ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಮಸರ ಗ್ರಾಮ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ಎನ್ನುವ ಶಾಲೆ ಮುಂದೆ ತೂಗಿಹಾಕಿದ್ದ ಬೋರ್ಡ್ ಧೂಳಿಗೆ ಮಸುಕಾಗಿದ್ದು, ಅಲ್ಲಲ್ಲಿ ಮಳೆ ಗಾಳಿಗೆ ತುಕ್ಕು ಹಿಡಿದಂತೆ ಕಾಣುತ್ತಿರುವುದು, ಹತ್ತನೇ ತರಗತಿಯಲ್ಲಿ ಇದ್ದ ಮಹೇಶನಿಗೆ ಬೇಸರ ತರಿಸುವ ಸಂಗತಿಯಾಗಿತ್ತು. ಅದನ್ನು ಶಾಲೆಯ ಹೆಡ್ ಮಾಸ್ತರ್ ರಾಮಚಂದ್ರಪ್ಪ ಅವರಿಗೆ ಹೇಳುವ ಎಂದರೆ, ಧೈರ್ಯ ಸಾಕಾಗುವುದಿಲ್ಲ. ಎಲ್ಲಿ ಬೆತ್ತದಿಂದ ಹರಿದ ಚಡ್ಡಿ ಜಾರುವ ಹಾಗೆ ಹೊಡೆಯುತ್ತಾರೋ ಎಂದು ಭಯ. ಅಮ್ಮನಿಗೆ ಎಷ್ಟೋಸಲ ಹೇಳಿದ್ದುಂಟು, ಅಪ್ಪನ ಹತ್ತಿರ ದುಡ್ಡು ಕೊಡಿಸು ಹೊಸ ಬೋರ್ಡ್ ಮಾಡಿಸುವ ಎಂದು, ಅಮ್ಮ"ನಮ್ಮ ಹತ್ತಿರ ದುಡ್ಡಿದ್ದರೆ ಸೋರುವ ಮನೆ ಮಾಳಿಗೆ ಸರಿ ಮಾಡಿಸುತ್ತಿರಲಿಲ್ವ" ಎಂದು ಹೇಳಿದ್ದೂ ಇದೆ.

ಹೊಸ ಬೋರ್ಡ್ ಮಾಡಿಸಲು ಬೇಕಾದ ಹಣ ಒಪ್ಪಮಾಡಲು ಏನಾದರೂ ಒಂದು ಪ್ಲಾನ್ ಮಾಡಬೇಕಾಗಿತ್ತು. ಸರ್ಕಾರಿ ಜಾಗದಲ್ಲಿ ಬೆಳೆದಿದ್ದ ಬಾರು ಹುಣಿಸೆಮರಗಳಿಂದ ಕಾಯಿ ಉದುರಿಸಿಕೊಂಡು ಸಿದ್ಧಲಿಂಗಪ್ಪನ ಅಂಗಡಿಯಲ್ಲಿ ಮಾರಿದರೆ ಹೇಗೆ ಎಂದು ಒಂದು ಆಲೋಚನೆ ಮೂಡಿತು. ಆದರೆ ಅದು ಊರ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಿಂಗೇಗೌಡರ ಸುಪರ್ದಿಯಲ್ಲಿ ಇದೆ ಎಂದು ಕೇಳಿ ಮುಖ ಸಪ್ಪಗಾಗಿತ್ತು.

ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಮಸರದಲ್ಲಿ ಪ್ರಾರಂಭವಾಗಿ ಸುಮಾರು ಮೂರು ವರುಷಗಳಾಗಿತ್ತು. ಅದು ಒಂದು ಖಾಸಗಿ ಶಾಲೆಯಾಗಿದ್ದು, ಊರಲ್ಲಿ ಶ್ರೀಮಂತ ಎನಿಸಿಕೊಂಡ ಗೋವಿಂದಯ್ಯನವರು ಅವರಿವರ ಕೈ ಕಾಲು ಹಿಡಿದು, ತಮ್ಮಲ್ಲಿದ್ದ ಸ್ವಲ್ಪ ಹಣ ಹಾಕಿ, ಮೂರು ಸಣ್ಣ ಕೊಠಡಿಗಳಲ್ಲಿ ಪ್ರೌಢಶಾಲೆ ಪ್ರಾರಂಭ ಮಾಡಿದ್ದರು. ಸುತ್ತ ಹತ್ತು ಊರಲ್ಲಿ ಪ್ರೌಢಶಾಲೆ ಇರಲಿಲ್ಲ, ಪ್ರೌಢಶಾಲೆಗೆ ಹತ್ತು ಮೈಲಿ ದೂರದ ಕೊಡಿಗೇನಹಳ್ಳಿಗೆ ಹೋಗಬೇಕಾಗಿತ್ತು. ಎಷ್ಟೋಜನ ಹೆಣ್ಣುಮಕ್ಕಳು ಏಳನೇ ತರಗತಿ ಮುಗಿಸಿ ಮನೆಯಲ್ಲಿ ಇದ್ದರು. ಹುಡುಗರು ಕೊಡಿಗೇನಹಳ್ಳಿಗೆ ನಡೆದು ಹೋಗುತ್ತಿದ್ದರು, ಇಲ್ಲ ಅಲ್ಲೇ ಯಾರ ಮನೆಯಲ್ಲಾದರೂ ಇದ್ದು ಓದಿಕೊಳ್ಳುತ್ತಿದ್ದರು. ಇದೆಲ್ಲ ಮಾಡಲಾಗದ ಎಷ್ಟೋ ಹುಡುಗರು ಬೇಸಾಯಕ್ಕೆ ಅಪ್ಪನಿಗೆ ಸಹಾಯವಾಗಿ ನಿಂತಿದ್ದರು. ಮಕ್ಕಳು ಮುಂದೆ ಓದಲಾಗದೆ ಇರುವುದ ಕಂಡು ಗೋವಿಂದಯ್ಯನವರು ಶಾಲೆಯನ್ನು ಪ್ರಾರಂಭಿಸಿ, ಏಳನೇ ತರಗತಿ ಮುಗಿಸಿ ಮನೆಯಲ್ಲಿ ಇದ್ದ ಎಲ್ಲರನ್ನು ಶಾಲೆಗೆ ಸೇರಿಸಿಕೊಂಡು ಎಂಟನೇ ತರಗತಿಯನ್ನು ಪ್ರಾರಂಭಿಸಿದ್ದರು. ಸುತ್ತ ಮುತ್ತಲ ಹಳ್ಳಿಗಳಿಂದಲೂ ಅನೇಕ ಮಕ್ಕಳು ಬಂದು ಶಾಲೆಗೆ ಸೇರಿಕೊಂಡರು. ಗೋವಿಂದಯ್ಯನವರು ಮನೆ ಮನೆಗೆ ಹೋಗಿ ಶಾಲೆಯ ಮಾಸ್ತರರಿಗೆ ಸಂಬಳ ಕೊಡಲು ಶಾಲೆಗೆ ಸೇರುವ ಮಕ್ಕಳಿಗೆ ಇಂತಿಷ್ಟು ಶುಲ್ಕ ಕೊಡಬೇಕೆಂದು ತಂದೆ ತಾಯಿಯರನ್ನು ಒಪ್ಪಿಸಿದ್ದರು. ತಮ್ಮ ಸಂಪಾದನೆ ತಮಗೇ ಸಾಕಾಗುವುದಿಲ್ಲ ಅನ್ನುವ ಅರಿವಿದ್ದರೂ, ಮಕ್ಕಳು ಮುಂದೆ ಓದುತ್ತಾರಲ್ಲ ಎಂದು, ಹೇಗೋ ಹಣ ಹೊಂದಿಸಲು ತಂದೆ ತಾಯಂದಿರು ಒಪ್ಪಿಕೊಂಡಿದ್ದರು. ಪದವಿ ಮುಗಿಸಿ, ಬಿಎಡ್ ಮಾಡಿ ಕೆಲಸಸಿಗದೆ ಮನೆಯಲ್ಲಿ ಕುಳಿತಿದ್ದ ಸುತ್ತ ಮುತ್ತಲಿನ ಎಷ್ಟೋ ಯುವಕರು ಶಿಕ್ಷಕರಾಗಿ ಬಂದು ಸೇರಿಕೊಂಡರು. ಮುಂದೆ ಸರ್ಕಾರಿ ಅನುದಾನ ದೊರೆತಾಗ ಸಂಬಳ ಹೆಚ್ಚು ಸಿಗುವುದೆಂದು ಅಲ್ಲಿಯವರಿಗೆ ಕಡಿಮೆ ಸಂಬಳಕ್ಕೆ ಕೆಲಸ ಮಾಡಬೇಕೆಂದು ಗೋವಿಂದಯ್ಯ ಶಿಕ್ಷಕರನ್ನು ಒಪ್ಪಿಸಿದ್ದರು.

ಶಿಕ್ಷಕರು ಕಷ್ಟಪಟ್ಟು ಶಾಲೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟರು. ಈಗ ತಾನೇ ಮೊದಲ ತಂಡ ಹತ್ತನೇ ತರಗತಿಗೆ ಬಂದಿತ್ತು. ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆ ಆಗಿರುವುದರಿಂದ ಮಕ್ಕಳನ್ನು ಚೆನ್ನಾಗಿ ತಯಾರಿಸಿ ಶಾಲೆಗೇ ಒಳ್ಳೆಯ ಫಲಿತಾಂಶ ತರಬೇಕು ಎಂದು ಮುಖ್ಯೋಪಾಧ್ಯಾಯರು ಶಿಕ್ಷಕರಿಗೆ ಸಾರಿ ಸಾರಿ ಹೇಳಿದ್ದರು.

ಹತ್ತನೇ ತರಗತಿಯ ಕನ್ನಡ ಪುಸ್ತಕದಲ್ಲಿದ್ದ ಸಂವಿಧಾನ ಶಿಲ್ಪಿ ಅನ್ನುವ ಕಥೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಾಲ್ಯದ ಕಷ್ಟಕರ ಜೀವನದ ಚಿತ್ರಣವಿದ್ದು, ಅದನ್ನು ಕನ್ನಡ ಶಿಕ್ಷಕರಾದ ಬಿಸಿಲಹಳ್ಳಿ ಶಿವಶಂಕರ್ ಅವರು ಮನೋಜ್ಞವಾಗಿ ಕಣ್ಣಿಗೆ ಕಟ್ಟುವಂತೆ ಪಾಠ ಮಾಡುತ್ತಿದ್ದರು. ಮಕ್ಕಳ ಕಣ್ಣಿನಲ್ಲಿ ಕಣ್ಣೀರಧಾರೆ ಹರಿಯುತಿತ್ತು. ಅಂಬೇಡ್ಕರವರು ಬಾಲ್ಯದಲ್ಲಿ ಶಾಲೆಯಲ್ಲಿ ಅನುಭವಿಸಿದ ಅವಮಾನ, ಕಷ್ಟಗಳು, ಅಂಬೇಡ್ಕರ್ ಅವರ ಬುದ್ದಿವಂತಿಕೆ ಎಲ್ಲವೂ ಮಕ್ಕಳ ಮನವನ್ನು ಕಾಡಿದ್ದವು. ಎಲ್ಲರಿಗಿಂತ ಹೆಚ್ಚಾಗಿ ಮಹೇಶನಿಗೆ ಅಂಬೇಡ್ಕರ್ ಅವರ ಜೀವನ ಕಥೆ ಮನದಲ್ಲಿ ನಾಟಿಬಿಟ್ಟಿತ್ತು. ಮನೆಯಲ್ಲಿ ಅಪ್ಪ, ಅಮ್ಮ, ತಂಗಿಗೆ ಅಂಬೇಡ್ಕರ್ ಅವರ ಕಥೆಯನ್ನು ಹೇಳಿದ್ದೇ ಹೇಳಿದ್ದು. ಕಥೆ ಕೇಳಿದ ಅಪ್ಪ ಸದ್ಯ ನಮ್ಮ ಮಕ್ಕಳಿಗೆ ಅಂತಹ ಕಷ್ಟಗಳಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದರು.

ದಿನ ಕಳೆದು ಪರೀಕ್ಷೆ ಸಮಯ ಹತ್ತಿರ ಬಂತು, ಎಲ್ಲರೂ ಪರೀಕ್ಷೆಗೆ ಸಿದ್ಧಗೊಂಡರು. ಪೂರ್ವಭಾವಿ ಪರೀಕ್ಷೆಯ ದಿನಾಂಕಗಳನ್ನು ಮುಖ್ಯೋಪಾಧ್ಯಾಯರು ಪ್ರಕಟಿಸಿ ಮಕ್ಕಳಲ್ಲಿ ದುಗುಡ ತುಂಬಿದರು. ಪರೀಕ್ಷೆ ಮುಗಿದು ಮಹೇಶ ಶಾಲೆಗೇ ಮೊದಲಿಗನಾಗಿ ತೇರ್ಗಡೆ ಹೊಂದಿದ್ದ. ಪೂರ್ವಭಾವಿ ಪರೀಕ್ಷೆ ಮುಗಿದಮೇಲೆ ತರಗತಿಗಳು ಸ್ವಲ್ಪ ನಿಧಾನವಾಗಿ ನಡೆಯುತ್ತಿದ್ದವು. ಮಕ್ಕಳಿಗೆ ಶಿಕ್ಷಕರು ಅಭ್ಯಾಸ ಮಾಡಿಸುತ್ತಿದ್ದರು.

ಹೀಗಿರಲು ಒಂದು ದಿನ ಮುಖ್ಯೋಪಾಧ್ಯಾಯರು ಹತ್ತನೇ ತರಗತಿಯ ಕೊಠಡಿಗೆ ಬಂದು ಮಕ್ಕಳನ್ನು ಉದ್ದೇಶಿಸಿ "ಮಕ್ಕಳೇ ಇನ್ನೇನು ನೀವು ಈ ಶಾಲೆಯಿಂದ ಹೊರ ಹೋಗುತ್ತೀರ, ಆದರೆ ನಿಮ್ಮ ನೆನೆಪು ಶಾಲೆಯಲ್ಲಿ ಉಳಿಯಬೇಕಾದರೆ ನೀವು ಏನಾದರೂ ಕೊಡುಗೆ ನೀಡಬೇಕಾಗುತ್ತದೆ. ನಾವು ಶಾಲೆಯ ಗೋಡೆಗಳಿಗೆ ಮಹನೀಯರ ಫೋಟೋಗಳನ್ನು ಹಾಕಬೇಕೆಂದು ತೀರ್ಮಾನಿಸಿದ್ದೇವೆ, ಆದ್ದರಿಂದ ನಿಮ್ಮ ತರಗತಿಯ ಶಿಕ್ಷಕರಿಗೆ ನಿಮ್ಮ ಹೆಸರು ಕೊಟ್ಟು ನಿಮಗೆ ಇಷ್ಟವಾದ, ನಮ್ಮ ದೇಶದ ಮಹನೀಯರ ಫೋಟೋವೊಂದು ಕೊಡುಗೆ ನೀಡಬಹದು" ಎಂದು ಹೇಳಿ ಫೋಟೋದ ಸೈಜ್ ಇಂತಿಷ್ಟು ಎಂದು ಹೇಳಿ ಅದಕ್ಕೆ ಫ್ರೇಮ್ ಹಾಕಿಸಿ ಕೊಡಬೇಕು ಎಂದು ಹೇಳಿದರು.

ಮಕ್ಕಳೆಲ್ಲರೂ, ನಾನು ಗಾಂಧೀಜಿ ಫೋಟೋ, ನಾನು ನೆಹರು ಫೋಟೋ, ನಾನು ಕುವೆಂಪು ಫೋಟೋ, ನಾನು ಬೇಂದ್ರೆ ಫೋಟೋ ಎಂದು ಗದ್ದಲ್ಲ ಎಬ್ಬಿಸಿದರು, ಹಾಗೆಯೇ ತಮ್ಮ ತರಗತಿಯ ಶಿಕ್ಷಕರಾದ ಮೂರ್ತಿ ಅವರಿಗೆ ಹೆಸರುಗಳನ್ನು ಕೊಟ್ಟರು. ಮಹೇಶನ ಸರತಿ ಬಂದಾಗ "ನನ್ನ ಹೆಸರಿಗೆ ಅಂಬೇಡ್ಕರ್ ಫೋಟೋ ಬರ್ಕೊಳ್ಳಿ ಸಾ"ಎಂದ. ಮೂರ್ತಿ ತಲೆಯೆತ್ತಿ ಮಹೇಶನನ್ನು ನೋಡುತ್ತಾ "ಅಂಬೇಡ್ಕರ್ ಫೋಟೋ ಬೇಡ, ಬೇರೆ ಯಾರದಾದರೂ ಫೋಟೋ ಕೊಡು" ಎಂದರು. ಮಹೇಶನಿಗೆ ಅರ್ಥವಾಗಲಿಲ್ಲ "ಯಾಕೆ ಸಾ" ಎಂದ.

"ನಿನಗ್ಯಾಕೋ ಅದೆಲ್ಲ ಹೇಳಿದ ಹಾಗೆ ಮಾಡು, ಅಂಬೇಡ್ಕರ್ ಫೋಟೋ ಬೇಡ"

ಮಹೇಶನಿಗೆ ದುಃಖವಾಯಿತು. ಅವನಿಗೆ ಮೂರ್ತಿ ಮಾಸ್ತರರು ಯಾಕೆ ಹೀಗೆ ಹೇಳುತ್ತಿದ್ದಾರೆ ಎಂದು ತಿಳಿಯಲಿಲ್ಲ.

ಮೂರ್ತಿ ಮಾಸ್ತರರನ್ನು ಭಯದಿಂದ ನೋಡುತ್ತಾ " ಸಾ ಕೊಟ್ಟರೆ ಅಂಬೇಡ್ಕರ್ ಫೋಟ್, ಇಲ್ಲ ಅಂದರೆ ಯಾವುದೂ ಇಲ್ಲ" ಎಂದ.

ಮೂರ್ತಿ ಅವರು ಕೋಪದಿಂದ " ಹೋಗು ಹೊರಗೆ" ಎಂದರು.

ಮಹೇಶ ಮನೆಗೆ ಬಂದು ಅಮ್ಮನಿಗೆ ವಿಷಯ ಹೇಳಿದ, ಯಾರ ಫೋಟೋ ಎನ್ನುವುದಕ್ಕಿಂತ , ಫೋಟೋಗೆ ಹಣ ಒದಗಿಸುವುದು ಇವರಿಗೆ ಆಗುತ್ತೋ ಇಲ್ಲವೋ. ಶಾಲೆಯ ಶುಲ್ಕ ಕಟ್ಟುವುದೇ ಕಷ್ಟವಿದೆ ಎಂದುಕೊಂಡರು.

ಅಪ್ಪನಿಗೆ ಹೇಳಿದಾಗ "ಈ ವರ್ಷ ಬೇಡ ಮುಂದಲ ವರ್ಷ ಕೊಡೋಣ" ಎಂದು ತೇಲಿಸಿ ಮಾತನಾಡಿದರು.

ಮಹೇಶ ತಾನೇ ಹಣ ಒದಗಿಸಲು ಸಾಧ್ಯವಾಗುತ್ತದೆಯೇ ಎಂದು ಯೋಚಿಸಿದ. ಪರೀಕ್ಷೆ ಬೇರೆ ಹತ್ತಿರ ಬರುತ್ತಿದೆ, ಓದುವುದಕ್ಕೆ ಸಮಯ ಬೇಕು. ಗೋವಿಂದಯ್ಯನವರ ಹೊಲದಲ್ಲಿ ಭಾನುವಾರ ಕೂಲಿ ಕೆಲಸಕ್ಕೆ ಹೋದರೆ ಸ್ವಲ್ಪ ಹಣ ಬರಬಹದು ಎಂದುಕೊಂಡ. ಅದೇ ಸುಲಭದ ದಾರಿ ಎಂದು ಮುಖ ಅರಳಿತು.

ರಾತ್ರಿಯೇ ಗೋವಿಂದಯ್ಯನವರ ಮನೆಗೆ ಓಡಿದ. ಶಾಲೆಗೇ ಮೊದಲಿಗನಾಗಿ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ ಮಹೇಶ ಊರಲ್ಲಿ ಪ್ರಖ್ಯಾತನಾಗಿದ್ದ. ಗೋವಿಂದಯ್ಯನವರು ತಮ್ಮ ಈಜಿಚೇರ್ ನಲ್ಲಿ ಕುಳಿತು ಯಾವುದೋ ಲೆಕ್ಕ ಪತ್ರಗಳನ್ನು ನೋಡುತಿದ್ದರು. ಯಾರೋ ಬಂದ ಸಪ್ಪಳ ಕೇಳಿ ತಲೆ ಎತ್ತಿ "ನೀನಾ ಬಾ ಬಾ ಏನು ಈಕಡೆ ಬಂದೆ" ಎಂದರು.

"ನಿಮ್ಮ ಹೊಲದಲ್ಲಿ ಕೂಲಿ ಕೆಲ್ಸಕ್ಕೆ ಬರ್ಲೆ ಅಯ್ಯ" ಅಂದ

"ಯಾಕ್ಲಾ ಓದೋದು ಬಿಟ್ಟು, ಕೆಲಸ ಮಾಡ್ತೀನಿ ಅಂತೀಯಾ, ಹೋಗು ಹೋಗು" ಎಂದರು

ಮಹೇಶ, ಗೋವಿಂದಯ್ಯನವರ ಕಾಲು ಹಿಡಿದು ತನಗೆ ಹಣ ಏತಕ್ಕೆ ಬೇಕು ಎಂದು ಒಂದೇ ಉಸುರಿಗೆ ಹೇಳಿದ. ಗೋವಿಂದಯ್ಯನವರಿಗೆ ಆಶ್ಚರ್ಯದೊಂದಿಗೆ ಸಂತೋಷವಾಯಿತು.

" ಹಣ ನಾನು ಕೊಡ್ತೀನಿ ಬಿಡ್ಲಾ" ಅಂದರು

"ಇಲ್ಲ ಅಯ್ಯ ಫೋಟೋಗೆ ಹಣ ನಾನೇ ಸಂಪಾದಿಸಬೇಕು" ಎಂದ

" ಯಲಾ ಇವನ, ನೀನೇನು ಕೆಲಸ ಮಾಡ್ತೀಯೋ"

" ಏನಾದರು, ಹೊಲದಲ್ಲಿ ಕಳೆ ತೆಗೆಯೋ ಕೆಲಸ ಆದರೂ ಸಾಕು"

ಗೋವಿಂದಯ್ಯನವರು ಅವನನ್ನು ಹೆಮ್ಮೆಯಿಂದ ನೋಡುತ್ತಾ" ಅದೆಲ್ಲಾ ಬೇಡ, ದಿನಾ ರಾತ್ರಿ ಮನೆಗೆ ಬಂದು ಮನೆಯವರಿಗೆ ಎ.ಆರ್. ಕೃಷ್ಣಶಾಸ್ತ್ರಿಗಳ ವಚನ ಭಾರತ ಓದು, ಪುಸ್ತಕ ಮುಗಿದಮೇಲೆ ಹಣ ಕೊಡುತ್ತೇನೆ" ಎಂದರು.

ಮಹೇಶನ ಮುಖ ಅರಳಿತು. ವಚನ ಭಾರತವನ್ನು ಈಗಾಗಲೇ ಸುಮಾರು ಹತ್ತು ಸಲ ಓದಿದ್ದ. ಓದಿದಾಗಲೆಲ್ಲಾ ಪಾಂಡವರ ಕಷ್ಟಗಳನ್ನು ಕೇಳಿ ಕಣ್ಣೀರಾಗಿದ್ದ.

ಮರುದಿನ ರಾತ್ರಿಯಿಂದಲೇ ಊಟ ಮುಗಿದಮೇಲೆ ದಿನಾ ಒಂದು ಗಂಟೆ ವಚನ ಭಾರತ ಓದಲಾರಂಭಿಸಿದ. ಅವನ ಸೊಗಸಾದ ಓದುವಿಕೆ ಊರ ಎಲ್ಲರ ಕಿವಿಗೆ ತಲುಪಿ ಊರ ಜನರೆಲ್ಲಾ ಬಂದು ಕಥೆ ಕೇಳುತ್ತಾ ಕುಳಿತರು.

ಸ್ವಲ್ಪ ದಿನ ಆದಮೇಲೆ ಒಬ್ಬೊಬ್ಬರಾಗಿ ಶಾಲೆಗೇ ಫೋಟೋ ತಂದು ಕೊಡತೊಡಗಿದರು. ಫೋಟೋದ ಕೆಳಗಡೆ ಇಂತವರ ಕೊಡುಗೆ ಎಂದು ಹೆಸರನ್ನು ಎಲ್ಲರೂ ಬರೆಸಿದ್ದರು.

ಮಹೇಶ ಮತ್ತೆ ಮೂರ್ತಿ ಮೇಸ್ಟ್ರ ಹತ್ತಿರ ಹೋಗಿ " ಸಾರ್ ನನ್ನ ಹೆಸರು ಬರಕೊಂಡ್ರಾ, ಅಂಬೇಡ್ಕರ್ ಫೋಟೋಗೆ" ಎಂದ.

ಅವರು "ಅಂಬೇಡ್ಕರ್ ಫೋಟೋ ಬೇಡ ಅಂತ ಅವೊತ್ತೇ ಹೇಳಿದ್ನಲ್ಲಾ" ಎಂದರು

" ಯಾಕೆ ಸರ್ ಬೇಡ ಅಂತೀರಾ"

"ಅದೆಲ್ಲ ನಿನಗೆ ಗೊತ್ತಾಗೊಲ್ಲ, ಶಿವರಾಮ ಕಾರಂತರ ಫೋಟೋ ಕೊಡು ಹೋಗು" ಎಂದರು

" ಸಾ ಇಬ್ಬರದೂ ಕೊಡ್ತೀನಿ"

"ಅಷ್ಟು ಸಾಹುಕಾರನ, ನೀನು ಸುಮ್ಮನೆ ಹೇಳಿದನ್ನು ಮಾಡು"

ಮಹೇಶನ ಮುಖ ಸಪ್ಪಗಾಯಿತು. ವಿಷಯ ಮುಖ್ಯೋಪಾಧ್ಯಾಯ ರಾಮಚಂದ್ರಪ್ಪನವರಿಗೆ ತಲುಪಿತು.

ಅವರು ಮೂರ್ತಿಯವರನ್ನು ತಮ್ಮ ಬಳಿ ಕರೆಸಿ ಕೇಳಿದರು.

"ಯಾಕ್ ಸಾರ್ ಅಂಬೇಡ್ಕರ್ ಫೋಟೋ ಬೇಡ ಅಂದ್ರಂತೆ" ಎಂದು ಕೇಳಿದರು

ಮೂರ್ತಿ ಅವರು ಆಕಡೆ, ಈಕಡೆ ನೋಡಿ ಯಾರೂ ಇಲ್ಲ ಎಂದು ಖಾತ್ರಿ ಪಡಿಸಿಕೊಂಡು " ಸರ್ ನಿಮಗೆ ಗೊತ್ತಲ್ವ, ನಮ್ಮಿಬ್ಬರದು ಒಂದೇ ಕ್ಯಾಸ್ಟ್, ಇನ್ನೊಂದು ವಿಷಯ, ಮುಂದೆ ಎಂದಾದರೂ ಫೋಟೋಗೆ ಡ್ಯಾಮೇಜ್ ಆದ್ರೆ ಎಲ್ಲರೂ ನಮ್ಮ ಮೇಲೆ ಮುಗಿಬೀಳ್ತಾರೆ" ಎಂದೂ ಸೇರಿಸಿದರು.

ಮುಖ್ಯೋಪಾಧ್ಯಾಯರಿಗೆ ಮೂರ್ತಿಯವರು ಮೊದಲು ಹೇಳಿದ್ದು ಸರಿ ಕಾಣದಿದ್ದರೂ, ಅವರು ಆಮೇಲೆ ಹೇಳಿದ್ದು ಚಿಂತೆಗೀಡು ಮಾಡಿತು. ವಿಗ್ರಹಗಳನ್ನು ಕುರೂಪ ಗೊಳಿಸಿದ ಕಡೆ ದೊಡ್ಡ ಗಲಾಟೆ ಆಗಿದ್ದು ಅವರು ಕಂಡು, ಕೇಳಿದ್ದರು.

" ಸರಿ ನೀವೇ ಇದನ್ನು ಹ್ಯಾಂಡಲ್ ಮಾಡಿ" ಅಂದು ಸುಮ್ಮನಾದರು.

ಮಹೇಶ ಒಂದು ತಿಂಗಳಲ್ಲಿ ವಚನ ಭಾರತ ಓದಿ ಮುಗಿಸಿದ. ಗೋವಿಂದಯ್ಯನವರು ಮಹೇಶನಿಗೆ ಸ್ವಲ್ಪ ಹೆಚ್ಚೇ ಹಣ ಕೊಟ್ಟರು. ಮಹೇಶನಿಗೆ ಖುಷಿಯಾಯಿತು. ಉಳಿದ ಹಣದಲ್ಲಿ ಶಾಲೆಯ ಬೋರ್ಡ್ ಸರಿಮಾಡಿಸಬೇಕು ಎಂದು ಕೊಂಡ. ಮುಂದಿನ ಭಾನುವಾರ ಅಪ್ಪನಿಗೆ ದಂಬಾಲು ಬಿದ್ದು ಮಧುಗಿರಿಗೆ ಕರೆದುಕೊಂಡು ಹೋದ. ಅಲ್ಲಿನ ಫೋಟೋಫ್ರೆಮ್ ಅಂಗಡಿಗೆ ಅಪ್ಪನನ್ನು ಕರೆದುಕೊಂಡು ಹೋಗಿ "ಅಂಬೇಡ್ಕರ್ ಫೋಟೋ ಬೇಕು" ಅಂದ. ಅವರು ತೋರಿಸಿದ ಫೋಟೋಗಳಲ್ಲಿ ಒಂದನ್ನು ಆರಿಸಿ "ಇದಕ್ಕೆ ಕಟ್ಟಾಕಿ" ಎಂದ. ಅಂಗಡಿಯವ "ಎರಡು ಗಂಟೆ ಬಿಟ್ಟು ಬನ್ನಿ" ಎಂದ.

ಅಂಬೇಡ್ಕರ್ ಫೋಟೋ ಮನೆಗೆ ತಂದು ಖುಷಿಯಿಂದ ಮನೆಯವರಿಗೆ, ತನ್ನ ಸ್ನೇಹಿತರಿಗೆ ಹೆಮ್ಮೆಯಿಂದ ತೋರಿಸಿದ. " ಸಂವಿಧಾನ ಶಿಲ್ಪಿ" ಎಂದು ಹೆಮ್ಮೆಯಿಂದ ಎಲ್ಲರಿಗೂ ಹೇಳುತ್ತಿದ್ದ.

" ಈ ಸಂವಿಧಾನ ಅಂದರೆ ಏನು" ಎಂದು ಬೇವಿನಮರದ ಮನೆಯ ಕೇಶವ ಕೇಳಿದ. ಕನ್ನಡ ಮೇಷ್ಟ್ರು ಅಂಬೇಡ್ಕರ್ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದರು, ಆದರೆ ಸಂವಿಧಾನ ಎಂದರೆ ಏನು ಎಂದು ವಿವರಿಸಿ ಹೇಳಿರಲಿಲ್ಲ.

ಸಂವಿಧಾನ ಅಂದರೆ ಏನು ಎಂದು ವಿವರಿಸಲು ಮಹೇಶನಿಗೆ ತಿಳಿದಿರಲಿಲ್ಲ, ಅದರಲ್ಲಿ ಏನಿದೆ ಎಂದೂ ತಿಳಿದಿರಲಿಲ್ಲ. ಅದೊಂದು ದೊಡ್ಡ ಪುಸ್ತಕ ಅಂಬೇಡ್ಕರ್ ಬರೆದಿದ್ದು ಎಂದು ತಿಳಿದಿತ್ತು. ಅಂಬೇಡ್ಕರ್ ಯಾಕೆ ಸಂವಿಧಾನ ಪುಸ್ತಕ ಬರೆದರು ಎಂದು ತಲೆ ಕರೆದುಕೊಂಡರೂ, ಬುದ್ದಿವಂತನಂತೆ "ಅದೊಂದು ದೊಡ್ಡ ಪುಸ್ತಕ, ನಿನಗೆ ಗೊತ್ತಾಗುವುದಿಲ್ಲ"ಎಂದು ಬಾಯಿ ಮುಚ್ಚಿಸಿದ.

ಆದರೆ ತಲೆಯಿಂದ ವಿಚಾರ ಹೋಗಲಿಲ್ಲ. ಊರಲ್ಲಿ ಕೆಲವರನ್ನು ಕೇಳಿದ ಯಾರಿಂದಲೂ ಸರಿಯಾದ ಉತ್ತರ ಸಿಗಲಿಲ್ಲ. ಗೋವಿಂದಯ್ಯನವರು ಅನುದಾನಕ್ಕೆ ಸರ್ಕಾರಕ್ಕೆ ಅರ್ಜಿ ಹಾಕಿಕೊಂಡಿದ್ದರಿಂದ, ಒಂದು ದಿನ ಸ್ಕೂಲಿಗೆ ಇನ್ಸ್ಪೆಕ್ಟರ್ ಒಬ್ಬರು ಬಂದರು. ಮಕ್ಕಳಿಗೆ ತರಾವರಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.

"ನಿಮಗೇನಾದರೂ ಪ್ರಶ್ನೆ ಇದ್ದರೆ ಕೇಳಿ" ಎಂದು ಮಕ್ಕಳನ್ನು ಕೇಳಿದರು

ಮಹೇಶ್ ಎದ್ದು ನಿಂತು "ಸರ್ ಸಂವಿಧಾನ ಅಂದರೆ ಏನು ಸರ್" ಎಂದ

ಬಂದಿದ್ದ ಇನ್ಸ್ಪೆಕ್ಟರ್ ಗೊಂದಲಕ್ಕೆ ಒಳಗಾದವರಂತೆ ಕಂಡರೂ " ಅದು ಅಂಬೇಡ್ಕರ್ ಅವರು ಬರೆದಿದ್ದು," ಕಾನ್ಸ್ಟಿಟ್ಯೂಷನ್" ಎಂದು ಹೇಳಿ, ಮುಖ್ಯೋಪಾಧ್ಯರ ಕೆಡೆ ತಿರುಗಿ " ಏನ್ರಿ ಮಕ್ಕಳಿಗೆ ಸಂವಿಧಾನ ಅಂದರೆ ಏನು ಎಂದು ಹೇಳಿಕೊಟ್ಟಿಲ್ವಾ" ಎಂದು ರೇಗಿದಂತೆ ಮಾಡಿದರು.

ಮುಖ್ಯೋಪಾಧ್ಯರು " ಹೆಹೆ ಹೆಹೆ" ಎಂದು ಪೆಕರು ಪೆಕರಾಗಿ ನಕ್ಕು " ಹೇಳಿಕೊಟ್ಟಿದ್ದೀವಿ ಸಾರ್, ಎಲ್ಲೋ ಮರೆತಿರಬೇಕು, ಮತ್ತೆ ಹೇಳ್ತೀವಿ" ಎಂದರು. ಆಕಡೆ ಇನ್ಸ್ಪೆಕ್ಟರ್ ಹೋದಮೇಲೆ, ಮುಖ್ಯೋಪಾಧ್ಯರು ಮಹೇಶನ ಕುಂಡಿಗೆ ಬಾರಿಸಿ, ನೀನೇನು ಮಹಾ ಬುದ್ದಿವಂತ ಅಂತ ತಿಳಿದುಕೊಂಡಿದ್ದೀಯಾ, ಇನ್ಸ್ಪೆಕ್ಟರ್ ಗೆ ಪ್ರಶ್ನೆ ಕೇಳ್ತೀಯಾ ಎಂದು ಇನ್ನೆರಡು ಬಾರಿಸಿದರು.

ಮಹೇಶನ ತಲೆಯಿಂದ ಸಂವಿಧಾನ ಪದ ಹೋಗಲಿಲ್ಲ. ಕನ್ನಡ ಮೇಷ್ಟ್ರನ್ನು ಕೇಳಲೇ ಎಂದು ಕೊಂಡ, ಅವರು ರೇಗಿ ಹೊಡೆದರೆ ಎಂದುಕೊಂಡು ಸುಮ್ಮನಾದ.

ಈಗ ತಾನೇ ಮುಗಿದ ಚುನಾವಣೆಯಲ್ಲಿ ಕೆಲವರು ಸಂವಿಧಾನ ಉಳಿಸಬೇಕು, ಅದನ್ನು ಉಳಿಸಬೇಕಾದರೆ, ನಮಗೆ ಓಟು ಕೊಡಬೇಕು ಎಂದು ಭಾಷಣ ಮಾಡಿ ಹೋಗಿದ್ದರು. ಸಂವಿಧಾನ ಯಾರು ಉಳಿಸಬೇಕು, ಯಾರಿಂದ ಉಳಿಸಬೇಕು, ಏಕೆ ಉಳಿಸಬೇಕು ಎಂದು ಊರಿನ ಜನಕ್ಕೆ ಅರ್ಥವೇನೂ ಆಗಿರಲಿಲ್ಲ. ಊರ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಿಂಗೇಗೌಡರೂ ಚುನಾವಣಾ ಭಾಷಣ ಮಾಡಿದ್ದರು, ಅವರು ಸಂವಿಧಾನದ ಬಗ್ಗೆ ಮಾತನಾಡದಿದ್ದರೂ, ಚುನಾವಣೆಯಲ್ಲಿ ಗೆದ್ದಿದ್ದರಿಂದ, ಅವರಿಗೆ ಸಂವಿಧಾನದ ಬಗ್ಗೆ ತಿಳಿದಿರುತ್ತದೆ ಎಂದು ಮಹೇಶ ಸಂಜೆ ಅವರ ಮನೆಗೆ ಓಡಿದ.

ಲಿಂಗೇಗೌಡರು ಮನೆಯ ಜಗುಲಿಯ ಮೇಲೆ ಕೆಲಜನರನ್ನು ಕೂರಿಸಿಕೊಂಡು ಏನೋ ಮಾತನಾಡುತಿದ್ದರು. ಹತ್ತಿರ ಬಂದ ಮಹೇಶನನ್ನು ನೋಡಿ

"ಏನ್ಲಾ ಈ ಕಡೆ ಬಂದೆ" ಎಂದರು

ಮಹೇಶ " ಗೌಡ್ರೆ ಈ ಸಂವಿಧಾನ ಅಂದರೆ ಏನು" ಎಂದ

ಹಾವು ಕಂಡವರಂತೆ ಬೆಚ್ಚಿ ಬಿದ್ದ ಲಿಂಗೇಗೌಡರು, ತನ್ನ ಬಳಿಯಿದ್ದ ಎಲ್ಲರನ್ನು "ಇನ್ನು ನೀವು ಹೊರಡಿ, ನಾಳೆ ಮಾತನಾಡೋಣ" ಎಂದು ಸಾಗ ಹಾಕಿದರು.

ಅವರೆಲ್ಲಾ ಹೋದಮೇಲೆ "ನೋಡಿದೆ ಏನ್ಲಾ ಅವರೆಷ್ಟೇ ಸಂವಿಧಾನ ಸಂವಿಧಾನ ಎಂದು ಬಡಕೊಂಡರು ನಮ್ಮ ಪಕ್ಷಕ್ಕೆ ಓಟು ಬಿತ್ತು, ನಾವೇ ಸರ್ಕಾರ ಮಾಡಿದ್ದು" ಎಂದರು.

"ಆದ್ರೆ ಈ ಸಂವಿಧಾನ ಅಂದರೆ ಏನು, ಅದು ಎಲ್ಲಿದೆ" ಅಂದ ಮಹೇಶ.

" ಅದೆಲ್ಲ ದೊಡ್ಡೋರ ವಿಷ್ಯ, ಎಲ್ಲಾ ಡೆಲ್ಲಿ ಮ್ಯಾಟರ್, ಮೋದಿ, ಶಾ, ರಾಹುಲ್ ಗಾಂಧಿ ಗೊತ್ತಲ್ಲ ಅವರಿಗೆ ಮಾತ್ರ ಗೊತ್ತಾಗೋದು, ನಿನಗ್ಯಾಕೆ ಅದರ ಉಸಾಬರಿ, ಹೋಗಿ ಪರೀಕ್ಷೆಗೆ ಓದ್ಕೋ ಹೋಗು" ಅಂದರು.

" ಅಲ್ಲ ಅದು ಸಂವಿಧಾನ ಶಿಲ್ಪಿ ಎಂದು ಅಂಬೇಡ್ಕರ್ ಪಾಠ ಐತೇ, ಅದರಲ್ಲಿ ಬರೀ ಅವರ ಕಷ್ಟಗಳ ಬಗ್ಗೆನೇ ಬರೆದಿದ್ದಾರೆ, ಕಷ್ಟಗಳಲ್ಲಿ ಬೆಳೆದು ಚೆನ್ನಾಗಿ ಓದಿ ಸಂವಿಧಾನ ಬರೆದರು ಅಂತಿದೆ, ಆದರೆ ಸಂವಿಧಾನ ಅಂದರೆ ಏನು, ಅದನ್ನು ಯಾಕೆ ಬರೆದರು ತಿಳಿಯಲಿಲ್ಲ".

" ಹೇಳಿದ್ನಲ್ಲ, ಅದು ದೊಡ್ಡವರ ವಿಷಯ, ಸುಮ್ಮನೆ ಮೈಮೇಲೆ ಎಳ್ಕೋಬೇಡ, ನಿಮ್ಮ ಮನೆಗೆ ಪೊಲೀಸ್ ಬರೋದು ಯಾಕೆ ಹೇಳು" ಎಂದು ಗೌಡ್ರು ಹೆದರಿಸಿದರು.

ಮಹೇಶನಿಗೆ ವಿಷಯ ತುಂಬಾ ಗಂಭೀರ ಎನಿಸಿ, ಭಯವಾಯಿತು. ಯಾರು ನೋಡಿದರೂ ಸಂವಿಧಾನ ಅಂದರೆ ಗಾಬರಿ ಆಗ್ತಾ ಇದಾರೆ, ಅಂತಹ ಸಂವಿಧಾನವನ್ನು ಅಂಬೇಡ್ಕರ್ ಯಾಕೂ ಬರೆಯೋಕೆ ಹೋದರು, ಅವರನ್ನು ಪೋಲಿಸಿನವರು ಏನೂ ಮಾಡಲಿಲ್ಲವೇ, ಅದು ಅಷ್ಟು ಒಳ್ಳೇದಲ್ಲ ಅಂದರೆ ಅದನ್ನು ಬರೆದವರ ಕಥೆ ನಮ್ಮ ಪುಸ್ತಕದಲ್ಲಿ ಯಾಕಿರುತ್ತೆ, ಏನೇ ಆಗಲಿ, ಅದು ಒಂದು ಅದ್ಬುತ ಕೆಲಸವೇ ಇರಬೇಕು ಎಂದುಕೊಂಡು ಮಹೇಶ ಮನೆಗೆ ಬಂದ.

ಮರುದಿನ ಶಾಲೆಗೆ ಅಂಬೇಡ್ಕರ್ ಫೋಟೋ ತಂದು ಮೂರ್ತಿ ಮೇಷ್ಟ್ರರ ಮುಂದೆ ಹಿಡಿದ. ಮೂರ್ತಿಯವರಿಗೆ ಸಿಟ್ಟು ನೆತ್ತಿಗೇರಿತು, ತಾನು ಬೇಡ ಅಂದರೂ, ತನ್ನ ಮಾತು ಕೇಳಲಿಲ್ಲ ಎನ್ನುವ ಪ್ರತಿಷ್ಠೆ ಮುಂದೆ ಬಂತು, ಸಿಟ್ಟಿನಲ್ಲಿ ತಾನು ಮಾಡುತ್ತಿರುವುದು ತಪ್ಪು ಎನ್ನುವುದು ತಲೆಗೆ ಹೋಗಲಿಲ್ಲ, ಫೋಟೋ ತೆಗೆದುಕೊಂಡು ಎತ್ತಿ ಎಸೆದರು. ಫೋಟೋ ಗ್ಲಾಸ್ ಹೊಡೆದು ಹೋಯಿತು. ಮಹೇಶನಿಗೆ ಕೋಪದೊಂದಿಗೆ ಸಿಟ್ಟು ನೆತ್ತಿಗೇರಿ " ತೂ ನಿನ್ ಅವ್ವನ್ " ಎಂದ. ಕೆನ್ನೆ ಮೇಲೆ ನೀರು ಇಳಿಯುತ್ತಿತ್ತು, ಕೋಪದಿಂದ ದೇಹ ನಡುಗುತ್ತಿತ್ತು. ಇಷ್ಟರವರಿಗೆ ತನಗೆ ಯಾರೂ ಹೀಗೆ ಹೇಳಿರಲಿಲ್ಲ ಎಂದುಕೊಂಡ ಮೇಸ್ಟ್ರು ಮೂರ್ತಿಗೆ ಎಲ್ಲಿಲ್ಲದ ಸಿಟ್ಟು ಬಂದು ಮಹೇಶನನ್ನು ಧರ ಧರನೆ ಹೊರಗಡೆ ಎಳೆದುಕೊಂಡು ಹೋಗಿ ಕೆಳಗಡೆ ಉರುಳಿಸಿ ಕೋಲಿನಿಂದ ಮನಸೋಚ್ಚೆ ಹೊಡೆಯತೊಡಗಿದರು. ಮಹೇಶನಿಗೆ ನೋವಿಗಿಂತ ಕೋಪವೇ ಹೆಚ್ಚಾಗಿ ಇತ್ತೀಚಿಗೆ ಕೇಳಿದ್ದ ಸಂವಿಧಾನ ಉಳಿಸಿ ಎನ್ನುವ ಸ್ಲೋಗನ್ ಅನ್ನು ಕೂಗತೊಡಗಿದ. ಶಾಲೆಯ ಇತರೆ ಶಿಕ್ಷಕರೆಲ್ಲಾ ಓಡಿ ಬಂದರು, ಊರಿನ ಕೆಲಜನ ಬಂದು ಸೇರಿದರು.

ಮಹೇಶ ಅಂಬೇಡ್ಕರ್ ಫೋಟೋ ಹಿಡಿದು ಜೋರಾಗಿ "ಸಂವಿಧಾನ ಉಳಿಸಿ" ಎಂದು ಕೂಗುತ್ತಲೇ ಇದ್ದ. ವಿಷಯ ಗೋವಿಂದಯ್ಯ ನವರಿಗೆ ಮುಟ್ಟಿತು. ಅವರು ಓಡಿಕೊಂಡು ಬಂದರು. ಹುಡುಗನನ್ನು ತಬ್ಬಿ ಹಿಡಿದು ಸಂತೈಸಿದರು.

"ಯಾರ್ರ್ರಿ ಅದು ಇವನಿಗೆ ಹೊಡೆದಿದ್ದು"

ಮೂರ್ತಿ ಮುಂದೆ ಬಂದು " ಸಾರ್ ಇವನು ಅನ್ನಬಾರದ ಮಾತು ಅಂದ" ಎಂದರು

" ಸುಮ್ಮನೆ ಮಕ್ಕಳು ಯಾಕ್ರೀ ಅಂತಾರೆ, ನೀವೇ ಏನೋ ಮಾಡಿರಬೇಕು"

ಮಹೇಶ ಅಳುತ್ತಲೇ " ನನ್ನ ಅಂಬೇಡ್ಕರ್ ಫೋಟೋ ಹೊಡೆದು ಹಾಕಿದ್ದಾರೆ ಸರ್" ಅಂದು ಫೋಟೋ ತೋರಿಸಿ ನಡೆದಿದೆಲ್ಲಾ ಹೇಳಿದ.

ಗೋವಿಂದಯ್ಯ ಮೂರ್ತಿಯವರ ಕಡೆ ಸಿಟ್ಟಿನಿಂದ ನೋಡುತ್ತಾ " ನೀವೇ ಈ ಫೋಟೋ ಸರಿಪಡಿಸಿ, ಶಾಲೆಯ ಗೋಡೆಗೆ ಹಾಕಬೇಕು, ಅದಾದ ಮೇಲೆ ಈ ಶಾಲೆಯಿಂದ ಹೋರಡಬೇಕು , ನಿಮಗೆ ಇಲ್ಲಿ ಜಾಗವಿಲ್ಲ, ಹೆಡ್ಮೇಸ್ಟ್ರೇ ಇಷ್ಟೆಲ್ಲಾ ನಡೆದಿದೆ ನೀವು ಏನು ಮಾಡಲೇ ಇಲ್ವಳ್ರಿ"

ಹೆಡ್ಮೇಸ್ಟ್ರು ರಾಮಚಂದ್ರಪ್ಪ " ನಾನು ಮೂರ್ತಿ ಅವರಿಗೆ ಹೇಳಿದೆ ಸರ್, ಅವರು ನನ್ನ ಮಾತೆ ಕೇಳಲಿಲ್ಲ, ಅಂಬೇಡ್ಕರ್ ಅಂದ್ರೆ ಸ್ವಲ್ಪ ಅವರಿಗೆ ಅಷ್ಟಕಷ್ಟೆ ಎಂದೂ ಸೇರಿಸಿ ಹೇಳಿದರು. ಮೂರ್ತಿ ಅವಕ್ಕಾಗಿ ಅವರನ್ನೇ ನೋಡುತ್ತಾ ಗ್ಲಾಸ್ ಹೊಡೆದಿದ್ದ ಅಂಬೇಡ್ಕರ್ ಫೋಟೋ ಹಿಡಿದು ಹೊರನಡೆದರು.

ಗೋವಿಂದಯ್ಯನವರು " ಸಂವಿಧಾನ ಅಂದರೆ ಅಂತ ಎಲ್ಲರನ್ನು ಕೇಳಿದೆಯಂತೆ, ನನ್ನನ್ನ ಯಾಕ್ಲಾ ಕೇಳಿಲ್ಲ, ಸಂಜೆ ಮನೆಕಡೆ ಬಾ ನಾನು ವಿವರಿಸಿ ಹೇಳ್ತೇನೆ" ಎಂದರು. ಅದನ್ನು ಕೇಳಿ ಮಹೇಶನ ಮುಖ ಅರಳಿತು. ಮೂರ್ತಿ ಮೇಸ್ಟ್ರು ಹಿಡಿದು ಹೊರಟಿದ್ದ ಫೋಟೋದಲ್ಲಿ ಅಂಬೇಡ್ಕರ್ ನಗುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.