ಬಕುಲದ ಬಾಗಿಲಿನಿಂದ

ಲೇ: ಸುಧಾ ಆಡುಕಳ

ಪ್ರ: ಬಹುರೂಪಿ

ಮೊ: 70191 82729

ಕಥೆ ಮತ್ತು ಪ್ರಬಂಧದ ನಡುವಣ ಗೆರೆ ಇತ್ತೀಚೆಗಂತೂ ತೀರಾ ತೆಳ್ಳಗಾಗುತ್ತಿದೆ. ಅವುಗಳ ನಡುವಣ ಬೆಳಕಿಂಡಿಯಿಂದ ಬಿಸಿಲುಕೋಲಿನಂತೆ ಅಂಕಣ ಬರಹಗಳೂ ಬೆಳಕು ಬೀರುತ್ತಿವೆ. ಹಿಂದೆಲ್ಲ ಅಂಕಣ ಬರಹಗಳೆಂದರೆ ಅದೊಂದು ಪಾಂಡಿತ್ಯಪೂರ್ಣ, ಮಾಹಿತಿಯುಕ್ತ ಆಕರ ಬರಹಗಳು. ಈಗ ಹಾಗಲ್ಲ, ‘ಆನು ಒಲಿದಂತೆ ಹಾಡುವೆ’ ಎನ್ನುವ ಮಾದರಿಯಲ್ಲಿ ಅವರವರ ಭಾವಕ್ಕೆ ತಕ್ಕಂತೆ, ಅವರವರ ಶೈಲಿಯಲ್ಲಿ ತಂಗಾಳಿಯಂತೆ ಸುಳಿದಾಡುತ್ತಿವೆ. ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’ ಇಂತಹದ್ದೊಂದು ಅಂಕಣ ಬರಹಗಳ ಸಂಕಲನ.

‘ಇಲ್ಲಿ ಪಿಸುಮಾತುಗಳಿವೆ’ ಎನ್ನುವ ಅಡಿಟಿಪ್ಪಣಿಯೊಂದನ್ನು ಅವರು ಮುಖಪುಟದಲ್ಲೇ ಮುದ್ರಿಸಿದ್ದಾರೆ. ಅವರೇನೋ ಈ ಬರಹಗಳನ್ನು ಪಿಸುಮಾತುಗಳೆಂದು ಕರೆದಿದ್ದಾರೆ. ಆದರೆ ಆ ಮಾತುಗಳು ಕೆಲವೆಡೆ ಗಟ್ಟಿಧ್ವನಿಯ ಸಿಟ್ಟಿನಂತೆ, ಹಲವೆಡೆ ಮೆಲುದನಿಯ ಗೊಣಗಾಟದಂತೆ, ಅಲ್ಲಲ್ಲಿ ಪ್ರಖರ ಸೂರ್ಯಕಿರಣದಂತೆ ಅನುಭವಕ್ಕೆ ಬರುತ್ತವೆ. ಯಕ್ಷಗಾನವನ್ನೇ ಉಸಿರಾಡುತ್ತಿದ್ದ ಅಪ್ಪನ ಜೊತೆಗೆ ಮನೆಯಲ್ಲಿ ಯಕ್ಷಪ್ರಸಂಗಗಳನ್ನು ಆಡುತ್ತಾಡುತ್ತಲೇ ಬೆಳೆದ ಸುಧಾ ಅವರು, ಆಗ ಮನಸಿನ ರಂಗಸ್ಥಳದಲ್ಲಿ ಅಸ್ಪಷ್ಟವಾಗಿ ಬೆಳೆಯುತ್ತಿದ್ದ ಪೌರಾಣಿಕ ಹೆಣ್ಣು ಪಾತ್ರಗಳನ್ನು ಇಲ್ಲಿನ ತಮ್ಮ ಬರಹಗಳಲ್ಲಿ ಸ್ಪಷ್ಟವಾಗಿ ಗುರುತಿಸುತ್ತಾ ಆಪ್ತಸಂವಾದ ನಡೆಸಿದ್ದಾರೆ. ಅಂಬೆ, ಸೀತೆ, ಊರ್ಮಿಳೆ, ಮಾಧವಿ, ಶಾಂತಲೆ, ಅಹಲ್ಯೆ, ರಾಧೆ, ಶಕುಂತಳೆ, ಗಾಂಧಾರಿಯ ಜೀವದ ಗೆಳತಿ ಕುಮುದಿನಿ, ಕಂಸನ ಅರಮನೆಯ ಕೆಲಸದಾಳು ಕುಬ್ಜೆ– ಹೀಗೆ ಪುರಾಣದ ಪುಣ್ಯರೂಪಿಗಳೆಲ್ಲ ತಮ್ಮ ದಗ್ಧ ಮನಸ್ಸಿನ ಒಳತೋಟಿಗಳನ್ನು ನಿಸೂರಾಗಿ ತೋಡಿಕೊಳ್ಳುತ್ತಾ ಸುಧಾ ಅವರ ಬರಹಗಳ ಮೂಲಕ ಓದುಗರಿಗೆ ಆಪ್ತವಾಗುತ್ತಾರೆ.ಪುರಾಣದ ಪಾತ್ರಗಳು ಹೇಗೆ ನಮ್ಮ ಆಧುನಿಕ ಹೆಣ್ಣುಮಕ್ಕಳ ಜೀವನದ ನೋವು ನಲಿವುಗಳ ಜೊತೆಗೆ ತಾದಾತ್ಮ್ಯಭಾವ ಹೊಂದಿವೆ ಎನ್ನುವ ಅಚ್ಚರಿಯನ್ನು ಸೂಚಿಸುತ್ತಲೇ, ಸುಧಾ ಅವರು ಇಲ್ಲಿನ ಬರಹಗಳ ಕೊನೆಗೆ ಓದುಗರನ್ನು ಯೋಚನೆಗೆ ಹಚ್ಚುವ ಹೊಸ ಹೊಳಹುಗಳನ್ನೂ ನೀಡುತ್ತಾರೆ. ಈ ಪುರಾಣಸ್ತ್ರೀಯರ ಜೊತೆಗೆ ಚರಿತ್ರೆಯ ಅಕ್ಕಮಹಾದೇವಿ, ಯಶೋಧರೆ ಮತ್ತು ಇಥಿಯೋಪಿಯಾದ ರೂಪದರ್ಶಿ, ಯೋನಿಛೇದನದ ಬಲಿಪಶು ವಾರಿಸ್ ಡೆಸರ್ ಕೂಡಾ ಸೇರಿಕೊಂಡಿದ್ದಾರೆ.

ಪುರಾಣಕಾಲದಿಂದಲೂ ಹೆಣ್ಣು ಗಂಡಿನ ಅಹಂಕಾರವನ್ನು ತಣಿಸುವ ಒಂದು ವಸ್ತುವಾಗಿಯೇ ಪರಿಗಣಿತವಾಗಿದ್ದಾಳೆ ಎನ್ನುವುದನ್ನು ಇಲ್ಲಿನ ಬರಹಗಳು ಮತ್ತೆ ಮತ್ತೆ ಸಾಬೀತುಪಡಿಸುತ್ತವೆ. ಆದರೆ ಲೇಖಕಿ ನೇರವಾಗಿ ಪುರಾಣಪ್ರಸಂಗಗಳನ್ನೇ ಎತ್ತಿಕೊಂಡಿದ್ದರೆ ಈ ಬರಹಗಳು ಅಷ್ಟೊಂದು ಆಪ್ತವಾಗುತ್ತಿರಲಿಲ್ಲ. ಆ ಪ್ರಸಂಗವನ್ನು ಪ್ರವೇಶಿಸುವುದಕ್ಕೆ ಮುನ್ನ ನಿಜಬದುಕಿನ ವಾಸ್ತವಗಳನ್ನು ಮುಂದೊಡ್ಡುವ ಸುಧಾ ಅವರ ಪಿಸುಮಾತಿನ ಬರವಣಿಗೆಯ ಕ್ರಮ ಇಲ್ಲಿನ ಓದನ್ನು ಹೆಚ್ಚು ಪರಿಣಾಮಕಾರಿ ಆಗಿಸಿದೆ. ಉದಾಹರಣೆಗೆ ಮಾಧವಿಯ ಕಥೆಯನ್ನೇ ಗಮನಿಸಬಹುದು. ಇಲ್ಲಿ ಲೇಖಕಿಯ ಅಮ್ಮನ ಜೊತೆಗಿನ ಮಾತುಕತೆಯೇ ಮಾಧವಿಯ ಚಿರಂತನ ಕನ್ಯತ್ವದ ಪುರಾಣಕಥೆಗೆ ಸರಾಗ ಏಣಿಯಾಗುವ ಪರಿ ವಿಶಿಷ್ಟ. ‘ಕುತೂಹಲಕ್ಕೆಂಬಂತೆ ಅಮ್ಮನಲ್ಲಿ ಹೆರಿಗೆಯ ಬಗ್ಗೆ ಕೇಳಿದರೆ, ಹೆರಿಗೆಯ ಸಂಕಟ ಕೂಡಾ ಸ್ಮಶಾನ ವೈರಾಗ್ಯದಂತೆ ಕ್ಷಣಿಕ ಕಣೆ. ಹೆಣವನ್ನು ಹೊತ್ತು ಸ್ಮಶಾನಕ್ಕೆ ಹೋಗಿ ಅಲ್ಲಿನ ವಿಧಿವಿಧಾನಗಳನ್ನೆಲ್ಲ ಪೂರೈಸಿ ಬರುತ್ತಾರಲ್ಲ, ಆಗವರೆಲ್ಲರೂ ಈ ಬದುಕಿನಲ್ಲಿ ಇನ್ನೇನಿದೆ, ಎಲ್ಲ ಮೂರು ದಿನ ಬಾಳ್ವೆ ಅಂತೆಲ್ಲ ಹೇಳುತ್ತಿರುತ್ತಾರೆ. ಮನೆಗೆ ಬಂದು ಸ್ನಾನ ಮಾಡಿ ಊಟಕ್ಕೆ ಕುಳಿತವರು ಸಾರಿಗೇನಾದರೂ ಉಪ್ಪು ಕಡಿಮೆಯಾಗಿದ್ದರೆ, ಉಪ್ಪೇ ಇಲ್ಲ.. ಹೇಗೆ ಉಣ್ಣೋದು.. ಎಂದು ಶುರು ಮಾಡುತ್ತಾರೆ. ಎಲ್ಲ ನಶ್ವರ ಎಂದವರಿಗೆ ನಾಲಿಗೆ ಮತ್ತೆ ಬದುಕಿನ ರುಚಿಯನ್ನು ಹತ್ತಿಸುತ್ತೆ. ಹಾಗಾಗಿ ಹಡೆದ ಸಂಕಟ ಮರೆತ ಹೆಣ್ಣು ಮತ್ತೆ ಕನ್ಯೆಯಾಗುತ್ತಾಳೆ. ಮತ್ತೆ ಇನ್ನೊಂದು ಹೆತ್ತು ತಾಯಾಗುತ್ತಾಳೆ. ಕನ್ಯೆಯಾಗದೇ ತಾಯಾಗಲು ಸಾಧ್ಯವಿಲ್ಲ.. ಎಂದಳು ಅಮ್ಮ.’ ಹೀಗೆ ಅಮ್ಮನ ಮಾತು ಕೊನೆಗೊಂಡಲ್ಲೇ ಯಯಾತಿ ಮಹಾರಾಜನ ಅನುಪಮ ರೂಪವತಿ ಮಗಳು ಮಾಧವಿ, ಮತ್ತೆ ಮತ್ತೆ ಕನ್ಯೆಯಾಗುವ ಕಥೆ ತೆಕ್ಕೆಯಾಗುತ್ತದೆ. ವಿಶ್ವಾಮಿತ್ರನ ಶಿಷ್ಯ ಗಾಲವ, ಗುರುಕಾಣಿಕೆ ನೀಡಲು, ಇಡೀ ದೇಹ ಬಿಳಿಯಾಗಿದ್ದು ಎಡಗಿವಿ ಮಾತ್ರ ಕಪ್ಪಾಗಿರುವ ಎಂಟುನೂರು ಕುದುರೆಗಳನ್ನು ಹುಡುಕಿಕೊಂಡು ಯಯಾತಿಯ ಅರಮನೆಗೆ ಬಂದು ಮಾಧವಿಯನ್ನೇ ಕಾಣಿಕೆಯನ್ನಾಗಿ ಪಡೆಯುವ ಕಥೆ, ಮುಂದೆ ಗಂಡಿನ ವ್ಯವಹಾರ ಜಗತ್ತಿಗೆ ಹೆಣ್ಣು ತೊತ್ತಾಗುವ ಪರಿಯನ್ನು ಬಿಚ್ಚಿಡುತ್ತದೆ. ಮಹಾರಾಜರೇನೋ ಹೆಣ್ಣುಬಾಕರು. ಆದರೆ ಮಹಾತಪಸ್ವಿ ವಿಶ್ವಾಮಿತ್ರ ಕೂಡಾ ಹೆಣ್ಣನ್ನು ಭೋಗದ ತೊತ್ತಾಗಿಸುವುದು ಮಾಧವಿಯಲ್ಲಿ ಹುಟ್ಟಿಸುವ ದಿಗ್ಭ್ರಮೆಯನ್ನು ಲೇಖಕಿ ಎಷ್ಟೊಂದು ಪರಿಣಾಮಕಾರಿಯಾಗಿ ಅಕ್ಷರಕ್ಕೆ ಇಳಿಸಿದ್ದಾರೆಂದರೆ, ಓದುವ ಪ್ರತಿಯೊಂದು ಗಂಡೂ ಅಸ್ವಸ್ಥನಾಗುವಂತಿದೆ.

ಭೀಷ್ಮವಿಜಯದ ಅಂಬೆಯಂತೆ, ಗಂಡಿನ ಸಾವಿರ ಸಂಚುಗಳೆದುರು ಗೆಲ್ಲಲೆಂದು ಜಗತ್ತಿನಲ್ಲಿ ಲಕ್ಷಾಂತರ ಹೆಣ್ಣುಗಳು ಕಾಯುತ್ತಿದ್ದಾರೆ. ಹೀಗೆ ಕಾದವರಲ್ಲಿ ಎಷ್ಟೋ ಹೆಣ್ಣುಗಳು ಅಹಲ್ಯೆಯಂತೆ ಕಲ್ಲಾಗಿದ್ದಾರೆ. ಒಂದು ದಿನವಾದರೂ ಅಂಬೆಯನ್ನು ಗೆಲ್ಲಿಸಬೇಕು ಎನ್ನುವ ಲೇಖಕಿಯ ಆಶಯ ಈ ಇಡೀ ಸಂಕಲನದ ಆಶಯವೂ ಆಗಿ ರೂಪುಗೊಂಡಿದೆ. ಅನಾದಿಕಾಲದಿಂದ ಹೆಣ್ಣು ಸಾಗಿಬಂದ ಸಂಕಟದ ಕಾಲುದಾರಿಗಳ ಮೇಲೆ ಇಲ್ಲಿ ಬೆಳದಿಂಗಳ ಬೆಳಕು ಬಿದ್ದಿದೆ. ಪ್ರತಿಯೊಂದು ಬರಹಕ್ಕೂ ಬಿಡಿಸಿರುವ ಸರಳ ರೇಖಾಚಿತ್ರಗಳು ಓದಿಗೆ ಪೂರಕವಾಗಿವೆ. ಆದರೆ ಎಲ್ಲ ಬರಹಗಳ ಸ್ವರೂಪದಲ್ಲೊಂದು ಏಕತಾನತೆ ಕಾಡುತ್ತದೆ. ಹಲವೆಡೆ ಅಕ್ಷರ ತಪ್ಪುಗಳ ಆಭಾಸ, ಕೆಲವೆಡೆ ಪುಟ ಸಂಖ್ಯೆಗಳ ಪಲ್ಲಟ ಓದುಗರಿಗೆ ಕಿರಿಕಿರಿ ಉಂಟುಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.