ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಣಕಾಸು ಸಾಕ್ಷರತೆ: ಎಸ್ಐಪಿ–ಎಸ್‌ಟಿಪಿ ಹೂಡಿಕೆ ಹೇಗೆ?

ರಾಜೇಶ್ ಕುಮಾರ್ ಟಿ.ಆರ್. ಅವರ ಹಣಕಾಸು ಸಾಕ್ಷರತೆ ಅಂಕಣ
Published 12 ಮೇ 2024, 19:05 IST
Last Updated 13 ಮೇ 2024, 2:45 IST
ಅಕ್ಷರ ಗಾತ್ರ

ಮ್ಯೂಚುಯಲ್‌ ಫಂಡ್ ಹೂಡಿಕೆ ಅಂತ ಬಂದಾಗ ಎಸ್ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಮತ್ತು ಎಸ್‌ಟಿಪಿ (ವ್ಯವಸ್ಥಿತ ವರ್ಗಾವಣೆ ಯೋಜನೆ) ಬಗ್ಗೆ ನಾವು ಕೇಳಿಯೇ ಇರುತ್ತೇವೆ. ಆದರೆ, ಯಾರಿಗೆ ಎಸ್‌ಐಪಿ ಸೂಕ್ತ, ಯಾರಿಗೆ ಎಸ್‌ಟಿಪಿ ಮಾದರಿ ಸರಿ ಹೊಂದುತ್ತದೆ ಎಂದು ಬಹುತೇಕರಿಗೆ ತಿಳಿದಿಲ್ಲ. ಎಸ್ಐಪಿ ಮತ್ತು ಎಸ್‌ಟಿಪಿ ಅಂದರೆ ಏನು? ಇವುಗಳಿಂದ ಯಾರಿಗೆ ಲಾಭ? ಯಾವ ಸಂದರ್ಭದಲ್ಲಿ ಯಾವ ಮಾದರಿಯನ್ನು ಪರಿಗಣಿಸಬೇಕು? ಬನ್ನಿ ವಿವರವಾಗಿ ಕಲಿಯೋಣ.

ಎಸ್ಐಪಿ–ಎಸ್‌ಟಿಪಿ ಅಂದರೆ ಏನು?:

ನಿರ್ದಿಷ್ಟ ಮ್ಯೂಚುಯಲ್ ಫಂಡ್‌ವೊಂದನ್ನು ಆಯ್ಕೆ ಮಾಡಿಕೊಂಡು ಪ್ರತಿ ತಿಂಗಳು ನಿಯಮಿತವಾಗಿ ನಿಗದಿತ ಮೊತ್ತವನ್ನು ಹೂಡಿಕೆ ಮಾಡುತ್ತಾ ಸಾಗುವುದನ್ನು ಎಸ್ಐಪಿ ಎನ್ನಬಹುದು. ಉದಾಹರಣೆಗೆ ಮ್ಯೂಚುಯಲ್ ಫಂಡ್‌ವೊಂದನ್ನು ಆಯ್ಕೆ ಮಾಡಿಕೊಂಡು ಪ್ರತಿ ತಿಂಗಳು ₹10 ಸಾವಿರ ಹೂಡಿಕೆ ಮಾಡುವುದು ಎಸ್ಐಪಿಯಾಗುತ್ತದೆ.

ನಿರ್ದಿಷ್ಟ ಮ್ಯೂಚುಯಲ್ ಫಂಡ್ ಕಂಪನಿಯ ಲಿಕ್ವಿಡ್ ಫಂಡ್‌ನಲ್ಲಿ ಒಂದಿಷ್ಟು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿ, ಆ ಫಂಡ್‌ನಿಂದ ಅದೇ ಕಂಪನಿಯ ಮತ್ತೊಂದು ಇಂಡೆಕ್ಸ್ ಮ್ಯೂಚುಯಲ್ ಫಂಡ್‌ಗೆ ವ್ಯವಸ್ಥಿತವಾಗಿ ಹಣ ವರ್ಗಾಯಿಸುವ ಪ್ರಕ್ರಿಯೆಯನ್ನು ಎಸ್‌ಟಿಪಿ (ಸಿಸ್ಟಮ್ಯಾಟಿಕ್ ಟ್ರಾನ್ಸ್‌ಫರ್ ಪ್ಲಾನ್) ಎನ್ನಬಹುದು. 

ಉದಾಹರಣೆಗೆ ಎಸ್‌ಬಿಐ ಲಿಕ್ವಿಡ್ ಫಂಡ್‌ನಲ್ಲಿ ₹3 ಲಕ್ಷ ಹೂಡಿಕೆ ಮಾಡಿದ್ದೀರಿ ಎಂದು ಭಾವಿಸೋಣ. ಎಸ್‌ಬಿಐ ಲಿಕ್ವಿಡ್ ಫಂಡ್‌ನಿಂದ ನಿಯಮಿತವಾಗಿ ಪ್ರತಿ ತಿಂಗಳಿಗೊಮ್ಮೆ ₹10 ಸಾವಿರವನ್ನು ಎಸ್‌ಬಿಐ ಬ್ಲೂ ಚಿಪ್ ಫಂಡ್‌ಗೆ ವರ್ಗಾಯಿಸುವುದನ್ನು ಎಸ್‌ಟಿಪಿ ಎಂದು ಹೇಳಬಹುದು.

ಒಂದು ವಿಷಯ ನೆನಪಿರಲಿ. ಒಂದು ಕಂಪನಿಯ ಮ್ಯೂಚುಯಲ್ ಫಂಡ್‌ನಿಂದ ಅದೇ ಕಂಪನಿಯ ಮತ್ತೊಂದು ಮ್ಯೂಚುಯಲ್ ಫಂಡ್‌ಗೆ ಮಾತ್ರ ಎಸ್‌ಟಿಪಿ ಮಾಡಬಹುದು. ಎಸ್‌ಬಿಐ ಲಿಕ್ವಿಡ್ ಮ್ಯೂಚುಯಲ್ ಫಂಡ್‌ನಿಂದ ಮತ್ತೊಂದು ಎಸ್‌ಬಿಐ ಇಂಡೆಕ್ಸ್ ಮ್ಯೂಚುಯಲ್ ಫಂಡ್‌ಗೆ ಮಾತ್ರ ಎಸ್‌ಟಿಪಿ ಮಾಡಲು ಸಾಧ್ಯ. ಎಸ್‌ಬಿಐ ಮ್ಯೂಚುಯಲ್ ಫಂಡ್‌ನಿಂದ ಎಕ್ಸಿಸ್ ಇಂಡೆಕ್ಸ್ ಮ್ಯೂಚುಯಲ್ ಫಂಡ್‌ಗೆ ಎಸ್‌ಟಿಪಿ ಸಾಧ್ಯವಿಲ್ಲ.

ಎಸ್ಐಪಿ, ಎಸ್‌ಟಿಪಿ ನಡುವಿನ ವ್ಯತ್ಯಾಸ:

ಎಸ್ಐಪಿಯಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ಹೂಡಿಕೆಯಾಗುತ್ತದೆ. ಆದರೆ, ಎಸ್‌ಟಿಪಿಯಲ್ಲಿ ದೊಡ್ಡ ಮೊತ್ತದ ಹೂಡಿಕೆ ಹಣವನ್ನು ನಿಯಮಿತವಾಗಿ ಒಂದು ಫಂಡ್‌ನಿಂದ ಮತ್ತೊಂದಕ್ಕೆ ವರ್ಗಾಯಿಸಲಾಗುತ್ತದೆ. ಎಸ್ಐಪಿಯಲ್ಲಿ ಹಣ ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ. ಆದರೆ, ಎಸ್‌ಟಿಪಿಯಲ್ಲಿ ನಿರ್ದಿಷ್ಟ ಕಂಪನಿಯೊಂದರ ಮ್ಯೂಚುಯಲ್ ಫಂಡ್ ಸ್ಕೀಂಗಳ ನಡುವೆ ಹಣ ವರ್ಗಾವಣೆ ಆಗುತ್ತದೆ. ಎಸ್‌ಐಪಿ ಹೂಡಿಕೆ ಮಾಡಿದಾಗ ಷೇರು ಮಾರುಕಟ್ಟೆಯ ಏರಿಳಿತದ ಲಾಭ ಸಿಕ್ಕಿ ಮ್ಯೂಚುಯಲ್ ಫಂಡ್ ಖರೀದಿ ವೆಚ್ಚವನ್ನು ತಗ್ಗಿಸಿಕೊಳ್ಳಬಹುದಾಗಿದೆ. ಅಲ್ಲದೆ, ಶಿಸ್ತುಬದ್ಧ ಹೂಡಿಕೆಯೂ ಎಸ್‌ಐಪಿಯಲ್ಲಿ ಸಾಧ್ಯವಾಗುತ್ತದೆ.

ಎಸ್‌ಟಿಪಿಯಲ್ಲೂ ಈ ಅನುಕೂಲಗಳು ಸಿಗುತ್ತವೆ. ಜೊತೆಗೆ, ಒಂದು ಮ್ಯೂಚುಯಲ್ ಫಂಡ್‌ನಿಂದ ಮತ್ತೊಂದಕ್ಕೆ ಕಾಲಕಾಲಕ್ಕೆ ಹಣ ವರ್ಗಾವಣೆ ಆಗುವುದರಿಂದ ರಿಸ್ಕ್ ನಿರ್ವಹಣೆಯೂ ಸುಲಭವಾಗುತ್ತದೆ.

ಎಸ್ಐಪಿ ಹೂಡಿಕೆ, ಎಸ್‌ಟಿಪಿ ಹೂಡಿಕೆ ಯಾರಿಗೆ?:

ಪ್ರತಿ ತಿಂಗಳು ವೇತನ ಪಡೆಯುವವರು, ನಿಯಮಿತವಾಗಿ ನಿರ್ದಿಷ್ಟ ಆದಾಯ ಪಡೆದುಕೊಳ್ಳುವವರು, ದೊಡ್ಡ ಮೊತ್ತದ ಹಣ ಹೂಡಿಕೆಗೆ ಇಲ್ಲ ಎನ್ನುವವರು ಎಸ್‌ಐಪಿ ಹೂಡಿಕೆಯನ್ನು ಪರಿಗಣಿಸಬಹುದು.

ವರ್ಷಕ್ಕೊಮ್ಮೆ ಬೋನಸ್ ಹಣ ಸಿಕ್ಕಾಗ ಅಥವಾ ಇನ್ಯಾವುದೋ ದೊಡ್ಡ ಮೊತ್ತ ಸಿಕ್ಕಾಗ ಆ ಮೊತ್ತವನ್ನು ಒಂದು ಲಿಕ್ವಿಡ್ ಫಂಡ್‌ನಲ್ಲಿ ತೊಡಗಿಸಿ ವೇತನ ಪಡೆಯುವವರು ಕೂಡ ಎಸ್‌ಟಿಪಿ ಹೂಡಿಕೆ ಪರಿಗಣಿಸಬಹುದು.

ನೀವು ಉದ್ಯಮಿ ಆಗಿದ್ದರೆ, ಸಣ್ಣ ಬಿಸಿನೆಸ್ ನಡೆಸುತ್ತಿದ್ದರೆ, ಸ್ವಂತ ಉದ್ಯೋಗಿಯಾಗಿದ್ದರೆ, ಪ್ರತಿ ತಿಂಗಳು ನಿರ್ದಿಷ್ಟ ಸಂಬಳವಿರದೆ ವರ್ಷದ ಕೊನೆಗೆ ಅಥವಾ ವರ್ಷಕ್ಕೆ ಮೂರ್ನಾಲ್ಕು ಬಾರಿ ಮಾತ್ರ ದೊಡ್ಡ ಮೊತ್ತದ ಹಣ ನಿಮಗೆ ಸಿಗುತ್ತದೆ ಎಂದರೆ ಎಸ್‌ಟಿಪಿ ಮಾದರಿಯ ಹೂಡಿಕೆ ಹೆಚ್ಚು ಸರಿ ಹೊಂದುತ್ತದೆ. ದೊಡ್ಡ ಮೊತ್ತದ ಹಣವನ್ನು ಲಿಕ್ವಿಡ್ ಫಂಡ್‌ನಲ್ಲಿ ತೊಡಗಿಸಿ ಅಲ್ಲಿಂದ ಅದೇ ಕಂಪನಿಯ ಮತ್ತೊಂದು ಫಂಡ್‌ಗೆ ಹಣ ವರ್ಗಾಯಿಸಿ ಹೂಡಿಕೆಯನ್ನು ಮುಂದುವರಿಸಬಹುದು. ಹೀಗೆ ಮಾಡಿದಾಗ ಮಾರುಕಟ್ಟೆಯ ಏರಿಳಿತದ ಲಾಭ ಸಿಗುತ್ತದೆ.

ಯಾಕೆ ಎಸ್‌ಟಿಪಿ ಮಹತ್ವದ್ದು?:

ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಲ್ಲಿ ಒಂದೇ ಬಾರಿಗೆ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದಾಗ ಮಾರುಕಟ್ಟೆ ಏರಿಳಿತದ ಕಾರಣಕ್ಕೆ ನಷ್ಟವಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟವಿದ್ದಾಗ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವುದು ಅಪಾಯಕಾರಿ. ಈ ರಿಸ್ಕ್ ತಪ್ಪಿಸಲು ಉತ್ತಮ ಆಯ್ಕೆ ಎಸ್‌ಟಿಪಿ ವಿಧಾನ. ಎಸ್‌ಟಿಪಿ ವಿಧಾನ ಬಳಸಿಕೊಂಡು ದೊಡ್ಡ ಮೊತ್ತದ ಹಣವನ್ನು ಲಿಕ್ವಿಡ್ ಫಂಡ್‌‌ನಲ್ಲಿ ಹೂಡಿಕೆ ಮಾಡಿ ನಿಯಮಿತವಾಗಿ ಇಂಡೆಕ್ಸ್ ಫಂಡ್‌ಗೆ ವರ್ಗಾವಣೆ ಮಾಡಿಕೊಂಡರೆ ಮಾರುಕಟ್ಟೆ ಅನಿಶ್ಚಿತತೆಯನ್ನು ಮೀರಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ಭಾರಿ ಕುಸಿತ ಕಂಡ ಸೂಚ್ಯಂಕಗಳು

ಮೇ 10ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಭಾರಿ ಕುಸಿತ ಕಂಡಿವೆ. 72664 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.64ರಷ್ಟು ಇಳಿಕೆಯಾಗಿದೆ. 22055 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 1.87ರಷ್ಟು ತಗ್ಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಸೂಚ್ಯಂಕಗಳು ಕಂಡಿರುವ ದೊಡ್ಡಮಟ್ಟದ ಕುಸಿತ ಇದಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲುವು ದಾಖಲಿಸಲಿದ್ದಾರೆ ಎಂಬ ಪ್ರಶ್ನೆ ಚೀನಾ ಮಾರುಕಟ್ಟೆಯತ್ತ ವಿದೇಶಿ ಹೂಡಿಕೆದಾರರ ಚಿತ್ತ ಹರಿಸಿರುವುದು ಸೇರಿ ಹಲವು ಅಂಶಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 6.06 ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 4.27 ಅನಿಲ ಮತ್ತು ತೈಲ ಸೂಚ್ಯಂಕ ಶೇ 3.92 ಎನರ್ಜಿ ಸೂಚ್ಯಂಕ ಶೇ 3.76 ಲೋಹ ಸೂಚ್ಯಂಕ ಶೇ 3.21 ಹಣಕಾಸು ಸೂಚ್ಯಂಕ ಶೇ 3.17 ಹಾಗೂ ನಿಫ್ಟಿ ಬ್ಯಾಂಕ್ ಶೇ 3.01ರಷ್ಟು ಕುಸಿದಿವೆ. ನಿಫ್ಟಿ ಎಫ್‌ಎಂಸಿಜಿ ಶೇ 1.88 ನಿಫ್ಟಿ ಆಟೊ ಶೇ 1.37 ಮತ್ತು ನಿಫ್ಟಿ ಐ.ಟಿ. ಸೂಚ್ಯಂಕ ಶೇ 0.12ರಷ್ಟು ಜಿಗಿದಿವೆ. ಏರಿಕೆ- ಇಳಿಕೆ: ನಿಫ್ಟಿಯಲ್ಲಿ ಹೀರೊ ಮೋಟೊಕಾರ್ಪ್ ಶೇ 7.25 ಬ್ರಿಟಾನಿಯಾ ಇಂಡಸ್ಟ್ರೀಸ್ ಶೇ 6.82 ಹಿಂದುಸ್ತಾನ್ ಯೂನಿಲಿವರ್ ಶೇ 6.39 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 5.38 ಟಾಟಾ ಮೋಟರ್ಸ್ ಶೇ 3.26 ನೆಸ್ಟ್ಲೆ ಇಂಡಿಯಾ ಶೇ 2.81 ಏರ್‌ಟೆಲ್ ಶೇ 1.67 ಮತ್ತು ಟಿಸಿಎಸ್ ಷೇರಿನ ಮೌಲ್ಯವು ಶೇ 1.47ರಷ್ಟು ಜಿಗಿದಿದೆ. ಶ್ರೀರಾಮ್ ಫೈನಾನ್ಸ್ ಶೇ 9.43 ಟೈಟನ್ ಶೇ 6.91 ಡಾ.ರೆಡ್ಡೀಸ್ ಲ್ಯಾಬ್ಸ್ ಶೇ 6.73 ಅದಾನಿ ಎಂಟರ್ ಪ್ರೈಸಸ್ ಶೇ 6.48 ಎಲ್ ಆ್ಯಂಡ್‌ ಟಿ ಶೇ 6.31 ಸಿಪ್ಲಾ ಶೇ 5.99 ಒಎನ್‌ಜಿಸಿ ಶೇ 5.54 ಮತ್ತು ಕೋಲ್ ಇಂಡಿಯಾ ಷೇರಿನ ಮೌಲ್ಯವು ಶೇ 5.35ರಷ್ಟು ಇಳಿಕೆಯಾಗಿದೆ. ಮುನ್ನೋಟ: ಸದ್ಯದ ಪರಿಸ್ಥಿತಿಯಲ್ಲಿ ಷೇರುಪೇಟೆಯಲ್ಲಿ ಅನಿಶ್ಚಿತತೆ ಪರಿಸ್ಥಿತಿ ಮುಂದುವರಿಯಲಿದೆ. ಹೂಡಿಕೆದಾರರು ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳ ಮೇಲೆ ಚಿತ್ತ ಹರಿಸಿದ್ದಾರೆ. ಜಾಗತಿಕ ವಿದ್ಯಮಾನಗಳು ಕೂಡ ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ. ಈ ವಾರ ಜೊಮ್ಯಾಟೊ ಪಿವಿಆರ್ ಐನಾಕ್ಸ್ ಜಿಂದಾಲ್ ಸ್ಟೀಲ್ ಆ್ಯಂಡ್‌ ಪವರ್ ಏರ್‌‌ಟೆಲ್ ಪತಂಜಲಿ ಫುಡ್ಸ್ ಅಪೋಲೊ ಟಯರ್ಸ್ ಶ್ರೀಸಿಮೆಂಟ್ಸ್ ಸೀಮನ್ಸ್ ಹನಿವೆಲ್ ಆಟೊಮೇಷನ್ ಮ್ಯಾನ್ ಕೈಂಡ್ ಫಾರ್ಮಾ ಮಹೀಂದ್ರ ಆ್ಯಂಡ್‌ ಮಹೀಂದ್ರ ಎಚ್ಎಎಲ್ ಬಯೋಕಾನ್ ವಿಗಾರ್ಡ್ ಎಂಡ್ಯೂರೆನ್ಸ್ ಟೆಕ್ನಾಲಜೀಸ್ ಎನ್‌ಎಚ್‌ಪಿಸಿ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT