ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

'ಮೈಸೂರು ಸಿಲ್ಕ್‌’ಗೆ ಬೇಕು ನೆರವು: ಸಚಿವ ಕೆ. ವೆಂಕಟೇಶ್

Published : 21 ಸೆಪ್ಟೆಂಬರ್ 2024, 0:38 IST
Last Updated : 21 ಸೆಪ್ಟೆಂಬರ್ 2024, 0:38 IST
ಫಾಲೋ ಮಾಡಿ
Comments

ಮೈಸೂರು: ‘ಬೇಡಿಕೆಗೆ ಅನುಗುಣವಾಗಿ ಮೈಸೂರು ಸಿಲ್ಕ್‌ ಸೀರೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಹೊಸ ಯಂತ್ರಗಳನ್ನು ಅಳವಡಿಸುವ ಯೋಚನೆ ಇದ್ದು, ಕೇಂದ್ರ ಸರ್ಕಾರದಿಂದ ಹೆಚ್ಚಿನ ಸಹಕಾರದ ಅಗತ್ಯವಿದೆ’ ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಕೇಂದ್ರ ರೇಷ್ಮೆ ಮಂಡಳಿಯ ಅಮೃತ ಮಹೋತ್ಸವ ದಲ್ಲಿ ಮಾತನಾಡಿದ ಅವರು, ‘ರೇಷ್ಮೆ ಮಾರುಕಟ್ಟೆ ಬೆಲೆಯ ಅಸ್ಥಿರತೆ ಹಾಗೂ ನಷ್ಟದ ನಡುವೆಯೂ ರೇಷ್ಮೆ ಬೆಳೆಯು ತ್ತಿರುವ ರೈತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ. ಇದಕ್ಕೆ ಕೇಂದ್ರವೂ ಹೆಚ್ಚಿನ ನೆರವು ನೀಡಬೇಕು’ ಎಂದರು.

ಸೇವಾ ಕೇಂದ್ರ ತೆರೆಯಿರಿ: ಕೇಂದ್ರ ಜವಳಿ ಸಚಿವ ಗಿರಿರಾಜ್‌ ಸಿಂಗ್ ಮಾತನಾಡಿ, ‘ಬೆಂಗಳೂರಿನ ದೊಡ್ಡ ಉದ್ಯಮಿಗಳು ರೇಷ್ಮೆ ಉದ್ಯಮ ಪ್ರವೇಶಿಸಿದ್ದಾರೆ. ಇದರಿಂದ ರೈತರು ಮಧ್ಯವರ್ತಿಗಳ ಮೊರೆ ಹೋಗಬೇಕಾಗಿದೆ. ಹೀಗಾಗಿ ರಾಜ್ಯ ಸರ್ಕಾರವು ನಾಗರಿಕ ಸೇವಾ ಕೇಂದ್ರ ತೆರೆಯುವ ಯೋಜನೆ ರೂಪಿಸಿ ಕೇಂದ್ರದೊಂದಿಗೆ ಚರ್ಚಿಸಿದರೆ ರೈತರಿಗೆ ಒಳಿತಾಗುವ ಯೋಜನೆ ರೂಪಿಸಬಹುದು’ ಎಂದು ಹೇಳಿದರು.

‘ಚೀನಾವು ಭಾರತದ ಪ್ರತಿಸ್ಪರ್ಧಿ ಯಾಗಿದೆ. ವಾರ್ಷಿಕವಾಗಿ ರೇಷ್ಮೆ ಉತ್ಪಾದನೆಯನ್ನು 50 ಸಾವಿರ ಟನ್‌ನಿಂದ 94 ಸಾವಿರ ಟನ್‌ಗೆ ‌ಹೆಚ್ಚಿಸಿಕೊಂಡಿದೆ. ಭಾರತವೂ ಮುಂದಿನ ವರ್ಷಗಳಲ್ಲಿ ಒಂದು ಲಕ್ಷ ಟನ್‌ ರೇಷ್ಮೆ ಉತ್ಪಾದನೆಯ ಗುರಿ ಹೊಂದಿದ್ದು, ಚೀನಾವನ್ನು ಹಿಂದಿಕ್ಕಲಿದೆ. ಬೆಳೆಗಾರರಿಗೆ ಸಹಕಾರ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಹಿಪ್ಪುನೇರಳೆ, ರೋಗಬಾಧೆ ರಹಿತ ಮೊಟ್ಟೆ ವಿತರಿಸಲು ಕ್ರಮವಹಿಸಲಾಗುವುದು’ ಎಂದರು.

‘ಹತ್ತು ವರ್ಷದ ಹಿಂದೆ ಕೆ.ಜಿ ರೇಷ್ಮೆ ಗೂಡಿಗೆ ₹260 ದರ ದೊರೆಯುತ್ತಿತ್ತು. ಈಗ ₹550 ದೊರೆಯುತ್ತಿದೆ. ಮಾರುಕಟ್ಟೆ ಯಲ್ಲಿ ಬೆಲೆಯ ಸ್ಥಿರತೆ ಕಾಯ್ದುಕೊಳ್ಳಲು ಒತ್ತು ನೀಡಲಾಗುವುದು ಎಂದರು.

ರೇಷ್ಮೆಯು ಸೀರೆ ತಯಾರಿಕೆಗಷ್ಟೇ ಉಪಯೋಗವಾಗುತ್ತಿಲ್ಲ. ಫ್ಯಾಷನ್‌ ಲೋಕದಲ್ಲೂ ಬಳಸಲಾಗುತ್ತಿದೆ. ಅದರ ತ್ಯಾಜ್ಯವನ್ನು ‘ತ್ರಿಡಿ’ ಪ್ರಿಂಟಿಂಗ್‌ಗೆ ಬಳಸುವುದರಿಂದ ಬೇಡಿಕೆ ಹೆಚ್ಚಲಿದೆ ಎಂದು ಹೇಳಿದರು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ‘ಕೇಂದ್ರ ಸರ್ಕಾರವು ₹15 ಸಾವಿರ ಕೋಟಿಯನ್ನು ರೈತರ ಅಭಿವೃದ್ಧಿಗೆ ಮೀಸಲಿಟ್ಟಿದೆ’ ಎಂದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ

ರೇಷ್ಮೆ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ ಅಧಿಕಾರಿಗಳಿಗೆ ‘ಜೀವಮಾನ ಶ್ರೇಷ್ಠ ಸಾಧನೆ’, ರೇಷ್ಮೆ ಬೆಳೆಯುವ 26 ರಾಜ್ಯದ ವಿಶೇಷ ಸಾಧಕರಿಗೆ ‘ಬೆಸ್ಟ್‌ ಅಚೀವರ್ಸ್‌’ ಹಾಗೂ ಸಂಶೋಧನಾ ಕ್ಷೇತ್ರದ ಸಾಧಕರಿಗೆ ‘ಉತ್ತಮ ವಿಜ್ಞಾನಿ’ ಪ್ರಶಸ್ತಿ ನೀಡಲಾಯಿತು. ಅಮೃತ ಮಹೋತ್ಸವದ ಅಂಗವಾಗಿ ರೇಷ್ಮೆ ಮಂಡಳಿ ಲಾಂಛನವುಳ್ಳ ₹75 ಮೌಲ್ಯದ ನಾಣ್ಯ, ವಿಶೇಷ ಅಂಚೆ ಚೀಟಿ, ಹೊಸ ಹಿಪ್ಪು ನೇರಳೆ ತಳಿಯನ್ನು ಸಚಿವ ಗಿರಿರಾಜ್‌ ಸಿಂಗ್ ಬಿಡುಗಡೆಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT