ತತ್ತ್ವಶಾಸ್ತ್ರ ನಮಗೆ ಏಕಾದರೂ ಬೇಕು?

ಈ ಪ್ರಶ್ನೆ ನಮ್ಮಲ್ಲಿ ಹಲವು ಸಲ ಎದುರಾಗಿರಬಹುದು.ಹಲವರಿಗೆ ಉತ್ತರ ಹೊಳೆಯದಿರಬಹುದು. ಹಲವರಿಗೆ ಉತ್ತರವೂ ಹೊಳೆದಿರಬಹುದು. ಆ ಉತ್ತರದಲ್ಲಿ ತತ್ತ್ವಶಾಸ್ತ್ರ ಬೇಡ ಎನ್ನುವುದೂ ಸೇರಿರಬಹುದು. ಆದರೆ ತತ್ತ್ವಶಾಸ್ತ್ರ ಎಂದರೇನು, ಅದು ಏಕೆ ಬೇಕು – ಎಂಬಂಥ ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ ಎಂಬುದೂ ದಿಟವೆನ್ನಿ!‘ತತ್ತ್ವಶಾಸ್ತ್ರ ಏಕೆ’ ಎಂಬ ಪ್ರಶ್ನೆ ನಮ್ಮಲ್ಲಿ ಕಾಡುತ್ತಿದೆ ಎಂದರೆ ನಾವಿನ್ನೂ ತತ್ತ್ವಜ್ಞಾನದ ಹಾದಿಯಲ್ಲಿ ನಡೆಯುತ್ತಿದ್ದೇವೆ ಎನ್ನುವುದಂತೂ ಸ್ಪಷ್ಟ.

ಒಂದಂತೂ ದಿಟ, ‘ತತ್ತ್ವಶಾಸ್ತ್ರ ಏನು, ಏಕೆ, ಬೇಕೆ’ – ಇಂಥ ಪ್ರಶ್ನೆಗಳು ಹುಟ್ಟುವ ಸಮಯವಂತೂ ನಮ್ಮ ಜೀವನದ ಜೀವಂತ ಸಂದರ್ಭಗಳೇ ಆಗಿರುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಜೀವನದ ಯಾವುದೋ ಕಷ್ಟದ ಸಂದರ್ಭದಲ್ಲಿ, ತೊಡಕಿನ ಸಂದರ್ಭದಲ್ಲಿ ಜೀವನದ ಬಗ್ಗೆ ಮೂಲಭೂತ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಒಂದು ಹಂತದಲ್ಲಿ ‘ಇಷ್ಟಕ್ಕೂ ಜೀವನ ಎಂದರೇನು’ ಎಂಬ ಪ್ರಶ್ನೆ ನಮ್ಮಲ್ಲಿ ಮೊಳೆಯಲು ತೊಡಗುತ್ತದೆ. ಇದು ತತ್ತ್ವಶಾಸ್ತ್ರದ ಕುರಿತ ಜಿಜ್ಞಾಸೆಯಲ್ಲಿ ನಾವು ಇದ್ದೇವೆ ಎನ್ನುವುದಕ್ಕೆ ಸೂಚನೆ.

‘ತತ್ತ್ವ’ ಎಂದರೆ ‘ಅದರತನ’ ಎಂದು ಅರ್ಥಮಾಡಲಾದೀತು; ಒಂದು ವಸ್ತು/ವಿಷಯದ ಸ್ವಭಾವ–ಲಕ್ಷಣಗಳ ವಿಶ್ಲೇಷಣೆಯೇ ತತ್ತ್ವಶಾಸ್ತ್ರ. ಹೀಗಾಗಿ ಜೀವನದ ಅರ್ಥವಂತಿಕೆಯ ಬಗ್ಗೆ ನಾವು ನಡೆಸುವ ಈ ಅವಲೋಕನ ಕೂಡ ತತ್ತ್ವಶಾಸ್ತ್ರವೇ ಎನಿಸಿಕೊಳ್ಳುತ್ತದೆ. ‘ಕಗ್ಗ’ದ ಆರಂಭದಲ್ಲೇ ಬರುವ ಪದ್ಯವನ್ನು ನೋಡಿ:

ಏನು ಜೀವನದರ್ಥ? ಏನು ಪ್ರಪಂಚಾರ್ಥ? l
ಏನು ಜೀವಪ್ರಪಂಚಗಳ ಸಂಬಂಧ? ll
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು? l
ಜ್ಞಾನ ಪ್ರಮಾಣವೇಂ? – ಮಂಕುತಿಮ್ಮ ll

ತತ್ತ್ವಜಿಜ್ಞಾಸೆ ಹುಟ್ಟುವ ಸಮಯವನ್ನು ಈ ಪದ್ಯ ಸೊಗಸಾಗಿ ಕಂಡರಿಸಿದೆ. ಜೀವನದ ಬಗ್ಗೆ ಹುಟ್ಟುವ ಪ್ರಶ್ನೆಯೇ ತತ್ತ್ವಶಾಸ್ತ್ರ ಹುಟ್ಟುವ ಸಮಯವೂ ಆಗಿರುತ್ತದೆ. ಪ್ರಶ್ನೆಗೂ ತತ್ತ್ವಶಾಸ್ತ್ರಕ್ಕೂ ನೇರ ಸಂಬಂಧವಿದೆ. ನಮ್ಮಲ್ಲಿ ಪ್ರಶ್ನೆ ಕೇಳುವ ಪ್ರವೃತ್ತಿ ಇರುವವರೆಗೂ ನಾವು ತತ್ತ್ವಶಾಸ್ತ್ರದ ವಿದ್ಯಾರ್ಥಿಗಳೇ, ತತ್ತ್ವಜಿಜ್ಞಾಸುಗಳೇ ಆಗಿರುತ್ತೇವೆ; ಇದರಲ್ಲಿ ಅನುಮಾನವಿಲ್ಲ. ಆದುದರಿಂದಲೇ ನಾವು ಪ್ರಶ್ನೆ ಕೇಳುವ ಸ್ವಭಾವವನ್ನು ಜೀವಂತವಾಗಿರಿಸಿಕೊಳ್ಳಬೇಕು. ನಮ್ಮ ಕಾಲದಲ್ಲಿ ಪ್ರಶ್ನೋತ್ತರ ಸಂವಾದಗಳ ಮೂಲಕ ತಾತ್ತ್ವಿಕ ಜಿಜ್ಞಾಸೆಯ ಶಕ್ತಿಯನ್ನೂ ಸೊಗಸನ್ನೂ ತೋರಿಸಿಕೊಟ್ಟ ಪ್ರಮುಖ ತತ್ತ್ವಜ್ಞರಲ್ಲಿ ಒಬ್ಬರುಜೆ. ಕೃಷ್ಣಮೂರ್ತಿ.

ಪ್ರಶ್ನೆಗೆ ಉತ್ತರ ಎಂದರೆ ‘ಪ್ರಶ್ನೆ ಎಂಬ ಉತ್ತರವೇ’ ಎಂದು ಉತ್ತರವಲ್ಲದ ಉತ್ತರವನ್ನು ಕೊಡುತ್ತಲೇ ನಮ್ಮ ಪ್ರಶ್ನೆಗೆ ನಮ್ಮಲ್ಲಿಯೇ ಉತ್ತರವನ್ನು ಜಿನುಗಿಸುತ್ತ, ಆ ಪ್ರಶ್ನೆಗಳ ಮೂಲಕವೇ ನಮ್ಮತನದ ಪರೀಕ್ಷೆ ನಡೆಸುತ್ತ, ಕೊನೆಗೆ ಪ್ರಶ್ನೆಯೇ ಇರದ ಉತ್ತರದ ಆ ದಡಕ್ಕೂ ಉತ್ತರವೇ ಇಲ್ಲದ ಪ್ರಶ್ನೆಯ ಈ ದಡಕ್ಕೂ ನಮ್ಮನ್ನು ನಿಲ್ಲಿಸುತ್ತ, ಪ್ರಶ್ನೆ-ಉತ್ತರಗಳ ಸೇತುವೆಯಾಗಿ ಅರಿವಿನ ಸಂಚಾರವನ್ನು ಉದ್ದೀಪನಗೊಳಿಸುವ ಜೆ. ಕೃಷ್ಣಮೂರ್ತಿ ಅವರ ‘ಪ್ರಶ್ನೋಪನಿಷತ್’ಗಳ ಸಂವಾದವೈಖರಿ ದಿಟವಾಗಿಯೂ ಅನುತ್ತರಸ್ಥಿತಿಯೇ ಹೌದು....

ಇಂದು ನಾವು ಪ್ರಶ್ನೆಯನ್ನು ಮಾಡುವ-ಸ್ವೀಕರಿಸುವ ಮನೋಭಾವವನ್ನೇ ಕಳೆದುಕೊಳ್ಳುತ್ತಿದ್ದೇವೆ. ಈ ವಾತಾವರಣದಲ್ಲಿ ಅವರ ಈ ಮಾತುಗಳು ಮನನೀಯ:

Doubt is a precious ointment;
Though it burns, it shall heal greatly.

ಹೌದು, ಸಂದೇಹ ಎನ್ನುವುದು ಬೆಲೆಬಾಳುವ ಮುಲಾಮು; ಅದು ದಹಿಸುತ್ತದೆ, ಆದರೆ ಅದರ ಉಪಶಮನದ ಗುಣವೂ ದೊಡ್ಡದೆನ್ನಿ!

ಇಂದು ಜಗತ್ತನ್ನು ಮಹಾಮಾರಿಯೊಂದು ಆವರಿಸಿದೆ. ಆದರೂ ಜನರಿಗೆ ಅದರ ಪರಿವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಕಾರಣವಾದರೂ ಏನು? ಸೋಂಕಿನ ಹರಡುವಿಕೆಗೆ ಕಾರಣಗಳಾದರೂ ಏನು? ಸಂಯಮದಿಂದ ಇರುವಂತೆ ಮಾಡಿಕೊಳ್ಳುವ ವಿನಂತಿಗಳನ್ನು ಜನರು ಏಕಾದರೂ ಕೇಳಿಸಿಕೊಳ್ಳುತ್ತಿಲ್ಲ? ಜನರ ನಡುವೆ, ಸಮುದಾಯಗಳ ನಡುವೆ, ದೇಶಗಳ ನಡುವೆ ಸಂವಹನವೇ ಸಾಧ್ಯವಾಗದ ಪರಿಸ್ಥಿತಿಗೆ ಕಾರಣಗಳೇನು?

ಇಂಥ ಸಂದೇಹಗಳು, ಪ್ರಶ್ನೆಗಳು ನಮ್ಮಲ್ಲೂ ಮೂಡಿಕೊಳ್ಳುತ್ತಿದ್ದಿರಬಹುದು. ಇವನ್ನು ಗಂಭೀರವಾಗಿ ಸ್ವೀಕರಿಸಿ, ಮನನ ಮಾಡುತ್ತ ಸಾಗಿದರೆ, ನಮ್ಮೊಳಗಿರುವ ತತ್ತ್ವಜಿಜ್ಞಾಸು ಎಚ್ಚರಗೊಳ್ಳುವುದು ಖಂಡಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.