ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ಟೋಬರ್‌ 24ರಂದು ಪಿಎಸಿ ಮುಂದೆ ಹಾಜರಾಗಲು ಸೆಬಿ ಅಧ್ಯಕ್ಷೆಗೆ ಸೂಚನೆ

Published : 5 ಅಕ್ಟೋಬರ್ 2024, 14:44 IST
Last Updated : 5 ಅಕ್ಟೋಬರ್ 2024, 14:44 IST
ಫಾಲೋ ಮಾಡಿ
Comments

ನವದೆಹಲಿ: ಹಿತಾಸಕ್ತಿ ಸಂಘರ್ಷ ಆರೋಪ ಎದುರಿಸುತ್ತಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್‌ ಅವರು, ಅಕ್ಟೋಬರ್‌ 24ರಂದು ಸಂಸತ್‌ನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮುಂದೆ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸತ್‌ನ ಕಾಯ್ದೆಯಡಿ ಸ್ಥಾಪಿಸಿರುವ ವಿವಿಧ ನಿಯಂತ್ರಕ ಸಂಸ್ಥೆಗಳ ಕಾರ್ಯ ನಿರ್ವಹಣೆ ಕುರಿತು ಪರಾಮರ್ಶೆ ನಡೆಸುವ ಅಧಿಕಾರ ಈ ಸಮಿತಿಗೆ ಇದೆ. ಕೆ.ಸಿ. ವೇಣುಗೋ‍ಪಾಲ್‌ ಇದರ ಅಧ್ಯಕ್ಷರಾಗಿದ್ದಾರೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಅಧ್ಯಕ್ಷ ಅನಿಲ್‌ ಕುಮಾರ್‌ ಲಹೋಟಿ ಅವರಿಗೂ ಸಮಿತಿ ಮುಂದೆ ಹಾಜರಾಗಲು ಸೂಚಿಸಲಾಗಿದೆ.

ಕೇಂದ್ರ ಹಣಕಾಸು ಸಚಿವಾಲಯ ಮತ್ತು ಕೇಂದ್ರ ಸಂವಹನ ಸಚಿವಾಲಯದ ಹಿರಿಯ ಅಧಿಕಾರಿಗಳು, ಸಮಿತಿಯ ಮುಂದೆ ಹಾಜರಾಗುವಂತೆ ಸಚಿವಾಲಯಗಳ ಅಧೀನಕ್ಕೆ ಒಳಪಟ್ಟಿರುವ ಈ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

‘ಸಮಿತಿ ನೀಡಿರುವ ಸಮನ್ಸ್‌ಗೆ ಸಂಬಂಧಿಸಿದಂತೆ ಸಂಸ್ಥೆಗಳ ಮುಖ್ಯಸ್ಥರು ವಿವರಣೆ ನೀಡಲಿದ್ದಾರೆ’ ಎಂದು ತಿಳಿಸಿವೆ.

‘ಈ ಎರಡು ನಿಯಂತ್ರಕ ಸಂಸ್ಥೆಗಳ ಕಾರ್ಯ ನಿರ್ವಹಣೆ ಸಂಬಂಧ ಪರಾಮರ್ಶೆ ನಡೆಸುವುದು ಅಂದಿನ ಸಭೆಯ ಕಾರ್ಯಸೂಚಿಯಾಗಿದೆ’ ಎಂದು ಸಮಿತಿ ತಿಳಿಸಿದೆ.

ಮಾಧವಿ ಪುರಿ ಬುಚ್‌ ಮತ್ತು ಅವರ ಪತಿ ದವಳ್‌ ಬುಚ್‌ ಅವರು, ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಹಾಗಾಗಿಯೇ, ಕಳೆದ ವರ್ಷದ ಜನವರಿಯಲ್ಲಿ ಅದಾನಿ ಸಮೂಹದ ವಿರುದ್ಧ ಪ್ರಕಟಿಸಿದ್ದ ತನ್ನ ವರದಿಗೆ ಸಂಬಂಧಿಸಿದಂತೆ ಸಮರ್ಪಕವಾಗಿ ತನಿಖೆ ನಡೆಸಲು ಮಾಧವಿ ಅವರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಅಮೆರಿಕದ ಶಾರ್ಟ್ ಸೆಲ್ಲರ್‌ ಕಂಪನಿ ಹಿಂಡನ್‌ಬರ್ಗ್ ರಿಸರ್ಚ್‌ ಆರೋಪಿಸಿತ್ತು. 

ಹಿಂಡನ್‌ಬರ್ಗ್‌ನ ಈ ಆರೋಪ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗಸ್ಟ್‌ನಲ್ಲಿ ಕಾಂಗ್ರೆಸ್‌ ಪಕ್ಷವು ದೇಶದಾದ್ಯಂತ ಪ್ರತಿಭಟನೆ ನಡೆಸಿತ್ತು. ಅಲ್ಲದೆ, ಸೆಬಿ ಅಧ್ಯಕ್ಷೆ ಸ್ಥಾನಕ್ಕೆ ಮಾಧವಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿತ್ತು. 

ಅದಾನಿ ಸಮೂಹ ಮತ್ತು ಬುಚ್‌ ದಂಪತಿ, ಹಿಂಡನ್‌ಬರ್ಗ್‌ ಆರೋಪವನ್ನು ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT