ನಾನು 82 ವರ್ಷದ ನಿವೃತ್ತ ಪ್ರಾಧ್ಯಾಪಕಿ. ನನ್ನ ವಾರ್ಷಿಕ ಆದಾಯ ₹13.07 ಲಕ್ಷ ಹಾಗೂ ಟಿಡಿಎಸ್ ₹1.06 ಲಕ್ಷ. ಇದಲ್ಲದೆ ₹1.50 ಲಕ್ಷದ ಹೂಡಿಕೆಯನ್ನೂ ಮಾಡಿದ್ದೇನೆ. ಇದು ಸೆಕ್ಷನ್ 80ಸಿ ವಿನಾಯಿತಿಯಡಿ ಬರುವ ಮೊತ್ತವಾಗಿದೆ. ನನ್ನ ಪ್ರಶ್ನೆ ಏನೆಂದರೆ, ಯಾವ ತೆರಿಗೆ ಪದ್ಧತಿ ನನಗೆ ಸಮಂಜಸ ಹಾಗೂ ಈ ಹೂಡಿಕೆ ತೆರಿಗೆ ಉಳಿಸಲು ಲಾಭದಾಯಕವೇ?
ನಿಮ್ಮ ಆದಾಯವನ್ನು ಎರಡೂ ತೆರಿಗೆ ಪದ್ಧತಿಯಡಿ ತುಲನೆ ಮಾಡಿದಾಗ ಹೊಸ ತೆರಿಗೆ ಪದ್ಧತಿ ಸೂಕ್ತ. ಪ್ರಸ್ತುತ ನೀವು ತಿಳಿಸಿರುವ ತೆರಿಗೆ ಕಡಿತದ ಮೊತ್ತ ಈ ಪದ್ಧತಿಗೆ ತಕ್ಕಂತೆ ಇದೆ. ಹಳೆಯ ಪದ್ಧತಿಯಡಿ ನಿಮಗೆ ಹೂಡಿಕೆಗೆ ಸಂಬಂಧಿಸಿ ₹1.50 ಲಕ್ಷದ ತೆರಿಗೆ ವಿನಾಯಿತಿ ಇದ್ದರೂ ತೆರಿಗೆ ದರಗಳು ಹೆಚ್ಚಾಗಿರುವ ಕಾರಣ ಅದು ಲಾಭದಾಯಕವಲ್ಲ. ಮಾತ್ರವಲ್ಲ, ಹೊಸ ಪದ್ಧತಿಯಡಿ ಈ ಹೂಡಿಕೆಗೆ ಸಂಬಂಧಿಸಿದ ತೆರಿಗೆ ವಿನಾಯಿತಿಗೆ ಅವಕಾಶವಿಲ್ಲ. ಆದರೆ, ತೆರಿಗೆ ದರ ಕಡಿಮೆಯಾಗಿದೆ. ಹೀಗಾಗಿ, ಸುಮಾರು ₹30 ಸಾವಿರದಷ್ಟು ತೆರಿಗೆ ಹೊಸ ಪದ್ಧತಿಯಡಿ ಕಡಿಮೆ.
ಇನ್ನು ಹೂಡಿಕೆಗೆ ಸಂಬಂಧಿಸಿ ಹೇಳುವುದಾದರೆ, ತೆರಿಗೆ ಲಾಭಕ್ಕೋಸ್ಕರವೇ ಹೂಡಿಕೆ ಮಾಡುವುದಾದರೆ, ಅದರಿಂದ ನಿಜವಾದ ಲಾಭವಿದೆಯೇ ಎನ್ನುವುದನ್ನು ಮೊದಲೇ ಪರಿಗಣಿಸಿ ಹೂಡಿಕೆ ಮಾಡಿ. ಇಲ್ಲವಾದರೆ ಯಾವುದೇ ಸಮಯದ ನಿರ್ಬಂಧವಿಲ್ಲದೆ, ನಿಮ್ಮ ವಯಸ್ಸಿಗೆ ಅನುಗುಣವಾಗಿ ನಗದೀಕರಿಸಬಹುದಾದ ಎಫ್.ಡಿಯಂತಹ ಹೂಡಿಕೆಗಳಲ್ಲಿ ನಿಮ್ಮ ಹಣ ಇಡಿ.
ನಾನು ಕೃಷಿಕರ ಕುಟುಂಬದ ಸದಸ್ಯೆ. ನನಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಅವರು ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನನ್ನ ಪತಿ ಕೃಷಿಕ. ನನ್ನ ತಂದೆಯವರಿಗೆ 10 ಎಕರೆ ಕೃಷಿ ಭೂಮಿ ಇದ್ದು ಐವರು ಮಕ್ಕಳಿದ್ದಾರೆ. ನನ್ನ ತಂದೆ ಹಾಗೂ ಮಕ್ಕಳು 2009ರಲ್ಲಿ ಈ 10 ಎಕರೆ ಭೂಮಿಯಲ್ಲಿ 2 ಎಕರೆ ಭೂಮಿಯನ್ನು ₹54 ಲಕ್ಷಕ್ಕೆ ಮಾರಾಟ ಮಾಡಿದ್ದರು. ಇದರಲ್ಲಿ ₹5 ಲಕ್ಷ ಮೊತ್ತವನ್ನು ನನ್ನ ಭಾಗಕ್ಕೆಂದು ಇಟ್ಟಿದ್ದರು. ನನ್ನ ಸೋದರರ ಬಳಿ ಇದ್ದ ಈ ಮೊತ್ತವನ್ನು ಬಡ್ಡಿ ಸಮೇತ (₹20 ಲಕ್ಷ) ಬ್ಯಾಂಕಿಗೆ 2023ರ ನವೆಂಬರ್‌ನಲ್ಲಿ ಜಮಾ ಮಾಡಿದ್ದರು. ಈ ಹಣ ಹೇಗೆ ಹೂಡಿಕೆ ಮಾಡಬೇಕು ಮತ್ತು ಇದಕ್ಕೆ ತೆರಿಗೆ ಇದೆಯೇ?
ನೀವು ನೀಡಿರುವ ಮಾಹಿತಿಯಂತೆ 2009ರಲ್ಲೇ ಒಂದಷ್ಟು ಕೃಷಿ ಭೂಮಿಯನ್ನು ನಿಮ್ಮ ತಂದೆಯವರು ಮಾರಾಟ ಮಾಡಿರುವುದಾಗಿ ತಿಳಿಸಿದ್ದೀರಿ. ಈ ಸಂಬಂಧ ಯಾವುದೇ ತೆರಿಗೆ ಇದ್ದರೂ ಅದರ ಒಡೆತನ ಹೊಂದಿದವರಿಗೆ ಆಯಾ ವರ್ಷಕ್ಕೆ ಅನುಗುಣವಾಗಿಯೇ ತೆರಿಗೆ ಅನ್ವಯಿಸುತ್ತದೆ ಹಾಗೂ ಆ ವರ್ಷದ ರಿಟರ್ನ್ಸ್‌ನಲ್ಲಿ ತೆರಿಗೆ ಭರಿಸಬೇಕಾಗಿರುತ್ತದೆ. ಮಾರಾಟ ಮಾಡಿರುವ ಆಸ್ತಿ ಕೃಷಿ ಭೂಮಿಯಾಗಿದ್ದರೂ ಅದು ಮುನಿಸಿಪಲ್ ವ್ಯಾಪ್ತಿಯಿಂದ ಹೊರಗಿದೆಯೇ ಅಥವಾ ಒಳಗಿದೆಯೇ ಎನ್ನುವುದರ ಆಧಾರದಲ್ಲೂ ಬಂಡವಾಳ ವೃದ್ಧಿ ತೆರಿಗೆ ಅಥವಾ ವಿನಾಯಿತಿ ಅನ್ವಯಿಸುತ್ತದೆಯೇ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಪ್ರಸ್ತುತ ಸಾಲಿನಲ್ಲಿ ಅದರ ವಿಮರ್ಶೆ ಆದಾಯ ತೆರಿಗೆ ಇಲಾಖೆಯ ಹೊರತಾಗಿ ಪ್ರಸ್ತುತವಲ್ಲ.
ನಿಮಗೆ ಹಣ ವರ್ಗಾವಣೆಯಾದಾಗ ಆಸ್ತಿಯ ಮಾರಾಟದ ನಿಮ್ಮ ಪಾಲಾಗಿ ಆ ಮೊತ್ತವನ್ನು ನಿಮಗೆ ನಿಮ್ಮ ಸಹೋದರರು ನೀಡಿದ್ದಾರೆ. ಈ ಮೊತ್ತ ಬ್ಯಾಂಕ್ ಖಾತೆಗೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಜಮಾ ಆಗಿದೆ. ಈ ಮೊತ್ತಕ್ಕೆ ಅದೆಷ್ಟೋ ವರ್ಷಗಳಿಂದ ಬಡ್ಡಿಯೂ ಸೇರುತ್ತಾ ಬಂದಿದೆ. ಆದರೆ, ನಿಮ್ಮ ಹೆಸರಲ್ಲಿರಲಿಲ್ಲ ಹಾಗೂ ಯಾವ ವಿಚಾರವಾಗಿ ವರ್ಗಾಯಿಸಲಾಗಿದೆ ಎನ್ನುವುದರ ಬಗ್ಗೆ ಲಿಖಿತ ದಾಖಲೆ ಇದ್ದಂತಿಲ್ಲ. ಇದೊಂದು ಅಲಿಖಿತ ಒಪ್ಪಂದವಿರಬಹುದು. ಹೀಗಾಗಿ, ಈ ಎಲ್ಲ ವರ್ಷಗಳಲ್ಲಿ ಆ ಮೊತ್ತ ಯಾರ ಹೆಸರಲ್ಲಿತ್ತೋ ಅವರಿಗೆ ಅನ್ವಯವಾಗುವ ತೆರಿಗೆಯನ್ನು ಬ್ಯಾಂಕ್ ಕಟಾಯಿಸಿರುತ್ತದೆ. ಹಾಗೂ ಯಾವ ಸಹೋದರನ ಹೆಸರಲ್ಲಿ ಈ ತನಕ ಆ ಮೊತ್ತ ಇತ್ತೋ ಅದರ ಬಡ್ಡಿಗೆ ಅನ್ವಯವಾಗಿರುವ ತೆರಿಗೆಗೆ ಅವರೇ ಬಾಧ್ಯಸ್ಥರು. ಈ ಸಂಬಂಧ ತೆರಿಗೆ ರಿಟರ್ನ್ಸ್ ಅವರೇ ಸಲ್ಲಿಸಿರಬೇಕು.
ಸಾಮಾನ್ಯವಾಗಿ ಯಾವುದೇ ಪಿತ್ರಾರ್ಜಿತ ಆಸ್ತಿಯ ಪಾಲನ್ನು ಭೂಮಿಯ ಹಿಸ್ಸೆಯಾಗಿ ಪಾಲು ಮಾಡಿದಾಗ ತೆರಿಗೆ ಇರುವುದಿಲ್ಲ. ಮಾರಾಟ ಮಾಡಿದಾಗಲಷ್ಟೇ ತೆರಿಗೆ ಅನ್ವಯಿಸುತ್ತದೆ. ನಿಮ್ಮ ವಿಚಾರದಲ್ಲಿ, ನಿಮ್ಮ ಹೆಸರಲ್ಲಿ ಈ ಮೊತ್ತ ಬರುವ ಮೊದಲು ಯಾವುದೇ ವ್ಯವಹಾರವಾಗಿಲ್ಲ. ಪರ್ಯಾಯವಾಗಿ, ಬಂದ ಹಣಕ್ಕೆ ಮೂಲವಾಗಿ, ಆ ಮೊತ್ತವನ್ನು ನಿಮ್ಮ ಸಹೋದರರಿಂದ ಉಡುಗೊರೆ ರೂಪದಲ್ಲಿ ದಾಖಲಿಸಿಕೊಳ್ಳಿ. ಸಂಬಂಧಿಗಳಿಂದ ಬಂದ ಉಡುಗೊರೆ ಮೊತ್ತಕ್ಕೆ ತೆರಿಗೆ ಇರುವುದಿಲ್ಲ. ಇನ್ನು ಹಣ ಹೂಡಿಕೆ ಬಗ್ಗೆ ಇರುವ ವಿಚಾರವಾಗಿ ಹೇಳುವುದಾದರೆ, ಈ ಮೊತ್ತವನ್ನು ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ ಇಡಬಹುದು. ಅಥವಾ ಅಂಚೆ ಕಚೇರಿಯ ಯಾವುದೇ ಯೋಜನೆಗಳಲ್ಲಿ ತೊಡಗಿಸಿ ಬಡ್ಡಿ ಪಡೆಯಬಹುದು. ಇವು ಯಾವುದೇ ಅಸಲು ಮೊತ್ತಕ್ಕೆ ತೊಡಕಿರದ ಹೂಡಿಕೆ. ಸಾಮಾನ್ಯವಾಗಿ ಶೇ 6ರಿಂದ ಶೇ 8ರಷ್ಟು ವಾರ್ಷಿಕ ಬಡ್ಡಿ ಬರಬಹುದು. ನಿಮಗೆ ತೆರಿಗೆಗೊಳಪಡುವ ಇತರ ಯಾವುದೇ ಆದಾಯ ಇಲ್ಲದಿದ್ದಲ್ಲಿ ನಿಮ್ಮ ವಯೋಮಾನಕ್ಕೆ ಅನುಗುಣವಾಗಿ ಫಾರಂ 15 ಜಿ/ಎಚ್ ನೀಡಿ ತೆರಿಗೆ ಕಡಿತವಾಗುವುದನ್ನು ತಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.