‘ಅರ್ಥವಾಗುವ ಹಾಗೆ ಬರೆಯಬೇಕು’ ಗೋಪಾಲಕೃಷ್ಣ ಅಡಿಗರ ಪ್ರಸಿದ್ಧ ಕವಿತೆಗಳಲ್ಲೊಂದು. ಈ ಕವಿತೆಯ ಹಿಂದೆ ಒಂದು ಕಥೆಯಿದೆ. ಬೆಂಗಳೂರಿನ ಗಾಂಧಿಬಜಾರ್ನಲ್ಲಿ ಅಡಿಗರಿಗೊಮ್ಮೆ ಎದುರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು, ‘ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟವಾದ ಕವಿತೆಯೊಂದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರಂತೆ. ಆ ಕವಿತೆ ತಮಗೆ ಅರ್ಥವಾಗದ್ದರ ಬಗ್ಗೆ ಹಾಗೂ ಕವಿತೆಯಲ್ಲಿನ ಕೆಲವು ಪದಗಳ ಕುರಿತು ಮಾಸ್ತಿಯವರಿಗೆ ಆಕ್ಷೇಪ. ಹಿರಿಯರ ತಕರಾರಿಗೆ ಅಡಿಗರದು ಮುಗುಳ್ನಗೆಯ ಪ್ರತಿಕ್ರಿಯೆ. ಬಳಿಕ ರೂಪುಗೊಂಡಿದ್ದು ‘ಅರ್ಥವಾಗುವ ಹಾಗೆ ಬರೆಯಬೇಕು’ ಕವಿತೆ. ಇಡೀ ಪದ್ಯದಲ್ಲೆಲ್ಲೂ ಮಾಸ್ತಿಯವರ ಹೆಸರಿಲ್ಲ. ಮಾಸ್ತಿಯ ನೆಪದಲ್ಲಿ ಅಡಿಗರು ಬರೆದ ಕವಿತೆ, ವ್ಯಕ್ತಿಗತ ಪರಿಧಿ ಮೀರಿ ಸಾರ್ವತ್ರಿಕವಾಗುವ ಗುಣ ಹೊಂದಿರುವುದರಿಂದರಲೇ ಇಂದಿಗೂ ಮುಖ್ಯವಾಗಿದೆ.

ಕವಿತೆ ಶುರುವಾಗುವುದೇ ತಕರಾರಿನೊಂದಿಗೆ. ‘‘ಅರ್ಥವಾಗುವ ಹಾಗೆ ಬರೆಯಬೇಕೆಂದ ಹಿರಿಯರು ‘ತಮಗೆ’ ಎಂದು ಮಾತು ಸೇರಿಸಿದ್ದಕ್ಕೆ ಶಾಭಾಸೆನ್ನಲೇ ಬೇಕು’’ ಎನ್ನುವ ಉದ್ಗಾರದ ಮೂಲಕವೇ ಅಡಿಗರ ಪಾಟೀಸವಾಲು ಆರಂಭವಾಗುತ್ತದೆ. ಹಿರಿಯರ ಸಾಹಿತ್ಯದ ನಂಬಿಕೆಗಳೊಂದಿಗೆ ತಮ್ಮ ನಂಬಿಕೆಗಳನ್ನು ಜೊತೆಗಿಟ್ಟು ನೋಡುತ್ತ, ತಮ್ಮ ದಾರಿ ಹೇಗೆ ಭಿನ್ನ ಎನ್ನುವುದನ್ನು ಅಡಿಗರು ಚಿತ್ರಿಸುತ್ತಾರೆ. ಆ ದಾರಿಗಳಾದರೂ ಎಂಥವು? ‘ನಾಮ ಸಂಕೀರ್ತನದ ನೂರು ಕೊರಳಿನ ಜೊತೆಗೆ ಕೊರಳು ಸೇರಿಸಿ, ಸೋಸಿ ಸೋಸಿ, ಕುಡಿದವರು ಜೀವನವ’ ಎನ್ನುವಂಥ ದಾರಿ ಒಂದು ಕಡೆ. ‘ಕಾಡಿನೊಳಹೊಕ್ಕು ಪೊದೆ ಪೊದರು ಗಿಡ ಗಂಟೆ / ಮುಳ್ಳುಗಳ ನಡುವೆ ಹೊಚ್ಚಹೊಸ ಹಾದಿ ಕಡಿವವರು, ಪದ್ಧತಿ ಬಿಟ್ಟು / ಮುದ್ದಾಮು ದಾರಿ ಹುಡುಕುತ್ತ ಅಲೆವವರು’ ಇನ್ನೊಂದು ಮಾರ್ಗದವರು. ಈ ಇಬ್ಬರೂ ಸಂಧಿಸುವುದಾದರೂ ಹೇಗೆ? ‘ನಿಮ್ಮ ವಿಚಾರ ಹೇಳಿದ್ದೀರಿ. ನಮ್ಮದು ನಾವು ಆಚರಿಸಿ ತೋರುತ್ತೇವೆ ಆಕೃತಿಯಲ್ಲಿ’ ಎನ್ನುವ ಅಡಿಗರು ಒಂದು ಅಂತರದಲ್ಲೇ ಉಳಿಯುತ್ತಾರೆ.

ಸಂಪ್ರದಾಯಬದ್ಧ ಹಿರಿಯರ ಬದುಕನ್ನು ತರುಣನೊಬ್ಬ ವಿಮರ್ಶೆಯ ಒರೆಗೆ ಹಚ್ಚಿದಂತಿದೆ ಅಡಿಗರ ಕವಿತೆ. ಹೀಗೆ ಪ್ರತಿಕ್ರಿಯಿಸಿದ ಸಂದರ್ಭದಲ್ಲಿ ಅಡಿಗರೇನೂ ತರುಣಕವಿಯಾಗಿರಲಿಲ್ಲ. ಅವರಿಗಾಗ ಅರವತ್ತಕ್ಕೆ ಹತ್ತಿರವಾದ ಐವತ್ತೇಳರ ವಯಸ್ಸು. ಮನಸ್ಸು ಮಾತ್ರ ಹದಿನೆಂಟರದು ಎನ್ನುವುದಕ್ಕೆ ಕವಿತೆಯುದ್ದಕ್ಕೂ ಸಿಡಿಗುಂಡಿನಂಥ ಮಾತುಗಳಿವೆ.

‘ಹಳಸಿ ಕೊಳೆವ ಬದುಕಿಗೆ ಮತ್ತೆ ಎಷ್ಟು ದಿನ ಲೋಭಾನ ಊದಿನ ಕಡ್ಡಿ ಹಚ್ಚುತ್ತ ಇರಬೇಕು?’ ಎಂದು ಪ್ರಶ್ನಿಸುವ ಕವಿ, ‘ನಿಮ್ಮ ದಾರಿ ಸರ್ವಸಾಧಾರಣದ ರಾಜರಸ್ತೆ. ಆಗಾಗ ನಿಮ್ಮ ಮನಸ್ಸು / ದಾರಿಬಿಟ್ಟು ಪಕ್ಕದಶ್ವತ್ಥಮರದ ಬಳಿ, ಕೊಳದಲ್ಲಿ ಅರಳಿರುವ / ತಾವರೆಯ ಬಳಿ, ಹೊಲಗದ್ದೆ ಮಾಡುತ್ತಿರುವ ಒಕ್ಕಲಿನ ಹಳ್ಳಿಯ ಬಳಿ / ತೊಂಡಲೆದು ಬರುತ್ತಿತ್ತು ಅಷ್ಟೇ. ಕತ್ತಲೆಂದರೆ ನಿಮಗೆ ಭಯ’ ಎಂದು ಛೇಡಿಸುತ್ತಾರೆ. ‘ಆಳಕ್ಕಿಳಿದು ಏಕಾಂಗಿಯಾಗಿ ನೆಳಲುಗಳ ಜೊತೆ/ ಜೋತಾಡುತಿರುವಸಂಖ್ಯ ಶಂಕೆ, ಸಂದಿಗ್ಧ, ಸಮ್ಮೋಹ ಭೂತಗಳ ಕಡೆ/ ತಿರುಗಿಯೂ ನೋಡಲಾರಿರಿ’, ‘ಸೂರ್ಯ ಚಂದ್ರ ಅಥವಾ ಗ್ಯಾಸ್ಲೈಟ್, ವಿದ್ಯುದ್ದೀಪ / ಸ್ಪಷ್ಟ ಬೆಳಕಲ್ಲಿ ನರ್ತಿಸಬಯಸುವವರು. ಲಾಲಿತ್ಯದ ಕಡೆಗೇ ನಿಮ್ಮ ತುಯಿತ’ ಎನ್ನುತ್ತಾರೆ.

ಅರ್ಥವಾಗುವುದಿಲ್ಲ ಎಂದ ಹಿರಿಯರಿಗೆ ಏನೇನೆಲ್ಲ ಅರ್ಥವಾಗುವುದಿಲ್ಲ ಎನ್ನುವ ಪಟ್ಟಿಯನ್ನೂ ನೀಡುತ್ತಾರೆ. ಹಾವು ಬಿಚ್ಚಿದ ಪೊರೆ,ಅವಾಚ್ಯದ ಕರೆ, ಅನಿರ್ವಚನೀಯದ ಕರಕರೆ, ಕಾಣದ್ದರ ಕರೆ – ಇವೆಲ್ಲ ನಿಮಗೆ ಅರ್ಥವಾಗದ ಗೋಜು. ನೆಲ ಕೆರೆದು ಹಣ್ಣು ಬೆಳಕೊಂಬ ನಿಮಗೆ, ಪಾತಾಳದಲ್ಲಿ ಬತ್ತಲೆ ಕುಣಿವ ನಾಗಕನ್ಯೆಯರ ನವೀನ ಪುರಾಣವೃತ್ತ ಕಂಡರೂ ಕಾಣುವುದಿಲ್ಲ ಎಂದು ಜಾಣಕುರುಡಿನ ಬಗ್ಗೆ ಮಾತನಾಡುತ್ತಾರೆ. ನಿಮ್ಮ ಚರ್ವಿತ ಚರ್ವಣಕ್ಕೆ ಜನ ಕಿವುಡುಗೊಂಡಿದ್ದಾರೆ ಎನ್ನುವ ಕವಿ – ‘ಮನಸ್ಸಿಗೆ ಚುಚ್ಚಿ / ಬುದ್ಧಿಯನುದ್ಬುದ್ಧಗೊಳಿಸಿ ಬಿರುಗಾಳಿ ಸಿಡಿಲು, ಮಳೆ ಧಾರೆಧಾರೆಯ ಹಾಗೆ / ಸುರಿದು ಒಳ ನೆಲಕ್ಕೆ ತಂಪೆರೆದು, ಹೊಸಬೆಳೆ ತರುವ ಕರಾಮತ್ತು ಅರ್ಥವಾಗುವುದಿಲ್ಲ’ ಎಂದು ಹಿರಿಯರನ್ನು ಚುಚ್ಚುತ್ತಾರೆ. ಸೂಜಿಮೊನೆ ಇರಿತ ಇಷ್ಟಕ್ಕೆ ನಿಲ್ಲುವುದಿಲ್ಲ. ‘ಮೊಸರ ಹೆಸರಲ್ಲಿ ನೀರೆರೆವ ಗದ್ಯದ ಕೆಲಸ ಸುಗಮ, ಹಿತಕಾರಿ, ಜೀರ್ಣಕ್ಕೆ ತೊಂದರೆ ಇಲ್ಲ’ ಎಂದು ಮೂಲಕ್ಕೆ ಕೈಹಾಕುತ್ತಾರೆ.

ಕವಿತೆ ಕೊನೆಗೊಳ್ಳುವುದು ಒಂದು ಅದ್ಭುತ ಚಿತ್ರದೊಂದಿಗೆ. ‘ಇಲ್ಲ, ಅರ್ಥವಾಗುವುದಿಲ್ಲ. ಮುದುಕ, ರೋಗಿ, ಮೃತ ಈ ಮೂವರ ವಿಚಿತ್ರ/ ಚಿತ್ರ ಅರ್ಥವಾದದ್ದು ಬುದ್ಧನಿಗೆ’ ಎನ್ನುವ ಅರ್ಥಸ್ಫೋಟದೊಂದಿಗೆ. ಆ ಸ್ಫೋಟ ಮತ್ತೂ ಮುಂದುವರೆಯುತ್ತದೆ:

ಸೂರ್ಯೋದಯ, ಸೂರ್ಯಾಸ್ತ

ತಂಗಾಳಿ ತೆವಳಿ ಸಾಗುವ ಕೊಳ, ಬೀದಿ ಬದಿಯಲ್ಲಿ

ನಿಂತು ಬೇಡುವ ಶತಕ್ಷತ ಕುಂಟ; ಲಕ್ಷಲಕ್ಷ ಕಣ್ಣುಗಳಿಂದ

ಕತ್ತಲನ್ನೇ ಬಗೆವ ನಕ್ಷತ್ರ; ತೆರೆತೆರೆಯ ತೆರೆತೆರೆದು

ನೆಲ ಮೃದಂಗವ ಮಾಡಿ ಧೀಂಕಿಡುವ ತೆಂಕಣ

ಗಾಳಿ– ಈ ಎಲ್ಲಕ್ಕು

ಅರ್ಥ ಏನಿದೆ ಹೇಳಿ– ಕಾಣದೊಂದು ಕೈ

ಕಿತ್ತು ಬಿಸುಡದೆ ತೊಟ್ಟ ಬಟ್ಟೆಗಳ, ಒಳ ಕಟ್ಟುಗಳು

ಬಿಚ್ಚಿಕೊಳ್ಳದೆ, ನಿಟ್ಟು ನಿಟ್ಟಿನಲ್ಲೂ ಬೆಂಕಿ

ಹೊತ್ತಿಕೊಳ್ಳದೆ–

ಅರ್ಥವೇ ಇಲ್ಲ–ಅಥವಾ ಎಲ್ಲವೂ ಅರ್ಥ.

ಅಡಿಗರ ಕವಿತೆಯನ್ನು ಓದುತ್ತಾ ಹೋದಂತೆ ಅಲ್ಲಿ ಮಾಸ್ತಿ ಒಂದು ನೆಪವಾಗಿಯಷ್ಟೆ ಉಳಿದು, ರಮ್ಯಕ್ಕೆ ಜೋತುಬಿದ್ದ ಪರಂಪರೆಯನ್ನೇ ಅಡಿಗರು ಎದುರುಹಾಕಿಕೊಂಡಂತಿದೆ. ಇಂಥ ಜಗಳಗಳು ಈಗಲೂ ಇವೆ. ಸಾಹಿತ್ಯದ ಸೌಂದರ್ಯದ ಬಗ್ಗೆ ಮಾತನಾಡುವ ಬರಹಗಾರನ್ನು ಟೀಕಿಸುವ ತರುಣ ಬರಹಗಾರರು– ತಮ್ಮ ಟೀಕೆಗೆ ಪೂರಕವಾಗಿ ಲೋಕದ ತರತಮಗಳನ್ನೂ ಅಂಚಿನ ಜನರ ಅನುದಿನದ ಸಂಕಟಗಳನ್ನೂ ಸಾಹಿತ್ಯದ ಧಾತುಗಳನ್ನಾಗಿ ಕಾಣುತ್ತಾರೆ. ಬಲಪಂಥೀಯ ಬರಹಗಾರರನ್ನು ಟೀಕಿಸಲು ಕೂಡಇಂಥ ಸಂಕಟಗಳೇ ಕಾರಣಗಳಾಗಿ ಬಳಕೆಯಾಗುತ್ತವೆ. ಅಡಿಗರನ್ನು ಬಲಪಂಥೀಯ ಎಂದು ಟೀಕಿಸುವವರು ‘ಅರ್ಥವಾಗುವ ಹಾಗೆ ಬರೆಯಬೇಕು’ ಕವಿತೆಯನ್ನು ಅರ್ಥವಾಗುವವರೆಗೆ ಮತ್ತೆ ಮತ್ತೆ ಓದಬೇಕು. ಕವಿಯಾಗಿ ಅಡಿಗರೊಳಗಿದ್ದ ಬಂಡಾಯ ಪ್ರವೃತ್ತಿ ಹಾಗೂ ಲೋಕದ ತಳಮಳಗಳ ಬಗೆದು ನೋಡುವ ಒಳಗಣ್ಣಿಗೆ ಈ ಕವಿತೆ ಉದಾಹರಣೆಯಂತಿದೆ.

ಅಡಿಗರ ಕವಿತೆಯ ಜೊತೆಗೆ ಗಿರೀಶ ಕಾರ್ನಾಡರನ್ನು ನೆನಪಿಸಿಕೊಳ್ಳಬೇಕು. ‘ಅರ್ಬನ್ ನಕ್ಸಲ್; ನಾನು ಕೂಡ’ ಎನ್ನುವ ಬರಹವನ್ನು ಕೊರಳಲ್ಲಿ ತಗಲಿಸಿಕೊಂಡು ಕುಳಿತಿದ್ದ ಕಾರ್ನಾಡರ ವರ್ತನೆಯ ಬಗ್ಗೆ ಟೀಕಾಪ್ರಹಾರವೇ ನಡೆದಿದೆ. ‘ನಗರ ನಕ್ಸಲ್’ ಎಂದು ಪ್ರಕಟಿಸಿಕೊಂಡ ಕಾರ್ನಾಡರನ್ನು ಬಂಧಿಸಬೇಕೆನ್ನುವ ಪೊಲೀಸ್ ದೂರೂ ದಾಖಲಾಗಿದೆ. ಕಾರ್ನಾಡರ ಕುರಿತ ಒಂದು ವರ್ಗದ ಅಸಹನೆ ಅಸಹಜವೇನಲ್ಲ. (ಅನಂತಮೂರ್ತಿ ಅವರು ಕೂಡ ಇಂಥ ಅಸಹನೆಗೆ ಗುರಿಯಾಗಿದ್ದರು.) ಆದರೆ, ಈ ವಿರೋಧ ವ್ಯಕ್ತವಾಗುತ್ತಿರುವ ರೀತಿ ಸಹಜವಾದುದಲ್ಲ. ಒಂದು ತಲೆಮಾರಿನ ನುಡಿ– ಸಂವೇದನೆಗಳು ಸುಪುಷ್ಟಗೊಳ್ಳುವುದಕ್ಕೆ ಕಾಣಿಕೆ ನೀಡಿದ ಹಿರಿಯರನ್ನು ನಡೆಸಿಕೊಳ್ಳುವ ಮಾರ್ಗವೂ ಇದಲ್ಲ. ಆ ಮಾರ್ಗ ಹೇಗಿರಬೇಕು ಎನ್ನುವುದಕ್ಕೆ ಅಡಿಗರ ‘ಅರ್ಥವಾಗುವ ಹಾಗೆ ಬರೆಯಬೇಕು’ ಕವಿತೆ ಉದಾಹರಣೆಯಂತಿದೆ. ಜಗಳವೂ ಹೇಗೆ ಕಾವ್ಯವಾಗಬಲ್ಲದು ಎನ್ನುವುದಕ್ಕೂ ಇದೊಂದು ಮಾದರಿ. ಟೀಕೆಗಳು ವ್ಯಕ್ತಿಗತವಾಗಿದ್ದೂ ರಚನಾತ್ಮಕವಾಗಿರಬೇಕು ಎನ್ನುವ ನಿಟ್ಟಿನಲ್ಲೂ ಅಡಿಗರ ಪದ್ಯವನ್ನು ನೋಡಬಹುದು. ನೆಲ ಕೆರೆದು ಹಣ್ಣು ಬೆಳಕೊಂಬುವರು ನೀವೆಂದು ಜರೆದ ಕವಿಯೇ – ‘ಎಂಥೆಂಥ ಎಷ್ಟೆಷ್ಟು ಹಣ್ಣುಗಳು! ಓ ಎಂಥ ಸಿಹಿ, ಎಂಥ ಕಂಪು, ಎಂಥಾ ತಂಪು ಮನಸ್ಸಿಗೆ!’ ಎಂದು ಮತ್ತೊಂದು ಕವಿತೆಯಲ್ಲಿ ಮೆಚ್ಚಿಕೊಂಡಿದ್ದಾರೆ (‘ಯಶೋರೂಪಿ ಮಾಸ್ತಿಯವರಿಗೆ ನಮನ’). ಇದೇ ಅಡಿಗರು – ‘ದೊಡ್ಡವರು ನೀವು. ನಾವೇನು ಕುಬ್ಜರಲ್ಲ’ ಎಂದು ಬಿಎಂಶ್ರೀ ಕುರಿತು ಉದ್ಗರಿಸಿದ್ದರು.ಆತ್ಮಾಭಿಮಾನ ಉಳಿಸಿಕೊಂಡೇ ಹಿರಿಯರನ್ನು ಗೌರವದಿಂದ ಪ್ರಶ್ನಿಸುವ ಅದ್ಭುತ ಕ್ರಮವಿದು.

ಇವತ್ತಿನ ನಮ್ಮ ವರ್ತನೆ ಹೇಗಿದೆ ಎನ್ನುವುದಕ್ಕೆ ಅಡಿಗರ ‘ಒಳ್ಳೆತನ ಸಹಜವೇನಲ್ಲ’ ಕವಿತೆಯ ಸಾಲುಗಳನ್ನು ನೋಡಬಹುದು:

ಹೊಟ್ಟೆಯೊಳಗಡೆ ಗೋರಿ ಕಟ್ಟಿಕೊಂಡಿರುವವರೆ,

ಹೊಡೆಯಲೆತ್ತಿರುವ ಕೈ

ಹೊತ್ತೆ ಹೊಗೆಯುವೆದೆ, ವಿಷವುಗುಳಿ ನಗುವ ನಾಲಗೆ.

ಕಾರ್ನಾಡರೇನೋ ತಾವು ತಗುಲಿಸಿಕೊಂಡ ಬೋರ್ಡನ್ನು ತೆಗೆದುಹಾಕಿದರು. ಆ ನಿರ್ಜೀವ ಬೋರ್ಡನ್ನು ಅವರ ಮೇಲೆ ಮುಗಿಬೀಳುತ್ತಿರುವವರು ತಂತಮ್ಮ ಮನಸ್ಸುಗಳಲ್ಲಿ ಜೀವಗೊಳಿಸುತ್ತಿರುವಂತಿದೆ. ಒಬ್ಬ ಲೇಖಕನ ವರ್ತನೆ ನಮಗಿಷ್ಟವಾಗದೆ ಹೋದಾಗ ಪ್ರಶ್ನಿಸಬಹುದು ಇಲ್ಲವೇ ನಿರ್ಲಕ್ಷಿಸಬಹುದು, ನಿರಾಕರಿಸಲಾಗದು. ತಾತ್ವಿಕ ಭಿನ್ನಾಭಿಪ್ರಾಯಗಳೊಂದಿಗೇ ನಮಗೆ ಅನಂತಮೂರ್ತಿಯವರೂ ಭೈರಪ್ಪನವರೂ ಮುಖ್ಯರೆನ್ನಿಸುತ್ತಾರೆ. ಮೂಗಿಗೆ ಆಮ್ಲ ಜನಕದ ನಳಿಕೆಯನ್ನು ತಗಲಿಸಿಕೊಂಡ ಕಾರ್ನಾಡರನ್ನು ನಕ್ಸಲರಂತೆ ಕಂಡು ಮುಗಿಬೀಳುವುದು ನಾವು ನಂಬಿಕೊಂಡು ಬಂದ ಸಂವಾದ ಸಂಸ್ಕೃತಿಯನ್ನು ವಿರೂಪಗೊಳಿಸುವಂತಿದೆ. ದಣಿದ ಲೇಖಕನೊಬ್ಬ ‘ನಕ್ಸಲ್’ ಎಂದು ಬೋರ್ಡ್ ಪ್ರದರ್ಶಿಸುವುದು ರೂಪಕದಂತೆ ಕಾಣುವ ಮಾತಿರಲಿ, ಆ ಚಿತ್ರಪಟ ದೇಶದಲ್ಲಿನ ನಕ್ಸಲ್ ಚಳವಳಿಯ ನಿಶ್ಶಕ್ತಿಯನ್ನು ಸೂಚಿಸುವಂತಿದೆ ಎಂದೂ ಯಾರಿಗೂ ಅನ್ನಿಸದಿರುವುದು ನಮ್ಮೊಳಗಿನ ಕಾವ್ಯಶಕ್ತಿ–ವಿನೋದಪ್ರವೃತ್ತಿ ಸೊರಗುತ್ತಿರುವುದನ್ನು ಸೂಚಿಸುತ್ತದೆಯೇ?

‘ದಾರಿ ತೋರಿದಿರಿ, ಗುರಿ ತೋರದಾದಿರಿ ನೀವು; / ಚಾಳೇಶದಾನವೇ ಯುವಜನಕ್ಕೆ?’ ಎನ್ನುವುದು ಬಿಎಂಶ್ರೀ ಕುರಿತು ಅಡಿಗರು ಬರೆದಿರುವ ಸಾಲು. ನಮ್ಮ ತಲೆಮಾರಿಗೆ ಚಾಳೇಶದಾನವನ್ನು ಮಾಡಿದವರಾದರೂ ಯಾರು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.