಳಿದ ವೈದ್ಯರು ಸಂಬಂಧಿಕರು ಯಾರಾದರೂ ಫಾರ್ಮ್ಗೆ ಸಹಿ ಹಾಕಬೇಕೆಂದರು. ಆ ತುರ್ತು ಪರಿಸ್ಥಿತಿಯಲ್ಲಿ ಏನೂ ತೋಚದೆ ಆತ ಬದುಕಿ ಉಳಿಯಲಿ ಎಂಬ ಆಸೆಯಿಂದ ‘ನಾನೇ ಅವರ ಪತ್ನಿ’ ಎಂದು ಹೇಳಿ ಸಮ್ಮತಿಯ ಸಹಿ ಹಾಕಿದೆ!

ಅತ್ಯಾಶ್ಚರ್ಯಕರವಾಗಿ ಸೂರ್ಯ ಬದುಕಿ ಉಳಿದರು. ವೈದ್ಯರಿಂದ ವಿಷಯ ತಿಳಿದು ನನ್ನನ್ನೇ ವರಿಸುವುದಾಗಿ ಮುಂದೆ ಬಂದರು. ಆದರೆ ಅವರನ್ನು ವಂಚಿಸಿ ಮದುವೆಯಾಗಲು ನಾನು ಸಿದ್ಧಳಿರಲಿಲ್ಲ. ನನ್ನ ಮೇಲೆ ನಡೆದ ಅತ್ಯಾಚಾರವನ್ನೆಲ್ಲಾ ಅವರಿಗೆ ವಿವರಿಸಿ ನನ್ನ ಬದುಕಿನ ಧ್ಯೇಯಗಳನ್ನೆಲ್ಲಾ ವಿಶದಪಡಿಸಿದೆ. ‘ಭೂಮಿ ತಾಯಿ ತನ್ನನ್ನು ತುಳಿಯುವವರ ಪಾಪಗಳನ್ನೆಲ್ಲಾ ಮನ್ನಿಸುತ್ತಾ, ತಾನು ಪವಿತ್ರಳಾಗಿಯೇ ಉಳಿಯುವಳು ತಾನೆ? ಅವಳ ಹೆಸರನ್ನೇ ಹೊತ್ತ ನೀನೂ ಅವಳಂತೆಯೇ ಪವಿತ್ರಳು ನನ್ನ ಪಾಲಿಗೆ’ ಎಂದುಬಿಟ್ಟರು ಈ ಮಹನೀಯರು. ಹೇಳಿದಂತೆ ನನ್ನನ್ನು ಮದುವೆಯಾಗಿ ಭಾರತದಲ್ಲೇ ನೆಲೆಸಿದರು’ ಎಂದು ಹೇಳಿ ಮಾತು ಮುಗಿಸುತ್ತಾ ಪತಿಯೆಡೆಗೆ ಮೆಚ್ಚುಗೆಯ ಕೃತಜ್ಞತೆಯ ನೋಟ ಬೀರಿದರು ಪೃಥ್ವಿ. ಪತ್ನಿಯ ಬೆನ್ನುದಡವುತ್ತಾ ಸಂತೈಸಿದರು ಸೂರ್ಯ ಮೆನನ್. ಅವರಿಬ್ಬರ ಭಾವಚಿತ್ರವೊಂದನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿದೆ.

‘ಮೇಡಂ ಕಡೆಯ ಒಂದು ಪ್ರಶ್ನೆ, ಇಷ್ಟು ಅಗಾಧವಾದ ಅನುಭವವುಳ್ಳ ನೀವು ಸಮಾಜಕ್ಕೆ ಏನು ಸಂದೇಶ ನೀಡಬಯಸುತ್ತೀರಿ?’ ಎಂದೆ.

‘ಹೆಣ್ಣು ಮಕ್ಕಳು ಸಮಾಜಕ್ಕೆ ಹೆದರಿ ಮೌನದ ಚಿಪ್ಪಿನಲ್ಲಿ ಅಡಗಿಕೊಂಡು ಕುಳಿತುಬಿಡುತ್ತಾರೆ. ವಿಮುಕ್ತರಾಗದೆ, ವ್ಯಭಿಚಾರದ ಹೊಲಸು ಬದುಕನ್ನೇ ನಡೆಸುತ್ತಾರೆ. ಅದರಿಂದ ವಿಮುಕ್ತರಾಗಿ ಹೊರಬರಲು ಯತ್ನಿಸುವುದೇ ಇಲ್ಲ. ಇಂತಹ ದಾರುಣ ಮೌನ ನಿಲ್ಲಬೇಕು. ಪ್ರತಿಯೊಬ್ಬ ಹೆಣ್ಣು ಮಗಳೂ ತನ್ನ ದೇಹದ ಮೇಲೆ ನಡೆದ ದೌರ್ಜನ್ಯ, ತನ್ನ ಶೋಷಣೆ ಎಲ್ಲವನ್ನೂ ಧೈರ್ಯವಾಗಿ ಸಮಾಜಕ್ಕೆ ತಿಳಿಸಬೇಕು, ಮೌನದ ಚಿಪ್ಪೊಡೆದು ಹೊರಬರಬೇಕು. ಆಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಸಾಧ್ಯ. ನಮ್ಮ ಸಂಸ್ಥೆಯ ಹೆಣ್ಣು ಮಕ್ಕಳಿಗೆ ನಾವು ಗಂಡಸರು ಮಾಡುವ ಎಲ್ಲ ಕಠಿಣ ಕೆಲಸಗಳನ್ನೂ ಕಲಿಸುತ್ತೇವೆ. ಮರಗೆಲಸ, ವೆಲ್ಡಿಂಗ್, ಕಬ್ಬಿಣದ ಕೆಲಸ, ಲೇಥ್ ಕೆಲಸ ಮುಂತಾದವುಗಳನ್ನು ಅವರು ಲೀಲಾಜಾಲವಾಗಿ ಮಾಡುತ್ತಾರೆ. ಇದರ ಉದ್ದೇಶ ಅವರು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ದೃಢರಾಗಬೇಕೆಂಬುದು ಮತ್ತು ಅವರ ಆತ್ಮಸ್ಥೈರ್ಯ ಹೆಚ್ಚಿಸಲು. ಇಂದು ನಮ್ಮ ಸಂಸ್ಥೆಯಿಂದ ವಿದ್ಯಾಭ್ಯಾಸ ಮಾಡಿದವರಲ್ಲಿ ಯೋಗಪಟುಗಳಿದ್ದಾರೆ, ವೈದ್ಯರಿದ್ದಾರೆ, ಶಿಕ್ಷಕಿಯರಿದ್ದಾರೆ, ಎಂಜಿನಿಯರ್ಗಳು, ಲಾಯರ್ಗಳೂ ಇದ್ದಾರೆ. ದೈಹಿಕ ವ್ಯಾಯಾಮ, ಕಲಾಭಿವರ್ಧನೆ, ವ್ಯಕ್ತಿತ್ವ ವಿಕಸನ ಎಲ್ಲಕ್ಕೂ ನಮ್ಮಲ್ಲಿ ಅವಕಾಶವಿದೆ. ಹೆತ್ತವರಲ್ಲಿ ನನ್ನದೊಂದು ವಿನಂತಿ. ಹೆಣ್ಣು ಮಕ್ಕಳಿಗೆ ಸ್ವರಕ್ಷಣಾ ತಂತ್ರಗಳನ್ನು ಅಂದರೆ ಕುಂಗ್ ಫೂ - ಕರಾಟೆಗಳನ್ನು ಕಲಿಸುವುದರ ಜೊತೆಗೆ, ತಮ್ಮ ಗಂಡು ಮಕ್ಕಳ ದೃಷ್ಟಿಕೋನ ಬದಲಿಸಬೇಕು, ಹೆಣ್ಣುಗಳನ್ನು ಲೈಂಗಿಕ ಚಿಹ್ನೆಯಾಗಿ, ವಿಕ್ರಿಯಿಸುವ ವಸ್ತುವಾಗಿ ನೋಡದೆ, ವಿಶಾಲದೃಷ್ಟಿಯಿಂದ ತಮ್ಮ ಅಕ್ಕ ತಂಗಿಯರಂತೆ ಪೂಜನೀಯವಾಗಿ ಭಾವಿಸಬೇಕು. ಆಗ ಸಮಾಜ ಎಷ್ಟೋ ಸುಧಾರಿಸೀತು! ಇಂತಹ ದೃಷ್ಟಿಕೋನದ ಸದ್ಭಾವನೆಯ ಪುತ್ರರನ್ನು ಬೆಳೆಸುವುದೂ ಕೂಡ ತಂದೆ ತಾಯಿಯರ ಜವಾಬ್ದಾರಿ’ ಎಂದರು ಪೃಥ್ವಿ ಮೆನನ್ ಭಾರವಾದ ದನಿಯಲ್ಲಿ.

ಪೃಥ್ವಿ-ಸೂರ್ಯರ ಸಮಾಗಮವೇ ದೂರದ ಕ್ಷಿತಿಜವಲ್ಲವೆ? ನನ್ನೆದುರಿನ ಈ ಕ್ಷಿತಿಜದಲ್ಲಿ ಅನೇಕ ಅಬಲೆಯರು ಸಬಲೆಯರಾಗುವುದೂ, ಅನೇಕ ಶೋಷಿತ ಹೆಣ್ಣು ಮಕ್ಕಳ ಬದುಕಿನಲ್ಲಿ ಆಶಾಕಿರಣ ಬೆಳಗುವುದೂ ನನಗೆ ಗೋಚರಿಸಿತು.

(ನೈಜ ಘಟನೆಗಳಿಂದ ಪ್ರೇರಿತ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.