ಬಹುತೇಕ ವ್ಯಾಪಾರಿಗಳ ಬಳಿ ಕಾಫಿ ಬೇಳೆ ದಾಸ್ತಾನು ಇದೆ. ಬೆಲೆ ಏರಿಕೆಯಾದ ಸಂದರ್ಭದಲ್ಲಿ ರಫ್ತು ಹೆಚ್ಚಿಸುತ್ತಾರೆ. ಇದು ಸ್ಥಳೀಯವಾಗಿ ಕಾಫಿ ಬಳಕೆ ಮೇಲೂ ಪರಿಣಾಮ ಬೀರಲಿದೆ ಎಂಬುದು ಸ್ಥಳೀಯ ಕಾಫಿಪುಡಿ ವ್ಯಾಪಾರಿಗಳ ಆತಂಕ. ಸದ್ಯಕ್ಕೆ ದರ ಏರಿಕೆ ನಿಯಂತ್ರಿಸಿ ಮುಂದಿನ ಒಂದು ತಿಂಗಳಲ್ಲಿ ಅಭಾವ ಸೃಷ್ಟಿಸುವ ಸಾಧ್ಯತೆಯೂ ಇದೆ. ಇದರಿಂದ ದಾಸ್ತಾನಿಟ್ಟಿರುವ ವರ್ತಕರಿಗೆ ಲಾಭವಾಗಲಿದೆ. ಕಾಫಿ ಪ್ರಿಯ ಗ್ರಾಹಕರಿಗೆ ಬರೆ ಬೀಳಲಿದೆ ಎಂದು ಹೇಳುತ್ತಾರೆ. ಈಗ ಕಾಫಿ ಪುಡಿ ಕೆ.ಜಿಗೆ ₹400ರಿಂದ ₹450 ಇದೆ. ಕಾಫಿ ಬೇಳೆಗೆ ಬೆಲೆ ಜಾಸ್ತಿಯಾದರೆ ಧಾರಣೆ ಹೆಚ್ಚಿಸುವುದು ಅನಿವಾರ್ಯವಾಗಲಿದೆ ಎನ್ನುತ್ತಾರೆ ಕಾಫಿಪುಡಿ ತಯಾರಿಸುವ ಕಾಫಿವರ್ಕ್ಸ್ ಮಾಲೀಕರು. ‘ಕಾಫಿ ಬೆಲೆ ಜಾಸ್ತಿ ಎಂಬ ಕಾರಣಕ್ಕೆ ಚಿಕೋರಿ ಜಾಸ್ತಿ ಬಳಸಿದರೆ ಗುಣಮಟ್ಟ ಹಾಳಾಗಲಿದೆ. ಆಗ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಕಾಫಿಪುಡಿ ಉತ್ಪಾದನೆಯನ್ನೇ ಕಡಿಮೆ ಮಾಡಿದ್ದೇವೆ’ ಎಂಬುದು ಅವರ ವಿವರಣೆ.