ಮಹಾಭಾರತದ ರಚಯಿತರಾದ ವ್ಯಾಸರು ಈ ಸಂಕೀರ್ಣ ರಚನೆಯಲ್ಲಿ ತಮ್ಮನ್ನೇ ತಾವು ತೀವ್ರವಾದ ಪರೀಕ್ಷೆಗೆ ಒಡ್ಡಿಕೊಳ್ಳುತ್ತಿದ್ದಾರೆನ್ನಿಸುತ್ತದೆ. ತನ್ನ ರಚನೆಯಲ್ಲಿ ಯಾವ ಪಾತ್ರವನ್ನು ಪರೀಕ್ಷೆಗೆ ಒಡ್ಡಿದರೂ ಅದು ಆ ಪಾತ್ರವನ್ನು ರೂಪಿಸಿದ ಕವಿಯೇ ತನ್ನನ್ನು ಪರೀಕ್ಷೆಗೆ ಒಡ್ಡಿಕೊಂಡಂತೆ ಎನ್ನುವ ಮಾತು ಬೇರೆ. ರಾಮಾಯಣದಲ್ಲಿ ಬರುವ ವಾಲಿವಧೆಯ ಪ್ರಸಂಗವಾಗಲೀ, ಸೀತೆಯ ಅಗ್ನಿಪರೀಕ್ಷೆ ಮತ್ತು ಉತ್ತರಕಾಂಡದ ಸೀತಾಪರಿತ್ಯಾಗದ ಸಂದರ್ಭಗಳಾಗಲೀ ಅವು ಕವಿ ವಾಲ್ಮೀಕಿ ತನ್ನೊಳಗೆ ಗಾಢವಾಗಿ ಅನುಭವಿಸಿದ ಸಂಕಟಗಳೇ. ಅಲ್ಲದೆ ಒಂದೊಂದು ಪಾತ್ರವೂ ಪಡುವ ಸಂಕಟಕ್ಕಿಂತ ನಿಜವಾದ ಕವಿ ಮತ್ತು ಸಹೃದಯರು ಪಡುವ ಸಂಕಟ ಹೆಚ್ಚು ಆಳವಾದ್ದು. ಸೀತೆಯನ್ನು ಸಂಕಟಕ್ಕೆ ದೂಡುವಲ್ಲಿ ಹಾಗೆ ದೂಡಿದ ರಾಮನ ಸಂಕಟವನ್ನೂ ಕವಿ ತಾನು ಪ್ರಾಮಾಣಿಕವಾಗಿ ಅನುಭವಿಸಬೇಕಲ್ಲ! ಪಾತ್ರಗಳ ಪರ–ವಿರೋಧಗಳ ಮಾತು ಸಾಮಾಜಿಕರ ಮನಸ್ಸಿನ ಹೇಳಿಕೆಯಾಗಿದೆ ಮತ್ತು ಈ ಸಾಮಾಜಿಕ ಮನಸ್ಸಿನ ಜೊತೆಗೂ ಕವಿ ತಾನು ಒಡನಾಡಬೇಕಿದೆ. ನಾಯಕನಿಂದ ಪರಿತ್ಯಕ್ತಳಾದ ತನ್ನ ಕಾವ್ಯದ ಮಹಾನಾಯಕಿಯನ್ನು ತಾನೇ ತನ್ನ ಆಶ್ರಮದಲ್ಲಿ ಪೋಷಿಸಬೇಕಾದ ಸಂದರ್ಭವನ್ನು ವಾಲ್ಮೀಕಿ, ಕಾವ್ಯದೊಳಗಡೆಯೇ ಉಂಟು ಮಾಡಿಕೊಂಡದ್ದು – ಅಪೂರ್ವವಾದ ಕಾವ್ಯ ಸತ್ಯವೊಂದನ್ನು ಸೂಚಿಸುತ್ತದೆ.

ಅದೆಂದರೆ: ರಾಮನು ಸೀತೆಯನ್ನು ಬಿಡಬಹುದು, ನಾಯಕನು ತ್ಯಾಗ ಮಾಡಬಹುದು – ಆದರೆ ಕವಿ ಸೀತೆಯನ್ನು ಬಿಡುವಂತಿಲ್ಲ. ಕವಿ, ಯಾರನ್ನೂ ಯಾವುದನ್ನೂ ಬಿಡುವಂತಿಲ್ಲ. ಕವಿ ತನ್ನ ಸೃಷ್ಟಿಯನ್ನು ಪೋಷಿಸಲೇಬೇಕು. ಸ್ವಯಂಕವಿಯಾಗಿ ಈ ಸೂಕ್ಷ್ಮವನ್ನು ಚೆನ್ನಾಗಿ ಬಲ್ಲ ಕಾಳಿದಾಸ ತನ್ನ ‘ರಘುವಂಶ’ದಲ್ಲಿ ಹಕ್ಕಿಯ ಅಳಲಿಗೆ ಮಿಡಿದು ಕಾವ್ಯವನ್ನೇ ರಚಿಸಿದ ಕವಿಗೆ ಸೀತೆಯ ಅಳಲು ಕೇಳದಿರುತ್ತದೆಯೆ – ‘ಶ್ಲೋಕತ್ತ್ವಮಾ ಪದ್ಯತ ಯಸ್ಯ ಶೋಕಃ’ ಎನ್ನುತ್ತಾನೆ. ಒಳಗಿನ ದುಃಖವನ್ನೇ ಹಾಡುಗಬ್ಬವಾಗಿ ಹೊಮ್ಮಿಸಿದ ಕವಿ, ಸೀತೆಯ ಅಳಲನ್ನು ಕೇಳಿಯೂ ಕೇಳದಂತೆ ಕಾವ್ಯವನ್ನು ಮುಂದುವರೆಸಿದ್ದರೆ ಅದು ಕಾವ್ಯದ ಒಳಗಿನ ಊನವಾಗಿ ಬಿಡುತ್ತಿತ್ತು; ಹೊರಗಿನ ಊನ ಮಾತ್ರವಲ್ಲ.

ವ್ಯಾಸರದು ಇದಕ್ಕಿಂತಲೂ ತುಸು ಕ್ಲಿಷ್ಟವಾದ ವೈಯಕ್ತಿಕ ಸಂದರ್ಭವಾಗಿದೆ. ಅದೆಂದರೆ ತನ್ನನ್ನು ಒಲ್ಲದವಳೊಡನೆ ವ್ಯಾಸನೆಂಬ ಈ ಇತಿಹಾಸಕಾರ ಕೂಡಬೇಕಾಗಿ ಬಂದಿದೆ! ಅವಳನ್ನು ಯಾವುದಕ್ಕೂ ದೂರುವಂತಿಲ್ಲ. ಹಾಗೆಂದು ಈ ಒಲ್ಲದ ಕೂಟದ ಪರಿಣಾಮವನ್ನು ಅನುಭವಿಸಲೇಬೇಕಾಗಿದೆ. ತಾನು ಕೂಡಬೇಕಾದ ಗಂಡನ್ನು ನೋಡಲೂ ಒಲ್ಲದೆ ಕಣ್ಣುಮುಚ್ಚಿಕೊಂಡ ಹೆಣ್ಣು! ಹುಟ್ಟಿದ ಮಗು ಕುರುಡಾಗಿದೆ. ಒಂದೊಮ್ಮೆ ಕುರುಡಾಗದೆ ಇರುತ್ತಿದ್ದರೆ – ಮಗು – ವ್ಯಾಸನಂತೆ ನಿರ್ಲಿಪ್ತನಾದ ಜ್ಞಾನಿಯಾಗಬಹುದಿತ್ತೇನೋ! ಅಥವಾ ಕುರುಡನಾದರೂ ಜ್ಞಾನಿಯಾಗಿ ಬೆಳೆಯಬಾರದೆಂದಿಲ್ಲವಲ್ಲ. ಅಂಥದೊಂದು ಆಸೆ ಕುರುಡುಮಗು ಧೃತರಾಷ್ಟ್ರನ ಕುರಿತಾಗಿ ವ್ಯಾಸರಿಗೇ ಇತ್ತು. ಹಾಗೆ; ಧೃತರಾಷ್ಟ್ರನನ್ನು ‘ಪ್ರಜ್ಞಾಚಕ್ಷುಃ’ ಎಂದು ವ್ಯಾಸ ಕರೆದಿದ್ದಾರೆ. ‘ಪ್ರಜ್ಞಾಚಕ್ಷುಃ’ ಎಂದರೆ ಪ್ರಜ್ಞೆಯ ಕಣ್ಣು ತೆರೆದವನು ಎಂದು. ಹೊರಗಣ್ಣು ಇಲ್ಲದಿದ್ದರೇನಂತೆ? ಒಳಗಣ್ಣು ತೆರೆದುಕೊಂಡವನು ಎಂದು. ಆದರೆ ಧೃತರಾಷ್ಟ್ರ ಪ್ರಾಜ್ಞನಾಗಿ ಬೆಳೆದನೆನ್ನುವುದಕ್ಕೆ ಮಹಾಭಾರತದಲ್ಲಿ ಆಧಾರ ತೋರುವುದಿಲ್ಲ. ಅಲ್ಲದೆ ‘ಪ್ರಜ್ಞಾಚಕ್ಷುಃ’ ಎಂದಾಗಲೆಲ್ಲ ಅದು ಧೃತರಾಷ್ಟ್ರನ ತಾಯಿ ಅಂಬಿಕೆಗೆ ಅಗೋಚರವಾಗಿ ತಿವಿಯುವ ಪದವೂ ಹೌದು!

ವಂಶವನ್ನು – ಅದು ರಾಜವಂಶವೇ ಇರಲಿ, ಸಾಮಾನ್ಯವಂಶವೇ ಇರಲಿ – ಮುಂದುವರೆಸುವುದಕ್ಕಾಗಿ ಸಾಮಾಜಿಕ ಅನಿವಾರ್ಯವಾಗಿ, ಆಪದ್ಧರ್ಮವಾಗಿ ಸೂಚಿತವಾಗಿರುವ ‘ನಿಯೋಗ’ ಪದ್ಧತಿಯನ್ನು ಒಪ್ಪಿಯೂ ಸಂಬಂಧಿತ ಮನಸ್ಸುಗಳು ಹೇಗೆ ಮುದುಡಿಕೊಳ್ಳುತ್ತವೆ ಎಂಬ ಸೂಕ್ಷ್ಮ ಸೂಚನೆಯನ್ನು ವ್ಯಾಸ ನೀಡುತ್ತಾರೆ. ಪದ್ಧತಿಯೊಂದನ್ನು ಅನಿವಾರ್ಯವಾಗಿ ಅನುಸರಿಸಬೇಕಾಗಿ ಬಂದಾಗ ಮನಸ್ಸುಗಳು ಪಡುವ ಪಾಡೇ ಬೇರೆ. ಸಹಜವಾಗಿ ಮನಸ್ಸು ಅರಳಿಕೊಳ್ಳುವ ಬಗೆಯೇ ಬೇರೆ. ಈ ಇಜ್ಜೋಡನ್ನು ಯಾವ ದೊಡ್ಡ ಕವಿಯೂ ಸೂಚಿಸದೆ ಇರುವಂತಿಲ್ಲ.

ಅಂಬಿಕೆಯ ಮಗು ಕುರುಡು. ಅಂಬಾಲಿಕೆಯ ಮಗು ತಾಯಿಯಂತೆಯೇ ಬೆಚ್ಚಿಬಿದ್ದಿತೆಂಬಂತೆ ಬಿಳಿಚಿಕೊಂಡು ಹುಟ್ಟಿತು. ಇವನು ಪಾಂಡು. ಪಾಂಡು ಯಾವುದನ್ನು ಸಹಜವಾಗಿ ಅನುಭವಿಸಲಾರ. ಎಲ್ಲವನ್ನೂ ಬೆಚ್ಚಿಬಿದ್ದೇ ಅನುಭವಿಸಬೇಕು ಅಥವಾ ಅನುಭವಿಸುವಾಗ ಬೆಚ್ಚಿಬೀಳಬೇಕು. ತಾಯಿ ಪಟ್ಟ ಪಾಡೇ ಮಗುವಾಗಿ ಇಳಿದು ಬಂದಿತೇನೋ. ಇತಿಹಾಸಕ್ಕೆ ಹೀಗೆ ಒಳಗಿನಿಂದಲೇ ಎಲ್ಲರನ್ನೂ ಬೆಚ್ಚಿಬೀಳಿಸುವ ಗುಣ ಇರುವಂತಿದೆ. ಪಾಂಡವರು ಎಂಬ ಹೆಸರಿರುವವರೆಗೆ, ವ್ಯಾಸರನ್ನು ಕಂಡು ಅಂಬಾಲಿಕೆ ಬಿಳಿಚಿಕೊಂಡ ಕ್ಷಣ ಹಿಂಬಾಲಿಸಿತು. ಮಗುವಿಗೆ ಬೇರೇನಾದರೂ ಹೆಸರಿಡಬಾರದಿತ್ತೆ! ವ್ಯಾಸರ ವೈಫಲ್ಯ ಎಲ್ಲ ದೆಸೆಗಳಲ್ಲೂ ತೀವ್ರವಾದುದೇ. ವೈಫಲ್ಯದ ನೋವು ಕವಿಗೆ, ಇತಿಹಾಸಕಾರನಿಗೆ ಅನಿವಾರ್ಯವೇನೋ ಅಥವಾ ಬದುಕಿನ ‘ನಿಜ’ವನ್ನು ತಮ್ಮ ವೈಫಲ್ಯದ ಮೂಲಕವೇ ಅರಿಯಲಾಗುವುದೇನೋ?

ತಾಯಿ ಸತ್ಯವತಿಗೆ ನಿರಾಸೆಯಾಯಿತು, ನಿಜ. ಆದರೆ ವ್ಯಾಸರನ್ನು ಸ್ವಲ್ಪವೂ ಇಷ್ಟಪಡದ ಈ ಕ್ಷತ್ರಿಯ ಸ್ತ್ರೀಯರ ಮನೋಧರ್ಮವನ್ನು ಅವಳಿಗೆ ತಿಳಿಯಲಾಗಲೇ ಇಲ್ಲ. ಒಳಗಿನಿಂದ ಅವಳು ಇನ್ನೂ ಯಮುನೆಯ ನೀರಿನಲ್ಲಿ ದುಡಿಯುವ ಹೆಂಗಸಾಗಿಯೇ ಇದ್ದಳು. ಬಂದುದನ್ನು ಬಂದಂತೆ ಸ್ವೀಕರಿಸಿ ತನ್ನೊಳಗು ಮಾಡಿಕೊಳ್ಳುವ ಹೊಳೆಯ ನೀರು! ಜೀವನ ಪ್ರವಾಹವನ್ನು ಬಲ್ಲ ಹೆಂಗಸು. ಪ್ರವಾಹದಲ್ಲಿ ಅಂಥ ಸ್ವಂತ ಆಯ್ಕೆಗಳಿರುವುದಿಲ್ಲ ಎಂದು ಕಂಡುಕೊಂಡ ಹೆಂಗಸು. ಸಿಂಹಾಸನಾಧಿಕಾರಿಗಳನ್ನು ಪಡೆಯಲೆಂದು ನಡೆದ ನಿಯೋಗದಲ್ಲಿ ಸಿಂಹಾಸನಕ್ಕೆ ಅರ್ಹರಲ್ಲದ ಒಂದಲ್ಲ ಒಂದು ಕೊರತೆಯ ಮಕ್ಕಳೇ ಹುಟ್ಟಿದರಲ್ಲ – ಇದೇನು ವಿಧಿ! ಎಂದು ಬೇಸರಿಸಿದರೂ ಯತ್ನವನ್ನು ಬಿಡಲಾಗದೆನ್ನುವ ದುಡಿವ ಹೆಂಗಸು.

ಈ ತಾಯಿ, ಮಗ ವ್ಯಾಸನನ್ನು ಮತ್ತೆ ಒತ್ತಾಯಿಸಿದಳು. ಮೂರನೆಯ ಬಾರಿ. ನಿಯೋಗವಿಧಿಗಾಗಿ. ಮೂರನೆಯ ಬಾರಿಯ ನಿಯೋಗವೆನ್ನುವುದು ಒಂದು ವಾದಗ್ರಸ್ತವಾದ ವಿಷಯವಾಗಿತ್ತು. ನಿಯೋಗವು ವಿಫಲವಾದರೆ, ಅದೂ ನಿಯೋಗದಲ್ಲಿ ಪಾಲ್ಗೊಂಡ ಸ್ತ್ರೀಯರ ಕಾರಣವಾಗಿ ವಿಫಲವಾದರೆ ಮತ್ತೊಮ್ಮೆ ಅದೇ ಸ್ತ್ರೀಯ ಒಡನೆ ನಿಯೋಗವು ಎಷ್ಟು ಸರಿ? ಜಿಜ್ಞಾಸೆಗಳಿರಲಿ. ಆದರೆ ವ್ಯಾಸರಿಗೆ ಮಾತೃಋಣದಿಂದ ಬಿಡುಗಡೆಯಾಗಬೇಕಿತ್ತು ಎನ್ನುತ್ತದೆ ಮಹಾಭಾರತ. ಬಿಡುಗಡೆ ಎಂದರೆ ತಾಯಿಯ ಮಾತನ್ನು ಪಾಲಿಸಬೇಕಾದ – ತನ್ನ ವೈಯಕ್ತಿಕತೆಯನ್ನು ಬದಿಗಿಟ್ಟು ಪಾಲಿಸಬೇಕಾದ – ಸಂದರ್ಭ. ಮೂರನೆಯ ನಿಯೋಗದಲ್ಲಿ ನಡೆದುದನ್ನು ಪರಿಭಾವಿಸಿದರೆ ಈ ಋಣಮೋಚನೆ ಎನ್ನುವ ಮಾತಿಗೆ ವಿಸ್ತಾರವಾದ ಅರ್ಥ ಒದಗುತ್ತದೆ.

ತಾಯಿಯ ಮಾತಿಗೆ ತುಸು ಒತ್ತಡದಿಂದಲೆಂಬಂತೆ ವ್ಯಾಸರು ಒಪ್ಪಿದರು. ಆದರೆ ಅತ್ತೆಯ ಮಾತಿಗೆ ಅಂಬಿಕೆ ಒಪ್ಪಲಿಲ್ಲ. ವ್ಯಾಸರನ್ನು ಒಪ್ಪುವುದು ಈ ಕ್ಷತ್ರಿಯ ರಮಣಿಗೆ ಸಾಧ್ಯವೇ ಆಗದ್ದು. ಕವಿಗೆ ತನ್ನ ಪಾತ್ರವನ್ನು ಬಿಡಲಾಗದು. ಆದರೆ ಪಾತ್ರವೇ ಕವಿಯನ್ನು ಒಲ್ಲೆನೆನ್ನಬಹುದು! ಇದನ್ನು ಕಾವ್ಯದಲ್ಲಿಯೇ ಕಾಣಿಸಬಹುದಾದ ನಿರ್ವೈಯಕ್ತಿಕತೆ ವ್ಯಾಸರಲ್ಲಿ ಇತ್ತೆನ್ನಬೇಕು. ಒಂದಲ್ಲ ಒಂದು ರೀತಿಯಲ್ಲಿ ವೈಯಕ್ತಿಕತೆಯನ್ನು ಭಂಗಗೊಳಿಸುವುದೇ ಇತಿಹಾಸದ ಆಕಾಂಕ್ಷೆಯಾಗಿದೆ. ಅತ್ತೆ ಸತ್ಯವತಿಯ ಒತ್ತಡಕ್ಕೆ ಅಂಬಿಕೆ ಕೊನೆಗೂ ಬಾಗಿದಂತೆ ನಟಿಸಿದಳು; ಅಷ್ಟೆ. ಆದರೆ ಅಂದಿನ ಇರುಳು ವ್ಯಾಸರ ಬಳಿಗೆ ತಾನು ತೆರಳಲಿಲ್ಲ. ತನ್ನೆಲ್ಲ ತೊಡವುಗಳನ್ನೂ ತನ್ನ ದಾಸಿಗೆ ತೊಡಿಸಿ, ದಾಸಿಯನ್ನು ತನ್ನಂತೆ – ರಾಣಿಯಂತೆ – ಸಿಂಗರಿಸಿ ವ್ಯಾಸರ ಸಂಗಾತಕ್ಕೆ ಕಳುಹಿಸಿಕೊಟ್ಟು ತಾನು ನಿಟ್ಟುಸಿರುಬಿಟ್ಟಳು! ವ್ಯಾಸರೆಂದರೆ ಅಷ್ಟು ಹೇವರಿಕೆ! ಅತಿ ವೈಯಕ್ತಿಕತೆ ಮತ್ತು ಅವೈಯಕ್ತಿಕತೆ ಒಟ್ಟಿಗೆ ಮಗ್ಗುಲಾಗುವುದು ಅತಿ ಕಷ್ಟ!

ತನ್ನ ಬದಲಿಗೆ ದಾಸಿಯನ್ನು ಕಳುಹಿಸುತ್ತಾಳೆ ಎಂದರೆ ಅದೂ ಅರಮನೆಯ ಒಂದು ಪರಿಪಾಟ ಇರಬಹುದು. ಆದರೆ ದಾಸಿಗೆ – ವ್ಯಾಸರೆಂದರೆ ಆರಾಧನೆಯನ್ನು ಭಾವವಿತ್ತು. ಮತ್ಸ್ಯಗಂಧಿಯ ಮಗನೆಂಬ ಕಾರಣಕ್ಕೆ ಆಳದಲ್ಲಿ ನಮ್ಮವನೆಂಬ ಸ್ಪರ್ಶಭಾವವಿತ್ತು. ಅರಮನೆಗೆ ಬಂದರೂ ಸದಾ ನಿರ್ಲಿಪ್ತನಂತಿರುವ ಈ ಜ್ಞಾನಿಗೆ ತನ್ನ ತಾಯಿಯೆಂದರೆ ಇಷ್ಟು ಮಮತೆಯೆ ಎಂದು ವ್ಯಾಸರತ್ತ ಪ್ರೀತಿಯ ಸೆಳೆತವಿತ್ತು. ರಾಣಿಯರಿಗೆ ವ್ಯಾಸರೆಂದರೆ ಇಷ್ಟವಿಲ್ಲ ಎಂಬ ಕಾರಣಕ್ಕೆ ವ್ಯಾಸರ ಬಗ್ಗೆ ದಾಸಿಗೆ ವಿಶೇಷವಾದ ಒಲವೊಂದಿತ್ತು. ದಾಸಿಗೆ ಸರ್ವಾಪರ್ಣೆಯ ಮನೋಧರ್ಮವಿತ್ತು. ಆ ಅರ್ಪಣೆಗೆ ಯೋಗ್ಯರಾದವರು ಸಿಕ್ಕಿರಲಿಲ್ಲ. ಇಂಥ ಮನೋಧರ್ಮಕ್ಕೆ ಒಂದು ಅರಿವಿರುತ್ತದೆ – ಯಾರು ಯೋಗ್ಯರು ಯಾರು ಯೋಗ್ಯರಲ್ಲವೆಂದು. ಯೋಗ್ಯರಲ್ಲದವರಿಗೆ ಅರ್ಪಣೆ ಮಾಡಿದಂತಿರುವಾಗ ಅದು ಆಳದಲ್ಲಿ ನೋಯುತ್ತಿರುತ್ತದೆ – ಎಲ್ಲೆಲ್ಲೂ. ಅಂದರೆ ಮನುಷ್ಯ ಮಾಡಿಕೊಂಡ ಎಲ್ಲ ವ್ಯವಸ್ಥೆಗಳಲ್ಲೂ ಇಂಥ ನೋವು ತುಂಬಿಕೊಂಡಿದೆ. ಅದಿರಲಿ. ವ್ಯಾಸರು ದಾಸಿಯನ್ನು ನೋಡಿದರು. ಇವಳು ಕಣ್ಣುಮುಚ್ಚಿಕೊಂಡಿಲ್ಲ. ಇಡಿಯಾಗಿ ಕಣ್ಣು ತೆರೆದೂ ಇಲ್ಲ. ಅನುರಾಗದಿಂದ ಅರ್ಧನಿಮೀಲಿತೆ! ಇವಳು ಬೆಚ್ಚಿಲ್ಲ. ಬಿಳಿಚಿಕೊಂಡಿಲ್ಲ. ಆಳದ ಆಸೆಯೊಂದು ಮೈಗೂಡುವ ಕಾಲದ ಕಂಪನದ ಮೈಯಲ್ಲಿ ಆಹ್ವಾನವೂ ಇದೆ; ಒಪ್ಪಿಸಿಕೋ ಎಂಬ ಆರ್ತತೆಯೂ ಇದೆ. ಅಂದಿನ ಇರುಳು ಪರಾಶರಸೂನುವಿನ ಮೈ–ಮನ, ಎಚ್ಚರಗೊಂಡವು. ವಿಧಿ–ನಿಷೇಧಗಳ ಬಿಗಿ ಸಡಲಿದವು. ಯಮುನೆಯ ನೀರಿನಲ್ಲಿ, ದೋಣಿಯಲ್ಲಿ ಪರಾಶರ–ಮತ್ಸ್ಯಗಂಧಿಯರು ಬೆರೆತಂತೆ ಹಸ್ತಿನೆಯ ಅರಮನೆಯಲ್ಲಿ ವ್ಯಾಸ–ದಾಸಿಯರು ಬೆರೆತರು. ದೂರದಲ್ಲಿ ಎಲ್ಲೋ ಒಂದೆಡೆ ತುಪ್ಪದ ದೀಪ ಹಚ್ಚಿ ಅದೇ ಮತ್ಸ್ಯಗಂಧಿ ಸತ್ಯವತಿಯ ಆತಂಕಿತ ಕಾವಲು!

ಇತಿಹಾಸಚಕ್ರ ಮತ್ತೆ ಒಂದು ಆವರ್ತನೆಯನ್ನು ಪೂರೈಸಿದಂತಿದೆ. ಪರಾಶರ–ಮತ್ಸ್ಯಗಂಧಿಯರಂತೆ, ವ್ಯಾಸ–ದಾಸಿಯರು! ಅಂದರೆ ವ್ಯಾಸ ತನ್ನ ಹುಟ್ಟಿನ ಅನುಭವವನ್ನೇ ತಾನು ಇನ್ನೊಮ್ಮೆ ಪಡೆದನೆಂಬಂತೆ! ಅಲ್ಲಿಗೆ ಮಾತೃಋಣ ತೀರಿರಬೇಕು! ಪರಾಶರ–ಮತ್ಸ್ಯಗಂಧಿಯರು ವ್ಯಾಸರನ್ನು ಪಡೆದಂತೆ ಈ ನಿಯೋಗದಲ್ಲಿ ವ್ಯಾಸ–ದಾಸಿಯರು, ವಿದುರನನ್ನು ಪಡೆದರು. ವ್ಯಾಸರ ಜ್ಞಾನದ ಉತ್ತರಾಧಿಕಾರಿ, ‘ಕೃಷ್ಣದ್ವೈಪಾಯನಾತ್ಮಜ’ನೆಂದೇ ಮಹಾಭಾರತದಲ್ಲಿ ಪ್ರಸಿದ್ಧನಾದವನು – ವಿದುರ. ಮತ್ಸ್ಯಗಂಧಿಯು ವ್ಯಾಸರನ್ನು ಪಡೆದ ಮೇಲೂ ‘ಕೆಡದ ಕನ್ನೆತನ’ದ ವರವನ್ನು ಪರಾಶರನಿಂದ ಪಡೆದಳು. ಇದಕ್ಕೆ ಅನುರೂಪವೆಂಬಂತೆ ವ್ಯಾಸರು, ವಿದುರನ ತಾಯಿಗೆ, ನೀನಿನ್ನು ಮುಂದೆ ದಾಸಿಯಲ್ಲ – ಅಭುಜಿಷ್ಯಾ ಭವಿಷ್ಯಸಿ – ಎಂಬ ವರವನ್ನು ನೀಡಿದರು. ಚಕ್ರವು ತನ್ನಲ್ಲೇ ತಾನು ಉರುಳಿಕೊಳ್ಳದೆ ಮುಂದಕ್ಕೆ ಚಲಿಸದು. ಹಾಗೆ ಇತಿಹಾಸಚಕ್ರವೂ ತನ್ನನ್ನೇ ಇನ್ನೊಮ್ಮೆ ಅನುಭವ ಮಾಡಿಕೊಳ್ಳುತ್ತಲೇ ಮುಂದಕ್ಕೆ ಚಲಿಸುತ್ತಿದೆ!

‘ನೀನು ಇನ್ನು ಮುಂದೆ ದಾಸಿಯಲ್ಲ’ ಎಂದು ವ್ಯಾಸರಾಡಿದ ಮಾತು ಅರ್ಥಪೂರ್ಣವಾದದ್ದು. ಹುಟ್ಟುವ ಮಗು ಪೂರ್ಣ ಯೋಗ್ಯತೆ ಇದ್ದೂ, ದಾಸಿಯ ಮಗನೆಂಬ ಕಾರಣಕ್ಕೆ ಸಿಂಹಾಸನಾಧಿಕಾರದಿಂದ ತಪ್ಪಿಸದಿರಿ ಎಂಬ ವ್ಯಾಸ ಸೂಚನೆ ಇಲ್ಲಿದೆ. ‘ನಿಯೋಗ’ವು ಈ ಅರ್ಥದಲ್ಲಿ ಸಾರ್ಥಕವಾಗಲಿ ಎಂಬ ಇಂಗಿತ ಇಲ್ಲಿದೆ. ಆದರೆ ಈ ಇಂಗಿತವನ್ನು ಭೀಷ್ಮನೇ ಗ್ರಹಿಸಲಿಲ್ಲ. ತನಗೆ ಎಲ್ಲ ಅರ್ಹತೆ ಇದ್ದೂ ತಾನು ಸಿಂಹಾಸನವನ್ನು ಬಿಟ್ಟುಕೊಟ್ಟು ಅದರ ರಕ್ಷಣೆಗಾಗಿ ನಿಂತಂತೆ – ವಿದುರನೂ ತನ್ನ ಕಿರಿಯ ಒಡನಾಡಿಯಾಗಿ ಹಸ್ತಿನೆಯ ಸಿಂಹಾಸನವನ್ನು, ರಾಜಮನೆತನವನ್ನು ಕಾಯಲಿ ಎನ್ನುವುದೇ ಭೀಷ್ಮನ ಇಚ್ಛೆ. ತಾನು, ಸತ್ಯವತಿ ಮತ್ತು ವ್ಯಾಸ – ಈ ಮೂವರು ಶಂತನುವಿನ ಕುಲವನ್ನು ಹಸ್ತಿನೆಯ ಗದ್ದುಗೆಯನ್ನು ಕಾಯುವವರು. ಈ ಕೊಂಡಿಯಲ್ಲಿ ಈಗ ನೀನೂ ನಮ್ಮಂತೆ ಸೇರಿಕೊಳ್ಳಬೇಕೆಂಬ ಮಾತನ್ನು ವಿದುರನೊಡನೆ ಭೀಷ್ಮ ನೇರವಾಗಿ ಹೇಳುತ್ತಾನೆ.

ಭೀಷ್ಮನ ಸೂಚನೆಗಿಂತ ಬೇರೆಯಾಗಿ ಸತ್ಯವತಿಯೂ ಮಾತೆತ್ತುವುದಿಲ್ಲ. ವಿದುರನೇ ಸಿಂಹಾಸನವನ್ನೇರಲಿ ಎನ್ನುವುದಿಲ್ಲ. ಆದರೆ ಮಾರ್ಮಿಕವಾದ ವಿವರವೊಂದಿದೆ. ಅದೆಂದರೆ, ಪಾಂಡು, ಸಿಂಹಾಸನವನ್ನೇರಿದ್ದ. ರಾಜನಾಗಿದ್ದ. ರಾಜನಾಗಿ ದಿಗ್ವಿಜಯವನ್ನು ಮಾಡಿದ್ದ. ಸೂರೆಗೈದ ದೊಡ್ಡ ಸಂಪತ್ತನ್ನು ಹೊತ್ತು ತಂದ. ಆ ಸಂಪತ್ತನ್ನು ಮೊದಲು ಧೃತರಾಷ್ಟ್ರನಿಗೊಪ್ಪಿಸಿ, ಅವನ ಸೂಚನೆಯಂತೆ ಭೀಷ್ಮನಿಗೂ ಸತ್ಯವತಿಗೂ ತನ್ನ ಇಬ್ಬರು ತಾಯಂದಿರಿಗೂ ಮತ್ತು ಭೀಷ್ಮನ ಸೂಚನೆಯಂತೆ ವಿದುರನಿಗೂ ಒಂದು ಭಾಗವನ್ನು ನೀಡಿದನಂತೆ! ವಿದುರನ ಹಕ್ಕನ್ನು ವಿದುರನೇ ನಿರಾಕರಿಸಬೇಕಲ್ಲದೆ ಬೇರಾರೂ ಅದನ್ನು ತಪ್ಪಿಸಲಾಗದಂತೆ ಅದು ಸ್ಥಾಪಿತವಾಗಿತ್ತು.

ಈ ಹಂತದಲ್ಲಿ ಮಹಾಭಾರತ – ಯಮಧರ್ಮನೇ ವಿದುರನಾಗಿ ಹುಟ್ಟಿದನೆಂದು ಇನ್ನೊಂದು ಆಧ್ಯಾತ್ಮಿಕವಾದ ಕೊಂಡಿಯನ್ನು ಜೋಡಿಸುತ್ತದೆ. ಯಮಧರ್ಮನಿಗೇ – ಹುಡುಗಾಟದಲ್ಲಿ ತಾನು ಪತಂಗಗಳಿಗೆ ಮಾಡಿದ ಹಿಂಸೆಯನ್ನು ಪಾಪವೆಂದೇ ಬಗೆದ ಯಮಧರ್ಮನಿಗೇ – ಮಾಂಡವ್ಯನೆಂಬ ಋಷಿ ಮನುಷ್ಯನಾಗಿ ಹುಟ್ಟೆಂದು, ಶೂದ್ರನಾಗಿ ಹುಟ್ಟೆಂದು ಶಾಪವಿತ್ತಿದ್ದ. ಹುಟ್ಟಿ, ಬಾಲ್ಯಕಾಲದ ಮಹತ್ತ್ವವನ್ನು ಯಮಧರ್ಮ ತಿಳಿಯುವಂತಾಗಲಿ, ಮನುಷ್ಯರಿಗೆ ಬಾಲ್ಯ ದೀರ್ಘವಾಗಿರಲಿ, 18 ವರ್ಷಗಳ ತನಕ ಬಾಲ್ಯಕಾಲವೆಂದೇ ಗಣಿಸಲ್ಪಡಲಿ ಎನ್ನುವುದು ಮಾಂಡವ್ಯನ ಚಿಂತನೆ. ವಿದುರನ ಬಾಲ್ಯ – ಧೃತರಾಷ್ಟ್ರ, ಪಾಂಡು ಈ ಇಬ್ಬರ ಬಾಲ್ಯಕ್ಕಿಂತಲೂ ಚೆನ್ನಾಗಿತ್ತೆನ್ನಬಹುದು. ವಿದುರ ಇಹ–ಪರಗಳ ಜ್ಞಾನಿಯಾಗಿದ್ದ. ಅಂತರ್ಮುಖಿಯಾಗಿದ್ದ. ಯಮಧರ್ಮನ ಹಿನ್ನೆಲೆಗೂ ಈ ಸ್ವಭಾವಕ್ಕೂ ಒಂದು ಸಂಬಂಧವಿದೆ. ಇಹ–ಪರಗಳ ಜ್ಞಾನಿಯಾದವನು ತಾನು ಸಿಂಹಾಸನವನ್ನು ಏರಬೇಕೆನ್ನುವ ಇಚ್ಛೆಯನ್ನು ಪೋಷಿಸಿಕೊಂಡಿರುವುದೇ ಕಷ್ಟ. ಅಷ್ಟೇಕೆ, ಯಮಧರ್ಮನ ನಿಯೋಗದಿಂದಲೇ ಕುಂತಿಯಲ್ಲಿ ಹುಟ್ಟಿಕೊಂಡವನು ಯುಧಿಷ್ಠಿರ. ಸಿಂಹಾಸನಾಧಿಕಾರಿಯನ್ನು ಪಡೆಯಬೇಕೆಂಬ ತಾಯ್ತಂದೆಯರ ಪ್ರಬಲವಾದ ಇಚ್ಛೆಯಿಂದಲೇ ಹುಟ್ಟಿಕೊಂಡವ ಕೂಡ. ಆದರೆ ಅವನ ಮನದಾಳದ ಮಾತೆಂದರೆ ತಾನು ಸಿಂಹಾಸನವನ್ನು ಒಲ್ಲೆನೆನ್ನುವುದೇ. ಯುದ್ಧವನ್ನು ಗೆದ್ದು ಗದ್ದುಗೆ ಏರಿ ಅಲ್ಲಿಂದಲೇ ಇದೇನು ಜಯವೋ ಪರಾಜಯವೋ ಎಂದು ಕಂಗೆಟ್ಟು ಕೇಳಿದ ಮೊದಲ ದೊರೆ ಯುಧಿಷ್ಠಿರ! ಇಹ–ಪರಗಳ ಜ್ಞಾನಿಗಳಾದ ಸೂಕ್ಷ್ಮಜ್ಞರು ಗದ್ದುಗೆ ಏರುವುದೇ ಅವರಿಗೊಲ್ಲದ ಮಾತು!

ಹೀಗೆ ವ್ಯಾಸ–ವಿದುರ–ಯುಧಿಷ್ಠಿರ, ಮಹಾಭಾರತದ ಒಳಗಿಂದ ನೋಡಿದರೆ ಒಂದು ಪರಂಪರೆಯಾಗಿದ್ದಾರೆ. ಸಿಂಹಾಸನಾಧಿಕಾರಿಗಳನ್ನು ಪಡೆಯಬೇಕೆಂದೇ ‘ನಿಯೋಗ’ದಲ್ಲಿ ವ್ಯಾಸರು ತಮ್ಮ ತಪ್ಪಿಲ್ಲದೇ ವಿಫಲರಾದರು. ಇದನ್ನು ಚಿತ್ರಿಸುವುದು ಇತಿಹಾಸಕ್ಕೆ ಇಷ್ಟ. ಸಿಂಹಾಸನವನ್ನೇರಿ ನಿರ್ವಿಣ್ಣನಾಗುವ ಯುಧಿಷ್ಠಿರನನ್ನು ಚಿತ್ರಿಸುವುದಕ್ಕೆ ಇಷ್ಟ. ಸಿಂಹಾಸನವನ್ನೇರಲಾಗದೇ ಇದ್ದುದನ್ನು ಮನಸ್ಸಿಗೇ ತಂದುಕೊಳ್ಳದ, ಅದಕ್ಕಾಗಿ ಇನಿತೂ ಪರಿತಪಿಸದ ವಿದುರನನ್ನು – ದಾಸಿಯ ಮಗನಾದುದರಿಂದ ಎಲ್ಲ ಅರ್ಹತೆ ಇದ್ದೂ ಸಿಂಹಾಸನ ತಪ್ಪಿ ಹೋಯಿತೆಂದು ಲೋಕ ಆಡುವಂತೆ ಮಾಡುವುದು ಇತಿಹಾಸಕ್ಕೆ ಇಷ್ಟ. ಪಡೆದ ತೃಪ್ತಿಗೆ ತಮ್ಮ ಕೃತಜ್ಞತೆಯ ಸೂಚನೆ ಎಂಬಂತೆ, ದಾಸಿಗೆ, ನೀನಿನ್ನು ಮುಂದೆ ದಾಸಿಯಲ್ಲ ಎಂಬ ವರವನ್ನು ನೀಡಿದರಲ್ಲ – ವ್ಯಾಸರು, ಆ ವರ ಅವಳೊಳಗೆ ಮಾತ್ರ ಸೀಮಿತವಾಗಿ ಹೊರಲೋಕದಲ್ಲಿ ಅದು ಹಾಗೇ ನಡೆಯಿತೋ ಇಲ್ಲವೋ ಎಂದು ತಿಳಿಯದಂತೆ ವರ್ತಿಸುವುದು ಇತಿಹಾಸಕ್ಕೆ ಇಷ್ಟ.

ಸ್ವಲ್ಪ ಮುಂದಕ್ಕೆ ಹೋಗೋಣ. ಕಥೆ ನಿಮಗೆ ತಿಳಿದಿರುವುದೇ.

ಸಿಂಹಾಸನಾಧಿಕಾರಿಗಳು ಹುಟ್ಟಲಿ ಎನ್ನುವುದೇ ಎಲ್ಲ ತಾಯ್ತಂದೆಯರ ಬಯಕೆ. ಪಾಂಡುವಿನ ಮಡದಿ ಕುಂತಿಗೆ ಮಗನು ಜನಿಸಿದನೆಂದು ಕೇಳಿ ಅವನು ಹಿರಿಯವನಾಗಿ ಸಿಂಹಾಸನವೇರುವನೆಂದು ಬಗೆದು ಧೃತರಾಷ್ಟ್ರನ ಮಡದಿ ಗಾಂಧಾರಿ ತನ್ನ ಬಸಿರನ್ನು ಹಿಸಿದುಕೊಂಡಳಂತೆ. ಅಯ್ಯೋ ಎಂದುಕೊಂಡು ಸ್ವಯಂ ವ್ಯಾಸರು ಆ ಗರ್ಭಶಕಲಗಳನ್ನು ಔಷಧಿಯುಕ್ತ ತುಪ್ಪದ ಕೊಡಗಳಲ್ಲಿಟ್ಟು ಶುಶ್ರೂಷೆ ಮಾಡಿದರಂತೆ. ಹಾಗೆ ನೂರೊಂದು ಮಕ್ಕಳ ಜನನವಾಯಿತು. ದುರ್ಯೋಧನನ ಜನನ ಸಮಯದಲ್ಲಿ ತುಂಬ ಅಪಶಕುನಗಳಾದವಂತೆ. ವಿಚಾರಿಸಲಾಗಿ, ಅಪಶಕುನದ ಈ ಮಗುವನ್ನು ಕಾಡಿನಲ್ಲಿ ಬಿಟ್ಟು ಬನ್ನಿ, ಇದು ಲೋಕಕಂಟಕವಾಗಿ ಬೆಳೆಯುತ್ತೆ – ಎಂದರಂತೆ ಅದೃಷ್ಟವನ್ನೇ ಕಾಣಬಲ್ಲ ವಿದ್ವಾಂಸರು.

ಇದು – ಒಡೆದ ಗರ್ಭದ ತುಂಡುಗಳನ್ನು ಇಡಿಯಾಗಿಸಬಲ್ಲೆವು; ಪೂರ್ಣಾಂಗರನ್ನಾಗಿ ಬೆಳೆಸಬಲ್ಲೆವು; ಆ ವಿದ್ಯೆ ನಮಗೆ ತಿಳಿದಿದೆ. ಆದರೆ ಹುಟ್ಟಿದ ಮಕ್ಕಳನ್ನು ಪರಿಪೂರ್ಣ ಮಾನವರಾಗಿ ಬೆಳೆಸಲಾರೆವು. ಆ ವಿದ್ಯೆಯನ್ನು ಇನ್ನಷ್ಟೇ ತಿಳಿಯಬೇಕಾಗಿದೆ ಎಂದು ವಿದ್ವಾಂಸರು ತಮ್ಮ ಅಸಹಾಯಕತೆಯನ್ನು ಒಪ್ಪಿಕೊಂಡಂತೆಯೇ.

ಆದರೆ ಕೆಡುಕೆಂದು ನಾವು ತಿಳಿದುದರ ತ್ಯಾಗದಿಂದ ಮಹಾಕಾವ್ಯ ಹುಟ್ಟುವುದಿಲ್ಲ. ಕೆಡುಕಿನ ತ್ಯಾಗದಿಂದ ಇತಿಹಾಸ ಹುಟ್ಟುವುದಿಲ್ಲ. ಒಳಿತು–ಕೆಡುಕಿನ ಯೋಚನೆ ಇಲ್ಲದೆ, ಅಂದರೆ ಅದೃಷ್ಟದ ಯೋಚನೆ ಇಲ್ಲದೆ ನಿರ್ಜೀವತೆ ಇದ್ದ ತುಣುಕುಗಳಿಗೆ ಜೀವ ತುಂಬಿದಾಗಲೇ ಮಹಾಕಾವ್ಯವೂ ಹುಟ್ಟುವುದು. ಇತಿಹಾಸವೂ ಹುಟ್ಟುವುದು. ಅದೃಷ್ಟ ಹೇಗಾದರೂ ಇರಲಿ. ಸದ್ಯ ಈ ಮಗು ಬದುಕಲಿ! ಅಷ್ಟೇ. ಅಷ್ಟೇ ಅಲ್ಲ – ಹೀಗೆ ಬೆಳೆದ ಮಗುವೇ ರೂಕ್ಷ ರಾಕ್ಷಸನಂತೆ ವರ್ತಿಸಿ ಇತಿಹಾಸವನ್ನೇ ಗಾಸಿಗೊಳಿಸುವಾಗಲೂ, ಈ ಬೊಮ್ಮಟೆಯನ್ನು ತಾವು ತಮ್ಮೆಲ್ಲ ಪ್ರೀತಿಯನ್ನೂ ಸುರಿದು ಬೆಳೆಸಿದುದರ ಕುರಿತು ಇನಿತೂ ಪಶ್ಚಾತ್ತಾಪವಾಗದಿರಲಿ! ಮುಂದೇನು ನಡೆಯುತ್ತದೆ ಎಂದು ಅದೃಷ್ಟವನ್ನೇ ಕಾಣಬಲ್ಲ ವಿದ್ವಾಂಸರ ಜ್ಞಾನಕ್ಕೆ ಎದುರಾಗಿ ವ್ಯಾಸರು ಈ ಅಪಾರ ಹೃದಯವಂತಿಕೆಯನ್ನು ಮುಂದಿಡುವರು. ‘ಮಹಾಭಾರತ’ದಂಥ ‘ಮಿಥ್’ ಅದೃಷ್ಟದ ಕಾಣ್ಕೆಗೆ ವಾಸ್ತವವಾದಿಯಾಗಿ ಸ್ಪಂದಿಸುವುದಿಲ್ಲ. ಆಳವಾದ ಹೃದಯವಂತಿಕೆಯಿಂದ – ಮುಗ್ಧತೆಯಿಂದ ಸ್ಪಂದಿಸುವುದು. ಒಳ್ಳೆಯ ಕಲೆಗೆ ಮುಗ್ಧತೆಯ ಒಡನಾಟ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.