ಹಿಮವಂತ ಪುರೋಹಿತನಾದ ಗರ್ಗಮುನಿಯಿಂದ ಲಗ್ನಪತ್ರಿಕೆ ಬರೆಸಿದ. ಲಗ್ನಪತ್ರಿಕೆಯನ್ನು ಶಿವನಿಗೆ ತನ್ನ ದೂತರ ಮೂಲಕ ಕಳುಹಿಸಿಕೊಟ್ಟ. ಜೊತೆಗೆ ಅನೇಕ ಬಗೆಯ ಮಂಗಳದ್ರವ್ಯಗಳನ್ನೂ ಕಳುಹಿಸಿದ. ಹಿಮವಂತನ ದೂತರು ಲಗ್ನಪತ್ರಿಕೆಯನ್ನು ಸಮರ್ಪಿಸಿದರು. ಪ್ರತಿಯಾಗಿ ಶಿವನು ಸಹ ಆ ದೂತರನ್ನು ಯೋಗ್ಯರೀತಿಯಲ್ಲಿ ಸನ್ಮಾನಿಸಿ ಕಳುಹಿಸಿದ. ಹಿಮವಂತ ನಾನಾ ದೇಶವಿದೇಶಗಳಲ್ಲಿರುವ ತನ್ನ ಬಂಧುಗಳಿಗೆ ವಿವಾಹ ಆಹ್ವಾನವನ್ನು ಕಳುಹಿಸಿದ.

ಮದುವೆಗೆ ಯೋಗ್ಯವಾದಂತಹ ಶಾಸ್ತ್ರಸಂಬಂಧಿತ ಸಾಮಗ್ರಿ ಜೊತೆಗೆ ಭಕ್ಷ್ಯಭೋಜನಕ್ಕೆ ಬೇಕಾದ ಆಹಾರಪದಾರ್ಥಗಳನ್ನು ಯಥೇಚ್ಛವಾಗಿ ಸಂಗ್ರಹಿಸಿದ. ಅಕ್ಕಿ, ಅವಲಕ್ಕಿ, ಬೆಲ್ಲ, ಸಕ್ಕರೆ, ಉಪ್ಪು ಮತ್ತಿತರ ಆಹಾರವೆಲ್ಲವನ್ನು ಬೆಟ್ಟದಂತೆ ರಾಶಿರಾಶಿಯಾಗಿ ಸಂಗ್ರಹಿಸಿಟ್ಟ. ಹಾಲು, ತುಪ್ಪ, ಮೊಸರುಗಳ ಸಂಗ್ರಹಕ್ಕೆ ಆಳ ಬಾವಿಯನ್ನೇ ತೋಡಿಸಿದ. ಅಕ್ಕಿಹಿಟ್ಟು, ಗೋಧಿಹಿಟ್ಟು ಸೇರಿದಂತೆ ಹಲವು ಬಗೆಯ ಹಿಟ್ಟುಗಳನ್ನು ಸಂಗ್ರಹಿಸಿಟ್ಟ. ಅನೇಕ ಬಗೆಯ ಸಿಹಿತಿನಿಸುಗಳು, ಚಕ್ಕುಲಿ, ಕೋಡುಬಳೆಯಂಥ ಖಾರತಿಂಡಿಗಳು, ರುಚಿರುಚಿಯಾದ ಪಕ್ವಾನ್ನಗಳೆಲ್ಲವನ್ನು ಸಾಲಾಗಿ ಜೋಡಿಸಿಟ್ಟ. ಆಗ ತಾನೇ ಕಾಸಿದ ಹಸುವಿನ ತುಪ್ಪ, ದ್ರಾಕ್ಷಾರಸ, ಅಮೃತರಸ, ಕಬ್ಬಿನ ಹಾಲು ಮತ್ತಿತರ ಪಾನೀಯಗಳನ್ನು ಅನೇಕ ಬಾವಿಗಳಲ್ಲಿ ತುಂಬಿಸಿಟ್ಟ.

ಶಿವನ ಪ್ರಮಥಗಣಗಳಿಗೆ ಮತ್ತು ದೇವತೆಗಳಿಗೆ ಹಿತವಾದಂತಹ ಅನೇಕ ವ್ಯಂಜನಗಳನ್ನು ಮಾಡಿಸಿದ. ಅಗ್ನಿಯಂತೆ ಪ್ರಕಾಶಿಸುವ ಬೆಲೆಬಾಳುವ ವಸ್ತ್ರಗಳನ್ನು ತಂದ. ಪರ್ವತಸ್ತ್ರೀಯರು ಪಾರ್ವತಿಗೆ ಮಂಗಳಸಂಸ್ಕಾರ ಮಾಡಿ, ಆಕೆಯನ್ನು ಆಭರಣಗಳಿಂದ ಅಲಂಕಾರಗೊಳಿಸಿದರು.

ಶಿವ-ಪಾರ್ವತಿಯರ ವಿವಾಹಕ್ಕೆ ಅತಿಥಿಗಳಾಗಿ ದೇವತೆಗಳ ವಾಸಸ್ಥಾನವಾದ ಸುಮೇರು ದಿವ್ಯರೂಪವನ್ನು ಧರಿಸಿ ಬಂದರೆ, ಮಂದರಗಿರಿ ಕಾಣಿಕೆಗಳನ್ನು ತೆಗೆದುಕೊಂಡು ಪತ್ನೀಪುತ್ರರೊಡನೆ ಹಿಮಾಲಯಕ್ಕೆ ಬಂದ. ಅಸ್ತಾಚಲಗಿರಿ ಮರ್ಯಾದಾದ್ರವ್ಯಗಳೊಂದಿಗೆ, ಉದಯಗಿರಿ ರತ್ನ-ಮಣಿಗಳನ್ನು, ಮಲಯಗಿರಿಯು ಅನೇಕ ಸೇನೆಯೊಡನೆ, ದರ್ದುರನೆಂಬ ಗಿರಿಯು ದಿವ್ಯರೂಪವುಳ್ಳವನಾಗಿ ಹೆಂಡತಿಯೊಡನೆ ವಿವಾಹಕ್ಕೆ ಆಗಮಿಸಿದ. ನಿಷದಗಿರಿಯು ಪತ್ನಿಪುತ್ರರೊಡನೆ, ಗಂಧಮಾನಗಿರಿ ಮತ್ತು ಕರವೀರಗಿರಿಗಳು ಮಹಾವೈಭವದೊಡನೆ ಹಿಮವಂತನ ಮನೆಗೆ ಬಂದರು. ಮಹೇಂದ್ರನೆಂಬ ಕುಲಪರ್ವತ, ಪಾರಿಯಾತ್ರಕುಲಗಿರಿ, ಪರ್ವತೋತ್ತಮರಾದ ವಿಂಧ್ಯಗಿರಿ-ಕ್ರೌಂಚಗಿರಿ, ಪುರೋಷತ್ತಮಗಿರಿ, ನೀಲಗಿರಿ, ತ್ರಿಕೂಟಗಿರಿ, ಚಿತ್ರಕೂಟಗಿರಿ, ವೆಂಕಟಗಿರಿ, ಶ್ರೀಗಿರಿ, ಸೋಕಾಮುಖೀಗಿರಿ, ನಾರದಗಿರಿ, ಕಾಲಂಜಮಹಾಗಿರಿ, ಕೈಲಾಸಗಿರಿಯ ಜೊತೆಗೆ, ದ್ವೀಪಾಂತರಗಳಲ್ಲಿರುವ ಗಿರಿಗಳೆಲ್ಲರೂ ದಿವ್ಯರೂಪ ಧರಿಸಿ ಬಂದರು.

ಗಿರಿಗಳಲ್ಲದೆ, ಶೋಣಭದ್ರ ಮೊದಲಾದ ನದಿಗಳೂ ದಿವ್ಯರೂಪಗಳನ್ನು ಧರಿಸಿ ಮದುವೆಗೆ ಬಂದವು. ಗೋದಾವರೀ, ಯಮುನಾ, ಸರಸ್ವತೀ, ವೇಣಿಕಾ, ಗಂಗಾ, ರುದ್ರನ ಕುಮಾರಿಯಾದ ನರ್ಮದೆಯು ಗಿರಿಜಾ-ಶಿವರ ಮದುವೆಗೆ ಆಗಮಿಸಿದರು. ಅಸಂಖ್ಯಾತ ಅತಿಥಿಗಳು ಹಿಮವಂತನ ರಾಜಧಾನಿಗೆ ಬಂದಿದ್ದರಿಂದ ಮಹಾಸುಂದರ ನಗರಿ ಮದುವೆ ದಿಬ್ಬಣದಿಂದ ತುಂಬಿಹೋಯಿತು. ನಗರದ ನೆಮನೆಗಳಲ್ಲಿ ತೋರಣಧ್ವಜಗಳು ಎತ್ತರವಾಗಿ ರಾರಾಜಿಸಿದವು. ಮನೆಗಳ ಮೇಲ್ಕಟ್ಟು ಸೂರ್ಯಮಂಡಲವನ್ನು ಮುಟ್ಟುವಂತಿತ್ತು. ಹೀಗೆ ಹಿಮವಂತನ ರಾಜಧಾನಿ ಮಹಾವೈಭವದಿಂದ ಕಂಗೊಳಿಸುತ್ತಿತ್ತು. ಮದುವೆಗೆ ಬಂದ ಅತಿಥಿಗಳೆಲ್ಲರಿಗೂ ಯೋಗ್ಯವಾದಂತಹ ಆತಿಥ್ಯವನ್ನು ಪ್ರೀತಿ ಗೌರವ, ಆದರದಿಂದ ಮಾಡಿದ ಹಿಮವಂತ.

ಇಲ್ಲಿಗೆ ಶ್ರೀ ಶಿವಮಹಾಪುರಾಣದಲ್ಲಿ ಎರಡನೆ ಸಂಹಿತೆಯಾದ ರುದ್ರಸಂಹಿತೆಯ ಮೂರನೇ ಖಂಡವಾದ ಪಾರ್ವತೀಖಂಡದಲ್ಲಿ ಮೂವತ್ತೇಳನೆಯ ಅಧ್ಯಾಯ ಮುಗಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.