ಫೆಬ್ರುವರಿ ೧೭ರಂದು ನಮ್ಮ ಸಂಸತ್ತಿನಲ್ಲಿ ಮೋಟಾರು ವಾಹನಗಳಿಗೆ ಅಬಕಾರಿ ಸುಂಕ ವಿನಾಯಿತಿಯನ್ನು ಘೋಷಿಸುತ್ತಲೇ ಅತ್ತ ಚೀನಾ ರಾಜಧಾನಿ ಬೀಜಿಂಗ್ನಲ್ಲಿ ವಾಯುಮಾಲಿನ್ಯ ಸ್ಥಿತಿ ತೀರಾ ತೀರಾ ಬಿಗಡಾಯಿಸಿತ್ತು. ಹೊಗೆ ಮತ್ತು ಮಂಜು (ಹೊಂಜು) ಕವಿದು, ಐವತ್ತು ಮೀಟರ್ ದೂರದ್ದೂ ಕಾಣದಂತಾಗಿ ಸಂಚಾರ ಅಸ್ತವ್ಯಸ್ತವಾಗಿ, ಕಾರುಗಳು ಗಂಟೆಗಟ್ಟಲೆ ನಿಂತಲ್ಲೇ ನಿಲ್ಲಬೇಕಾಯಿತು.

ವಿಮಾನ ನಿಲ್ದಾಣದಲ್ಲಂತೂ ಐದು--ಹತ್ತು ಮೀಟರ್ ದೂರದ್ದೂ ಕಾಣದಂತಾಗಿ ನೆಲದ್ದು ನೆಲದಲ್ಲಿ, ಆಕಾಶದ್ದು ಆಕಾಶದಲ್ಲಿ ಎಂಬಂತಾಯಿತು. ಬೀಜಿಂಗ್ನಿಂದ ಶಾಂಘಾಯ್, ಹಾರ್ಬಿಂಜ್, ತಿಯಾಂಜಿನ್, ಕೈಫೆಂಗ್ ಮುಂತಾದ ನಗರಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲೂ ಸಂಚಾರ ಸ್ಥಗಿತಗೊಳಿಸಲಾಯಿತು.

ದಿಲ್ಲಿಗಿಂತ ಬೀಜಿಂಗ್ನಲ್ಲೇ ಮೊದಲು ಸೂರ್ಯೋದಯ ಆಗುವುದರಿಂದ ಅಂದಿನ ವಿದ್ಯಮಾನವನ್ನು ಹೀಗೂ ಹೇಳಬಹುದು: ಅಲ್ಲಿ ಬೀಜಿಂಗ್ನಲ್ಲಿ ಕಾರುಗಳ ದಟ್ಟಣೆಯಿಂದ ವಾಯು ಮಾಲಿನ್ಯ ತೀರಾ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತ ಆಗಿದ್ದ ದಿನವೇ ನಮ್ಮ ಸಂಸತ್ತಿನಲ್ಲಿ ಕಾರುಗಳ ಖರೀದಿಗೆ ಇನ್ನಷ್ಟು ಆಮಿಷ ಹೆಚ್ಚಿಸುವ ಮುಂಗಡಪತ್ರ ಪ್ರಕಟವಾಯಿತು.

ಕಳೆದ ಕೆಲವು ವರ್ಷಗಳಿಂದ ವಾಹನ ಉದ್ಯಮ ಕುಂಠಿತಗೊಂಡಿದ್ದರಿಂದ ಅದನ್ನು ‘ಮತ್ತೆ ಪ್ರಗತಿಯ ಹಾದಿಗೆ ತರಲೆಂದು’ ಸುಂಕ ಇಳಿಸಿದ್ದಾಗಿ ವಿತ್ತ ಸಚಿವರು ಘೋಷಿಸಿದರು. ಅತ್ತ ಚೀನಾದಲ್ಲಿ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದ ವಾಹನಗಳೆಲ್ಲ ನಿಶ್ಚಲ ಸ್ಥಿತಿಗೆ ಬಂದಿದ್ದವು. ಅಂದು ಬೀಜಿಂಗ್ನಲ್ಲಿ ವಾಯು ಗುಣಮಟ್ಟ ‘ಅತ್ಯಂತ ಅಪಾಯಕಾರಿ ಮಟ್ಟ ’ –- ಅಂದರೆ ಸೂಕ್ಷ್ಮ ತೇಲುಕಣಗಳ ಪ್ರಮಾಣ ಪ್ರತಿ ಘನಮೀಟರಿಗೆ ೫೦೦ ಮೈಕ್ರೊ ಗ್ರಾಂ- ತಲುಪಿತ್ತು.

ಚೀನಾದ ನಾನಾ ನಗರಗಳಲ್ಲಿ ಈಚಿನ ವರ್ಷಗಳಲ್ಲಿ ವಾಯುಮಾಲಿನ್ಯ ಹೇಳತೀರದಷ್ಟು ಹೆಚ್ಚಾಗಿದೆ. ವಾಹನ ದಟ್ಟಣೆ ಮತ್ತು ಹೊಂಜು ಎರಡೂ ಜಾಗತಿಕ ಸುದ್ದಿಗಳೇ ಆಗುತ್ತಿವೆ. ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರು ಈ ಸಮಸ್ಯೆಯನ್ನು ನಿಭಾಯಿಸಲು ನಾನಾ ಬಗೆಯ ಸರ್ಕಸ್ ಮಾಡುತ್ತಿದ್ದಾರೆ.

ವಾಹನಗಳ ನಂಬರ್ ಪ್ಲೇಟ್ಗಳ ಆಧಾರದಲ್ಲಿ ಇಂತಿಂಥ ದಿನ ಬೆಸಸಂಖ್ಯೆ/ ಸಮಸಂಖ್ಯೆ ವಾಹನಗಳು ರಸ್ತೆಗೆ ಇಳಿಯಕೂಡದು; ಹಳದಿ ಲೇಬಲ್ ಹಚ್ಚಿರುವ ವಾಹನಗಳು ಇಂಥ ದಿನ ರಸ್ತೆಯಲ್ಲಿ ಕಾಣಕೂಡದು; ಹೊಸ ಕಾರುಗಳನ್ನು ಖರೀದಿಸುವವರು ಲಾಟರಿಯಲ್ಲಿ ರಿಜಿಸ್ಟ್ರೇಶನ್ ನಂಬರ್ ಗೆಲ್ಲಬೇಕೆಂದು ಆಶಿಸಿದರೂ ಕಟ್ಟುನಿಟ್ಟಿನ ನಿಯಮಗಳ ಪ್ರಕಾರವೇ ಲಾಟರಿ ಟಿಕೆಟ್ ಪಡೆಯಬೇಕು ಇತ್ಯಾದಿ. ಅದು ಸಾಲದೆಂಬಂತೆ ನಾನಾ ಬಗೆಯ ಮಾಲಿನ್ಯ ತುರ್ತುಸ್ಥಿತಿ ಘೋಷಣೆ ಕೂಡ ಮಾಡಲಾಗುತ್ತದೆ. ‘ಕೆಂಪು ಎಚ್ಚರಿಕೆ ದಿನ’ಗಳಲ್ಲಿ ನರ್ಸರಿಯಿಂದ ಹಿಡಿದು ಹೈಸ್ಕೂಲ್ವರೆಗಿನ ಶಾಲೆಗಳೆಲ್ಲ ಮುಚ್ಚಬೇಕು.

ಶೇಕಡಾ ೮೦ರಷ್ಟು ಸರ್ಕಾರಿ ವಾಹನಗಳು ನಿಂತಲ್ಲೇ ನಿಂತಿರಬೇಕು. ಸರಕು ಸಾಗಣೆ ಮತ್ತು ಕಟ್ಟಡ ನಿರ್ಮಾಣ ಸ್ಥಗಿತವಾಗಬೇಕು. ‘ಕೇಸರಿ ಎಚ್ಚರಿಕೆ ದಿನ’ಗಳಲ್ಲಿ ಫ್ಯಾಕ್ಟರಿಗಳೆಲ್ಲ ಸ್ಥಗಿತವಾಗಬೇಕು. ಮಾಂಸವನ್ನು ಸುಡುವ (ಬಾರ್ಬಿಕ್ಯೂ) ಹಾಗೂ ಪಟಾಕಿ ಹಚ್ಚುವ ಕೆಲಸ ಮಾಡಕೂಡದು. ಡೀಸೆಲ್ ಕಾರುಗಳಂತೂ ವರ್ಷದ ಯಾವ ದಿನವೂ ನಗರದ ಒಳ ವಲಯಕ್ಕೆ ಬರುವಂತೆಯೇ ಇಲ್ಲ.

ನಮ್ಮ ಮುಂಗಡಪತ್ರದಲ್ಲಿ ಇದಕ್ಕೆ ತದ್ವಿರುದ್ಧವಾಗಿ, ಇಂಧನವನ್ನು ಅತಿಯಾಗಿ ಬಳಸುವ, ಮಾಲಿನ್ಯವನ್ನು ಅತಿಯಾಗಿ ಕಕ್ಕುವ ಎಸ್ಯುವಿಗಳಿಗೆ ಮತ್ತು ಡೀಸೆಲ್ ವಾಹನಗಳಿಗೆ ಅತಿ ಹೆಚ್ಚಿನ ಸುಂಕ ವಿನಾಯಿತಿ ತೋರಿಸಲಾಗಿದೆ. ಇನ್ನಷ್ಟು ಜನರು ಭಾರೀ ಗಾತ್ರದ ವಾಹನಗಳನ್ನು ಖರೀದಿಸಬೇಕು, ನಗರವಾಸಿಗಳ ನಾಳಿನ ದಿನಗಳನ್ನು ಇನ್ನಷ್ಟು ಕಂಟಕಕಾರಿ ಮಾಡಬೇಕು ಎಂಬ ಅ(ನ)ರ್ಥಗಳೇ ಈ ಬಾರಿಯ ಅರ್ಥಸಚಿವರ ಬ್ರೀಫ್ ಕೇಸಿನಿಂದ ಹೊಮ್ಮಿವೆ. ಸಹಜವಾಗಿ ಅದಕ್ಕೆ ಇಂಧನ ಸಚಿವ ವೀರಪ್ಪ ಮೊಯಿಲಿ ಅವರ ಸಹಕಾರ ಇದ್ದೇ ಇದೆ.

ಬಜೆಟ್ ಮಂಡನೆಯಾದ ನಾಲ್ಕು ದಿನಗಳ ನಂತರ ಮೊಯಿಲಿ ಸಾಹೇಬರು ಬೆಂಗಳೂರಿಗೆ ಬಂದರು. ಅಖಿಲ ಭಾರತ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಗಳ ೫೮ನೇ ಸಮಾವೇಶವನ್ನು ಉದ್ಘಾಟಿಸಿ ‘ಮಾಲಿನ್ಯದ ವಿರುದ್ಧ ಯುದ್ಧ ಅನಿವಾರ್ಯ’ ಎಂದು ಘೋಷಿಸಿ ಹೋದರು. ಈ ಕಾರ್ಯಕ್ರಮಕ್ಕೆ ಮೊಯಿಲಿ ಅವರು ಎಲ್ಲೋ ಹಾದಿ ತಪ್ಪಿ ಬಂದಿದ್ದಾರೆಂದು ಊಹಿಸುವಂತಿಲ್ಲ. ಅವರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರೂ ಆಗಿದ್ದಾರೆ. ದಿನದ ಕೆಲವಷ್ಟು ಸಮಯ ಅವರು ಇಂಧನ ಸಚಿವರಾಗಿರುತ್ತಾರೆ. ಅಂದರೆ ಎಲ್ಲರಿಗೂ ಬೇಕಾದಷ್ಟು ಪೆಟ್ರೋಲು, ಸೀಮೆಣ್ಣೆ, ಡೀಸೆಲ್, ಕಲ್ಲಿದ್ದಲು, ನೈಸರ್ಗಿಕ ಅನಿಲವೇ ಮುಂತಾದ ಪಳೆಯುಳಿಕೆ ಇಂಧನ ಪೂರೈಕೆ ಮಾಡುವ (ಆ ಮೂಲಕ ಮಾಲಿನ್ಯ ಹೆಚ್ಚಿಸುವ) ಖಾತೆಯ ಪರವಾಗಿ ಕೆಲಸ ಮಾಡುತ್ತಾರೆ.

ಇನ್ನುಳಿದ ಸಮಯವೆಲ್ಲ ಮಾಲಿನ್ಯ ನಿಯಂತ್ರಣ ಕ್ರಮಗಳಿಗೆ ಪ್ರೋತ್ಸಾಹ ನೀಡುವ ಸಚಿವರಾಗಿರುತ್ತಾರೆ. ಹೀಗೆ ಪರಸ್ಪರ ವಿರುದ್ಧ ಚಲಿಸುವ ಎರಡು ದೋಣಿಗಳ ಮೇಲೆ ಏಕಕಾಲಕ್ಕೆ ಪಯಣಿಸುವ ಅಪರೂಪದ ಸಾಹಸಿಯಾಗಿದ್ದಾರೆ. ಅವರು ಇದರೊಂದಿಗೆ ಹೇಗೆ ಏಗುತ್ತಾರೆ ಎಂಬುದಕ್ಕೆ ಒಂದೆರಡು ಉದಾಹರಣೆಗಳನ್ನು ಇಲ್ಲಿ ಪರಿಶೀಲಿಸೋಣ.

ಇಂಧನ ಸಚಿವರಾದ ಲಾಗಾಯ್ತೂ ಅವರು ಪೆಟ್ರೋಲಿಯಂ ಅನಿಲದ ಉತ್ಪಾದನೆಯನ್ನು ಹೆಚ್ಚಿಸಲೆಂದು ‘ಫ್ರ್ಯಾಕಿಂಗ್’ ತಂತ್ರಜ್ಞಾನಕ್ಕೆ ಒತ್ತು ಕೊಡುತ್ತ ಬಂದಿದ್ದಾರೆ. ಬೆಂಗಳೂರು, ಮಂಗಳೂರು ಹೀಗೆ ಹೋದಲ್ಲೆಲ್ಲ ಅದರ ಬಗೆಗೇ ಅವರು ಮಾಧ್ಯಮಗೋಷ್ಠಿ ನಡೆಸಿದ್ದುಂಟು. ಫ್ರ್ಯಾಕಿಂಗ್ ಎಂಬುದು ಕಳೆದ ಕೇವಲ ಹತ್ತೆಂಟು ವರ್ಷಗಳಿಂದಷ್ಟೆ ಪಶ್ಚಿಮದ ದೇಶಗಳಲ್ಲಿ ಚಾಲ್ತಿಗೆ ಬಂದ ತಂತ್ರಜ್ಞಾನ. ಸಾವಿರಾರು ಮೀಟರ್ ಆಳಕ್ಕೆ ಅಡ್ಡ-ಉದ್ದ, ಓರೆಕೋರೆ ಕೊಳವೆ ಕೊರೆದು ಅಲ್ಲಿರುವ ಶಿಲಾಹಾಸುಗಳೆಲ್ಲ ಆಳದಲ್ಲೇ ಚೂರುಚೂರಾಗುವಂತೆ ಸರಣಿ ಡೈನಮೈಟ್ಗಳನ್ನಿಳಿಸಿ ಸ್ಫೋಟಿಸುತ್ತಾರೆ. ನಂತರ ಮೇಲಿನಿಂದ ಭಾರೀ ಪ್ರಮಾಣದ ನೀರು, ಗಾಳಿ, ಅಂಟುಕೆಸರು ಮತ್ತು ಮರಳನ್ನು ಒತ್ತಡದಲ್ಲಿ ಕೆಳಕ್ಕೆ ಕಳಿಸುತ್ತಾರೆ. ಹೀಗೆ ಮಾಡಿದಾಗ ಶಿಲಾಪದರದಲ್ಲಿ ಬಂಧಿತವಾಗಿದ್ದ ನೈಸರ್ಗಿಕ ಅನಿಲ ಮತ್ತು ತೈಲವೆಲ್ಲ ಬೇರೊಂದು ಕೊಳವೆಯ ಮೂಲಕ ಮೇಲಕ್ಕೆ ಬರುತ್ತದೆ.

ಈ ವಿಧಾನದಲ್ಲಿ ಕಡಪಾ ಕಲ್ಲಿನ ಮಾದರಿಯ ಕರೀಕಪ್ಪು ಜಲಜ ಶಿಲೆಗಳಿಂದಲೂ ಪಳೆಯುಳಿಕೆ ಇಂಧನವನ್ನು ಹೊರತೆಗೆಯಲು ಸಾಧ್ಯವಿದೆ. ಒಂದರ್ಥದಲ್ಲಿ ಇದು ಶಿಲೆಯನ್ನು ಹಿಂಡಿ ಅನಿಲವನ್ನು ತೆಗೆಯುವ ಸಾಹಸ. ಈ ತಂತ್ರಜ್ಞಾನ ಬಳಕೆಗೆ ಬಂದಷ್ಟೇ ವೇಗದಲ್ಲಿ ಯೂರೋಪ್, ಅಮೆರಿಕದಲ್ಲಿ ಸ್ಥಳೀಯ ಜನರಿಂದ ಪ್ರತಿರೋಧಗಳೂ ಬಂದಿವೆ. ಎಲ್ಲ ವಿಜ್ಞಾನ ಪತ್ರಿಕೆಗಳಲ್ಲೂ ಫ್ರ್ಯಾಕಿಂಗ್ನ ವಿಕಾರ ಮುಖಗಳ ಕುರಿತು ಚರ್ಚೆ ನಡೆದಿವೆ. ಏಕೆಂದರೆ ಅಷ್ಟು ಆಳಕ್ಕೆ ಬಾವಿ ಕೊರೆಯುವಾಗ ಮಾಮೂಲು ಅಂತರ್ಜಲದ ಶಿಲಾಪದರಗಳನ್ನು ದಾಟಿಕೊಂಡೇ ಕೆಳಕ್ಕೆ ಡ್ರಿಲ್ಮೂತಿಯನ್ನು ಇಳಿಸಬೇಕು. ಅಲ್ಲಿಂದ ಅನಿಲ ಅಥವಾ ಕಲ್ಲೆಣ್ಣೆ ಮೇಲಕ್ಕೆ ಬರುವಾಗ ಭೂಜಲವನ್ನೂ ಕಲುಷಿತ ಮಾಡಿಯೇ ಬರುತ್ತದೆ.

ಕೆಲವೆಡೆ ಮನೆಯೊಳಗಿನ ನಲ್ಲಿಯಲ್ಲೂ ಇಂಧನ ತೂರಿಬಂದು ಬೆಂಕಿ ಹೊತ್ತಿದ ವರದಿಗಳು ಬಂದಿವೆ. ಆಳದಲ್ಲಿರುವ ವಿಕಿರಣಶೀಲ ರೇಡಾನ್ ಅನಿಲ, ವಿಷಪೂರಿತ ಭಾರಲೋಹಗಳ ಕಣಗಳು ಅಂತರ್ಜಲವನ್ನು ಮಲಿನ ಮಾಡಿವೆ. ಇನ್ನು ಕೆಲವು ಕಡೆ ಭೂಕಂಪನಗಳಾಗಿವೆ. ಯೂರೋಪ್, ಕೆನಡಾ, ಆಸ್ಟ್ರೇಲಿಯಾ, ಅಮೆರಿಕ ಎಲ್ಲೆಡೆ ಈ ವಿಧ್ವಂಸಕ ತಂತ್ರಜ್ಞಾನಕ್ಕೆ ವಿರೋಧ ವ್ಯಕ್ತವಾಗಿದೆ. ಅದೇನನ್ನೂ ಪರಿಗಣಿಸದೆ ನಮ್ಮ ಸರ್ಕಾರೀ ಪೆಟ್ರೋಲಿಯಂ ಕಂಪೆನಿ (ಓಎನ್ಜಿಸಿ) ಪಶ್ಚಿಮ ಬಂಗಾಳದ ಇಚ್ಚಾಪುರ ಎಂಬಲ್ಲಿ ಹೀಗೆ ಪಾತಾಳದಲ್ಲಿ ಸರಣಿ ಸ್ಫೋಟ ಮಾಡಿ ಅನಿಲವನ್ನು ಹೊರಕ್ಕೆ ತೆಗೆದು ಬೀಗಿದೆ. ಅದಕ್ಕೆಂದು ಅನೇಕ ಈಜುಗೊಳಗಳಷ್ಟು ನೀರನ್ನು ಭೂತಳಕ್ಕೆ ಕಳಿಸಿದೆ. ಆಳದಲ್ಲಿ ಕೊಳವೆ ಅಡ್ಡಡ್ಡ ತಿರುಗಿ ಯಾರ್್್ಯಾರದೋ ಜಮೀನಿನ ಕೆಳಕ್ಕೆ ಸಾಗುವುದರಿಂದ ಯಾರ್್್ಯಾರ ಅಂತರ್ಜಲ ಪಾತಾಳಕ್ಕೆ ಸೋರಿದೆ ಎಂಬುದು ಕೂಡ ಗೊತ್ತಾಗಲಿಲ್ಲ.

ಇಚ್ಚಾಪುರದ ಫ್ರ್ಯಾಕಿಂಗ್ ಪ್ರಾತ್ಯಕ್ಷಿಕೆ ಯಶಸ್ವಿಯಾಗಿದ್ದೇ ತಡ, ಭಾರತದ ಎಲ್ಲೆಲ್ಲಿ ಪಾಟಿಕಲ್ಲಿನಂಥ ಶೇಲ್ ಶಿಲೆಗಳಿವೆಯೊ ಅಲ್ಲೆಲ್ಲ ಖಾಸಗಿ ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ಜಮೀನು ಖರೀದಿಸುತ್ತಿವೆ. ದಕ್ಷಿಣದ ಪ್ರಸ್ಥಭೂಮಿಯನ್ನು ಬಿಟ್ಟರೆ ಅಸ್ಸಾಂನಿಂದ ಹಿಡಿದು ಗುಜರಾತ್ ರಾಜಸ್ತಾನ್ವರೆಗೆ, ವಿಂಧ್ಯ ಕಣಿವೆ, ಕೃಷ್ಣಾ, ಗೋದಾವರಿ ಕೊಳ್ಳ, ನಮ್ಮ ಭೀಮಾ ಕಣಿವೆಯ ವಿಜಾಪುರ, ಗುಲ್ಬರ್ಗದಲ್ಲೂ ಆಳದಲ್ಲಿ ಶೇಲ್ ಶಿಲೆಗಳಿವೆ. ಅಲ್ಲೆಲ್ಲ ಖಾಸಗಿ ಕಂಪೆನಿಗಳು ರಂಧ್ರ ಕೊರೆದು ಪರೀಕ್ಷೆ ನಡೆಸತೊಡಗಿವೆ. ನಾಲ್ಕಾರು ಎಕರೆ ನೆಲ ಖರೀದಿಸಿದರೂ ಸಾಕು, ಆಳದಲ್ಲಿ ಹತ್ತಾರು ಚದರ ಕಿಲೊಮೀಟರ್ವರೆಗಿನ ಭೂದ್ರವ್ಯದ ಬಾಗಿಲು ತೆರೆಯಲು ಮೊಯಿಲಿ ಅನುವು ಮಾಡಿ ಕೊಟ್ಟಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ಸಂಬಂಧಿತ ಸರ್ಕಾರಿ ಇಲಾಖೆಗಳಿಗೆ ಶೇಲ್ಗ್ಯಾಸ್ನ ಹೊಸ ಸಾಧ್ಯ ತೆಯ ಬಗ್ಗೆ ಮೊಯಿಲಿ ಅವರು ಟಿಪ್ಪಣಿಯನ್ನು ಕಳಿಸಿದ್ದಾರೆ. ಇಂಥ ಅನಿಲ ಗಣಿಗಾರಿಕೆಯಲ್ಲಿ ನೀರಿನ ಬಳಕೆ ಅಷ್ಟೇನೂ ಜಾಸ್ತಿ ಆಗುವುದಿಲ್ಲವೆಂದು ಟಿಪ್ಪಣಿಯನ್ನು ತಯಾರಿಸಿದ ‘ಟೆರಿ’ ಸಂಸ್ಥೆ ಹೇಳಿದೆಯಾದರೂ ಆಳದಿಂದ ಮೇಲಕ್ಕೆ ಹೊಮ್ಮುವ ದ್ರವ್ಯಗಳ ನಿಭಾವಣೆ, ಭೂಕಂಪನ ಸಾಧ್ಯತೆ ಅಥವಾ ಪರಿಸರ ಮಾಲಿನ್ಯದ ಬಗ್ಗೆ ಯಾವುದೇ ನಿಯಂತ್ರಣ ನೀತಿಯ ಸೂಚನೆಯೂ ಅದರಲ್ಲಿಲ್ಲ. ನಿಧಿ ಶೋಧದ ಅವಧಿಯಲ್ಲಿ, ಅಂದರೆ ಎರಡು ಮೂರು ಸಾವಿರ ಮೀಟರ್ ಆಳ ಡ್ರಿಲ್ಲಿಂಗ್ ಮಾಡುವಾಗ ಅಂತರ್ಜಲ ಅನಗತ್ಯ ಹೊರಕ್ಕೆ ಬರುತ್ತದೆ.

ಫ್ರ್ಯಾಕಿಂಗ್ ಆರಂಭವಾದ ಮೇಲೆ ಅಂತರ್ಜಲ ಇನ್ನೂ ಆಳಕ್ಕೆ ಇಳಿದು ಹೋಗುವ ಸಂಭವ ಇರುತ್ತದೆ. ದೇಶದ ದೀರ್ಘ ಭವಿಷ್ಯದ ದೃಷ್ಟಿಯಿಂದ ಈ ತಂತ್ರಜ್ಞಾನ ಒಳ್ಳೆಯದಾದೀತೆಂಬ ಯಾವ ಭರವಸೆಯೂ ಇಲ್ಲ. ಬದಲಿಗೆ ೨೦೩೦ರ ವೇಳೆಗೆ ಭಾರತದ ಕೃಷಿಭೂಮಿಗೆ ನೀರಿನ ತೀವ್ರ ತುಟಾಗ್ರತೆ ಉಂಟಾಗಲಿದೆ ಎಂದು ‘ಯುನಿಸೆಫ್’ ಮತ್ತು ಆಹಾರಕೃಷಿ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

ಕೇಂದ್ರ ಇಂಧನ ಸಚಿವರಾಗಿ ಅದೆಷ್ಟೊ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸುತ್ತಲೇ ಪರಿಸರ ಖಾತೆಯ ಸಚಿವರಾಗಿ ಅದೆಷ್ಟೊ ಯೋಜನೆಗಳ ತಡೆಗಟ್ಟೆಗಳನ್ನು ಮೊಯಿಲಿ ಕಿತ್ತೆಸೆದಿದ್ದಾರೆ. ಹೊಸ ಖಾತೆ ವಹಿಸಿಕೊಂಡ ಎಂಟೇ ದಿನಗಳಲ್ಲಿ ೧೯ ಸಾವಿರ ಕೋಟಿ ರೂಪಾಯಿಗಳ ವಿವಿಧ ಯೋಜನೆಗಳಿಗೆ ಕ್ಲಿಯರೆನ್ಸ್ ಕೊಟ್ಟ ಸಾಧನೆಗಾಗಿ ಕಂಪೆನಿಗಳಿಂದ ಮೆಚ್ಚುಗೆ ಪಡೆದ ಅಪರೂಪದ ಸಚಿವರು ಇವರು.

ತಾನು ಎರಡೂವರೆ ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯಾಗಬಲ್ಲ ೧೭೦ ಕಡತಗಳನ್ನು ಇದುವರೆಗೆ ಕ್ಲಿಯರ್ ಮಾಡಿರುವುದಾಗಿ ಅವರು ಈಚೆಗೆ ಗುರುಮಿಟ್ಕಲ್ನಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ. ಕೆಲವೆಡೆ ಕಲ್ಲಿದ್ದಲ ಗಣಿಗಾರಿಕೆ ಯೋಜನೆಗಳು, ಕೆಲವೆಡೆ ಶಾಖ ವಿದ್ಯುತ್ ಯೋಜನೆಗಳು, ಒಡಿಶಾದಲ್ಲಿ ಕಲ್ಲಿದ್ದಲು ಮತ್ತು ವಿದ್ಯುತ್ತನ್ನು ಭಾರೀ ಪ್ರಮಾಣದಲ್ಲಿ ಬಳಸುವ ಪೋಸ್ಕೊ ಉಕ್ಕಿನ ಕಾರ್ಖಾನೆ -ಹೀಗೆ ಹೆಚ್ಚಿನವೆಲ್ಲ ಪಳೆಯುಳಿಕೆ ಇಂಧನ ಬಳಕೆಯ ಯೋಜನೆಗಳೇ ಆಗಿರುವುದರಿಂದ ಕಡತ ಯಜ್ಞಕ್ಕೆ ಸಾಕಷ್ಟು ಇಂಧನ ಸಿಕ್ಕಂತಾಗಿ ಆ ಖಾತೆಯ ಸಚಿವರಾಗಿಯೇ ಈ ಖಾತೆಯಲ್ಲೂ ಮೊಯಿಲಿ ಸಾಧನೆಗೈದರೆಂದು ಬಾಯ್ತುಂಬ ಹೇಳಬಹುದು.

ಆದರೂ ಮೊಯಿಲಿ ಅವರು ಕಂಪೆನಿಗಳ ಲಾಭಕ್ಕಾಗಿಯೇ ಜನಸಾಮಾನ್ಯರ ಹಿತಾಸಕ್ತಿಯನ್ನು ಬಲಿ ಹಾಕುತ್ತಿದ್ದಾರೆಂದು ‘ಗ್ರೀನ್ ಪೀಸ್’ ಸಂಸ್ಥೆ ಯಾಕೆ ಆಪಾದನೆ ಮಾಡಿದೆಯೊ? ರಿಲಯನ್ಸ್ ಕಂಪೆನಿಗೆ ಅನುಕೂಲ ಆಗುವಂತೆ ಅನಿಲದ ಬೆಲೆಯನ್ನು ಅಪಾರವಾಗಿ ಹೆಚ್ಚಿಸಲು ಅವಕಾಶ ಮಾಡಿಕೊಟ್ಟರೆಂದು ಆಮ್ ಆದ್ಮಿ ಸರ್ಕಾರ ಯಾಕೆ ಅವರ ವಿರುದ್ಧವೂ ಎಫ್ಐಆರ್ ದಾಖಲಿಸಿದೆಯೊ? ಮೊಯಿಲಿ ಅವರ ಈ ನಿರ್ಧಾರದಲ್ಲಿ ಅವರಲ್ಲಿರುವ ಪರಿಸರ ಪ್ರಜ್ಞೆಯೇ ಕೆಲಸ ಮಾಡಿರಬಾರದೇಕೆ? ಹೇಗಿದ್ದರೂ ಅನಿಲದ ಬೆಲೆ ಹೆಚ್ಚಾದಂತೆಲ್ಲ ಅದನ್ನೇ ಆಧರಿಸಿದ ರಸಗೊಬ್ಬರ ಕಾರ್ಖಾನೆಗಳು, ಗಾಜು ಮತ್ತು ಪ್ಲಾಸ್ಟಿಕ್ ತಯಾರಿಕೆ, ವಿದ್ಯುತ್ ಉತ್ಪಾದನೆ ಇವೆಲ್ಲವುಗಳ ವೆಚ್ಚ ಹೆಚ್ಚುವುದರಿಂದ ಅವುಗಳ ಬಳಕೆ ಕಡಿಮೆಯಾಗಿ ಪರೋಕ್ಷವಾಗಿ ಪರಿಸರ ಸಂರಕ್ಷಣೆಯೇ ಆಗುತ್ತದೆಂದೂ ವಾದಿಸಲು ಸಾಧ್ಯವಿದೆ ತಾನೆ? ಇದೆಯೆಂದು ಹೇಳಿ ನಕ್ಕುಬಿಡಿ.

ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.