ಎಪ್ಪತ್ತನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲಿ ಕನ್ನಡಕ್ಕೆ ಏಳು ಪ್ರಶಸ್ತಿಗಳು ದೊರೆತಿರುವುದು ಸಹಜವಾಗಿಯೇ ಸಾರ್ವಜನಿಕ ಉತ್ಸಾಹಕ್ಕೆ ಕಾರಣವಾಗಿದೆ. ಆದರೆ, ನಿಜವಾಗಿ ಸಂತಸ ಪಡಬೇಕಾದುದು ದೊರೆತಿರುವ ಪ್ರಶಸ್ತಿಗಳ ಬಗ್ಗೆಯಲ್ಲ; ಪ್ರಶಸ್ತಿ ಕಣದಲ್ಲಿದ್ದ ಕನ್ನಡ ಚಿತ್ರಗಳ ಗುಣಮಟ್ಟದ ಬಗ್ಗೆ. ‘ಫೋಟೋ’ (ನಿ: ಉತ್ಸವ್ ಗೋನವಾರ), ‘ಪೆದ್ರೊ’ (ನಟೇಶ ಹೆಗಡೆ), ‘ಹದಿನೇಳೆಂಟು’ (ನಿ: ಪೃಥ್ವಿ ಕೊಣನೂರು), ‘ಕೋಳಿ ಎಸ್ರು’ (ನಿ: ಚಂಪಾ ಶೆಟ್ಟಿ), ‘ನಾನು ಕುಸುಮ’ (ನಿ: ಕೃಷ್ಣೇಗೌಡ) – ಗುಣಮಟ್ಟದ ಇಷ್ಟೊಂದು ಸಿನಿಮಾಗಳು ಒಂದೇ ವರ್ಷ ಸ್ಪರ್ಧಾಕಣದಲ್ಲಿದ್ದ ಉದಾಹರಣೆ ಇತ್ತೀಚಿನ ವರ್ಷಗಳಲ್ಲಿ ಇಲ್ಲವೇ ಇಲ್ಲ ಎನ್ನಬೇಕು. ಇವುಗಳಲ್ಲಿ ಒಂದು ಸಿನಿಮಾ ಕೂಡ ಪ್ರಶಸ್ತಿ ಪಡೆದಿಲ್ಲ ಎನ್ನುವುದು ಚಿತ್ರರಸಿಕರ ದುಗುಡಕ್ಕೆ ಕಾರಣವಾಗಬೇಕು.

ನಟೇಶ ಹೆಗಡೆ ಹಾಗೂ ಪೃಥ್ವಿ ಕನ್ನಡ ಸಿನಿಮಾಕ್ಕೆ ಆಧುನಿಕತೆಯನ್ನೂ ಸಂಕೀರ್ಣತೆಯನ್ನೂ ದೊರಕಿಸಿಕೊಟ್ಟಿರುವ ಹೊಸ ನೀರು. ರಾಮ್ ರೆಡ್ಡಿ ನಿರ್ದೇಶನದ ‘ತಿಥಿ’ಯ ನಂತರ ವಿಶ್ವದ ಗಮನಸೆಳೆದ ಕನ್ನಡ ಚಿತ್ರ, ನಟೇಶರ ಚೊಚ್ಚಿಲ ನಿರ್ದೇಶನದ ‘ಪೆದ್ರೊ.’ ಬೂಸಾನ್ ಸಿನಿಮೋತ್ಸವ, ಬಿಎಫ್‌ಐ ಲಂಡನ್ ಫೆಸ್ಟಿವಲ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಸಹೃದಯರ ಮೆಚ್ಚುಗೆ ಪಡೆದಿರುವ ‘ಪೆದ್ರೊ’, ಈವರೆಗೆ ತೆರೆಕಂಡಿರುವ ಐದು ಸಾವಿರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಯಾವುದರೊಂದಿಗೂ ಸುಲಭ ಹೋಲಿಕೆಗೆ ನಿಲುಕದ ವಿಶ್ವದರ್ಜೆಯ ಚಲನಚಿತ್ರ. ‘ರೈಲ್ವೆ ಚಿಲ್ಡ್ರನ್’, ‘ಪಿಂಕಿ ಎಲ್ಲಿ?’ ಸಿನಿಮಾಗಳ ಪೃಥ್ವಿ ಕೊಣನೂರು ನಿರ್ದೇಶನದ ‘ಹದಿನೇಳೆಂಟು’ ನಿಜವಾದ ಅರ್ಥದಲ್ಲಿ ಆಧುನಿಕ ಸಿನಿಮಾ. ಬಿಕ್ಕಟ್ಟೊಂದನ್ನು ಕಪ್ಪುಬಿಳುಪುಗೊಳಿಸದೆ, ಸಮಸ್ಯೆಗಿರಬಹುದಾದ ವಿವಿಧ ಆಯಾಮಗಳನ್ನು ಪರಿಶೀಲಿಸುವ ಸಾವಧಾನ ಹಾಗೂ ಪ್ರೌಢಿಮೆ ಪೃಥ್ವಿ ಅವರದು. ಕೊರೊನಾ ಕಾಲಘಟ್ಟದಲ್ಲಿ ವಲಸೆ ಕಾರ್ಮಿಕರು ಅನುಭವಿಸಿದ ಸಂಕಷ್ಟಗಳ ದಾಖಲಾತಿಯಂತಿರುವ ಉತ್ಸವ್ ಗೋನವಾರ ನಿರ್ದೇಶನದ ‘ಫೋಟೋ’ ಹೃದಯವುಳ್ಳ ಯಾರನ್ನೇ ಆದರೂ ವಿಚಲಿತಗೊಳಿಸುವ ಸಿನಿಮಾ; ತಾಂತ್ರಿಕವಾಗಿಯೂ ಉತ್ತಮವಾದುದು. ಸಿನಿಮಾ ಸೌಂದರ್ಯ ಮತ್ತು ವ್ಯಾಕರಣ, ಎರಡೂ ಕಾರಣಗಳಿಂದ ಗಮನಸೆಳೆಯುವ ಈ ಮೂರೂ ಸಿನಿಮಾಗಳು, ಕನ್ನಡದ ಹಿತ್ತಲಿನಲ್ಲಿ ಅರಳಿದ ವಿಶ್ವಸಿನಿಮಾಗಳು; ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಕಲಾಕೃತಿಗಳು. ಚಂಪಾ ಶೆಟ್ಟಿ ಅವರ ‘ಕೋಳಿ ಎಸ್ರು’ ಹಾಗೂ ಕೃಷ್ಣೇಗೌಡರ ‘ನಾನು ಕುಸುಮ’ ಕೂಡ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ರೂಪಿಸಿದ ಒಳ್ಳೆಯ ಸಿನಿಮಾಗಳು. ವಿಷಾದದ ಸಂಗತಿಯೆಂದರೆ, ಈ ಪ್ರಯತ್ನಗಳಲ್ಲಿ ಒಂದಕ್ಕೂ ರಾಷ್ಟ್ರಪ್ರಶಸ್ತಿಯ ಮನ್ನಣೆ ದೊರೆತಿಲ್ಲ.

ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿಗಳ ಉದ್ದೇಶ ಮತ್ತು ಆಶಯ, ಸಿನಿಮಾ ಮಾಧ್ಯಮದಲ್ಲಿನ ವಿಭಿನ್ನ ಪ್ರಯತ್ನಗಳನ್ನು ಗುರ್ತಿಸಿ ಉತ್ತೇಜಿಸುವುದು. ಸಿನಿಮಾದ ಸೌಂದರ್ಯ ಹಾಗೂ ತಾಂತ್ರಿಕ ಉತ್ಕೃಷ್ಟತೆಯನ್ನು ಗುರ್ತಿಸುವುದು; ಸಾಮಾಜಿಕ ಪ್ರಸ್ತುತತೆಯನ್ನು ಒಳಗೊಂಡ ಸಿನಿಮಾ ನಿರ್ಮಾಣವನ್ನು ಉತ್ತೇಜಿಸುವುದು ರಾಷ್ಟ್ರಪ್ರಶಸ್ತಿಗಳ ಉದ್ದೇಶವಾಗಿದೆ. ದೇಶದ ಸಾಂಸ್ಕೃತಿಕ ವೈವಿಧ್ಯವನ್ನು ಒಳಗೊಂಡಿರುವ ಸಾಧ್ಯತೆ ಹಾಗೂ ದೇಶದ ಏಕತೆ ಮತ್ತು ಸಮಗ್ರತೆಗೆ ನೀಡುವ ಕೊಡುಗೆಯನ್ನು ಗುರ್ತಿಸುವ ಉದ್ದೇಶವೂ ರಾಷ್ಟ್ರಪ್ರಶಸ್ತಿಗಳಿಗಿದೆ. ಈ ಉದ್ದೇಶ ಮತ್ತು ಆಶಯಗಳನ್ನು, 2022ರ ಸಾಲಿನ ರಾಷ್ಟ್ರಪ್ರಶಸ್ತಿ ಪಟ್ಟಿಯಲ್ಲಿನ ಅನೇಕ ಆಯ್ಕೆಗಳು ಅಣಕಿಸುವಂತಿವೆ.

ಕನ್ನಡದ ‘ಕಾಂತಾರ’ ಚಿತ್ರವನ್ನು ಮನರಂಜನಾತ್ಮಕ ವಿಭಾಗದಲ್ಲೂ, ‘ಕೆಜಿಎಫ್ 2’ ಸಿನಿಮಾವನ್ನು ಪ್ರಾದೇಶಿಕ ಚಿತ್ರ ವಿಭಾಗದಲ್ಲೂ ಗುರ್ತಿಸಲಾಗಿದೆ. ಮನರಂಜನಾತ್ಮಕ ವಿಭಾಗದಲ್ಲಿ ‘ಕಾಂತಾರ’ದ ಆಯ್ಕೆಗೆ ತರ್ಕದ ನೆಲೆಗಟ್ಟಾದರೂ ಇರಬಹುದು. ಪ್ರಾದೇಶಿಕತೆಯ ಹೆಸರಿನಲ್ಲಿ ‘ಕೆಜಿಎಫ್ 2’ ಸಿನಿಮಾವನ್ನು ಕನ್ನಡದ ಪ್ರಾತಿನಿಧಿಕ ಚಿತ್ರವಾಗಿ ಆಯ್ಕೆ ಮಾಡಿರುವುದರಲ್ಲಿ ತರ್ಕವೂ ಇಲ್ಲ, ಸದುದ್ದೇಶವೂ ಇಲ್ಲ. ಸಾಹಸ ಸಂಯೋಜನೆಗೆ ಸಂಬಂಧಿಸಿದಂತೆ ‘ಕೆಜಿಎಫ್’ಗೆ ಪ್ರಶಸ್ತಿ ನೀಡಿರುವುದೇನೋ ಸರಿ. ಆದರೆ, ಕನ್ನಡ ಚಿತ್ರವೆಂದು ಬಿಂಬಿಸಿಕೊಳ್ಳುವುದಕ್ಕಿಂತಲೂ ‘ಪ್ಯಾನ್ ಇಂಡಿಯಾ’ ಎಂದು ಕರೆದುಕೊಳ್ಳುವುದರಲ್ಲೇ ಹೆಚ್ಚು ಉತ್ಸಾಹ ತೋರಿದ ‘ಕೆಜಿಎಫ್’ನಲ್ಲಿ ‘ಕನ್ನಡ ಸಿನಿಮಾ’ ಎಂದು ಕರೆಸಿಕೊಳ್ಳುವ ಅಂಶಗಳು ಕ್ಷೀಣವಾಗಿವೆ. ಹಾಗಾಗಿ, ಆ ಚಿತ್ರವನ್ನು ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ಗೌರವಿಸುವುದು ಉಳಿದ ಚಿತ್ರಗಳಿಗೆ ಮಾಡಿದ ಅನ್ಯಾಯವಾಗಿದೆ.

ಕನ್ನಡ ಮಾತ್ರವಲ್ಲ, ಇತರೆ ಭಾಷೆಗಳ ಆಯ್ಕೆಯಲ್ಲೂ ಪ್ರಾದೇಶಿಕ ಅಸ್ಮಿತೆಗಿಂತಲೂ ವ್ಯಾಪಾರಿ ಅಂಶಗಳಿಗೆ ಆಯ್ಕೆಸಮಿತಿ ಒತ್ತುಕೊಟ್ಟಿದೆ. ಅತ್ಯುತ್ತಮ ಪ್ರಾದೇಶಿಕ ಚಿತ್ರಗಳಾಗಿ ಆಯ್ಕೆಯಾಗಿರುವ ತೆಲುಗಿನ ‘ಕಾರ್ತಿಕೇಯ 2’ ಹಾಗೂ ತಮಿಳಿನ ‘ಪೊನ್ನಿಯಿನ್ ಸೆಲ್ವನ್’ ಸಿದ್ಧಸೂತ್ರಗಳ ರಂಜನಾಪ್ರಧಾನ ಸಿನಿಮಾಗಳೇ ಹೊರತು, ಪ್ರಾದೇಶಿಕ ಅನನ್ಯತೆಯನ್ನು ಎತ್ತಿಹಿಡಿಯುವುದರಲ್ಲಿ ಅವುಗಳಿಗೆ ವಿಶೇಷ ಮಹತ್ವವಿಲ್ಲ.

ಈ ಬಾರಿ ಮಾತ್ರವಲ್ಲ, ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಸಿನಿಮಾಗಳನ್ನು ಗಮನಿಸಿದರೆ, ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರಯತ್ನಗಳನ್ನು ನಿರ್ಲಕ್ಷಿಸಿ, ಮನರಂಜನಾತ್ಮಕ ಸಿನಿಮಾಗಳಿಗೆ ಒತ್ತು ನೀಡುತ್ತಿರುವುದು ಸ್ಪಷ್ಟವಾಗಿದೆ. ತಪ್ಪು ಆಯ್ಕೆಗಳ ಹಿಂದೆ ರಾಜಕೀಯ ಉದ್ದೇಶಗಳು ಇರುವುದು ಈಗ ಗುಟ್ಟಾಗಿ ಉಳಿದಿಲ್ಲ. ಈ ಮೊದಲು ಯಾವುದಾದರೂ ವಿಭಾಗದಲ್ಲಿ ಒಂದಾದರೂ ರಾಷ್ಟ್ರಪ್ರಶಸ್ತಿ ಪಡೆದ ಸಿನಿಮಾ ಮಂದಿಯನ್ನು ಆಯ್ಕೆಸಮಿತಿಯ ಜ್ಯೂರಿಗಳನ್ನಾಗಿ ಆರಿಸುವುದನ್ನು ಅಲಿಖಿತ ನಿಯಮದಂತೆ ಪಾಲಿಸಲಾಗುತ್ತಿತ್ತು. ಚಿತ್ರೋದ್ಯಮದ ಹೊರಗಿನವರು ಜ್ಯೂರಿಗಳಾದಾಗಲೂ ಅವರು ತಂತಮ್ಮ ಕ್ಷೇತ್ರಗಳಲ್ಲಿ ಹೆಸರು ಮಾಡಿದವರೇ ಆಗಿರುತ್ತಿದ್ದರು. ಆ ಪದ್ಧತಿಯೀಗ ಬದಲಾಗಿ, ಸಿನಿಮಾ ಮಾಧ್ಯಮದ ಕುರಿತ ತಿಳಿವಳಿಕೆಗಿಂತಲೂ ರಾಜಕೀಯ ಸಿದ್ಧಾಂತಗಳ ಒಲವುನಿಲವುಗಳೇ ಜ್ಯೂರಿಗಳ ಆಯ್ಕೆಯಲ್ಲಿ ಮುಖ್ಯವಾಗುತ್ತಿದೆ. ಈ ಬಾರಿಯ ಆಯ್ಕೆ ಸಮಿತಿಯ ಅಧ್ಯಕ್ಷರಾದ ರಾಹುಲ್ ರವೈಲ್ ಅವರು ಆಯ್ಕೆ ಸಮಿತಿಯನ್ನು ಮತ್ತೆ ಮತ್ತೆ ಮುನ್ನಡೆಸುತ್ತಿರುವುದೂ ‘ಆಯ್ಕೆ ರಾಜಕಾರಣ’ದ ಭಾಗವಾಗಿರುವಂತಿದೆ.

‘ಬಾಹುಬಲಿ’, ‘ಆರ್‌ಆರ್‌ಆರ್’, ‘ಕೆಜಿಎಫ್’ ರೀತಿಯ ಮಾದರಿಗಳನ್ನು ಗುರ್ತಿಸುವುದಾದರೆ, ‘ಪುಷ್ಪ’ ಚಿತ್ರದಲ್ಲಿನ ನಟನೆಯನ್ನು ಅತ್ಯುತ್ತಮ ಎಂದು ಗುರ್ತಿಸುವುದಾದರೆ, ರಾಷ್ಟ್ರೀಯ ಪ್ರಶಸ್ತಿಗಳ ಮಾನದಂಡಗಳನ್ನು ಬದಲಿಸುವುದು ಅನಿವಾರ್ಯ. ‘ಬಾಹುಬಲಿ’, ‘ಕೆಜಿಎಫ್’ನಂಥ ಸಿನಿಮಾಗಳು ಆರ್ಥಿಕವಾಗಿ ದೊಡ್ಡ ಯಶಸ್ಸು ಗಳಿಸಿರುವುದು ನಿಜ. ಈ ಸಿನಿಮಾಗಳು ಕಡಿಮೆ ಬಜೆಟ್‌ನಲ್ಲಿ ಅರ್ಥಪೂರ್ಣ ಸಿನಿಮಾ ರೂಪಿಸುತ್ತಿದ್ದ ಪರಂಪರೆಯೊಂದನ್ನು ಹಿನ್ನೆಲೆಗೆ ಸರಿಸಿ, ನೂರಾರು ಕೋಟಿ ರೂಪಾಯಿ ಸಿನಿಮಾಗಳಷ್ಟೇ ಇಂದಿನ ಟ್ರೆಂಡ್ ಎನ್ನುವ ಮಾದರಿಯೊಂದಕ್ಕೆ ಕಾರಣವಾಗಿರುವುದನ್ನು ಗಮನಿಸಬೇಕು. ಈಗ, ಪ್ರಶಸ್ತಿಗಳಿಗೂ ಕೈಹಾಕಿರುವ ‘ತಿಮಿಂಗಿಲ ಸಿನಿಮಾ’ಗಳು, ಸೃಜನಶೀಲ ಸಾಧ್ಯತೆಯನ್ನಷ್ಟೇ ನೆಚ್ಚಿದ ಸಿನಿಮಾ ನಿರ್ಮಾರ್ತೃಗಳನ್ನೂ ನಾಶಗೊಳಿಸಲು ಹೊರಟಂತಿವೆ. ಸಿನಿಮಾದ ಕಲಾತ್ಮಕ ಆಯಾಮವನ್ನಷ್ಟೇ ನೆಚ್ಚಿಕೊಂಡವರು ಕೈಚೆಲ್ಲಿದ್ದಾರೆ; ‘ಜನಮನ್ನಣೆಯೊಂದಿಗೆ ಪುರಸ್ಕಾರಗಳ ಗುರುತಿಸುವಿಕೆಯೂ ಇಲ್ಲದಿದ್ದ ಸಂದರ್ಭದಲ್ಲಿ ಸಿನಿಮಾ ಯಾಕೆ ಮಾಡಬೇಕು, ಯಾರಿಗೆ ಮಾಡಬೇಕು’ ಎನ್ನುವ ಅವರ ಪ್ರಶ್ನೆಗೆ ಉತ್ತರಿಸುವವರು ಯಾರು?

ಈ ಬಾರಿ ಅತ್ಯುತ್ತಮ ಮನರಂಜನಾತ್ಮಕ ಪ್ರಶಸ್ತಿ ಪಡೆದ ‘ಕಾಂತಾರ’ ಚಿತ್ರದಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’ ಪುರಸ್ಕಾರಕ್ಕೆ ಪಾತ್ರರಾಗಿರುವ ರಿಷಬ್ ಶೆಟ್ಟಿ ಅವರ ಇತ್ತೀಚಿನ ಪ್ರತಿಕ್ರಿಯೆ ಹೀಗಿದೆ: ‘ಯಾವ ಯಾವುದೋ ದೇಶದಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಪಡೆಯುವ ಸಿನಿಮಾಗಳಿಗೆ ನಮ್ಮಲ್ಲೇ ಗೌರವ ಇಲ್ಲ, ಪ್ರೇಕ್ಷಕರೂ ನೋಡುವುದಿಲ್ಲ. ಹಾಗಾಗಿ ನಾನಿನ್ನು ಫೆಸ್ಟಿವಲ್ ಟೈಪ್ ಸಿನಿಮಾ ಮಾಡಲ್ಲ.’ ‘ಪೆದ್ರೊ’ ಸಿನಿಮಾದ ನಿರ್ಮಾಪಕರೂ ಆದ ರಿಷಬ್‌ರ ಮಾತುಗಳನ್ನು ರಾಷ್ಟ್ರಪ್ರಶಸ್ತಿಗಳ ಆಯ್ಕೆಯ ಕುರಿತ ಅವರ ಟೀಕೆಟಿಪ್ಪಣಿ ಎಂದು ಭಾವಿಸಬಹುದೆ?

ಅರ್ಥಪೂರ್ಣ ಸಿನಿಮಾಗಳ ನಿರ್ಮಾಣದಿಂದ ರಿಷಬ್ ಹಿಂದೆ ಸರಿಯುತ್ತಿರುವ ಹೊತ್ತಿಗೇ, ಹೇಗಾದರೂ ಜನರಿಗೆ ತಲುಪಿಸಬೇಕೆಂದು ‘ರೈಲ್ವೆ ಚಿಲ್ಡ್ರನ್’ ಹಾಗೂ ‘ಹದಿನೇಳೆಂಟು’ ಸಿನಿಮಾಗಳನ್ನು ಪೃಥ್ವಿ ಕೊಣನೂರು ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಚಿಂತನಶೀಲ ಸಿನಿಮಾಗಳು ಜನರಿಗೆ ಬೇಕಾಗಿಲ್ಲ ಎನ್ನುವ ಸ್ಥಿತಿಯನ್ನು ಮಾರುಕಟ್ಟೆ ಸೃಷ್ಟಿಸಿರುವ ಸಂದರ್ಭದಲ್ಲಿ ಪೃಥ್ವಿ ಅವರಂಥ ನಿರ್ದೇಶಕರಿಗೆ ಉಳಿದಿರುವ ಕೊನೆಯ ದಾರಿಯಿದು. ಮಾರುಕಟ್ಟೆಯ ಒಲವುಗಳನ್ನೇ ಪ್ರಶಸ್ತಿಗಳ ಮೂಲಕ ಸರ್ಕಾರವೂ ದೃಢೀಕರಿಸಲು ಹೊರಟಿದೆ. ಸಮಕಾಲೀನ ರಾಜಕಾರಣದ ಅಮಲು ಸಿನಿಮಾ ಮೂಲಕವೂ ಸಾಧ್ಯವಾಗುವುದಾದರೆ ಸರ್ಕಾರ ಬೇಡವೆಂದೀತೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.