ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಡಿಪಿ ಅಂದಾಜು ತಗ್ಗಿಸಿದ ಆರ್ಥಿಕ ಸಮೀಕ್ಷೆ

Published 22 ಜುಲೈ 2024, 16:24 IST
Last Updated 22 ಜುಲೈ 2024, 16:24 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಶೇಕಡ 6.5ರಿಂದ ಶೇ 7ರಷ್ಟು ಇರಲಿದೆ ಎಂದು ಆರ್ಥಿಕ ಸಮೀಕ್ಷೆ ವರದಿಯಲ್ಲಿ ಅಂದಾಜಿಸಲಾಗಿದೆ.

ದೇಶದಲ್ಲಿ ಇನ್ನಷ್ಟು ಉದ್ಯೋಗ ಸೃಷ್ಟಿಯ ಅಗತ್ಯ ಇದೆ ಎಂಬುದನ್ನು ಕೂಡ ವರದಿಯಲ್ಲಿ ಹೇಳಲಾಗಿದೆ. ದೇಶದ ರಫ್ತು ಹೆಚ್ಚಿಸಲು ಚೀನಾದಿಂದ ಹೆಚ್ಚಿನ ವಿದೇಶಿ ನೇರ ಬಂಡವಾಳ ಹರಿದುಬಂದರೆ ಚೆನ್ನ ಎಂಬ ಮಾತು ವರದಿಯಲ್ಲಿದೆ.

ಆರ್ಥಿಕ ಸಮೀಕ್ಷೆಯ ವರದಿಯನ್ನು ಕೇಂದ್ರ ಬಜೆಟ್ ಮಂಡನೆಯ ಒಂದು ದಿನ ಮೊದಲು ಸಂಸತ್ತಿನಲ್ಲಿ ಮಂಡಿಸಲಾಯಿತು.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಂದಾಜಿನ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರವು ಶೇ 7.2ರಷ್ಟು ಇರಲಿದೆ. ಆದರೆ ಆರ್ಥಿಕ ಸಮೀಕ್ಷೆಯ ಅಂದಾಜು ಇದಕ್ಕಿಂತ ಕಡಿಮೆ ಇದೆ. ಅಲ್ಲದೆ, ಹಿಂದಿನ ಹಣಕಾಸು ವರ್ಷದಲ್ಲಿ ದಾಖಲಾದ ಶೇ 8.2ರಷ್ಟು ಬೆಳವಣಿಗೆಗಿಂತಲೂ ಈಗಿನ ಅಂದಾಜು ಕಡಿಮೆ ಇದೆ.

ಜಿಡಿಪಿ ಬೆಳವಣಿಗೆ ದರದ ಅಂದಾಜು ಕಡಿಮೆ ಮಟ್ಟದಲ್ಲಿ ಇದೆ ಎಂಬುದನ್ನು ಉಲ್ಲೇಖಿಸಿರುವ ವರದಿಯು,  ಖಾಸಗಿ ವಲಯದಿಂದ ಆಗುವ ಹೂಡಿಕೆಗಳ ಬೆಳವಣಿಗೆ ಪ್ರಮಾಣವು ಕಡಿಮೆ ಇರುವುದು ಹಾಗೂ ಹವಾಮಾನದಲ್ಲಿನ ಅನಿಶ್ಚಿತತೆಗಳು ಮಿತವಾದ ಈ ಅಂದಾಜಿಗೆ ಕಾರಣ ಎಂದು ಹೇಳಿದೆ.

ದುಡಿಯುವ ವರ್ಗದ ಜನರ ಸಂಖ್ಯೆಯು ಹೆಚ್ಚುತ್ತಿದೆ. ಈ ವರ್ಗದ ಬೇಡಿಕೆಗಳಿಗೆ ಸ್ಪಂದಿಸಲು ದೇಶವು ಕೃಷಿಯೇತರ ವಲಯಗಳಲ್ಲಿ 2030ರವರೆಗೆ ವಾರ್ಷಿಕವಾಗಿ ಸರಾಸರಿ 78.5 ಲಕ್ಷ ಉದ್ಯೋಗ ಸೃಷ್ಟಿಸಬೇಕು ಎಂದು ವರದಿಯು ಹೇಳಿದೆ.

ಬೇರೆ ಬೇರೆ ಹಂತಗಳ ಸರ್ಕಾರಗಳು ಉದ್ದಿಮೆಗಳ ಮೇಲೆ ಪರವಾನಗಿ, ಪರಿಶೀಲನೆ ಹಾಗೂ ಕಾನೂನು ಪಾಲನೆಯ ವಿಚಾರದಲ್ಲಿ ಹೊರಿಸುವ ಹೊರೆಯು ಬಹಳ ದೊಡ್ಡ ಮಟ್ಟದಲ್ಲಿದೆ. ಹಿಂದಿದ್ದ ಸ್ಥಿತಿಗೆ ಹೋಲಿಸಿದರೆ ಇದು ಈಗ ಸುಧಾರಿಸಿದೆ. ಆದರೂ, ಹೊರೆಯು ಇಂದಿಗೂ ದೊಡ್ಡ ಮಟ್ಟದಲ್ಲಿ ಇದೆ ಎಂಬ ಮಾತನ್ನು ವರದಿಯು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT