‘ನಿಮ್ಮಿಯ ತಲೆಗೆ ನಿವಾಳಿಸಿ ಬಿಟ್ಟಿದ್ದ ಕೋಳಿ ಸತ್ತು ಹೋಯಿತಲ್ಲ!’ ಎಂದು ಕಾವೇರಮ್ಮ ತನ್ನ ಮನೆಯಲ್ಲಿ ನಡೆದ ಘಟನೆಯನ್ನು ಇಷ್ಟುದ್ದದ ಪೀಠಿಕೆಯ ಮೂಲಕ ಹೇಳಲಾರಂಭಿಸಿದರು. ನಡುನಡುವೆ ಆ ಘಟನೆಗೆ ಪೂರಕವಾದ ಉಪಕಥೆಗಳೂ ಸೇರಿಕೊಳ್ಳುತ್ತಿದ್ದವು. ಕಥೆಯ ಓಘದಲ್ಲಿ ರೋಚಕತೆಯನ್ನು ತುಸು ಜಾಸ್ತಿಯೇ ಉಪಯೋಗಿಸಿಕೊಂಡಿದ್ದರು. ಅವರ ಮಾತು ಸುಮಾರು ಅರ್ಧ ತಾಸು ಹೀಗೆಯೇ ಮುಂದುವರಿಯಿತು. ಕೊನೆಗೂ ವಿಮಲಮ್ಮನವರು ಏನು ಆಗಬಾರದೆಂದು ಅಂದುಕೊಂಡಿದ್ದರೋ ಅದೇ ನಡೆದುಹೋಗಿತ್ತು. ಕಾವೇರಮ್ಮ ಇದನ್ನೇ ಅಸ್ತ್ರವಾಗಿಸಿಕೊಂಡು, ‘ಈವರೆಗೆ ನಮ್ಮ ಕುಟುಂಬದಲ್ಲಿ ನಡೆದಿರದಂತಹ ಕೆಟ್ಟ ಅಪಶಕುನವೊಂದು ನಡೆದುಹೋಯಿತು’ ಎಂದು ಒತ್ತಿ ಹೇಳಿದಾಗ ವಿಮಲಮ್ಮ ಇನ್ನಷ್ಟು ಕಂಗಾಲಾದರು.

‘ಈಗೇನು ಮಾಡುವುದು...! ಇದಕ್ಕೇನು ಪರಿಹಾರವಿಲ್ಲವೇ? ಯಾರಾದರೂ ಹಿರಿಯರಲ್ಲಿ ವಿಚಾರಿಸಿದರೆ ಹೇಗೆ? ಎಲ್ಲ ದೋಷಗಳಿಗೂ ಒಂದಲ್ಲ ಒಂದು ಪರಿಹಾರ ಇರುವಾಗ, ಇದಕ್ಕೂ ಇರಬಹುದಲ್ಲವೇ! ಏನಾದರೂ ಮಾಡಲೇಬೇಕು. ನನ್ನ ಮಗಳಿಗೆ ಏನೂ ತೊಂದರೆಯಾಗದಿದ್ದರೆ ಸಾಕು’ ಎಂದು ದೀನರಾಗಿ ವಿಮಲಮ್ಮ ಕಾವೇರಮ್ಮನವರ ಮುಖ ನೋಡಿದರು.

“ಯಾವುದೂ ನಮ್ಮ ಕೈಯಲ್ಲಿ ಇಲ್ಲ. ಪಾಲಿಗೆ ಬಂದಿದ್ದನ್ನು ಅನುಭವಿಸಲೇಬೇಕು. ಇದರಿಂದ ಯಾರೂ ತಪ್ಪಿಸಿಕೊಳ್ಳುವ ಹಾಗಿಲ್ಲ. ನಾವೆಲ್ಲರೂ ನಿಮ್ಮಿಗೆ ಗಂಡು ಮಗುವೇ ಆಗುತ್ತದೆಯೆಂಬ ಭರವಸೆಯನ್ನು ಇಟ್ಟುಕೊಂಡಿದ್ದೇವೆ. ನನ್ನ ಮಗ ಶರತ್ ಪ್ರತಿ ಶುಕ್ರವಾರ ಹೋಗುವ ದೇವಿಯ ದೇವಸ್ಥಾನದ ಅರ್ಚಕರು ಒಂದು ಹೋಳು ತೆಂಗಿನಕಾಯಿಯಲ್ಲಿ ಗಂಧ ಪ್ರಸಾದ ಹಾಕಿ ಕೊಟ್ಟು ‘ನಿನಗೆ ಗಂಡು ಮಗುವೇ ಹುಟ್ಟುತ್ತದೆ’ ಎಂದು ಆಶೀರ್ವಾದ ಮಾಡಿದ್ದರಂತೆ. ಅವನೂ ಅದೇ ಸಂಭ್ರಮದಲ್ಲಿದ್ದಾನೆ. ಈಗ ಅದೇನು ಗಂಡಾಂತರ ಕಾದಿದೆಯೋ ಏನೋ! ಹೊಟ್ಟೆಯಲ್ಲಿರುವ ಮಗುವಿಗೆ ಏನೂ ಆಗದಿರಲಪ್ಪಾ” ಎಂದು ಕಾವೇರಮ್ಮ ತಮ್ಮದೇ ಆದ ಶೈಲಿಯಲ್ಲಿ ಅಲವತ್ತುಕೊಂಡರು.

ತುಂಬು ಗರ್ಭಿಣಿಯಾಗಿರುವ ತನ್ನ ಮಗಳ ಎದುರಿಗೇ ಅವಳ ಅತ್ತೆ ಈ ವಿಷಯವನ್ನು ಪ್ರಸ್ತಾಪಿಸಿದ್ದು ವಿಮಲಮ್ಮನಿಗೆ ಇಷ್ಟವಾಗಲಿಲ್ಲ. ನಿಮ್ಮಿ ಇದನ್ನೆಲ್ಲ ಮನಸ್ಸಿಗೆ ಹಚ್ಚಿಕೊಂಡು ಏನಾದರೂ ತೊಂದರೆಯಾದರೆ! ಎಂಬ ಆತಂಕ ಅವರನ್ನು ಕಾಡುತ್ತಿತ್ತು. ಹೊರಜಗುಲಿಯಲ್ಲಿ ಕೂತಿದ್ದ ನಿಮ್ಮಿಯನ್ನು ಬಾಗಿಲಿನ ಸಂದಿನಿಂದಲೇ ಇಣುಕಿ ನೋಡಿದರು. ಆದರೆ ಅವಳ ಮುಖದಲ್ಲಿ ಯಾವ ಆತಂಕದ ಎಳೆಯೂ ಗೋಚರಿಸಲಿಲ್ಲ.

ಮೊದಲೆಲ್ಲ ಮನೆಗೆ ಯಾರಾದರೂ ಬಂದರೆ, ಹೆಚ್ಚು ಸಂಭ್ರಮಿಸುತ್ತ ಲವಲವಿಕೆಯಿಂದ ಇರುತ್ತಿದ್ದ ನಿಮ್ಮಿ ಈಗ ಹೆಚ್ಚು ಹೊತ್ತು ಮೌನಿಯಾಗಿರುತ್ತಿದ್ದುದು ವಿಮಲಮ್ಮನನ್ನು ಚಿಂತೆಗೀಡುಮಾಡಿತ್ತು. ‘ಅರಳು ಹುರಿದಂತೆ ಮಾತನಾಡುತ್ತಿದ್ದ ಹುಡುಗಿ ಮದುವೆಯಾಗಿ ಮುಂಬೈಗೆ ಹೋಗಿ ಬಂದಾಗಿನಿಂದ ಯಾಕೆ ಹೀಗೆ?’ ಎಂದು ಮನೆಗೆ ಬಂದವರೆಲ್ಲಾ ಕೇಳಿದರೆ ವಿಮಲಮ್ಮ, ‘ಎಳೆಯ ವಯಸ್ಸು ಈಗ ಒಂಬತ್ತು ತಿಂಗಳಲ್ಲವೇ ಸ್ವಲ್ಪ ಆತಂಕ, ಸುಸ್ತು ಸಹಜ. ಹೆರಿಗೆಯೊಂದು ಸುಸೂತ್ರವಾಗಿ ಆದರೆ ಎಲ್ಲವೂ ಸರಿಹೋಗಬಹುದು’ ಎಂದು ತನ್ನ ಮಗಳನ್ನು ಸಮರ್ಥಿಸಿಕೊಳುತ್ತಿದ್ದರು. ಆದರೂ ಮಗಳ ನಡವಳಿಕೆಯಲ್ಲಿನ ಬದಲಾವಣೆ ನೆರೆಹೊರೆಯವರ ಗಮನಕ್ಕೂ ಬಂದಿರುವುದು ಅವರಿಗೆ ಇನ್ನಷ್ಟು ಆತಂಕವನ್ನುಂಟುಮಾಡಿತ್ತು.

ಮುಂಗಾರು ಮಳೆ ಆಗತಾನೆ ಶುರುವಾಗಿತ್ತು. ವಿಮಲಮ್ಮ ಮಗಳ ಬಾಣಂತನಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮೇ ತಿಂಗಳಿನಲ್ಲಿಯೇ ಮಾಡಿ ಮುಗಿಸಿದ್ದರು. ಬಾಣಂತಿಯನ್ನು ಸ್ನಾನ ಮಾಡಿಸಲು ದಿನಾ ಎರಡು ಹಂಡೆ ನೀರು ಕಾಯಿಸಬೇಕು. ಕಟ್ಟಿಗೆ, ಕೊತ್ತಳಿಗೆ, ತೆಂಗಿನಕಾಯಿ ಸಿಪ್ಪೆ, ಗೆರಟೆ ಕೊಟ್ಟಿಗೆ ತುಂಬಿದರೂ ಮತ್ತೆ ತೋಟಕ್ಕೆ ಹೋಗಿ ತೆಂಗಿನ ಮಡಲುಗಳನ್ನು ರಾಶಿ ಹಾಕುತ್ತಿದ್ದ ವಿಮಲಮ್ಮನಿಗೆ ಬಾಣಂತನವನ್ನು ಒಳ್ಳೆಯ ರೀತಿಯಲ್ಲಿ ಮಾಡಿ ಮಗಳನ್ನು ಜೋಪಾನವಾಗಿ ನೋಡಿಕೊಳ್ಳಬೇಕೆಂಬ ಇಚ್ಛೆ, ಅವರೊಳು ಮತ್ತಷ್ಟು ಚೈತನ್ಯವನ್ನು ಮೂಡಿಸುತ್ತಿತ್ತು. ಆದರೆ ಕಾವೇರಮ್ಮ ಬಂದು ಹೋದಾಗಿನಿಂದ ಅವರಲ್ಲಿದ್ದ ಉತ್ಸಾಹ ಇಳಿದುಹೋಗಿತ್ತು. ಮಗಳ ಬಾಳಿನಲ್ಲಿ ದುತ್ತನೆ ಎದುರಾದ ಸಮಸ್ಯೆಗೆ ಪರಿಹಾರ ಹುಡುಕುವುದೇ ಅವರ ಮುಖ್ಯ ಚಿಂತೆಯಾಗಿತ್ತು.

ನಿಮ್ಮಿಯ ಸೀಮಂತದ ದಿನ ವಿಮಲಮ್ಮ ಬೀಗರ ಮನೆಗೆ ಕೊಂಡುಹೋಗಲು ಆರೋಗ್ಯವಂತ ಲಾಕಿಯನ್ನೇ (ಹೇಟೆ ಕೋಳಿ) ಆರಿಸಿಕೊಂಡಿದ್ದರು. ಹಿಂದಿನಿಂದ ರೂಢಿಯಲ್ಲಿದ್ದ ಸಂಪ್ರದಾಯದ ಪ್ರಕಾರ ಹೆಣ್ಣಿನ ತವರುಮನೆಯಿಂದ ತಂದ ಲಾಕಿಯನ್ನು ಸೀಮಂತದ ದಿನ ಬೆಳಿಗ್ಗೆ ಹೂವು ಸೀರೆ ಕೊಟ್ಟ ನಂತರ ಅವಳ ತಲೆಯ ಸುತ್ತ, ಮೂರು ಸುತ್ತು ನಿವಾಳಿಸಿ ಗಂಡನ ಮನೆಯಲ್ಲಿಯೇ ಬಿಟ್ಟು ಬರಬೇಕು. ಗರ್ಭಿಣಿಗೆ ಹೆರಿಗೆಯಾಗಿ ಪುಟ್ಟ ಪಾಪುವಿನೊಂದಿಗೆ ಗಂಡನ ಮನೆಗೆ ಬರುವಾಗ ನಿವಾಳಿಸಿ ಬಿಟ್ಟ ಕೋಳಿ, ಮೊಟ್ಟೆ ಇಟ್ಟು, ಕಾವು ಕೊಟ್ಟು ಹೊರಗೆ ಬಂದ ಮರಿಗಳೊಂದಿಗೆ ಅಂಗಳ ಸುತ್ತ ಸುತ್ತುತ್ತಿರಬೇಕು. ಆದರೆ ನಿಮ್ಮಿಗೆ ನಿವಾಳಿಸಿ ಬಿಟ್ಟ ಕೋಳಿ ಮೊಟ್ಟೆ ಇಡುವ ಮೊದಲೇ ಸತ್ತ ಸುದ್ದಿಯನ್ನು ಅತ್ತೆ ಕಾವೇರಮ್ಮ ಬಂದು ತಿಳಿಸಿ ಆಘಾತ ನೀಡಿದ್ದರು. ‘ಕೋಳಿ ಸತ್ತರೆ ಬಾಣಂತಿಗೋ ಮಗುವಿಗೋ ತೊಂದರೆಯಾಗುತ್ತದೆ’ ಎಂಬ ನಂಬಿಕೆ ತಮ್ಮ ಊರಿನಲ್ಲಿ ಬಲವಾಗಿತ್ತು. ಆದ್ದರಿಂದ ವಿಮಲಮ್ಮ ತೀರಾ ವಿಚಲಿತರಾಗಿದ್ದರು. ಆದರೆ ನಿಮ್ಮಿ ಯಾವುದನ್ನೂ ಅಷ್ಟು ಬೇಗ ನಂಬುವ ಸ್ವಭಾವದವಳಲ್ಲ. ‘ಹಾಗೇನೂ ಆಗುವುದಿಲ್ಲ ಅಮ್ಮಾ, ನೀನ್ಯಾಕೆ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತಿದ್ದೀಯಾ?’ ಎಂದು ಸಮಾಧಾನಿಸುತ್ತಿದ್ದರೂ ಹೆತ್ತಕರುಳು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಅದಕ್ಕೆ ಕಾರಣವೂ ಇತ್ತು.

‘ಅವಳು ಒಂದು ಕವಡೆ ಕಾಸು ವರದಕ್ಷಿಣೆ ತರಲಿಲ್ಲ. ಸೀಮಂತಕ್ಕೆ ಚಿನ್ನ ಮಾಡಿಸಕೂಡದು. ಒಂದುವೇಳೆ ನನ್ನ ಮಾತು ಮೀರಿ ಚಿನ್ನ ಮಾಡಿಸಿದೆಯಾದರೆ ಈ ಮನೆಯಲ್ಲಿ ಸೀಮಂತ ಶಾಸ್ತ್ರ ನಡೆಸುವ ಹಾಗಿಲ್ಲ. ಏನು ಮಾಡ್ತೀಯಾ ಅಂತ ನಾನೂ ನೋಡ್ತೀನಿ’ ಎಂದು ಕಾವೇರಮ್ಮನ ಹಿರಿಯ ಮಗ ಜಗದೀಶ, ಮುಂಬೈಯಲ್ಲಿರುವ ತನ್ನ ಸಹೋದರ ಶರತ್ನಿಗೆ ಖಾರವಾಗಿ ಪತ್ರ ಬರೆದಿದ್ದ. ಏಕೆಂದರೆ ತಮ್ಮ ಕಳುಹಿಸುವ ಹಣದಲ್ಲಿಯೇ ಆರಾಮವಾಗಿ ತಿಂದುಂಡು ಸೋಮಾರಿಯಂತೆ ತಿರುಗಾಡುತ್ತಿದ್ದ ಜಗದೀಶನಿಗೆ, ಶರತ್ ತಾನು ಮದುವೆಯಾದ ಮೇಲೆ ಊರಿಗೆ ಹಣ ಕಳುಹಿಸುವುದನ್ನು ಕಡಿಮೆ ಮಾಡಿದ್ದು ತೀರ ಅಸಮಾಧಾನವಾಗಿತ್ತು.

ಜಗದೀಶ ಈ ರೀತಿ ತಾಕೀತು ಮಾಡಿದ ಸುದ್ದಿ ನಿಮ್ಮಿಯ ತಾಯಿ ವಿಮಲಮ್ಮನಿಗೂ ತಲುಪಿತ್ತು. ಅವರು, ‘ಚಿನ್ನ ಇಲ್ಲದಿದ್ದರೆ ಪರವಾಗಿಲ್ಲ ನನ್ನ ಮಗಳ ಸೀಮಂತ ಒಳ್ಳೆಯ ರೀತಿಯಿಂದ ನೆರವೇರಿದರೆ ಸಾಕು. ಆ ದಿನ ಯಾವುದೇ ಮನಸ್ತಾಪ ನಡೆಯುವುದು ಬೇಡ’ ಎಂದು ಅಳಿಯ ಶರತ್ನಿಗೆ ಪತ್ರದ ಮೂಲಕ ತಿಳಿಹೇಳಿದರು. ಆದರೆ ಅವನು ಬೀಗರ ಎದುರು ಸಣ್ಣವನಾಗಲು ತಯಾರಿರಲಿಲ್ಲ. ಈ ವಾದವಿವಾದಗಳ ನಡುವೆಯೂ ನಿಮ್ಮಿಗೆ ಸೀಮಂತದ ಉಡುಗೊರೆಯಾಗಿ ಮೂರು ಪವನಿನ ಹವಳದ ಸರ ಮಾಡಿಸಿ ಇಟ್ಟಿದ್ದ. ವಿಷಯ ತಿಳಿದ ಅಣ್ಣ ಜಗದೀಶ ಕೆಂಡಮಂಡಲನಾದ ‘ಎಂದೂ ತನ್ನ ಆಜ್ಞೆಯನ್ನು ಮೀರದವನು ಮದುವೆಯಾದ ಮೇಲೆ ಈ ರೀತಿ ಬದಲಾಗಿಬಿಟ್ಟನಲ್ಲ!’ ಎಂಬ ಅಸಹನೆಯಿಂದ ಸೀಮಂತ ಕಾರ್ಯ ನಡೆಸಲು ಅಂಗಳಕ್ಕೆ ಚಪ್ಪರವನ್ನೂ ಹಾಕಿಸಲಿಲ್ಲ. ನೆಂಟರಿಷ್ಟರಿಗೂ ಹೇಳಿಕೆ ನೀಡಿರಲಿಲ್ಲ.

ಶರತ್ ಮತ್ತು ನಿಮ್ಮಿ ಮುಂಬೈಯಿಂದ ಊರಿಗೆ ಬಂದ ದಿನವೇ ಮನೆಯಲ್ಲಿ ದೊಡ್ಡ ರಂಪಾಟ ನಡೆಯಿತು. ‘ಆ ಬಿಕನಾಶಿ ಬಂದ ಮೇಲೆ ನೀನು ಬದಲಾದೆ. ಪತ್ರವನ್ನೂ ಬರೆಯುವುದು ಕಡಿಮೆ ಮಾಡಿದೆ. ಮನೆ ಖರ್ಚಿಗೆ ಹಣ ಕೂಡ ಕಳಿಸ್ತಾ ಇಲ್ಲ. ಇದೆಲ್ಲ ಆ ದರಿದ್ರದವಳಿಂದಳೇ ಆಗಿದ್ದು. ಅಂಥವಳಿಗೆ ಚಿನ್ನ ಬೇರೆ ಕೇಡು!’ ಎಂದು ಯದ್ವಾತದ್ವಾ ಕಿರುಚಾಡಿಬಿಟ್ಟ. ತನ್ನ ಬಗ್ಗೆ ಭಾವನ ಬಾಯಿಯಲ್ಲಿ ಹೊರಹೊಮ್ಮುತ್ತಿದ್ದ ಅವಾಚ್ಯ ಶಬ್ದಗಳು ನಿಮ್ಮಿಯ ಮನಸ್ಸನ್ನು ಘಾಸಿಗೊಳಿಸಿದವು. ಅತ್ತ ಮುಂಬೈಯ ವ್ಯಾಪಾರ ವಹಿವಾಟು ಕುಸಿದು ಶರತ್ ಸಾಲದಲ್ಲಿ ಮುಳುಗಿದ್ದನಾದರೂ, ಅಣ್ಣನಲ್ಲಿ ತನ್ನ ಸ್ಥಿತಿಯನ್ನು ಹೇಳಿಕೊಳ್ಳದೆ ತಲೆತಗ್ಗಿಸಿ ಕೂತಿದ್ದ. ಒಂದು ವೇಳೆ ಹೇಳಿದ್ದರೂ ನಂಬದಂಥ ಸ್ಥಿತಿಯಲ್ಲಿದ್ದ ಜಗದೀಶ ವ್ಯಗ್ರನಾಗಿದ್ದ. ಕೊನೆಗೆ ಕಾವೇರಮ್ಮ ಇಬ್ಬರ ನಡುವೆ ಬಂದು ಸದ್ಯದ ಮಟ್ಟಿಗೆ ಪರಿಸ್ಥಿತಿಯನ್ನು ಸುಧಾರಿಸಿದರು. ಆದರೆ ಜಗದೀಶನ ಅಸಹನೆ ಅಷ್ಟಕ್ಕೇ ಮುಗಿಯಲಿಲ್ಲ. ತಮ್ಮನ ಕೈಯಲ್ಲಿದ್ದ ಹಣವನ್ನೆಲ್ಲ ವಸೂಲಿ ಮಾಡಿಕೊಂಡ. ಸೀಮಂತ ಕಾರ್ಯಕ್ರಮವನ್ನು ತನ್ನದೇ ಉಸ್ತುವಾರಿಯಲ್ಲಿ ಅತಿ ಸರಳವಾಗಿ ನೆರವೇರಿಸಿದ. ನಿಮ್ಮಿ ತವರು ಮನೆಗೆ ಹೊರಡುವ ಮೊದಲು ಮಡಿಲು ತುಂಬುವ ಶಾಸ್ತ್ರವೂ ಆಯಿತು. ಗಂಡನ ಮನೆಯಿಂದ ಗರ್ಭಿಣಿ ತವರಿಗೆ ಹೋಗುವಾಗ ಮರಳಿ ಈ ಮನೆಗೆ ಬರುವೆನೋ ಇಲ್ಲವೋ ಎಂಬ ನೋವಿನಿಂದ ಹೆಣ್ಣೊಂದು ಕಣ್ಣೀರು ಸುರಿಸದೆ ಇರುವುದಿಲ್ಲ. ಆದರೆ ನಿಮ್ಮಿ ಮಾತ್ರ ಸೀಮಂತದ ಸಂಭ್ರಮದಲ್ಲಿ ನಗಲೂ ಇಲ್ಲ. ಪತಿಯ ಮನೆಯಿಂದ ಹೊರಡುವಾಗ ಅಳಲೂ ಇಲ್ಲ ಎನ್ನುವುದಕ್ಕೂ ಆ ಮನೆಯಲ್ಲಿ ದೊಡ್ಡ ರಾಮಾಯಣವೇ ನಡೆಯಿತು. ಊರಿಗೆ ಬಂದಂದಿಂದ ಹೊರಡುವ ತನಕದ ಅವಧಿಯಲ್ಲಿ ಗಂಡನ ಮನೆಯಲ್ಲಿ ನಾನಾ ತರದ ಕಿರುಕುಳವನ್ನು ಅನುಭವಿಸಿ ನಿಮ್ಮಿ ಮಾನಸಿಕವಾಗಿ ಜರ್ಜರಿತಳಾಗಿದ್ದಳು. ಆದ್ದರಿಂದ ಯಾವುದಕ್ಕೂ ಪ್ರತಿಕ್ರಿಯಿಸದೆ ಮೌನಿಯಾಗಿದ್ದಳು.

ಕೆಲಸದ ಒತ್ತಡದಿಂದ ಊರಿನಲ್ಲಿ ನಿಲ್ಲಲಾಗದ ಶರತ್ ಸೀಮಂತ ಮುಗಿದ ಒಂದು ವಾರದಲ್ಲಿಯೇ ಮುಂಬೈಗೆ ತೆರಳಿದ್ದ. ಇತ್ತ ನಿಮ್ಮಿಗೆ ವೈದ್ಯರು ಸೋನೋಗ್ರಫಿಯ ಪ್ರಕಾರ ಕೊಟ್ಟ ಅವಧಿ ದಾಟಿದರೂ ಹೆರಿಗೆ ನೋವು ಕಾಣಿಸಲಿಲ್ಲ. ‘ಹೊಟ್ಟೆಯೊಳಗೆ ಮಗುವಿನ ಚಲನವಲನ ಇರುವವರೆಗೆ ಭಯಪಡುವ ಅಗತ್ಯವಿಲ್ಲ’ ಎಂದು ವೈದ್ಯರು ಹೇಳಿದರೂ, ತಾಯಿಯ ಒತ್ತಾಯಕ್ಕಾಗಿ ಮತ್ತೊಮ್ಮೆ ಸೋನೋಗ್ರಫಿ ಮಾಡಲಾಯಿತು. ‘ಮಗು ಸ್ವಲ್ಪ ಅಡ್ಡ ತಿರುಗಿದೆ. ನೀರಿನ ಅಂಶವೂ ಕಡಿಮೆಯಾಗಿದೆ. ನಾರ್ಮಲ್ ಆಗದಿದ್ದರೆ ಸಿಸೇರಿಯನ್ಗೂ ರೆಡಿಯಾಗಿರಬೇಕು!’ ಎಂದು ವೈದ್ಯರು ಸೂಚನೆ ನೀಡಿದರು. ಅಷ್ಟು ಕೇಳಿದ ವಿಮಲಮ್ಮನಿಗೆ ತಾವು ನಿವಾಳಿಸಿ ಬಿಟ್ಟ ಕೋಳಿ ಸತ್ತ ವಿಚಾರ ಮತ್ತೊಮ್ಮೆ ಕಣ್ಣೆದುರು ಸುಳಿದು ಭಯವಾಯಿತು.

ಆದರೆ ನಿಮ್ಮಿ ಮಾತ್ರ ಸಮಾಧಾನದಿಂದಿದ್ದಳು. ಇನ್ನಷ್ಟೇ ಪ್ರಪಂಚದ ಬೆಳಕು ಕಾಣಲಿರುವ ತನ್ನ ಎಳೆಜೀವದ ಮುದ್ದು ಮುಖವನ್ನು ಕಣ್ತುಂಬ ಕಾಣುವ, ಮುದ್ದಾಡುವ ಆಸೆ ತನಗೆ ಬೆಟ್ಟದಷ್ಟಿದ್ದರೂ ಅದು ಮಂಜಿನಂತೆ ಕರಗಿಹೋಗುವುದೇ ಎಂಬ ಭಾವ ಕಾಡುತ್ತಿದ್ದುದರಿಂದ ಆಕೆ ನಿರ್ಲಿಪ್ತಳಾಗಿದ್ದಳು.

‘ಶರತ್ ತನ್ನನ್ನು ಮದುವೆಯಾದ ಮೇಲೆ ಬದಲಾದ ಎಂಬ ಕೋಪವನ್ನು ಭಾವ ಕೋಳಿಯ ಮೇಲೆ ತೋರಿಸಿರಬಹುದೇ...! ಅಥವಾ ಅದಕ್ಕೆ ಕಾಯಿಲೆಯೂ ಬಂದಿರಬಹುದು. ಹೀಗಿರುವಾಗ ಅದನ್ನು ಅಪಶಕುನವೆಂದು ಯಾಕೆ ಭಾವಿಸಬೇಕು...! ಕೆಟ್ಟದ್ದನ್ನು ಬಯಸುವ ಸ್ವಭಾವ ಮನುಷ್ಯ ಜೀವಿಯಲ್ಲಿ ಮಾತ್ರ ಇರೋಕೆ ಸಾಧ್ಯ. ವಿಧಿಯಿಚ್ಛೆಯಂತೆ ಅದೇನು ಆಗುವುದಿದ್ದರೂ ನಮ್ಮ ಒಳ್ಳೆಯದಕ್ಕೇ ಆಗುತ್ತದೆ.’ ಎಂದು ನಿಮ್ಮಿ ತನ್ನನ್ನು ತಾನು ಸಮಾಧಾನಿಸಿಕೊಳ್ಳುತ್ತಿದ್ದರೆ, ತಾಯಿ ದೈವ ದೇವರುಗಳಿಗೆಲ್ಲ ಹರಕೆ ಹೊತ್ತು ಕೂತಿದ್ದರು.

ಇವೆಲ್ಲ ನಡೆದ ಎರಡು ದಿನಗಳ ನಂತರ ಸಂಜೆಯ ಹೊತ್ತಿಗೆ ನಿಮ್ಮಿಗೆ ಹೆರಿಗೆನೋವು ಕಾಣಿಸಿಕೊಂಡಿತು. ಮಾರನೆಯ ದಿನ ಮುಂಜಾವಿನವರೆಗೆ ನಿಂತು ನಿಂತು ಬರುತ್ತಿದ್ದ ತೀವ್ರವಾದ ಬೇನೆಯಿಂದ ನರಳಾಡಿದಳು. ಆದರೂ ನುರಿತ ವೈದ್ಯರುಗಳ ಪ್ರಯತ್ನದಿಂದ ನಿಮ್ಮಿಗೆ ಸಾಮಾನ್ಯ ಹೆರಿಗೆಯೇ ಆಯಿತು. ‘ನಿಮಗೆ ಹೆಣ್ಣು ಮಗು ಆಗಿದೆ’ ಎಂದು ದಾದಿ ಹೇಳಿದಾಗ ನಿಮ್ಮಿಗೆ, ಒಂದೆಡೆ ತಾನಿಷ್ಟಪಟ್ಟದ್ದೇ ಆಯಿತಲ್ಲ ಎಂಬ ಖುಷಿಯಾದರೆ, ಇನ್ನೊಂದೆಡೆ ಪತಿಯ ಮನೆಯವರನ್ನು ನೆನೆದು ಕಣ್ಣಂಚು ತೇವಗೊಂಡಿತು.
‘ಎಲ್ಲವೂ ಸುಖವಾಗಿ ಆಯಿತಲ್ಲ!’ ಎಂದು ವಿಮಲಮ್ಮ ಖುಷಿಯಿಂದ ಹಿಗ್ಗಿದ್ದರು. ಹಾಗಾಗಿ ನಿಮ್ಮಿಯನ್ನು ನೋಡಲು ಬಂದವರಲ್ಲೆಲ್ಲ ತಾವು ನಿವಾಳಿಸಿ ಬಿಟ್ಟ ಕೋಳಿಯ ಕಥೆಯನ್ನು ಹೇಳಿ ತನ್ನ ಮಗಳನ್ನು ತಾನು ನಂಬಿದ ದೈವ ದೇವರುಗಳೇ ಕಾಪಾಡಿದರೆಂದು ಕಣ್ತುಂಬಿ ಹೇಳಿಕೊಳ್ಳುತ್ತಿದ್ದರು.

ಬಾಣಂತಿ, ಮಗುವನ್ನು ನೋಡಲು ಬಂದ ಅತ್ತೆ ಕಾವೇರಮ್ಮ ‘ಹೌದು ನಿಮ್ಮಿಗೆ ಏನೂ ಆಗುವುದಿಲ್ಲವೆಂದು ನಾನೂ ಅಂದುಕೊಂಡಿದ್ದೆ. ಯಾಕೆಂದರೆ ಕೋಳಿ ತನ್ನಷ್ಟಕ್ಕೆ ಸತ್ತದ್ದಲ್ಲವಲ್ಲ!’ ಎಂದು ಬಾಯಿ ತಪ್ಪಿ ಅಂದು ನಾಲಿಗೆ ಕಚ್ಚಿಕೊಂಡರು. ನಿಮ್ಮಿಗೂ, ವಿಮಲಮ್ಮನಿಗೂ ಆಶ್ಚರ್ಯವಾಯಿತು. ಆದ್ದರಿಂದ ಕೋಳಿಗೆ ಏನಾಯಿತೆಂದು ವಿಮಲಮ್ಮ ವಿಚಾರಿಸಿದರು.

‘ಜಗದೀಶ ತಮ್ಮನ ಮೇಲಿದ್ದ ಸಿಟ್ಟನ್ನು ಆಗಾಗ ಕೋಳಿಯ ಮೇಲೆ ತೋರಿಸುತ್ತಿದ್ದ. ಅದನ್ನು ಕಂಡ ಕಂಡಲ್ಲಿ ಕಲ್ಲೆಸೆದು ಹಿಂಸಿಸುತ್ತಿದ್ದ, ಆದ್ದರಿಂದಲೇ ಅದು ಸತ್ತು ಹೋದದ್ದು’ ಎಂದು ಕಾವೇರಮ್ಮ ಅಳುಕುತ್ತ ಸತ್ಯವನ್ನು ಅರುಹಿದರು. ಆದರೆ ಅವರ ಮುಖದಲ್ಲಿ ಪಶ್ಚಾತ್ತಾಪದ ಎಳೆಯೂ ಕಾಣಿಸಲಿಲ್ಲ. ಬದಲಿಗೆ, ‘ನಿಮ್ಮಿಗೆ ಹೆಣ್ಣು ಮಗು ಹುಟ್ಟಿತಲ್ಲ!’ ಎಂಬ ನಿರಾಶೆಯ ಮಾತುಗಳು ಅವರಿಂದ ಉರುಳಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.