ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆನ್ಸೆಕ್ಸ್‌ 1,293 ಅಂಶ ಏರಿಕೆ; ಹೂಡಿಕೆದಾರರ ಸಂಪತ್ತು ₹7.10 ಲಕ್ಷ ಕೋಟಿ ಹೆಚ್ಚಳ

Published 26 ಜುಲೈ 2024, 15:27 IST
Last Updated 26 ಜುಲೈ 2024, 15:27 IST
ಅಕ್ಷರ ಗಾತ್ರ

ಮುಂಬೈ: ಸತತ ಐದು ದಿನಗಳ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ದೇಶದ ಷೇರುಪೇಟೆಗಳಲ್ಲಿ ಶುಕ್ರವಾರ ಗೂಳಿಯ ನಾಗಾಲೋಟದಿಂದಾಗಿ ಸೂಚ್ಯಂಕಗಳು ಏರಿಕೆ ಕಂಡಿವೆ. ಇನ್ಫೊಸಿಸ್‌, ಏರ್‌ಟೆಲ್‌ ಮತ್ತು ರಿಲಯನ್ಸ್ ಇಂಡಸ್ಟ್ರಿಸ್‌ ಷೇರುಗಳ ಮಾರಾಟದ ಹೆಚ್ಚಳವು ಸಕಾರಾತ್ಮಕ ವಹಿವಾಟಿಗೆ ನೆರವಾಯಿತು.

ಒಂದೇ ದಿನ ಹೂಡಿಕೆದಾರರ ಸಂಪತ್ತು ₹7.10 ಲಕ್ಷ ಕೋಟಿ ಏರಿಕೆಯಾಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,292 ಅಂಶ ಏರಿಕೆ (ಶೇ 1.62ರಷ್ಟು) ಕಂಡು 81,332 ಅಂಶಗಳಲ್ಲಿ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 428 ಅಂಶ ಏರಿಕೆ ಕಂಡು (ಶೇ 1.76ರಷ್ಟು) 24,834ಕ್ಕೆ ಮುಟ್ಟುವ ಮೂಲಕ ಹೊಸ ಎತ್ತರಕ್ಕೇರಿದೆ.

ಭಾರ್ತಿ ಏರ್‌ಟೆಲ್‌ ಷೇರಿನ ಮೌಲ್ಯದಲ್ಲಿ ಶೇ 4.51ರಷ್ಟು ಏರಿಕೆಯಾಗಿದೆ. ಅದಾನಿ ಪೋರ್ಟ್ಸ್‌, ಸನ್‌ ಫಾರ್ಮಾ, ಟಾಟಾ ಸ್ಟೀಲ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಇನ್ಫೊಸಿಸ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ ಷೇರಿನ ಮೌಲ್ಯದಲ್ಲಿ ಹೆಚ್ಚಳವಾಗಿದೆ. 

ನೆಸ್ಲೆ ಇಂಡಿಯಾ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

‘2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಅಮೆರಿಕದ ಜಿಡಿಪಿಯು ಏರಿಕೆಯಾಗಿದೆ. ಇದು ಹೂಡಿಕೆದಾರರಲ್ಲಿ ಭರವಸೆ ಹೆಚ್ಚಿಸಿದೆ. ಇದರಿಂದ ದೇಶೀಯ ಮಾರುಕಟ್ಟೆಗಳು ಏರಿಕೆ ದಾಖಲಿಸಿವೆ’ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

‘ಹೂಡಿಕೆದಾರರು ಷೇರುಗಳ ಮೌಲ್ಯ ಕುಸಿದಾಗ ಖರೀದಿಸುತ್ತಾರೆ. ಜಾಗತಿಕ ಹಾಗೂ ದೇಶೀಯ ವಿದ್ಯಮಾನಕ್ಕೆ ಅನುಗುಣವಾಗಿ ಈ ತಂತ್ರಗಾರಿಕೆ ಅನುಸರಿಸುತ್ತಾರೆ. ಲೋಹ ಮತ್ತು ಐ.ಟಿ ವಲಯದ ಷೇರುಗಳು ಏರಿಕೆಯಾಗಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ. 

ಬಿಎಸ್‌ಇ ಮಿಡ್‌ಕ್ಯಾಪ್‌ ಶೇ 2.12ರಷ್ಟು ಹಾಗೂ ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 1ರಷ್ಟು ಏರಿಕೆ ಕಂಡಿದೆ.

ಟೆಲಿಕಮ್ಯೂನಿಕೇಷನ್‌ (ಶೇ 3.36), ಲೋಹ (ಶೇ 3.19), ಟೆಕ್‌ (ಶೇ 2.76), ಆಟೊ (ಶೇ 2.35), ಸರಕು (ಶೇ 2.26) ಹಾಗೂ ಹೆಲ್ತ್‌ಕೇರ್‌ (ಶೇ 2.10) ಸೂಚ್ಯಂಕವು ಏರಿಕೆ ದಾಖಲಿಸಿವೆ. 

ಸೋಲ್‌, ಶಾಂಘೈ, ಹಾಂಗ್‌ಕಾಂಗ್‌ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದರೆ, ಟೋಕಿಯೊ ಮಾರುಕಟ್ಟೆ ಇಳಿಕೆ ಕಂಡಿದೆ. 

ಗುರುವಾರ ನಡೆದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹2,605 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT