‘ಅದಿನಾರು .... ಇಫ್ಪಾತ್ತಾರು, ಇಫ್ಪತ್ತ ನಾಲ್ಕು, ಫುಜ ಆರೂ ಫರೆ, ಕುತ್ತಿಗೆ ಐದು ಕಾಲು’ ಎಂದು ಬೀಡಾ ತುಂಬಿಕೊಂಡಿದ್ದ ಬಾಯಿಯಲ್ಲೇ ಟೈಲರ್ ಚಂದ್ರ ಅಳತೆ ಹೇಳುತ್ತಿದ್ದರೆ ಚಾಚೂ ತಪ್ಪದೆ ಸಹಾಯಕ ಅದನ್ನು ಪುಸ್ತಕದಲ್ಲಿ ಬರೆಯುತ್ತಿದ್ದ. ಸರಕಾರಿ ಶಾಲಾ ಮಕ್ಕಳ ಒಂದು ಗುಂಪೇ ಅಂಗಡಿಯ ಹೊರ ಭಾಗದಲ್ಲಿದ್ದುದರಿಂದ ಗಾಳಿ ಸರಿಯಾಗಿ ಒಳ ಬರುತ್ತಿರಲಿಲ್ಲ. ಅವನೇ ಹೊಲೆದಿದ್ದ ಅಂಗಿಯ ಮೊದಲೆರಡು ಗುಂಡಿ ತೆಗೆದರೂ ಹಣೆ ಮೇಲೆಲ್ಲಾ ಬೆವರಿನ ಓಕುಳಿ. ಹಿನ್ನೆಲೆಯಲ್ಲಿ ಕ್ರಿಕೆಟ್ ಕಮೆಂಟ್ರಿ ರೆಡಿಯೋದಲ್ಲಿ ಪ್ರಸಾರಗೊಳ್ಳುತ್ತಿತ್ತು. ಕುತ್ತಿಗೆಯಲ್ಲಿ ನುರಿತ ವೈದ್ಯರ ಸ್ಕೆತೋಸ್ಕೋಪಿನಂತೆ ನೇತಾಡುತ್ತಿದ್ದ ಅಳತೆ ಟೇಪು ಅವನ ಗಾಂಭೀರ್ಯಕ್ಕೆ ಇನ್ನಷ್ಟು ಬೆರಗು ನೀಡುತ್ತಿತ್ತು. ದಪ್ಪ ಗಡ್ಡ- ಮೀಸೆ, ಎಣ್ಣೆ ಹಾಕಿ ಬಾಚಿದ ಚಂದದ ಕೂದಲ ಮಧ್ಯೆ ಗೀರೆಳೆದ ಬೈತಲೆಯನ್ನು ಕಂಡರೆ ಗದ್ದೆಯ ದಿಣ್ಣೆಯಂತೆ ಗೋಚರಿಸುತ್ತಿತ್ತು. ಚಂದ್ರನಿಗೆ ಹೊಲಿಯುವ ಕೆಲಸ. ಅವನು ಹರಿದ ವಸ್ತ್ರವನ್ನು ಮಾತ್ರ ಹೊಲಿಯುವುದಲ್ಲ; ಆ ಊರ ಅದೆಷ್ಟೋ ಮುರಿದ ಸಂಬಂಧಗಳನ್ನು ಜೋಡಿಸಿದ್ದ. ಊರವರೆಲ್ಲರೂ ಮದುವೆ- ಮುಂಜಿ ಸಮಾರಂಭಗಳಿಗೆ ಆಶೀರ್ವಾದ ಪಡೆಯಲು ಸಾಲು ನಿಂತಂತೆ ಊರವರಿಗೆ ತಿಳಿಸುವ ಮೊದಲೇ ಚಂದ್ರುವಿಗೆ ಕರೆಯೋಲೆ ಸಿಕ್ಕಿ, ಪ್ರಸಾದದಂತೆ ಅವನೇ ಹೊಲಿದುಕೊಟ್ಟ ಅಂಗಿ ಪಡಕೊಂಡು ಹೋಗುತ್ತಿದ್ದರು.

ಊರ ಮೊದಲ ತಿರುವಿನ ಮನೆಯ ರತ್ನಾಕರ ತನ್ನ ಊನಕಾಲೊಂದನ್ನು ಎಳೆಯುತ್ತಾ ಬರುತ್ತಿದ್ದ. ಅವನು ನಡೆದು ಬರುವಾಗ ಅವನ ನೆರಳು ದೊಡ್ಡದು ಚಿಕ್ಕದಾಗುವುದು ಕಂಡರೆ ಯಾರಿಗೂ ನಗು ಬಾರದಿರದು. ಬಲಗಾಲೆತ್ತಿ ಊನ ಎಡಗಾಲಿನ ಬಲದಲ್ಲಿ ನಿಲ್ಲುವಾಗ ಆ ನೆರಳೊಮ್ಮೆ ಮಗುವಿನಷ್ಟೇ ಸಣ್ಣದಾಗಿ- ಮತ್ತೆ ದೊಡ್ಡದಾಗಿ ಮುಳುಗೇಳುವವನಂತೆ ಹಾಸ್ಯವಾಗಿ ಕಾಣುತ್ತಿತ್ತು. ಇನ್ನಷ್ಟು ಹತ್ತಿರ ಬಂದವನು ಅಂಗಡಿಯ ಎದುರಲ್ಲಿ ನಿಂತ. ಅಷ್ಟರಲ್ಲಿ ಕ್ರಿಕೆಟ್ ಕಮೆಂಟ್ರಿಯು ಕುತೂಹಲ ಹೆಚ್ಚಿ ರೆಡಿಯೋ ಧ್ವನಿ ಜೋರಾಯಿತು. ರತ್ನಾಕರ ಕೂಗಿ ಕೇಳಿದ. ‘ಚಂದ್ರಣ್ಣಾ! ಸ್ಟೀವಾ ಔಟಾದ್ನಾ? ಎಷ್ಟು ರನ್ನಾಯಿತು?’ ಅಂಥ. ಕೇಳಿದ್ದೊಂದೆ ಅಂಗಡಿಯೆದುರಿಗೆ ಬಾಗಿಸಿ ಇಟ್ಟಿದ್ದ ‘ಜಂಟ್ಸ್ ಆಂಡ್ ಲೇಡಿಸ್ ಟೈಲರ್’ ಎಂದು ಬರೆದ ತಗಡಿನ ಬೋರ್ಡು

‘ಧಡಾಳ್’ ಸದ್ದು ಮಾಡಿ ಬೀಳುವುದಕ್ಕೂ ಸರಿಹೋಯಿತು.

‘ಸ್ಟೀಫಾ! ನಿನ್ನ ಫ್ಪವಾ’ ಎಂದು ಚಂದ್ರು ಕೋಪದಿಂದ ಕೂಗಿ ಹೇಳಿದ್ದು ಕೇಳಿತು. ಹೊರಗೆ ಬಂದವನೇ ಅಂಗಳದಲ್ಲಿ ಚಿತ್ರಿಸಿದಂತೆ ಬೀಡಾ ಉಗಿದಿಟ್ಟ ಸ್ಥಳಕ್ಕೆ ಮತ್ತೆ ಉಗುಳುವಾಗ ಪೆಡಂಭೂತ ಬೆಂಕಿಯುಗುಳುವಂತೆ ಕಂಡಿತು.

‘ಕಾಲು ಮಾತ್ರ ಸರಿ ಇಲ್ಲ ಅನ್ಕೊಂಡೆ. ಕಣ್ಣು ಕಾಣುವುದಿಲ್ವಾ?’

‘ಹಾಗಲ್ಲ ಚಂದ್ರಣ್ಣ ಸ್ವಲ್ಪ ಕಾಲು ತಾಗಿದ್ದೂಂತ’

‘ಎಂಥದು, ಯಾವಾಗಲೂ ನಿನಗೆ ಕಾಲೇ ತಾಗುವುದಾ? ನಿನ್ನ ಕಾಲು ಸರಿ ಇಲ್ಲದೆ ಹೀಗೆ. ಸರಿ ಇದ್ದರೆ ಆಗಾಗ ನನ್ನ ಮಾಡು ತಾಗಿಸಿ ಬೀಳಿಸುತ್ತಿದ್ದೀಯೋ ಏನೋ?’ ಎನ್ನುತ್ತಾ ಚಂದ್ರು ರೇಗಿದ.
ಮತ್ತೆ ಅಂಗಡಿಯ ಒಳಗೆ ಹೋದವನೇ ಮಕ್ಕಳ ಅಳತೆ ಬರೆದುಕೊಳ್ಳುವುದಕ್ಕೆ ನಿಂತ.
ಈ ಜಗಳವೆಲ್ಲಾ ಮಾಮೂಲಿ. ಆದ್ರೆ ಚಂದ್ರನ ಬಗ್ಗೆ ಯಾರಿಗೂ ಬೇಸರವಿಲ್ಲ. ಹೇಳುವುದನ್ನು ಹೇಳಿ ಮುಗಿಸುತ್ತಾನೆ ಅಷ್ಟೇ. ರತ್ನಾಕರ ಮಾತಿಲ್ಲದೆ ಬಂದು ಅಂಗಡಿಯ ತಿಟ್ಟೆಯ ಮೇಲೆ ಕೈ ಊರಿ ತನ್ನ ಪೃಷ್ಟವನ್ನೆತ್ತಿಟ್ಟ.

ಆಗಷ್ಟೇ ಉಗಿದಿದ್ದ ಬೀಡಾದ ತುಣುಕುಗಳ ಮೇಲೆ ಹಾರಾಡುತ್ತಿದ್ದ ನೊಣಗಳೆದ್ದು ಅವನ ಮುಖದಲ್ಲೆಲ್ಲಾ ಹರಿದಾಡಲು ‘ಹ ಛ್’ ಎಂದು ಅದನ್ನು ಓಡಿಸುತ್ತಾ ಅಲ್ಲೇ ಇಟ್ಟಿದ್ದ ದಿನ ಪತ್ರಿಕೆಯನ್ನು ಬಿಡಿಸಿ ಓದಲು ಶುರುವಿಟ್ಟ. ಒಳಗಿನ ಕ್ರಿಕೆಟ್ ಕಮೆಂಟ್ರಿ ಅವನಿಗೆ ಮಂದವಾಗತೊಡಗಿತು. ಮಧ್ಯೆ ಚಂದ್ರನ ಅಳತೆ ಲೆಕ್ಕವೂ ಕ್ಷೀಣವೆನಿಸಿ ಪತ್ರಿಕೆ ಓದುವುದರಲ್ಲೇ ತಲ್ಲೀನನಾದ.

ಬಿಸಿಲು ಆಗಷ್ಟೇ ಏರುಗತಿಯಲ್ಲಿತ್ತು. ನಿನ್ನೆ ಸುರಿದ ಮಳೆಯ ಬಿಂದುಗಳು ಗರಿಕೆ ಹುಲ್ಲಿನ ಮೇಲೆ ವಜ್ರಮಣಿಗಳಂತೆ ಪಳಪಳನೆ ಮಿಂಚುತ್ತಿದ್ದವು. ಕರೆಂಟು ತಂತಿಯ ಮೇಲೆ ಬಸ್ ಕಂಡೆಕ್ಟರ್ನಂತೆ ನೇತಾಡುತ್ತಿದ್ದ ಬಾವಲಿಯ ಶವ ಕರಗುತ್ತಿತ್ತು. ಅದರ ವಾಸನೆ ಗಾಳಿ ಬರುವಾಗಲೆಲ್ಲಾ ವ್ಯಾಪಿಸಿ ಕೊನೆಗೊಮ್ಮೆ ಪೇಪರಿನೊಳಗೆ ಮುಳುಗಿ ಹೋಗಿದ್ದ ರತ್ನಾಕರನನ್ನು ಎಚ್ಚರಿಸಿತಿರಬೇಕು. ‘ಸೀ ಸೀ’ ಎಂದು ಮೂಗೊರೆಸಿಕೊಂಡವನು ಪೇಪರನ್ನು ತಿಟ್ಟೆಯ ಮೇಲಿಟ್ಟು ಮಡಚಿದ. ಅಷ್ಟರಲ್ಲೇ ದೂರದಿಂದ ಸುಂದರಣ್ಣ ಬರುವುದು ಕಂಡಿತು. ಅದಾಗಲೇ ಮಕ್ಕಳ ಕ್ಯೂ ಕೂಡಾ ಕರಗುತ್ತಿತ್ತು. ಸುಂದರಣ್ಣನ ಕೆಂಪು ಪಂಚೆ ಧಡೂತಿ ದೇಹ ಸ್ಪಷ್ಟವಾಗಿದ್ದೊದೊಂದೇ, ‘ಚಂದ್ರಣ್ಣಾ... ಇಲ್ಲೇ ಕಾಡಲ್ಲೊಂದು ಉರುಳು ಹಾಕಿ ಬಂದಿದ್ದೆ. ಕಾಡುಹಂದಿ ಸಿಕ್ಕಿದಾ ಅಂತ ನೋಡಿ ಬರ್ತೀನಿ. ಮತ್ತೆ ಸುಂದ್ರಣ್ಣ ಬರ್ತಿದ್ದಾರೆ. ಮೊನ್ನೆ ಸಾಲ ಪಡೆದ ಹತ್ತು ರೂಪಾಯಿ ಆಗ್ಬೇಕು. ಇದ್ರೆ ಕೊಟ್ಬಿಡಿ. ನನ್ನ ಸಾಲಕ್ಕೆ ಬರ್ದಿಡಿ. ಒಟ್ಟಿಗೆ ಕೊಡ್ತೇನೆ’ ಅಂತ ರತ್ನಾಕರ ತಿಟ್ಟೆಯಿಂದಿಳಿದ.

‘ನಿನಗೆ ಯಾಕಪ್ಪಾ ಸಾಲ. ಸುಮ್ಮ ನೆ ಸಾಲ ಮಾಡಿ ಯಾಕೆ ಜೀವನ ಸಂಬಂಧಗಳನ್ನು ಹಾಳು ಮಾಡ್ಕೋತಿಯಾ" ಎಂದು ಚಂದ್ರ ಹೇಳಿದ್ದು ರತ್ನಾಕರನ ಕಿವಿಗೆ ಬಿತ್ತು. ಅವನು ಆಗಲೇ ಅಂಗಡಿಯ ಎಡ ಭಾಗಕ್ಕಿಳಿದು ಬೈಲು ದಾಟಿ ಕುಂಟಿಕೊಂಡು ಕಾಡು ದಾರಿ ಹಿಡಿದ.

‘ಓ... ಚಂದ್ರಾ, ಇದ್ಯೆಂಥ ಲಾಟ್ರಿ ಹೊಡ್ದದ್ದಾ? ಶಾಲೆ ಮಕ್ಕಳ ನೀಲಿ- ಬಿಳಿ ನಿನ್ಗೆ ಹೊಲಿಯುವುದಕ್ಕಾ? ಸರಿ, ಮುಗೀಲಿ ನಂದೂ ಒಂದು ಇದೆ’ ಅಂತ ತಿಟ್ಟೆ ಮೇಲೆ ಕೂತು ಪೇಪರೆತ್ತಿಕೊಂಡ. ಆಗಲೇ ಕೊನೆಯ ವಿದ್ಯಾರ್ಥಿಯ ಅಳತೆಯೂ ಮುಗಿದಿತ್ತು.

‘ಓ ನೀವಾ ಸುಂದ್ರಣ್ಣ... ಅದು ಎಂಥ ಮಾಡುವುದು. ಈ ಸರಕಾರಿ ಶಾಲೆ ಮಕ್ಳ ಅಪ್ಪಂದ್ರು ಎಲ್ರೂ ಹಣ ಕೊಡ್ತಾರಾ? ಪಾಪದವರ ಮಕ್ಕಳದ್ದು ಹೊಲಿಯದೆ ಕೂತಿರೋಕ್ಕಾಗುತ್ತಾ?’ ಅಂತ ಒಳ ಕರೆದ. ಸುಂದರ ಪ್ಲಾಸ್ಟಿಕ್ ಲಕೋಟೆ ಬಿಚ್ಚಿ ಬಟ್ಟೆ ಹೊರತೆಗೆದು ‘ನನ್ಗೊಂದು ಬಿಳಿ ಅಂಗಿ ಬೇಕು ಮಾರಾಯ. ಈ ವಾರ ಹೊಲಿದು ಕೊಡಬೇಕು’ ಅಂದ.

‘ಈ ವಾರ ಕಷ್ಟ ಸುಂದ್ರಣ್ಣಾ! ಆದ್ರೂ ಪ್ರಯತ್ನ ಮಾಡ್ತೀನಿ. ನೀವಲ್ವಾ? ಬಿಡೋಕಾಗುತ್ತಾ’

‘ನೋಡುವುದೇನೂ ಬೇಡ. ನನ್ಗೆ ಈ ವಾರವೇ ಬೇಕು. ಹಣ ಎಷ್ಟಾದ್ರೂ ಚಿಂತೆ ಇಲ್ಲ. ನೀನು ಮಾಡು ಅಂತೆ’

‘ಆಯ್ತು ಚಂದ್ರಣ್ಣಾ, ಕೊಡುವಾ’ ಎನ್ನುತ್ತಾ ಕಿಸೆಗೆ ಕೈ ಹಾಕಿ ಹತ್ತರ ನೋಟೊಂದನ್ನು ತೆಗೆದು ಸುಂದರನಿಗೆ ಚಾಚಿದ.

‘ಇದು ನಮ್ಮ ರತ್ನಾಕರನ ಸಾಲ. ತಗೊಳ್ಳಿ’ ಅಂದ.

‘ಹೋ ಅವನದ್ದಾ? ಉಪಕಾರವಿಲ್ಲದವನಿಗೆಲ್ಲಾ ಯಾಕೋ ಸಹಾಯ ಮಾಡ್ಲಿಕ್ಕೆ ಹೋಗ್ತೀಯಾ. ನಾನು ದೂರದಿಂದ ಬರುವಾಗಲೇ ಅವನು ಪರಾರಿ ಕಿತ್ತದ್ದು ನನಗೇನು ಕಾಣಲಿಲ್ಲವೇನು’ ಎನ್ನುತ್ತಾ ಹತ್ತರ ನೋಟನ್ನು ಕಿಸೆಗೆ ಹಾಕಿ ಕೊಂಡು ಸುಂದರಣ್ಣ ಹೊರಟು ಹೋದರು.

ಮೆಲ್ಲ ಮಾಡಿದ್ದ ರೆಡಿಯೋ ಧ್ವನಿಯನ್ನು ಎತ್ತರಿಸಿ, ಆ ಬಿಳಿ ವಸ್ತ್ರದ ಮೇಲೆ ಬರೆ ಮಾರ್ಕಿಂಗ್ ಮಾಡಲು ಶುರುವಿಟ್ಟ.

ಹಳತಾದ ಸಹಾಯಕನ ಹೊಲಿಗೆ ಯಂತ್ರದ ಸದ್ದು ‘ಕೀಂ... ಕ್ರಿಕ್’ ಧ್ವನಿ ಅಲ್ಲಿ ಅನುರಣಿಸತೊಡಗಿತು. ಚಂದ್ರ ತನ್ನೆರಡು ಹೆಣ್ಣು ಮಕ್ಕಳ ಶಾಲೆ ಫಿಸು ಕಟ್ಟಲು, ಮನೆ ಬಾಡಿಗೆ ಎಲ್ಲವನ್ನೂ ಮನಸ್ಸಿನಲ್ಲಿ ಲೆಕ್ಕ ಹಾಕುತ್ತಿದ್ದ. ಅದಾಗಲೇ ಕ್ರಿಕೆಟ್ ಕಾಮೆಂಟ್ರಿ ನಿಂತು ಹೋಗಿ ಇಂಗ್ಲೀಷ್ ವಾರ್ತೆಗಳು ಆರಂಭವಾದಾಗ ಊಟದ ನೆನಪಾಗಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಕೈ ತೊಳೆಯಲು ಹೊರಬಂದ. ಬಾಯಿಯಲ್ಲಿ ತುಂಬಿದ ಬೀಡಾವನ್ನು ಸರಿಯಾಗಿ ಮುಕ್ಕಳಿಸಿ, ‘ಕ್ಹಾ, ಖ್ಹೀ’ ಎಂದು ಉಗಿದು ಸುಸ್ತಾಗಿ ಅಂಗಡಿ ಜಗಲಿಗೆ ಬರಬೇಕಾದರೆ ಸೀದಿ ಸಾಬರು ತಮ್ಮ ಮಗನನ್ನು ಕರೆದುಕೊಂಡು ಬಂದಿದ್ದರು.

‘ಚಂದ್ರಾ, ಹೇಗಿದ್ದೀಯಪ್ಪಾ! ’

‘ನಾನು ಚೆನ್ನಾಗಿದ್ದೇನೆ ಸಾಬ್ರೇ. ನೀವು ಹೇಗಿದ್ದೀರಿ’

‘ಕಾಣುವುದಿಲ್ವಾ! ತಲೆಗೂದಲೆಲ್ಲಾ ನೆರೆತಿದೆ. ಇನ್ನೆಷ್ಟು ದಿನವೋ?. ಇವನಿಗೆ ಬೇರೆ ವಿದ್ಯೆ ಹತ್ತುವುದಿಲ್ಲ. ನಿನ್ನ ಸಹಾಯಕ್ಕಾದರೂ ಇದ್ದೂ ನಾಲ್ಕು ಜನರ ವಸ್ತ್ರ ಹೊಲಿಯಲಿ. ನಿಮ್ಮದೆಲ್ಲಾ ಅದೃಷ್ಟದ ಜನ್ಮ! ಕೆಲಸ ಇಲ್ಲ ಅಂತ ಇಲ್ವಲ್ಲಾ’ ಅಂದರು.

‘ಹಾಗೇನಿಲ್ಲ ಸಾಬ್ರೇ! ಎಲ್ಲ ಆ ದೇವರ ದಯೆ. ನಿಮ್ಮಂತವರ ಸಹಕಾರ. ಮಗನನ್ನು ಸೇರಿಸಿಕೊಳ್ಳೋಣ. ಸದ್ಯ ಸುಂದ್ರಣ್ಣ.....’ ಎಂದು ಮಾತು ಬಂದು ಚಂದ್ರ ಅರ್ಧ ನುಂಗಿ ಬಿಟ್ಟ.

‘ಏನು ಸುಂದರನ ಅಂಗಿ ಹೊಲೀಲಿಕ್ಕಿದೆಯಾ. ಅವನು ಹರಾಂ! ಅವನ ಅಂಗಿ ನನ್ನ ಮಗನಲ್ಲಿ ಹೊಲಿದರೆ ಆಗಲಿಕ್ಕಿಲ್ಲ. ಅವನದ್ದು ಆದ ಮೇಲೆ ಹೇಳು ಮಗನನ್ನು ಮತ್ತೆ ಕಳಿಸುತ್ತೇನೆ’ ಎಂದು ಮುಖ ಕೆಂಪಗೆ ಮಾಡಿಕೊಂಡು ಬಿಟ್ಟರು. ಆಗಷ್ಟೇ ಬೀಸಿದ ಸಣ್ಣ ಗಾಳಿಗೆ ಅವರ ತಲೆ ಮೇಲಿದ್ದ ಟವೆಲು ಹಾರಿತು. ಅಷ್ಟರಲ್ಲಿ ಪಕ್ಕದ ಮಸೀದಿಯ ಬಾಂಗ್ ಕೂಡಾ ಕೇಳಿಸಿತು.

‘ನೋಡು ಅಪಶಕುನ ಹಿಡಿದವನು ಆ ಸುಂದರ. ಅವನ ಸುದ್ದಿ ತೆಗೆದದ್ದೇ ಬಂತು ನನ್ನ ಟೆವೆಲು ಹಾರಿ ಕೆಸರಿಗೆ ಬೀಳಬೇಕು. ಅದೂ ಮಸೀದಿಗೆ ಹೋಗಲಿಕ್ಕಿರುವಾಗ’ ಎಂದು ಆ ಟವೆಲನ್ನು ನೆಲಕ್ಕೆ ನೂರು ಬಾರಿ ಕೊಡವಿಕೊಂಡು ಅವರು ಮಸೀದಿಯ ಕಡೆಗೆ ಹೊರಟು ಬಿಟ್ಟರು.ಅವರು ನಡೆಯುವಾಗ ಚಂದ್ರನೇ ಹೊಲಿದಿದ್ದ ಬಿಳಿಯ ಅಂಗಿ ಹಿಂದೆ ಹವಾಯಿ ಚಪ್ಪಲಿಯು ಕೆಸರಲ್ಲಿ ಚಿತ್ತಾರ ಬಿಡಿಸುತ್ತಿತ್ತು. ಹೊಲಿದ ಅಂಗಿಯ ಮಜೂರಿ ಕೇಳಲು ಬಾಯಿ ತೆರೆಯುವುದರೊಳಗೆ ಇದೆಲ್ಲವೂ ನಡೆದೂ ಹೋಗಿತ್ತು.

‘ಉಫ್’ ಎಂದು ದೀರ್ಘ ನಿಟ್ಟುಸಿರೆಳೆದ ಚಂದ್ರು ಅಂಗಡಿಯೊಳಗೆ ಬಂದ. ಅಸ್ತವ್ಯಸ್ತವಾಗಿ ಬಿದ್ದಿದ್ದ ಪೇಪರನ್ನು ಸರಿಪಡಿಸಿ ಇಟ್ಟು ಒಳಬಂದು ಮೊದಲ ಪುಟ ಹರಿದು ಹೋಗಿದ್ದ ಲೆಕ್ಕಪುಸ್ತಕವನ್ನೊಮ್ಮೆ ನೋಡಿದ.
‘ಅಬ್ಬಾ! ಎಷ್ಟು ಹಣ ಬಾಕಿ ಇದೆ’ ಲೆಕ್ಕ ಹಾಕಿದರೆ ಎರಡು ಹೊಲಿಗೆ ಯಂತ್ರ ಕೊಂಡು ಕೊಳ್ಳಬಹುದಿತ್ತು. ಪುಸ್ತಕ ಮಡಚಿಟ್ಟ. ಹೊಲಿಯುವ ಯಂತ್ರದ ಸದ್ದು ಮತ್ತೆ ಅಲ್ಲೆಲ್ಲಾ ನೆಲೆಸಲು ಎಲ್ಲೋ ಹೊರಟಿದ್ದ ಗುಬ್ಬಚ್ಚಿಯೂ ಗೂಡು ಸೇರಿತು.

ಮರುದಿನ ಬೆಳಗ್ಗೆ ಪೋಲಿಸ್ ವ್ಯಾನು ಬಂದು ಚಂದ್ರನ ಅಂಗಡಿಯ ಬಳಿ ನಿಂತಿತ್ತು. ಸುಂದರನಿಗೂ ಸೀದಿ ಬ್ಯಾರಿಗೂ ಆಗಿ ಬರುವುದಿಲ್ಲ. ಇಬ್ಬರಿಗೂ ಹಾವು-ಮುಂಗುಸಿಯಂತಹ ದ್ವೇಷ. ಅದಕ್ಕೆ ಕಾರಣವುಂಟು. ಅವರ ಹಿರಿಯರು ಜಾಗಕ್ಕೆ ಮಾಡಿದ ತಕರಾರಿನ್ನೂ ಅವರ ಜನ್ಮಾಂತರ ಬಳುವಳಿಯಾಗಿ ಬಂದಿತ್ತು. ಸುಂದರನಪ್ಪ ಬಾಬಣ್ಣ ಪಾಪದ ಜನ. ಸೀದಿ ಬ್ಯಾರಿಯಷ್ಟೇ ಹಿರಿಯರು. ಆದರೆ ಅವರ ಕಾಲಕ್ಕೆ ಜಾಗದ ತಕರಾರಿಗೆ ಹೋಗಿರಲಿಲ್ಲ. ಆದರೆ ಸುಂದರನು ಬೆಳೆದು ಬರುತ್ತಿದ್ದಂತೆ ಸೀದಿ ಬ್ಯಾರಿ ಜೊತೆ ಜಗಳಕ್ಕೆ ನಿಲ್ಲತೊಡಗಿದ. ಇಬ್ಬರೂ ಸದ್ಯಕ್ಕೆ ಊರಿನಲ್ಲಿ ಸ್ಥಿತಿವಂತರು. ಮೊನ್ನೆ ದಿನ ಸೀದಿ ಬ್ಯಾರಿಯ ಆಡೊಂದು ಸುಂದರನ ಮನೆಗೆ ಬಂದಿತೆಂದು ಸುಂದರ ಐನಾತಿಗಳಲ್ಲಿ ಓಡಿಸಲು ಹೇಳಿದ್ದಾನೆ. ದುರಾದೃಷ್ಟವಶಾತ್ ಓಡಿಸುವ ಭರದಲ್ಲಿ ಆಡು ತೆಂಗಿಗಾಗಿ ತೆಗೆದಿದ್ದ ಗುಂಡಿಯೊಳಗೆ ಬಿದ್ದು ಕಾಲು ಮುರಿದುಕೊಂಡಿದೆ. ಇಷ್ಟೇ ಸಾಕಾಯಿತು. ಊರಲ್ಲಿ ಗಾಳಿ ಹಾಕುವವರೇ ಇರುವ ಕಾರಣ, ಈಗ ಜಾಗದ ತಕಾರಾರು ಕೋಮುವೈಷಮ್ಯಕ್ಕೆ ತಿರುಗಿದೆ. ಸದ್ಯ ಪೋಲಿಸರೇ ಬಂದು ಇತ್ಯರ್ಥ ಮಾಡಬೇಕು. ಇಬ್ಬರೂ ಊರಿನ ಪ್ರಭಾವಿಗಳೇ ಅಲ್ಲವೇ!

ಊರಿನ ಹೃದಯ ಭಾಗಕ್ಕೆ ಒಂದು ದಿನಸಿ ಅಂಗಡಿ ಇದ್ದರೆ ಅದರ ಪಕ್ಕವೇ ಚಂದ್ರನ ಟೈಲರ್ ಶಾಪು. ಜನರೆಲ್ಲಾ ಸಾಮಾನು ಕೊಳ್ಳಲು ಬಂದರೆ ಚಂದ್ರನ ತಿಟ್ಟೆಯಲ್ಲಿ ಕುಳಿತು ಮಾತನಾಡದೆ ಹೋಗುವುದಿಲ್ಲ. ಅಲ್ಲೆಲ್ಲವೂ ಸುಂದರಣ್ಣ ಮತ್ತು ಸೀದಿ ಬ್ಯಾರಿಯ ಪರ ಮತ್ತು ವಿರೋಧದ ಧ್ವನಿಗಳು. ಒಮ್ಮೊಮ್ಮೆ ರಾಜಕೀಯ ಚರ್ಚೆಯಾಗಿ ತಲುಪುವುದು ಮತ್ತೆ ಜಾಗದ ತಕರಾರಿಗೆ. ಚಂದ್ರ ಈ ಗಲಾಟೆಗೆಂದೂ ಹೋಗದವನು. ಅವರ ಪರ - ಇವರ ಪರ ಮಾತು ಬರುವಾಗ ಹೊಲಿಗೆ ಹಾಕಲಿಕ್ಕೆದೆಯೆಂದು ತಲೆ ತಪ್ಪಿಸಿ ಬಂದು ತನ್ನ ಕೆಲಸದಲ್ಲೇ ತೊಡಗುತ್ತಿದ್ದವನು.

ಈಗ ಊರು ಬದಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡ ಎರಡು ಕಟ್ಟಡಗಳು ಬಂದಿದೆ. ಬಲ ಮತ್ತು ಎಡಕ್ಕೆ ಸೂಪರ್ ಮಾರ್ಕೆಟ್ಗಳು ಬಂದಿವೆ. ಸೀದಿ ಬ್ಯಾರಿಯ ಪರ ಮಾತನಾಡುವವರು ಎಡ ಕಟ್ಟಡಕ್ಕೆ ಸಾಮಾನು ಕೊಳ್ಳಲು ಬರುತ್ತಾರೆ. ಬಲಕ್ಕೆ ಸುಂದರಣ್ಣನ ಜನ. ಸೀದಿ ಬ್ಯಾರಿಗೆ ವಯಸ್ಸಾಗಿದೆ. ಮಕ್ಕಳಿಬ್ಬರು ಫಾರಿನ್ನಿನಲ್ಲಿ ದುಡಿಯುತ್ತಿದ್ದಾರೆ. ಒಂದೇ ಧ್ವಜಸ್ಥಂಭ ಇದ್ದ ಊರಲ್ಲಿ ಎರಡು ಇದೆ. ಎಕ್ಕೆಲಗಳಲ್ಲಿ ಎರಡು ಬಣ್ಣದ ಬಾವುಟಗಳು ಹಾರಾಡುತ್ತಿವೆ. ಬಾವುಟಗಳ ಬಣ್ಣ ನೋಡದ ಪಾರಿವಾಳಗಳು ಆ ಕಂಬಕ್ಕೊಮ್ಮೆ ಈ ಕಂಬಕ್ಕೊಮ್ಮೆ ಹಾರಾಡುತ್ತವೆ. ಫ್ಲೆಕ್ಸ್ಗಳು ದುರುಗುಟ್ಟಿ ನೋಡುತ್ತಿರುತ್ತದೆ.

ಆದರೆ ಹತ್ತಿರದ ಹಳೆಯ ಕಟ್ಟಡದ ಬಳಿ ಇದ್ದ ಚಂದ್ರನ ಅಂಗಡಿ ಯಥಾಸ್ಥಿತಿಯಲ್ಲಿದೆ. ಎರಡೂ ವಿಭಾಗದವರು ಚಂದ್ರನ ತಿಟ್ಟೆಗೆ ಬಂದು ಕೂರುತ್ತಾರೆ, ಮಾತನಾಡುತ್ತಾರೆ, ಹೋಗುತ್ತಾರೆ.
ನೆರೆತ ಕೂದಲು, ಬೀಡಾ ತಿಂದು ಕೆಂಪಿಟ್ಟಿಗೆಯಂತಾದ ದಂತ ಪಂಕ್ತಿಗಳು. ಜನರನ್ನು ಕಂಡರೆ ನಸು ನಗು ಬೀರುತ್ತಾನೆ. ರೆಡಿಯೋ ಹಾಕಿರುತ್ತಾನೆ. ಚಿತ್ರ ಗೀತೆಯೋ, ಕ್ರಿಕೆಟ್ ಕಾಮೆಂಟ್ರಿಯೋ ಪ್ರಸಾರವಾಗುತ್ತಿರುತ್ತದೆ. ಹಿಂದಿನಂತೆ ಯಾರದ್ದೂ ಹೊಲಿಯುವ ಕೆಲಸವಿಲ್ಲದೆ ಯಾರಾದರೂ ಆರ್ಡರ್ ಕೊಟ್ಟ ಕೈಗವಸು, ಮುಖಗವಸಿನ ಕೆಲಸ ಆತುರವಿಲ್ಲದೆ ಮುಗಿಸುತ್ತಾನೆ. ಮದುವೆ ವಯಸ್ಸಿಗೆ ಬಂದ ಹೆಣ್ಮಕ್ಕಳ ಬಗ್ಗೆ ಚಿಂತಿಸುತ್ತಾನೆ. "ಹುಡುಗಿ ಅಪ್ಪ ಟೈಲರ್" ಅಂತೆ ಎಂದು ತಾತ್ಸಾರದಿಂದ ಹೇಳಿ ಬಿಟ್ಟು ಹೋದ ಕೋಪವನ್ನು ತೀರಿಸಲು ಟೈಲರಿಂಗ್ ಮೆಷಿನ್ನಿನ ಪೆಡಲ್ ತುಳಿಯುತ್ತಿರುತ್ತಾನೆ.

ಆ ದಿನ ಬೀಡ ಉಗಿಯಲೆಂದು ಹೊರಗೆ ಬಂದವನ ಎದುರಿಗೆ ಬುರ್ರೆಂದ್ ಬ್ರೇಕು ಹಾಕಿ ಆ ಬಿಳಿ ಬಣ್ಣದ ಕಾರು ನಿಲ್ಲುವಾಗ ಬಾಯಿಗೆ ಬಂದ ಉಗುಳೂ ಒಳ ಹೋದಂತಾಗಿ ಚಂದ್ರ ಸುಮ್ಮನೆ ನಿಂತು ಬಿಟ್ಟ. ನೋಡಿದರೆ ಸೀದಿ ಬ್ಯಾರಿಯ ಸಣ್ಣ ಮಗ. ಒಂದು ಬಿಳಿ ಲಕೋಟೆಯನ್ನು ತೆಗೆದು ಅಂಗಡಿಗೆ ಬಂದ. ಕಪ್ಪು ಕನ್ನಡಕ, ಸೆಟೆದು ನಿಂತ ಎದೆಗೆ ಅಂಟಿಕೊಂಡ ಟೀ ಶರ್ಟ್, ಅಲ್ಲಲ್ಲಿ ತೇಪ ಹಚ್ಚಿದಂತೆ ಕಾಣುವ ಸ್ಕ್ರಾಚ್ ಪ್ಯಾಂಟ್, ಗಮಗಮಿಸುವ ಅತ್ತರಿನ ಪರಿಮಳ.

‘ಓ ಚಂದ್ರಾ ಅಲ್ವಾ? ನನ್ನ ಪ್ಯಾಂಟ್ ಒಂದು ಆಂಕಲ್ ಕಟ್ಟಿಂಗ್ ಇದೆ. ಅಳತೆಗೆ ಬೇರೆ ಪ್ಯಾಂಟ್ ಇಟ್ಟಿದ್ದೇನೆ. ಸ್ವಲ್ಪ ಮಾಡಿಕೊಡು. ಸಂಜೆ ಬರ್ತೇನೆ ಎಷ್ಟಾಗ್ತದೇಂಥ ಹೇಳು’ ಎಂದು ನೂರರ ನೋಟೊಂದನ್ನು ಕೊಟ್ಟು ಹೊರಟೇ ಬಿಟ್ಟ.

‘ಅಬ್ಬಾ, ಮಕ್ಕಳು ಎಷ್ಟು ಬದಲಾದರು. ಸೀದಿ ಬ್ಯಾರಿ ಹೊಲಿಗೆ ಕಲಿಸಲು ನನ್ನ ಬಳಿ ಕರೆದುಕೊಂಡು ಬಂದ ಅದೇ ಹುಡುಗ. ‘ಬಾ, ಹೋಗು’ ಅನ್ನುವಷ್ಟು ಚಿಕ್ಕವನಾದ’ ಮನಸ್ಸಿನಲ್ಲಿ ಅಂದುಕೊಂಡು ಪ್ಯಾಂಟ್ ತೆರೆದು ನೋಡಿದ. ಬೆಲೆ ಬಾಳುವ ‘ವ್ಯಾನುಸನ್’ ಷರಾಯಿ. ಎಲ್ಲವೂ ‘ರೆಡಿ ಮೇಡ್’ನ ಕಾಲ. ಈಗ ಹೊಲಿದು ಹಾಕುವುದರ ಬದಲು ಫಿಟ್ಟಿಂಗಿನ ಕಾಲ. ನೇರ ಅಳತೆ ನೋಡಿ ಅದಕ್ಕೆ ತಕ್ಕಂತೆ ಕತ್ತರಿಸಿ ಹೊಲಿದ.
ಸಂಜೆಗೆ ಮತ್ತೆ ಕಾರ್ ಬಂತು. ಹೊರಗಿಳಿದು ಅಂಗಡಿಗೆ ಬಂದವನು ಶೂ ಕಳಚದೆ ಒಳ ಬಂದ. ಪ್ಯಾಂಟ್ ಪರೀಕ್ಷಿಸಿದ. ಅವನಿಗೆ ಸಮಾಧಾನವಾಗಲಿಲ್ಲ.

‘ಪ್ಯಾಂಟ್ ಕೊಟ್ಟರೆ ಹೊಲಿಯಲೂ ಬರುವುದಿಲ್ಲ. ಇರ್ಲಿ ಬಿಡಿ. ಈ ಮುದುಕರಿಗೆ ಹೇಳಿ ಏನು ಪ್ರಯೋಜನ’ ಎಂದು ಎತ್ತಿಕೊಂಡು ಹೊರಟ. ಅವನ ಮುಖದಲ್ಲಿ ಮೂದಲಿಕೆ ಎದ್ದು ಕಾಣುತ್ತಿತ್ತು. ಚಂದ್ರ ಮೊದಲ ಪುಟ ಹರಿದಿದ್ದ ಲೆಕ್ಕ ಪುಸ್ತಕಕ್ಕೆ ನೋಡಿದ, ಊರ ಅನೇಕರ ಹೆಸರುಗಳು ಹಳೆಯ ಸಾಲದ ಲೆಕ್ಕ ಬರೆಯಲಾಗಿತ್ತು.

ಮರುದಿನ ಸೀದಿ ಬ್ಯಾರಿ ತೀರಿ ಹೋಗಿದ್ದರು. ಊರ ಎಡಭಾಗದ ಅಂಗಡಿಗಳೆಲ್ಲಾ ಬಂದಾಗಿದ್ದವು. ಮಸೀದಿಯ ಬಳಿ ಜನಜಂಗುಳಿ ನೆರೆದಿತ್ತು. ಊರ ರಸ್ತೆ ತುಂಬಾ ಕಾರುಗಳ ಓಡಾಟ. ಅಂಗಡಿಗೆ ಬಂದ ಚಂದ್ರನಿಗೆ ವಿಷಯ ತಿಳಿದು ಬೇಸರವಾಯಿತೋ, ವಸ್ತ್ರ ಹೊಲಿದವನಿಗೆ ಸಂಬಂಧ ಹೊಲಿಯಬೇಕೆಂದು ಮನಸ್ಸು ಕಾಡಿತೋ? ಗೊತ್ತಿಲ್ಲ. ಯಾವುದೋ ಕಾಲಕ್ಕೆ ತಂದಿಟ್ಟು ಅಂಗಡಿಯೊಳಗೆ ಅನಾಥವಾಗಿ ಮಲಗಿದ್ದ ನಾಲ್ಕು ಮೀಟರ್ ಬಿಳಿ ಬಟ್ಟೆಯನ್ನು ಕತ್ತರಿಸಿದ. ಸರಿಯಾಗಿ ಮಡಚಿ ಲಕೋಟೆಯೊಳಗೆ ಭದ್ರವಾಗಿಟ್ಟು ಅಂಗಡಿ ಬಾಗಿಲೆಳೆದು ಮರಣದ ಮನೆಗೆ ಹೊರಟ.

ಕಿಕ್ಕಿರಿದ ಜನ, ಸೀದಿ ಸಾಬರ ಬೃಹತ್ ಗೇಟಿನ ಬಳಿ ತುಂಬಾ ವಾಹನಗಳು. ತನ್ನ ಸೈಕಲ್ ಅಲ್ಲೇ ಮಣ್ಣಿಗೆ ಒರಗಿಸಿ ಒಳಗೆ ಪ್ರವೇಶಿಸಿದ. ತುಂಬಿದ ಜಗಲಿಯಲ್ಲಿ ನೆರೆದಿದ್ದ ಜನ ಸಮೂಹ. ಒಳಗೆ ಮುಂದಡಿಯಿಟ್ಟವನೇ ದೈರ್ಯ ಮಾಡಿಕೊಂಡು ಸಂತಾಪ ಸೂಚಿಸಿದ. ನಿಶ್ಚಲವಾಗಿ ಮಲಗಿದ್ದ ಸೀದಿ ಬ್ಯಾರಿಯವರ ಮುಖವನ್ನೊಮ್ಮೆ ದಿಟ್ಟಿಸಿದ. ‘ನಿನ್ನ ಸಾಲ ಬಾಕಿಯುಂಟು ಮಾರಾಯ, ಕ್ಷಮಿಸು’ ಎನ್ನುವಷ್ಟು ದೀನವಾಗಿ ಕೇಳಿಕೊಳ್ಳುವಂತಿತ್ತು ಅವರ ಮುಖ. ಮೆಲ್ಲಗೆ ಹೊರಬಂದು ಕಣ್ಣೊರೆಸಿಕೊಳ್ಳುತ್ತಿದ್ದ ಸೀದಿ ಬ್ಯಾರಿಯ ಮಗನ ಬಳಿ ಬಂದ.

‘ಅಣ್ಣಾ... ಇದು ನಮ್ಮ ಸುಂದರಣ್ಣ ಕೊಟ್ಟರು. ಸೀದಿ ಬ್ಯಾರಿಯ ಮರಣಕ್ಕೆ ಹೊದಿಸಲು ನನ್ನ ಲೆಕ್ಕದಲ್ಲೆಂದು ಹೇಳಿದರು. ಅವರಿಗೂ ಪಶ್ಚಾತಾಪ ಬಂದಿದೆ, ಗಲಾಟೆ ಎಲ್ಲ ಸಾಕಾಗಿದೆ’ ಎಂದು ಬಿಳಿ ಬಟ್ಟೆ ಮುಂದಿಟ್ಟ.

‘ಬೇವರ್ಸಿ, ಹರಾಮಿ ಅವ್ನು. ಅಪ್ಪ ಸಾಯುವುದನ್ನೇ ಕಾಯ್ತಿದ್ದಿರಬೇಕು. ನೀನು ಅವನ ವಕಾಲತ್ತು ವಹಿಸಿ ಬರ್ತಿದ್ದೀಯಾ. ನನ್ನ ಕಣ್ಣಿಗೆ ಕಾಣಕೂಡದು’ ಎಂದು ಗದರಿಸಿ ಬಿಟ್ಟ. ಅಷ್ಟರಲ್ಲಿ ಅಲ್ಲಿ ಗಸುಗುಸು ಆರಂಭವಾಗಿತ್ತು. ‘ಅಣ್ಣಾ ಅವ್ನು ಅವರದ್ದೇ ಜನ. ನನ್ನ ಪ್ಯಾಂಟ್ ಹಾಳು ಮಾಡುವಾಗ್ಲೇ ಅಂದ್ಕೊಂಡೆ’ ಕಿರಿಯ ಮಗ ಅಂದಿದ್ದು ಕೇಳಿಸಿತು.

ಲೆಕ್ಕವೆಲ್ಲವೂ ತಲೆಕೆಳಗಾದ ಚಂದ್ರ ವಾದಿಸಲು ನಿಲ್ಲಲಿಲ್ಲ. ಕೈಯಲ್ಲಿದ್ದ ಬಟ್ಟೆಯೊಂದಿಗೆ ಸೀದಾ ಹೊರಟು ಅಂಗಡಿಗೆ ಬಂದ. ಅಂಗಡಿಯ ಹೊರಗಡೆ ಬಲಗಡೆಯವರ ಗುಂಪು ನೆರೆದಿತ್ತು.

‘ಚಂದ್ರ ಅವ್ರ ಜನ! ಈ ಸೀದಿ ಬ್ಯಾರಿ ಸತ್ರೆ ಇವನು ಬಾಗಿಲು ಹಾಕುವಷ್ಟು ಉದಾರಿನಾ?, ಇವ್ನು ಅವ್ರದ್ದೇ ಜನ ಮಾರಾಯ’ ಎಂದು ಯಾರೋ ಹೇಳಿದ್ದು ಕೇಳಿಸಿತು. ಚಂದ್ರ ಒಳ ಹೋದವನ ಅಂಗಡಿಯ ಬಾಗಿಲು ಹಾಕಿಕೊಂಡು ಜೋರಾಗಿ ಅತ್ತ. ‘ಮನುಷ್ಯ ಸಂಬಂಧ ಹೊಲಿಯಲಾಗದ ನನ್ನದೂ ಒಂದು ಬದುಕೇ?’ ಅನಿಸಿತವನಿಗೆ.

ಮುಂದಿನ ಎರಡು ದಿನ ಟೈಲರ್ ಚಂದ್ರನ ಅಂಗಡಿ ತೆರೆಯಲಿಲ್ಲ. ಚಂದ್ರನ ಮಕ್ಕಳು ಅಂಗಡಿಗೆ ಬಂದರು. ಬಾಗಿಲು ಹಾಕಿದಂತಿತ್ತು. ಅಪ್ಪ ಕೆಲವು ಸಲ ಬೇಸರವಾದರೆ ಸುಬ್ರಹ್ಮಣ್ಯಕ್ಕೋ, ಧರ್ಮಸ್ಥಳಕ್ಕೋ ಹೋಗುವ ಅಭ್ಯಾಸವಿದ್ದುದರಿಂದ ಹಾಗೇ ಮನೆಗೆ ಬಂದರು. ಚಂದ್ರ ಅಂತರ್ಧಾನವಾಗಿ ಮೂರನೇ ದಿನಕ್ಕೆ ಊರಲ್ಲಿ ವಿಪರೀತ ವಾಸನೆ. ಯಾರೋ ಒಂದಿಬ್ಬರು ಸಂಶಯ ಹುಟ್ಟಿ ಅಂಗಡಿ ಬಳಿಗೆ ಬಂದು ಬಾಗಿಲು ಒಡೆದರು. ಬಾಗಿ ಬೆಂಡಾಗಿದ್ದ ಫ್ಯಾನಿನಲ್ಲಿ ಕೊಳೆತ ಶವ ತೂಗುತ್ತಿತ್ತು.

ಮರುದಿನ ಒಂದೇ ಮುದ್ರಣಾಲಯದಲ್ಲಿ ಅಚ್ಚಾಗಲಿರು ‘ಜಸ್ಟೀಸ್ ಪೋರ್ ಚಂದ್ರಣ್ಣ’ ಎಂಬ ಫ್ಲೆಕ್ಸ್ ಮತ್ತು ‘ಸಾಲದಿಂದ ಬೇಸತ್ತು ಆತ್ಮಹತ್ಯೆ’ ಎಂದು ಶರಾ ಬರೆವ ಪತ್ರಿಕೆಗಳನ್ನು ನೆನೆದು ಟೇಬಲಿನ ಮೇಲಿಟ್ಟ ಲೆಕ್ಕ ಪುಸ್ತಕ ಗಾಳಿಯಲ್ಲಿ ತೆರೆಯುತ್ತ ಮುಚ್ಚುತ್ತಾ ಹಾರಾಡುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.