ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಸೌಂದರ್ಯ ಸ್ಪರ್ಧೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ಶೃತಿ ಹೆಗಡೆ

Published : 3 ಆಗಸ್ಟ್ 2024, 23:51 IST
Last Updated : 3 ಆಗಸ್ಟ್ 2024, 23:51 IST
ಫಾಲೋ ಮಾಡಿ
Comments
ಅಮೆರಿಕದ ಫ್ಲೊರಿಡಾದಲ್ಲಿ ಈಚೆಗೆ ನಡೆದ ವಿಶ್ವ ಭುವನ ಸುಂದರಿ (ಮಿಸ್ ಯುನಿವರ್ಸಲ್ ಪಟೀಟ್–2024) ಸ್ಪರ್ಧೆಯ ಕಿರೀಟ ಭಾರತದ ಕುವರಿ ಡಾ. ಶೃತಿ ಹೆಗಡೆ ಮುಡಿಗೇರಿದೆ. ಈ ಸ್ಪರ್ಧೆ ಗೆದ್ದ ಮೊದಲ ಭಾರತೀಯ ಯುವತಿ. ಅವರು ‘ಭಾನುವಾರದ ಪುರವಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಪರಿಶ್ರಮ, ಕನಸು ಮತ್ತು ಮುಂದಿನ ಗುರಿ ಕುರಿತು ಮುಕ್ತವಾಗಿ ಹಂಚಿಕೊಂಡರು.
ಡಾ.ಶೃತಿ ಹೆಗಡೆ
ಡಾ.ಶೃತಿ ಹೆಗಡೆ
ಪ್ರ

ಸೌಂದರ್ಯ ಎನ್ನುವುದು ಒಳಗಿನದೊ (ಅಂತರಂಗ), ಹೊರಗಿನದೊ (ಬಹಿರಂಗ)?

ನಾವು ಆತ್ಮವಿಶ್ವಾಸದಿಂದ ಮಾತನಾಡಿದಾಗ, ನಮ್ಮ ಕನಸುಗಳು ಸಾಕಾರಗೊಳ್ಳುತ್ತವೆ. ನಿರ್ಧಾರ ಸ್ಪಷ್ಟವಾಗಿ ಇರುತ್ತದೆ. ಇದಕ್ಕಾಗಿ ಅಂತರಂಗದಲ್ಲಿ ಸಾಕಷ್ಟು ತಯಾರಿ ಆಗಬೇಕು. ನಾನು ಯಾರು, ನನ್ನ ಜೀವನಶೈಲಿ ಹೇಗಿರಬೇಕು ಎಂಬುವುದನ್ನು ನಾನೇ ನಿರ್ಧರಿಸಬೇಕು, ಅದಕ್ಕಾಗಿ ಬೆನ್ನುಹತ್ತಬೇಕು. ಅದಕ್ಕೆ ಪೂರಕವಾಗಿ ಬಾಹ್ಯವಾಗಿ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ.

ಅಂತರಂಗದ ಸೌಂದರ್ಯಕ್ಕೆ ಸ್ಪಷ್ಟವಾದ ವಾಕ್ಯ ಮೊದಲಿಗೆ ಮಸುಕಾಗಿರುತ್ತದೆ. ಅಂತರಂಗದ ಸೌಂದರ್ಯ ಎಂದರೇನು ಎಂದು ನಮ್ಮನ್ನೆ ನಾವು ಪ್ರಶ್ನೆ ಮಾಡಿಕೊಂಡರೆ ಸ್ಪಷ್ಟ ಉತ್ತರ ಸಿಗುವುದು ಕಷ್ಟ. ಆದರೆ, ನಮ್ಮ ಆಚಾರ–ವಿಚಾರ, ಬದುಕನ್ನು ನೋಡುವ ರೀತಿ ವಿಭಿನ್ನವಾಗಿರಬೇಕು. ನಾವು ಇಚ್ಛಿಸಿದಂತೆ ಬದುಕಬೇಕು. ಆಸೆ, ಕನಸುಗಳನ್ನು ಪೂರ್ಣಗೊಳಿಸಿಕೊಳ್ಳಲು ನಿರಂತರವಾಗಿ ಶ್ರಮಿಸಿದಾಗ ನಮ್ಮ ಅಂತರಂಗದ ಸೌಂದರ್ಯ ಸ್ಪಷ್ಟವಾಗುತ್ತದೆ. ನಡೆ–ನುಡಿ ಒಂದೇ ಆಗಿರಬೇಕು. ನಮ್ಮನ್ನು ನಾವು ಬಿಂಬಿಸಿಕೊಳ್ಳಬೇಕಾದರೆ ಬಹಿರಂಗದ ಸೌಂದರ್ಯವೂ ಮುಖ್ಯ.

ಪ್ರ

ಸೌಂದರ್ಯವನ್ನು ಸ್ಪರ್ಧೆಗೆ ಇಡುವುದು ಸರಿಯೇ?

ಎಲ್ಲರಿಗೂ ಅವರದ್ದೇ ಸೌಂದರ್ಯ ಇರುತ್ತದೆ. ಕೇವಲ ನಾಲ್ಕು ದಿನ ನಡೆಯುವ ಸ್ಪರ್ಧೆಯಿಂದ ಸೌಂದರ್ಯವನ್ನು ಅಳೆಯಲು ಸಾಧ್ಯವಿಲ್ಲ.  

ಪ್ರ

ಸೌಂದರ್ಯ ಸ್ಪರ್ಧೆಯಿಂದ ಏನನ್ನು ಕಲಿಯಬಹುದು?

ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಜೀವನ ಪಾಠಗಳನ್ನು ಕಲಿಯುತ್ತೇವೆ. ಸೋಲು–ಗೆಲುವುಗಳನ್ನು ಸಮಾನಾಗಿ ನೋಡುವ ಮನೋಭಾವ ಬೆಳೆಯುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಮೆಟ್ಟಿ ನಿಲ್ಲುವ ಛಲ ಮೂಡುತ್ತದೆ. 

ಪ್ರ

ನೀವು ಬಹುಮುಖ ಪ್ರತಿಭೆ. ನಿಮ್ಮ ಮೊದಲ ಆಯ್ಕೆ ಯಾವುದು ಮತ್ತು ಏಕೆ?

ಸಂಗೀತ, ನೃತ್ಯ, ಪೇಂಟಿಂಗ್‌, ಅಭಿನಯ, ಶಿಕ್ಷಣ ಎಲ್ಲವೂ ನನ್ನ ಜೀವನದ ಅವಿಭಾಜ್ಯ ಅಂಗ. ಇದೆಲ್ಲವೂ ನನಗಿಷ್ಟ. ಇದೆಲ್ಲವೂ ಇದ್ದರೆ ಮಾತ್ರ ನಾನು ಪೂರ್ಣ. ಆದರೆ, ವೈದ್ಯೆ ಆಗಬೇಕು ಎಂಬುದು ನನ್ನ ಗುರಿಯಾಗಿತ್ತು. ವೃತ್ತಿಗೆ ಮೊದಲ ಆದ್ಯತೆ, ವೈದ್ಯೆಯಾಗಿ ಮಾಡುವ ಸೇವೆ ಬೇರೆ ಯಾವ ಕ್ಷೇತ್ರದಲ್ಲೂ ಮಾಡಲು ಸಾಧ್ಯವಿಲ್ಲ. ಉಳಿದಂತೆ ಎಲ್ಲ ಕ್ಷೇತ್ರಕ್ಕೂ ಸಮಾನ ಆದ್ಯತೆ ನೀಡುವೆ.  

ಪ್ರ

ಬಹುಕ್ಷೇತ್ರಗಳ ಆಸಕ್ತಿಯಿಂದ ಒಂದರಲ್ಲೇ ಫೋಕಸ್‌ ಆಗಿರುವುದು ಸಾಧ್ಯವೇ?

ನಾವು ಯಾವುದೇ ಕೆಲಸವನ್ನು ಇಷ್ಟಪಟ್ಟಾಗ ಅದಕ್ಕಾಗಿ ಸಮಯ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಪ್ರಶ್ನೆಯೇ ಬರುವುದಿಲ್ಲ. ಬಾಲ್ಯದಿಂದಲೂ ನೃತ್ಯ, ಸಂಗೀತ, ಚಿತ್ರ ಬಿಡಿಸುವುದು ಅಭ್ಯಾಸವಾಗಿದೆ. ಬರೀ ಓದುವುದೆಂದರೆ ಏನನ್ನೋ ಕಳೆದುಕೊಂಡಂತಾಗುತ್ತದೆ. ಇವೆಲ್ಲವನ್ನೂ ಮಾಡುವುದರಿಂದಲೇ ಏಕಾಗ್ರತೆ ಹೆಚ್ಚಿದೆ.

ಡಾ.ಶೃತಿ ಹೆಗಡೆ
ಡಾ.ಶೃತಿ ಹೆಗಡೆ
ಪ್ರ

ನೀವು ಯಾಕೆ ಸೌಂದರ್ಯ ಸ್ಪರ್ಧೆಯತ್ತ ಆಕರ್ಷಿತರಾದಿರಿ?

ಚಿಕ್ಕವಳಿದ್ದಾಗ ರ‍್ಯಾಂಪ್‌ ವಾಕ್‌ ಮಾಡುತ್ತಿದ್ದೆ. ನಂತರದ ದಿನಗಳಲ್ಲಿ ಶಿಕ್ಷಣದತ್ತ ಗಮನ ಹರಿಸಿದೆ. ವೈದ್ಯೆಯಾಗಲು ವೈದ್ಯಕೀಯ ಕೋರ್ಸ್ ಸೇರಿದೆ. ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು 5.6 ಅಡಿಗಿಂತ ಎತ್ತರ ಇರಬೇಕು ಎಂಬ ಮಾನದಂಡವಿದೆ. ನನ್ನ ಎತ್ತರ ಕಡಿಮೆ ಇರುವ ಕಾರಣಕ್ಕೆ ಸುಮ್ಮನಿದ್ದೆ. ಆದರೂ ಧೈರ್ಯದಿಂದ ‘ಮಿಸ್‌ ಧಾರವಾಡ’ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತಳಾದೆ. ಇದರಿಂದ ಆತ್ಮವಿಶ್ವಾಸ ಮೂಡಿ, ವಿವಿಧ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ರೂಢಿಸಿಕೊಂಡೆ. ಈಗ ‘ಭುವನ ಸುಂದರಿ’ ಪಟ್ಟ ದಕ್ಕಿದೆ!.

ಪ್ರ

ನಿಮ್ಮಂತೆಯೇ ಕನಸು ಕಾಣುವ ಯುವತಿಯರಿಗೆ ಏನು ಹೇಳುತ್ತೀರಿ...

ಕನಸುಗಳು ನನಸಾಗಿಸಿಕೊಳ್ಳಲು ನಿರಂತರ ಪ್ರಯತ್ನದ ಜೊತೆಗೆ ಕುಟುಂಬದವರ ಬೆಂಬಲ ಮುಖ್ಯ. ಪಾಲಕರ ಒಪ್ಪಿಗೆ ಸಿಗದ ಕಾರಣ ಅನೇಕ ಯುವತಿಯರ ಕನಸು ಈಡೇರುವುದಿಲ್ಲ. ಪಾಲಕರಿಗೆ ವಾಸ್ತವವನ್ನು ತಿಳಿಸುವ ಪ್ರಯತ್ನ ಮಾಡಬೇಕು. ಸೌಂದರ್ಯ ಸ್ಪರ್ಧೆಯಲ್ಲಿ ಹಲವು ಹಂತಗಳನ್ನು ದಾಟಬೇಕು. ಸ್ಪರ್ಧೆಯ ಭಾಗವಾಗಿ ನಾನು ಬಿಕಿನಿ ಧರಿಸುತ್ತೇನೆ ಎಂದಾಗ ನನ್ನಮ್ಮ ಈ ಸ್ಪರ್ಧೆಯೇ ಬೇಡ ಎಂದಿದ್ದರು. ಸ್ಪರ್ಧೆಗೆ ಅವರನ್ನು ಕರೆದುಕೊಂಡು ಹೋದೆ, ವಾಸ್ತವ ಅರಿತು ಬೆಂಬಲ ನೀಡಿದರು.

ಡಾ.ಶೃತಿ ಹೆಗಡೆ
ಡಾ.ಶೃತಿ ಹೆಗಡೆ
ಪ್ರ

ಬದುಕಿನಲ್ಲಿ ಖ್ಯಾತಿ ಮುಖ್ಯವೋ, ವ್ಯಕ್ತಿತ್ವವೋ?

ಎಲ್ಲವೂ ದಕ್ಕಿದ ಮೇಲೂ, ನಾವು ನಮ್ಮತನವನ್ನು ಬಿಟ್ಟುಕೊಡಬಾರದು. ಖ್ಯಾತರಾದ ಮಾತ್ರಕ್ಕೆ ಜೀವನವೇ ಗೆದ್ದಂತಲ್ಲ. ಹಾಗೆಂದು ಖ್ಯಾತಿಯಿಂದ ದೂರ ಉಳಿಯಬೇಕಿಲ್ಲ. ಖ್ಯಾತರಾದ ಬಳಿಕ ಹೆಚ್ಚು ಜನ ನಮ್ಮನ್ನು ನೋಡುತ್ತಾರೆ, ಅನುಕರಿಸುತ್ತಾರೆ. ಖ್ಯಾತಿಯ ಜೊತೆಗೆ ಜವಾಬ್ದಾರಿಯೂ ಹೆಚ್ಚಾಗುತ್ತದೆ. ನಮ್ಮ ನಡೆ–ನುಡಿ ಜನರ ಮೇಲೆ ಪ್ರಭಾವ ಬೀರುತ್ತದೆ. ನಾವು ಮಾಡುವ ಒಳ್ಳೆಯ ಕೆಲಸಗಳು ಹೆಚ್ಚು ಜನರಿಗೆ ತಲುಪಬೇಕಾದರೆ ಖ್ಯಾತಿಯೂ ಬೇಕು.

ಡಾ.ಶೃತಿ ಹೆಗಡೆ
ಡಾ.ಶೃತಿ ಹೆಗಡೆ
ಪ್ರ

ನೀವು ಈಗಾಗಲೇ ಸ್ವಯಂಸೇವಾ ಸಂಸ್ಥೆ (ಎನ್‌ಜಿಒ) ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದೀರಿ. ನಿಮ್ಮ ಮುಂದಿನ ಗುರಿ ಮತ್ತು ಉದ್ದೇಶ?

ಕಳೆದ ವರ್ಷ ‘ಶ್ರಮ’ ಎಂಬ ಎನ್‌ಜಿಒ ಆರಂಭಿಸಿದ್ದೇವೆ. ಅಪ್ಪ, ಅಮ್ಮ ಇಬ್ಬರೂ ವೈದ್ಯರಾಗಿದ್ದು, ಹುಬ್ಬಳ್ಳಿ ಮತ್ತು ತುಮಕೂರಿನಲ್ಲಿ ಶಿಬಿರಗಳನ್ನುಆಯೋಜಿಸಿ, ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತೇವೆ. ಸೌಲಭ್ಯ ವಂಚಿತ ಶಾಲೆಗಳಿಗೆ ಆರ್ಥಿಕ ನೆರವು ನೀಡುತ್ತೇವೆ. ಅಂಧಮಕ್ಕಳ ಶಾಲೆಗೆ, ವೃದ್ಧಾಶ್ರಮಕ್ಕೆ ಆಹಾರ ಕೊಡುವುದರ ಜೊತೆಗೆ ಇತರೆ ಸಂಘಸಂಸ್ಥೆಗಳ ಜೊತೆ ಸೇರಿ ’ವಾಕ್‌ ಫಾರ್‌ ಚಾರಿಟಿ’ ಮೂಲಕ ಹಣ ಸಂಗ್ರಹಿಸಿ ಅಗತ್ಯ ಇರುವವರಿಗೆ ನೀಡುತ್ತೇವೆ. ಈ ಎಲ್ಲ ಕೆಲಸಗಳು ಮುಂದುವರಿದಿವೆ. ಮುಂದಿನ ದಿನಗಳಲ್ಲಿ ಬಡಪ್ರತಿಭಾವಂತ ಮಕ್ಕಳಿಗೆ ಸ್ಕಾಲರ್‌ಶಿಪ್‌ ನೀಡುವ ಉದ್ದೇಶವಿದೆ.

ಡಾ.ಶೃತಿ ಹೆಗಡೆ
ಡಾ.ಶೃತಿ ಹೆಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT