ಹೊತ್ತು ಹುಟ್ಟುವ ಹೊತ್ತಿಗಾಗಲೇ ಹೊಸಾ ಬಡಾವಣೆಯಲ್ಲಿ ವಾಕ್ ಮುಗಿಸಿ ಪಾರ್ಕಿನ ಬೆಂಚು ಕಲ್ಲೊಂದರಲ್ಲಿ ಕೂತಿದ್ದ ಪುಟ್ಟಾಲಯ್ಯನನ್ನು ಕಂಡವರು ಎಂದಿನಂತೆ ಮಾತಾಡಿಸಿಯೋ ಇಲ್ಲಾ ಮುಗುಳ್ನಕ್ಕೋ ತಟಾಯುತ್ತಿದ್ದರೆ ಪುಟ್ಟಾಲಯ್ಯನ ಕಣ್ಣುಗಳು ಮಾತ್ರ ದಗ್ಗೀರಜ್ಜನಿಗಾಗಿ ತಡಕಾಡುತ್ತಿದ್ದವು. ಪಾರ್ಕಿನ ಆಚೆ ಬದಿಯಲ್ಲಿ ಮೈ ತುಂಬಾ ಕಾಯಿಡಿದಿದ್ದ ಬೆಲವತ್ತದ ಮರದಲ್ಲಿದ್ದ ಹಕ್ಕಿಗಳಿಗಿನ್ನೂ ಬೆಳಕರಿದಿಲ್ಲವೇನೋ ಎಂಬಂತೆ ಗೊಗ್ಗರು ದನಿ ಮಾತಾಡಿಕೊಳ್ಳುತ್ತಿದ್ದವು. ಅದರಿಂದ ವಾರಾಸಿಗೆ ಕೊಂಚ ದೂರದಲ್ಲಿದ್ದ ಅರಳಿ ಹಾಗೂ ಬೇವಿನ ಜೋಡಿ ಮರಗಳನ್ನು ಜೋಡಿಯೊಂದು ಮಡಿಯುಟ್ಟು ಸುತ್ತಾಕಿ ಅವುಗಳ ಬುಡದಲ್ಲಿದ್ದ ನಾಗರ ಕಲ್ಲಿಗೆ ಶರಣು ಮಾಡಿಕೊಳ್ಳುತ್ತಿತ್ತು. ಅವುಗಳಾಚೆಗಿದ್ದ ಆಕಾಶ ಮಲ್ಲಿಗೆ ಮರದ ತುಂಬಾ ಚೋಟುದ್ದದ ಬಿಳಿಯ ಹೂಗಳು ಎಳೆ ಬಿಸಿಲಿನ ಚಕ್ಕಳಗುಳಿಗೆ ನಗಾಡುತ್ತಿರುವಂತೆ ಕಾಣುತ್ತಿದ್ದವು. ಒಂದು ಚಣ ಅತ್ತಲೇ ದಿಟ್ಟಿಸತೊಡಗಿದ ಪುಟ್ಟಾಲಯಯ್ಯನ ಮನಸು ಮಾತ್ರ, `ಅಜ್ಜ ಕಾಣಿಸ್ಕಂಡು ಏನಿಲ್ಲಾಂದ್ರೂ ಹತ್ತತ್ರ ಎರಡು ವಾರಾಗ್ತಾ ಬಂತು ಅಕಸ್ಮಾತ್...’ ಅಂತ ದಗ್ಗೀರಜ್ಜನಿಗಾಗಿ ಕಾತರಿಸುತ್ತಿತ್ತು. ಹಂಗನಿಸಿದ್ದೇ ತಡ ಪುಟ್ಟಾಲಯ್ಯ ಎದ್ದವನೇ ಹಾಕಿದ್ದ ಟೋಪಿ ಸ್ವೆಟರ್‌ಗಳನ್ನು ಬಿಚ್ಚಿ ಹೆಗಲಿಗಾಕಿಕೊಂಡು ಸೀದಾ ದಗ್ಗೀರಜ್ಜನ ಮನೆಯ ದಾರಿ ಹಿಡಿದ.

ಪುಟ್ಟ ಪಟ್ಟಣದ ಹೊರವಲಯದಲ್ಲಿ ಆ ಪಟ್ಟಣವನ್ನು ನಡೂ ಮಧ್ಯಕ್ಕೆ ಸೀಳಿದಂತೆ ಹಾದುಹೋಗಿದ್ದ ಹೆದ್ದಾರಿಗೆ ಕಲ್ಲೆಸೆಯುವ ದೂರದಲ್ಲಿದ್ದ ಆ ಹೊಸಾ ಬಡಾವಣೆಯ ಖಾಲಿ ಸೈಟುಗಳಲ್ಲಿ ಅಲ್ಲಲ್ಲಿ ಇನ್ನೂ ಇದ್ದ ಅಷ್ಟು ನಿಗಾ ಮಾಡದಿದ್ದರೂ ಇನ್ನೂ ನೂರಾರು ವರ್ಷ ಬದುಕುವಷ್ಟು ಗಟ್ಟಿಮುಟ್ಟಾಗಿದ್ದ ಗೊನೆಗಳ ಮೇಲೆ ಗೊನೆಗಳು ಇಡುಕಿರಿದಿದ್ದ ತೆಂಗಿನ ಮರಗಳನ್ನು ನೋಡುತ್ತಲೇ ತುಂಬಾ ಒಳ್ಳೆಯ ತೋಟವೊಂದನ್ನು ಆ ಬಡಾವಣೆ ನುಂಗಾಕಿಕೊಂಡಿದೆ ಅನ್ನೋದು ರೈತಾಪಿ ಬದುಕಿನ ಯಾವ ಜೀವಕ್ಕೇ ಆಗಲಿ ಪಿಚ್ಚನಿಸಿ ಮರುಗದೇ ಇರುತ್ತಿರಲಿಲ್ಲ. ಆದರದೇ ಬಡಾವಣೆಯಲ್ಲಿ ಅದೇ ತಾನೆ ಮಾಡಿದ್ದ ರಸ್ತೆಗಳ ಆಜುಬಾಜಿನಲ್ಲಿ ಅವೇನ್ ಮಾಡ್ತವೆ ಅತ್ಲಾಗಿ ಇದ್ಕಂಡು ಹೋಗ್ಲಿ ಅನ್ನುವ ಉದಾಸೀನದಿಂದಲೋ ಅಥವಾ ಅವುಗಳನ್ನೆಲ್ಲಾ ಕೀಳಿಸೋಕೆ ಕಾಸು ಕೈಬಿಡಬೇಕಾಗುತ್ತೆ ಅನ್ನುವ ಜುಗ್ಗಾಟದಿಂದಲೋ ಅಂತೂ ಬಡಾವಣೆ ಮಾಡಿದವರಿಂದ ಲಕ್ಕೆ,ತಂಗಡೆ,ತುಂಬೆ,ರೋಜಾಲ ಮುಂತಾದ ಅವಾಗೇ ಹುಟ್ಟಿದ್ದ ಗಿಡಗಳು ಬಚಾವಾಗಿದ್ದವು. ಅಂತೆಯೇ ಅವರು ನೆಟ್ಟಿದ್ದ ಹಲವು ಬಗೆಯ ಗಿಡಗಳ ನಡುವೆ ಅವುಗಳೂ ಹುಲುಸಾಗಿದ್ದವು. ಅಲ್ಲೊಂದು ಇಲ್ಲೊಂದು ತಲೆ ಎತ್ತುತ್ತಿದ್ದ ಹೊಸ ಮನೆಗಳು ಅದುವರೆಗೂ ಇದ್ದ ಅದರ ಏಕಾಂತಕ್ಕೆ ಕಲ್ಲಾಕುತ್ತಿರುವಂತೆ ತುಂಬಾ ದಿನದಿಂದ ಅಲ್ಲಿ ಬೆಳಗು ಬೈಗುಗಳಲ್ಲಿ ವಾಕ್ ಮಾಡುತ್ತಿದ್ದವರಿಗೆ ಇತ್ತೀಚೆಗೆ ಪುಟ್ಟಾಲಯ್ಯನಿಗೆ ಅನಿಸಿದಂತೆ ಅನಿಸತೊಡಗಿತ್ತು. ಸಾಲದ್ದಕ್ಕೆ ಅಗಾಇಗಾ ಅನ್ನುವುದರೊಳಗೆ ಮನೆಗಳಾಗಿಬಿಡುವುದರಿಂದ ಅವರುಗಳಲ್ಲಿ ಕೆಲವರಾಗಲೇ ಮತ್ತೊಂದು ಅಂಥದ್ದೇ ಜಾಗದ ತಲಾಶ್‍ನಲ್ಲಿದ್ದರು. ಎರಡು ವರ್ಷಗಳ ಹಿಂದೆ ಪುಟ್ಟಾಲಯ್ಯ ಅರಣ್ಯ ಇಲಾಖೆಯಲ್ಲಿ ವಲಯ ಸಂರಕ್ಷಣಾ ಅಧಿಕಾರಿಯಾಗಿ ನಿವೃತ್ತನಾದ ಲಾಗಾಯ್ತಿನಿಂದಲೂ ತನ್ನ ಮನೆಯಿಂದ ಸುಮಾರು ಮೂರು ಮೈಲಿಗಳಷ್ಟು ನಡಕಂಡು ಬಂದು ಒಂದು ಸುತ್ತಿಗೆ ಸುಮಾರು ಒಂದೂವರೆ ಮೈಲಿಯಷ್ಟು ಬಳಸಾಗುತ್ತಿದ್ದ ಆ ಬಡಾವಣೆಯನ್ನು ಎರಡು ಸುತ್ತು ಹಾಕಿ ಅಲ್ಲಿನ ಪಾರ್ಕಿನಲ್ಲಿ ಒಂದಷ್ಟತ್ತು ಕೂತು ತಿರುಗಿ ಮನೆಗೆ ಹೋಗುವಾಗ ಹೊತ್ತು ಮಾರುದ್ದ ಬಂದು ಬಿಡುತ್ತಿತ್ತು.

ಬೆಳಗ್ಗೆ ಆಟೊತ್ತಿಗೇ ಕೈಯ್ಯಲ್ಲೊಂದು ಬಟ್ಟೆಯ ಬ್ಯಾಗನ್ನಿಡಿದು ಮಾರಿಗೆ ಬನಿಯನ್ ಅದರ ಮೇಲೊಂದು ಕಪ್ಪು ಪಟಾಪಟಿ ಸ್ವೆಟರ್ ತಲೆಗೊಂದು ಗಿಣಿ ಬಣ್ಣದ ಟೋಪಿ ಬಿಳಿ ದೊಗಳೆ ಪೈಜಾಮಿನ ಆರಡಿಗಿಂತ ತುಸು ಎತ್ತರಕ್ಕಿದ್ದ ದಗ್ಗೀರಜ್ಜ ಅಲ್ಲಿ ಬರುತ್ತಿದ್ದ ಎಲ್ಲರಿಗೂ ಪರಿಚಿತ. ಎದುರು ಯಾರು ಸಿಕ್ಕರೂ ನಿಂತು ಮಾತಾಡಿಸುತ್ತಿದ್ದ ಕಷ್ಟಸುಖ ವಿಚಾರಿಸುತ್ತಿದ್ದ ದಗ್ಗೀರಜ್ಜ ತುಂಬಾ ಜನಕ್ಕೆ ಇಷ್ಟವಾದರೆ ಕೆಲವರು ಮಾತ್ರ `ಅಜ್ಜ ಬೆಳ್ ಬೆಳಿಗ್ಗೇನೆ ತಲೆ ತಿನ್ನುತ್ತೆ’ ಅಂತ ಅಜ್ಜನ ದಾರಿಯನ್ನು ತಪ್ಪಿಸಿಕೊಂಡು ಓಡಾಡುತ್ತಿದ್ದರು. ಅಂಥವರನ್ನು ಕಂಡರೆ ದೂರದಿಂದಲೇ ದಗ್ಗೀರಜ್ಜನೇ ಮಾತಾಡಿಸುತ್ತಿದ್ದುದೂ ಉಂಟು. ದಗ್ಗೀರಜ್ಜನ ಕೈಯ್ಯಲ್ಲಿರುತ್ತಿದ್ದ ಬ್ಯಾಗು ತುಂಬುವುದರೊಳಗೆ ಅಜ್ಜ ಕನಿಷ್ಟ ಇಡೀ ಲೇಔಟನ್ನು ಒಂದು ಸುತ್ತು ಹಾಕಬೇಕಾಗಿತ್ತು. ದಗ್ಗೀರಜ್ಜನಿಗೆ ಇಂಥದೇ ಹೂ ಬೇಕು ಇಂಥದೇ ಪತ್ರೆ ಬೇಕು ಅಂತೇನೂ ಇರಲಿಲ್ಲ. ಹಂಗಾಗಿ ಲಕ್ಕೆ ಚಿಗುರು ಹೊಂಗೆ ಚಿಗುರು ಬೇವಿನ ಕುಡಿ ತಂಗಡೆ ಹೂ ತುಂಬೆ ಹೂ ಹೀಗೆ ಸಿಕ್ಕಸಿಕ್ಕವುಗಳೇಲ್ಲಾ ಅಜ್ಜನ ಬ್ಯಾಗು ಸೇರುತ್ತಿದ್ದವು. `ಇದೇನಜ್ಜ ಇದು ಇತ್ಲಾಗೆ ಪತ್ರೆಗೆ ಪತ್ರೆ ಅಲ್ಲ ಅತ್ಲಾಗಿ ಹೂವಿಗೆ ಹೂವಲ್ಲ,ಎಲ್ಲಾದ್ನೂ ಕಿತ್ಕಂತೀಯ ಒಂದ್ಕೇ ತುಂಬ್ಕೆಂತೀಯಾ,’ಅಂತ ಒಮ್ಮೆ ಪುಟ್ಟಾಲಯ್ಯ ಕೇಳಿಯೂ ಇದ್ದ. `ಯಾರಪ್ಪ ಹೇಳಿದ್ದು ನಾನು ಪತ್ರೆ ಎತ್ತುತಾ ಇದೀನಿ ಅಂತ?’ದಗ್ಗೀರಜ್ಜ ಮರು ಪ್ರಶ್ನಿಸಿದ್ದ. `ಹಂಗಾರೆ ಏನಿದು?ಯಾಕೆ ಇದೆಲ್ಲಾ?’ಅಂತ ಕೇಳಿದ್ದ ಅಜ್ಜನ ಕೈಲಿದ್ದಬ್ಯಾಗನ್ನು ತೋರಿಸುತ್ತಾ. ದಗ್ಗೀರಜ್ಜ ಸುಮ್ಮನೆ ನಕ್ಕಿದ್ದ. ಅಜ್ಜ ಇವುಗಳನ್ನೆಲ್ಲಾ ಎತ್ತಿಕೊಂಡು ಹೋಗುವುದು ಪೂಜೆಗಲ್ಲಾ ಅಂತ ಪುಟ್ಟಾಲಯ್ಯನಿಗೆ ಮುಂದೊಂದು ದಿನ ದಗ್ಗೀರಜ್ಜನ ಮನೆಗೆ ಹೋದ ಮೇಲೆ ಗೊತ್ತಾಗಿತ್ತು. ದನಗಳಿಗೆ ಮಾತ್ರ ಮಗ್ಗಲುಸೊಪ್ಪು ಹಾಕೋದು ಗೊತ್ತಿದ್ದ ಪುಟ್ಟಾಲಯ್ಯನಿಗೆ ಇದು ವಿಚಿತ್ರದಂತೆ ಕಂಡಿತ್ತು.

ಆ ಬಡಾವಣೆಯಿಂದ ಒಂದತ್ತು ನಿಮಿಷ ಪೂರ್ವಾಭಿಮುಖವಾಗಿ ನಡೆದರೆ ತಲೆ ಎತ್ತಬಹುದಾದ ಮತ್ತೊಂದು ಬಡಾವಣೆಯ ತಯಾರಿಯ ಕುರುಹಾಗಿ ಪಾಳು ಬಿದ್ದಿರುವ ತೋಟಗಳು ಅವುಗಳ ನಡುವೆ ಸಾಲಾಗಿ ಹಳದಿ ಬಣ್ಣ ಬಳಿದು ನೆಟ್ಟಿರುವ ಮೊಳದುದ್ದದ ಕಲ್ಲುಗಳು ಹಾಗೇ ಮುಂದುವರೆದರೆ ಪಾಳು ಬಿದ್ದಿರುವ ಹೆಂಚಿನ ಮನೆ ಅದರ ಪಕ್ಕಕ್ಕೆ ತುಂಬಾ ಹಳೆಯ ಕಲ್ಲಿನಿಂದ ಕಟ್ಟಿರುವ ಆರೇಳು ಆಳುದ್ದದ ನೀರಿನ ಬಾವಿ ನೀರು ಸೇದುವ ಸಲುವಾಗಿ ಕಟ್ಟಿರುವ ಎರಡು ಮಾಲಿದ ಉದ್ದನೆಯ ಕಲ್ಲಿನ ಕಂಬಗಳು ಅವುಗಳನ್ನು ತೂತಾಕಿ ಪೋಣಿಸಿರುವ ತುಕ್ಕಿಡಿದಿರುವ ಕಬ್ಬಿಣದ ಸಲಾಕೆ ಅದರ ನಡುವಿಗೊಂದು ಕಬ್ಬಣದ ರಾಟೆ ಗೋಚರಿಸುತ್ತವೆ. ತಟಾಯ್ದು ಒಂದತ್ತು ಮಾರು ನಡೆದರೆ ಹಳ್ಳವೊಂದು ಎದುರಾಗುತ್ತದೆ. ಒಂದು ಕಾಲಕ್ಕೆ ಅದು ಬಲು ದೊಡ್ಡ ಹಳ್ಳವಾಗಿತ್ತು ಅನ್ನುದನ್ನು ಅದರ ಅಗಲವೇ ಹೇಳುತ್ತೆ. ಅದೀಗ ಹೂಳು ತುಂಬಿಕೊಂಡು ತಟ್ಟೆಯಂತೆ ಸಪಾಟಾಗಿದೆ. ಅದರ ಇಕ್ಕೆಲಗಳಲ್ಲೂ ಎತ್ತರಕ್ಕೆ ಬೆಳೆದಿರುವ ಕಡ್ಡಿಕಳ್ಳಿ ಕತ್ತಾಳೆ ಗಿಡಗಳ ನಡುವೆ ಕಾಣುವ ಪುಟ್ಟ ಕಿಂಡಿಯಂಥ ಕಾಲ್ದಾರಿಯಲ್ಲಿ ನುಸುಳಿದರೆ ಕಾಣುವುದೇ ದಗ್ಗೀರಜ್ಜನ ಕಪ್ಪೆಂಚಿನ ಮನೆ. ಮನೆಯ ಹಿಂಭಾಗಕ್ಕೆ ಕಳ್ಳಿಬೇಲಿಯಿಂದ ಜತನಮಾಡಲ್ಪಟ್ಟ ಕೈ ತೋಟ. ಅದರೊಳಗೆ ಎರಡು ಮುದಿ ಮಾವಿನ ಮರಗಳು ಅಷ್ಟೇನೂ ಹಳೆಯದಲ್ಲದ ಹಲಸಿನ ಮರ. ಅದರಾಚೆಗೆ ಸುಮಾರು ಅರ್ಧ ಎಕರೆಯಷ್ಟು ಹೊಲ. ಬೇಲಿಯಿಲ್ಲದ ಅದನ್ನು ದಾಟಿದರೆ ಕೊಂಚ ದೂರದಲ್ಲಿ ಒಂದು ಎತ್ತಿನ ಗಾಡಿಯ ಜಾಡು.

ಪುಟ್ಟಾಲಯ್ಯ ದಗ್ಗೀರಜ್ಜನ ಮನೆಯ ಹತ್ತಿರ ಹೋದಾಗ ಪಡಸಾಲೆಯ ಫ್ರೇಮ್‍ಸೆಟ್ಟಿನ ಬಾಗಿಲಿಗೆ ಬೀಗ ಹಾಕಲಾಗಿತ್ತು. ಮನೆಯ ಮುಂದೆ ಹದ್ದಿದ್ದ ಉದ್ದನೆಯ ಚಪ್ಪಡಿ ಕಲ್ಲುಗಳ ಮೇಲೆ ಬಿದ್ದಿದ್ದ ಕಸ ದಗ್ಗೀರಜ್ಜ ಮನೆಯನ್ನು ಬಿಟ್ಟು ಹಲವು ದಿನಗಳಾಗಿವೆ ಎಂಬುದನ್ನು ಒತ್ತಿ ಹೇಳುತ್ತಿತ್ತು. ಸಾಲದ್ದಕ್ಕೆ ಮನೆಯ ಎದುರಿನ ಬಾಳೆಯ ಗಿಡದ ಪಕ್ಕದಲ್ಲಿದ್ದ ಹತ್ತಿ ಗಿಡದ ಗೆಲ್ಲೊಂದರಲ್ಲಿ ದಿನವೂ ದಗ್ಗೀರಜ್ಜನ ಕೈಲಿರುತ್ತಿದ್ದ ಬ್ಯಾಗು ನೇತಾಡುತ್ತಿತ್ತು. ಹತ್ತಿ ಗಿಡದಲ್ಲಿ ಬಲಿತು ಬಿರಿದಿದ್ದ ಕಾಯಿಗಳಲ್ಲಿ ಹತ್ತಿ ಇಣುಕಾಕುತ್ತಿತ್ತು. ಜಗಲಿಯಲ್ಲಿ ಬರೆದಿದ್ದ ಚೌಕಾಭಾರ ಹಾಗೂ ಆನೆಯಾಟದ ಕಾಯಿಗಳು ಅಲ್ಲೇ ಜಗಲಿಯ ದಿಂಡಿನಲ್ಲಿದ್ದ ಪುಟಾಣಿ ಮಣ್ಣಿನ ಮಿಳ್ಳೆಯಲ್ಲಿ ಕಾಣುತ್ತಿದ್ದವು. ಜಗಲಿಯ ಗೋಡೆಗೆ ಅಂಟಿಕೊಂಡಂತೆ ಅಂಚಿಕಡ್ಡಿಯ ಬರಲೊಂದು ಅಸ್ತವ್ಯಸ್ತವಾಗಿ ಬಿದ್ದಿತ್ತು. ಪುಟ್ಟಾಲಯ್ಯ ಫ್ರೇಮ್‍ಸೆಟ್ಟಿನೊಳಗಿಂದ ಪಡಸಾಲೆಯತ್ತ ಇಣುಕಿದ. ಅಲ್ಲಿ ಹಕ್ಕಿಗಳಿಗೆ ಹಾಕಿದ್ದ ಮಗ್ಗುಲುಸೊಪ್ಪು ಒಣಗಿ ಗರಿಗರಿಯಾಗಿತ್ತು. ಹಕ್ಕಿಗಳಿಗಾಗಿ ಮಡಕೆಯ ಮುಚ್ಚಳಗಳಲ್ಲಿ ಇಟ್ಟಿದ್ದ ನೀರು ಇಂಗಿ ಹೋಗಿತ್ತು. ಥರಾವರಿ ಕಾಳುಗಳು ಅದರಗಲಕೂ ಅಲ್ಲಲ್ಲಿ ಇಟ್ಟಾಡಿದ್ದವು. ದಗ್ಗೀರಜ್ಜನ ಪೈಜಾಮ ಸ್ವೆಟರ್‍ಗಳು ಗೂಟವೊಂದರಲ್ಲಿ ನೇತಾಡುತ್ತಿದ್ದವು. ಒಳಗಿನ ಅಟ್ಟದಿಂದಲೋ ನಡುಮನೆಯಿಂದಲೋ ಇಲಿಯ ಹಿಂಡುಗಳು ಓಡಾಡುತ್ತಿರುವ ಸದ್ದು ಕೇಳಿಸುತ್ತಿತ್ತು. ಇದನ್ನೆಲ್ಲಾ ಗಮನಿಸುತ್ತಾ ಜಗಲಿಯಲ್ಲಿ ಕೂತ ಪುಟ್ಟಾಲಯ್ಯನಿಗೆ ಎಂಥದೋ ಅನುಮಾನ ಶುರುವಾಯಿತು. ತನಗೆ ಪರಿಚಯವಾದಾಗಿನಿಂದಲೂ ಯಾವ ಕಾರಣಕ್ಕೂ ಅಜ್ಜ ಇಷ್ಟೊಂದು ದಿನ ಮನೆಯನ್ನು ಬಿಟ್ಟು ಹೋದವನಲ್ಲ ಸಾಲದ್ದಕ್ಕೆ ಸದಾ ಹಕ್ಕಿಗಳ ಚಿಲಿಪಿಲಿಯೊಂದಿಗೆ ಜೀವಂತವಾಗಿರುತ್ತಿದ್ದ ವಾತಾವರಣ ಜೀವ ಕಳಕಂಡಂತಿದೆ. ಅಜ್ಜನ ಹಕ್ಕಿಗಳಲ್ಲಿ ಒಂದಾದರೂ ಇಲ್ಲದೇ ಇರುವುದು ಪುಟ್ಟಾಲಯ್ಯನ ಅನುಮಾನಕ್ಕೆ ಮತ್ತಷ್ಟು ಇಂಬು ಕೊಡುತ್ತಿತ್ತು. ಯಾರಾರೂ ನೆಂಟರ ಮನೆಗೆ ಹೋಗಿರಬಹುದು ಅಂದರೆ ಯಾವತ್ತೂ ಯಾವ ನೆಂಟರನ್ನೂ ಹಚ್ಚಿಕೊಂಡಿಲ್ಲ ಅಂತ ಖುದ್ದು ದಗ್ಗೀರಜ್ಜನೇ ಹೇಳುತ್ತಿದ್ದ. ಇನ್ನು ಇದ್ದ ಬೆರಳೆಣಿಕೆಯಷ್ಟು ಗೆಳೆಯರಲ್ಲಿ ದಗ್ಗೀರಜ್ಜ ತಾನಾಗಿಯೇ ಯಾರನ್ನೂ ಹುಡುಕಿಕೊಂಡು ಹೋಗುತ್ತಿರಲಿಲ್ಲ. ಸುಮಾರು ಸಲ ತನ್ನ ಮನೆಗೆ ಬರುವಂತೆ ಕರೆದಾಗಲೆಲ್ಲಾ ಆಗ ಈಗ ಅಂತ ನೆಪ ಹೇಳಿದ್ದು ಬಿಟ್ಟರೆ ಒಮ್ಮೆಯೂ ಮನಸ್ಸು ಮಾಡದಿರುವುದನ್ನು ಕಂಡು ಕರೆಯುವುದನ್ನೇ ಕೈಬಿಟ್ಟಿದ್ದ ಪುಟ್ಟಾಲಯ್ಯ. ಬೇಕೆನಿಸಿದಾಗಲೆಲ್ಲಾ ಪುಟ್ಟಾಲಯ್ಯನೇ ಅತ್ತ ಹೋಗುತ್ತಿದ್ದ. ಜಗಲಿಯಲ್ಲಿ ಕೂತ ಪುಟ್ಟಾಲಯ್ಯ ಒಂಥರಾ ಆತಂಕಕ್ಕೊಳಗಾದ.

ಪುಟ್ಟಾಲಯ್ಯ ಮನೆ ತಲುಪಿದಾಗ ಗಂಟೆ ಎಂಟಾಗಿತ್ತು. ಆಟೊತ್ತಿಗೇ ಬೆಳಗಿನ ಬಿಸಿಲು ತದುಕತೊಡಗಿತ್ತು. `ನಂಗೊತ್ತು ನೀನು ಆ ಅಜ್ಜನ ಮಂತಾಕೆ ವೋಗಿರ್ತೀಯಾ ಅಂತಾವ,ಅದೇನಿರುತ್ತೋ ಏನ್ ಕತ್ಯೋ ದಿಸಾಲೂ ಮಾತಾಡಾಕೆ’, ಹೆಂಡತಿ ಹುಚ್ಚೀರಮ್ಮ ಗಂಡ ಬಂದ ಸುಳಿವು ಸಿಕ್ಕ ಕೂಡಲೇ ತನ್ನಷ್ಟಕ್ಕೆ ತಾನು ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಲೇ ಮಾತೊಗೆದಳು.`ಬಿರೀನಾ ಬಂದ್ಬುಟ್ಟು ಇಲ್ಲಿ ಕಡ್ದು ಕಟ್ಟೆ ಹಾಕಾಂಥದ್ದು ಏನುತ್ತೋ ಕಾಣೆ?’ ಪುಟ್ಟಾಲಯ್ಯನೂ ಅಷ್ಟೇ ಬಿರುವಿನಲ್ಲಿ ಮಾರುತ್ತರಿಸಿ ಸೀದಾ ಬಚ್ಚಲು ಮನೆಗೆ ನಡೆದ. `ಎಲ್ಡು ದಿಸಾತು ಮಕ್ಳು ಜೊತೇಲಿ ಮಾತಾಡಿ, ಅವ್ನೂ ಯಾಕೋ ಫೋನೇ ಮಾಡಿಲ್ಲ, ನಿಂಗೆ ಅದ್ರು ಮ್ಯಾಗೆ ದ್ಯಾಸ್ವೇ ಇಲ್ಲ ತಗಾ’ ಹುಚ್ಚೀರಮ್ಮ ಮತ್ತೆ ಅಡಿಗೆ ಮನೆಯಿಂದಲೇ ಗೊಣಗುಟ್ಟಿದಳು. ಹುಚ್ಚೀರಮ್ಮ ಇತ್ತೀಚೆಗೆ ಮಗನ ಬದಲು ಮಕ್ಕಳು ಅನ್ನುತ್ತಿದ್ದದ್ದು ಪುಟ್ಟಾಲಯ್ಯನಿಗೆ ಸಮಾಧಾನದ ಸಂಗತಿಯಾಗಿತ್ತು. ಆದರೂ ಬೇಕಂತಲೇ `ಔವ್ದವ್ದು ಅವ್ನಿನ್ನೂ ಎಳೆ ಕಿಸ್ಲೆ,’ ಪುಟ್ಟಾಲಯ್ಯನೂ ಬಚ್ಚಲು ಮನೆಯಿಂದಲೇ ಗೊಣಗುಟ್ಟಿದ. `ಅಯ್ಯೋ ನಿನ್ ಮರೆವಿಗಿಷ್ಟು ನಾನು ಅಂದುದ್ದು ಮಕ್ಳು ಕೈಲಿ ಮಾತಾಡ್ಲುಲ್ಲ ಅಂತಾವ’, ಕೇಳಿಸಿಕೊಂಡರೂ ಹುಚ್ಚೀರಮ್ಮನ ಮಾತುಗಳಿಗೆ ಉತ್ತರಿಸದೆ ಬಚ್ಚಲು ಮನೆಯಿಂದ ಸೀದಾ ದೇವರ ಕೋಣೆಗೆ ನಡೆದ ಪುಟ್ಟಾಲಯ್ಯ. ಅವನನ್ನು ಕಾಣುತ್ತಲೇ ಸಾಕು ಬೆಕ್ಕುಗಳೆರಡೂ ಮೀಯ್ಗುಡುತ್ತಾ ದೇವರಕೋಣೆಯ ಬಾಗಿಲಲ್ಲಿ ಕುಳಿತವು.

ಪುಟ್ಟಾಲಯ್ಯ ಹಾಗೂ ಹುಚ್ಚೀರಮ್ಮನಿಗೆ ಇದ್ದೊಬ್ಬ ಮಗ ರೂಪೇಶ ಎಂಜಿನಿಯರಿಂಗ್ ಮುಗಿಸುತ್ತಲೇ ಅಮೇರಿಕಾ ಸೇರಿ ಅದಾಗಲೇ ಹದಿನೈದು ವರ್ಷಗಳಾಗಿದ್ದವು. ಮೊದಮೊದಲು ಏನಿಲ್ಲ ಅಂದರೂ ವರ್ಷಕ್ಕೊಮ್ಮೆಯಾದರೂ ಬರುತ್ತಿದ್ದ ಮಗ ತಿಂಗಳುಗಟ್ಟಲೆ ಇದ್ದು ಹೋಗುತ್ತಿದ್ದ. ಮದುವೆಯಾದ ನಂತರ ಎರಡು ವರ್ಷಕ್ಕೋ ಮೂರು ವರ್ಷಕ್ಕೋ ಬರುತ್ತಿದ್ದವನು ಅಬ್ಬಬ್ಬಾ ಅಂದರೆ ಎಂಟತ್ತು ದಿನ ಇರುವುದೇ ದುಸ್ತರವಾಗಿತ್ತು. ಹುಚ್ಚೀರಮ್ಮ ಇದಕ್ಕೆ ತೆಗೆಯುತ್ತಿದ್ದ ತಕರಾರು ಮಗನ ಉತ್ತರ ಎರಡನ್ನೂ ನಿರ್ಲಿಪ್ತ ಭಾವದಿಂದ ಆಲಿಸುತ್ತಿದ್ದ ಪುಟ್ಟಾಲಯ್ಯ `ಲೋಕಾನೇ ಇಂಗೆ ಕಣಮ್ಮಿ ಯಾಕೆ ಆನಾಡಿ ಕೊರುಗ್ತೀಯಾಂತೀನಿ? ಬಂದಾಗ ಬಂದೇನಪ್ಪ ಅನ್ನು ಹೋಗ್ತೀನಿ ಅಂದಾಗ ಹೋಗ್ಬಾರಪ್ಪ ಅನ್ನು ಅಷ್ಟೇಯಾ ಮುಗೀತು. ಇನ್ನೇನ್ ತುಂಬೋಗಾಕೆ ಬಂದಿರೋ ದೀಪಾನಾ ಉರ್ಬೀ ಉರ್ಬೀ ಹತ್ಸಾಕೆ ಯಾಕ್ ನೋಡ್ತೀಯಾ? ಅಷ್ಟುಕ್ಕೂ ಒತ್ತೀ ಒತ್ತಿ ಹಣ್ಮಾಡಾಕಾಗುತ್ತೇನಮ್ಮಿ?’ಅಂದುಬಿಡುತ್ತಿದ್ದ ಮಾತುಗಳು ಹುಚ್ಚೀರಮ್ಮನಿಗೆ ಒಗಟಿನಂತೆ ಕಂಡು ಮುಸುಗುಡುತ್ತಾ ಸಂಕಟವನ್ನೆಲ್ಲಾ ನುಂಗಿಕೊಳ್ಳುತ್ತಿದ್ದಳು. ಬರಬರುತ್ತಾ ಅಂಥದ್ದೊಂದು ಬದುಕಿಗೆ ಒಗ್ಗಿಕೊಂಡಿದ್ದ ಹುಚ್ಚೀರವ್ವ ವಾರಕ್ಕೊಂದೆರಡು ಬಾರಿ ಮಗ ಸೊಸೆ ಮೊಮ್ಮಕ್ಕಳೊಂದಿಗೆ ವಿಡಿಯೋ ಕಾಲಿನಲ್ಲಿ ಮಾತಾಡಿ ಸಂತೃಪ್ತಿಗೊಳ್ಳುವ ಮಟ್ಟಿಗೆ ಸುಧಾರಿಸಿದ್ದಳು.

ನಿವೃತ್ತಿಯಾದ ಮೇಲೆ ಬಂದ ಹಣದಲ್ಲಿ ಒಂದು ಮನೆ ಕಟ್ಟಿಕೊಂಡು ಹಳ್ಳಿಯಲ್ಲಿದ್ದ ಜಮೀನನ್ನು ಆದಷ್ಟು ಮಟ್ಟಿಗೆ ಆಬದ್ದು ಮಾಡಿಕೊಂಡು ನಿವೃತ್ತಿ ಬದುಕಿನ ಲಯಕ್ಕೆ ಒಗ್ಗಿಕೊಳ್ಳತೊಡಗಿದ್ದ ಪುಟ್ಟಾಲಯ್ಯನನ್ನು ದಗ್ಗೀರಜ್ಜನ ಒಡನಾಟದಿಂದ ಹಿಗ್ಗಿದಂತಿದ್ದ. ಮಗ ಚೆನ್ನಾಗಿ ಓದಿ ಬೆಂಗಳೂರಿನಲ್ಲಿ ಒಳ್ಳೆಯ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿ ಕೈ ತುಂಬಾ ಸಂಬಳಗಾರನಾದಾಗ ಪುಟ್ಟಾಲಯ್ಯ ಮತ್ತು ಹುಚ್ಚೀರಮ್ಮ ಪಟ್ಟ ಖುಷಿ ಅಷ್ಟಿಷ್ಟಲ್ಲ. ಆ ಖುಷಿಯಲ್ಲೇ ಮಗ ಒಪ್ಪಿದ ಅವನ ಜೊತೆಗೆ ಓದುತ್ತಿದ್ದ ಹುಡುಗಿಯನ್ನೇ ಮದುವೆಯನ್ನೂ ಮಾಡಿ ಇಬ್ಬರು ಮೊಮ್ಮಕ್ಕಳೂ ಹುಟ್ಟಿದ ಮೇಲೆ ತಾವ್ಯಾಕೆ ಇಬ್ಬರೇ ಇಲ್ಲಿರಲಿ ಅಲ್ಲೇ ಜೊತೆಗಿದ್ದರೆ ಮೊಮ್ಮಕ್ಕಳೊಂದಿಗೆ ಮಿಕ್ಕ ಬದುಕನ್ನು ಸವೆಸಬಹುದೆಂಬ ತೀರ್ಮಾನಕ್ಕೂ ಬಂದಿದ್ದರು. ಆದರೆ ಅಷ್ಟರಲ್ಲಿ ರೂಪೇಶನಿಗೆ ಕಂಪನಿಯ ಕಡೆಯಿಂದ ಅಮೇರಿಕಾಕ್ಕೆ ಹೋಗುವ ಅವಕಾಶ ಸಿಕ್ಕಿ ಹೆಂಡತಿ ಮಕ್ಕಳನ್ನು ಅಪ್ಪ ಅಮ್ಮನ ಬಳಿಗೆ ಬಿಟ್ಟು ಅತ್ತ ಹಾರಿದ್ದ. ಅಲ್ಲಿಗೆ ಹೋದವನು ಕೆಲಸವನ್ನು ಮಾಡುತ್ತಲೇ ಎಂ.ಎಸ್. ಮಾಡಿ ಅಲ್ಲೇ ಇನ್ನೂ ಹೆಚ್ಚಿಗೆ ಸಂಬಳ ಸಿಗುವ ಅಮೇರಿಕಾದ ಕಂಪನಿಯೊಂದಕ್ಕೆ ಸೇರಿಕೊಂಡಿದ್ದ. ವರ್ಷೋಂಭತ್ತು ಅನ್ನುವುದರೊಳಗೆ ಹೆಂಡತಿ ಮಕ್ಕಳನ್ನೂ ಅಲ್ಲಿಗೇ ಕರೆಸಿಕೊಂಡಿದ್ದ. ಹೆಂಡತಿಗೂ ಅಲ್ಲೊಂದು ಕೆಲಸ ಸಿಕ್ಕಿ ಗ್ರೀನ್ ಕಾರ್ಡನ್ನೂ ಗಿಟ್ಟಿಸಿಕೊಂಡಿದ್ದ. ಯಾವಾಗ ಮಗ ತಿರುಗಿ ಬರದೆ ಅಲ್ಲೇ ಖಾಯಮ್ಮಾಗಿ ನೆಲೆ ನಿಲ್ಲುತ್ತಾನೆ ಅನ್ನೋದು ಗೊತ್ತಾಯ್ತೋ ಹುಚ್ಚೀರಮ್ಮ ಅತ್ತೂ ಕರೆದು ಮಗನನ್ನು ಒಪ್ಪಿಸಲು ನೋಡಿದ್ದಳು. ಅದೇ ನೆಪವಾಗಿ ಒಂದಷ್ಟು ದಿನ ಹಾಸಿಗೆಯನ್ನೂ ಹಿಡಿದಿದ್ದಳು. ತಾನೆಷ್ಟೇ ಗೋಗರೆದರೂ ಮಗ ತನ್ನ ಮಾತಿಗೆ ಕ್ಯಾರೆ ಅನ್ನುತ್ತಿಲ್ಲ ಅಂತ ಗೊತ್ತಾಗುತ್ತಲೇ ಬದುಕಿನ ಮತ್ತೊಂದು ಮಗ್ಗಲಿನ ವಾಸ್ತವಕ್ಕೆ ಮುಖ ಮಾಡಿದ್ದಳು. ಆವಾಗಿನಿಂದ ಯಾರಾದರೂ ಒಬ್ಬಳೇ ಮಗ ಅಥವಾ ಮಗಳಿರುವವರನ್ನು ಕಂಡರೆ `ಒಂದ್ ಕುಡಿ ಕುಡ್ಯಲ್ಲ, ಒಂದ್ ಕಣ್ಣು ಕಣ್ಣಲ್ಲ,ಎಂಗಾರ ಆಗ್ಲಿ ಇನ್ನೊಂದ್ ಕುಡಿ ಮಾಡ್ಕಳ್ರವ್ವ’ ಅಂತ ಬುದ್ಧಿ ಮಾತು ಹೇಳುತ್ತಿದ್ದಳು. ಪುಟ್ಟಾಲಯ್ಯ ಇಂಥದ್ದನ್ನಾಗಲೇ ಅವರಿವರ ಬದುಕಿನಲ್ಲಿ ಕಂಡದ್ದರಿಂದ, `ನೋಡಮ್ಮಿ ಈ ಬದ್ಕು ಅನ್ನೋದು ನೀರಿನ್ ಮೇಲಿನ್ ಹೆಜ್ಜಿದ್ದಂಗೆ, ಕಾಲ ಅನ್ನೋದು ಹೋಗೋಗ್ತಲೇ ಅದುನ್ನೂ ಬಿಡ್ದಂಗೆ ಅಳ್ಸಾಕ್ಬುಡುತ್ತೆ, ಅಂಥಾದ್ರಲ್ಲಿ...’ ಅಂತ ಆಗಾಗ ಹುಚ್ಚೀರಮ್ಮನಿಗೆ ಹೇಳುವ ನೆಪದಲ್ಲಿ ತನ್ನನ್ನೂ ಸಂತೈಸಿಕೊಳ್ಳುತ್ತಿದ್ದ. ಇಂಥದ್ದೊಂದು ಆಲೋಚನೆಗೆ ನಿರಾಳತೆಗೆ ದಗ್ಗೀರಜ್ಜನೇ ಕಾರಣ ಅಂತ ಪುಟ್ಟಾಲಯ್ಯನಿಗೆ ಆಗಾಗ ಅನಿಸುತ್ತಿತ್ತು. ಆಗೆಲ್ಲಾ ದಗ್ಗೀರಜ್ಜನ ಬಗ್ಗೆ ಅಭಿಮಾನ ಉಕ್ಕುತ್ತಿತ್ತು.

ಈ ನಡುವೆ ಪುಟ್ಟಾಲಯ್ಯ ಮತ್ತೊಂದೆರಡು ಸಾರ್ತಿ ದಗ್ಗೀರಜ್ಜನ್ನು ಹುಡಿಕೊಂಡು ಅವನ ಮನೆಯತ್ತ ಹೋಗಿ ಸುಮಾರು ಹೊತ್ತು ಕೂತು ಬಂದಿದ್ದ. ದಗ್ಗೀರಜ್ಜ ಮತ್ತೆ ಬರುತ್ತಾನೋ ಇಲ್ಲವೋ ಅಥವಾ ಇದ್ದಾನೋ ಇಲ್ಲವೋ ಅನ್ನುವ ಅನುಮಾನಕ್ಕೂ ಒಳಗಾಗಿದ್ದ. ಕಳೆದ ಕೆಲ ವರ್ಷಗಳಿಂದ ದಗ್ಗೀರಜ್ಜನ ಗೆಳೆತನ ಪುಟ್ಟಾಲಯ್ಯನಿಗೆ ಬದುಕಿನ ಬಗ್ಗೆ ಒಂದು ನಿಖರತೆಯನ್ನು ತಂದು ಕೊಟ್ಟಿತ್ತು. ಹರಿವ ನೀರಿನಂತೆ ಬೀಸುವ ಗಾಳಿಯಂತೆ ನಿರುಮ್ಮಳವಾಗಿದ್ದ ದಗ್ಗೀರಜ್ಜ ಮಿತ ಮಾತುಗಾರನಾದರೂ ಅವನ ಹೊಳೆವ ಕಂಗಳಲ್ಲಿ ತುಂಬಿರುತ್ತಿದ್ದ ಅಪರಿಮಿತ ಉಲ್ಲಾಸ ಸಂತೃಪ್ತಿಗಳು ಪುಟ್ಟಾಲಯ್ಯನನ್ನು ದಂಗುಬಡಿಸುತ್ತಿದ್ದವು. ಯಾವತ್ತೂ ಯಾವುದಕ್ಕೂ ಯಾರನ್ನೂ ದೂಷಿಸದ ದಗ್ಗೀರಜ್ಜ ಯಾಕೋ ಏನೋ ಬರಬರುತ್ತಾ ಪುಟ್ಟಾಲಯ್ಯನಿಗೆ ಆಂತರ್ಯದ ಬೆಳಕಿನಂತೆ ಭಾಸವಾಗತೊಡಗಿದ್ದ. ಅವನನ್ನು ಕಂಡು ಒಂದೆರಡು ಮಾತಾಡಿದರೆ ಸಾಕು ನಿರಾಳವಾದಂತೆ ಅನಿಸುತ್ತಿತ್ತು. ಸೀಮಿತ ಬದುಕಿನ ಅರ್ಥವ್ಯಾಪ್ತಿಯನ್ನು ಮೀರಿದ ಸಂತನಂತೆ ಕಾಣತೊಡಗಿದ್ದ ಕಾರಣಕ್ಕೇ ಪುಟ್ಟಾಲಯ್ಯ ದಗ್ಗೀರಜ್ಜನನ್ನು ಇನ್ನಿಲ್ಲದಂತೆ ಹಚ್ಚಿಕೊಂಡಿದ್ದ. ಆದರದನ್ನು ದಗ್ಗೀರಜ್ಜನ ಅರಿವಿಗೆ ಬಾರದಂತೆ ಕಾಪಾಡಿಕೊಂಡಿದ್ದ. ಯಾಕೆಂದರೆ ಅಂಥದ್ದೊಂದು ಭಾವುಕ ಲೋಕದ ಮಿತಿಯನ್ನು ಮೀರಿದ್ದ ದಗ್ಗೀರಜ್ಜನ ಗುಣಕ್ಕೆ ಅವಮಾನಿಸುವುದು ಪುಟ್ಟಾಲಯ್ಯನಿಗೆ ಸುತರಾಂ ಇಷ್ಟವಿರಲಿಲ್ಲ.

ದಗ್ಗೀರಜ್ಜನಿಗೆ ಎಂಭತೈದರ ಆಸುಪಾಸು. ಕಂದಾಯ ಇಲಾಖೆಯಲ್ಲಿ ನೌಕರನಾಗಿದ್ದ ದಗ್ಗೀರಜ್ಜ ನಿವೃತ್ತನಾಗಲು ಕೇವಲ ಎರಡು ತಿಂಗಳುಗಳಿವೆ ಅನ್ನುವಾಗ ಹೆಂಡತಿ ಬೋಜಮ್ಮ ಇದ್ದಕ್ಕಿದ್ದಂತೆ ಕಾಲವಾಗಿಬಿಟ್ಟಿದ್ದಳು. ಒಂದರ ಹಿಂದೆ ಒಂದರಂತೆ ಮೂರು ಮಕ್ಕಳಾದರೂ ಅವೆಲ್ಲಾ ಒಂದಷ್ಟು ದಿನ ಸಾಕಿಸಿಕೊಂಡು ತೀರಿಕೊಂಡಿದ್ದವು. ಮತ್ತೆ ಮಕ್ಕಳಾಗುವ ಮಾತು ದೂರ ಅಂತ ಗೊತ್ತಾದಾಗ ಬದುಕು ಮುಗಿದೇ ಹೋಯ್ತು ಅಂದುಕೊಂಡಿದ್ದ ಬೋಜಮ್ಮ ಮೆಲ್ಲಗೆ ದಗ್ಗೀರಜ್ಜ ಸಾಕತೊಡಗಿದ್ದ ಹಕ್ಕಿಗಳ ಸಂಗದಲ್ಲಿ ನೆಮ್ಮದಿ ಕಂಡುಕೊಳ್ಳತೊಡಗಿದ್ದಳು. ಮೊದ ಮೊದಲು ಒಂದೆರಡು ಗುಚ್ಚಕ್ಕಿ ಮರಿಗಳನ್ನು ತಂದು ಸಾಕಿದ್ದ ದಗ್ಗೀರಜ್ಜ. ಯಾವಾಗ ಅವು ಬೆಳೆಯತೊಡಗಿದಂತೆ ಹೊಂದಿಕೊಂಡು ದಗೀರಜ್ಜನ ಮನೆಯನ್ನೇ ತಮ್ಮ ಖಾಯಂ ಮನೆ ಮಾಡಿಕೊಂಡವೋ ದಗ್ಗೀರಜ್ಜ ಅವುಗಳ ಜೊತೆಗೆ ಮತ್ತೊಂದೆರಡನ್ನು ಸೇರಿಸಿದ್ದ. ಹೀಗೆ ವರ್ಷ ಎರಡು ವರ್ಷ ಅನ್ನುವುದರೊಳಗೆ ಇಪ್ಪತ್ತು ಗುಚ್ಚಕ್ಕಿಗಳು ದಗ್ಗೀರಜ್ಜ ಮನೆ ಮನದ ತುಂಬಾ ಚಿಲಿಪಿಗೊಡತೊಡಗಿದ್ದವು. ಅಂಥ ಹಕ್ಕಿಗಳ ಒಡನಾಟ ಬೋಜಮ್ಮನೊಳಗೂ ಹೊಸದೊಂದು ಲೋಕವನ್ನು ತೋರಾಕಿದ್ದಲ್ಲದೆ ಅವುಗಳನ್ನೇ ಮಕ್ಕಳು ಎಂಬಂತೆ ಸಾಕತೊಡಗಿದ್ದಳು. ಯಾವಾಗ ಹೆಂಡತಿ ಹಕ್ಕಿಗಳ ಒಡನಾಟದಲ್ಲಿ ಗೆಲುವಾಗ್ತಿದಾಳೆ ಅಂತ ಗೊತ್ತಾಯ್ತೋ ದಗ್ಗೀರಜ್ಜ ಗುಚ್ಚಕ್ಕಿಗಳಿಗೆ ನಾಲ್ಕು ಪಾರಿವಾಳಗಳನ್ನೂ ಎರಡು ಗೋಜಾನಕ್ಕಿಗಳನ್ನೂ ಎರಡು ಗಿಳಿಗಳನ್ನೂ ಜೊತೆಮಾಡಿದ್ದ. ಇಡೀ ಮನೆಯೇ ಹಕ್ಕಿಗಳ ಮನೆಯಾಗಿಹೋಗಿತ್ತು. ಅಡಿಗೆ ಮನೆಯಿಂದ ಎಲ್ಲೆಂದರಲ್ಲಿ ಹಾರುತ್ತಾ ಕೂರುತ್ತಾ ನಲಿದಾಡುತ್ತಿದ್ದ ಹಕ್ಕಿಗಳೇ ಗಂಡಹೆಂಡರಿಬ್ಬರಿಗೂ ಮಕ್ಕಳಾಗಿ ನೆಂಟರಿಷ್ಟರುಗಳಾಗಿ ಜೀವದ ಗೆಳೆಯರುಗಳಾಗಿ ಮನುಜರ ಸಾಂಗತ್ಯವನ್ನೇ ಸಸ್ತಾ ಮಾಡಿಬಿಟ್ಟಿದ್ದವು.

ಊರವರ ಹಾಗೂ ಸುತ್ತಮುತ್ತಲಿನವರ ಬಾಯಲ್ಲಿ ದಗ್ಗೀರಜ್ಜ ಹಕ್ಕಿಯಜ್ಜನಾಗಿ ಹೋಗಿದ್ದ. ಆಗಾಗ ಮಕ್ಕಳ ಹಿಂಡೇ ದಗ್ಗೀರಜ್ಜನ ಮನೆಗೆ ದೌಡಾಯಿಸುತ್ತಿತ್ತು. ಕೆಲವರಿಗೆ ದಗ್ಗೀರಜ್ಜ ಹಾಗೂ ಬೋಜಮ್ಮನ ಹಕ್ಕಿ ಪ್ರೀತಿ ಅಪಾರ ಪ್ರೀತಿಯುಕ್ಕಿಸಿದರೆ ಮತ್ತೆ ಕೆಲವರಿಗೆ ಅದೊಂದು ಹುಚ್ಚಿನ ಥರ ಕಾಣುತ್ತಿತ್ತು. `ಮಕ್ಳಿಲ್ಲ ಮರಿಲ್ಲ, ಹೇಳರಿಲ್ಲ ಕೇಳಾರಿಲ್ಲ ಆಡಿದ್ದೇ ಆಟ ಹೂಡಿದ್ದೇ ಲಗ್ಗೆ’ಅಂತಾನೂ ಲೇವಡಿ ಮಾಡುತ್ತಿದ್ದರು. ಕೆಲವರು `ಅಲ್ಲಾ ಇಂಗೆ ಹಕ್ಕಿಗುಳ್ನ ಸಾಕಾ ಬದ್ಲು ಯಾವ್ದಾರ ಮಗೂನಾ ತಂದು ಸಾಕ್ಕೆಂಡಿದ್ರೆ ಕಡೆಗಾಲ್ದಲ್ಲಿ ಹೊತ್ತಾಕಕಾರಾ ಆಗ್ತಿತ್ತು,’ಅಂತ ನೇರವಾಗಿಯೇ ಅಂದಿದ್ದರು. ಅದಕ್ಕೆ ಗಂಡಹೆಂಡಿರ ಮೌನ ಮತ್ತು ನಗೆ ಅಂದವರನ್ನು ಅಣಕಿಸುತ್ತಿತ್ತು.

ಹಕ್ಕಿಗಳು ಮನೆಯಲ್ಲಿ ಧವಸ ಧಾನ್ಯಗಳನ್ನು ಇಟ್ಟಾಡುತ್ತಿದ್ದದ್ದು ಎಲ್ಲೆಂದರೆ ಪಿಕ್ಕೆಗಳನ್ನು ಇಕ್ಕುತ್ತಿದ್ದದ್ದು ಕುಡಿಯಲು ಇಟ್ಟ ನೀರಿನ ಮುಚ್ಚಳಗಳಲ್ಲಿ ಕೂತು ಈಜಾಡುವಂತೆ ರೆಕ್ಕೆ ಬಡಿಯುತ್ತಾ ಅವುಗಳೊಳಗಿನ ನೀರನ್ನೆಲ್ಲಾ ಆಚೆ ಚೆಲ್ಲುತ್ತಿದ್ದದ್ದು ಪಾತ್ರೆಗಳ ಮುಚ್ಚಳಗಳನ್ನು ಸರಿಸಿ ಮಾಡಿಟ್ಟ ಅಡುಗೆಗೆ ಮೂತಿ ಇಕ್ಕುತ್ತಿದ್ದದ್ದು ಕೆಲವೊಮ್ಮೆ ಕೆಲವು ಹಾಸಿಗೆಯ ಮೇಲೇ ಮಲಗಿಬಿಡುತ್ತಿದ್ದದ್ದು ...ಇದೆಲ್ಲದಕ್ಕೂ ದಗ್ಗೀರಜ್ಜ ಮತ್ತು ಬೋಜಮ್ಮ ತೋರಿಸುತ್ತಿದ್ದ ಸಹನೆಯನ್ನು ನೋಡಿದವರೊಳಗೆ ಅಂಥ ಮಾತುಗಳು ಹೊರಡುವುದು ಸಹಜ ಅನಿಸುವಂತಿತ್ತು. ದಗ್ಗೀರಜ್ಜ ಹಕ್ಕಿಗಳಿಗಾಗಿ ಮಗ್ಗಲುಸೊಪ್ಪಿನಂತೆ ಹಲವು ಬಗೆಯ ಹೂಗಳನ್ನು ಗಿಡಗಳ ಕುಡಿಗಳನ್ನೂ ಹಾಕಿ ಮೆತ್ತನೆಯ ಹಾಸಿಗೆ ಮಾಡುತ್ತಿದ್ದದ್ದು ಅದರಲ್ಲೇ ಹಕ್ಕಿಗಳು ಮಲಗುತ್ತಿದ್ದದ್ದು ನೋಡಿದವರೊಳಗೆ ಚೋದ್ಯ ಹುಟ್ಟಿಸುತ್ತಿತ್ತು. ಆದರೆ ಆಗಾಗ ಹಕ್ಕಿಗಳಿಗೆ ಅದೂ ಇದು ಕಾಯಿಲೆ ಕಸಾಲೆಯಾದರೆ ಅವುಗಳನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದದ್ದು ಆಗ ಅವುಗಳನ್ನು ನಿಗಾ ಮಾಡುತ್ತಿದ್ದದ್ದು ಕೆಲವೊಮ್ಮೆ ಕೆಲವರಿಗೆ ಅತಿರೇಕದಂತೆಯೂ ಕಾಣುತ್ತಿತ್ತು. ಆದರವುಗಳಿಗೆಲ್ಲಾ ತಲೆ ಕೆಡಿಸಿಕೊಳ್ಳುವ ಅಂಥವಕ್ಕೆಲ್ಲಾ ಉತ್ತರಿಸುವ ಗೋಜನ್ನು ಬಿಟ್ಟು ಅವರಿಬ್ಬರೂ ತಮ್ಮದೇ ದಾರಿಯಲ್ಲಿ ದೂರ ಸಾಗಿದ್ದರು. ಹಕ್ಕಿಗಳೂ ಅವರನ್ನೂ ಅಷ್ಟೇ ಹಚ್ಚಿಕೊಂಡಿದ್ದವು. ಕೆಲವೊಮ್ಮೆ ಅವು ದಗ್ಗೀರಜ್ಜನಿಗೆ ವಾಕಿಂಗ್‍ನಲ್ಲಿ ಸಾಥ್ ಕೊಡುತ್ತಿದ್ದವು. ದಗ್ಗೀರಜ್ಜ ನಡೆಯುತ್ತಿದ್ದರೆ ಅವು ಪುರ್ರನೆ ಮುಂದ್ಮುಂದೆ ಹಾರುತ್ತಾ ಮರ ಗಿಡಗಳ ಮೇಲೆ ಕೂರುತ್ತಿದ್ದವು. `ಅಯ್ಯೋ ನಿಮ್ಗೇನ್ ಕರ್ಮ ಅಂತೀನಿ ನನ್ ಹಿಂದೆ ಅಡ್ಡಾಡಕೆ’ಅಂತ ಹಕ್ಕಿಗಳನ್ನು ಗದರಿಸುತ್ತಿದ್ದ.

ಬೋಜಮ್ಮನಿಗೆ ಹಕ್ಕಿಗಳೇ ಮಕ್ಕಳಾಗಿ ಹೋದ ಮೇಲೆ ಅವುಗಳಿಗಾಗಿ ಕೈ ತೋಟವೊಂದನ್ನು ಮಾಡಬೇಕೆನಿಸಿ ಮನೆಯ ಹಿಂದಿದ್ದ ಒಂದಷ್ಟು ಜಾಗಕ್ಕೆ ಇಬ್ಬರೂ ಕೂಡಿ ಬೇಲಿ ಹಾಕಿ ಅದರೊಳಗೆ ಸೀಬೆ ಸಪೋಟ ಮಾವು ಸೀತಾಫಲ ಮುಂತಾದ ಹಣ್ಣಿನ ಗಿಡಗಳನ್ನು ಬೆಳೆಸಿದ್ದಳು. ಸತೊಂಭತ್ತು ಕಾಲವೂ ಹಕ್ಕಿಗಳಿಗೆ ಹಸಿ ಕಾಳುಗಳು ಸಿಕ್ಕಬೇಕೆಂಬ ಕಾರಣಕ್ಕೆ ಅದು ಬೆಳೆಯುವ ಕಾಲ ಆಗಿರಲಿ ಬಿಡಲಿ ಅದು ಬಿಟ್ಟಷ್ಟು ಬಿಡಲಿ ಅಂತ ಉದ್ದು ಹೆಸರು ತೊಗರಿ ಹಲಸಂದೆ ಮುಂತಾದ ಕಾಳಿನ ಗಿಡಗಳನ್ನೂ ಬೆಳೆಸುತ್ತಿದ್ದಳು. ಹಿಂಗೇ ಸಾಂಗವಾಗಿ ಸಾಗುತ್ತಿದ್ದ ದಗ್ಗೀರಜ್ಜನ ಬದುಕಿನಲ್ಲಿ ಒಂದಿನ ಇದ್ದಕ್ಕಿದ್ದಂತೆ ಕತ್ತಲೆ ಕವಿಯಿತು. ಅದು ಸಂಜೆಯ ಹೊತ್ತು. ಹಕ್ಕಿಗಳ ಮುಚ್ಚಳಗಳಿಗೆ ನೀರು ಸುರಿದು ಕಾಳಿನ ಬೊಗುಣಿಗಳಿಗೆ ಕಾಳುದುರಿಸಿ ಅವುಗಳ ಪಿಕ್ಕೆಗಳನ್ನು ಒತ್ತಟ್ಟಿಗೆ ಗುಡಿಸಿ ಉಸ್ಸಪ್ಪಾ ಅಂದು ಜಗಲಿಗೆ ಬಂದು ಕೂತಿದ್ದ ಬೋಜಮ್ಮ ಇದ್ದಕ್ಕಿದ್ದಂತೆ ಕೂತಲ್ಲೇ ಎದೆ ಹಿಡುಕಂಡು ಹಂಗೇ ವಾಲಿದ್ದಳು. ಕತ್ರಾಗಿದ್ದರೆ ಬಾಳೆಯ ಗಿಡ ವರೆಯುವುದಿಲ್ಲ ಎಂಬ ಕಾರಣಕ್ಕೆ ಬುಡದಲ್ಲಿದ್ದ ಅದರ ಮರಿಗಳನ್ನು ಕಿತ್ತಾಕುತ್ತಿದ್ದ ದಗ್ಗೀರಜ್ಜ ಅದನ್ನು ನೋಡುತ್ತಲೇ `ಯಾಕಮ್ಮಿ ಏನಾಯ್ತು?’ಅಂತ ಓಡಿ ಬರುವಷ್ಟರಲ್ಲೇ ಬೋಜಮ್ಮ ನೆಟ್ಗಣ್ಣಾಗಿದ್ದಳು.

`ಅವ್ಳು ಹೋದ್ಮ್ಯಾಕೆ ಹಕ್ಕಿಗುಳು ಅನ್ನ ನೀರು ಬಿಟ್ಟು ಒಂದಷ್ಟು ದಿಸ ಮನೆಯೊಳಗೇ ಮಂಕಾಗಿ ಕೂತಿದ್ವು. ಮನ್ಸಿಗತ್ತಿದಾಗ ಹೊರೀಕೋಗಿ ಎಲ್ಲೆಲ್ಲೋ ಹುಡ್ಕಾಡಿದ್ವು. ಆಮ್ಯಾಲಾಮೇಲೆ ಅವ್ಳ ಗುಡ್ಡೆತಾಕೆ ವೋಗಿ ಕೂತ್ಕಣ್ತಿದ್ವು. ದಿನ್ಕಳ್ದಂಗೆ ಅವೂನೂ ಗುಡ್ಡೆ ಮ್ಯಾಲಿಟ್ಟಿದ್ದ ಸಂಪ್ಗೆ ಗಿಡ್ದಾಗೆ ಚಿಗುರು ವೊಳ್ಟಂಗೆ ಅದ್ಕೇ ಹೊಂದ್ಕಂಡ್ವು. ಇದಾಗಿ ಇಪ್ಪತೈದು ವರ್ಷಾಗೋಯ್ತು. ಮೂರ್ನಾಲ್ಕು ಹಕ್ಕಿಗುಳ್ ತಲ್ಮಾರೂ ಬದ್ಲಾದ್ವು. ಸಂಪ್ಗೆ ಗಿಡ್ವಾಗೋದ ಅವ್ಳು ವರ್ಷುಕ್ಕೊಮ್ಮೆ ಮಾಮೇರಿ ಹೂ ಬಿಡ್ತಾಳೆ. ಆಗದ್ರ ಘಮ್ಲು ಏನೇಳ್ತೀಯಾ? ಎಲ್ರೂ ಮೂಗೂ ಇತ್ಲಗೇ ಇರಂಗ್ ಮಾಡುತ್ತೆ. ಹೂವಿನ್ ಕಾಲ್ದಾಗೆ ಹಕ್ಕಿಗುಳ್ಗೆ ಆ ಹೂಗುಳೇ ಮಗ್ಲು ಸೊಪ್ಪು. ಆಗ್ ನೋಡ್ಬೇಕು ಮನ್ಯಂಥ ಮನ್ಯಲ್ಲ ಅವ್ಗುಳ್ ಘಮ್ಲಲ್ಲೇ ಮುಳ್ಗೇಳುತ್ತೆ. ಆಗ ಹಕ್ಕಿಗುಳೆಲ್ಲಾ ಕಂದಮ್ಗುಳು ಅವರವÀರ ಅವ್ವಂದಿರ್ಗೆ ಜೋತ್‍ಬಿದ್ದಂಗೆ ಸಂಪ್ಗೆ ಗಿಡ್ದಾಗೇ ಪುಳ್ಗುಡ್ತವೆ. ಸಾಯೋದು ಅಂದ್ರೆ ಒಂದ್ಬಿಟ್ಟು ಇನ್ನೊಂದಾಗಾದೂಂತ. ಅಗಾ ಅಲ್ನೋಡು ನಮ್ಮನೇವ್ಳು ಹೆಂಗೆ ಸಂಪ್ಗೆ ಮರ್ವಾಗಿ ಸೊಂಪಾಗಿ ಕೂತವ್ಳೆ? ಚಕ್ ಅಂತ ಹೋಗ್ಬುಡ್ಬೇಕು ಲಕ್ ಅಂತ ಮತ್ತೇನೋ ಆಗಿ ಬಂದ್ಬುಡ್ಬೇಕು’ ಅದೊಂದು ದಿನ ಸಂಜೆಯ ಹೊತ್ತಲ್ಲಿ ಸಂಪಿಗೆ ಮರದ ಸುತ್ತಲೂ ಕಸ ಗುಡಿಸುತ್ತಾ ಅಂದಿದ್ದ ದಗ್ಗೀರಜ್ಜನ ಮಾತುಗಳು ಅವನು ಕಾಣೆಯಾಗಿರುವ ಸಧ್ಯದ ಹೊತ್ತಿನಲ್ಲಿ ಪುಟ್ಟಾಲಯ್ಯನೊಳಗೆ ನಾನಾ ಅರ್ಥಗಳನ್ನು ಹುಟ್ಟಾಕತೊಡಗಿದವು. ದಗ್ಗೀರಜ್ಜ ಕಾಣೆಯಾಗಿ ತಿಂಗಳಾಗುತ್ತಾ ಬಂದಿತ್ತು. ದಗ್ಗೀರಜ್ಜನ ಸುಳಿವಿರದದ್ದು ಪುಟ್ಟಾಲಯ್ಯನನ್ನು ಕಂಗೆಡಿಸಿತ್ತು.

ಅವತ್ತು ಪುಟ್ಟಾಲಯ್ಯ ಎಂದಿನಂತೆ ವಾಕ್ ಮುಗಿಸಿ ತಾನು ದಿನವೂ ಕೂರುತ್ತಿದ್ದ ಪಾರ್ಕಿನಲ್ಲಿ ಕೂತಿದ್ದ. ದಗ್ಗೀರಜ್ಜನ ಮನೆಯತ್ತ ಹೋಗಿ ದಿನ ನಾಲ್ಕು ಕಳೆದಿದ್ದವು. ಪುಟ್ಟಾಲಯ್ಯನಿಗೊಂದು ಚಣ ಅತ್ತ ಹೋಗಬೇಕೆನಿಸಿದರೂ ಏಳಲು ಮನಸಾಗದೆ ಹುರುಪೆಲ್ಲಾ ಸೋರಿ ಹೋದವನಂತೆ ಸುಮ್ಮನೇ ಎದುರಿಗಿದ್ದ ಪುಟ್ಟ ಕೆಂಪುಕೇಸರಿ ಗಿಡವನ್ನೇ ದಿಟ್ಟಿಸುತ್ತಿದ್ದ. ಅಪ್ಪ ಅಮ್ಮಂದಿರ ಜೊತೆಗೆ ವಾಕಿನ ನೆಪದಲ್ಲಿ ಬಂದಿದ್ದ ಪುಟಾಣಿ ಮಕ್ಕಳ ಗುಂಪೊಂದು ಪುಟ್ಟಾಲಯ್ಯ ಕೂತಿದ್ದ ಎದುರು ಬೆಂಚಿನಲ್ಲಿ ಕೂತು ಬೆಳಗುವ ಸೂರ್ಯನನ್ನೂ ಬೆಳಗಿನ ನೀರವತೆಯನ್ನು ನಿಟಕಿಸಿಕೊಳ್ಳುತ್ತಿದ್ದವು. ಪುಟ್ಟಾಲಯ್ಯನಿಗೆ ಯಾಕೋ ಮಗನ ನೆನಪಾಗಿ ಎದೆ ಹಿಂಡಿದಂಗಾಗತೊಡಗಿತು. ಕೂತಲ್ಲಿಂದ ಎದ್ದವನೇ ಸೀದಾ ಮಕ್ಕಳ ಗುಂಪಿನತ್ತ ನಡೆದ. ಸಕ್ಕರೆ ಖಾಯಿಲೆಯವನಾಗಿದ್ದರಿಂದ ಹೈಪೋ ಆದರೆ ಇರಲಿ ಅಂತ ಸದಾ ಇಟ್ಟುಕೊಂಡಿರುತ್ತಿದ್ದ ಚಾಕಲೇಟುಗಳನ್ನು ಅವರಿಗೆ ಕೊಡತೊಡಗಿದ. ಅಷ್ಟರಲ್ಲಿ `ಲೇ ಅಪ್ಪಣ್ಣಿ’ ಯಾರೋ ಕೂಗಿದ ಹಾಗಾಯ್ತು. ಅದವನಿಗೆ ಥೇಟ್ ದಗ್ಗೀರಜ್ಜನ ದನಿಯಂತೇ ಕೇಳಿಸಿತು. ಒಮ್ಮೆಗೇ ಬೆಚ್ಚಿದವನಂತೆ ತುಂಬಾ ದೂರದವರೆಗೂ ಕಣ್ಣಾಡಿಸಿದ. ಯಾರ್ಯಾರೋ ಕಂಡರು. ದಗ್ಗೀರಜ್ಜ ಮಾತ್ರ ಕಣ್ಣಿಗೆ ಬೀಳಲಿಲ್ಲ. ಹಾಗಾದರೆ ನಾನು ಕೇಳಿಸಿಕೊಂಡ ದನಿಯೇ ಸುಳ್ಳ? ಅಂತ ಅಂದುಕೊಳ್ಳುತ್ತಿರುವಾಗ ಪುಟ್ಟಾಲಯ್ಯನ ಹಿಂಬಂದಿಯಿಂದ `ಎಲ್ಲೆಲ್ಲೋ ಯಾಕ್ ಹುಡುಕ್ತೀಯಾ ನಾನಿಲ್ಲಿದೀನಿ ನೋಡು,’ ಅನ್ನುತ್ತಾ ಖುದ್ದು ದಗ್ಗೀರಜ್ಜನೇ ಪುಟ್ಟಾಲಯ್ಯನ ಹೆಗಲು ಮುಟ್ಟಿದ. ಒಮ್ಮೆಗೇ ತುಂಬಿ ಬಂದ ಕಂಗಳಲ್ಲಿ ಪುಟ್ಟಾಲಯ್ಯನಿಗೆ ದಗ್ಗೀರಜ್ಜ ಅಸ್ಪಷ್ಟವಾಗಿ ಕಾಣಿಸತೊಡಗಿದ.

`ಈಸೊಂದ್ ದಿಸ ಎಲ್ಗೋಗಿದ್ದ ಅಂತ ಅಂದ್ಕಂತುದೀಯಾ ಅಲ್ವಾ?’ ಕೈಯ್ಯಲ್ಲಿದ್ದ ಬ್ಯಾಗನ್ನು ಬೆಂಚಿನ ಮೇಲಿಡುತ್ತಾ ಕೂರಲನುವಾದ ದಗ್ಗೀರಜ್ಜ, `ಈ ಹಾಳಾದ್ ಮಂಡಿನೋವು ನೆಟ್ಗೆ ಕೂರಾಕೂ ಬಿಡಲ್ಲ. ಶೀತುದ್ ಕಾಲ ಬಂದ್ರಂತೂ ಹೇಳ್ ತೀರ್ದು,’ಅನ್ನುತ್ತಾ ಎಡಗೈಯ್ಯನ್ನೂರಿ ಮೆಲ್ಲಗೆ ಬೆಂಚಿನಲ್ಲಿ ಕೂತ. ಲಕ್ಕೆ ಗಿಡದ ಚಿಗುರುಗಳು ವಾರಾಸಿಗಿದ್ದ ಬ್ಯಾಗಿನೊಳಗಿಂದ ಆಚೆ ಇಣುಕುತ್ತಿದ್ದವು. ಮಾತು ಕಳೆದುಕೊಂಡವನಂತೆ ತನ್ನನ್ನೇ ದಿಟ್ಟಿಸುತ್ತಿದ್ದ ಪುಟ್ಟಾಲಯ್ಯನನ್ನೇ ನೋಡುತ್ತಾ, `ಅಲ್ಲಾ ಸಾಕಿದ್ ಮಕ್ಳು ಇದ್ಕಿದ್ದಂಗೆಯಾ ಹೇಳ್ದೇ ಕೇಳ್ದೆಯಾ ಎತ್ಲಗಾರಾ ವೋಗ್ಬುಟ್ರೆ ಯಂಗ್ ಆಗ್‍ಬ್ಯಾಡ? ಹಂಗಾಗಿತ್ತು ನನ್ ಕಥೆ. ಅಲ್ಲಾ ಏನೋ ಒಂದ್ ಮಾತು ಬರುತ್ತೆ ವೋಗುತ್ತೆ ಅಂಗಂತ ಮನಿಸ್ಕಂಡ್ ಮನೇನೇ ಬಿಟ್ಟು ವೋಗ್ಬುಡಾದ?’ಅಂದ ದಗ್ಗೀರಜ್ಜನನ್ನೇ ಮತ್ತೂ ಅಚ್ಚರಿಯಿಂದ ದಿಟ್ಟಿಸುತ್ತಾ ಪುಟ್ಟಾಲಯ್ಯ ಕೇಳಿದ, `ಯಾವ್ ಮಕ್ಳು ಏನ್ ಕತೆ ತಾತಾ?’ `ಇದೇನಪ್ಪ ಇಂಗೆ ಕೇಳೀಯಾ? ನಂಗೇನ್ ಒಬ್ರ ಮಕ್ಳು? ಮನ್ತುಂಬಾ ಪಿತ್ಗುಡ್ತವೆ ಅವೆಯಾ!’ `ಓಹ್ ಆ ಹಕ್ಕಿಗುಳಾ?’ `ಮತ್ತೇನಂದ್ಕಂಡಿದ್ದೆ?’ ಪುಟ್ಟಾಲಯ್ಯ ಮಾತಾಡದೆ ಮತ್ತೆ ದಗ್ಗೀರಜ್ಜನನ್ನೇ ದಿಟ್ಟಿಸತೊಡಗಿದ. ಕಳೆದುಹೋದ ಲೋಕವೊಂದು ಮರಳಿ ಸಿಕ್ಕಂಥ ಖುಷಿಯ ಭಾವ ಅವನ ಮೊಗದಲ್ಲಿ ಮುಲುಗುಡುತ್ತಿತ್ತು.

`ಅದೇನಾತೂಂದ್ರೆ, ಒಂದಿಸ ಒಂದ್ ನಾಕೈದ್ ಯಾವೋ ಬ್ಯಾರೆ ಹಕ್ಕಿಗುಳು ಎಲ್ಲಿಂದ ಬಂದ್ವೋ ಏನ್ ಕತ್ಯೋ ಅಂತು ನಮ್ ಮಕ್ಳು ಜೊತೆ ಕೂಡ್ಕಂಡಿದ್ವು. ಒಂದೆರ್ಡು ದಿಸದವರ್ಗೂ ಅದು ನಂಗೇ ತಿಳೀಲೇ ಇಲ್ಲ ಅಂತೀನಿ. ಅವು ಕಿತ್ತಾಡ್ಕೆಣದೇ ಇದ್ರೆ ನಂಗೇ ತಿಳೀತಾನೂ ಇರ್ಲಿಲ್ಲ ಅಂದ್ಕೋ. ಅವೇನಂದ್ವೋ ಇವೇನಂದ್ವೋ ಯಾಕೋ ಏನೋ ಇದ್ಕಿದ್ದಂಗೆಯಾ ಅವ್ಗುಳ್ ಮ್ಯಾಲೆ ನನ್ ಮಕ್ಳು ಮುರ್ಕಂಡ್ ಬಿದ್ದುಬಿಟ್ಟುದ್ವು. ಯಾಕೆ ಏನು ಅಂತ ಕೇಳಿದ್ಕೆ ಇಂಗಿಗೆ ಈ ಥರ ಅಂತ ಹೇಳಿದ್ವು. ಅವೂ ಇದ್ಕಂಡು ವೋಗ್ಲಿ ಬಿಡ್ರಪ್ಪ ಅತ್ಲಾಗಿ ಯಾಕಿಂಗೆ ಕಿತ್ತಾಡ್ತೀರಾ ಅಂದೆ. ದಿಕ್ಕು ದೆಸೆ ಇಲ್ದೆ ಬಂದಿರೋರು ಎಂಗಿರ್ಬೇಕೋ ಅಂಗಿರ್ಬೇಕು ತಾನೆ? ನಮ್ಗೇ ರೋಪ್ ಆಕಿದ್ರೆ ಬಿಟ್ ಬಿಡ್ತೀವ ಅಂತ ದೂರಿದ್ವು. ಅಯ್ಯೋ ಬಿಡ್ರೋ ಕಂದಮ್ಗುಳ ಸತ್ತಾಗ ವೊತ್ಕಂಡು ವೋಗರಂಗೆ ಆಡ್ತಿದೀರಾ ಅಂತ ಅಂದಿದ್ದೇ ಮುಳ್ವಾತು ನೋಡಪ್ಪ. ನೀನೂ ಅವ್ರ ಪರ್ವಾಗೇ ಮಾತಾಡ್ತೀಯ? ನಮ್ಗಿಂತ ನಿನ್ಗೆ ಅವ್ರೇ ಎಚ್ಚಾದ್ರ?ಅಂತ ರಾಣಾ ರಂಪು ಮಾಡ್ಬಿಡಾದ? ನಂಗೂ ಯಾಕೋ ಇವ್ರಿಂಗಾಡಿದ್ದು ಮನ್ಸಿಗೆ ಇಡುಸ್ಲುಲ್ಲ. ಒಂದೆರಡ್ ದಿಸ ಕ್ಯಾರೆ ಅನ್ದಂಗೆ ತೆಪ್ಗಿದ್ದೆ ಬುದ್ದಿ ಕಲುತ್ಕಳ್ಲಿ ಅಂತಾವ. ಅವ್ರು ಕಲ್ತುಕಣಾದು ವತ್ತಟ್ಗಿರ್ಲಿ ನಂಗೇ ಕಲುಸ್‍ಬುಟ್ರು.’ `ಅಂಥಾದ್ ಏನ್ಮಾಡುದ್ವು ನಿಂಗವು?’ ದಗ್ಗೀರಜ್ಜನ ಮಾತುಗಳನ್ನು ಸೋಜಿಗದಿಂದ ಆಲಿಸುತ್ತಿದ್ದ ಪುಟ್ಟಾಲಯ್ಯ ಕೇಳಿದ. `ಏನ್ಮಾಡಿದ್ರು ಅಂತ ಕೇಳ್ತೀಯಾ? ನಿನ್ ಮನೇನೂ ಬ್ಯಾಡ ನಿನ್ ಸವಾಸಾನೂ ಬ್ಯಾಡ ಅಂತ ಎತ್ಲಗೋ ವೋಗೇ ಬುಟ್ರು! ಈಗ್ ಬತ್ತಾರೆ ಆಗ್ ಬತ್ತಾರೆ ಅಂತ ಕಾದೇ ಕಾದೆ. ಬರ್ಲೇ ಇಲ್ಲ. ಆ ವೊಸ್ದಾಗಿ ಬಂದುದ್ ಹಕ್ಕಿಗುಳು ನಮ್ಮಿಂದ ನಿನ್ಗೆ ಯಾಕಜ್ಜ ತೊಂದ್ರೆ ಅಂತ ಅವೂ ವೊಂಟೋದ್ವು. ನಂಗೆ ಈ ಲೋಕಾನೇ ಬ್ಯಾಡ ಅನ್ಸಾಕೆ ಸುರುವಾಗ್ಬಿಡ್ತು. ಇಂಗೇ ಇದ್ರೆ ಸರ್ಯಾಗಲ್ಲ ಅಂತಾವಾ ನಾನೇ ಹುಡುಕ್ಕಂಡೋಗಿದ್ದೆ ಕಣಪ್ಪಾ. ಇನ್ ಯಾವತ್ತೂ ಬೈಯ್ಯಲ್ಲ ಅಂತ ಮಾತ್ಕೊಟ್ಟು ಕರ್ಕಂಡು ಬಂದಿದೀನಿ.’ ದಗ್ಗೀರಜ್ಜ ಬಿಟ್ಟ ನಿಟ್ಟುಸಿರು ಬೆಳಗಿನ ಬಲಿಯುತ್ತಿದ್ದ ಬಿಸಿಲಿನಲ್ಲಿ ತಟ್ಟಾಡತೊಡಗಿತು.

ಇದಾಗಿ ನಾಲ್ಕೈದು ತಿಂಗಳುಗಳು ಕಳೆದಿದ್ದವು. ದಗ್ಗೀರಜ್ಜ ಹಾಗೂ ಪುಟ್ಟಾಲಯ್ಯ ಬೆಳಗಿನ ವಾಕಿನಲ್ಲಿ ಸಿಗುವುದು ಒಂದಷ್ಟು ಹೊತ್ತು ಕೂರುವುದು ಅದೂ ಇದೂ ಮಾತಾಡುವುದು ಎಂದಿನಂತೆ ನಡೆದಿತ್ತು. ಕೆಲ ದಿನಗಳ ಹಿಂದೆ ಮತ್ತೆ ಒಂದೆರಡು ದಿನ ದಗ್ಗೀರಜ್ಜ ಕಾಣದ್ದರಿಂದ ದಿಗಿಲುಗೊಂಡ ಪುಟ್ಟಾಲಯ್ಯ ಅಜ್ಜನ ಮನೆಯತ್ತ ಹೋಗಿದ್ದ. ಪಡಸಾಲೆಯ ಮಂಚದಲ್ಲಿ ಮೈ ತುಂಬಾ ರಗ್ಗೊಂದನ್ನು ಕವುಚಿಕೊಂಡು ಮಲಗಿದ್ದ ದಗ್ಗೀರಜ್ಜ`ಯಾಕೋ ಮೈ ಒಂಥರಾ ಜಡ್ಡಾದಂಗೆ ಆಗೈಯ್ತೆ. ಕುಂತ್ರೂ ನಿಂತ್ರೂ ಒಂಥರಾ ಸಂಕ್ಟ ಆದಂಗಾಗುತ್ತೆ,’ಅನ್ನುತ್ತಾ ಎದ್ದು ಕೂರಲೂ ಯಣಗಾಡಿದ್ದರಿಂದ ಪುಟ್ಟಾಲಯ್ಯ ಹಠಕ್ಕೆ ಬಿದ್ದು ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ಕೊಟ್ಟ ಔಷಧಿಗಳನ್ನು ದಿಟ್ಟಿಸುತ್ತಾ ಸುಮ್ಮನೆ ನಕ್ಕಿದ್ದ ದಗ್ಗೀರಜ್ಜ. `ಈ ಹಕ್ಕಿಗುಳೆಲ್ಲಾ ಯಾವತ್ತೋ ಒಂದಿಸ ಚಿಟ್ಟೆಗಳಾಗಿ ಹಾರೋಗ್ಬುಟ್ರೆ ಎಂಗಿರುತ್ತೆ ಅಲ್ವಾ? ಕೂತುತ್ತವ್ಲೇ ಕೂತ್ರೆ ನಿಂತುತವ್ಲೇ ನಿಂತ್ರೆ ಅಂಗೇ ಬೇರ್ಬಿಟ್ಕಂಡ್ ಬುಡ್ತೀವಿ. ಆದ್ರೆ ಈ ನರ ಮನ್ಸ ಬಿಡೋ ಬೇರ್ಗುಳು ನಮ್ಮವ್ವ ಭೂಮ್ತಾಯ್ಗೆ ಸುತ್ರಾಂ ಇಷ್ಟ ಆಗಲ್ಲ. ಯಾಕೇಂದ್ರೆ ಇವ್ನ ಬೆರುಗುಳೊಳ್ಗೆ ಯಾವಾಗ್ಲೂ ಇಸ ತುಂಬ್ಕೆಂಡಿರುತ್ತೆ,’ ಔಷಧಿಗಳ ಭರಾಟೆಗೆ ಅಜ್ಜ ಹಿಂಗೆಲ್ಲಾ ಮಾತಾಡುತ್ತೆ ಅಂತ ಅಂದಾಜಿಸಿದ ಪುಟ್ಟಾಲಯ್ಯ ಆ ಮಾತುಗಳಿಗಷ್ಟು ಕಿಮ್ಮತ್ತು ಕೊಟ್ಟಿರಲಿಲ್ಲ. ಅಜ್ಜ ರವಷ್ಟು ಚೇತರಿಸಿಕೊಳ್ಳುವವರೆಗೂ ಪುಟ್ಟಾಲಯ್ಯ ಮನೆಯಿಂದ ಅದೂ ಇದೂ ತಗಂಡೋಗಿ ಕೊಡುತ್ತಿದ್ದ. ಆವಾಗೆಲ್ಲಾ ದಕ್ಕೀರಜ್ಜ, `ಬ್ಯಾರೇವ್ರ ಕೈಯ್ಲಿ ಎತ್ತಿಸ್ಕಂಡು ಇಳಿಸ್ಕಂಡು ಬದ್ಕೋದು ಅಂದ್ರೆ...’ದಗ್ಗೀರಜ್ಜ ಮುಂದಕ್ಕೆ ಮಾತಾಡಲು ಬಿಡದಂತೆ`ಅಂಗಾರೆ ನಾನು ನಿನ್ ದೃಷ್ಟೀಲಿ ಬ್ಯಾರೇವ್ನು ಆಗ್ಬಿಟ್ನ?’ಅಂತ ಅನ್ನುತ್ತಿದ್ದ.

ದಗ್ಗೀರಜ್ಜ ಖಾಯಿಲೆಯಿಂದ ಚೇತರಿಸಿಕೊಳ್ಳುತ್ತಲು ತಿಂಗಳುಗಳೇ ಹಿಡಿದವು. ಮುಂಚಿನಂತಲ್ಲದಿದ್ದರೂ ಮೆಲ್ಲಗೆ ತಿರುಗಾಡ ಹತ್ತಿದ್ದ ದಗ್ಗೀರಜ್ಜನ ಕೈಗೆ ಊರುಗೋಲು ಬಂದಿತ್ತು. ಪುಟ್ಟಾಲಯ್ಯ ಮುಂಚಿಗಿಂತ ಹೆಚ್ಚು ದಗ್ಗೀರಜ್ಜನನ್ನು ಹಚ್ಚಿಕೊಳ್ಳತೊಡಗಿದ್ದ. ಮತ್ತೊಂದಷ್ಟು ದಿನಗಳುರುಳಿದವು. ಅವತ್ತೊಂದು ದಿನ ಹೆಂಡತಿ ಮನೆಯಲ್ಲಿರದ ಹೊತ್ತಲ್ಲಿ ಮಗನಿಂದ ಫೋನ್ ಬಂದಿತ್ತು. `ಮುಂದಿನ ತಿಂಗ್ಳು ಹೆಂಡ್ತಿ ಮಕ್ಳು ಊರ್ಗೆ ಬರ್ಬೇಕು ಅಂದ್ಕಂಡಿದಾರೆ ಏನ್ಮಾಡ್ಲಿ?’ಅಂತ ಕೇಳಿದ.್ದ ಪುಟ್ಟಬಾಲಯ್ಯ ಹೂಂ ಇಲ್ಲಾ ಉಹೂಂ ಅಂತಾನೂ ಅನ್ನದಂಗೆ ಫೊನ್ ಕುಕ್ಕಿದ್ದ. ಎರಡು ದಿನಗಳಿಂದ ಪುಟ್ಟಾಲಯ್ಯನಿಗೆ ಬಿ.ಪಿ. ಏರುಪೇರಾಗುತ್ತಿದ್ದ ಕಾರಣಕ್ಕೆ ಅವನನ್ನು ವಾಕ್ ಹೋಗಲು ಬಿಟ್ಟಿರಲಿಲ್ಲ ಹುಚ್ಚೀರಮ್ಮ. ಮೂರನೆಯ ದಿನ ಬೆಳಗ್ಗೆ ಬಿ.ಪಿ ಹಾಗೂ ಬ್ಲಡ್ ಚೆಕಪ್ ಮಾಡಿಸಿಕೊಂಡು ಬಂದಿದ್ದ. ಅವೆರಡೂ ನಾರ್ಮಲ್ಲಾಗಿದ್ದರಿಂದ ಕೊಂಚ ನಿರಾಳದಲ್ಲಿದ್ದ. ಅವತ್ತು ಸಾಯಂಕಾಲ ಏನಾರಾ ಮಾಡಿ ದಗ್ಗೀರಜ್ಜನನ್ನು ಮನೆಗೆ ಕರಕಂಡು ಬರಲೇಬೇಕು ಅಂತ ಇದ್ದಕ್ಕಿದ್ದಂತೆ ಅನಿಸತೊಡಗಿತ್ತು ಪುಟ್ಟಾಲಯ್ಯನಿಗೆ. ಹೆಂಡತಿಗೆ ಹೇಳಲು ಹುಚ್ಚೀರಮ್ಮ ದೂಸರಾ ಮಾತಾಡದೆ ಆಗಲಿ ಅಂದಿದ್ದಳು. ಅದಕ್ಕಾಗಿ ಹುಚ್ಚೀರಮ್ಮ ಅಜ್ಜನಿಗೆ ಇಷ್ಟವಾಗಬಹುದೆಂದು ಗಟ್ಟಕ್ಕಿ ಪಾಯಸವನ್ನೂ ಇಸಕಿದವರೆಯ ಸಾರನ್ನೂ ಮಾಡಲು ತಯಾರಿ ನಡೆಸಿಕೊಳ್ಳುತ್ತಿದ್ದರೆ ಪುಟ್ಟಾಲಯ್ಯ ದಗ್ಗೀರಜ್ಜನ ಮನೆಯ ದಾರಿ ಹಿಡಿದಿದ್ದ.

ಪುಟ್ಟಾಲಯ್ಯ ದಗ್ಗೀರಜ್ಜನ ಮನೆಯ ಅಂಗಳಕ್ಕಿಳಿದಾಗ ಹೊತ್ತಾಗಲೇ ಕಂದುತ್ತಿತ್ತು. ಮನೆಯ ಮುಂದಲ ಬಾಳೆಯ ಗಿಡದಲ್ಲಿ ನಿನ್ನೆಯೋ ಮೊನ್ನೆಯೋ ಗೊನೆಯೊಡೆದ ಹೂವಿಗೆ ಮುತ್ತಿಕೊಂಡಿದ್ದ ಜೇನ್ನೋಣಗಳನ್ನು ಬಿಟ್ಟರೆ ಮತ್ತಾವ ಸದ್ದೂ ಕೇಳಿಲಿಲ್ಲ. ಸದಾ ಹಕ್ಕಿಗಳ ಕಲರವದಿಂದ ಜೀಕುತ್ತಿದ್ದ ಇಡೀ ವಾತಾವರಣ ಮೌನಕ್ಕೆ ಶರಣಾದಂತಿತ್ತು. ದಿಗಿಲುಗೊಂಡ ಪುಟ್ಟಾಲಯ್ಯ ನಿಂತಲ್ಲಿಂದಲೇ ಮನೆಯನ್ನು ನಿಟುಕಿಸಿಕೊಂಡ. ಫ್ರೇಮ್‍ಸೆಟ್ಟಿನ ಬಾಗಿಲು ಅರೆ ತೆರೆದಿತ್ತು. ಓಹ್ ಹಂಗಾದರೆ ಅಜ್ಜ ಒಳಗೆ ಅಥವಾ ಇಲ್ಲೇ ಎಲ್ಲೋ ಇದೆ ಅನ್ನುವ ಸಮಾಧಾನದಲ್ಲಿ ಹತ್ತಿರ ಹೋಗಿ ಬಾಗಿಲನ್ನು ದೂಕಿದ. ತೆರೆದುಕೊಂಡ ಬಾಗಿಲ ಹಿಂದಯೇ ಹಕ್ಕಿಗಳ ಪಿಕ್ಕೆಯ ವಾಸನೆ ಮೂಗಿಗೆ ರಾಚಿತು. ಒಂದೆರಡು ಬಾರಿ ಅಜ್ಜನ ಹೆಸರಿಡಿದು ಕೂಗಿದ. ಉತ್ತರ ಬರಲಿಲ್ಲ. ಹಂಗೇ ಇಣುಕಿದ. ನಡುಮನೆಯ ಬಾಗಿಲೂ ಅರೆ ತೆರೆದಿತ್ತು. ಒಂದು ವೇಳೆ ಮತ್ತೆ ಹುಷಾರು ತಪ್ಪಿ ಅವತ್ತಿನಂತೆ ಹಾಸಿಗೆ ಹಿಡಿದು ಬಿಟ್ಟಿದ್ರೆ ಅಂತ ಒಂದೇ ಉಸುರಿಗೆ ಪಡಸಾಲೆಗೆ ನಡೆದ. ಅಲ್ಲಿ ಹಕ್ಕಿಗಳಿಗೆ ಕಾಳಿಡುತ್ತಿದ್ದ ಬೊಗುಣಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನೀರು ಕುಡಿಯಲೆಂದು ಇಟ್ಟಿದ್ದ ಮಣ್ಣಿನ ಮುಚ್ಚಳಗಳಲ್ಲಿ ಕೆಲವು ಒಡೆದು ಹೋಗಿದ್ದವು. ಮಳೆಯೊಂದಕ್ಕೆ ನೇತಾಕಿದ್ದ ಹಕ್ಕಿಗಳ ಬ್ಯಾಗಿನಿಂದ ಸೋರಿದ್ದ ಧವಸಗಳು ಅದರಿಡಿಯ ನೆಲದಲ್ಲಿ ಗುಪ್ಪೆಯಾಗಿದ್ದವು. ಪುಟ್ಟಾಲಯ್ಯ ದಂಗಾಗಿ ಹೋದ. `ಅಯ್ಯೋ ದೇವರೇ ಅಜ್ಜ ಏನಾದ್ರೂ...’ಅಂದುಕೊಳ್ಳುತ್ತಾ ಒಂದೇ ಉಸುರಿಗೆ ನಡುಮನೆಯ ಬಾಗಿಲನ್ನು ತಳ್ಳಿ ಒಳ ನಡೆದ. ಕತ್ತಲೆ ಗೌವ್ವೆನ್ನುತ್ತಿತ್ತು. ತಡಕಾಡಿ ಸ್ವಿಚ್ ಹಾಕಿದ. ಹತ್ತಿದ ಬೆಳಕಿನಲ್ಲಿ ನೋಡಿದರೆ ಅಜ್ಜನ ಮಂಚ ಖಾಲಿಯಿತ್ತು. ಹೊದ್ದಿದ್ದ ರಗ್ಗು ಹಾಗೇ ಅರೆ ಮಡಿಚಿದಂತೆಯೇ ಮುದುಡಿಕೊಂಡಿತ್ತು. ಅವತ್ತು ಕೊಡಿಸಿದ್ದ ಮಾತ್ರೆಗಳ ಕವರ್ ತಲೆದಿಂಬಿನ ಪಕ್ಕ ಬಿದ್ದಿತ್ತು. ಪುಟ್ಟಾಲಯ್ಯ ದಿಕ್ಕು ತೋಚದವನಾದ. ಉಮ್ಮಳಿಸತೊಡಗಿದ ಸಂಕಟಕ್ಕೆ ತಲೆ ಸುತ್ತಿಬಂದು ಕಣ್ಣಿಗೆ ಕತ್ತಲು ಕಟ್ಟಿದಂತಾಗಿ ಮಂಚದ ತುದಿಯಲ್ಲಿ ಮೆಲ್ಲಗೆ ಕುಸಿದ. ಹಾಗೆ ಕುಸಿದವನಿಗೆ,`ಮುಗ್ದೋಗಿರೋ ಬದ್ಕಿನ್ ಕತೇನಾ ರುತಾ ಜಗ್ಗಾಡ್ಬಾರ್ದು ಕಣಪ್ಪ,’ಅಂತ ದಗ್ಗೀರಜ್ಜ ಮೆಲ್ಲಗೆ ಉಸುರಿದಂತಾಯ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.