ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಣಕಾಸು ಸಾಕ್ಷರತೆ | ಎಸ್ಐಪಿ ಹೂಡಿಕೆ: ಈ ತಪ್ಪು ಮಾಡದಿರಿ

Published 19 ಆಗಸ್ಟ್ 2024, 0:48 IST
Last Updated 19 ಆಗಸ್ಟ್ 2024, 0:48 IST
ಅಕ್ಷರ ಗಾತ್ರ

ಯಾವುದೇ ಹೂಡಿಕೆಯಲ್ಲಿ ಲಾಭ ಗಳಿಸಬೇಕಾದರೆ ಆ ಹೂಡಿಕೆ ಉತ್ಪನ್ನದ ಬಗ್ಗೆ ಸರಿಯಾದ ಅರಿವಿರಬೇಕು. ಮ್ಯೂಚುವಲ್ ಫಂಡ್ ಎಸ್ಐಪಿಯನ್ನು ಉದಾಹರಣೆಯಾಗಿ ತೆಗೆದುಕೊಂಡು ನೋಡುವುದಾದರೆ ಈ ಹೂಡಿಕೆ ಯಲ್ಲಿರುವ ಅನುಕೂಲಗಳೇನು, ಅನನುಕೂಲಗಳೇನು, ಎಷ್ಟು ಲಾಭ ನಿರೀಕ್ಷೆ ಮಾಡಬಹುದು? ಹೀಗೆ ಹಲವು ವಿಚಾರಗಳನ್ನು ನೋಡಿ ಹೂಡಿಕೆಗೆ  ಮುಂದಾಗಬೇಕಾಗುತ್ತದೆ. ಪೂರ್ವಾಪರ ಅರಿಯದೆ ಹೂಡಿಕೆಯಲ್ಲಿ ಮುಂದುವರಿದರೆ ನಿಮ್ಮ ಹೂಡಿಕೆ ನಿರೀಕ್ಷಿತ ಪ್ರಗತಿ ಕಾಣದೇ ಹೋಗಬಹುದು. ಬನ್ನಿ, ಮ್ಯೂಚುವಲ್ ಫಂಡ್ ಎಸ್ಐಪಿ ಮಾಡುವಾಗ ಯಾವ ರೀತಿ ತಪ್ಪುಗಳಾಗದಂತೆ ಎಚ್ಚರವಹಿಸ ಬೇಕು? ಮ್ಯೂಚುವಲ್ ಫಂಡ್ ಎಸ್ಐಪಿ ಹೇಗೆ ಕೆಲಸ ಮಾಡುತ್ತದೆ? ಅದು ಜನಪ್ರಿಯವಾಗು ತ್ತಿರುವುದೇಕೆ? ನೋಡೋಣ.

ಎಸ್ಐಪಿ ಹೂಡಿಕೆಯಲ್ಲಿ ಈ 5 ತಪ್ಪುಗಳನ್ನು ಮಾಡಬೇಡಿ

ಎಸ್ಐಪಿ, ಹೂಡಿಕೆಗೆ ಒಂದು ಅತ್ಯುತ್ತಮ ಆಯ್ಕೆಯಾದರೂ, ಕೆಲ ತಪ್ಪುಗಳು ಹೂಡಿಕೆ ಮೇಲಿನ ಗಳಿಕೆಯನ್ನು ಕುಗ್ಗಿಸಬಹುದು. ಎಸ್ಐಪಿ ಹೂಡಿಕೆಯಲ್ಲಾಗುವ ಸಾಮಾನ್ಯ ತಪ್ಪುಗಳನ್ನು ಒಂದೊಂದಾಗಿ ಗಮನಿಸೋಣ ಬನ್ನಿ.

  1. ಹಣಕಾಸಿನ ಸ್ಥಿತಿ ಪರಿಗಣಿಸದೆ ಎಸ್ಐಪಿ ಮೊತ್ತ ಆಯ್ಕೆ ಮಾಡುವುದು: ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆ  ಮಾಡುವಾಗ ನೀವು ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಬಹುದು ಎಂಬ ಸರಿಯಾದ ಅಂದಾಜು ಮಾಡಿಕೊಳ್ಳಬೇಕು. ನಿಮ್ಮ ಹಣಕಾಸಿನ ಸ್ಥಿತಿಗತಿಯನ್ನು ಅಂದಾಜು ಮಾಡದೆ ಎಸ್ಐಪಿ ಹೂಡಿಕೆಗೆ ದೊಡ್ಡ ಮೊತ್ತ ಆಯ್ಕೆ ಮಾಡಿಕೊಂಡರೆ ಹೂಡಿಕೆಯನ್ನು ನೀವು ಮಧ್ಯದಲ್ಲೇ ಸ್ಥಗಿತಗೊಳಿಸುವ ಸಾಧ್ಯತೆಯಿರುತ್ತದೆ. ಪ್ರತಿ ತಿಂಗಳ ಖರ್ಚಿಗೆ ಎಷ್ಟು ಅಗತ್ಯ, ಸಾಲದ ಕಂತಿನ ಮೊತ್ತ ಎಷ್ಟು, ಎಷ್ಟು ಹೂಡಿಕೆ ಮಾಡಬಹುದು ಎಂಬ ಅಂದಾಜು ನಿಮ್ಮಲ್ಲಿರುವುದು ಬಹಳ ಮುಖ್ಯ.

  2. ಹೂಡಿಕೆ ಮೊತ್ತವನ್ನೆಲ್ಲಾ ಒಂದೇ ಫಂಡ್ ಮೇಲೆ ಹಾಕುವುದು: ಮ್ಯೂಚುವಲ್ ಫಂಡ್‌ ನಲ್ಲಿ ಹೂಡಿಕೆ ಮಾಡುವಾಗ ಹೂಡಿಕೆ ವೈವಿಧ್ಯ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಒಂದೇ ಫಂಡ್ ಹೌಸ್‌ನ ಒಂದೇ ಮಾದರಿಯ ಫಂಡ್‌ನ ಮೇಲೆ ಎಲ್ಲಾ ಮೊತ್ತವನ್ನು ಹೂಡಿಕೆ ಮಾಡಬಾರದು. ಇಕ್ವಿಟಿ, ಡೆಟ್ ಮತ್ತು ಇನ್ನಿತರ ಮಾದರಿಯ ಮ್ಯೂಚುವಲ್ ಫಂಡ್‌ಗಳಲ್ಲಿ ಹದವಾದ ಹೂಡಿಕೆ ಮಿಶ್ರಣವನ್ನು ಕಾಯ್ದುಕೊಳ್ಳಬೇಕು.

  3. ನಿಯಮಿತವಾಗಿ ಫೋರ್ಟ್ ಫೋಲಿಯೋ ಪರಿಶೀಲಿಸದಿರುವುದು: ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವಾಗ ನಿಯಮಿತವಾಗಿ ಪೋರ್ಟ್ ಫೋಲಿಯೋ ಪರಿಶೀಲಿಸುವುದು ಬಹಳ ಮುಖ್ಯ. ಈಗ ಉತ್ತಮ ಗಳಿಕೆ ಕೊಡುತ್ತಿರುವ ಮ್ಯೂಚುವಲ್ ಫಂಡ್‌ವೊಂದು ಮುಂದೆ ನಿರೀಕ್ಷಿತ ಫಲಿತಾಂಶ ನೀಡದೆ ಇರಬಹುದು. ಇಂತಹ ಸಂದರ್ಭದಲ್ಲಿ  ಪೋರ್ಟ್ ಫೋಲಿಯೋ ನೋಡಿ, ಫಂಡ್‌ಗಳ ಕಾರ್ಯಕ್ಷಮತೆ ಆಧರಿಸಿ ಹೂಡಿಕೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಹೀಗೆ ಮಾಡದಿದ್ದರೆ ಮ್ಯೂಚುವಲ್ ಫಂಡ್‌ನ ಒಟ್ಟಾರೆ ಗಳಿಕೆಗೆ ಹಿನ್ನಡೆಯಾಗುತ್ತದೆ.

  4. ಎಸ್ಐಪಿ ಸ್ಥಗಿತಗೊಳಿಸುವುದು, ಸ್ಕಿಪ್ ಮಾಡುವುದು: ಷೇರು ಮಾರುಕಟ್ಟೆ ಇಳಿಕೆಯ ಹಾದಿಯಲ್ಲಿದೆ ಎಂದ ತಕ್ಷಣ ಹಲವು ಹೂಡಿಕೆದಾರರು ಎಸ್ಐಪಿಗಳನ್ನು ಸ್ಥಗಿತಗೊಳಿಸುವುದು, ಸ್ಕಿಪ್ ಮಾಡುವುದು, ಹೂಡಿಕೆ ಹಿಂಪಡೆಯುವಂತಹ ತಪ್ಪುಗಳನ್ನು ಮಾಡುತ್ತಾರೆ. ಹೀಗೆ ಮಾಡಿದಾಗ ಹೂಡಿಕೆಯಲ್ಲಿ ಶಿಸ್ತು ಇಲ್ಲವಾಗಿ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಗಳಿಕೆ ಕಷ್ಟವಾಗುತ್ತದೆ. ಹೂಡಿಕೆಯಲ್ಲಿ ಕ್ರಮಬದ್ಧತೆ ಬಹಳ ಮುಖ್ಯ. ಅದನ್ನು ಎಂದಿಗೂ ಕಡೆಗಣಿಸಬೇಡಿ.

  5. ಹೆಚ್ಚು ಕಮಿಷನ್, ಎಕ್ಸಿಟ್ ಲೋಡ್ ಇರುವ ಫಂಡ್ ಆಯ್ಕೆ ಮಾಡುವುದು:  ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆ ಮಾಡುವಾಗ ಕಮಿಷನ್ ಕಡಿಮೆ ಇರುವ, ಉತ್ತಮ ಗಳಿಕೆ ಕೊಡುವ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಬಹಳ ಮುಖ್ಯ. ಒಂದೇ ಮಾದರಿಯ ಮ್ಯೂಚುವಲ್ ಫಂಡ್‌ಗಳಲ್ಲಿ ಬೇರೆ ಬೇರೆ ಫಂಡ್ ಹೌಸ್‌ನ ಮ್ಯೂಚುವಲ್ ಫಂಡ್‌ಗಳ ಕಮಿಷನ್ ಒಂದೊಂದು ರೀತಿ ಇರುತ್ತದೆ. ಹಾಗಾಗಿ ಯಾವುದೇ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವಾಗ ಕಮಿಷನ್ (Expense Ratio) ಎಷ್ಟು ಎಂದು ನೋಡಿ ಮುಂದುವರಿಯುವುದನ್ನು ಮರೆಯಬೇಡಿ. ಹಾಗೆಯೇ ಎಕ್ಸಿಟ್ ಲೋಡ್, ಅಂದರೆ ಅವಧಿಗೆ ಮುನ್ನ ಮ್ಯೂಚುವಲ್‌ ಫಂಡ್ ಹೂಡಿಕೆಯನ್ನು ಹೊರತೆಗೆದರೆ ಎಷ್ಟು ಶುಲ್ಕವಿದೆ ಎನ್ನುವುದನ್ನು ತಪ್ಪದೇ ನೋಡಿ.

ಮ್ಯೂಚುವಲ್ ಫಂಡ್ ಎಸ್ಐಪಿ ಹೇಗೆ ಕೆಲಸ ಮಾಡುತ್ತದೆ?
  • ಮ್ಯೂಚುವಲ್ ಫಂಡ್ ಸ್ಕೀಂವೊಂದನ್ನು ಹೂಡಿಕೆಗೆ ಆಯ್ಕೆ ಮಾಡಿಕೊಂಡು ಪ್ರತಿ ತಿಂಗಳು ಅದರಲ್ಲಿ ನಿರ್ದಿಷ್ಟ ಮೊತ್ತವನ್ನು ನಿಗದಿತ ದಿನಾಂಕದಂದು ತೊಡಗಿಸುತ್ತಾ ಹೋಗುವುದೇ ಮ್ಯೂಚುವಲ್ ಫಂಡ್ ಎಸ್ಐಪಿ. ಎಸ್ಐಪಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಹಂತ ಹಂತವಾಗಿ ವಿವರಿಸಲಾಗಿದೆ ಗಮನಿಸಿ.

  • ನಿಮ್ಮ ಹೂಡಿಕೆ ಗುರಿಗಳು ಮತ್ತು ರಿಸ್ಕ್‌ಗೆ ಅನುಗುಣವಾಗಿ ಮ್ಯೂಚುವಲ್ ಫಂಡ್ ಸ್ಕೀಂವೊಂದನ್ನು ಆಯ್ಕೆ ಮಾಡಿಕೊಳ್ಳಬೇಕು.

  • ಎಸ್ಐಪಿ ಹೂಡಿಕೆ ಮೊತ್ತ ಎಷ್ಟು ಮತ್ತು ಪ್ರತಿ ತಿಂಗಳ ಯಾವ ದಿನದಂದು ಹೂಡಿಕೆ ಮಾಡುವಿರಿ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು.

  • ನಿಗದಿತ ದಿನಾಂಕದಂದು ಬ್ಯಾಂಕ್ ಅಕೌಂಟ್‌ನಿಂದ ಸ್ವಯಂಚಾಲಿತವಾಗಿ ಮ್ಯೂಚುವಲ್ ಫಂಡ್ ಎಸ್ಐಪಿಗೆ ಹಣ ಕಡಿತಗೊಳ್ಳಲು ಅನುಮತಿ ನೀಡಬೇಕು.

  • ಮ್ಯೂಚುವಲ್ ಫಂಡ್ ಸ್ಕೀಂಗೆ ಹಣ ವರ್ಗಾವಣೆಯಾದ ಬಳಿಕ ಮ್ಯೂಚುವಲ್ ಫಂಡ್ ಯೂನಿಟ್‌ಗಳು ಹೂಡಿಕೆದಾರನ ಖಾತೆಗೆ ಹಂಚಿಕೆಯಾಗುತ್ತವೆ.

  • ಮ್ಯೂಚುವಲ್ ಫಂಡ್‌ನಲ್ಲಿ ಹೀಗೆ ನಿಯಮಿತವಾಗಿ ಎಸ್ಐಪಿ ಮೂಲಕ ಹೂಡಿಕೆ ಮುಂದವರಿಸಿದಾಗ ದೀರ್ಘಾವಧಿಯಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗುತ್ತದೆ. 

ಮ್ಯೂಚುವಲ್ ಫಂಡ್ ಎಸ್ಐಪಿ ಜನಪ್ರಿಯವಾಗುತ್ತಿರುವುದೇಕೆ?

ಮ್ಯೂಚುವಲ್ ಫಂಡ್ ಎಸ್ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಹೂಡಿಕೆದಾರರಲ್ಲಿ, ಹೆಚ್ಚು ಜನಪ್ರಿಯವಾದ ಹೂಡಿಕೆ ಮಾದರಿಯಾಗುತ್ತಿದೆ. ಮಕ್ಕಳ ಉನ್ನತ ಶಿಕ್ಷಣದ ಉದ್ದೇಶಕ್ಕೆ, ಮನೆ ಖರೀದಿಗೆ, ಕಾರು ಖರೀದಿಸಲು, ವಿದೇಶ ಪ್ರವಾಸ ಮಾಡಲು, ನಿವೃತ್ತಿಗಾಗಿ ಉಳಿತಾಯ ಮಾಡಲು ಹೀಗೆ ವಿವಿಧ ಹಣಕಾಸಿನ ಗುರಿಗಳನ್ನು ಈಡೇರಿಸಿಕೊಳ್ಳಲು ರಿಟೇಲ್ ಹೂಡಿಕೆದಾರರು ಮ್ಯೂಚುವಲ್ ಫಂಡ್ ಎಸ್ಐಪಿ ಮೊರೆ ಹೋಗುತ್ತಿದ್ದಾರೆ.

ಅತ್ಯಂತ ಸಣ್ಣ ಮೊತ್ತವನ್ನು ನಿಯಮಿತವಾಗಿ, ಶಿಸ್ತುಬದ್ಧವಾಗಿ ಹೂಡಿಕೆ ಮಾಡುತ್ತಾ ಮುಂದುವರಿಯಲು ಅವಕಾಶ ಒದಗಿಸುವು ದರಿಂದಲೇ ಎಸ್ಐಪಿ ಎಲ್ಲರ ಮೆಚ್ಚಿನ ಹೂಡಿಕೆಯಾಗುತ್ತಿದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್ಐಪಿ ಮೂಲಕ ಹೂಡಿಕೆ ಮಾಡುವಾಗ ಮಾರುಕಟ್ಟೆಯ ಏರಿಳಿತದ ಲಾಭ ಸಿಗುತ್ತದೆ. ಮಾರುಕಟ್ಟೆ ಏರಿಕೆಯಲ್ಲಿದ್ದಾಗ ಕಡಿಮೆ ಮ್ಯೂಚುವಲ್ ಫಂಡ್ ಯೂನಿಟ್‌ಗಳು ಸಿಗುತ್ತವೆ ಮತ್ತು ಮಾರುಕಟ್ಟೆ ಇಳಿಕೆಯ ಸ್ಥಿತಿಯಲ್ಲಿದ್ದಾಗ ಹೆಚ್ಚು ಮ್ಯೂಚುವಲ್ ಫಂಡ್ ಯೂನಿಟ್‌ಗಳು ಲಭಿಸುತ್ತವೆ. ಹೀಗೆ ಏರಿಳಿತದ ಸ್ಥಿತಿಯಲ್ಲಿ ನಿಯಮಿತವಾಗಿ ಎಸ್ಐಪಿ ಹೂಡಿಕೆ ಮುಂದುವರಿಸುತ್ತಾ ಹೋದಾಗ ಮ್ಯೂಚುವಲ್ ಫಂಡ್‌ಗಳ ಸರಾಸರಿ ಖರೀದಿ ವೆಚ್ಚ ತಗ್ಗಿ ಹೂಡಿಕೆದಾರನಿಗೆ ಲಾಭವಾಗುತ್ತದೆ.

ಮ್ಯೂಚುವಲ್ ಫಂಡ್ ಎಸ್ಐಪಿಗಳ ಮೂಲಕ ದೀರ್ಘಾವಧಿಗೆ ಹೂಡಿಕೆ ಮಾಡಿದಾಗ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗುತ್ತದೆ. ಏಕೆಂದರೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚು ಕಾಲ ತೊಡಗಿಸಿದಾಗ ಚಕ್ರಬಡ್ಡಿಯ ಲಾಭವನ್ನು ಪಡೆಯಬಹುದಾಗಿದೆ. ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ನಿಗದಿತ ದಿನದಂದು ನಿಗದಿತ ಮೊತ್ತ ತೊಡಗಿಸಬೇಕಿರುವುದರಿಂದ ಶಿಸ್ತುಬದ್ಧ ಹೂಡಿಕೆ ಸಾಧ್ಯವಾಗುತ್ತದೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ಗಳಿಕೆಯ ಲಯಕ್ಕೆ ಬಂದ ಸೆನ್ಸೆಕ್ಸ್, ನಿಫ್ಟಿ

ಸತತ ಎರಡು ವಾರಗಳಿಂದ ಕುಸಿತದ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಮತ್ತೆ ಗಳಿಕೆಯ ಲಯಕ್ಕೆ ಬಂದಿವೆ. 80,436 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.92 ರಷ್ಟು ಗಳಿಸಿಕೊಂಡಿದೆ. 24,541 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ವಾರದ ಅವಧಿಯಲ್ಲಿ ಶೇ 0.71 ರಷ್ಟು ಜಿಗಿದಿದೆ.

ನಿರೀಕ್ಷಿತ ಪ್ರಮಾಣಕ್ಕಿಂತ ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಹಣದುಬ್ಬರ ಪ್ರಮಾಣ ಇಳಿಕೆ, ತ್ರೈಮಾಸಿಕ ಫಲಿತಾಂಶಗಳ ಮಿಶ್ರಫಲ ಸೇರಿದಂತೆ ಕೆಲ ಅಂಶಗಳು ಮಾರುಕಟ್ಟೆಗೆ ತಾತ್ಕಾಲಿಕ ಸಕಾರಾತ್ಮಕತೆಯನ್ನು ಒದಗಿಸಿಕೊಟ್ಟಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 4.7, ರಿಯಲ್ ಎಸ್ಟೇಟ್ ಶೇ 2.58, ಆಟೊ ಶೇ 0.99, ಅನಿಲ ಮತ್ತು ತೈಲ ಶೇ 0.21, ಎಫ್ಎಂಸಿಜಿ ಶೇ 0.90 ಮತ್ತು ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 0.06 ರಷ್ಟು ಗಳಿಸಿಕೊಂಡಿವೆ. ನಿಫ್ಟಿ ಸರ್ಕಾರಿ ಸ್ಯಾಮ್ಯದ ಬ್ಯಾಂಕ್ ಶೇ 2.15, ಮಾಧ್ಯಮ ಶೇ 2, ಎನರ್ಜಿ ಶೇ 1.05, ಲೋಹ ಶೇ 0.49, ಫಾರ್ಮಾ ಶೇ 0.46 ಮತ್ತು ನಿಫ್ಟಿ ಫಾರ್ಮಾ ಶೇ 0.03 ರಷ್ಟು ಕುಸಿದಿವೆ.

ಏರಿಕೆ – ಇಳಿಕೆ: ನಿಫ್ಟಿಯಲ್ಲಿ ಟೆಕ್ ಮಹೀಂದ್ರ ಶೇ 5.21, ವಿಪ್ರೊ ಶೇ 5.11, ಇನ್ಫೊಸಿಸ್ ಶೇ 5, ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 4.94, ಟಿಸಿಎಸ್ ಶೇ 4.41, ಎಲ್‌ಟಿಐ ಮೈಂಡ್ ಟ್ರೀ ಶೇ 3.56, ಟೈಟನ್ ಕಂಪನಿ ಶೇ 3.38, ಮಹೀಂದ್ರ ಆ್ಯಂಡ್‌ ಮಹೀಂದ್ರ ಶೇ 3.35, ಟಾಟಾ ಮೋಟರ್ಸ್
ಶೇ 2.94, ಎಕ್ಸಿಸ್ ಬ್ಯಾಂಕ್ ಶೇ 2.05 ಮತ್ತು ಬಜಾಜ್ ಆಟೊ ಶೇ 1.68 ರಷ್ಟು ಗಳಿಸಿಕೊಂಡಿವೆ.

ಡಿವೀಸ್ ಲ್ಯಾಬ್ಸ್ ಶೇ 4, ಕೋಲ್ ಇಂಡಿಯಾ ಶೇ 3.16, ಡಾ. ರೆಡ್ಡೀಸ್ ಲ್ಯಾಬ್ಸ್ ಶೇ 3.08, ಎನ್‌ಟಿಪಿಸಿ ಶೇ 2.94, ಅದಾನಿ ಪೋರ್ಟ್ಸ್ ಶೇ 2.69, ಅದಾನಿ ಎಂಟರ್ ಪ್ರೈಸಸ್ ಶೇ 2.35, ಪವರ್ ಗ್ರಿಡ್ ಶೇ 1.98, ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 1.91, ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಶೇ 1.72, ಹೀರೊ ಮೋಟೊಕಾರ್ಪ್‌ ಶೇ 1.55, ಟಾಟಾ ಸ್ಟೀಲ್
ಶೇ 1.48 ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 1.43 ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ಪಿ ಆ್ಯಂಡ್‌ ಜಿ ಹೆಲ್ತ್‌ನ ತ್ರೈಮಾಸಿಕ ಫಲಿತಾಂಶ ಹೊರಬೀಳಲಿದೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶಿಯ ಮಾರುಕಟ್ಟೆಯಲ್ಲಾಗುವ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಮಾರಾಟದ ಒತ್ತಡ ಸೇರಿದಂತೆ ಹಲವು ಅಂಶಗಳು ಈಗಲೂ ಚಾಲ್ತಿಯಲ್ಲಿರುವುದರಿಂದ ಮಾರುಕಟ್ಟೆಯಲ್ಲಿ ಏರಿಳಿತದ ಹಾದಿ ಮುಂದುವರಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT