ಕನ್ನಡ ಪದಕೋಶ ಪರಂಪರೆಗೆ ಮುನ್ನುಡಿ ಬರೆದ ಫರ್ಡಿನೆಂಡ್ ಕಿಟ್ಟೆಲ್ರ ಸ್ಮರಣೆ (ನಿಧನ: ಡಿ. 18) ಹಾಗೂ ಕ್ರಿಸ್ತ ಜಯಂತಿ (ಡಿ. 25) ಸಂದರ್ಭಗಳನ್ನು ಹಿಂದುಮುಂದಿಟ್ಟುಕೊಂಡು ರಾಜ್ಯ ಸರ್ಕಾರವು ರೂಪಿಸಿರುವ ‘ಮತಾಂತರ ನಿಷೇಧ ಮಸೂದೆ’ಗೆ ವಿಧಾನಸಭೆ ಅನುಮೋದನೆಯ ಮುದ್ರೆ ಒತ್ತಿದೆ. ಇದೇ ಸಮಯದಲ್ಲಿ, ಮತಾಂತರದ ಬಗ್ಗೆ ಸೂಕ್ಷ್ಮವಾಗಿ ಮಾತನಾಡುವ ‘ಕನ್ನಡಿಗ’ ಹೆಸರಿನ ಸಿನಿಮಾ ‘ಜೀ 5’ ಒಟಿಟಿಯಲ್ಲಿ ತೆರೆಕಂಡಿದೆ. ಮತಾಂತರವನ್ನು ಹೇಗೆ ನೋಡಬೇಕು ಎನ್ನುವುದಕ್ಕೆ ಅಗತ್ಯವಾದ ಮಾದರಿಯೊಂದನ್ನು ಮುಂದಿಡುತ್ತಿರುವ ಕಾರಣದಿಂದಾಗಿ ‘ಕನ್ನಡಿಗ’ ಸಿನಿಮಾಕ್ಕೆ ವಿಶೇಷ ಮಹತ್ವವಿದೆ.

ಬಿ.ಎಂ. ಗಿರಿರಾಜ್ ನಿರ್ದೇಶನದ ‘ಕನ್ನಡಿಗ’ ಚರಿತ್ರೆ ಹಾಗೂ ಐತಿಹ್ಯಗಳು ಹಾಸುಹೊಕ್ಕಾಗಿರುವ ವಿಶಿಷ್ಟ ಕಥನ. ಪರ ವಿಚಾರ ಮತ್ತು ಪರ ಧರ್ಮದ ಕುರಿತ ಸೈರಣೆಯನ್ನು ಕನ್ನಡಿಗರ ಗುಣಗಳಲ್ಲೊಂದಾಗಿ ಗುರ್ತಿಸಿರುವ ಕವಿರಾಜ ಮಾರ್ಗಕಾರನ ಮಾರ್ಗದಲ್ಲಿ ಗಿರಿರಾಜ್ರ ಸಿನಿಮಾ ಹೆಜ್ಜೆ ಇಟ್ಟಂತಿದೆ.

‘ಕನ್ನಡಿಗ’ ಸಿನಿಮಾ ಮೇಲ್ನೋಟಕ್ಕೆ ಕನ್ನಡದ ಅಗ್ಗಳಿಕೆಯನ್ನು ಸಾರುತ್ತದೆ ಹಾಗೂ ಕನ್ನಡದ ವಿವೇಕವನ್ನು ಸಂರಕ್ಷಿಸುವ ಕಥೆ ಒಳಗೊಂಡಿದೆ. ಇಷ್ಟೇ ಆಗಿದ್ದರೆ, ನಾಡು ನುಡಿಯನ್ನು ಭಾವುಕ ನೆಲೆಗಟ್ಟಿನಲ್ಲಿ ಕಟ್ಟಿಕೊಡುವ ಸಿದ್ಧಸೂತ್ರದ ಸಿನಿಮಾಗಳ ಸಾಲಿಗೆ ‘ಕನ್ನಡಿಗ’ ಸೇರುತ್ತಿತ್ತು. ಈ ಸಿನಿಮಾ ಭಿನ್ನವಾಗುವುದು, ಕನ್ನಡ ನುಡಿಯ ಚೆಲುವಿಗಿಂತಲೂ ಮಿಗಿಲಾಗಿ ವಿವೇಕ ಹಾಗೂ ಅಂತಃಕರಣದ ಸಾಧ್ಯತೆಗಳನ್ನು ಮನಗಾಣಿಸುವುದರಲ್ಲಿ. ಜರ್ಮನಿಯಿಂದ ಕರ್ನಾಟಕಕ್ಕೆ ಬಂದ ಕಿಟ್ಟೆಲ್ ಅವರಿಗೆ ತಾವು ಭೇಟಿಯಾಗುವ ಗುಣಭದ್ರನ ವ್ಯಕ್ತಿತ್ವದ ಸೊಗಸು ಹಾಗೂ ಕನ್ನಡ ಬೇರೆ ಬೇರೆ ಅನ್ನಿಸುವುದಿಲ್ಲ. ಬುಳ್ಳನ ಮೀನು ಹಿಡಿಯುವ ಚಾತುರ್ಯ, ಒಡೆಯನ ಬಗೆಗಿನ ನೆಚ್ಚುಗೆ ಹಾಗೂ ಅವನ ಕನ್ನಡವು ಮೊಗ್ಲಿಂಗ್ರ ಪಾಲಿಗೆ ಬೇರೆಯೆನ್ನಿಸುವುದಿಲ್ಲ. ಭಾಷೆಯೊಂದು ತನ್ನ ಸಂವಹನದ ಸಾಧ್ಯತೆಯಾಚೆಗೆ ಮಾನವೀಯ ಮೌಲ್ಯಗಳ ನಾಡಿಯೂ ಆಗಬಹುದಾದ ನುಡಿಪವಾಡವನ್ನು ಹಿಡಿದಿಡಲು ‘ಕನ್ನಡಿಗ’ ಪ್ರಯತ್ನಿಸಿದೆ.

ಇತಿಹಾಸದ ವ್ಯಕ್ತಿತ್ವಗಳೊಂದಿಗೆ ನಿರ್ದೇಶಕರ ಸೃಜನಶೀಲತೆಯಲ್ಲಿ ಮೂಡಿದ ಪಾತ್ರಗಳನ್ನು ಒಳಗೊಂಡಿರುವ ಸಿನಿಮಾದ ಕಥೆ, ಮೂರು ಶತಮಾನಗಳ ಹರಹನ್ನು ಹೊಂದಿದೆ. ಹದಿನಾರನೇ ಶತಮಾನದ ರಾಣಿ ಚೆನ್ನ ಭೈರಾದೇವಿಯಿಂದ ದ್ವೀಪವೊಂದನ್ನು ಕನ್ನಡ ದೀಕ್ಷೆಯ ರೂಪದಲ್ಲಿ ಪಡೆವ ಸಮಂತಭದ್ರ ಎನ್ನುವ ಲಿಪಿಕಾರನಿಂದ ಆರಂಭವಾಗುವ ಸಿನಿಮಾ, ಆತನ ವಂಶಸ್ಥನಾದ ಹತ್ತೊಂಬತ್ತನೇ ಶತಮಾನದ ಗುಣಭದ್ರ ಎನ್ನುವ ವ್ಯಕ್ತಿ ‘ಕನ್ನಡಧರ್ಮದೊಂದಿಗೆ ಮನುಷ್ಯಧರ್ಮ’ವನ್ನು ಒಟ್ಟಿಗೆ ಎತ್ತಿಹಿಡಿಯುವ ಮೂಲಕ ಕೊನೆಗೊಳ್ಳುತ್ತದೆ.

ಮತಾಂತರದ ಉದ್ದೇಶದಿಂದ ಕನ್ನಡದ ನೆಲಕ್ಕೆ ಬಂದ ಫರ್ಡಿನೆಂಡ್ ಕಿಟ್ಟೆಲ್ ಹಾಗೂ ಮೊಗ್ಲಿಂಗ್ ಅಂಥವರು ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿದ್ದನ್ನು ಕಾಣಿಸುವ ಸಿನಿಮಾ, ಇನ್ನೊಂದೆಡೆ ಮತದ ಸೊಕ್ಕಿನಲ್ಲಿ ನಡೆಯುವ ವರ್ಗದ ಕ್ರೌರ್ಯವನ್ನೂ ಚಿತ್ರಿಸಿದೆ. ಧರ್ಮದ ದಾರಿಯಲ್ಲಿ ನಮ್ಮ ನಡೆ ಮತ್ತು ಆಯ್ಕೆ ಯಾವುದಾಗಿರಬೇಕು ಎನ್ನುವುದನ್ನು ‘ಕನ್ನಡಿಗ’ ಮಾರ್ಮಿಕವಾಗಿ ಹೇಳುತ್ತದೆ. ಭಾಷೆ, ಮತ, ಧರ್ಮ, ಸ್ವಾತಂತ್ರ್ಯ ಚಳವಳಿ– ಹೀಗೆ ಅನೇಕ ಸಂಗತಿಗಳನ್ನು ತಳುಕು ಹಾಕಿಕೊಂಡಿರುವ ಸಿನಿಮಾ, ಮನುಷ್ಯ ಧರ್ಮದ ಅಗತ್ಯವನ್ನು ಪ್ರತಿಪಾದಿಸುವುದರೊಂದಿಗೆ ಕೊನೆಗೊಳ್ಳುತ್ತದೆ.

ಗಿರಿರಾಜ್ರ ಈ ಸಿನಿಮಾವನ್ನು ಕನ್ನಡದ ಹೆಸರಿನಲ್ಲಿ ಹಾಗೂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ವರ್ತಮಾನದ ರಾಜಕಾರಣದ ಹಿನ್ನೆಲೆಯಲ್ಲಿ ನೋಡುವುದು ಸಾಧ್ಯವಿದೆ. ಸಿನಿಮಾದಲ್ಲಿ, ಕನ್ನಡ ಕಟ್ಟುವ ಕೆಲಸ ಹಾಗೂ ಕ್ರಿಸ್ತನ ಮಂದಿರ ನಿರ್ಮಾಣ ಎರಡೂ ಜೊತೆಜೊತೆಗೇ ಸಾಗುತ್ತವೆ. ಕಿಟ್ಟೆಲ್ರಿಗೆ ಕನ್ನಡ ಸಂಸ್ಕೃತಿ ತನ್ನದೆನ್ನಿಸುವಂತೆ, ಗುಣಭದ್ರನಿಗೆ ಏಸುವಿನ ವಿಚಾರಧಾರೆಗೂ ತಾನು ರೂಢಿಸಿಕೊಂಡ ಜೀವನನೋಟಕ್ಕೂ ವ್ಯತ್ಯಾಸ ಕಾಣಿಸುವುದಿಲ್ಲ. ಬುಳ್ಳನಂಥ ಕನಿಷ್ಠನ ಕುರಿತು ‘ಮಂಗಳೂರು ಸಮಾಚಾರ’ ಪತ್ರಿಕೆಯಲ್ಲಿ ಟಿಪ್ಪಣಿ ಬರೆಯುವ ಮೊಗ್ಲಿಂಗ್, ಅವನಿಗೆ ಕೊರಳಿನಲ್ಲಿನ ಚಿನ್ನದ ಶಿಲುಬೆ ಸರವನ್ನು ಮೆಚ್ಚುಗೆಯಿಂದ ನೀಡುತ್ತಾರೆ.

‘ದಯೆಯೇ ಧರ್ಮದ ಮೂಲ’ ಎನ್ನುವಂತಹ ಈ ನಿರ್ವ್ಯಾಜ ಪ್ರೇಮದ ಇನ್ನೊಂದು ತುದಿಯಲ್ಲಿ, ಮೈಮನಗಳ ತುಂಬ ಧರ್ಮದ ಸೊಕ್ಕು ತುಂಬಿಕೊಂಡವರ ಅಮಾನವೀಯ ನಡವಳಿಕೆಯಿದೆ. ಆ ದೌರ್ಜನ್ಯಕ್ಕೆ ನಲುಗಿದ ಗುಣಭದ್ರನ ತಮ್ಮ ಪ್ರತೀಕಾರದ ದಾರಿಯನ್ನು ನಂಬುತ್ತಾನೆ. ಹಿಂಸೆಗೆ ಗುಣಭದ್ರನ ಮಗಳು ಬಲಿಯಾಗುತ್ತಾಳೆ; ಕಿಟ್ಟೆಲ್ ಜರ್ಮನಿಗೆ ತೆರಳಿದ ನಂತರ ಒಂಟಿಯಾಗಿದ್ದ ಜರ್ಮನ್ ಹೆಣ್ಣುಮಗಳು ದಹಿಸಿಹೋಗುತ್ತಾಳೆ. ಅಮಾಯಕ ಹೆಣ್ಣುಮಕ್ಕಳ ಸಾವು ಹಾಗೂ ಬುಳ್ಳನ ಮೇಲೆ ನಡೆಯುವ ದೌರ್ಜನ್ಯ ‘ಧರ್ಮಭೀರು’ಗಳ ಸಾಧನೆ–ಸಾಹಸದ ಫಲ. ಧರ್ಮ ಸಂರಕ್ಷಣೆಯ ಸಂಘರ್ಷಗಳಲ್ಲಿ ಸಾಮಾನ್ಯವಾಗಿ ಮಿಕಗಳಂತೆ ಬಲಿಯಾಗುವುದು ದುರ್ಬಲ ವರ್ಗಗಳೇ ಎನ್ನುವ ಕಠೋರಸತ್ಯಕ್ಕೆ ಸಿನಿಮಾ ಅಡಿಗೆರೆ ಎಳೆದಿದೆ. ಜರ್ಮನ್ ಹೆಣ್ಣುಮಗಳ ಮೌನವ್ರತ ಹಾಗೂ ಗಂಡನ ಬಗ್ಗೆ ನಂಬಿಕೆ ಕಳೆದುಕೊಳ್ಳುವ ಗುಣಭದ್ರನ ಹೆಂಡತಿ ಮೂಕಳಾಗುವುದನ್ನು ಮಾತಿನ ನಿರರ್ಥಕತೆಯ ಹಿನ್ನೆಲೆಯಲ್ಲಷ್ಟೇ ನೋಡಬೇಕಿಲ್ಲ. ಮೌನದ ಆ ಚಿತ್ರಣ, ಸಮಾಜದ ದುರ್ಬಲ ವರ್ಗಗಳ ಮಾತು ಶಕ್ತಿ ಕಳೆದುಕೊಂಡಿರುವುದರ ಚಿತ್ರಣವೂ ಹೌದು.

ಗುಣಭದ್ರನ ಕನ್ನಡ ಕೈಂಕರ್ಯಕ್ಕೆ ಯಾವ ನೆರವನ್ನೂ ನೀಡದ ಮಠ ಹಾಗೂ ಅಧಿಕಾರಶಾಹಿಗೆ, ಆತ ಸಾಲದಲ್ಲೇ ಉಳಿಯುವುದು –ಯಥಾಸ್ಥಿತಿಯ ರಕ್ಷಣೆ– ಮುಖ್ಯವಾಗಿದೆ. ಕಿಟ್ಟೆಲ್ರ ಸ್ನೇಹದ ಮೂಲಕ ತನ್ನ ಭೂಮಿಯನ್ನು ಗುಣಭದ್ರ ಮರಳಿ ಪಡೆದಾಗ ಉಂಟಾಗುವ ಬದಲಾವಣೆಯು ವ್ಯವಸ್ಥೆಗೆ ಅಸಹನೆ ಮೂಡಿಸುತ್ತದೆ. ಜನಸಾಮಾನ್ಯರು ಹಾಗೂ ದುರ್ಬಲ ವರ್ಗದವರ ಹಿತಾಸಕ್ತಿ ಸಂದರ್ಭದಲ್ಲಿ ಮೆಳ್ಳೆಗಣ್ಣಿನಿಂದ ವರ್ತಿಸುವ ಮಠ ಹಾಗೂ ಅಧಿಕಾರಶಾಹಿ, ಧರ್ಮದ ವಿಷಯ ಬಂದಾಗ ಎಲ್ಲರ ಪ್ರತಿನಿಧಿಯಂತೆ ವರ್ತಿಸುವುದರ ಜೊತೆಗೆ ಪೂರ್ಣ ಕುರುಡಾಗಿಬಿಡುತ್ತವೆ.

ಇತಿಹಾಸದ ಘಟನೆಗಳನ್ನು ಬಿಡಿ ಬಿಡಿಯಾಗಿ ಹೆಕ್ಕಿ ಅವುಗಳನ್ನು ವರ್ತಮಾನದ ಅಗ್ನಿಕುಂಡಕ್ಕೆ ತುಪ್ಪದ ರೀತಿಯಲ್ಲಿ ಬಳಸಲಾಗುತ್ತಿರುವ ಸಂದರ್ಭದಲ್ಲಿ, ಮನಸ್ಸುಗಳನ್ನು ಕಟ್ಟುವ ನಿಟ್ಟಿನಲ್ಲಿ ಚರಿತ್ರೆಯನ್ನು ಬಳಸಿಕೊಳ್ಳುವ ಮಾನವೀಯ ವಿಧಾನಗಳ ಬಗ್ಗೆ ‘ಕನ್ನಡಿಗ’ ಮಾತನಾಡುತ್ತಿದೆ. ಸಿನಿಮಾದ ಅಂತ್ಯದಲ್ಲಿ, ಧರ್ಮಾಂಧರ ಕಿಚ್ಚಿಗೆ ಸಿಕ್ಕ ಕ್ರಿಶ್ಚಿಯನ್ ಧರ್ಮ ಪ್ರಚಾರಕಿಯ ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡ ಗುಣಭದ್ರ ನದಿಯಲ್ಲಿ ಸಾಗುವ ದೃಶ್ಯ, ಬಾಲಕೃಷ್ಣನೊಂದಿಗೆ ಯಮುನೆಗಿಳಿದ ವಸುದೇವನನ್ನು ನೆನಪಿಸುತ್ತದೆ. ಮಗುವಿನೊಂದಿಗೆ ನದಿಗಿಳಿದ ಗುಣಭದ್ರನಿಗೆ ತೆಪ್ಪದೊಂದಿಗೆ ಬರುವ ಭೂತದೈವ ಆಸರೆಯಾಗಿ ಎದುರಾಗುತ್ತದೆ. ಕೆಳವರ್ಗದ ದೈವ, ಮೇಲ್ವರ್ಗಕ್ಕೆ ಸೇರಿದ ಗುಣಭದ್ರ, ವಿದೇಶಿ ಜೀನ್ಸ್ನ ಕಂದಮ್ಮ – ಚಲನಶೀಲ ನದಿಯ ನಡುವಿನ ಈ ತ್ರಿವೇಣಿ ಸಂಗಮ ಕಾವ್ಯನ್ಯಾಯದಂತಿದೆ. ಸಿನಿಮಾದ ‘ಬಾಲ ಕನ್ನಡಿಗ’ನ ಜೀನ್ಸ್ನಲ್ಲಿ ಕನ್ನಡದ ಕಣಗಳೇ ಇಲ್ಲವೆನ್ನುವುದನ್ನು ನೆನಪಿಸಿಕೊಳ್ಳಬೇಕು. ಕನ್ನಡತನದ ಚಹರೆ ಕಾಣಬೇಕಿರುವುದು ಜೀನ್ಸ್ಗಳಲ್ಲಲ್ಲ; ‘ಕವಿರಾಜ ಮಾರ್ಗಕಾರ’ ಹೇಳಿದ ಸಾಟಿ ಮನುಷ್ಯನ ಬಗೆಗಿನ ಸೈರಣೆಯಲ್ಲಿ ಎನ್ನುವುದನ್ನು ಸಾವಿನ ಗರ್ಭದಿಂದ ಉಳಿದುಬರುವ ‘ಬಾಲ ಕನ್ನಡಿಗ’ನ ರೂಪಕ ಹೇಳುವಂತಿದೆ.

ನಾವು ಬದುಕುತ್ತಿರುವ ಸಮಾಜಕ್ಕೂ ಸಿನಿಮಾಕ್ಕೂ ಹೆಚ್ಚಿನ ವ್ಯತ್ಯಾಸ ಇಲ್ಲದಂತಿರುವ ಸನ್ನಿವೇಶದಲ್ಲಿ, ಮತಾಂತರದ ಕುರಿತು ರೋಷಾವೇಶದಿಂದ ಮಾತನಾಡುತ್ತಿರುವವರನ್ನು ನೋಡಿದರೆ ಬಾಯಿ ಬಂದಾಗುತ್ತದೆ. ತಮ್ಮ ಸಮಾಜದ ಬಹುಸಂಖ್ಯಾತ ವರ್ಗ ಅಸ್ಪೃಶ್ಯರಾಗಿ ಬಾಳುತ್ತಿರುವಲ್ಲಿ ತಮ್ಮ ಪಾಲೂ ಇರಬಹುದು ಎನ್ನುವ ಸಣ್ಣ ಪಾಪಪ್ರಜ್ಞೆಯನ್ನೂ ಈ ಧರ್ಮನಿಷ್ಠರು ಉಳಿಸಿಕೊಂಡಿಲ್ಲ. ಪಾಪಪ್ರಜ್ಞೆ ನಮ್ಮನ್ನು ದೇವರಿಗೆ ಹತ್ತಿರವಾಗಿಸುತ್ತದೆಯೇ ಹೊರತು ಧರ್ಮದ ಬಗೆಗಿನ ಹಮ್ಮಲ್ಲ ಎನ್ನುವ ಅರಿವಿನಿಂದಲೂ ಅವರು ದೂರವಾದಂತಿದೆ. ಪಾಪಪ್ರಜ್ಞೆಯಿಂದ ದೂರವಾದಾಗಲಷ್ಟೇ ನಮ್ಮ ಜನರ ಸಂಕಷ್ಟಗಳಿಗೆ ಕುರುಡಾಗುತ್ತೇವೆ, ಅವರ ಧರ್ಮದ ಚಹರೆಗಳು ಮಾತ್ರ ಸೂರ್ಯಸ್ಪಷ್ಟವಾಗಿ ಕಾಣತೊಡಗುತ್ತವೆ. ಈ ವೈರುಧ್ಯವನ್ನು ‘ಕನ್ನಡಿಗ’ ಮಾರ್ಮಿಕವಾಗಿ ಚಿತ್ರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.