ಇಂದು ಕುರುಕ್ಷೇತ್ರ ಯುದ್ಧದ ಹದಿನೆಂಟನೇ ದಿನ. ನಾನು, ಶಲ್ಯ ಮತ್ತು ದುರ್ಯೋಧನ ಮಾತ್ರ ಉಳಿದುಕೊಂಡಿದ್ದೇವೆ. ವಾಸ್ತವವೇನೆಂದರೆ, ಯುದ್ಧ ಮಾಡಲು ಇನ್ನೇನೂ ಉಳಿದಿಲ್ಲ. ಆದರೂ, ಆರಂಭಿಸಿದ್ದಕ್ಕೊಂದು ಅಂತ್ಯ ಕಾಣಿಸಲೇಬೇಕು. ಈಗ, ಯುದ್ಧಭೂಮಿಯಲ್ಲಿ ನಿಂತು ನೋಡಿದರೆ ಸುತ್ತಲೂ ಛಿದ್ರವಾಗಿ ಬಿದ್ದಿರುವ ಹೆಣಗಳ ರಾಶಿ. ನಿರಂತರವಾಗಿ ಹೆಣಗಳನ್ನು ಸುಡುತ್ತಲೇ ಇದ್ದಾರೆ. ಆದರೂ, ಪ್ರತಿಕ್ಷಣವೂ ಇನ್ನಷ್ಟು ಬೀಳುತ್ತಿವೆ. ಅವುಗಳ ಮೇಲೆ ಸಂಭ್ರಮದಿಂದ ಓಡಾಡುತ್ತಿರುವ ಹುಳುಗಳು. ನಡೆದಾಡಿದರೆ ಕಾಲಿಗಂಟುವ ರಕ್ತ ಮತ್ತು ಕೊಳೆಯುತ್ತಿರುವ ಮಾಂಸ. ಹೊಟ್ಟೆ ತೊಳೆಸುವಷ್ಟು ದುರ್ನಾತ. ಮೂಗು ಸಂಪೂರ್ಣ ಮುಚ್ಚಿಕೊಂಡೇ ಇರಬೇಕೆನ್ನಿಸುತ್ತದೆ. ಹಾಗೆ ಮಾಡಿದಲ್ಲಿ ಉಸಿರು ನಿಲ್ಲುವ ಭಯ.

ನಿಜವಾಗಿ ಭಯ ಉಳಿದುಕೊಂಡಿದೆಯೇನು?...ಇಲ್ಲವೆನ್ನಬಹುದು. ಆಪ್ತರೆನಿಸಿಕೊಂಡವರ ಸಾವುಗಳನ್ನು ನೋಡಿ ನೋಡಿ, ಸಾವು, ಈಗ ಭಯ ಹುಟ್ಟಿಸುವ ಅಧಿಕಾರ ಕಳೆದುಕೊಂಡಿದೆ. ನನ್ನ ಕಣ್ಮುಂದೆ ಬೆಳೆದ ಬಹುತೇಕ ಮಕ್ಕಳು ಸತ್ತಾಯ್ತು. ಉಳಿದಿರುವ ದುರ್ಯೋಧನನ ಮುಖದಲ್ಲಿಂದು ಸಾವಿನ ಛಾಯೆ ಕಾಣಿಸುತ್ತಿದೆ. ಕಳೆದ ಹದಿನೇಳು ದಿನಗಳಲ್ಲಿ ಸತ್ತ ಸೈನಿಕರು ಲಕ್ಷಾಂತರ. ಅವರ ಮರಣದೊಂದಿಗೆ ತಮ್ಮ ಬದುಕು ಮತ್ತು ಭವಿಷ್ಯ ಕಳೆದುಕೊಂಡವರು ಇನ್ನೊಂದಿಷ್ಟು ಲಕ್ಷ ಮಂದಿ. ನೋಡಿದರೆ ಆಶ್ಚರ್ಯವಾಗುತ್ತದೆ- ಎಲ್ಲಿಂದಲೋ ಬಂದ ಜನರಿಗೆ, ಇಲ್ಲಿ ಬೆಂಕಿಗೆ ಸಿಕ್ಕ ಮಿಡತೆಗಳಂತೆ ಸಾಯಲು ಪ್ರೇರಣೆಯೇನು? ಅವರಿಗೆ ಮತ್ತು ಈ ದಾಯಾದಿಗಳ ಜಗಳಕ್ಕೆ ಏನೂ ಸಂಬಂಧವಿಲ್ಲ. ಬಹುಶಃ, ಹಸ್ತಿನಾಪುರದ ಮಣ್ಣೇ ಅಂತಹದ್ದು. ಇಲ್ಲಿ ಬೆಳೆಗಿಂತ ರಾಜಕಾರಣವೇ ಹೆಚ್ಚು ಹುಲುಸಾಗಿ ಬೆಳೆಯುತ್ತದೆ. ಬೇರೆಯವರ ವಿಚಾರ ಹೋಗಲಿ, ಸ್ವತಃ ನಾನು ಹಾಗಲ್ಲವೇ? ಗಾಂಧಾರದಲ್ಲಿ ಇರಬೇಕಾದವನು ಇಲ್ಲಿಯೇ ಬೇರೂರಿಬಿಟ್ಟೆ. ಅಕ್ಕ ಗಾಂಧಾರಿಯನ್ನು ಕತ್ತಲಲ್ಲಿ ಒಬ್ಬಳೇ ಬಿಡಲಾಗಲಿಲ್ಲ. ಅವಳ ಆಪ್ತರಕ್ಷಕನಾಗಿ ಇಲ್ಲಿಯೇ ಜೊತೆಯಲ್ಲಿರಬೇಕೆನಿಸಿತು. ಉಳಿದುಕೊಂಡವನು, ಹಲವಾರು ಬಾರಿ ನನ್ನೂರಿಗೆ ಮರಳಿ ಹೋಗಬೇಕೆಂದು ಅಂದುಕೊಂಡರೂ ಸಾಧ್ಯವಾಗಲೇ ಇಲ್ಲ.

ನನಗೀಗ ಸ್ಪಷ್ಟವಾಗಿದೆ, ಇಂದು ನನ್ನ ಅಂತ್ಯವಾಗದೇ ಕುರುಕ್ಷೇತ್ರ ನಿಶ್ಯಬ್ದವಾಗುವುದಿಲ್ಲ. ನನ್ನ ಮುಗಿಸಿಬಿಡಲು ಪಾಂಡವರು ಆಕ್ರೋಶದಿಂದ ಹಾತೊರೆಯುತ್ತಿದ್ದಾರೆ. ದುರ್ಯೋಧನನ ಪ್ರತಿ ಯೋಜನೆಯ ರೂವಾರಿ ನಾನೇ. ಸಧ್ಯ, ಅವರ ಮತ್ತು ಸಿಂಹಾಸನದ ನಡುವೆ ಇರುವ ಅಡ್ಡಿ ನಾನೊಬ್ಬನೇ. ಅಂದು ಸಭೆಯಲ್ಲಿ ಪಾಂಡವರು ಪಗಡೆಯಾಟದಲ್ಲಿ ಸೋತು ಎಲ್ಲಾ ಕಳೆದುಕೊಂಡಾಗ, ಸಹದೇವ ಪ್ರತಿಜ್ಞೆ ಮಾಡಿದ್ದ- ‘ಶಕುನಿಯ ಸಾವು ನನ್ನ ಕೈಯಿಂದಲೇ.…’ ಎಷ್ಟೊಂದು ವಿಚಿತ್ರವಲ್ಲವೇ? ಜನರು ಹತಾಶೆಯಿಂದ ನಮ್ಮೆದುರು ಇಂತಹ ಪ್ರತಿಜ್ಞೆ ಮಾಡುವಾಗ ನಾವು ಕುಹಕವಾಡುತ್ತೇವೆ. ಯಾಕೆಂದರೆ, ಆಗ ನಾವು ಗೆಲುವನ್ನು ಸಂಭ್ರಮಿಸುತ್ತಿರುತ್ತೇವೆ, ಎದುರಿಗಿರುವವನು ಹತಾಶೆಯಲ್ಲಿರುತ್ತಾನೆ. ಆದರೆ, ವಾಸ್ತವದಲ್ಲಿ ಸೋಲನ್ನು ಸ್ವೀಕರಿಸುವುದು ಅಷ್ಟು ಸುಲಭವಲ್ಲ. ಅದೇನೇ ಇರಲಿ, ಸಾವು ಸಮೀಪಿಸುತ್ತಿರುವಾಗ ಮನಸ್ಸಿನಲ್ಲಿ ಒಂದಿಷ್ಟು ಹೊಯ್ದಾಟವಷ್ಟೇ. ನಮ್ಮ ಪಡೆಯಲ್ಲಿದ್ದ ಎಲ್ಲಾ ಅತಿರಥ ಮಹಾರಥರು ಸತ್ತು ಹೋದರು. ಆದರೆ, ನಾನಿನ್ನೂ ಉಳಿದುಕೊಂಡಿದ್ದೇನೆ. ಭೀಷ್ಮ ಮತ್ತು ಧೃತರಾಷ್ಟ್ರರ ಮೇಲಿನ ಹಳೆಯ ಸೇಡಿನ ಭರದಲ್ಲಿ, ನಾನು ಅತ್ಯಂತ ಪ್ರೀತಿಸಿದ ಏಕೈಕ ವ್ಯಕ್ತಿ ದುರ್ಯೋಧನನನ್ನು ಇನ್ನೇನು ಕಳೆದುಕೊಳ್ಳಲಿದ್ದೇನೆ. ನಿಜ, ಅವನ ಸಾವು ನನ್ನ ಅಪ್ಪನ ಆತ್ಮಕ್ಕೆ ತೃಪ್ತಿ ತಂದೀತು, ಆದರೆ ನನಗಲ್ಲ. ಅದನ್ನು ನೋಡುವಷ್ಟು ಶಕ್ತಿಯೂ ನನ್ನಲ್ಲಿ ಉಳಿದಿಲ್ಲ. ಹಾಗಾಗಿ, ಅವನು ಸಾಯುವ ಮೊದಲೇ ನಾನು ಸಾಯಬೇಕಿದೆ. ಈ ಅಂತಿಮ ಕ್ಷಣದಲ್ಲಿ ಹಳೆಯದೆಲ್ಲಾ ಒಂದೊಂದಾಗಿ ನೆನಪಿಗೆ ಬರುತ್ತಿವೆ…

ನನ್ನ ಅಪ್ಪ ಗಾಂಧಾರದ ರಾಜ, ಸುಬಲ. ಅವನಿಗೆ, ನೂರು ಜನ ಗಂಡು ಮಕ್ಕಳು ಮತ್ತು ಒಬ್ಬಳೇ ಮಗಳು, ಗಾಂಧಾರಿ. ನಾನು, ಅಕ್ಕ ಗಾಂಧಾರಿಯ ಮುದ್ದಿನ ಕೊನೆಯ ತಮ್ಮ, ನೂರನೆಯ ಮಗನಾದ್ದರಿಂದ ‘ಸೌಬಲ’ನೆಂದೂ ಕರೆಯುತ್ತಾರೆ. ಅಕ್ಕ ನನ್ನನ್ನು ಅಮ್ಮನಂತೆ ಸಲಹಿದಳು. ನನಗಿನ್ನೂ ನೆನಪಿದೆ. ಅವಳಿಗೆ ಕತ್ತಲೆಯೆಂದರೆ ಬಹಳ ಭಯವಿತ್ತು. ರಾತ್ರಿ ಒಬ್ಬಳೇ ಮಲಗಲು ಹೆದರುತ್ತಿದ್ದಳು. ನಾನು ಅವಳಿಗಾಗಿ ಮಿಂಚುಹುಳುಗಳನ್ನು ಹಿಡಿದು, ರಾತ್ರಿ ಅವಳ ಶಯ್ಯಾಗೃಹದಲ್ಲಿ ತೇಲಿ ಬಿಟ್ಟು ಬೆಳಕಿನ ಜೊತೆಯಾಗಲೆಂದು ಕಾಳಜಿ ವಹಿಸುತ್ತಿದ್ದೆ.

ಹೀಗೆ ಬೆಳೆದ ಗಾಂಧಾರಿಗೆ ಒಂದು ದಿನ ದೊಡ್ಡ ಮನೆತನದ ನೆಂಟಸ್ತಿಕೆ ಬಂತು. ಕುರುವಂಶದ ಮಾರ್ಗದರ್ಶಕ, ಪ್ರಖ್ಯಾತ ಬ್ರಹ್ಮಚಾರಿ, ಭೀಷ್ಮ ಬಂದಿದ್ದ. ಯುವರಾಜ ದೃತರಾಷ್ಟ್ರನಿಗೆ ಗಾಂಧಾರಿಯನ್ನು ಮದುವೆ ಮಾಡಿಕೊಡಬೇಕೆಂದು ಆಜ್ಞೆ ಮಾಡಿದ. ಅವರೆದುರು ದುರ್ಬಲರಾಗಿದ್ದ ನಮಗೆ ಒಪ್ಪಿಕೊಳ್ಳುವಂತೆಯೂ ಇಲ್ಲ, ಬಿಡುವಂತೆಯೂ ಇರಲಿಲ್ಲ. ಭೀಷ್ಮನ ಇತಿಹಾಸ ಹೇಗೆ ಭಯಂಕರವಾಗಿದೆಯೆಂದರೆ, ಹಿಂದೆ, ಕಾಶಿರಾಜನ ಅರಮನೆಯಲ್ಲಿ ನಡೆಯುತ್ತಿದ್ದ ಸ್ವಯಂವರಕ್ಕೆ ನುಗ್ಗಿ ಅಂಬೆ, ಅಂಬಿಕೆ ಮತ್ತು ಅಂಬಾಲಿಕೆಯರನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ, ತನ್ನ ಸಹೋದರ ವಿಚಿತ್ರವೀರ್ಯನಿಗೆ ಮದುವೆ ಮಾಡಿಸಿದವ. ಇದನ್ನು ವಿರೋಧಿಸಿದ ಅಂಬೆಯ ಬದುಕೇ ಹಾಳಾಯಿತು. ಇಂತಹ ಅಧಿಕಾರದ ಮತ್ತಿನಲ್ಲಿರುವವರನ್ನು ಎದುರು ಹಾಕಿಕೊಂಡು ನಾವು ಬದುಕುಳಿಯಲುಂಟೇ? ಹಾಗಂತ, ಹುಟ್ಟುಕುರುಡ ಧೃತರಾಷ್ಟ್ರನಿಗೆ ಪ್ರೀತಿಯ ಅಕ್ಕನನ್ನು ಮದುವೆ ಮಾಡಿಸುವುದೇ? ಆದರೆ, ನಮಗೆ ಆಯ್ಕೆಗಳಿರಲಿಲ್ಲ. ಮೌನವಾಗಿ ಒಪ್ಪಿಕೊಳ್ಳಬೇಕಿತ್ತು. ಅಕ್ಕ, ಸುಂದರ ನಾಳೆಯ ನಿರೀಕ್ಷೆಗಳನ್ನು ತುಂಬಿಕೊಂಡಿದ್ದ ತನ್ನ ಕಣ್ಣುಗಳಿಗೆ ಶಾಶ್ವತವಾಗಿ ಬಟ್ಟೆ ಕಟ್ಟಿಕೊಂಡು ಕುರುಡಾಗಲು ನಿರ್ಧರಿಸಿದಳು. ಅವಳ ವಿವಾಹ, ನನ್ನ ಜೀವನದ ಅತ್ಯಂತ ದುಃಖದ ದಿನವಾಗಿತ್ತು.

ಗಾಂಧಾರಿ ಮೌನವಾಗಿ ಹಸ್ತಿನಾಪುರ ಸೇರಿದಳು. ಅವಳ ದೀರ್ಘ ಮೌನದ ನಿಟ್ಟುಸಿರಿನ ಹಿಂದಿನ ನೋವು ನನಗೆ ಮಾತ್ರ ಅರ್ಥವಾಗಿತ್ತು. ಆದರೆ ನಾನು ನಿರ್ಧಾರ ತೆಗೆದುಕೊಳ್ಳಲಾಗದಷ್ಟು ಕಿರಿಯನಾದುದರಿಂದ ಅಸಹಾಯಕನಾಗಿ ಅನ್ಯಾಯವನ್ನು ಸಹಿಸಿಕೊಳ್ಳಬೇಕಿತ್ತು. ಆದರೆ, ಈ ಸಹಿಸಿಕೊಳ್ಳುವುದು ಕೂಡ ಹೆಚ್ಚು ದಿನ ನಡೆಯಲಿಲ್ಲ. ಒಂದು ದಿನ ಕುರುವಂಶದ ಭಟರು ಬಂದು, ನನ್ನಪ್ಪ ಮತ್ತು ನಾವು ನೂರು ಮಂದಿ ಸಹೋದರರನ್ನು ಸೆರೆಹಿಡಿದು ಹಸ್ತಿನಾಪುರಕ್ಕೆ ಕರೆದೊಯ್ದರು. ಅಲ್ಲಿ ತಲುಪಿದ ನಂತರ ತಿಳಿದುಕೊಂಡ ವಿಷಯವೆಂದರೆ, ಗಾಂಧಾರಿಯ ಮೊದಲ ಮದುವೆ ವಿಚಾರವನ್ನು ಅವರಿಗೆ ನಾವು ತಿಳಿಸದಿದ್ದುದು, ಘೋರ ಅಪರಾಧವಾಗಿತ್ತು. ಸತ್ಯವೇನೆಂದರೆ, ಅದನ್ನು ತಿಳಿಸಬೇಕಾದ ಅಗತ್ಯ ನಮಗೆ ಕಾಣಿಸಿರಲಿಲ್ಲ. ಅದರ ಹಿನ್ನೆಲೆಯಿಷ್ಟೇ…

ಗಾಂಧಾರಿ ವಿವಾಹದ ಪ್ರಾಯಕ್ಕೆ ಬಂದಾಗ, ನಮ್ಮ ಅರಮನೆಯ ರಾಜಪುರೋಹಿತರು ಅವಳ ಭವಿಷ್ಯದ ಕುರಿತಂತೆ ಒಂದು ಗಂಡಾಂತರಕಾರಿ ವಿಷಯವನ್ನು ಹೇಳಿದ್ದರು- ‘ಅವಳನ್ನು ವಿವಾಹವಾದವನು ತಕ್ಷಣ ಸತ್ತು, ಅವಳು ವಿಧವೆಯಾಗುತ್ತಾಳೆ.’ ಇದನ್ನು ಕೇಳಿ ಕಂಗಾಲಾದ ಅಪ್ಪನಿಗೆ ಆ ಪುರೋಹಿತರೇ ಒಂದು ಪರಿಹಾರವನ್ನು ಸೂಚಿಸಿದರು-‘ಒಂದು ಮೇಕೆಯ ಜೊತೆಗೆ ಸಾಂಕೇತಿಕವಾಗಿ ಅವಳ ಮದುವೆ ಮಾಡಿಸಿ, ಅನಂತರ ಅದನ್ನು ಬಲಿ ಕೊಡಿ. ಆಮೇಲೆ ಬೇರೆ ಯೋಗ್ಯ ವರನೊಂದಿಗೆ ಮದುವೆ ಮಾಡಿಸಿ. ವಿಶೇಷವೆಂದರೆ, ಅವನೊಂದಿಗೆ ದೀರ್ಘ ಕಾಲದ ಸುಖ ಸಂಸಾರ ನಡೆಸುವ ಸಾಧ್ಯತೆ ಕಾಣಿಸುತ್ತಿದೆ.’

ಪುರೋಹಿತರ ಮಾತಿನಂತೆ ನಾವು ನಡೆದುಕೊಂಡೆವು. ಇದು ಹೇಗೋ ದೃತರಾಷ್ಟ್ರ ಮತ್ತು ಭೀಷ್ಮರಿಗೆ ಗೊತ್ತಾದಂತೆ, ‘ಕುರುವಂಶದ ರಾಜಕುಮಾರನಿಗೆ ವಿಧವೆಯನ್ನು ಮದುವೆ ಮಾಡಿಸುವಷ್ಟು ಸೊಕ್ಕೆ?’ ಎಂದು ನಮ್ಮನ್ನೆಲ್ಲಾ ನಿರ್ದಯವಾಗಿ ಕಾರಾಗೃಹಕ್ಕೆ ತಳ್ಳಿದರು. ಅವರ ಆಕ್ರೋಶ ನಮ್ಮನ್ನೆಲ್ಲಾ ಸಾಯಿಸುವ ಮಟ್ಟದಲ್ಲಿತ್ತು. ಅದಕ್ಕಾಗಿ, ದಿನಾ ಒಂದು ಮುಷ್ಟಿ ಅನ್ನವನ್ನಷ್ಟೇ ನೀಡುತ್ತಿದ್ದರು. ನಾವಿದ್ದುದು ನೂರ ಒಂದು ಮಂದಿ-ಅಪ್ಪ ಮತ್ತು ನೂರು ಗಂಡುಮಕ್ಕಳು. ಅವರು ಕೊಡುವ ಬೊಗಸೆ ಊಟ ಕೇವಲ ಒಬ್ಬನಿಗೆ ಸಾಕಾಗಿತ್ತು. ಅಪ್ಪನಿಗೆ, ಈ ಕ್ರೂರಿಗಳ ಕೈಯಲ್ಲಿ ನಮ್ಮ ಅಂತ್ಯ ಸಮೀಪಿಸುತ್ತಿದ್ದುದು ಗೊತ್ತಾಗಿ ಹೋಯಿತು. ತಕ್ಷಣ, ನಮ್ಮಲ್ಲಿ ಯಾರಾದರೂ ಒಬ್ಬರನ್ನು ಉಳಿಸಿ, ಉಳಿದವರು ದೇಹ ತ್ಯಾಗ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಆ ಸಮರ್ಥನನ್ನು ನಿರ್ಧರಿಸಲು ಅಪ್ಪ ನಮ್ಮನ್ನು ಒಂದು ಪರೀಕ್ಷೆಗೆ ಒಡ್ಡಿದರು…

ನಮ್ಮೆಲ್ಲರ ಕೈಗೆ ಒಂದು ಒಣಗಿದ ಮೂಳೆಯ ತುಂಡನ್ನು ಕೊಟ್ಟು, ಅದರಲ್ಲಿ ಒಂದು ತೆಳ್ಳಗಿನ ದಾರವನ್ನು ತೂರಿಸಲು ಹೇಳಿದರು. ನನ್ನ ಯಾವ ಅಣ್ಣಂದಿರಿಗೂ ಅದು ಸಾಧ್ಯವಾಗದೇ ಹೋಯಿತು. ಕೊನೆಗೆ ನನ್ನ ಸರದಿ ಬರುವಾಗ ನಾನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡಿದ್ದೆ, ಅದನ್ನು ಹೇಗೆ ಸಾಧಿಸಬೇಕೆಂದು. ಅಲ್ಲಿ ಅಲೆದಾಡುತ್ತಿದ್ದ ಒಂದು ಇರುವೆಯನ್ನು ಹಿಡಿದು ಅದಕ್ಕೆ ದಾರವನ್ನು ಕಟ್ಟಿ ಆ ಮೂಳೆಯೊಳಗೆ ತುರುಕಿಸಿದೆ. ಆ ಇರುವೆ, ಬೆಳಕಿನ ದಾರಿ ಹುಡುಕುತ್ತಾ ಇನ್ನೊಂದು ರಂಧ್ರದಿಂದ ಹೊರ ಬಂತು. ಆಗ ಅಪ್ಪನಿಗೆ ಸ್ಪಷ್ಟವಾಗಿ ಹೋಗಿತ್ತು, ಈ ವಂಶವನ್ನು ಮುಂದುವರಿಸಲು ಅರ್ಹನಾದ ವಾರಸುದಾರ ನಾನೊಬ್ಬನೇ ಎಂದು. ಅದಕ್ಕಾಗಿ, ಅವರೆಲ್ಲಾ ನನ್ನೊಬ್ಬನಿಗೆ ಊಟ ಕೊಟ್ಟು ತಮ್ಮ ಪ್ರಾಣ ತ್ಯಾಗ ಮಾಡಲು ನಿರ್ಧರಿಸಿದರು. ಹೀಗೆ, ದಿನವೂ ನನ್ನೆದುರು ಅವರೆಲ್ಲಾ ಸಾಯುತ್ತಾ, ಕೊನೆಗೆ ನನ್ನ ಅಪ್ಪ ಮಾತ್ರ ಉಳಿದ. ತಾನು ಸಾಯುವ ಮೊದಲು, ಅಳಿಯ ಧೃತರಾಷ್ಟ್ರನನ್ನು ಒಮ್ಮೆ ನೋಡಬೇಕೆಂದು ಮನವಿ ಸಲ್ಲಿಸಿ, ಬಂದ ಅವನಲ್ಲಿ ಬೇಡಿಕೊಂಡ-

‘ಈಗ ನಮ್ಮಲ್ಲಿ ಉಳಿದಿರುವವನು ಶಕುನಿ ಒಬ್ಬನೇ. ಅವನ ಮೇಲಾದರೂ ಕರುಣೆ ತೋರಿಸು. ಅವನು ಬಹಳ ಮುಗ್ಧ. ಅವನಿಂದ ನಿನಗೇನೂ ತೊಂದರೆಯಿಲ್ಲ. ನಿನ್ನ ಎಳೆಯ ಮಕ್ಕಳಿಗೆ ಹಿತೈಷಿ ಮಾವನಾಗಿ ಜೊತೆಗಿರುತ್ತಾನೆ. ದಯವಿಟ್ಟು ಅವನನ್ನು ಬಿಡುಗಡೆಗೊಳಿಸು.’

ಬಹುಶಃ, ಸಾಯುತ್ತಿರುವ ಮನುಷ್ಯನ ಮಾತಿಗೆ ಕರುಣೆ ಉಕ್ಕಿ ಧೃತರಾಷ್ಟ್ರ ಒಪ್ಪಿದ, ಅನ್ನಿಸುತ್ತೆ. ಸಾಯುವ ಮೊದಲು ಅಪ್ಪ ನನ್ನಲ್ಲಿ ವಚನ ತೆಗೆದುಕೊಂಡ- ‘ನಮ್ಮ ವಂಶವನ್ನು ನಿರ್ನಾಮ ಮಾಡಿದ ಈ ಭೀಷ್ಮ ಮತ್ತು ಧೃತರಾಷ್ಟ್ರರನ್ನು ಸುಮ್ಮನೆ ಬಿಡಬೇಡ. ಅವರ ಸಂಪೂರ್ಣ ವಿನಾಶದಿಂದಷ್ಟೇ ನನ್ನ ಆತ್ಮಕ್ಕೆ ಸದ್ಗತಿ.’

ಅಷ್ಟಕ್ಕೇ ತೃಪ್ತಿಯಾಗದೆ, ಈ ವಚನ ನನ್ನ ದೇಹ ಮತ್ತು ಮನಸ್ಸನ್ನು ಸದಾ ಕಾಡುತ್ತಿರಲಿಯೆಂದು, ನನ್ನಪ್ಪ ತನ್ನ ನಿಸ್ತೇಜ ನಡುಗುವ ಕೈಯಿಂದ ನನ್ನ ಮೊಳಕಾಲನ್ನು ತಿರುಚಿ, ತಾನು ನೆಮ್ಮದಿಯಿಂದ ಕೊನೆಯುಸಿರೆಳೆದ.

ಅಂದಿನಿಂದ ನಾನು ಕಾಲೆಳೆದುಕೊಂಡೇ ಓಡಾಡುತ್ತಿದ್ದೇನೆ, ಪ್ರತಿ ಕ್ಷಣವೂ ನನ್ನ ರಕ್ತಸಂಬಂಧಿಗಳ ಮಾರಣಹೋಮದ ನೆನಪು ಸದಾ ಕಾಡುತ್ತಿದೆ. ಬಹುಶಃ, ಇಂದು ನನ್ನ ಅಪ್ಪನ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದು. ಅಪ್ಪನಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಕ್ಕೆ ನಾನು ಕೂಡ ನಿರಾಳವಾಗಿ ಸಾಯಬಹುದೇ?...ಈ ಮಾತು ಉಳಿಸಿಕೊಳ್ಳುವುದೇ ನನ್ನ ಜೀವನಧ್ಯೇಯವಾಗಿ, ನಾನು ಗಳಿಸಿದ್ದೇನು?...ಕಳೆದುಕೊಂಡಿರುವುದೇನು?...ಪ್ರಶ್ನೆಗಳು ಹಾಗೆಯೇ ಉಳಿದಿವೆ…

ನನ್ನವರನ್ನೆಲ್ಲಾ ಕಳೆದುಕೊಂಡು ಅನಾಥನಾದ ನಾನು, ಬದುಕಿ ಉಳಿದಿರುವ ಏಕೈಕ ಸಂಬಂಧಿ ಅಕ್ಕ ಗಾಂಧಾರಿಗೆ ಅಂಟಿಕೊಂಡು, ಹಸ್ತಿನಾಪುರದಲ್ಲಿಯೇ ಉಳಿದೆ. ಅವಳ ನೂರು ಮಕ್ಕಳು, ವಿಶೇಷವಾಗಿ ದುರ್ಯೋಧನ ನನ್ನನ್ನು ಪ್ರೀತಿಯಿಂದ ‘ಮಾಮ, ಮಾಮ...’ ಎಂದು ಕರೆಯುತ್ತಾ ಮನಸ್ಸು ಮತ್ತು ಹೃದಯ ಆವರಿಸಿದ್ದ. ನನಗೇನೋ ಗಾಂಧಾರದ ಅಧಿಕಾರ ಮರಳಿ ಸಿಕ್ಕಿತು. ಅಕ್ಕ, ನನಗೆ ರಾಜಕುಮಾರಿ ಅರ್ಷಿಯೊಂದಿಗೆ ಮದುವೆ ಮಾಡಿದಳು. ಕಾಲಕ್ರಮೇಣ, ಉಲೂಕ ಮತ್ತು ವೃಕಾಸುರ ಎಂಬ ಎರಡು ಗಂಡುಮಕ್ಕಳು ಹುಟ್ಟಿದರು. ದೊಡ್ಡವರಾದಂತೆ, ರಾಜ್ಯಭಾರವನ್ನು ಸಂಪೂರ್ಣವಾಗಿ ಮಕ್ಕಳಿಗೆ ವಹಿಸಿ, ನಾನು ಹಸ್ತಿನಾಪುರದಲ್ಲಿಯೇ ಹೆಚ್ಚು ಸಮಯ ಕಳೆಯತೊಡಗಿದೆ. ಯಾಕೆಂದರೆ, ಅಲ್ಲಿಯೇ ನನ್ನೆಲ್ಲಾ ಕೆಲಸಗಳು ಬಾಕಿಯಿದ್ದವು. ಅವುಗಳನ್ನು ಕಾರ್ಯರೂಪಕ್ಕೆ ತರದೇ ನೆಮ್ಮದಿಯಿರಲಿಲ್ಲ. ನೋವಿನ ಕಾಲನ್ನು ಎಳೆಯುತ್ತಾ, ಎಳೆಯುತ್ತಾ ಹಳೆಯ ನೆನಪುಗಳು ಮನಸ್ಸನ್ನು ಸದಾ ಚುಚ್ಚುತ್ತಿದ್ದವು.

ಹಿಂದಿರುಗಿ ನೋಡಿದರೆ, ಕೌರವರು ಮತ್ತು ಪಾಂಡವರ ಮಧ್ಯೆ, ‘ವಂಶ ಅಳಿಸಿಹೋದರೂ ಪರವಾಗಿಲ್ಲ, ಅಧಿಕಾರ ಬೇಕು’ ಎನ್ನುವ ದ್ವೇಷ ಸಾಧಿಸಬೇಕಾದ ಸಂದರ್ಭವೇನೂ ಇರಲಿಲ್ಲ. ಕುರುವಂಶ ಸಿಂಹಾಸನದ ಮಾರ್ಗದರ್ಶಕ ಭೀಷ್ಮ, ಬಹಳ ಮುತುವರ್ಜಿ ವಹಿಸಿಕೊಂಡು ಕೌಟುಂಬಿಕ ಸೌಹಾರ್ದತೆಯನ್ನು ಕಾಯ್ದುಕೊಂಡಿದ್ದ. ಇಷ್ಟೊಂದು ಐಕ್ಯತೆಯ ಸರ್ಪ ಕಾವಲಿನಲ್ಲಿ ನಾನು ನನ್ನ ಉದ್ದೇಶ ಸಾಧಿಸಬೇಕಿತ್ತು. ನನಗೆ ಪೂರಕವಾಗಿ ದೊರಕಿದ ಪಗಡೆಯ ದಾಳವೆಂದರೆ ದುರ್ಯೋಧನ. ಅವನು ನನ್ನನ್ನು ಬಹಳ ನೆಚ್ಚಿಕೊಂಡಿದ್ದ ಹಾಗು ನಾನೇನು ಹೇಳಿದರೂ ಸ್ವವಿವೇಚನೆ ಮಾಡದೇ ಸರಿಯೆಂದು ಕಾರ್ಯರೂಪಕ್ಕೆ ತರುವಷ್ಟು ನಂಬಿಕೊಂಡಿದ್ದ. ಅವನಿಗೆ ಪಾಂಡವರ ಸಾಹಸವನ್ನು ನೋಡುವಾಗ ಒಳಗೊಳಗೇ ಕೀಳರಿಮೆಯಾಗುತ್ತಿತ್ತು. ಆದರೆ, ಹಿರಿಯರ ಮುಂದೆ ತೋರಿಸಿಕೊಳ್ಳಲಾಗಲಿ, ಪ್ರತಿಕ್ರಿಯಿಸುವುದಕ್ಕಾಗಲಿ ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ, ಎಲ್ಲರೂ ಸಹಭ್ರಾತತ್ವದ ಪಾಠ ಹೇಳುವವರೇ. ಅವನ ಒಳಗೊಳಗೇ ಹಬೆಯಾಡುತ್ತಿದ್ದ ದ್ವೇಷದ ಕಿಚ್ಚನ್ನು ಮೂರ್ತರೂಪಕ್ಕೆ ತರುವ ಕೆಲಸ ನಾನು ಮಾಡಬೇಕಿತ್ತು.

ಭೀಮ, ಪಾಂಡವರ ರಕ್ಷಕನಾಗಿದ್ದ ಮತ್ತು ದೇಹದಾರ್ಡ್ಯತೆಯಲ್ಲಿ ಎಲ್ಲರನ್ನು ಮೀರಿಸುತ್ತಿದ್ದ. ಹಾಗಾಗಿ, ಅರಮನೆಯಲ್ಲಿ ಎಲ್ಲರೂ ಅವನಿಗೆ ಅಭಿಮಾನಿಗಳಾಗಿದ್ದರು. ಪ್ರತಿ ಬಾರಿಯೂ ಅವನು ದ್ವಂದ್ವ ಯುದ್ಧದಲ್ಲಿ ಕೌರವರನ್ನೆಲ್ಲಾ ಸೋಲಿಸಿ ಗೇಲಿ ಮಾಡುತ್ತಿದ್ದ. ಇದರಿಂದ ದುರ್ಯೋಧನನ ಅಹಂಗೆ ನಿರಂತರ ಧಕ್ಕೆಯಾಗುತ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡು ಅವನಲ್ಲಿ ಸ್ಪರ್ಧಾತ್ಮಕ ಮತ್ತು ಗುಂಪುಗಾರಿಕೆ ಮನೋಭಾವ ಜಾಗ್ರತಗೊಳಿಸತೊಡಗಿದೆ–

‘ಕುರುವಂಶದ ನಿಜವಾದ ಉತ್ತರಾಧಿಕಾರಿ ನೀನೇ. ಆದರೆ, ಎಲ್ಲರ ಪ್ರೀತಿ, ಅನುಕಂಪ ಮತ್ತು ಕಾಳಜಿ ಪಾಂಡವರ ಕಡೆಗಿದೆ. ಈಗಲೇ ನೀನದನ್ನು ಚಿವುಟಿ ಹಾಕದಿದ್ದಲ್ಲಿ, ಜೀವನ ಪರ್ಯಂತ ಯುವರಾಜನಾಗಿಯೇ ಉಳಿಯಬೇಕಾಗುತ್ತದೆ.’

ನನ್ನ ನಿರಂತರ ಬೋಧನೆಯಿಂದ ಪ್ರೇರಿತನಾದ ದುರ್ಯೋಧನ, ಭೀಮನನ್ನು ಮುಗಿಸಿ ಬಿಡುವ ಯೋಜನೆ ರೂಪಿಸತೊಡಗಿದ. ಮೊದಲು, ತಿಂಡಿಪೋತ ಭೀಮನಿಗೆ ಸಿಹಿತಿಂಡಿಯಲ್ಲಿ ವಿಷಬೆರೆಸಿ ಪ್ರೀತಿಯಿಂದ ತಿನ್ನಲು ಆಹ್ವಾನಿಸಿದ. ಅದನ್ನು ಆಸ್ವಾದಿಸಿದ ಭೀಮ ಪ್ರಜ್ಞಾಹೀನನಾಗಿ ಬಿದ್ದ ಮೇಲೆ, ಸದ್ದಿಲ್ಲದೇ ಅವನನ್ನು ಗಂಗೆಗೆ ಎಸೆಯಲಾಯಿತು. ಆದರೆ, ಆಯಸ್ಸು ಗಟ್ಟಿಯಾಗಿದ್ದ ಭೀಮ, ಏನೂ ತೊಂದರೆಯಾಗದೆ ದಡ ಸೇರಿದ.

ಅಸೂಯೆ, ಸ್ಪರ್ಧೆ ಮತ್ತು ಮಾನಸಿಕ ಅಂತರ ಜಾಸ್ತಿಯಾದಂತೆ, ಪಾಂಡವರನ್ನು ಹೇಗಾದರೂ ಮುಗಿಸಬೇಕೆಂದು, ದುರ್ಯೋಧನನಂತೆ ಅವನಪ್ಪ ಧೃತರಾಷ್ಟ್ರನಿಗೂ ಅನ್ನಿಸತೊಡಗಿತು. ಹೇಗಾದರೂ ಸರಿ, ತನ್ನ ಮಗನೇ ರಾಜನಾಗಬೇಕೆಂದು, ಪೂರ್ವ ಸಿದ್ಧತೆಯಂತೆ ಒಂದು ದಿನ, ಯುಧಿಷ್ಠಿರನನ್ನು ಪ್ರೀತಿಯಿಂದ ಕರೆದು ಹೇಳಿದ–

‘ನೀವು ಅಣ್ಣ ತಮ್ಮಂದಿರು, ಅಮ್ಮ ಕುಂತಿಯೊಂದಿಗೆ ಸ್ವಲ್ಪ ದಿವಸ ವಾರಣಾವತಕ್ಕೆ ಹೋಗಿ ವಿಶ್ರಾಂತಿ ತೆಗೆದುಕೊಳ್ಳಿ. ಅಲ್ಲಿ ವಿಶೇಷ ಉತ್ಸವ ನಡೆಯುತ್ತಿದೆ. ನಿಮಗೆ ಮನೋಲ್ಲಾಸವಾದೀತು.’

ಯುಧಿಷ್ಠಿರ ತಕ್ಷಣ ದೊಡ್ಡಪ್ಪನ ಸಲಹೆಯನ್ನು ಒಪ್ಪಿಕೊಂಡ. ಆಗಲೇ, ನಾನು ಮತ್ತು ದುರ್ಯೋಧನ, ಶಿಲ್ಪಿ ಪುರೋಚನನನ್ನು ಪುಸಲಾಯಿಸಿ ಪಾಂಡವರಿಗಾಗಿ ಮೇಣದ ಅರಮನೆಯೊಂದನ್ನು ಸಿದ್ಧಪಡಿಸಿದ್ದೆವು. ಆದರೆ, ನಮ್ಮ ಯೋಜನೆಯನ್ನು ವಿಧುರ ಗ್ರಹಿಸಿಕೊಂಡು ಸಂಪೂರ್ಣ ಹಾಳುಮಾಡಿಬಿಟ್ಟ. ಅವನು ಕಳುಹಿಸಿದ ಸೇವಕ, ಪಾಂಡವರಿಗಾಗಿ ಒಂದು ಗುಪ್ತ ಸುರಂಗ ಮಾರ್ಗ ಸಿದ್ದಪಡಿಸಿ, ಸಮೀಪದ ನದಿಯ ತೀರಕ್ಕೆ ಸಂಪರ್ಕ ಕಲ್ಪಿಸಿ, ಅದರ ಮೂಲಕ ತಪ್ಪಿಸಿಕೊಳ್ಳುವಂತೆ ಮಾಡಿ, ಅವರ ಜೀವ ಉಳಿಸಿದ.

ಆದರೆ, ಅಷ್ಟಕ್ಕೇ ನಾನು ದುರ್ಯೋಧನನನ್ನು ಸುಮ್ಮನೆ ಬಿಡುವಂತಿರಲಿಲ್ಲ. ನನ್ನ ಪ್ರಯತ್ನ ನಿರಂತರತೆ ಕಾಯ್ದುಕೊಳ್ಳಬೇಕಿತ್ತು. ಇದಾದ ಮೇಲೆ ನಮ್ಮ ಮುಂದಿನ ಪ್ರಯತ್ನ, ಕೋಪಿಷ್ಟ ಮುನಿ ದೂರ್ವಾಸರು ಪಾಂಡವರಿಗೆ ಶಾಪ ಕೊಡುವಂತೆ ಮಾಡುವುದಾಗಿತ್ತು. ಒಮ್ಮೆ ಹಸ್ತಿನಾಪುರಕ್ಕೆ ಭೇಟಿ ನೀಡಿದ ದೂರ್ವಾಸರನ್ನು ಪ್ರೀತಿಯಿಂದ ಒತ್ತಾಯಿಸಿ, ‘ವನವಾಸದಲ್ಲಿರುವ ಪಾಂಡವರ ಆತಿಥ್ಯ ಸ್ವೀಕರಿಸಿ, ಇಲ್ಲವಾದಲ್ಲಿ ಅವರಿಗೆ ಬೇಸರವಾದೀತು’ ಎಂದು ಅವರಲ್ಲಿಗೆ ಕಳುಹಿಸಿದೆವು. ಕಾಡಿನಲ್ಲಿದ್ದ ಪಾಂಡವರಿಗೆ ನೀಡಲು ಏನೂ ಇಲ್ಲವೆಂಬ ಖಾತರಿಯಿಂದ, ಇನ್ನು ಶಾಪಗ್ರಸ್ತವಾಗುವುದೆಂದೇ ಅವರಿಗುಳಿದ ದಾರಿಯೆಂದು ಸಂಭ್ರಮಿಸಿದ್ದೆವು. ಆದರೆ ಹಾಗಾಗಲಿಲ್ಲ. ನೀಡಲಾಗದ ಅತಿಥಿ ಸತ್ಕಾರದ ಭಯದಿಂದ, ದ್ರೌಪದಿ ಕೃಷ್ಣನಲ್ಲಿ ಬೇಡಿಕೊಂಡು ‘ಅಕ್ಷಯ ಪಾತ್ರೆ’ ಪಡೆದುಕೊಂಡಳು. ಇದರಿಂದ ದೂರ್ವಾಸರೂ ತೃಪ್ತಿಗೊಂಡು ಶಪಿಸುವುದರ ಬದಲಾಗಿ, ಸಂತುಷ್ಟರಾಗಿ ಆಶೀರ್ವದಿಸಿ ತೆರಳಿದರು.

ಇನ್ನು ಉಳಿದಿದ್ದು, ನನ್ನ ಮೇರು ಪ್ರಯತ್ನ, ಪಗಡೆಯಾಟಕ್ಕೆ ಪಾಂಡವರನ್ನು ಆಮಂತ್ರಿಸಿ ಅದರಲ್ಲಿ ಅವರನ್ನು ಸೋಲಿಸುವುದು. ಯುಧಿಷ್ಠಿರನಿಗೆ ಪಗಡೆಯಾಡುವ ಹುಚ್ಚು. ಆದರೆ ಸರಿಯಾಗಿ ಆಡಲು ಬರುತ್ತಿರಲಿಲ್ಲ. ಇದಕ್ಕಾಗಿ, ಧೃತರಾಷ್ಟ್ರನ ಮೂಲಕ ಅವನನ್ನು ಕರೆಸಿದಾಗ, ಸಂಸಾರ ಸಮೇತ ಓಡೋಡಿ ಬಂದ. ಅವನೆದುರು ಪಗಡೆಯಾಟಕ್ಕೆ, ದುರ್ಯೋಧನನ ಬದಲಾಗಿ ನಾನು ಕೂತೆ. ಪಗಡೆಯಾಟ ನನ್ನ ಸ್ವಕ್ಷೇತ್ರ. ಯುಧಿಷ್ಠಿರ, ಆಟದ ಭರದಲ್ಲಿ ಎಲ್ಲವನ್ನು ಪಣವಿಡುತ್ತಾ ಬಂದ-ರಾಜ್ಯ, ತಮ್ಮಂದಿರು, ಸ್ವತಃ ತನ್ನನ್ನೇ ಮತ್ತು ಕೊನೆಯದಾಗಿ ದ್ರೌಪದಿಯನ್ನು. ಹಾಗು, ಎಲ್ಲವನ್ನೂ ಕಳೆದುಕೊಳ್ಳುತ್ತಾ ಬಂದ. ಅನಂತರ ಘಟಿಸಿದ ದ್ರೌಪದಿಯ ವಸ್ತ್ರಾಪಹರಣ, ಒಂದು ಅಸಂಬದ್ಧ ಮತ್ತು ಅತಿರೇಕದ ಪ್ರಕರಣ.

ಅಂತೂ ನನ್ನ ನಿರೀಕ್ಷೆಯಂತೆ ಕುರುಕ್ಷೇತ್ರ ಯುದ್ಧ ಆರಂಭವಾಯಿತು. ಮಾದ್ರಿಯ ಸಹೋದರ ಶಲ್ಯ ಪಾಂಡವರ ಸಹಾಯಕ್ಕಾಗಿ ಬರುತ್ತಿರುವಾಗ, ಅರ್ಧ ದಾರಿಯಲ್ಲಿ ಅವನನ್ನು ದುರ್ಯೋಧನ ಬರಮಾಡಿಕೊಳ್ಳುವಂತೆ ಮಾಡಿ, ಅವನ ಬೃಹತ್ ಸೈನಕ್ಕೆ ಭಾರಿ ಔತಣ ಏರ್ಪಡಿಸಿ ಆತಿಥ್ಯದ ಹಂಗಿಗೆ ಒಳಪಡಿಸಿ ನಮ್ಮ ಜೊತೆಯಾಗಿಸಿದೆ. ಮುಂದೆ, ಯುದ್ಧದ ಹದಿಮೂರನೇ ದಿನ ಅರ್ಜುನನ ಹದಿಹರೆಯದ ಮಗ ಅಭಿಮನ್ಯುವಿಗಾಗಿ ಏಳು ಹಂತದ ಚಕ್ರವ್ಯೂಹ ರಚಿಸಿ, ಅದರೊಳಗೆ ಅವನು ಸಿಲುಕಿ ಸಾಯುವಂತೆ ಮಾಡಿದೆ. ಮುಖ್ಯವಾಗಿ, ನನ್ನ ಮನೆತನವನ್ನು ಸರ್ವನಾಶಮಾಡಿದ ಭೀಷ್ಮ ಶರಶಯ್ಯೇಯಲ್ಲಿ ನರಳುತ್ತಾ ತನ್ನ ಕೊನೆಯ ದಿನಗಳನ್ನು ಕಳೆಯುತ್ತಿರುವುದನ್ನು ತೃಪ್ತಿಯಾಗುವಷ್ಟು ನೋಡಿ ಕಣ್ತುಂಬಿಕೊಂಡೆ. ಹಾಗೆಯೇ, ಪುತ್ರ ಶೋಕದಲ್ಲಿ ಮುಳುಗಿದ್ದ ಧೃತರಾಷ್ಟ್ರ ನನ್ನಪ್ಪನನ್ನು ನೆನಪಿಸಿದ.

ಇಂದು ಹದಿನೆಂಟನೇ ದಿನ. ಪಾಲಿಗೆ ಬಂದಿದ್ದ ನಾಯಕತ್ವವನ್ನು ಶಲ್ಯನಿಗೆ ಬಿಟ್ಟುಕೊಟ್ಟೆ. ಕಿರಿಯ ಪಾಂಡವ ಸಹದೇವ, ನನ್ನ ಮುದ್ದಿನ ಮಗ ಉಲೂಕನನ್ನು ಕೊಂದು, ನನ್ನ ಸಾಯಿಸಲೆಂದು ನನ್ಮುಂದೆ ಬಂದು ನಿಂತ. ಏಕಾಂಗಿಯಾದ ನನ್ನ ನೋಡಿ ಏನನ್ನಿಸಿತೋ ಏನೋ, ಯುದ್ಧದ ಬದಲು ಶಾಂತಿಯ ಮಾತಾಡಿದ- ‘ಮಾಮ, ಯುದ್ಧ ಸಾಕಿನ್ನು. ದುರ್ಯೋಧನ ನಿನ್ನ ಮಾತು ಕೇಳುತ್ತಾನೆ. ಹೇಳಿ ಬಿಡು ಅವನಿಗೆ. ಎಲ್ಲಾ ಕಳೆದುಕೊಂಡಾಗಿದೆ. ಇಲ್ಲಿ ನೀನು ಸಾಯುವ ಬದಲು ಗಾಂಧಾರಕ್ಕೆ ಹೋಗಿ ಬದುಕು’.

ಒಂದು ಕ್ಷಣ, ಕಣ್ಣು ಮಂಜಾಯಿತು. ಇಷ್ಟೆಲ್ಲಾ ಆಗಿ ಹೋದ ಮೇಲೆ ಶಾಂತಿಯ ಮಾತೇ?...ಅವನಲ್ಲಿ ಹೃದಯ ಬಿಚ್ಚಿಟ್ಟು ನನ್ನ ಕಥೆ ಹೇಳಿಕೊಂಡೆ- ‘ಹೇಗೆ ನನ್ನ ಇಡೀ ಕುಟುಂಬ ದೃತರಾಷ್ಟ್ರನ ಕೈಯಲ್ಲಿ ನಾಶವಾಯಿತು… ನಾನು ಇಷ್ಟು ದಿನ ಸೇಡಿಗಾಗಿ ಕಾಯುತ್ತಿದ್ದೆ… ನನ್ನ ಗುರಿಯಿದ್ದುದು ಪಾಂಡವರ ಮೂಲಕ ದೃತರಾಷ್ಟ್ರನ ಸಂಸಾರ ನಾಶ ಮಾಡುವುದೇ ಹೊರತು, ಪಾಂಡವರ ಮೇಲೆ ಯಾವುದೇ ದ್ವೇಷವಿರಲಿಲ್ಲ...’. ನನ್ನ ಮಾತು ಕೇಳಿ ಸಹದೇವನಿಗೆ ಆಶ್ಚರ್ಯವಾಗಿ, ಪುನಃ ಜೀವದಾನದ ಮಾತಾಡಿದ. ಆದರೆ, ನನಗೆ ಇನ್ನು ಬದುಕುಳಿಯುವ ಇಚ್ಛೆಯಿರಲಿಲ್ಲ. ಸಾಧಿಸಬೇಕಾದುದು ಸಾಧಿಸಿಯಾಗಿದೆ. ಇನ್ನು, ನನ್ನ ಅಚ್ಚುಮೆಚ್ಚಿನ ದುರ್ಯೋಧನನ ಸಾವನ್ನು ನೋಡುವಷ್ಟು ಗಟ್ಟಿ ಹೃದಯ ನನಗಿಲ್ಲ. ನನ್ನ ದೇಹ ಮತ್ತು ಮನಸ್ಸು ಸಾಯಲು ಸಿದ್ಧವಾಗಿತ್ತು. ಮುರಿದ ರಥದಿಂದ ಬಿದ್ದ ನನ್ನನ್ನು ಸಹದೇವ ದ್ವಂದ್ವ ಯುದ್ಧಕ್ಕೆ ಕರೆದ. ಪುನಃ, ನೆಲಕ್ಕುರುಳಿದ ನನ್ನೆದುರಿಗೆ ಸಹದೇವ ಕೊಡಲಿ ಹಿಡಿದುಕೊಂಡು ನಿಂತಿದ್ದ...

* ಇದು ಮಹಾಭಾರತದ ಶಕುನಿಯ ಪಾತ್ರದ ಮರುವ್ಯಾಖ್ಯಾನದ ಪ್ರಯತ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.