ಭರತ ಮತ್ತು ಬಾಹುಬಲಿ ಮುಖಾಮುಖಿ ‘ಆದಿಪುರಾಣ’ದ ರಸಘಟ್ಟ. ಸಂಘರ್ಷದಲ್ಲಿ ಸಹೋದರನಿಗೆ ಸೋತ ಭರತ, ಬಾಹುಬಲಿಯ ಕಾಲು ಹಿಡಿಯುತ್ತಾನೆ. ಭರತನ ಕಣ್ಣೀರು ಬಾಹುಬಲಿಯ ಪಾದ ತೊಳೆಯುತ್ತದೆ, ಪಶ್ಚಾತ್ತಾಪದ ರೂಪದಲ್ಲಿ. ಬಾಹುಬಲಿಯ ಕಣ್ಣುಗಳಲ್ಲೂ ನೀರು. ಅವನ ಕಣ್ಣೀರು ಭರತನ ನೆತ್ತಿ ತೋಯಿಸುತ್ತಿದೆ, ಆಶೀರ್ವಾದದ ರೂಪದಲ್ಲಿ. ಕಣ್ಣೀರಿನ ಭಿನ್ನ ಆಯಾಮಗಳನ್ನು ಇಷ್ಟೊಂದು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಪ್ರಸಂಗಗಳು ಸಾಹಿತ್ಯ ಪರಂಪರೆಯಲ್ಲಿ ಹೆಚ್ಚು ಸಿಗುವುದಿಲ್ಲ. ದುಃಖ ಅಥವಾ ಆನಂದದ ಹೊರತಾಗಿಯೂ ಕಣ್ಣೀರು ಮತ್ತೇನನ್ನೋ ಸೂಚಿಸಲಿಕ್ಕೆ ಸಾಧ್ಯವಿದೆ ಎನ್ನುವ ಅನುಭವ ನಮಗಾಗುವುದು ತೀರಾ ವಿರಳ. ಉದಾಹರಣೆಗೆ, ‘777 ಚಾರ್ಲಿ’ ಸಿನಿಮಾ ನೋಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಣ್ಣೀರಿಟ್ಟರಲ್ಲ, ಅವರ ಕಣ್ಣೀರು ಏನನ್ನು ಸೂಚಿಸುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ.

ಬೊಮ್ಮಾಯಿ ಅವರ ಕಣ್ಣೀರಿಗೆ ಕಾರಣವಾದುದು ಸಿನಿಮಾದಲ್ಲಿನ ‘ಚಾರ್ಲಿ’ ಹೆಸರಿನ ನಾಯಿ. ತೆರೆಯ ಮೇಲಿನ ನಾಯಿಯ ಸಾವಿನ ದೃಶ್ಯ ಕಂಡ ಅವರಿಗೆ, ಅಗಲಿದ ತಮ್ಮ ಸಾಕುನಾಯಿ ‘ಸನ್ನಿ’ಯ ನೆನಪಾಗಿ ದುಃಖ ಉಮ್ಮಳಿಸಿದೆ. ‘ಚಾರ್ಲಿ’ ಸಿನಿಮಾಕ್ಕೆ ಶೇಕಡ ನೂರರಷ್ಟು ತೆರಿಗೆ ವಿನಾಯಿತಿ ನೀಡುವ ಮೂಲಕ ಅವರು ತಮ್ಮ ಪ್ರಾಣಿಪ್ರೀತಿಯನ್ನು ಪ್ರಕಟಪಡಿಸಿದ್ದಾರೆ. ಇದು, ಮುಖ್ಯಮಂತ್ರಿಯವರ ಕಣ್ಣೀರಿಗೆ ಸಂಬಂಧಿಸಿದ ಒಂದು ವ್ಯಾಖ್ಯಾನ. ಮುಖ್ಯಮಂತ್ರಿಯವರ ಹೃದಯ ವಂತಿಕೆ ಹಾಗೂ ಹೆಂಗರುಳನ್ನೂ ಆ ಅಳು ಸೂಚಿಸ
ಬಹುದು. ಆ ಸಾಧ್ಯತೆಗಳೇನೇ ಇರಲಿ, ನಾಯಿಯ ದುರಂತಕ್ಕೆ ಮರುಗಿ ಕಣ್ಣೀರು ಸುರಿಸಿದ ಮುಖ್ಯಮಂತ್ರಿಯವರ ಅಂತಃಕರಣದ ಆರ್ದ್ರತೆಗೆ ಮೆಚ್ಚಿಕೊಳ್ಳ ಬೇಕು. ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಎನ್ನುವ ಮಾತನಾಡು ವಾಗ ಈ ಅಂತಃಕರಣ ಎಲ್ಲಿ ಹೋಗಿತ್ತು? ಹಿಜಾಬ್ ಕಾರಣದಿಂದ ತರಗತಿಗಳನ್ನು ತಪ್ಪಿಸಿಕೊಂಡ ಹೆಣ್ಣುಮಕ್ಕಳ ಕುರಿತು ಕಣ್ಣು ಒದ್ದೆಯಾಗಲಿಲ್ಲವೇಕೆ? ಮುಸ್ಲಿಂ ವ್ಯಾಪಾರಿಯೊಬ್ಬರ ಕಲ್ಲಂಗಡಿ ಹಣ್ಣುಗಳನ್ನು ಪುಂಡರು ಚೆಂಡಾಡಿದಾಗ ಮನಸ್ಸು ಮಿಡಿಯಲಿಲ್ಲವೇಕೆ? ಇಂಥ ಪ್ರಶ್ನೆಗಳನ್ನು ಕೇಳಿ ಅವರ ದುಃಖವನ್ನು ಅನುಮಾನಿಸಬಾರದು, ಅವಮಾನಿಸಬಾರದು. ಆ ಪ್ರಶ್ನೆಗಳಾಚೆಗೆ, ನಾವು ಯೋಚಿಸಬೇಕಾದ ಎರಡು ಪ್ರಶ್ನೆಗಳಿವೆ. ಒಂದು: ಪ್ರಜಾನಾಯಕರು ಸಾರ್ವಜನಿಕವಾಗಿ ಅಳುವುದು ಏನನ್ನು ಸೂಚಿಸುತ್ತದೆ? ಎರಡು: ಮುಖ್ಯಮಂತ್ರಿಯವರ ಕಣ್ಣೀರು ಸಾಮಾಜಿಕ ಚಲನೆಯೊಂದನ್ನು ಸೂಚಿಸುತ್ತಿದೆಯೆ?

ಪ್ರಜಾನಾಯಕರು ಸಾರ್ವಜನಿಕವಾಗಿ ಕಣ್ಣೀರು ಸುರಿಸುವ ದೃಶ್ಯಗಳು ಕನ್ನಡಿಗರಿಗೆ ಹೊಸತೇನಲ್ಲ. ಅನೇಕ ನಾಯಕ ನಾಯಕಿಯರು ಬೇರೆ ಬೇರೆ ಕಾರಣಗಳಿಗಾಗಿ ಕಣ್ಣೀರು ಸುರಿಸಿದ್ದಾರೆ; ಮುಂದೆಯೂ ಸುರಿಸಬಹುದು. ಆದರೆ, ಚರಿತ್ರೆಯಲ್ಲಿನ ಧೀರೋದಾತ್ತ ನಾಯಕರನ್ನು ಗಮನಿಸಿದರೆ, ಸಾರ್ವಜನಿಕವಾಗಿ ಕಣ್ಣೀರು ಹಾಕಿರುವ ಉದಾಹರಣೆಗಳು ಸಿಗುವುದು ಕಡಿಮೆ. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿ, ತೆರೇಸಾ ಅವರಂಥ ನಾಯಕರ ಸಾಮಾಜಿಕ ನಡವಳಿಕೆಯ ಹಿನ್ನೆಲೆಯಲ್ಲಿ ಹೇಳುವುದಾದರೆ, ಸಾರ್ವಜನಿಕವಾಗಿ ಕಣ್ಣೀರು ಹಾಕುವುದು ನಾಯಕತ್ವದ ಲಕ್ಷಣವಲ್ಲ. ಅಂಬೇಡ್ಕರ್, ಗಾಂಧಿ ಕಣ್ಣೀರಿಡುತ್ತಾ ಕೂತ ಉದಾಹರಣೆಗಳಿಲ್ಲ. ಮನುಕುಲದ, ವಿಶೇಷವಾಗಿ ದೀನದುರ್ಬಲರ ಕಣ್ಣೀರಿನ ಪ್ರತಿನಿಧಿಗಳೇ ಆಗಿದ್ದ ಅವರು ಕಣ್ಣೀರೇ ಮೂರ್ತರೂಪ ತಳೆದಂತಿದ್ದರೂ ಸ್ವತಃ ಕಣ್ಣೀರಿಡುತ್ತಾ ಕೂತ ಉದಾಹರಣೆ ಗಳಿಲ್ಲ. ಅಳುವನ್ನು ಶಮನಗೊಳಿಸುವುದರಲ್ಲಿ ನಿರತರಾಗಿದ್ದ ಅವರಿಗೆ ವೈಯಕ್ತಿಕವಾಗಿ ಬಿಕ್ಕಳಿಸುವುದಕ್ಕೆ ಪುರಸತ್ತೂ ಇರಲಿಲ್ಲ. ಆದರೆ, ಇಂದಿನ ಬಹುತೇಕ ರಾಜಕಾರಣಿಗಳಿಗೆ ಕಣ್ಣೀರು ಸಲೀಸು. ಸಮಸ್ಯೆಯಿರುವುದು ಕಣ್ಣೀರಿನಲ್ಲಲ್ಲ; ಅಳುವಿಗೂ ಅಂತಃಕರಣಕ್ಕೂ ಇರಬೇಕಾದ ಸಂಬಂಧ ತಪ್ಪಿಹೋಗಿರುವುದರಲ್ಲಿ. ‘ಬಾಯುಪಚಾರ’ ಎನ್ನುವ ಔಪಚಾರಿಕತೆ ರಾಜಕಾರಣಿಗಳ ಕಣ್ಣೀರಿಗೂ ಬಂದಂತಿದೆ. ವೈಫಲ್ಯವನ್ನು ತೊಡೆದುಕೊಳ್ಳಲೂ ಕಣ್ಣೀರು ಸುರಿಸುವವರಿದ್ದಾರೆ. ಭಾವುಕ ನೆಲೆಗಟ್ಟಿನ ಕಣ್ಣೀರಿಗೆ– ಮೊಸಳೆ ಕಣ್ಣೀರಿನ ಬೂಟಾಟಿಕೆಗೆ– ಸಮಾಜದ ತವಕತಲ್ಲಣ ಗಳಿಗೆ ಮಿಡಿಯುವ ಶಕ್ತಿಯಿಲ್ಲ. ಆ ಶಕ್ತಿ ಇದ್ದಿದ್ದರೆ, ನಮ್ಮ ರಾಜಕಾರಣಿಗಳು ಸುರಿಸಿರುವ ಕಣ್ಣೀರಿಗೆ ಕರ್ನಾಟಕ ‘ಕಲ್ಯಾಣ’ ಆಗಿರಬೇಕಿತ್ತು. ಈಗ ಆಗಿರುವುದು ‘ಸ್ವ’ಕಲ್ಯಾಣ
ವಷ್ಟೇ. ಹಾಗಾಗಿಯೇ, ಜನನಾಯಕ ಎನ್ನಿಸಿಕೊಂಡವರು ಸಾರ್ವಜನಿಕವಾಗಿ ಅತ್ತರೆ, ಅದನ್ನು ಸಮಾಜ ಗಂಭೀರವಾಗಿ ಪರಿಗಣಿಸುವುದು ಕಡಿಮೆ. ಒಳಗಣ್ಣು ಮುಚ್ಚಿಕೊಂಡು ಹೊರಗಣ್ಣಿನಲ್ಲಿ ನೀರು ತುಂಬಿಕೊಂಡರೆ ಅದಕ್ಕೆ ಮೌಲ್ಯವಿಲ್ಲ.

‘ನಾಯಕಿ ಕಣ್ಣೀರು ಸುರಿಸಿದಷ್ಟೂ ಗಲ್ಲಾಪೆಟ್ಟಿಗೆ ತುಂಬುತ್ತದೆ’ ಎನ್ನುವ ಮಾತು ಹಿಂದೆ ಸಿನಿಮಾರಂಗದಲ್ಲಿ ಇತ್ತು. ಆ ಮಾತನ್ನು ರಾಜಕಾರಣಿಗಳೂ ನಂಬಿ, ‘ಅತ್ತಷ್ಟೂ ಮತಪೆಟ್ಟಿಗೆ ತುಂಬುತ್ತದೆ’ ಎಂದು ಭಾವಿಸಿದಂತಿದೆ.

ಅಳು ಸಂವೇದನೆಗೆ ಸಂಬಂಧಿಸಿದುದಷ್ಟೇ. ಬೂಟಾಟಿಕೆಗೆ ಕಣ್ಣೀರು ಸುರಿಸಿದರೂ, ನೊಂದವರನ್ನು ನೋಡಿ ಯಾರಾದರೂ ಸಂತೋಷಿಸಬಹುದೆ? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಕಟಪೂರ್ವ ಸಚಿವರ ಮಾತು ನೆನಪಿಸಿಕೊಳ್ಳಿ. ಪಠ್ಯಪುಸ್ತಕಗಳ ಪರಿಷ್ಕರಣೆಗೆ ವ್ಯಕ್ತವಾಗಿರುವ ವಿರೋಧದ ಬಗೆಗಿನ ಅವರ ಪ್ರತಿಕ್ರಿಯೆ, ಮನುಷ್ಯಸಂವೇದನೆಯ ಕುರಿತಂತೆ ನಮ್ಮ ನಂಬಿಕೆಗಳನ್ನೇ ಬುಡಮೇಲು ಮಾಡುವಂತಿದೆ. ಅವರ ಮಾತು ಹೀಗಿದೆ: ‘ಕೆಲವರು ವಿಲವಿಲ ಒದ್ದಾಡುತ್ತಿದ್ದಾರೆ. ಹಾಗಾಗಿ, ಎಲ್ಲಿ ಹಿಡಿಯಬೇಕೋ ಅಲ್ಲಿ ಹಿಡಿದಿದ್ದೇವೆ ಎಂದರ್ಥ. ಮರ್ಮಾಘಾತ ಎನ್ನುತ್ತೇವಲ್ಲ, ಅದು ಆಗುತ್ತಿದೆ. ಇನ್ನಷ್ಟು ಬಲವಾಗಿ ಹಿಡಿಯಬೇಕು, ಅವರು ಇನ್ನಷ್ಟು ಒದ್ದಾಡ ಬೇಕು’. ಜನಪ್ರತಿನಿಧಿಯೊಬ್ಬರು ಆಡುವ ಮಾತೇ ಇದು?

ನೈಜ ಜನಪ್ರತಿನಿಧಿ ತನ್ನ ಸಹವರ್ತಿಗಳ ತವಕ ತಲ್ಲಣಗಳಿಗಿಂತಲೂ ಭಿನ್ನಮತೀಯರ ನೋವು, ವಿರೋಧ, ಸಂಕಟಗಳಿಗೆ ಹೆಚ್ಚು ಸ್ಪಂದಿಸಬೇಕು. ಅಗಸನ ಬೀಸುಮಾತನ್ನು ಗಂಭೀರವಾಗಿ ಪರಿಗಣಿಸಿದ ರಾಮನ ಕಥೆ ಮನಗಾಣಿಸುವುದು ಪ್ರಜಾಭಿಪ್ರಾಯದ ಮಹತ್ವವನ್ನೇ. ಆ ಸಂವೇದನೆಯನ್ನು ಕಳೆದುಕೊಂಡು, ‘ವಿಲವಿಲ’, ‘ಮರ್ಮಾಘಾತ’, ‘ಬಲವಾಗಿ ಹಿಡಿಯುವುದು’ – ಸೇಡಿನ ಮನೋಭಾವ ಸೂಚಿಸುವ ಇಂಥ ಮಾತುಗಳನ್ನು ರಾಜಕಾರಣಿಯೊಬ್ಬ ಆಡುವುದು ತನ್ನ ಸ್ಥಾನಕ್ಕೂ ತನ್ನನ್ನು ಚುನಾಯಿಸಿದ ಮತದಾರರಿಗೂ ಮಾಡುವ ಅವಮಾನ. ಕ್ರೌಂಚ ವಿಲಿವಿಲಿ ಒದ್ದಾಡಿದ್ದನ್ನು ನೋಡಿ ಮರುಗಿದ ಮಹಾಕವಿಯ ಶೋಕವೇ ಶ್ಲೋಕವಾಗಿ ರಾಮಾಯಣ ಕಾವ್ಯ ರೂಪುಗೊಂಡ ಪರಂಪರೆ ನಮ್ಮದು. ಆ ಕಾವ್ಯನಾಯಕನ ಹೆಸರಿನಲ್ಲಿ ರಾಜಕಾರಣ ಮಾಡುವವರು, ಜನರು ವಿಲಿವಿಲಿ ಎಂದಾಗ ಸಂತೋಷಪಡುತ್ತೇವೆಂದರೆ, ಅವರು ಅನುಸರಿಸುವ ರಾಮಾಯಣ ಬೇರೆಯದೇ ಇರಬೇಕು. ‘ಶೋಕದಿಂದ ಶ್ಲೋಕ’ ಎನ್ನುವುದು ‘ಶೋಕದಿಂದ ನಾಕ’ ಎಂದಾಗಿರುವುದು ನೈತಿಕ ಅಧಃಪತನದ ಸಂಕೇತ.

ಮುಖ್ಯಮಂತ್ರಿಯವರ ಅಳುವಿನ ಹಿನ್ನೆಲೆಯಲ್ಲಿ ಎದುರಾಗುವ ಎರಡನೆಯ ಪ್ರಶ್ನೆ ಸಾಮಾಜಿಕ ಚಲನೆಯ ಕುರಿತಾದುದು. ‘777 ಚಾರ್ಲಿ’ ಸಿನಿಮಾ ನೋಡಿದ ಪ್ರೇಕ್ಷಕರು ನಾಯಿಗಳ ಬಗ್ಗೆ ಭಾವುಕತೆಯಿಂದ ಮಾತನಾಡುತ್ತಿರುವುದು, ಮಾನವೀಯತೆಯ ಪಸೆ ಸಮಾಜದಲ್ಲಿನ್ನೂ ಉಳಿದುಕೊಂಡಿರುವುದರ ಸೂಚನೆಯಂತಿದೆ. ಇಲ್ಲಿ ಎದುರಾಗುವ ಪ್ರಶ್ನೆ– ನಾಯಿಗಳ ಬಗ್ಗೆ ಇಷ್ಟೊಂದು ಭಾವುಕನಾಗುವ ವ್ಯಕ್ತಿ, ತನ್ನ ಸುತ್ತಮುತ್ತಲಿನವರ ಸಂಕಟಗಳಿಗೆ ಹೇಗೆ ಸ್ಪಂದಿಸಬಹುದು? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ, ದುಃಖದ ಕಾರಣ ಹುಡುಕುತ್ತಾ ಮತ್ತಷ್ಟು ದುಃಖವನ್ನು ತಡವಿದಂತೆಯೇ ಆಗಬಹುದು.

ಲೋಕದ ಸಂಕಟವನ್ನು ಸಹೃದಯನೊಬ್ಬನ ಮನಸ್ಸಿಗೆ ತಾಕುವ ಗಾಢ ಅನುಭವವನ್ನಾಗಿ ಕಲೆ ರೂಪಾಂತರಿಸುತ್ತದೆ. ಕಲೆಯ ಮೂಲಕ ಎದುರಾಗುವ ಲೋಕದ ದಂದುಗಗಳು ನಮ್ಮನ್ನು ವಿಚಲಿತರನ್ನಾಗಿಸುತ್ತವೆ. ಆದರೆ, ವಾಸ್ತವದ ಕಠೋರ ಸತ್ಯಗಳು ನಮ್ಮನ್ನು ತಲ್ಲಣಗೊಳಿಸುವುದಿಲ್ಲ. ಈ ವಿರೋಧಾಭಾಸವನ್ನು ನಾಯಿಗಾಗಿ ಮರುಗಿದ ಮುಖ್ಯಮಂತ್ರಿಯವರ ನಡವಳಿಕೆ
ಯಲ್ಲೂ ಕಾಣಬಹುದು. ಸಾಮಾನ್ಯ ಮನುಷ್ಯನೊಬ್ಬ ಎರಡು ಜಗತ್ತುಗಳಲ್ಲಿ ಬದುಕಿದರೆ ಅದು ಅಷ್ಟೇನೂ ಸಮಸ್ಯೆಯಾಗಲಾರದು. ಆದರೆ, ಜನಸಾಮಾನ್ಯರ ಬದುಕಿನ ದಿಕ್ಕನ್ನು ನಿರ್ಣಯಿಸುವ ಸಾಮರ್ಥ್ಯವುಳ್ಳವರ ದ್ವಂದ್ವ ಅಪಾಯಕಾರಿಯಾದುದು.

ಎದುರಿನವರ ಕಷ್ಟ ಹಾಗೂ ನಮ್ಮದೇ ನೋವು–ಅಸಹಾಯಕತೆ ಅಳುವಿಗೆ ಕಾರಣವಾಗುತ್ತದಷ್ಟೆ. ಪಾಪಪ್ರಜ್ಞೆ ಜಾಗೃತಗೊಂಡಾಗಲೂ ಕಣ್ಣೀರು ಬರುವುದಿದೆ. ಅಂಥ ಪಾಪಪ್ರಜ್ಞೆ, ಪಶ್ಚಾತ್ತಾಪ ಜಾಗೃತಗೊಂಡಾಗ, ನಾಯಿಗಾಗಿ ಅತ್ತವರು ಜನರಿಗಾಗಿಯೂ ಕಣ್ಣೀರು ಸುರಿಸಬಹುದೆಂದು ನಿರೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.