ಈಗ ಜಗತ್ತಿನೆಲ್ಲೆಡೆ ಒಂದೇ ಮಾತು; ಯಾರನ್ನು ಮಾತನಾಡಿಸಿದರೂ ಅಥವಾ ಯಾರು ಮಾತನಾಡಿದರೂ ಒಂದೇ ಮಾತು; ಮಾತಿನ ಆರಂಭವೋ ಅಥವಾ ಮುಕ್ತಾಯವೋ ಒಂದೇ ಮಾತು: ಕೊರೊನಾ, ಕೊರೊನಾ...

ಜಗತ್ತು ಈಗ ಎದುರಿಸುತ್ತಿರುವ ಕೊರೊನಾವೈರಸ್‌ನ ದಾಳಿಯಿಂದ ಎದುರಾಗಿರುವ ಪ್ರಕ್ಷುಬ್ಧತೆಯ ನಡುವೆಯೇ ಬುದ್ಧಜಯಂತಿ ಬಂದಿದೆ. ಬುದ್ಧನ ಕಾಣ್ಕೆ ನಮ್ಮ ಈಗಿನ ಆಘಾತದ ನಡುವೆಯೂ ನೆಮ್ಮದಿಯನ್ನಾಗಲೀ ಸಾಂತ್ವನವನ್ನಾಗಲೀ ಕೊಟ್ಟೀತೆ?

ಸಂಬೋಧಿಯನ್ನು ಪಡೆದ ಬುದ್ಧ ಅ ತಾನು ಕಂಡ ದರ್ಶನವನ್ನು ಜಗತ್ತಿಗೂ ಬೋಧಿಸಿದನಷ್ಟೆ! ಹೀಗೆ ಅವನು ಮೊದಲ ಬಾರಿಗೆ ಉಪದೇಶಿಸಿದ ಸಂದರ್ಭವನ್ನು ‘ಧರ್ಮಚಕ್ರಪ್ರವರ್ತನ’ ಎಂದು ಕರೆಯಲಾಗಿದೆ. ಈ ವಿವರಗಳು ‘ಸಂಯುತ್ತನಿಕಾಯ’ದಲ್ಲಿ ಮೂಡಿವೆ. ಅದರ ಸಂಗ್ರಹವನ್ನು ಇಲ್ಲಿ ನೋಡಬಹುದು:

‘ದುಃಖ ಎಂಬುದು ಆರ್ಯಸತ್ಯ (ಇದು ಮೊದಲನೆಯ ಆರ್ಯಸತ್ಯ). ಜನನ ದುಃಖ, ಮುಪ್ಪು ದುಃಖ, ರೋಗ ದುಃಖ, ಸಾವು ದುಃಖ; ನಮಗೆ ಅಪ್ರಿಯವಾದವು ದುಃಖ, ನಮಗೆ ಇಷ್ಟವಾದುದು ದೊರಕದಿದ್ದಾಗ ದುಃಖ.

‘ದುಃಖಸಮುದಯ ಇನ್ನೊಂದು ಆರ್ಯಸತ್ಯ (ಇದು ಎರಡನೆಯದ್ದು). ದುಃಖಕ್ಕೆ ಮೂಲಕಾರಣವಾದಂಥವು ಇವು; ನಮ್ಮ ಹುಟ್ಟಿಗೂ ನರಳಾಟಕ್ಕೂ ಇಷ್ಟಾನಿಷ್ಟಗಳಿಗೂ ಕಾರಣವಾದಂಥವು; ಇವುಗಳ ಮೂಲವೇ ತೃಷ್ಣಾ; ಎಂದರೆ ಬಯಕೆ. ಇವೇ ಕಾಮತೃಷ್ಣಾ, ಭವತೃಷ್ಣಾ, ವಿಭವತೃಷ್ಣಾ.

‘ದುಃಖನಿರೋಧ ಎಂಬುದು ಮತ್ತೊಂದು ಆರ್ಯಸತ್ಯ (ಮೂರನೆಯದು). ನಮ್ಮ ಬಯಕೆಗಳನ್ನು (ತೃಷ್ಣಾ) ನಿರೋಧಿಸಿ, ಎಂದರೆ ಅವುಗಳಿಂದ ಬಿಡಿಸಿಕೊಂಡು, ಅವುಗಳಿಗೆ ಆಶ್ರಯವನ್ನು ನೀಡದಿರುವುದು.

‘ದುಃಖನಿರೋಧಗಾಮಿನೀಪ್ರತಿಪದಾ. ಇದು ಕಡೆಯ ಆರ್ಯಸತ್ಯ (ನಾಲ್ಕನೆಯದು). ನಮಗೆ ಒದಗಿರುವ ದುಃಖಗಳಿಂದ ಬಿಡಿಸಿಕೊಳ್ಳಲು ನೆರವಾಗುವ ದಾರಿಗಳು; ಇವು ಎಂಟು – ಆರ್ಯ ಅಷ್ಟಾಂಗಿಕಮಾರ್ಗ. ಇವೇ: ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್, ಸಮ್ಯಕ್ ಕರ್ಮ, ಸಮ್ಯಗ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ್ ಸಮಾಧಿ.’

ಬುದ್ಧ ಉಪದೇಶಿಸಿರುವ ಈ ಆರ್ಯಸತ್ಯಗಳ ಬೆಳಕು ಎಲ್ಲ ಕಾಲದ ಕತ್ತಲೆಯನ್ನೂ ಕಳೆಯುವಂಥದ್ದು. ಈಗಿನ ಸಂದರ್ಭಕ್ಕೆ ಹೇಗೆ ಒದಗೀತು ಎನ್ನುವುದನ್ನು ನೋಡೋಣ.

ಈಗ ನಮ್ಮ ಮುಂದೆ ದುಃಖವೊಂದು ನಿಂತಿದೆ. ಅದೇ ಕೊರೊನಾ ವೈರಸ್‌ನ ಹರಡುವಿಕೆ. ಇದು ಮೊದಲನೆಯ ಆರ್ಯಸತ್ಯ. ಇದಕ್ಕೆ ಕಾರಣವೂ ಇದೆ; ಗ್ಲೋಬಲೈಸೇಷನ್, ನಮ್ಮ ಅಜ್ಞಾನ–ಅಹಂಕಾರ ಮುಂತಾದವು. ಇದು ಎರಡನೆಯ ಆರ್ಯಸತ್ಯ. ಈ ದುಃಖದಿಂದ ಬಿಡುಗಡೆಯನ್ನು ಪಡೆಯುವ ದಾರಿಯೂ ಉಂಟು: ಎಲ್ಲರೂ ಪರಸ್ಪರ ಅಂತರವನ್ನು ಕಾಪಾಡಿಕೊಳ್ಳುವುದು; ಲಾಕ್ ಡೌನ್‌ನ ನಿಯಮಗಳನ್ನು ಪಾಲಿಸುವುದು, ಅನವಶ್ಯಕವಾದ ಚಟುವಟಿಕೆಗಳಿಂದ ವಿಮುಖವಾಗುವುದು – ಹೀಗೆ ಇನ್ನೂ ಹಲವು. ಇದೇ ಮೂರನೆಯ ಆರ್ಯಸತ್ಯ. ಈ ದುಃಖದಿಂದ ಪಾರುಮಾಡುವಂಥ ಶಾಶ್ವತ ದಾರಿಗಳೂ ನಮ್ಮ ಮುಂದಿವೆ; ನಮ್ಮ ಒಟ್ಟು ಜೀವನವಿಧಾನವನ್ನೇ ಆತ್ಮಾವಲೋಕನಕ್ಕೆ ಒಳಪಡಿಸಿ, ಬದಲಿಸಿಕೊಳ್ಳಬೇಕಿದೆ. ನಮ್ಮ ದೃಷ್ಟಿ, ಸಂಕಲ್ಪ, ಮಾತು, ನಡತೆ, ಜೀವನಪೋಷಣೆ, ಚಟುವಟಿಕೆ, ಮನಸ್ಸಿನ ಕ್ರಿಯಾಶೀಲತೆ–ಏಕಾಗ್ರತೆ – ಇವೆಲ್ಲವನ್ನೂ ಒಳಿತಿನ ಕಡೆಗೆ ತೊಡಗಿಸಬೇಕು. ಇದೇ ದುಃಖದಿಂದ ನಮ್ಮನ್ನು ಬಿಡುಗಡೆಗೊಳಿಸಬಲ್ಲ ದಾರಿ. ಇದೇ ನಾಲ್ಕನೆಯ ಆರ್ಯಸತ್ಯ.

ಭಾರತೀಯ ದರ್ಶನಗಳ ವಿಶೇಷ ಎಂದರೆ ಅವು ನಿರ್ದಿಷ್ಟವಾಗಿ ಯಾವುದೋ ಒಂದು ಕಾಲ–ದೇಶದ ಸಮಸ್ಯೆಯನ್ನು ಕೇಂದ್ರವನ್ನಾಗಿಸಿಕೊಂಡು ಅನ್ವೇಷಣೆಗೆ ತೊಡಗುವುದಿಲ್ಲ; ಅದಕ್ಕಿಂತಲೂ ಮುಖ್ಯವಾಗಿ ಎಲ್ಲ ಕಾಲಕ್ಕೂ ಸಲ್ಲುವಂಥ ಪರಿಹಾರದ ಕಡೆಗೆ ಅದರ ಗಮನವಿರುತ್ತದೆ. ಎಲ್ಲ ಸಮಸ್ಯೆಗಳಿಗೂ ದುಃಖಗಳಿಗೂ ಮೂಲಕಾರಣ ಎಲ್ಲಿದೆ – ಎನ್ನುವುದನ್ನು ತಿಳಿಸಿಕೊಡುವುದು ಅದರ ಉದ್ದೇಶ. ಈ ನಿಲುವನ್ನು ಬೌದ್ಧದರ್ಶನದಲ್ಲೂ ವೇದಾಂತದರ್ಶನದಲ್ಲೂ ಸ್ಪಷ್ಟವಾಗಿ ಕಾಣಬಹುದಾಗಿದೆ.

ಇಂದು ಬುದ್ಧನ ದಾರ್ಶನಿಕತೆಯನ್ನು ತುಂಬ ಸಂಕುಚಿತವಾಗಿ ಅರ್ಥೈಸಲಾಗುತ್ತಿದೆ. ಅವನೊಬ್ಬ ಕೇವಲ ಸಾಮಾಜಿಕ ಹೋರಾಟಗಾರ ಎಂಬಂತೆ ಮಾತ್ರ ಹೆಚ್ಚಿನ ಸಂದರ್ಭಗಳಲ್ಲಿ ಚಿತ್ರಿಸಲಾಗುತ್ತಿದೆ. ಆದರೆ ಅದು ಅವನ ವಿಶಾಲ ದಾರ್ಶನಿಕತೆಯ ಅಡಿಪಾಯದ ಮೇಲೆ ನಿಂತಿದೆ; ಅವನು ಪ್ರತಿಪಾದಿಸಿ ಆರ್ಯಸತ್ಯಗಳು, ಅಷ್ಟಾಂಗಿಕಮಾರ್ಗ, ಪಂಚಶೀಲಗಳು, ತ್ರಿರತ್ನಗಳು – ಮುಂತಾದ ಕಾಣ್ಕೆಯ ಬೆಳಕಿನಲ್ಲಿ ಅವನ ಸಮಗ್ರತೆಯನ್ನು ಅರ್ಥಮಾಡಿಕೊಳ್ಳಬೇಕಿದೆ. ಮಾತ್ರವಲ್ಲ, ಪ್ರಜ್ಞೆಯೇ ನಿರ್ವಾಣವೇ ಸಂಬೋಧಿಯೇ ಕರುಣೆಯೇ ಬದುಕಿನ ದಿಟವಾದ ಗುರಿಯಾಗಿರತಕ್ಕದ್ದು ಎಂಬ ಅವನ ಉಪದೇಶವನ್ನೂ ಮರೆಯಬಾರದಷ್ಟೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.