ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಕ್ರೊಸಾಫ್ಟ್‌ ವಿಂಡೋಸ್‌ ತಾಂತ್ರಿಕ ಸಮಸ್ಯೆ ಶಮನ: ಸಹಜ ಸ್ಥಿತಿಗೆ ವಿಮಾನ ಹಾರಾಟ

Published 20 ಜುಲೈ 2024, 15:55 IST
Last Updated 20 ಜುಲೈ 2024, 15:55 IST
ಅಕ್ಷರ ಗಾತ್ರ

ಮುಂಬೈ/ ಚೆನ್ನೈ: ಮೈಕ್ರೊಸಾಫ್ಟ್‌ ವಿಂಡೋಸ್‌ನಲ್ಲಿ ತಲೆದೋರಿದ್ದ ತಾಂತ್ರಿಕ ದೋಷವು ಪರಿಹಾರ ಕಂಡಿದ್ದು, ದೇಶದಲ್ಲಿ ವಿಮಾನಗಳ ಸಂಚಾರವು ಸಹಜ ಸ್ಥಿತಿಗೆ ಮರಳಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್‌ ಮೋಹನ್‌ ನಾಯ್ಡು ತಿಳಿಸಿದ್ದಾರೆ.

ಶನಿವಾರ ಬೆಳಗಿನ ಜಾವ 4ಗಂಟೆಯಿಂದ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಮಾನಯಾನ ವ್ಯವಸ್ಥೆಯು ಎಂದಿನಂತೆ ಸಹಜ ಸ್ಥಿತಿಗೆ ಮರಳಿದೆ. ವಿಮಾನಗಳ ಕಾರ್ಯಾಚರಣೆಯು ಸುಗಮಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಸೈಬರ್‌ ದಾಳಿ ತಡೆಯಲು ಕ್ರೌಡ್​ಸ್ಟ್ರೈಕ್‌ ಕಂಪನಿಯು ಶುಕ್ರವಾರ ವಿಂಡೋಸ್‌ನಲ್ಲಿ ಫಾಲ್ಕನ್‌ ಸೆನ್ಸಾರ್‌ ತಂತ್ರಾಂಶವನ್ನು ಅಪ್‌ಡೇಟ್‌ ಮಾಡುವಾಗ ದೋಷ ಕಾಣಿಸಿಕೊಂಡಿತ್ತು. ಇದರಿಂದ ಮೈಕ್ರೊಸಾಫ್ಟ್‌ ಸೇವೆ ಸ್ಥಗಿತಗೊಂಡಿತ್ತು. ಜಾಗತಿಕ ಮಟ್ಟದಲ್ಲಿ ಬ್ಯಾಂಕ್‌ಗಳು, ಆಸ್ಪತ್ರೆಗಳು, ವಿಮಾನಗಳು, ಮಾಧ್ಯಮ ಸಂಸ್ಥೆಗಳ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಸದ್ಯ ಈ ಕ್ಷೇತ್ರಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.

ವಿಮಾನದ ಟಿಕೆಟ್‌ ಬುಕಿಂಗ್‌ ಮತ್ತು ಬೋರ್ಡಿಂಗ್‌ ಪಾಸ್‌ ಪಡೆಯಲು ತೊಂದರೆಯಾಗಿತ್ತು. 

‘ಇಂಡಿಗೊ, ಸ್ಪೈಸ್‌ಜೆಟ್‌, ಆಕಾಸ್‌ ಮತ್ತು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪನಿಗಳ ಕಾರ್ಯಾಚರಣೆ ಆರಂಭಗೊಂಡಿದೆ’ ಎಂದು ಮೂಲಗಳು ತಿಳಿಸಿವೆ. 

‘ನಾನು ಅಹಮದಾಬಾದ್‌ಗೆ ತೆರಳುತ್ತಿದ್ದೇನೆ. ಆ್ಯಪ್‌ ಆಧಾರಿತ ಡಿಜಿ ಯಾತ್ರಾ ಸೇವೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂದು ಎಲ್ಲವೂ ಸುಗಮವಾಗಿದೆ. ವಿಮಾನಗಳು ನಿಗದಿತ ಸಮಯಕ್ಕೆ ಹಾರಾಟ ನಡೆಸಿವೆ’ ಎಂದು ದೆಹಲಿಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಅನುಭವ ಹಂಚಿಕೊಂಡರು. 

‘ವಿಂಡೋಸ್‌ ಸಮಸ್ಯೆ ಬಗೆಹರಿದಿದೆ. ಕಾರ್ಯಾಚರಣೆಯು ಸಹಜ ಸ್ಥಿತಿಗೆ ಮರಳಲು ಕಂ‍‍ಪನಿಯ ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದಾರೆ. ಆದರೂ, ವಾರಾಂತ್ಯದವರೆಗೂ ಕೆಲವು ವಿಮಾನಗಳ ಸಂಚಾರದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ’ ಎಂದು ಇಂಡಿಗೊ ಕಂಪನಿ ತಿಳಿಸಿದೆ.

ಇಂಡಿಗೊ ದೇಶೀಯಮಟ್ಟದ ಅತಿದೊಡ್ಡ ವಿಮಾನಯಾನ ಕಂಪನಿಯಾಗಿದೆ. ಪ್ರತಿದಿನ 2 ಸಾವಿರಕ್ಕೂ ಹೆಚ್ಚು ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. 

‘ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಟಿಕೆಟ್‌ ಬುಕಿಂಗ್‌ ಮತ್ತು ಕಾಲ್‌ ಸೆಂಟರ್‌ಗಳ ಸೇವೆ  ಆರಂಭಗೊಂಡಿದೆ. ತೊಂದರೆಗೆ ಸಿಲುಕಿದ್ದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಕ್ರಮವಹಿಸಲಾಗಿದೆ’ ಎಂದು ಸ್ಪೈಸ್‌ಜೆಟ್‌ ಕಂಪನಿ ತಿಳಿಸಿದೆ.

‘ಚೆಕ್‌–ಇನ್‌, ಬೋರ್ಡಿಂಗ್‌ ಪಾಸ್‌ ವಿತರಣೆಯಲ್ಲಿ ಸದ್ಯ ಯಾವುದೇ ಸಮಸ್ಯೆ ಕಂಡಿಲ್ಲ. ತನ್ನ ವಿಮಾನಗಳು ನಿಗದಿತ ಕಾರ್ಯಾಚರಣೆ ಆರಂಭಿಸಿವೆ’ ಎಂದು ಆಕಾಸ್‌ ಕಂಪನಿ ತಿಳಿಸಿದೆ.

8 ವಿಮಾನ ಸಂಚಾರಕ್ಕೆ ತೊಂದರೆ

ಚೆನ್ನೈ ವಿಮಾನ ನಿಲ್ದಾಣದಲ್ಲಿ ದೇಶೀಯ ಮಾರ್ಗದಲ್ಲಿ 6ರಿಂದ 8 ವಿಮಾನಗಳ ಸಂಚಾರಕ್ಕೆ ಭಾಗಶಃ ತೊಂದರೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.  ಕೆಲವು ಪ್ರಯಾಣಿಕರಿಗೆ ಕೈಬರಹದ ಬೋರ್ಡಿಂಗ್‌ ಪಾಸ್‌ ವಿತರಿಸಲಾಗಿತ್ತು. ಅಂತಹವರಿಗೆ ಕಂಪ್ಯೂಟರ್‌ ದೃಢೀಕೃತ ಪಾಸ್‌ಗಳನ್ನು ವಿತರಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗಿಲ್ಲ. ದೋಹಾ ಕುವೈತ್‌ಗೆ ನಿಗದಿಯಾಗಿದ್ದ ವಿಮಾನಗಳ ಹಾರಾಟದಲ್ಲಿ ಕೆಲವು ಗಂಟೆ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ. 

ಐದು ಕಂಪನಿಗಳಿಗೆ ಅಡಚಣೆ
‘ವಿಂಡೋಸ್‌ನಲ್ಲಿನ ಸಮಸ್ಯೆಯಿಂದಾಗಿ ಆಸ್ತಿ ನಿರ್ವಹಣೆ ಮಾಡುವ ಐದು ಕಂಪನಿಗಳ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಸದ್ಯ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ’ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ತಿಳಿಸಿದೆ. ‘ಒಟ್ಟು 44 ಆಸ್ತಿ ನಿರ್ವಹಣಾ ಕಂಪನಿಗಳ ಪೈಕಿ ಈ ಕಂಪನಿಗಳು ತೊಂದರೆಗೆ ಸಿಲುಕಿದ್ದವು. ಇದರ ಹೊರತಾಗಿ ಮ್ಯೂಚುವಲ್‌ ಫಂಡ್‌ ಉದ್ಯಮದ ದೈನಂದಿನ ಕಾರ್ಯದ ಯಾವುದೇ ಪರಿಣಾಮ ಬೀರಿಲ್ಲ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT