ಚುನಾವಣಾ ಕಾಲೇ ವಿಪರೀತ ಬುದ್ಧಿ. ಅದು ಬಸವರಾಜ ಬೊಮ್ಮಾಯಿ ಇರಲಿ, ಸಿದ್ದರಾಮಯ್ಯ ಇರಲಿ, ವೀರಪ್ಪ ಮೊಯಿಲಿ ಇರಲಿ ಎಲ್ಲರಿಗೂ ಅಧಿಕಾರ ಅವಧಿಯ ಕೊನೆಯ ಕಾಲದಲ್ಲಿ ಅವಸರ. ಅಧಿಕಾರದಲ್ಲಿ ಇರುವ ಸರ್ಕಾರಗಳಿಗೆ ಕೊನೆಯ ಗಳಿಗೆಯಲ್ಲಿಯೇ ಮಹತ್ವದ್ದು ನೆನಪಾಗುತ್ತದೆ. ಅವಸರವೇ ಅಪಘಾತಕ್ಕೆ ಕಾರಣ ಎನ್ನುವುದು ನಮ್ಮ ನಾಯಕರಿಗೆ ಗೊತ್ತಿದ್ದರೂ ಅವಸರ ಮಾಡಿ ಎಡವಿ ಬೀಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅದೊಂದು ಚಾಳಿಯೇ ಆಗಿಬಿಟ್ಟಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಬಹಳಷ್ಟು ಅವಕಾಶಗಳಿದ್ದವು. ವಿದ್ಯಾನಿಧಿಯಂತಹ ಯೋಜನೆಗಳನ್ನು ಜಾರಿಗೊಳಿಸಿದ್ದರು. ಬಹುಜನಪ್ರಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವರ್ಚಸ್ಸು ಜೊತೆಗಿದೆ. ಚುನಾವಣಾ ಚಾಣಾಕ್ಷ ಅಮಿತ್ ಶಾ ಅವರ ಬೆಂಬಲವೂ ಇದೆ. ಸಕ್ರಿಯ ಕಾರ್ಯಕರ್ತರ ಪಡೆಯೂ ಇದೆ. ಆದರೂ ಅವರು ಅವಸರದಲ್ಲಿ ಮೀಸಲಾತಿ ಎಂಬ ಜೇನುಗೂಡಿಗೆ ಕೈಹಾಕಿಬಿಟ್ಟರು. ‘ಜೇನುಗೂಡಿಗೆ ಕೈಹಾಕಿ ಕೈಕಚ್ಚಿಸಿಕೊಂಡಿದ್ದೇನೆ. ಆದರೂ ನಾನು ಸಿಹಿಯನ್ನೇ ಹಂಚಿದ್ದೇನೆ’ ಎಂದು ಅವರು ಬಾಯಿಮಾತಿಗೆ ಹೇಳಿಕೊಂಡರೂ ಜೇನು ಕಚ್ಚಿದ ಉರಿ ಜೋರಾಗಿಯೇ ಇದೆ. ಜೇನು ರಟ್ಟಿನಲ್ಲಿ ಸಿಹಿ ಕಾಣೆಯಾಗಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಿದವರೆಲ್ಲಾ ಕೈಸುಟ್ಟುಕೊಂಡಿದ್ದೇ ಹೆಚ್ಚು.

ಅವರು ಒಂದೆಡೆ, ಸದಾಶಿವ ಆಯೋಗದ ವರದಿ ಯನ್ನು ತಾವು ಸ್ವೀಕರಿಸಿಲ್ಲ ಎನ್ನುತ್ತಾರೆ. ಇನ್ನೊಂದೆಡೆ, ಒಳಮೀಸಲಾತಿಯನ್ನೂ ಜಾರಿ ಮಾಡುವುದಾಗಿ ಪ್ರಕಟಿಸಿದ್ದಾರೆ. ಈ ಕ್ರಮಕ್ಕೆ ಆಧಾರ ಏನು ಎನ್ನುವುದನ್ನು ಇನ್ನೂ ಸ್ಪಷ್ಟ ಮಾಡಿಲ್ಲ. ಒಕ್ಕಲಿಗರಿಗೆ, ಲಿಂಗಾಯತರಿಗೆ ತಲಾ ಶೇ 2ರಷ್ಟು ಹೆಚ್ಚುವರಿ ಮೀಸಲಾತಿ ಪ್ರಕಟಿಸಿದ್ದಾರೆ. ಇದಕ್ಕೂ ಯಾವುದೇ ಅಧ್ಯಯನದ ಬೆಂಬಲ ಇದ್ದಂತಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ್ದ ಸರ್ಕಾರ ಒಳಮೀಸಲಾತಿಗೂ ಅನುಮೋದನೆ ನೀಡುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿತು. ಇಡಬ್ಲ್ಯುಎಸ್ ಮೀಸಲಾತಿಯಂತೂ ಫುಟ್ಬಾಲ್ ಅಂತಾಯಿತು.

ಇಡಬ್ಲ್ಯುಎಸ್ ವರ್ಗದ ಶೇ 10 ಮೀಸಲಾತಿಯನ್ನು ವಿಭಜಿಸಿ ಶೇ 4ರಷ್ಟನ್ನು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೂ ಶೇ 3ರಷ್ಟನ್ನು ಒಕ್ಕಲಿಗರಿಗೂ ನೀಡುವುದಾಗಿ ಪ್ರಕಟಿಸಿತು. ಆದರೆ ಪಂಚಮಸಾಲಿಗರ ಹೋರಾಟ ನಿಲ್ಲದೇ ಇದ್ದುದರಿಂದ ಮತ್ತೆ ನಿರ್ಧಾರವನ್ನು ಬದಲಿಸಿದ ಸರ್ಕಾರ 2ಬಿ ಗುಂಪಿನಲ್ಲಿದ್ದ ಮುಸ್ಲಿಮರನ್ನು ಹೊರಕ್ಕೆ ಹಾಕಿ ಅವರಿಗೆ ನೀಡಲಾಗುತ್ತಿದ್ದ ಶೇ 4ರ ಮೀಸಲಾತಿಯನ್ನು ಮತ್ತೆ ವಿಭಜಿಸಿ ತಲಾ ಶೇ 2ರಂತೆ ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹಂಚಲಾಯಿತು. ಹೀಗೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹಂಚಿಕೆ ಮಾಡುವುದಕ್ಕೆ ಯಾವುದೇ ವೈಜ್ಞಾನಿಕ ಸಮೀಕ್ಷೆಗಳ ಆಧಾರವೇ ಇರಲಿಲ್ಲ. ಒಟ್ಟಾರೆ ಸಂತೆಗೆ ಮೂರು ಮೊಳ ನೇಯುವ ತರಾತುರಿಯೇ ಇತ್ತು. ಚುನಾವಣೆ ಸಂದರ್ಭದಲ್ಲಿ ಒಂದೆಡೆ ಲಂಬಾಣಿ, ಕೊರಚ, ಕೊರಮ ಜನಾಂಗದವರು, ಇನ್ನೊಂದೆಡೆ ಮುಸ್ಲಿಮರು ಹೋರಾಟದ ಹಾದಿ ಹಿಡಿದಿದ್ದಾರೆ. ಒಕ್ಕಲಿಗರು, ಲಿಂಗಾಯತರನ್ನು ಸಮಾಧಾನ ಮಾಡಲು ಹೋಗಿ ಇತರ ಜನಾಂಗದವರನ್ನು ಹೋರಾಟಕ್ಕೆ ಹಚ್ಚಿದ್ದೇ ಸಾಧನೆಯಾಯಿತು.

2ಬಿಯಲ್ಲಿದ್ದ ಮುಸ್ಲಿಮರನ್ನು ಇಡಬ್ಲ್ಯುಎಸ್ಗೆ ಸೇರಿಸಿದ ಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹಿರಂಗವಾಗಿಯೇ ಮೆಚ್ಚಿಕೊಂಡರು. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ ಎಂದು ಹೇಳಿದರು. ಆದರೆ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ಅವರು ಹಿಂದುಳಿದವರು ಎನ್ನುವ ಕಾರಣಕ್ಕಾಗಿಯೇ ವಿನಾ ಧರ್ಮದ ಆಧಾರದಲ್ಲಿ ಅಲ್ಲ ಎನ್ನುವುದನ್ನು ಅವರು ಮರೆತೇಬಿಟ್ಟರು. ಜೊತೆಗೆ ಇತರ ಧಾರ್ಮಿಕ ಅಲ್ಪಸಂಖ್ಯಾತರಾದ ಕ್ರೈಸ್ತರು, ಜೈನರು, ಸಿಖ್ಖರು ಮತ್ತು ಬೌದ್ಧರ ಬಗ್ಗೆ ಮಾತೇ ಇಲ್ಲ. ಇವೆಲ್ಲ ಏನನ್ನು ಸೂಚಿಸುತ್ತವೆ? ಒಂದು ನಿರ್ದಿಷ್ಟ ಧರ್ಮದವರ ವಿರುದ್ಧ ಸಾರಿರುವ ಯುದ್ಧದ ಮುಂದುವರಿದ ಭಾಗ ಎಂದೇ ಅನ್ನಿಸುತ್ತದೆ.

ಚುನಾವಣಾ ಕಾಲದಲ್ಲಿ ವಿಪರೀತ ಬುದ್ಧಿಯನ್ನು ಪ್ರದರ್ಶಿಸುವುದು ಬಸವರಾಜ ಬೊಮ್ಮಾಯಿ ಅವರಿಂದ ಆರಂಭವಾಗಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರೂ ಇಂತಹದೇ ತಪ್ಪು ಮಾಡಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಅಧ್ಯಯನ ನಡೆಸಲು ನ್ಯಾ.ನಾಗಮೋಹನ ದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. 6 ತಿಂಗಳ ಕಾಲಾವಕಾಶವನ್ನೂ ನೀಡಲಾಗಿತ್ತು. ಆದರೆ ಮೂರು ತಿಂಗಳಿನಲ್ಲಿಯೇ ವರದಿ ಪಡೆದು ಕೇಂದ್ರಕ್ಕೆ ಶಿಫಾರಸು ಮಾಡಲಾಯಿತು. ಅದು ಕೂಡ ನಡೆದಿದ್ದು ಚುನಾವಣೆ ಇನ್ನೇನು ಘೋಷಣೆಯಾಗುತ್ತದೆ ಎನ್ನುವ ಹೊತ್ತಿನಲ್ಲಿಯೆ. ಕನ್ನಡಕ್ಕೆ ಪ್ರತ್ಯೇಕ ಬಾವುಟದ ಪ್ರಸ್ತಾಪವೂ ಇದೇ ಕಾಲದಲ್ಲಿಯೇ ಹೊರಬಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಇವೂ ಕಾರಣವಾದವು.

ಸಿದ್ದರಾಮಯ್ಯ ಕೂಡ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವಾರು ಭಾಗ್ಯಗಳನ್ನು ನೀಡಿದ್ದರು. ರಾಜ್ಯದಲ್ಲಿ ಆರ್ಥಿಕ ಶಿಸ್ತು ಕಾಪಾಡಿಕೊಂಡಿದ್ದರು. ಆದರೂ ಚುನಾವಣೆಯ ಹೊಸ್ತಿಲಿನಲ್ಲಿ ಎಡವಿಬಿದ್ದರು. 90ರ ದಶಕದಲ್ಲಿ ವೀರಪ್ಪ ಮೊಯಿಲಿ ಅವರು ಇಂತಹದೇ ಸಾಹಸಕ್ಕೆ ಕೈ ಹಾಕಿದ್ದರು. ಚಿನ್ನಪ್ಪ ರೆಡ್ಡಿ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ಪ್ರಕಟಿಸಿ
ದ್ದರು. ಇದರ ವಿರುದ್ಧ ಒಕ್ಕಲಿಗರು ತಿರುಗಿಬಿದ್ದರು. ವಿಧಾನಸೌಧದ ಮುಂದೆ ಲಕ್ಷಾಂತರ ಜನರನ್ನು ಸೇರಿಸಿ ಎಚ್.ಡಿ.ದೇವೇಗೌಡರು ಪ್ರತಿಭಟನೆ ನಡೆಸಿದರು. ಈ ಹೋರಾಟದಿಂದಾಗಿಯೇ ದೇವೇಗೌಡರು ಒಕ್ಕಲಿಗರ ಕಣ್ಮಣಿಯಾಗಿಬಿಟ್ಟರು. 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದೂಳೀಪಟವಾಯಿತು.

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ನಡೆಸುವ ಕಾರ್ಯತಂತ್ರಗಳಲ್ಲಿ ಆಗುವ ಬದಲಾವಣೆಯನ್ನೂ ನಾವು ನೋಡಬಹುದು. ಹಿಂದೆಲ್ಲಾ ಚುನಾವಣೆ ಬಂತೆಂದರೆ ಶಿಲಾನ್ಯಾಸಗಳು ಹೆಚ್ಚಾಗುತ್ತಿದ್ದವು. ಉದ್ಘಾಟನೆಗಳಿಗೂ ಪೈಪೋಟಿ ಇರುತ್ತಿತ್ತು. ನಂತರ ಅದು ಜಾತಿಗಳನ್ನು ಒಡೆಯುವ, ಜಾತಿಗಳ ನಡುವೆ ಪೈಪೋಟಿ ಒಡ್ಡುವ ಹಂತಕ್ಕೆ ಬಂತು. ಈಗ ಧರ್ಮಗಳ ನಡುವೆ ಕಿಚ್ಚು ಹಚ್ಚುವ ಹಂತಕ್ಕೆ ಬಂದಿದೆ. ರಾಜಕಾರಣದಲ್ಲಿ ಧರ್ಮಕಾರಣ ಬಂದು ಬಹಳ ದಿನಗಳೇ ಆಗಿವೆ. ಅಲ್ಲೊಬ್ಬ ಇಲ್ಲೊಬ್ಬ ಅಭ್ಯರ್ಥಿ ತಮಗೆ ಮುಸ್ಲಿಂ ಮತದಾರರ ಮತಗಳು ಬೇಡವೇ ಬೇಡ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರು. ಆದರೆ ಈಗ ಸರ್ಕಾರ ನಡೆಸುವ ಪಕ್ಷವೇ ಅಧಿಕೃತವಾಗಿ ತಮಗೆ ಮುಸ್ಲಿಂ ಮತ ಬೇಡ ಎಂದು ಘಂಟಾಘೋಷವಾಗಿ ಹೇಳುವಂತೆ ನಡೆದುಕೊಂಡಿದೆ.

ಇತ್ತೀಚೆಗೆ ನಮ್ಮನ್ನು ಅಗಲಿದ ಸಿದ್ಧೇಶ್ವರ ಸ್ವಾಮೀಜಿ ಅವರು ತಮ್ಮ ಉಪನ್ಯಾಸದಲ್ಲಿ ಒಂದು ಕತೆ ಹೇಳುತ್ತಿದ್ದರು. ‘ಒಬ್ಬ ರಾಜನಿದ್ದನಂತೆ. ಅವನಿಗೆ ರಾತ್ರಿ ಕನಸೊಂದು ಬಿತ್ತು. ಕನಸಿನಲ್ಲಿ ಆತ ಶತ್ರು ಸೈನ್ಯದಿಂದ ಸೋತುಹೋದ. ಸಂಪೂರ್ಣ ಭಿಕ್ಷುಕನಾಗಿಬಿಟ್ಟ. ಭಿಕ್ಷೆ ಬೇಡುವ ಹಂತದಲ್ಲಿಯೇ ಅವನಿಗೆ ಎಚ್ಚರವಾಯಿತು. ಪಕ್ಕದಲ್ಲಿಯೇ ಇದ್ದ ಮಹಾರಾಣಿಗೆ, ‘ನಾನು ಈಗ ಮಹಾರಾಜನಾ ಅಥವಾ ಭಿಕ್ಷುಕನಾ’ ಎಂದು ಕೇಳಿದ. ‘ನೀನು ಮಹಾರಾಜ’ ಎಂದಳು ರಾಣಿ. ‘ಕನಸಿನಲ್ಲಿ ಭಿಕ್ಷುಕನಾಗಿದ್ದು ನಾನೇ ಅಲ್ಲವಾ’ ಎಂದು ಕೇಳಿದ ರಾಜ. ‘ಹೌದು ನೀವೇ. ಆದರೆ ನೀವೀಗ ಮಹಾರಾಜರು’ ಎಂದಳು ರಾಣಿ. ‘ಇಲ್ಲ ನಾನು ಭಿಕ್ಷುಕ. ಮಹಾರಾಜನಾಗಿರುವುದೇ ಕನಸಾಗಿರಬಹುದು’ ಎಂದನಂತೆ. ರಾಜನಿಗೆ ಅದೊಂದು ಮನೋರೋಗವೇ ಆಯಿತು. ಯಾರು ಸಿಕ್ಕರೂ ‘ನಾನು ಮಹಾರಾಜನಾ, ಭಿಕ್ಷುಕನಾ’ ಎಂದು ಕೇಳುತ್ತಿದ್ದನಂತೆ. ಮಂತ್ರಿಗಳಿಗೆ ತಲೆಕೆಟ್ಟು ಹೋಯಿತು. ಒಂದು ದಿನ ಆ ರಾಜ್ಯಕ್ಕೆ ಒಬ್ಬ ಯತಿ ಬಂದ. ಅವನಲ್ಲಿ ರಾಜ ತನ್ನ ಸಮಸ್ಯೆ ಹೇಳಿಕೊಂಡ. ಅದಕ್ಕೆ ಆ ಯತಿ ‘ನೀನು ಮಲಗಿದ್ದಾಗ ರಾಜನಲ್ಲ, ಎಚ್ಚರವಾಗಿದ್ದಾಗ ಭಿಕ್ಷುಕನಲ್ಲ’ ಎಂದು ಉತ್ತರಿಸಿದ.

ಈಗ ಕರ್ನಾಟಕದ ಮತದಾರರ ಕತೆಯೂ ಹೀಗೆಯೇ ಇದೆ. ಪ್ರಭುಗಳಾ ಭಿಕ್ಷುಕರಾ ಗೊತ್ತಾಗುತ್ತಿಲ್ಲ. ಪ್ರಜಾಪ್ರಭುತ್ವದ ಹಬ್ಬವೇ ಆಗಿರುವ ಚುನಾವಣೆ ಸಂದರ್ಭದಲ್ಲಿ ಮತದಾರರು ಮಲಗಿದ್ದರೆ ಅವರು ರಾಜರಾಗುವುದಿಲ್ಲ. ಎಚ್ಚರವಾಗಿದ್ದರೆ ಭಿಕ್ಷುಕರೂ ಅಲ್ಲ. ಎಚ್ಚರವಾಗಿ
ಪ್ರಭುವಾಗಿರಬೇಕೋ ಮಲಗಿ ಭಿಕ್ಷುಕರಾಗಬೇಕೋ ಪ್ರಜೆಗಳೇ ನಿರ್ಧರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.