ಕಳೆದ ಗುರುವಾರ, ಫೆಬ್ರುವರಿ 18ರ ಮಧ್ಯಾಹ್ನ, ನವದೆಹಲಿಯ ಮಂಡಿಹೌಸಿನ ಬಳಿ ಸಾವಿರಾರು ವಿದ್ಯಾರ್ಥಿಗಳು ಮತ್ತು ದೆಹಲಿಯ ನಾಗರಿಕರು ಸೇರತೊಡಗಿದ್ದರು. ದೇಶದ್ರೋಹದ ಆರೋಪಕ್ಕೊಳಗಾಗಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಜೊತೆಗೆ ತಾವೂ ಇದ್ದೇವೆ ಎಂದು ಸಾರಿ ಹೇಳಲು ಮಂಡಿಹೌಸಿಗೆ ಇವರು ಬಂದಿದ್ದರು. ಹದಿನೈದು ಕಿಲೊಮೀಟರ್ ದೂರದ ಜೆ.ಎನ್.ಯು.ನ ಮುಖ್ಯದ್ವಾರದ ಬಳಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲೆಂದು ಮಂಡಿಹೌಸಿಗೆ ತೆರಳಲು ಸಜ್ಜಾಗುತ್ತಿದ್ದರು. ಅವರನ್ನು ನೋಡುತ್ತಿರುವಾಗ ಎಲ್ಲರನ್ನೂ ಆವರಿಸುವಂತೆ ಕೇಳುತ್ತಿದ್ದ ಒಂದೇ ಘೋಷಣೆ ‘ವಿ ಆರ್ ಜೆಎನ್ ಯು.’ (ನಾವು ಜೆಎನ್ ಯು)
ಕಾಕತಾಳೀಯವೆನ್ನುವಂತೆ ಪೂರ್ವನಿರ್ಧಾರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ 18ರ ಮಧ್ಯಾಹ್ನ ಮಂಡಿಹೌಸಿನ ಸಮೀಪದ ರಬೀಂದ್ರ ಭವನದ ಆವರಣದಲ್ಲಿ ಮತ್ತು ಜೆಎನ್ ಯುನಲ್ಲಿ ನಾನು ಇರಬೇಕಿತ್ತು.

ಮಂಡಿಹೌಸಿನ ವಿಶಾಲ ಚೌಕದಲ್ಲಿ ಸೇರತೊಡಗಿದ್ದವರನ್ನು ನೋಡುತ್ತ, ಮೆಟ್ರೊ ಹಿಡಿದು ಜೆಎನ್ ಯುನತ್ತ ತೆರಳಿದರೆ ಮುಖ್ಯದ್ವಾರದ ಬಳಿಯೇ ಎಲ್ಲರನ್ನೂ ತಡೆಯುತ್ತಿದ್ದರು. ದೆಹಲಿಯ ಪ್ರಕಾಶಕ ಮಿತ್ರ ಶಶಿಕುಮಾರರೊಡನೆ ಮಂಡಿಹೌಸಿನಿಂದ ಜೆಎನ್ ಯು ತಲುಪುತ್ತಿದ್ದಂತೆ ಕೇಳಿಬಂದ ಕೂಗು ‘ವಿ ಆರ್ ಜೆಎನ್ ಯು’! ವಿಶಿಷ್ಟವಾದ ಮಾತೆಂದರೆ ಘೋಷಣೆ ಕೂಗುತ್ತಿದ್ದವರೆಲ್ಲ ಹೆಣ್ಣು ಮಕ್ಕಳು. ಲಿಂಗ ಸಮಾನತೆಗೆ ಹೆಸರಾದ ಜೆಎನ್ ಯುನ ಆವರಣದಲ್ಲಿ ಇದಕ್ಕಿಂತ ಭಿನ್ನವಾದುದನ್ನು ನಾನು ನಿರೀಕ್ಷಿಸುತ್ತಿರಲಿಲ್ಲ. ಅಂದಿನಿಂದಲೂ ಅವರ ಕೂಗು ಹಗಲಿರುಳು ನನ್ನ ಕಿವಿಯಲ್ಲಿ ಪ್ರತಿಧ್ವನಿತವಾಗುತ್ತಿದೆ.

ಕಳೆದ ವಾರದಲ್ಲಿ ಜೆಎನ್ ಯುನ ವಿಶಿಷ್ಟ ಇತಿಹಾಸದ ಬಗ್ಗೆ ಅದರೊಡನೆ ಸಂಬಂಧ ಹೊಂದಿದ್ದವರು ಈ ಪುಟಗಳಲ್ಲಿ ಮೂರು ಮುಖ್ಯ ಲೇಖನಗಳನ್ನು ಬರೆದಿದ್ದಾರೆ. ಅಲ್ಲಿನ ಹಳೆಯ ವಿದ್ಯಾರ್ಥಿಯಾದ ನಾನು ನನ್ನ ವಿದ್ಯಾಮಾತೆಯ (ಅಲ್ಮಾಮಾಟರ್) ಕುರಿತಾಗಿ ಅವರ ಜೊತೆಗೆ ದನಿಗೂಡಿಸಬೇಕು. ಅಲ್ಲಿನ ಶೈಕ್ಷಣಿಕ ಗುಣಮಟ್ಟ ಮತ್ತು ನಾಗರಿಕ ಸಂಸ್ಕೃತಿಗಳ ಪ್ರಜಾಸತ್ತಾತ್ಮಕತೆ, ಗಂಭೀರ ಚರ್ಚೆ ಹಾಗೂ ಮುಕ್ತ ಸಂವಾದದ ವಾತಾವರಣಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಇಂದು ನನ್ನ ಉದ್ದೇಶ ಈ ವಿಶ್ವವಿದ್ಯಾಲಯದ ಮೇಲಿನ ಒಂದು ನಿರ್ದಿಷ್ಟ ಆರೋಪಕ್ಕೆ ಪ್ರತಿಕ್ರಿಯಿಸುವುದು ಮತ್ತು ಅದರ ಮೂಲಕ ಹೇಗೆ ‘ವಿ ಆರ್ ಜೆಎನ್ ಯು’ ಘೋಷಣೆಯನ್ನು ಅರ್ಥ ಮಾಡಿಕೊಳ್ಳಬೇಕೆನ್ನುವುದನ್ನು ಓದುಗರ ಮುಂದಿಡುವುದು.

ಜೆಎನ್ ಯುವನ್ನು ರಾಷ್ಟ್ರವಿರೋಧಿ ಚಟುವಟಿಕೆಗಳ ತಾಣವೆಂದು ಪದೇ ಪದೇ ಬಿಂಬಿಸಲಾಗುತ್ತಿದೆ. ಅಲ್ಲಿನ ಮುಕ್ತ ಚರ್ಚೆಗಳು ದೇಶದ ಅಖಂಡತೆ ಮತ್ತು ಭದ್ರತೆಗೆ ಅಪಾಯವನ್ನೊಡ್ಡುವ ವಿಚಾರಗಳನ್ನು ಹುಟ್ಟುಹಾಕುತ್ತವೆ ಎಂದೂ ಹಲವರು ವಾದಿಸುತ್ತಿದ್ದಾರೆ. ಇಂತಹ ವಾದಗಳು ಹೊಸವೇನಲ್ಲ ಮತ್ತು ಕೇವಲ ಕಾಶ್ಮೀರದ ವಿಚಾರದಲ್ಲಿ ಮಾತ್ರ ಹುಟ್ಟುತ್ತಿಲ್ಲ. ಪ್ರತ್ಯೇಕತೆಯನ್ನು ಪ್ರತಿಪಾದಿಸುವ ಇತರ ಪ್ರಾದೇಶಿಕ ಹೋರಾಟಗಳು ಮತ್ತು ಅಸಮಾನತೆಯ ವಿರುದ್ಧದ ನಕ್ಸಲ್ ಹೋರಾಟಗಳಿಗೂ ಜೆಎನ್ ಯು ಸಮುದಾಯದಲ್ಲಿ ಸಹಾನುಭೂತಿಯಿದೆ. ಅಲ್ಲದೆ ದೇಶಕ್ಕಾಗಿ ಪ್ರಾಣ ತೊರೆಯುವ ಹುತಾತ್ಮರ ಬಗ್ಗೆ ಗೌರವವಿಲ್ಲ ಎಂಬ ಆಪಾದನೆಗಳು ಹಲವಾರು ದಶಕಗಳಿಂದಲೂ ಕೇಳಿಬರುತ್ತಿವೆ.

ಈ ಆರೋಪಗಳನ್ನು ಕೇವಲ ರಾಜಕಾರಣಿಗಳು ಮಾಡುತ್ತಿಲ್ಲ. ಭಾರತೀಯ ಸೈನ್ಯದ ದಂಡನಾಯಕರುಗಳೂ ಈಗ ಮಾಡಿದ್ದಾರೆ. ಇವರಲ್ಲಿ ಕೆಲವರು ನಿನ್ನೆ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ, ತಪ್ಪುದಾರಿಗಿಳಿದಿರುವ ಅಲ್ಲಿನ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಹುಟ್ಟುಹಾಕಲು ಹಲವು ಸಲಹೆಗಳನ್ನು ನೀಡಿದ್ದಾರೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ ಜೆ.ಎನ್.ಯು. ಆವರಣದಲ್ಲಿ ಯುದ್ಧ ಟ್ಯಾಂಕೊಂದನ್ನು ತಂದಿಡುವುದು, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವವರ ಭಾವಚಿತ್ರಗಳನ್ನು ಪ್ರದರ್ಶಿಸುವುದು. ಆ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಭಾವನೆ ಮೂಡುತ್ತದೆ ಎಂದು ಅವರು ನಂಬಿದ್ದಾರೆ.

ಜೆ.ಎನ್.ಯು.ನ ಬೌದ್ಧಿಕ ಚರ್ಚೆಗಳ ಔನ್ನತ್ಯದ ಅರಿವಿರುವ ಯಾರಿಗೂ ನಿವೃತ್ತ ಸೈನ್ಯಾಧಿಕಾರಿಗಳ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ತರಗತಿಗಳಲ್ಲಿ ಇಲ್ಲವೇ ಚರ್ಚಾಕೂಟಗಳಲ್ಲಿ ಮಾತ್ರವಲ್ಲ, ವಿದ್ಯಾರ್ಥಿ ಸಂಘದ ಚುನಾವಣೆಗಳ ಸಂದರ್ಭದಲ್ಲಿಯೂ ಸಾವಿರಾರು ವಿದ್ಯಾರ್ಥಿಗಳ ಮುಂದೆ ರಾಜಕೀಯ ದರ್ಶನಗಳ ಗಂಭೀರ ಚರ್ಚೆಯಾಗುವ ಸಂಸ್ಥೆಯಿದು. ಮಾರ್ಕ್ಸ್ನಿಂದ ಫುಕೊ ತನಕ, ಬುದ್ಧನಿಂದ ಅಂಬೇಡ್ಕರ್ ತನಕ ಇಲ್ಲಿನ ವಿದ್ಯಾರ್ಥಿಗಳ ವಿಮರ್ಶಾತ್ಮಕ ದೃಷ್ಟಿಯಿಂದ ಯಾರೂ ತಪ್ಪಿಸಿಕೊಳ್ಳುವುದಿಲ್ಲ. ಇದು ಕೇವಲ ಹೊಟ್ಟೆತುಂಬಿದವರ ಒಣ ಚರ್ಚೆಯಲ್ಲ ಅಥವಾ ಹಳೆಯ ವಿದ್ಯಾರ್ಥಿಯೊಬ್ಬನ ಆದರ್ಶದ ಹಳಹಳಿಕೆಯ ಮಾತಲ್ಲ.

ಬದಲಿಗೆ ಕೆಲವು ಮಿತಿಗಳ ನಡುವೆಯೂ ಜೆ.ಎನ್.ಯು. ತನ್ನೊಳಗೆ ಕಟ್ಟಿಕೊಂಡಿರುವ ವಾಸ್ತವದ ಚಿತ್ರಣ. ಜೆ.ಎನ್.ಯು.ನಲ್ಲಿನ ಬೌದ್ಧಿಕ ಮತ್ತು ಸಾಮುದಾಯಿಕ ಬದುಕುಗಳ ಮೂಲಕ ಭಾರತೀಯ ಸಮಾಜದ ಇಲ್ಲವೇ ಜಗತ್ತಿನ ಯಾವ ಮೂಲೆಯಲ್ಲಿ ಬದುಕಿರುವ ಶೋಷಿತ, ವಂಚಿತ ವರ್ಗಗಳ ಕಡೆಗೆ ಅನುಭೂತಿಯನ್ನು (ಎಂಪಥಿ) ಬೆಳೆಸಿಕೊಳ್ಳಲು ಸಾಧ್ಯವಾಗುವಂತಹ ವಾತಾವರಣವೊಂದು ವಿಶ್ವವಿದ್ಯಾಲಯದ ಆವರಣದಲ್ಲಿದೆ. ಇದು ನನ್ನ ದೃಷ್ಟಿಯಲ್ಲಿ ಜೆ.ಎನ್.ಯು. ಸಮುದಾಯದ ಸದಸ್ಯನೊಬ್ಬನಲ್ಲಿ ಮೂಡುವ ದೇಶಭಕ್ತಿಯ, ಮಾನವಪ್ರೇಮದ ಮೂಲಸೆಲೆ. ತಮಗೆ ಯಾವ ಸಂಬಂಧವೂ ಇಲ್ಲದ, ಆದರೆ ಬದುಕಿನ ಕನಿಷ್ಠ ಅವಶ್ಯಕತೆಗಳಿಗೂ ಹೆಣಗಾಡುತ್ತಿರುವ ವರ್ಗಗಳ ಬಗ್ಗೆ ತಾವು ಚಿಂತಿಸಬೇಕು, ಅವರ ಬದುಕಿನ ಸುಧಾರಣೆಗೆ ಹೋರಾಡಲು ತಮ್ಮ ಜೀವನವನ್ನು ಮೀಸಲಿಡಬೇಕು ಎಂದುಕೊಳ್ಳುವ ಮನಸ್ಸುಗಳನ್ನು ಜೆ.ಎನ್.ಯು. ಹುಟ್ಟುಹಾಕುತ್ತದೆ. ಆದುದರಿಂದಲೇ ಹೀಗೆ ಯೋಚಿಸುವ ಜೆ.ಎನ್.ಯು. ವಿದ್ಯಾರ್ಥಿಗಳು ಯಾರಿಗೂ ಕಡಿಮೆಯಿಲ್ಲದ ಮೊದಲ ವರ್ಗದ ದೇಶಪ್ರೇಮಿಗಳು. ಇವರುಗಳು ಭಾರತದ ಮುಖ್ಯವಾಹಿನಿಯ ಎಲ್ಲ ಕ್ಷೇತ್ರಗಳಲ್ಲಿಯೂ (ಭದ್ರತಾ ಪಡೆಗಳು ಸೇರಿದಂತೆ) ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಕೊಡುಗೆ ನೀಡಿದ್ದಾರೆ. ಜೆ.ಎನ್.ಯು.ನಲ್ಲಿ ತಮಗೆ ಲಭ್ಯವಾದ ಸಂವೇದನೆಯನ್ನು ಕಾಪಾಡಿಕೊಂಡಿದ್ದಾರೆ.

ಜೆ.ಎನ್.ಯು.ನಲ್ಲಿ ಪೋಷಿಸಲಾಗುವ, ಪ್ರಶ್ನಿಸುವ, ವಿವಿಧ ರೀತಿಗಳಲ್ಲಿ ಅನುಭೂತಿಯನ್ನು ಕಟ್ಟಿಕೊಳ್ಳುವ ಸಂಸ್ಕೃತಿಯನ್ನು ಬಹುತೇಕ ನಿವೃತ್ತ ಸೈನ್ಯಾಧಿಕಾರಿಗಳು ಒಪ್ಪದಿರಬಹುದು ಅಥವಾ ಅವರಿಗದು ಮೌಲಿಕವಲ್ಲ ಎನಿಸಬಹುದು. ಹಾಗಾಗಿ ಅವರ ಸಲಹೆಗಳ ಹಿಂದೆ ಅಕೃತ್ರಿಮ ಮುಗ್ಧತೆಯಿದೆ. ಆದರೆ ಇಂತಹ ವಿವಾದಗಳ ಸಂದರ್ಭದಲ್ಲಿ ಪಕ್ಷ ರಾಜಕಾರಣದ ಲಾಭ-ನಷ್ಟಗಳ ಲೆಕ್ಕಾಚಾರಕ್ಕಿಳಿಯುವ ರಾಜಕಾರಣಿಗಳು ಮುಗ್ಧರಲ್ಲ. ಹಾಗಾಗಿ ಜೆ.ಎನ್.ಯು. ವಿದ್ಯಾರ್ಥಿಗಳನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಮತ್ತು ಎಡ ಪಕ್ಷಗಳನ್ನೂ ಸಂಶಯದಿಂದಲೇ ನೋಡಬೇಕಾಗಿದೆ. ಏಕೆಂದರೆ ಐತಿಹಾಸಿಕವಾಗಿ ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಈ ಪಕ್ಷಗಳೂ ಗೌರವಿಸಿರುವ ಸಂದರ್ಭಗಳು ಕಡಿಮೆ.

ಹೀಗಿದ್ದರೂ ಜೆ.ಎನ್.ಯು. ವಿದ್ಯಾರ್ಥಿಗಳ ಮೇಲೆ ಇಂದು ಅಧಿಕಾರದಲ್ಲಿರುವ ಬಿಜೆಪಿಯ ನಾಯಕರು ಮಾಡುತ್ತಿರುವ ಒಂದು ನಿರ್ದಿಷ್ಟ ಆರೋಪ ಅಪ್ರಾಮಾಣಿಕವಾದುದು ಎಂದು ಹೇಳದೆ ವಿಧಿಯಿಲ್ಲ. ಪಕ್ಷದ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಹಲವರು ಭಾರತ ವಿರೋಧಿ ಘೋಷಣೆಗಳನ್ನು ಕೂಗುವವರನ್ನು ಸುಮ್ಮನೆ ಬಿಡಬೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಜೆ.ಎನ್.ಯು. ವಿದ್ಯಾರ್ಥಿಗಳ ಮೇಲೆ ಗದಾಪ್ರಹಾರ ಮಾಡುವ ಮೊದಲು ಭಾರತ ಗಣತಂತ್ರದ ಅತ್ಯಂತ ಪವಿತ್ರ ದಾಖಲೆಯಾದ ಭಾರತದ ಸಂವಿಧಾನವನ್ನು ಸುಟ್ಟ ಆರೋಪವಿರುವವರ ಉದ್ದನೆಯ ಪಟ್ಟಿಯಲ್ಲಿನ ಎರಡು ಹೆಸರುಗಳನ್ನು ಗಮನಿಸಿ: ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಮತ್ತು ಪ್ರಕಾಶ್ ಸಿಂಗ್ ಬಾದಲ್.

ಇಬ್ಬರೂ ಈ ಆರೋಪ ಹೊತ್ತ ನಂತರ ತಮ್ಮ ರಾಜ್ಯದ ಮುಖ್ಯಮಂತ್ರಿಗಳೂ ಆದರು. ಬಾದಲ್ರ ಸಂಯುಕ್ತ ಅಕಾಲಿದಳ ಇಂದಿಗೂ ಬಿಜೆಪಿ ನೇತೃತ್ವದ ಎನ್.ಡಿ.ಎ.ನ ಅಂಗಪಕ್ಷ. ಅಲ್ಲದೆ ಕಾಶ್ಮೀರದ ಉಗ್ರರ ಬಗ್ಗೆ ಸಹಾನುಭೂತಿ ಹೊಂದಿರುವ, ಭಾರತ ವಿರೋಧಿ ಘೋಷಣೆಗಳನ್ನು ಕೂಗುವ ಮತ್ತು ಭಾರತದ ಧ್ವಜಕ್ಕೆ ಅಪಮಾನ ಮಾಡುವ ಆರೋಪಗಳನ್ನು ಎದುರಿಸುವ ಕಾಶ್ಮೀರದ ಪಿಡಿಪಿ ಜೊತೆಗೆ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನೂ ರಚಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರೇ ರಾಜ್ಯಸಭೆಯಲ್ಲಿ ಚರ್ಚೆಯೊಂದರಲ್ಲಿ ಭಾಗವಹಿಸುತ್ತ, ತಾನೇ ಸಂವಿಧಾನವನ್ನು ಸುಡುವುದಾಗಿ ಹೇಳಿದರು.

ಅಂದರೆ ಬಿಜೆಪಿಯೂ ಸೇರಿದಂತೆ ಎಲ್ಲ ಸರ್ಕಾರಗಳೂ ರಾಷ್ಟ್ರದ್ರೋಹದ ಆರೋಪವನ್ನು ಪ್ರಬಲ ವಿರೋಧಿಗಳ ಮೇಲೆ ಮಾಡುವುದಿಲ್ಲ. ಬದಲಿಗೆ ಬಡ, ದುರ್ಬಲ ವಿದ್ಯಾರ್ಥಿಗಳು ಸಿಕ್ಕಾಗ ತಮ್ಮ ಪೌರುಷ ತೋರಿಸಬಯಸುತ್ತವೆ ಎಂದು ಹೇಳದೆ ಬೇರೆ ದಾರಿಯಿಲ್ಲ. ಅಲ್ಲದೆ ಕನ್ಹಯ್ಯಾನಂತಹ ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಆಪಾದನೆಗಳನ್ನು ಹೇರುವ ಮೊದಲು ಸ್ವಲ್ಪ ವಿವೇಚನೆ ತೋರಿಸಬೇಕು. ಇಂದಿನ ವಿಪರ್ಯಾಸವೆಂದರೆ ಕನ್ಹಯ್ಯಾ ಮೇಲಿನ ಆರೋಪಗಳಿಗೆ ಸ್ಪಷ್ಟ ಪುರಾವೆಗಳು ಇನ್ನೂ ದೊರಕಿಲ್ಲ. ಆದರೂ ಕನ್ಹಯ್ಯಾ ಮತ್ತು ಇತರ ಜೆ.ಎನ್.ಯು. ವಿದ್ಯಾರ್ಥಿಗಳು ತಮ್ಮ ನಿರಪರಾಧಿತ್ವವನ್ನು ಸಾಧಿಸಬೇಕೆಂದು ದೆಹಲಿ ಪೊಲೀಸ್ ಕಮಿಷನರ್ ಭೀಮಸೇನ ಬಸ್ಸಿ ಹೇಳುತ್ತಾರೆ. ಈ ವಿದ್ಯಾರ್ಥಿಗಳ ಅಪರಾಧಿತ್ವವನ್ನು ಸಿದ್ಧಪಡಿಸುವ ಹೊಣೆಗಾರಿಕೆ ಪೊಲೀಸರದು, ಕಾನೂನನ್ನು ಜನಸಮೂಹ (ಮಾಬ್) ಕೈಗೆತ್ತಿಕೊಳ್ಳಲು ಬಿಡಬಾರದು ಎಂಬ ಸಾಮಾನ್ಯ ತಿಳಿವಳಿಕೆಯನ್ನೂ ಬಸ್ಸಿ ತೋರಿಸುತ್ತಿಲ್ಲ. ಹಾಗಾಗಿಯೇ ಹತ್ಯೆ, ಅತ್ಯಾಚಾರ, ಆಸ್ತಿ-ಪಾಸ್ತಿ ನಾಶದ ಆಪಾದನೆಗಳನ್ನು ಎದುರಿಸುತ್ತಿರುವ ಹರಿಯಾಣದ ಜಾಟ್ ಕಾರ್ಯಕರ್ತರ ಮೇಲೆ ಹೊರಿಸದ ಆಪಾದನೆಗಳು ಕನ್ಹಯ್ಯಾ ಮೇಲಿವೆ.

ವಿಶ್ವವಿದ್ಯಾಲಯಗಳಲ್ಲಿ ರಾಜಕಾರಣ ಇರಬಾರದು ಎಂಬ ವಾದ ಆಗಾಗ ಕೇಳಿಬರುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಪಕ್ಷದ ಮತ್ತು ಅಧಿಕಾರದ ರಾಜಕಾರಣಗಳಿರಬಾರದು ಎಂಬ ಒಂದು ಸಂಕುಚಿತ ಅರ್ಥದಲ್ಲಿ ಮಾತ್ರ ಇದು ಒಪ್ಪಬಹುದಾದ ನಿಲುವು. ಆದರೆ ಜ್ಞಾನದ ಉತ್ಪಾದನೆ ಮತ್ತು ಪ್ರಸರಣ ಎರಡೂ ರಾಜಕಾರಣದೊಡನೆ ಸಂಬಂಧ ಹೊಂದಿವೆ. ಈ ಮಾತು ವಿಜ್ಞಾನ-ತಂತ್ರಜ್ಞಾನಗಳು ಮತ್ತು ಸಮಾಜ ವಿಜ್ಞಾನಗಳೆರಡಕ್ಕೂ ಸತ್ಯ. ಹಾಗಾಗಿ ವಿಶ್ವವಿದ್ಯಾಲಯದ ಆವರಣಗಳಲ್ಲಿ ರಾಜಕಾರಣದ, ವಿಚಾರಧಾರೆಗಳ ಇರುವಿಕೆಯನ್ನು ತಡೆಯಲು ಸಾಧ್ಯವಿಲ್ಲ. ಇವುಗಳನ್ನು ನಿರ್ವಹಿಸುವ ಭಾರವನ್ನು ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಬಿಡಿ. ಇದು ಹೇಗೆ ಸಾಧ್ಯ ಎನ್ನುವುದನ್ನು ಜೆ.ಎನ್.ಯು. ಯಶಸ್ವಿಯಾಗಿ ಸಾಧಿಸಿ ತೋರಿಸಿದೆ. ಹಾಗಾಗಿಯೇ ಅದರೊಡನೆ ನೇರವಾಗಿ ಸಂಬಂಧ ಹೊಂದಿರುವ, ಹೊಂದಿಲ್ಲದಿರುವ, ಆದರೆ ಸ್ವಾಯತ್ತ ವಿಶ್ವವಿದ್ಯಾಲಯಗಳ ಕನಸನ್ನು ಕಾಣುವ ಎಲ್ಲರ ಘೋಷಣೆಯೂ ಒಂದೇ ಅಗಿದೆ: ‘ವಿ ಆರ್ ಜೆ.ಎನ್.ಯು.’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.