ಕನ್ನಡದ ಓದುಗರು ಸಾಹಿತ್ಯ ಕೃತಿಯೊಂದನ್ನು ಒಕ್ಕೊರಲಿನಿಂದ ಸಂಭ್ರಮಿಸಿದ್ದು ಕೊನೆಯದಾಗಿ ಯಾವಾಗ? ಕನ್ನಡ ಲೇಖಕರೊಬ್ಬರ ಬದುಕು ಅಥವಾ ಸಾಧನೆಯನ್ನು ಕನ್ನಡಿಗರೆಲ್ಲ ಸಂಭ್ರಮಿಸಿದ್ದು ಯಾವಾಗ? ಈ ಪ್ರಶ್ನೆಗಳಿಗೆ ಉತ್ತರ ಹೇಳುವುದಿರಲಿ, ಇಂಥ ಪ್ರಶ್ನೆಗಳ ಬಗ್ಗೆ ಯೋಚಿಸುವುದೇ ಸದ್ಯದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅಸಂಗತವಾಗಿ ಕಾಣಿಸಬಹುದು. ಜಾತಿ, ಸಿದ್ಧಾಂತ, ಪಕ್ಷ ರಾಜಕಾರಣಗಳಲ್ಲಿ ಕನ್ನಡ ಸಾಹಿತಿಗಳೊಂದಿಗೆ ಓದುಗರೂ ಒಡೆದುಹೋಗಿರುವ ಸನ್ನಿವೇಶದಲ್ಲಿ, ‘ಕನ್ನಡ ಲೇಖಕ’ ಅಥವಾ ‘ಕನ್ನಡ ಓದುಗ’ ಎನ್ನುವ ಮಾತುಗಳೇ ಕ್ಲೀಷೆಯಾಗಿಬಿಟ್ಟಿವೆ. ಈಗ ಚಾಲ್ತಿಯಲ್ಲಿರುವುದು ಲೇಖಕನಿಷ್ಠ, ಸಿದ್ಧಾಂತನಿಷ್ಠ ಹಾಗೂ ಪಕ್ಷನಿಷ್ಠ ಲೇಖಕರು, ಓದುಗರು ಹಾಗೂ ಪ್ರಕಾಶಕರು. ಈ ಹಣೆಪಟ್ಟಿಗಳನ್ನು ಯಾರಾದರೂ ಲೇಖಕ–ಓದುಗ ನಿರಾಕರಿಸಿದರೆ, ‘ಎಡಬಿಡಂಗಿ’ ಎನ್ನುವ ಹಣೆಪಟ್ಟಿ ಖಚಿತ.

ದೇವನೂರ ಮಹಾದೇವ ಅವರ ‘ಒಡಲಾಳ’, ಮೊಗಳ್ಳಿ ಗಣೇಶರ ‘ಬುಗುರಿ’ಯಂಥ ಕಥನಗಳು ಪ್ರಕಟಗೊಂಡಾಗ ಅವು ದಲಿತಲೋಕದ ಸ್ಪಂದನಕ್ಕಷ್ಟೇ ಸೀಮಿತವಾಗದೆ, ಎಲ್ಲ ವರ್ಗದ ಓದುಗರ ಪುಳಕಕ್ಕೂ ಕಾರಣವಾಗಿದ್ದವು. ‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಕುಗ್ರಾಮದ ತರುಣನೊಬ್ಬ ಬಹುಮಾನ ಪಡೆದರೆ, ಹೊಸ ಕಥೆಗಾರನ ಉದಯವನ್ನು ಸಾಹಿತ್ಯಲೋಕ ಸಂಭ್ರಮಿಸುತ್ತಿತ್ತು. ಆ ಕಥೆ ಮತ್ತು ಕಥೆಗಾರನ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಈಗ ಸಹೃದಯರ ಚರ್ಚೆಗಳ ಕೇಂದ್ರದಲ್ಲಿರುವುದು ಕಥೆಗಳಲ್ಲ; ಕಥೆಗಳಿಗೆ ದೊರೆಯುತ್ತಿರುವ ಬಹುಮಾನದ ಮೊತ್ತ.

ಕುವೆಂಪು ಅವರ ಕಾದಂಬರಿಗಳು ಹಾಗೂ ಕಾವ್ಯ, ಕಾರಂತರ ಕಾದಂಬರಿಗಳು, ಬೇಂದ್ರೆಯವರ ಕಾವ್ಯ– ಇವು ಒಂದು ವರ್ಗದ ಓದುಗರಿಗೆ ಸೀಮಿತ ವಾಗಿರಲಿಲ್ಲ. ಲಂಕೇಶ್, ಅನಂತಮೂರ್ತಿ, ತೇಜಸ್ವಿ, ಬೆಸಗರಹಳ್ಳಿ ಅವರನ್ನು ಜಾತಿಯ ಹಣೆಪಟ್ಟಿಯಲ್ಲಿ ನಮ್ಮ ಪೂರ್ವಸೂರಿಗಳು ಕೂರಿಸಿರಲಿಲ್ಲ. ಕೆಲವು ಲೇಖಕರ ಜಾತಿಪ್ರೀತಿ ಹಾಗೂ ಬಹಿರಂಗದ ಚಹರೆಗಳು ಲೇವಡಿಗೆ ಒಳಗಾಗಿರುವ ಉದಾಹರಣೆಗಳು ಸಾಕಷ್ಟಿವೆಯಾದರೂ, ಅವರ ಬರವಣಿಗೆಯ ಸ್ಪಂದನಕ್ಕೆ ಸಂಬಂಧಿಸಿದಂತೆ ಮುಖ್ಯವಾಗುತ್ತಿದ್ದುದು ಸಾಹಿತ್ಯಪ್ರಜ್ಞೆಯೇ ಹೊರತು ಜಾತಿ ಪ್ರಜ್ಞೆಯಾಗಿರಲಿಲ್ಲ. ಲೇಖಕರು ಕೂಡ ತಮ್ಮ ವೈಯಕ್ತಿಕ ಮಿತಿಗಳ ನಡುವೆಯೂ ಬರವಣಿಗೆಗೆ ಸಂಬಂಧಿಸಿದಂತೆ ತಮ್ಮನ್ನು ಅಖಂಡ ಕರ್ನಾಟಕಕ್ಕೆ ಸಂಬಂಧಿಸಿದವರು ಎಂದುಕೊಂಡಿದ್ದರು. ಅವರ ನಂಬಿಕೆಗೆ ಗಾಸಿಯಾಗುವ ಘಟನೆಗಳೂ ನಡೆದಿರಲಿಲ್ಲ. ಈಗ ಬದಲಾದ ಕಾಲಘಟ್ಟ
ದಲ್ಲಿ, ಲೇಖಕನನ್ನು ಜಾತಿ–ಸಿದ್ಧಾಂತಗಳ ಚೌಕಟ್ಟಿನಲ್ಲಿ ಗುರ್ತಿಸಲಾಗುತ್ತಿದೆ. ಆ ಕಾರಣದಿಂದಲೇ ದೇವನೂರ ಮಹಾದೇವ, ಬರಗೂರು, ಭೈರಪ್ಪ, ಕಂಬಾರರು ಸೇರಿದಂತೆ ಎಲ್ಲ ಲೇಖಕರನ್ನೂ ಅವರಿಗೆ ಇಷ್ಟವಿರಲಿ ಇಲ್ಲದಿರಲಿ ವಿವಿಧ ಅಚ್ಚು–ಚೌಕಟ್ಟುಗಳಲ್ಲಿ ಇರಿಸಲಾಗಿದೆ.

ಇಂದಿನ ಸಂದರ್ಭ ನೋಡಿ: ಕನ್ನಡದ ಹೆಮ್ಮೆಗೆ ಕಾರಣವಾಗಬೇಕಾದ ‘ಓದೋ ರಂಗ’ದಂಥ ಕಾದಂಬರಿ ದಲಿತ ಕೃತಿಯಾಗಿಯಷ್ಟೆ ಉಳಿಯುತ್ತದೆ. ವೈಚಾರಿಕ ಚರ್ಚೆಯನ್ನು ಹುಟ್ಟುಹಾಕಬೇಕಾಗಿದ್ದ ಹಾಗೂ ಸಮಕಾಲೀನ ತವಕತಲ್ಲಣಗಳಿಗೆ ಕನ್ನಡಸಾಹಿತ್ಯದ ಸೃಜನಶೀಲ ಪ್ರತಿಕ್ರಿಯೆಯ ರೂಪದಲ್ಲಿ ನೋಡಬೇಕಾದ ‘ಬೇಟೆಯಲ್ಲ ಆಟವೆಲ್ಲ’, ‘ಸಕೀನಾಳ ಮುತ್ತು’ ಕಾದಂಬರಿಗಳು ಚರ್ಚೆಯೇ ಆಗುವುದಿಲ್ಲ. ‘ಅವ್ಯಯ ಕಾವ್ಯ’, ‘ಅಕ್ಷಯಕಾವ್ಯ’, ‘ಎದೆ ಹಾಲಿನ ಪಾಳಿ’, ‘ನಿಷೇಧಕ್ಕೊಳಪಟ್ಟ ಒಂದು ನೋಟು’ ಕೃತಿಗಳ ಪ್ರಕಟಣೆ ದೊಡ್ಡ ಸುದ್ದಿಯಾಗುವುದಿಲ್ಲ. ಯಾವುದೇ ಭಾಷೆಯ ಹೆಮ್ಮೆಗೆ ಕಾರಣವಾಗಬೇಕಿದ್ದ ಕೃತಿಗಳು ಕನ್ನಡಿಗರ ಪ್ರೀತಿಯನ್ನೇ ‘ಇಡಿ’ಯಾಗಿ ಪಡೆಯಲು ಸೋಲುತ್ತವೆ. ಈ ಸೋಲಿಗೆ, ಒಂದು ಗುಂಪಿನ ಬರಹಗಾರನ ಕೃತಿಯನ್ನು ಮತ್ತೊಂದು ಗುಂಪಿನ ಓದುಗರು ಓದುವುದು ಅಗತ್ಯವಿಲ್ಲ ಎನ್ನುವ ಮನೋಭಾವ ಬೆಳೆಯುತ್ತಿರುವುದೇ ಕಾರಣವಾಗಿದೆ. ಗಂಭೀರ ಸಾಹಿತ್ಯ ಕೃತಿಗಳು ಸಹೃದಯರನ್ನು ಮುಟ್ಟುವಲ್ಲಿ ಅಡೆತಡೆ ಎದುರಿಸುತ್ತಿರುವ ಸಂದರ್ಭದಲ್ಲೇ, ಸಾಹಿತ್ಯದ ಹೆಸರಿನ ಸರಕುಗಳು ಹೆಚ್ಚಿನ ಓದುಗರನ್ನು ಮುಟ್ಟುತ್ತಿರುವ ವಿಚಿತ್ರ ಸಂದರ್ಭವನ್ನೂ ಕಾಣುತ್ತಿದ್ದೇವೆ.

ಕನ್ನಡ ಸಾಹಿತ್ಯಲೋಕದಲ್ಲಿನ ಬಿರುಕುಗಳ ಹಿನ್ನೆಲೆ ಯಲ್ಲಿ– ಜಾತಿ, ಧರ್ಮ, ಸಿದ್ಧಾಂತ, ರಾಜಕಾರಣಗಳಿಂದ ಬರಹ ಹಾಗೂ ಬರಹಗಾರರು ದೂರವಿರಬೇಕೆಂದು ಭಾವಿಸಬೇಕಿಲ್ಲ. ಸಮಸ್ಯೆ ಇರುವುದು, ಗ್ರಹಿಕೆ ಮತ್ತು ಸ್ವೀಕಾರದ ಹಿನ್ನೆಲೆಯಲ್ಲಿ ಸಾಹಿತ್ಯದ ಮಾನವೀಯ ಸೆಲೆಗಳಿಗಿಂತಲೂ ಸಾಮಾಜಿಕ–ರಾಜಕೀಯ ಸಂಗತಿಗಳೇ ಮುನ್ನೆಲೆಗೆ ಬರುತ್ತಿರುವುದರಲ್ಲಿ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಲಂಕೇಶ್ ಮತ್ತು ಅಡಿಗರು ಒಟ್ಟಿಗೆ ಕೆಲಸ ಮಾಡುವುದು ಸಾಧ್ಯವಾದುದು ಹಾಗೂ ತಾತ್ವಿಕ ಭಿನ್ನಾಭಿಪ್ರಾಯಗಳ ನಡುವೆಯೂ ಕುವೆಂಪು ಹಾಗೂ ಮಾಸ್ತಿ ಪರಸ್ಪರ ಗೌರವ ಉಳಿಸಿಕೊಂಡಿದ್ದನ್ನು ಗಮನಿಸಬೇಕು.

ತಕರಾರುಗಳ ನಡುವೆಯೂ ಸ್ವೀಕಾರದ ಮನೋಭಾವ ಉಳಿಸಿಕೊಳ್ಳುವುದು ನಮ್ಮ ಹಿಂದಿನ ತಲೆಮಾರುಗಳ ಬರಹಗಾರರು ಮತ್ತು ಓದುಗರಿಗೆ ಸಾಧ್ಯವಾಗಿತ್ತು. ಆ ಮನೋಭಾವ ಕ್ಷೀಣಿಸಿರುವುದೇ ಇಂದಿನ ಬಿಕ್ಕಟ್ಟು ಬಿರುಕುಗಳಿಗೆ ಮುಖ್ಯ ಕಾರಣವಾಗಿದೆ. ಸಾಹಿತ್ಯಕ್ಕೆ ಮನಸ್ಸುಗಳನ್ನು ಆರ್ದ್ರಗೊಳಿಸುವ ಹಾಗೂ ಬೆಸೆಯುವ ಶಕ್ತಿಯಿದೆ ಎನ್ನುವುದು ಸಾಹಿತ್ಯಲೋಕದಲ್ಲಿ ಪುನರಾವರ್ತನೆಗೊಳ್ಳುವ ಮಾತು. ಇಂದು, ಸಾಹಿತ್ಯ ತನ್ನ ಜೀವಪರ ಶಕ್ತಿಯನ್ನು ಕಳೆದುಕೊಂಡು ಜಡವಾದಂತೆ ಕಾಣಿಸುತ್ತಿದೆ; ದಲ್ಲಾಳಿಗಳ ರಂಜನೆಯ ಸರಕೇ ಸಾಹಿತ್ಯದ ವೇಷ ತೊಟ್ಟಿದೆ. ಕಲಾವಿದರ ಸಿದ್ಧಾಂತ ಹಾಗೂ ಧರ್ಮದ ಹಿನ್ನೆಲೆಯಲ್ಲಿ ಅವರ ನಟನೆಯ ಸಿನಿಮಾಗಳನ್ನು ಬಹಿಷ್ಕರಿಸುವ ಕೊಳಕು ಪರಿಪಾಠ ಸದ್ಯಕ್ಕೆ ಚಾಲ್ತಿಯಲ್ಲಿದೆಯಷ್ಟೆ. ಆ ಕೊಳಕುತನ ಸಾಹಿತ್ಯಕ್ಷೇತ್ರದಲ್ಲಿ ಒಡೆದು ಕಾಣಿಸದಿದ್ದರೂ, ಗುಂಪುಗಾರಿಕೆ ಬಲಿಯುತ್ತಿರುವುದಂತೂ ಸ್ಪಷ್ಟವಾಗಿದೆ.

ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ವಿಭಜನೆಗಳಂತಹ ಸಮಸ್ಯೆಗಳ ವಿರುದ್ಧ ಹೋರಾಡಿ ರಾಷ್ಟ್ರವನ್ನು ಒಗ್ಗೂಡಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ‘ಭಾರತ್ ಜೋಡೊ’ ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿದೆಯಷ್ಟೇ; ಆ ಮಾದರಿಯಲ್ಲಿ ‘ಕನ್ನಡ ಮನಸ್ಸುಗಳ ಜೋಡಣೆ’ಯ ಆಂದೋಲನ ನಡೆಯಬೇಕಾದುದು ಇಂದಿನ ಅಗತ್ಯ. ಆದರೆ, ಕನ್ನಡದ ಓದುಗರನ್ನು ಒಗ್ಗೂಡಿಸಬೇಕಾದವರು ಯಾರು? ಸದ್ಯದ ಸ್ಥಿತಿಯಲ್ಲಿ ಲೇಖಕರಂತೂ ತಂತಮ್ಮ ‘ಸಿದ್ಧಾಂತ ಗೋಪುರ’ಗಳಿಂದ ಹೊರಬರುವುದು ಕಷ್ಟ. ಅವರನ್ನು ಆ ಗೋಪುರಗಳಲ್ಲಿಯೇ ಉಳಿಸುವ ಕೆಲಸವನ್ನು ಓದುಗರೂ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆ ಕನ್ನಡದ ಮನಸ್ಸು ಗಳನ್ನು ಹದಗೊಳಿಸುವ ಕೆಲಸವನ್ನು ಮಾಡಬೇಕು. ಆದರೆ, ಕಸಾಪ ಆಡಳಿತ ಮಂಡಳಿಯ ಮಾರ್ಗವೇ ಬೇರೆ. ದೇಸಿ–ಮಾರ್ಗದ ಸಮನ್ವಯಕಾರನನ್ನು ಮರೆವಿಗೆ ಸರಿಸಿ, ಆ ಸ್ಥಾನದಲ್ಲಿ ತನ್ನನ್ನೇ ಇರಿಸಿಕೊಳ್ಳ ಬಯಸುವ ಲಜ್ಜೆಗೇಡಿತನ ಅದರದ್ದು.

ಕಸಾಪವನ್ನು ಜನಸಾಮಾನ್ಯರ ಪರಿಷತ್ತಾಗಿಸುವ ಪ್ರಯತ್ನ ಸಾಗಿದೆ ಎಂದು ಮತ್ತೆ ಮತ್ತೆ ಹೇಳಲಾಗುತ್ತಿದೆ. ಆದರೆ, ಪರಿಷತ್ತಿನ ಈವರೆಗಿನ ನಡೆಗಳನ್ನು ನೋಡಿದರೆ ಅದು ಹತ್ತಿರವಾಗುತ್ತಿರುವುದು ರಾಜಕಾರಣದ ಅಧಿಕಾರ ಕೇಂದ್ರಕ್ಕೇ ಹೊರತು ಜನಸಾಮಾನ್ಯರ ಮನಸ್ಸುಗಳಿಗಲ್ಲ. ಕೋಟ್ಯಂತರ ಜನರನ್ನು ಸದಸ್ಯರನ್ನಾಗಿಸುವುದರಿಂದ ಪರಿಷತ್ತಿನ ವರ್ಚಸ್ಸು ಹೆಚ್ಚುವುದಿಲ್ಲ. ಯಾವ ಯಾವ ಕಾರಣದಿಂದಲೋ ದೂರ ಉಳಿದ ಕನ್ನಡದ ಸೃಜನಶೀಲ ಮನಸ್ಸುಗಳನ್ನು ಒಳಗೊಳ್ಳುವುದು ಹೆಚ್ಚುಗಾರಿಕೆ ಅನ್ನಿಸಬೇಕು. ಕನ್ನಡ ಸಾಹಿತ್ಯದ ಹೊಸ ದನಿಗಳಿಗೆ ಅದು ಪ್ರಯೋಗಶಾಲೆಯಾಗಿ ಪರಿಣಮಿಸಬೇಕು. ಕ್ರಿಯಾಶೀಲತೆಯ ಮೂಲಕ ಗಮನ ಸೆಳೆಯಬೇಕಾದ ಸಂಸ್ಥೆ, ಕಟ್ಟಡದ ನವೀಕರಣ, ರಸ್ತೆಯ ಸಿಂಗಾರ ಹಾಗೂ ಸದಸ್ಯರನ್ನು ಗುಡ್ಡೆಹಾಕುವುದೇ ಸಾಧನೆಯೆಂದು ಭಾವಿಸಿದರೆ ಅದರಿಂದ ಕನ್ನಡಕ್ಕೆ ಯಾವ ಲಾಭವೂ ಇಲ್ಲ.

ಪರಿಷತ್ತು ನಾಡುನುಡಿಗೆ ಸಂಬಂಧಿಸಿದ ವಾಗ್ವಾದ ಗಳ ಕೇಂದ್ರವಾಗಬೇಕು. ಆದರೆ, ಕಸಾಪದ ಇಂದಿನ ಅಧ್ಯಕ್ಷರಿಗೆ ಸಂವಾದದಲ್ಲಿ ನಂಬಿಕೆ ಇದ್ದಂತಿಲ್ಲ. ಟೀಕೆಗಳನ್ನು ಷಡ್ಯಂತ್ರವೆಂದು ಕರೆಯುವುದು ಈ ಕಾಲದ ರಾಜಕಾರಣಿಗಳ ಭಾಷೆಯೇ ಹೊರತು ಸಾಹಿತಿಗಳು ಅಥವಾ ಸಾಹಿತ್ಯ ಪರಿಚಾರಕರಿಗೆ ತಕ್ಕುದಾದ ಭಾಷೆಯಲ್ಲ. ಪರಿಷತ್ತು ಸಾಗುತ್ತಿರುವ ದಾರಿ ನೋಡಿದರೆ, ಅದು ‘ಕನ್ನಡ ಮನಸ್ಸುಗಳ ಜೋಡಣೆ’ ಮಾಡುವುದಿರಲಿ, ತನ್ನ ಘನತೆಯನ್ನು ಮುಕ್ಕಾಗಿಸಿಕೊಳ್ಳದಿದ್ದರೆ ಅದೇ ದೊಡ್ಡ ಸಾಧನೆ ಎನ್ನುವಂತಾಗಿದೆ. ಕರ್ನಾಟಕದ ಭೌಗೋಳಿಕ ಏಕೀಕರಣದಲ್ಲಿ ಬರಹಗಾರರು ಗಣನೀಯ ಪಾತ್ರ ವಹಿಸಿದ್ದರು. ಈಗ ಸಾಹಿತ್ಯಿಕ ಏಕೀಕರಣಕ್ಕೆ ಜನಸಾಮಾನ್ಯರೇ ಒತ್ತಾಯಿಸಬೇಕಾಗಿದೆ.

ರಘುನಾಥ ಚ.ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.