ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ!

– ನಮ್ಮ ನಾಡಗೀತೆಯ ಆರಂಭದ ಈ ಸೊಲ್ಲುಗಳು ನಮ್ಮ ರಾಜ್ಯದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೂ ಪೂರ್ಣವಾಗಿ ಸಲ್ಲುವಂಥವೇ ಹೌದು. ಭಾರತೀಯ ಸಂಸ್ಕೃತಿಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಯಾಮಗಳು ಇಡಿಯ ಜಗತ್ತಿನಲ್ಲಿಯೇ ವಿಶಿಷ್ಟ ಸ್ಥಾನವನ್ನು ಪಡೆದಿವೆ. ಅಂತೆಯೇ ಕರ್ನಾಟಕದ ಧಾರ್ಮಿಕ–ಆಧ್ಯಾತ್ಮಿಕ ಪರಂಪರೆಗಳು ಭಾರತೀಯ ಸಂಸ್ಕೃತಿಯಲ್ಲೇ ವಿಶಿಷ್ಟ ಸ್ಥಾನವನ್ನು ಪಡೆದಿವೆ. ತಾಯಿ ಭಾರತಿಯ ಎಲ್ಲ ಗುಣಗಳನ್ನು ಅಳವಡಿಸಿಕೊಂಡು, ತನ್ನದೇ ರೀತಿಯ ಅಭಿವ್ಯಕ್ತಿಯ ಮಾದರಿಯನ್ನು ರೂಢಿಸಿಕೊಂಡು ಸಮಗ್ರವಾಗಿ ಬೆಳೆದವಳು ‘ಭಾರತ ಜನನಿಯ ತನುಜಾತೆಯಾದ ಕರ್ನಾಟಕ ಮಾತೆ.’

‘ಜನನಿಯ ಜೋಗುಳ ವೇದದ ಘೋಷ’ – ಇದು ನಾಡಗೀತೆಯಲ್ಲಿಯೇ ಬರುವ ಇನ್ನೊಂದು ಸೊಲ್ಲು; ಧ್ವನಿಪೂರ್ಣವಾದುದು. ಕೂಸು ತಾನು ಕೇಳುವ ಮೊದಲ ಮಾತು ತಾಯಿಯ ಜೋಗುಳವೇ ಹೌದು. ಹೆತ್ತತಾಯಿಯ ಆ ಜೋಗುಳ ಅದು ವೇದಕ್ಕೆ ಸಮ. ವೇದಪಠಣವೂ ಒಂದು ವಿಧದಲ್ಲಿ ಗಾಯನವೇ ಹೌದೆನ್ನಿ! ವೇದ ಎಂದರೆ ಅರಿವು. ಹೀಗಾಗಿ ನಾವು ಕೇಳುವ ಜೋಗುಳ ನಾವು ಮುಂದೆ ದಕ್ಕಿಸಿಕೊಳ್ಳಲಿರುವ ಎಲ್ಲ ಅರಿವಿಗೂ ಮೂಲಸ್ರೋತ. ನಾವು ಕೇಳುವ ನಮ್ಮ ತಾಯಿಯ ಜೋಗುಳದ ಭಾಷೆ ಕನ್ನಡ; ಅದು ಅರಿವಿನ ಭಾಷೆಯೂ ಹೌದು, ಆಧ್ಯಾತ್ಮಿಕತೆಯ ಭಾಷೆಯೂ ಹೌದು, ಆನಂದದ ಭಾಷೆಯೂ ಹೌದು. ಕನ್ನಡವೇ ನಮ್ಮ ಪಾಲಿಗೆ ವೇದ.

ವೇದಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ತುಂಬ ಮನ್ನಣೆಯಿದೆ. ಇಲ್ಲಿಯ ಅರಿವಿನ ಎಲ್ಲ ಮೂಲಗಳನ್ನೂ ವೇದದಲ್ಲಿಯೇ ಕಾಣುವುದುಂಟು. ಹೀಗೆಯೇ ಭಾರತೀಯ ಪ್ರಜ್ಞಾವಾಹಿನಿಯ ಎಲ್ಲ ಧಾರೆಗಳೂ ಕನ್ನಡದಲ್ಲಿ ಹರಿದಿವೆ; ಶ್ರುತಿಪರಂಪರೆಯ ಎಲ್ಲ ಭಾವಗಳೂ ಕನ್ನಡದ ಕಂಠದಲ್ಲಿ ಪ್ರತಿಧ್ವನಿತವಾಗಿವೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ನೆಲದ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಸಿದ್ಧಿ–ಸಾಧನೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಭಾರತೀಯ ಸಂಸ್ಕೃತಿಯ ಮಹಾವೃಕ್ಷಕ್ಕೆ ಕರ್ನಾಟಕಮಾತೆಯು ಸಂಸ್ಕೃತ ಮತ್ತು ಕನ್ನಡ – ಎರಡು ಬೊಗಸೆಗಳಲ್ಲೂ ನೀರುಣಿಸಿದ್ದಾಳೆ; ಆ ಮೂಲಕ ತನ್ನ ಹೆತ್ತತಾಯಿಯ ಋಣವನ್ನೂ ತೀರಿಸಿದ್ದಾಳೆ; ಮಾತ್ರವಲ್ಲ, ತನ್ನ ತಾಯಿ ಹೆಮ್ಮೆ ಪಡುವಂತೆ ಪ್ರಬುದ್ಧವಾಗಿ ಬೆಳೆದಿದ್ದಾಳೆ ಕೂಡ. ನಾಲ್ಕು ವೇದಗಳಿಗೂ ಭಾಷ್ಯ ರಚನೆಯಾದದ್ದು ಕರ್ನಾಟಕದಲ್ಲಿಯೇ. ಇದೊಂದು ಕೊಡುಗೆಯಿಂದಲೇ ಇಡೀ ವೇದಪರಂಪರೆ ಈ ನೆಲಕ್ಕೆ ಎಂದಿಗೂ ಕೃತಜ್ಞವಾಗಿರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ವಚನವಾಙ್ಮಯ, ದಾಸರ ಪದಗಳು, ಅನುಭಾವಿಗಳ ತತ್ತ್ವಪದಗಳು – ಉಪನಿಷತ್ ಪರಂಪರೆಯ ಎರಡು ಧಾರೆಗಳಾದ ಉಪಾಸನೆ (ಎಂದರೆ ಭಕ್ತಿ) ಮತ್ತು ಜ್ಞಾನಪರಂಪರೆಯನ್ನು ಎತ್ತಿಹಿಡಿದರೂ ಅಭಿವ್ಯಕ್ತಿಯಲ್ಲಿ ಮಾತ್ರ ಕನ್ನಡದ ವಿಶಿಷ್ಟತೆಯನ್ನು ಮೆರೆದಿವೆ. ಉಪನಿಷತ್ತಿನ ಕೊನೆಯ ಸಂದೇಶವೇ ‘ತ್ಯಾಗೇನೈಕೇ ಅಮೃತತ್ವ ಮಾನಷುಃ’ ಎಂಬ ಸೂತ್ರದಲ್ಲಿ ಅಡಕವಾಗಿದೆ ಎನ್ನಬಹುದು. ಈ ಆದರ್ಶವನ್ನು ಇಡಿಯ ಜಗತ್ತಿಗೇ ಕೂಗಿ ಹೇಳುವಂತೆ ಎತ್ತರದಲ್ಲಿ ನಿಂತಿರುವ ಗೊಮ್ಮಟೇಶ್ವರ ಈ ನೆಲದ ಆಧ್ಯಾತ್ಮಿಕ ಗುಡಿಯ ಶಿಖರವಲ್ಲದೆ ಮತ್ತೇನು? ಭಾರತೀಯ ಸಂಸ್ಕೃತಿಯ ವಿಶಿಷ್ಟತೆಯೇ ಏಕತೆಯಲ್ಲಿರುವ ಅನೇಕತೆ, ಅನೇಕತೆಯಲ್ಲಿರುವ ಏಕತೆ. ಈ ಭಾವಶ್ರೀಮಂತಿಕೆ ಕರ್ನಾಟಕದ ಪಾಲಿಗೆ ಶಾಸನವೇ ಆಗಿದೆ ಎನ್ನುವುದಕ್ಕೆ ನಿದರ್ಶನ ಬೇಲೂರಿನ ಈ ಶಾಸನಪದ್ಯ:

ಯಂ ಶೈವಾಸ್ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನಃ |

ಬೌದ್ಧಾಃ ಬುದ್ಧ ಇತಿ ಪ್ರಮಾಣಪಟವಃ ಕರ್ತೇತಿ ನೈಯಾಯಿಕಾಃ ||

ಅರ್ಹನ್ನಿತ್ಯಥ ಜೈನಶಾಸನರತಾಃ ಕರ್ಮೇತಿ ಮೀಮಾಂಸಕಾಃ |

ಸೋಯಂ ವೋ ವಿದಧಾತು ವಾಂಛಿತಫಲಂ ಶ್ರೀಕೇಶವೇಶಸ್ಸದಾ ||

ಇದರ ತಾತ್ಪರ್ಯ: ಒಂದೇ ಪರತತ್ತ್ವವನ್ನು ಬೇರೆ ಬೇರೆ ಮಾರ್ಗದಲ್ಲಿರುವ ಜಿಜ್ಞಾಸುಗಳ ಹಲವು ಹೆಸರುಗಳಿಂದ ಕರೆಯುತ್ತಾರೆ; ಶೈವರು ಶಿವನೆಂದೂ, ವೇದಾಂತಿಗಳು ಬ್ರಹ್ಮ ಎಂದೂ, ಬೌದ್ಧರು ಬುದ್ಧನೆಂದೂ, ನೈಯಾಯಿಕರು ಕರ್ತ ಎಂದೂ ಅರ್ಹತ್ ಎಂದು ಜೈನರೂ, ಕರ್ಮ ಎಂದು ಮೀಮಾಂಸಕರೂ ಕರೆಯುತ್ತಾರೆ. ಯಾರು ಯಾವ ಹೆಸರಿನಿಂದ ಕರೆದರೂ ಭಗವಂತ ಒಬ್ಬನೇ; ಆದುದರಿಂದ ಅವನು ಎಲ್ಲರ ಬಯಕೆಗಳನ್ನೂ ಪೂರೈಸುತ್ತಾನೆ.’

ಇಂಥದೊಂದು ವಿವೇಕ ಇಂದಿನ ಎಲ್ಲ ಧಾರ್ಮಿಕ ನಂಬಿಕೆ–ಸಂವಾದಗಳಿಗೆ ಅಡಿಪಾಯವಾಗಬೇಕಿದೆ. ಈ ವೈಶಾಲ್ಯಕ್ಕೆ ಶಾಸನರೂಪವನ್ನು ಈ ನೆಲ ಒದಗಿಸಿದೆ ಎನ್ನುವುದು ನಮ್ಮ ಹೆಮ್ಮೆ. ಇದೇ ಭಾವವನ್ನು ಮುಪ್ಪಿನ ಷಡಕ್ಷರಿಯ ಈ ಗೀತೆಯಲ್ಲೂ ನೋಡಬಹುದು:

ಅವರವರ ದರುಶನಕೆ, ಅವರವರ ವೇಷದಲಿ |

ಅವರವರಿಗೆಲ್ಲ ಗುರು ನೀನೊಬ್ಬನೇ ||

ಅವರವರ ಭಾವಕ್ಕೆ, ಅವರವರ ಪೂಜೆಗಂ |

ಅವರವರರಿಗೆಲ್ಲ ದೇವ ನೀನೊಬ್ಬನೇ ||

ಈ ಸಮಾನತೆ ಕೇವಲ ಸಂದೇಶದ ಮಟ್ಟಿಗೆ ಈ ನೆಲದಲ್ಲಿ ಕಾಣಿಸಿಕೊಂಡದ್ದಲ್ಲ; ಇದು ಈ ನೆಲದ ಜೀವಂತಿಕೆಯ ಗುಣವೇ ಹೌದು ಎನ್ನುವುದನ್ನು ನಾಡಗೀತೆಯ ಈ ಸೊಲ್ಲುಗಳು ಎತ್ತಿಹಿಡಿಯುತ್ತಿವೆ:

ಶಂಕರ ರಾಮಾನುಜ ವಿದ್ಯಾರಣ್ಯ |

ಬಸವೇಶ್ವರ ಮಧ್ವರ ದಿವ್ಯಾರಣ್ಯ||...

ಸರ್ವ ಜನಾಂಗದ ಶಾಂತಿಯ ತೋಟ...

ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ

ಇಷ್ಟೇ ಅಲ್ಲ, ಶಿಶುನಾಳ ಷರೀಫರಂಥವರು ಆಧ್ಯಾತ್ಮಿಕತೆಯ ಈ ಸೌಹಾರ್ದ ಪರಂಪರೆಯನ್ನು ಮುಂದುವರೆಸಿ, ಕ್ಷೋಭೆಗೊಂಡಿರುವ ಇಂದಿನ ಜಗತ್ತಿಗೆ ಲೋಕಗುರುಗಳಾಗಿ ಒದಗಿದ್ದಾರೆ ಎನ್ನುವುದು ಉತ್ಪ್ರೇಕ್ಷೆಯಾಗದು.

ಹೊಡೆದಾಟ ಜಗಳವು ಇಲ್ಲದೆ |

ಎಂದೂ ಮಂದಿಗೆ ಬಡತನ ಬಾರದೆ ||

ವಿಷವು ಬೆಂಕಿಯ ಭಯ ತೋರದೆ |

ನಮ್ಮ ಹಸನಾಗಿ ಬಾಳಿಸೊ ಕೈ ಬಿಡದೆ ||

ಇದು ನಮ್ಮ ಜಾನಪದರ ನಿತ್ಯಗೀತೆ. ಇಡಿಯ ಜಗತ್ತನ್ನೇ ಒಂದು ಮನೆ – ಎಂದು ಭಾವಿಸಿಕೊಂಡ ಹೃದಯವೈಶಾಲ್ಯ ಇಲ್ಲಿ ಎದ್ದು ಕಾಣುತ್ತದೆ. ‘ಸರ್ವೇ ಜನಾಃ ಸುಖಿವೋ ಭವಂತು’ ಎಂಬ ಸೂತ್ರದ ಕಾಣ್ಕೆ ಇಲ್ಲಿ ಹರಳುಗಟ್ಟಿದೆ. ಇದೇ ಈ ನೆಲದ ನಿತ್ಯದ ಪ್ರಾರ್ಥನೆ, ಧಾರ್ಮಿಕ ಆಚರಣೆ, ಅಧ್ಯಾತ್ಮದ ಅನುಸಂಧಾನ. ಈ ದರ್ಶನದ ಯೋಗ್ಯ ವಾರಸುದಾರರು ನಾವಾಗಬೇಕಷ್ಟೆ!

ಮೋಕ್ಷ

ಮೋಕ್ಷ ಎನ್ನುವುದು ನಮ್ಮ ಭಾವ–ಬುದ್ಧಿಗಳಲ್ಲಿ ಮೂಡಬೇಕಾದ ಅಂತರಂಗದ ಬೆಳಕು. ಅರಿವಿನ ಈ ಪಯಣದಲ್ಲಿ ಭಾಷೆ ಎನ್ನುವುದು ಮಾರ್ಗಸೂಚಿ ಇದ್ದಂತೆ; ಅದೇ ಕೊನೆ ಅಲ್ಲವಷ್ಟೆ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಶಾಸ್ತ್ರಕ್ಕೂ ಅನುಭವಕ್ಕೂ ಸಾಧನೆಗೂ ನಂಟನ್ನು ನೀಡಿದರೆ, ಅಧ್ಯಾತ್ಮದ ದಿಟವಾದ ಆತ್ಮವನ್ನೇ ಮರೆತುಬಿಡುವ ಸಂಭವವೇ ಹೆಚ್ಚು. ಈ ಸೂಕ್ಷ್ಮವನ್ನು ಮಹಲಿಂಗರಂಗ ಅನುಭವಾಮೃತದ ಈ ಪದ್ಯದಲ್ಲಿ ಸೊಗಸಾಗಿ ಕಾಣಿಸಿದ್ದಾನೆ:

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.