ಚಿತ್ರದುರ್ಗದಿಂದ ಬೆಂಗಳೂರಿಗೆ ಸಾವಿರಾರು ಮಹಿಳೆಯರು ಕೈಗೊಂಡ ಪಾದಯಾತ್ರೆ ‘ಗಾಂಧಿಸ್ಮರಣೆ’ಯ ‘ಹುತಾತ್ಮರ ದಿನಾಚರಣೆ’ಯಂದು ಕೊನೆಗೊಳ್ಳುತ್ತಿರುವುದು ಚಾರಿತ್ರಿಕವಾಗಿ ಮಹತ್ವದ ಸಂಗತಿ. ಗಾಂಧಿ ಜನಿಸಿ 150ನೇ ವರ್ಷದ ಆಚರಣೆ ನಡೆಯುತ್ತಿರುವ ಸಂದರ್ಭದಲ್ಲಿ, ಮಹಿಳೆಯರ 12 ದಿನಗಳ ಪಾದಯಾತ್ರೆ ಗಾಂಧಿಯನ್ನು ನೆನಪಿಸುವ ಹಾಗೂ ಸಮಕಾಲೀನಗೊಳಿಸುವ ಅರ್ಥಪೂರ್ಣ ವಿಧಾನ. ಆದರೆ, ಹೆಣ್ಣುಮಕ್ಕಳ ಈ ಆಂದೋಲನವನ್ನು ಸಾವಧಾನದಿಂದ ನೋಡುವ ನೋಟ ಹಾಗೂ ಆರ್ದ್ರತೆ ನಮಗೆ ಹಾಗೂ ಸರ್ಕಾರಕ್ಕೆ ಇದೆಯೇ?

ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಒಂದೆಡೆ ಸೇರುವುದು ಹಾಗೂ ಪ್ರತಿಭಟಿಸುವುದನ್ನು ನಾವು ಉಳಿದ ಪ್ರತಿಭಟನೆಗಳಿಗಿಂತ ಬೇರೆಯಾಗಿಯೇ ನೋಡಬೇಕು. ಸಣ್ಣಪುಟ್ಟ ಕಾರಣಗಳಿಗಾಗಿ ಗಂಡಸರಂತೆ ಹೆಂಗಸರು ಮನೆ ಬಿಟ್ಟು ಹೊರಗೆ ಬರುವುದಿಲ್ಲ. ಬೀದಿಗೆ ಬಂದು ಪ್ರತಿಭಟಿಸಲಂತೂ ಮಹತ್ತರ ಕಾರಣವೇ ಬೇಕು. ಈಗ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಹೆಣ್ಣುಮಕ್ಕಳು ಮಡಿಲಲ್ಲಿ ಕೆಂಡ ಕಟ್ಟಿಕೊಂಡವರು. ‘ಮದ್ಯಪಾನ ನಿಷೇಧ’ ಈ ನಂಜುಂಡೆಯರ ಒತ್ತಾಯ. ಪ್ರತಿಯೊಬ್ಬ ಹೆಣ್ಣುಮಗಳೂ ಮದ್ಯಪಾನದ ಝಳಕ್ಕೆ ತುತ್ತಾದವರೇ; ಒಡಹುಟ್ಟೋ ಒಡಲಹುಟ್ಟೋ ಸಂಗಾತಿಯೋ – ಹೀಗೆ ಕುಟುಂಬದ ಯಾವುದಾದರೊಬ್ಬ ಗಂಡಿನ ಕುಡಿತದ ಚಟದಿಂದ ಕೆಡುಕು ಕಂಡವರೇ. ಈ ಸಂಕಟವೇ ಕಿಚ್ಚಾಗಿ ಅವರನ್ನು ಬೀದಿಗೆ ಇಳಿಯುವಂತೆ ಮಾಡಿದೆ.

ಜನವರಿ 19ರಂದು ಆರಂಭವಾದ ಪಾದಯಾತ್ರೆಯಲ್ಲಿ ನಾಡಿನ ಅನೇಕ ಭಾಗಗಳ ಮಹಿಳೆಯರು ಭಾಗವಹಿಸಿದ್ದಾರೆ. ಆದರೆ, ಈ ಮಹಿಳಾ ಆಂದೋಲನಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರಚಾರ ದೊರೆತಿಲ್ಲ. ದಾರಿಮಧ್ಯದಲ್ಲಿ ರೇಣುಕಮ್ಮ ಎನ್ನುವ ಮಹಿಳೆಗೆ ಸ್ಕೂಟರ್ ಗುದ್ದಿ, ಆಕೆ ಸಾವಿಗೀಡಾದದ್ದು ಕೂಡ ಮುಖ್ಯ ಸುದ್ದಿ ಎನ್ನಿಸಲಿಲ್ಲ. ಸಿದ್ದರಾಮಯ್ಯನವರು ಮಹಿಳೆಯೊಬ್ಬರ ಮೇಲೆ ತೋರಿದ ದುಂಡಾವರ್ತನೆ ಚರ್ಚೆಯಾದ ಮಟ್ಟಿಗೆ ಸಾವಿರಾರು ಹೆಣ್ಣುಮಕ್ಕಳ ಒಡಲುರಿ ನಮ್ಮ ಗಮನಸೆಳೆಯಲಿಲ್ಲ. ಸಾಮಾಜಿಕ ಕಾಳಜಿಗಿಂತಲೂ ಘಟನೆಯ ರೋಚಕತೆಯೇ ಹೆಚ್ಚು ಮುಖ್ಯವೆನ್ನಿಸುತ್ತಿರುವ ಸಂದರ್ಭದ ಉದಾಹರಣೆಯಾಗಿ ಪ್ರಸಕ್ತ ಆಂದೋಲನಕ್ಕೆ ದೊರೆತ ಪ್ರತಿಕ್ರಿಯೆಯನ್ನು ಗಮನಿಸಬಹುದು.

ಕಳೆದ ವರ್ಷ, ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಗೌರವಧನ ಹೆಚ್ಚಿಸುವಂತೆ ಬೆಂಗಳೂರಿನಲ್ಲಿ 4 ದಿನಗಳ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಆಗ ಕೂಡ ಸರ್ಕಾರ ತಕ್ಷಣಕ್ಕೆ ಸ್ಪಂದಿಸಿರಲಿಲ್ಲ. ಕೆಲವು ಕಾರ್ಯಕರ್ತೆಯರು ನಿತ್ರಾಣರಾಗಿ ಆಸ್ಪತ್ರೆ ಸೇರಿದ ನಂತರವಷ್ಟೇ ಮಾತುಕತೆಗೆ ಮುಂದಾಗಿದ್ದು. ಈಗಲೂ ಹೆಣ್ಣುಮಕ್ಕಳ ಪಾದಯಾತ್ರೆ ಸರ್ಕಾರಕ್ಕೆ ಗಮನಹರಿಸಬೇಕಾದ ಆದ್ಯತೆಯ ಸಂಗತಿಯಾಗಿ ಕಾಣಿಸಿದಂತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಕ್ಕೆ ತಾಯಿಯ ಗುಣ ಇರಬೇಕು. ಆದರೆ, ಈ ಹೊತ್ತಿನ ಸರ್ಕಾರಗಳು ಕನಿಷ್ಠ ಮಾನವೀಯ ಸಂವೇದನೆಗಳನ್ನೂ ಉಳಿಸಿಕೊಂಡಂತೆ ತೋರುವುದಿಲ್ಲ. ಹೆಂಗರುಳು ಹೊಂದಿದ ಸರ್ಕಾರವಾಗಿದ್ದಲ್ಲಿ, ಪಾದಯಾತ್ರೆ ಆರಂಭವಾದ ಒಂದೆರಡು ದಿನಗಳಲ್ಲೇ ಮುಖ್ಯಮಂತ್ರಿಯೋ ಅವರ ಪ್ರತಿನಿಧಿಯೋ ಪಾದಯಾತ್ರೆಯಲ್ಲಿ ಪಾಲ್ಗೊಂಡವರನ್ನು ಭೇಟಿಯಾಗಿ ಮಾತುಕತೆಯ ಪ್ರಯತ್ನ ನಡೆಸುತ್ತಿದ್ದರು.

ವಿರೋಧ ಪಕ್ಷಗಳು ಕೂಡ ಹೆಣ್ಣುಮಕ್ಕಳ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜನಪ್ರತಿನಿಧಿಗಳಿಗೆ ಬೆಲೆ ಕಟ್ಟುವುದರಲ್ಲಿ ಬಿಡುವು ಕಳೆದುಕೊಂಡಿರುವ ಈ ರಾಜಕೀಯ ಮುಖಂಡರುಗಳಿಗೆ ಜನಸಾಮಾನ್ಯರ ಆಶೋತ್ತರಗಳು ಯಾವ ಲೆಕ್ಕ? ಅಧಿಕಾರಕ್ಕಾಗಿ ಪಾದಯಾತ್ರೆಗಳನ್ನು, ರಥಯಾತ್ರೆಗಳನ್ನು ನಡೆಸುವ ರಾಜಕಾರಣಿಗಳು ‘ನಡಿಗೆಯ ಶಕ್ತಿ’ಯನ್ನು ಚೆನ್ನಾಗಿ ಬಲ್ಲರು. ಆದರೆ, ಅಧಿಕಾರದ ಪೊರೆಗೆ ಕಣ್ಣು–ಮನಸುಗಳನ್ನು ಒಪ್ಪಿಸಿರುವ ಅವರಿಗೆ ಜನಸಾಮಾನ್ಯರ ಪಾದಯಾತ್ರೆ ಅಮುಖ್ಯವಾಗಿ ಕಾಣಿಸಿರಬೇಕು.

ವಿಶ್ವದ ವಿವಿಧ ಭಾಗಗಳಲ್ಲೂ ಸ್ತ್ರೀಶಕ್ತಿ ಅನೇಕ ಸಂದರ್ಭಗಳಲ್ಲಿ ಬೀದಿಗಿಳಿದಿದೆ. ಇತ್ತೀಚೆಗಷ್ಟೇ ಶಬರಿಮಲೆಯ ಅಯ್ಯಪ್ಪ ಮಂದಿರಕ್ಕೆ ಮಹಿಳೆಯರಿಗೆ ಪ್ರವೇಶ ಅವಕಾಶ ನೀಡದಿರುವುದನ್ನು ವಿರೋಧಿಸಿ, ಕಾಸರಗೋಡಿನಿಂದ ತಿರುವನಂತಪುರದವರೆಗೆ ಲಕ್ಷಾಂತರ ಮಹಿಳೆಯರು 620 ಕಿ.ಮೀ ಉದ್ದದ ‘ಮಹಿಳಾಗೋಡೆ’ ನಿರ್ಮಿಸಿದ್ದರು. ಲಿಂಗ ತಾರತಮ್ಯ ವಿರೋಧ ಹಾಗೂ ಸಮಾನತೆಗಾಗಿ ಒತ್ತಾಯಿಸಿ 2017ರಲ್ಲಿ ಲಕ್ಷಾಂತರ ಮಹಿಳೆಯರು ಅಮೆರಿಕದಾದ್ಯಂತ ಬೀದಿಗಿಳಿದಿದ್ದರು. ಇವೆಲ್ಲ ಮಹಿಳಾ ಆಂದೋಲನಗಳ ಹಿನ್ನೆಲೆಯಲ್ಲಿ ಕಾಣಬಹುದಾದ ಸಾಮಾನ್ಯ ಗುಣ ‘ಅಹಿಂಸೆ’. ಮೌನ, ಅಹಿಂಸೆ, ಉಪವಾಸ– ಇವೆಲ್ಲವೂ ಗಾಂಧೀಜಿ ಕಂಡುಕೊಂಡ ಪ್ರತಿಭಟನೆಯ ಮಾದರಿಗಳು. ಈ ಹೊತ್ತಿನ ಸ್ತ್ರೀಯರ ಚಳವಳಿಗಳಲ್ಲಿ ಎದ್ದುಕಾಣುತ್ತಿರುವುದು ಕೂಡ ಗಾಂಧಿ ಮಾದರಿಯೇ. ಗಾಂಧಿ ಕೂಡ ತಮ್ಮ ಹೋರಾಟದ ದ್ರವ್ಯವನ್ನು ಪಡೆದುಕೊಂಡಿದ್ದು ಭಾರತೀಯ ಹೆಣ್ಣುಮಕ್ಕಳ ಬದುಕಿನಿಂದಲೇ. ಇಂದಿನ ಸ್ತ್ರೀ ಹೋರಾಟಗಳು ಗಾಂಧಿ ಮಾದರಿಗಳ ಮರುಕಳಿಕೆಗಳಾಗಿ ರೂಪುಗೊಳ್ಳುತ್ತಿರುವುದು ಗಮನಾರ್ಹ.

ಹೆಣ್ಣುಮಕ್ಕಳನ್ನು ಅಬಲೆಯರೆಂದು ಗುರುತಿಸುವುದು ಪುರುಷರ ಪೊಳ್ಳುತನ ಎನ್ನುವುದು ಗಾಂಧೀಜಿ ನಂಬಿಕೆಯಾಗಿತ್ತು. ಗಂಡಿನ ಹೆಗ್ಗಳಿಕೆಗಿಂತ ಹೆಣ್ಣಿನ ನೈತಿಕ ಗಟ್ಟಿತನ ಹೆಚ್ಚು ಉನ್ನತವಾದುದೆಂದು ಅವರು ತಿಳಿದಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರ ಸಹಭಾಗಿತ್ವ, ತ್ಯಾಗವನ್ನು ಅಪೇಕ್ಷಿಸಿದ್ದರು. ಅವರ ಕರೆಗೆ ದೇಶದಾದ್ಯಂತ ಅಸಂಖ್ಯ ತಾಯಂದಿರು ಓಗೊಟ್ಟಿದ್ದು ಭಾರತೀಯ ಸ್ವಾತಂತ್ರ್ಯ ಇತಿಹಾಸದ ಅಪೂರ್ವ ಅಧ್ಯಾಯಗಳಲ್ಲೊಂದು.

ನೈತಿಕಶಕ್ತಿ ಮತ್ತು ಸಾತ್ವಿಕ ಸಿಟ್ಟು ಮಹಿಳೆಯರ ಪ್ರತಿಭಟನೆಯ ಮೂಲದ್ರವ್ಯವಾಗಿದ್ದರೂ, ಎಲ್ಲ ಸಂದರ್ಭಗಳಲ್ಲೂ ಹೋರಾಟ ಶಾಂತವಾಗಿರುತ್ತದೆಂದು ನಿರೀಕ್ಷಿಸಲಾಗದು. ಹೆಣ್ಣುಮಕ್ಕಳು ಸಹನೆಗೆಟ್ಟರೆ ಪರಿಸ್ಥಿತಿ ಏನಾಗುತ್ತದೆ ಎನ್ನುವುದಕ್ಕೆ 2016ರಲ್ಲಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಬೀದಿಗಿಳಿದು ಪ್ರತಿಭಟಿಸಿದ್ದನ್ನು ನೆನಪಿಸಿಕೊಳ್ಳಬೇಕು. ‘ಪಿಎಫ್’ ನೀತಿಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬೀದಿಗಿಳಿದಿದ್ದ ಹೆಣ್ಣುಮಕ್ಕಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಲಾಠಿಚಾರ್ಜ್ ಹಾಗೂ ಗೋಲಿಬಾರ್ ಕೂಡ ನಡೆಯಿತು. ಕೆಲವೇ ತಾಸುಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಿತು.

ಹೆಣ್ಣುಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿಯುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಇದು ಮಹಿಳೆಯರಲ್ಲಿ ಸಮಾನತೆಯ ಹಂಬಲ, ರಾಜಕೀಯ ಪ್ರಜ್ಞೆ ಹೆಚ್ಚುತ್ತಿರುವುದರ ಸೂಚನೆ ಆಗಿರುವಂತೆಯೇ, ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡುವಂತಹ ಅನಿವಾರ್ಯವನ್ನು ನಮ್ಮ ಸಮಾಜ ಪದೇ ಪದೇ ಸೃಷ್ಟಿಸುತ್ತಿರುವುದರ ಸೂಚನೆಯೂ ಹೌದು. ಪ್ರಸಕ್ತ ಮಹಿಳೆಯರ ಪಾದಯಾತ್ರೆಯ ಉದಾಹರಣೆಯನ್ನೇ ಗಮನಿಸಿ. ಅವರ ಒತ್ತಾಯವನ್ನು ಸರ್ಕಾರ ಒಪ್ಪಿಕೊಳ್ಳಬೇಕೆಂದು ಹೇಳುವುದು ಕಷ್ಟ. ಆದರೆ, ಪ್ರತಿಭಟನಾನಿರತರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಅಂತಃಕರಣವೇ ಇಲ್ಲದೆ ಹೋದರೆ ಅಂತಹ ಸರ್ಕಾರದಿಂದ ಜನಪರ ನೀತಿಯನ್ನು ಅಪೇಕ್ಷಿಸುವುದು ಕಷ್ಟ.

‘ಜನ ನನ್ನ ಬಳಿಗೆ ಬರುವುದು ಬೇಡ, ನಾನೇ ಅವರ ಬಳಿಗೆ ಹೋಗುತ್ತೇನೆ’ ಎಂದು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಹೇಳಿದ ಇಂದಿನ ಮುಖ್ಯಮಂತ್ರಿ, 12 ದಿನಗಳಿಂದ ಸುಮ್ಮನಿರುವುದೇಕೆ? ಇರಲಿ, ಈಗ ಜನರೇ ರಾಜಧಾನಿಗೆ ಬಂದಿದ್ದಾರೆ. ಈಗಲಾದರೂ ಅವರ ಬಳಿಗೆ ಹೋಗಿ ಕಿವಿಯಾಗುವ ಸೌಜನ್ಯವನ್ನು ಮುಖ್ಯಮಂತ್ರಿ ತೋರಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.