ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಜಿಎಸ್‌ಟಿ ವಿನಾಯ್ತಿ, ಗೃಹೋಪಯೋಗಿ ವಸ್ತು ಅಗ್ಗ

’ಸರಕು’ ತೆರಿಗೆ ಇಳಿಕೆ
Published : 21 ಜುಲೈ 2018, 19:30 IST
ಫಾಲೋ ಮಾಡಿ
Comments

ನವದೆಹಲಿ:ದಿನ ಬಳಕೆಯ ಹದಿನೇಳು ಉತ್ಪನ್ನಗಳ ಮೇಲಿನ ತೆರಿಗೆ ಹೊರೆಯನ್ನು ಜಿಎಸ್‌ಟಿ ಮಂಡಳಿಯು ಕಡಿಮೆ ಮಾಡಿದ್ದು, ಸ್ಯಾನಿಟರಿ ಪ್ಯಾಡ್‌ಗೆ ತೆರಿಗೆ ವಿನಾಯ್ತಿ ಪ್ರಕಟಿಸಿದೆ.

ಗರಿಷ್ಠ ತೆರಿಗೆ ದರವಾದ ಶೇ 28ರ ವ್ಯಾಪ್ತಿಯಲ್ಲಿದ್ದ 49 ಸರಕುಗಳ ಪೈಕಿ, 17 ಸರಕುಗಳ ಮೇಲಿನ ತೆರಿಗೆಯನ್ನು ಶೇ 18ಕ್ಕೆ ಇಳಿಸಲಾಗಿದೆ. ಇದರಿಂದ ಅಗ್ಗವಾಗಲಿರುವ ಸರಕುಗಳ ಪಟ್ಟಿಯಲ್ಲಿ ಪಾದರಕ್ಷೆ, ಚಿಕ್ಕಗಾತ್ರದ ಟೆಲಿವಿಷನ್‌, ವಾಟರ್ ಹೀಟರ್‌, ವಿದ್ಯುತ್‌ಚಾಲಿತ ಇಸ್ತ್ರಿಪೆಟ್ಟಿಗೆ, ರೆಫ್ರಿಜರೇಟರ್‌, ಲಿಥಿಯಂ ಅಯಾನ್‌ ಬ್ಯಾಟರಿ, ಹೇರ್‌ ಡ್ರೈಯರ್‌, ವ್ಯಾಕ್ಯೂಂ ಕ್ಲೀನರ್‌, ಇಥೆನಾಲ್‌ ಸೇರಿವೆ.

27ರಿಂದ ಅಗ್ಗ: ಇದೇ 27 ರಿಂದ ಈ ತೆರಿಗೆ ಕಡಿತದ ಪ್ರಯೋಜನ ದೊರೆಯಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹ 15 ಸಾವಿರ ಕೋಟಿಯಷ್ಟು ವರಮಾನ ನಷ್ಟ ಉಂಟಾಗಲಿದೆ.

‘ಸ್ಯಾನಿಟರಿ ಪ್ಯಾಡ್‌ಗಳ ಮೇಲಿನ ಶೇ 12ರಷ್ಟು ತೆರಿಗೆಯನ್ನು ಶೂನ್ಯಕ್ಕೆ ಇಳಿಸಲಾಗಿದ್ದು, ರಾಖಿ ಮತ್ತು ಪುಟ್ಟ ಕರಕುಶಲ ಸರಕುಗಳನ್ನು ವಿನಾಯ್ತಿ ವ್ಯಾಪ್ತಿಗೆ ತರಲಾಗಿದೆ. ಇಥೆನಾಲ್‌ ಮೇಲಿನ ತೆರಿಗೆಯನ್ನು ಶೇ 5ಕ್ಕೆ ಇಳಿಸಲಾಗಿದೆ’ ಎಂದು ಸಚಿವ ಪೀಯೂಷ್‌ ಗೋಯಲ್‌ ತಿಳಿಸಿದರು. ಸ್ಯಾಂಡ್‌ಸ್ಟೋನ್‌ ಮತ್ತು ಸ್ಥಳೀಯ ಶಿಲೆಗಳ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 12ಕ್ಕೆ ಇಳಿಸಲಾಗಿದೆ.

₹ 500 ಬೆಲೆಯ ಪಾದರಕ್ಷೆಗಳಿಗೆ ವಿಧಿಸುತ್ತಿದ್ದ ಶೇ 5ರಷ್ಟು ತೆರಿಗೆಯನ್ನು ₹ 1,000 ಬೆಲೆಯ ‍ಪಾದರಕ್ಷೆಗಳಿಗೂ ವಿಸ್ತರಿಸಲಾಗಿದೆ.

ವಿನಾಯ್ತಿ

ಆಯುಷ್ಮಾನ್‌ ಭಾರತ್‌ ವಿಮಾ ಯೋಜನೆಯ ಕಂತಿನ ಹಣಕ್ಕೆ (ಪ್ರೀಮಿಯಂ) ಜಿಎಸ್‌ಟಿಯಿಂದ ವಿನಾಯ್ತಿ ನೀಡಲು ನಿರ್ಧರಿಸಲಾಗಿದೆ. ಈ ಯೋಜನೆಯು ಅಕ್ಟೋಬರ್‌ನಿಂದ ಜಾರಿಗೆ ಬರುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರಗಳು ಜಾರಿಗೆ ತರುವ ಇದೇ ಬಗೆಯ ಆರೋಗ್ಯ ವಿಮೆ ಯೋಜನೆಗಳ ಪ್ರೀಮಿಯಂಗೂ ವಿನಾಯ್ತಿ ನೀಡಲಾಗಿದೆ.

(ಪೀಯೂಷ್‌ ಗೋಯಲ್‌)

ಆ.4ರಂದು ಸಣ್ಣ ಉದ್ಯಮ ಸಮಸ್ಯೆ ಚರ್ಚೆ

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಆಗಸ್ಟ್‌ 4ರಂದು ಪ್ರತ್ಯೇಕ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಈ ಕ್ಷೇತ್ರದಲ್ಲಿನ ಉದ್ಯೋಗ ಸೃಷ್ಟಿ ಹಾಗೂ ಉದ್ಯಮಶೀಲತೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯಲಿದೆ. ಹತ್ತು ಕೋಟಿಗೂ ಹೆಚ್ಚು ಜನರಿಗೆ ಈ ಕ್ಷೇತ್ರವು ಉದ್ಯೋಗ ಒದಗಿಸಿದೆ.

*ಸ್ಯಾನಿಟರಿ ನ್ಯಾ‍ಪ್‌ಕಿನ್‌ಗಳಿಗೆ ಎಲ್ಲ ಬಗೆಯ ತೆರಿಗೆಗಳಿಂದ ವಿನಾಯ್ತಿ ನೀಡಿರುವುದರಿಂದ ಮಹಿಳೆಯರು ಸಂತಸಪಡಲಿದ್ದಾರೆ

–ಪೀಯೂಷ್‌ ಗೋಯಲ್‌, ಕೇಂದ್ರ ಹಣಕಾಸು ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT