ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವವಿಖ್ಯಾತ ಮೈಸೂರು ದಸರಾ| ರಾಜ ಪಥದಲ್ಲಿ ಸಾಗಲಿದೆ ‘ಕಲೋತ್ಸಾಹ’

ನಾಡಿನ ಕಲಾ ಶ್ರೀಮಂತಿಕೆಯನ್ನು ವಿಶ್ವದಾದ್ಯಂತ ಪರಿಚಯಿಸಲು ಸಿದ್ಧತೆ
Published : 8 ಅಕ್ಟೋಬರ್ 2024, 4:59 IST
Last Updated : 8 ಅಕ್ಟೋಬರ್ 2024, 4:59 IST
ಫಾಲೋ ಮಾಡಿ
Comments

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆ  (ಜಂಬೂಸವಾರಿ)ಗೆ ಮೆರುಗು ನೀಡಿ, ‘ರಾಜ ಮಾರ್ಗ’ದಲ್ಲಿ ಕಲಾ ಶ್ರೀಮಂತಿಕೆ ಕಂಗೊಳಿಸುವಂತೆ ಮಾಡಲು ಸಾಂಸ್ಕೃತಿಕ ಕಲಾತಂಡಗಳನ್ನು ಸಜ್ಜುಗೊಳಿಸಲಾಗುತ್ತಿದೆ. 

ಅಂಬಾವಿಲಾಸ ಅರಮನೆ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ನಡೆಯುವ ಮೆರವಣಿಗೆಯಲ್ಲಿ ಆಕರ್ಷಕ ಹಾಗೂ ಸಾಂಪ್ರದಾಯಿಕ ದಿರಿಸಿನಲ್ಲಿ ಪ್ರತಿಭೆ ಪ್ರದರ್ಶಿಸುತ್ತಾ ಸಾಗುವ ಕಲಾತಂಡಗಳನ್ನು ವೀಕ್ಷಿಸುವುದು ಕಣ್ಣಿಗೆ ಹಬ್ಬ. ಸುಡು ಬಿಸಿಲಿನಲ್ಲೂ ಐದು ಕಿ.ಮೀ.ಗೂ ಹೆಚ್ಚು ದೂರದವರೆಗೆ ಉತ್ಸಾಹದಿಂದಲೇ ಕಲಾವಿದರು ಪಾಲ್ಗೊಳ್ಳುತ್ತಾರೆ. ಸಾರ್ವಜನಿಕರು, ರಾಜ್ಯದ ಎಲ್ಲ ಪ್ರದೇಶಗಳ ಕಲಾಪ್ರಾಕಾರಗಳನ್ನೂ ವೀಕ್ಷಿಸಲು ಅನುವಾಗುವಂತೆ ಮೆರವಣಿಗೆ ಉಪ ಸಮಿತಿಯಿಂದ ವಿನ್ಯಾಸಗೊಳಿಸಲಾಗುತ್ತಿದೆ.

ಅ.12ರಂದು ಮಧ್ಯಾಹ್ನ 1.41ರಿಂದ 2.10ರವರೆಗೆ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಿದ ಬಳಿಕ ಕಲಾತಂಡಗಳು ‘ರಾಜಪಥ’ಕ್ಕೆ ಕಲೋತ್ಸಾಹ ತುಂಬಲಿವೆ.

ವೈವಿಧ್ಯಮಯ: ನಂದಿಧ್ವಜ, ನಾದಸ್ವರ, ವೀರಗಾಸೆ, ಪುರವಂತಿಕೆ, ಕೊಂಬುಕಹಳೆ, ಕಂಸಾಳೆ, ಕೀಲುಕುದುರೆ, ಕೋಲಾಟ, ಚಿಟ್ ಮೇಳ, ಕಣಿ ವಾದನ, ಹೂವಿನ ನೃತ್ಯ, ಹೆಜ್ಜೆ ಮೇಳ, ತಮಟೆ ನಗಾರಿ, ಹಲಗೆ ಮೇಳ, ಯಕ್ಷಗಾನ ಬೊಂಬೆಗಳು ಮೊದಲಾದವು ಕಲಾ ಸೊಬಗನ್ನು ಪರಿಚಯಿಸಲಿವೆ. ಕಹಳೆಗಳು ಮೊಳಗಲಿವೆ. ಡೊಳ್ಳಿನ ಸದ್ದು ಆವರಣದ ತುಂಬಲಿದೆ. ವಿಶೇಷ ಮತ್ತು ವಿಚಿತ್ರ ವೇಷಧಾರಿಗಳು ಮೆರುಗು ನೀಡಲಿದ್ದಾರೆ.

ಚಿನ್ನಿಕೋಲು, ಗೇರ ನೃತ್ಯ, ಜಡೆ ಕೋಲಾಟ, ಕೀಲುಕುದುರೆ, ಗಿರಿಜನ ನೃತ್ಯ, ಬೇಡರ ವೇಷ, ನವಿಲು ನೃತ್ಯ, ಹಗಲು ವೇಷ, ಕರಡಿ ಮಜಲು, ಕೋಳಿ ನೃತ್ಯ, ರಾಕ್ಷಸ ವೇಷ, ಸೋಮನ ಕುಣಿತ ಮೊದಲಾದವು ಪಾಲ್ಗೊಳ್ಳಲಿವೆ. ಪೊಲೀಸ್ ಬ್ಯಾಂಡ್‌ ಕೂಡ ಸಾಗಲಿದೆ.

52 ಕಲಾತಂಡ: ‘ಈ ಬಾರಿಯ ಜಂಬೂಸವಾರಿ ಮೆರವಣಿಗೆ 52 ಕಲಾ ಪ್ರಾಕಾರಗಳ 92 ತಂಡಗಳು ಆಯ್ಕೆಯಾಗಿವೆ. ಕಲೆಯು ಯಾವ ಪ್ರದೇಶದಲ್ಲಿ ಜನಜನಿತವೋ ಅಲ್ಲಿನ ತಂಡಗಳನ್ನೇ ಕರೆಸಲಾಗುತ್ತಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್‌ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಕಂಸಾಳೆಯನ್ನು ಮೈಸೂರು, ಚಿಟ್ ಮೇಳದವರನ್ನು ಚಿಕ್ಕಮಗಳೂರು ಅಥವಾ ಹಾಸನ, ಕೊಡವರ ನೃತ್ಯ ತಂಡವನ್ನು ಕೊಡಗು ಜಿಲ್ಲೆಯಿಂದಲೇ, ಕಂಗೀಲು ನೃತ್ಯದವರನ್ನು ದಕ್ಷಿಣ ಕನ್ನಡ ಜಿಲ್ಲೆ, ಕರಗದ ತಂಡವನ್ನು ರಾಮನಗರ ಅಥವಾ ಬೆಂಗಳೂರು, ಕರಡಿ ಮಜಲು ಕಲಾವಿದರನ್ನು ಬಾಗಲಕೋಟೆ ಅಥವಾ ಗದಗ, ಕುಣಬಿ ನೃತ್ಯಗಾರರನ್ನು ಉತ್ತರಕನ್ನಡ ಅಥವಾ ಉಡುಪಿ ಹೀಗೆ... ಆಯಾ ಭಾಗದ ಕಲಾವಿದರನ್ನೇ ಕರೆಸಲಾಗುತ್ತಿದೆ. ಅಲ್ಲೇ ಅಭ್ಯಾಸ ಮಾಡುತ್ತಿರುವವರಾದರೆ ನೈಜ ಕಲೆಯ್ನು ಪ್ರದರ್ಶಿಸುತ್ತಾರೆ. ಅದನ್ನು ಜನರಿಗೆ ಪರಿಚಯಿಸುವ ಉದ್ದೇಶ ನಮ್ಮದು’ ಎನ್ನುತ್ತಾರೆ ಅವರು.

‘ಹಿಂದಿನ ದಿನವೇ ಕಲಾವಿದರು ಬಂದು ತಲುಪಲಿದ್ದು, ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುವುದು. ಉಪಾಹಾರ ಹಾಗೂ ಊಟವನ್ನೂ ಒದಗಿಸಲಾಗುವುದು. ಮೆರವಣಿಗೆ ಮುಗಿದ ನಂತರ, ಬನ್ನಿಮಂಟಪದಿಂದ ಅವರನ್ನು ‍ಪರಿಕರಗಳೊಂದಿಗೆ ಕರೆತರಲು ಬಸ್, ಲಾರಿ ಮೊದಲಾದ ವಾಹನಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಅ.12ರಂದು ಜಂಬೂಸವಾರಿ ಮೆರವಣಿಗೆ ರಾಜ್ಯದ ಕಲಾ ಪರಂಪರೆ ಬಿಂಬಿಸಲಿರುವ ತಂಡಗಳು ಗೌರವ ಸಂಭಾವನೆಯಲ್ಲಿ ಹೆಚ್ಚಳವಿಲ್ಲ!

ಪ್ರತಿ ಕಲಾವಿದರಿಗೆ ಗೌರವ ಸಂಭಾವನೆಯಾಗಿ ₹ 1750 ಹಾಗೂ ಪ್ರಯಾಣದ ವೆಚ್ಚವನ್ನು ಕೊಡಲಾಗುವುದು. ಇದನ್ನು ಹೆಚ್ಚಿಸುವ ಪ್ರಸ್ತಾವ ಈ ಬಾರಿ ಇಲ್ಲ
ಎಂ.ಡಿ. ಸುದರ್ಶನ್‌ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ವೇದಿಕೆಯಲ್ಲಿ ಹಾಡುವ ನರ್ತಿಸುವವರಿಗೆ ಹೆಚ್ಚಿನ ಗೌರವ ಸಂಭಾವನೆ ಕೊಡಲಾಗುತ್ತದೆ. ಬಿಸಿಲಿನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಕಲಾವಿದರ ಬಗ್ಗೆ ತಾರತಮ್ಯ ತೋರಲಾಗುತ್ತಿದೆ
ಉಡಿಗಾಲ ಮಹದೇವಪ್ಪ ಅಧ್ಯಕ್ಷ ಮೈಸೂರು ಚಾಮರಾಜನಗರ ಮಂಡ್ಯ ಜಿಲ್ಲೆಗಳ ಜಾನಪದ ಕಲಾವಿದರ ಒಕ್ಕೂಟ

ಸಿಬ್ಬಂದಿಗೆ ‘ವಿಶೇಷ ಪೋಷಾಕು’ ಮೆರವಣಿಗೆಗೆ ಮಹಾರಾಜರ ಕಾಲದ ಗತವೈಭವದ ನೋಟ ನೀಡುವ ಉದ್ದೇಶದಿಂದ ಸಿಬ್ಬಂದಿಯು ಈ ಬಾರಿಯೂ ವಿಶೇಷ ಪೋಷಾಕು (ಸೆರೆಮೊನಿ ಡ್ರೆಸ್) ಧರಿಸಿ ಪಾಲ್ಗೊಳ್ಳಲಿದ್ದಾರೆ. ವಿಶೇಷ ಸಮವಸ್ತ್ರ ಚಿಹ್ನೆ ಹಾಗೂ ಪೇಟದೊಂದಿಗೆ ಕಂಗೊಳಿಸಲಿದ್ದಾರೆ. ಪೊಲೀಸರು ಮೊದಲಾದ ನಿಯೋಜಿತ ಸಿಬ್ಬಂದಿಗೆ ಸಮವಸ್ತ್ರ (ಮಹಾರಾಜರ ಕಾಲದಲ್ಲಿನ ಮೆರವಣಿಗೆಯಲ್ಲಿ ಧರಿಸುತ್ತಿದ್ದಂತೆ)ವನ್ನು ಅರಮನೆ ಮಂಡಳಿಯಿಂದ ನೀಡಲಾಗುತ್ತಿದೆ. 120 ಮಂದಿ ರಾಜಲಾಂಛನಗಳ ಜೊತೆಗೆ ಅರಮನೆ ಪೋಷಾಕಿನಲ್ಲಿ ಭಾಗವಹಿಸಲಿದ್ದಾರೆ.

ಗೌರವ ಸಂಭಾವನೆ: ಸ್ಪಂದಿಸದ ಸರ್ಕಾರ! ಬಿಸಿಲಿನಲ್ಲಿ ಮೆರವಣಿಗೆಯಲ್ಲಿ ಸಾಗುತ್ತಾ ಕಾರ್ಯಕ್ರಮ ನೀಡುವ ಜಾನಪದ ಕಲಾವಿದರಿಗೆ ಗೌರವ ಸಂಭಾವನೆಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆಗೆ ಸರ್ಕಾರದಿಂದ ಸ್ಪಂದನೆ ದೊರೆತಿಲ್ಲ. ‘ಜಾನಪದ ಕಲಾವಿದರಿಗೆ ₹1750 ಗೌರವ ಸಂಭಾವನೆ ನಿಗದಿಪಡಿಸಲಾಗಿದೆ. ವೇಷ ಭೂಷಣ ಜಾನಪದ ಸಾಮಗ್ರಿ ಹೊತ್ತು ಬಾಡಿಗೆ ವಾಹನದಲ್ಲಿ ಬರುವ ನಮಗೆ ಉತ್ತಮ ವಸತಿ ಸೌಲಭ್ಯ ಕಲ್ಪಿಸಬೇಕು. ತಲಾ ಕನಿಷ್ಠ ₹5000 ಗೌರವ ಸಂಭಾವನೆ ನೀಡಬೇಕು’ ಎಂದು ಮೈಸೂರು ಚಾಮರಾಜನಗರ ಮಂಡ್ಯ ಜಿಲ್ಲೆಗಳ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಉಡಿಗಾಲ ಮಹದೇವಪ್ಪ ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT