ಕಾಲ ಕಳೆದಂತೆ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ. ಸಂಬಂಧಗಳ ಸಡಿಲಿಕೆಯಿಂದ ಮನೆ-ಮನಗಳಲ್ಲಿ ಕ್ಷೋಭೆ ಆವರಿಸುತ್ತಿದೆ. ಹಿಂದೆಲ್ಲಾ ಸಂಬಂಧಗಳಿಗೆ ಬೆಲೆ ಕೊಡದವರು ಮನುಷ್ಯರೇ ಅಲ್ಲ ಅನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ ಇಂದು ಸಂಬಂಧಗಳಿಗೆ ಬೆಲೆ ಕೊಡುವುದಿರಲಿ, ಅವುಗಳಿಗೆ ಬೆಲೆಯೇ ಇಲ್ಲದಂಥ ದುಃಸ್ಥಿತಿ ನಿರ್ಮಾಣವಾಗುತ್ತಿದೆ. ಕೊಟ್ಟು-ತೆಗೆದುಕೊಳ್ಳುವ ವ್ಯಾಪಾರ-ವ್ಯವಹಾರಕ್ಕಷ್ಟೆ ಮಾನವೀಯ ಸಂಬಂಧಗಳು ಸೀಮಿತವಾಗುತ್ತಿರುವುದು ಆತಂಕಕಾರಿ ವಿಷಯ. ಮನುಷ್ಯ ಸಂಬಂಧಗಳು ಎಲ್ಲ ಮೌಲ್ಯಕ್ಕಿಂತ ಮಿಗಿಲಾದುದು. ನಮ್ಮ ದೇವರುಗಳ ನಡುವೆ ಕೂಡ ಸಂಬಂಧಗಳ ಸೇತುಬಂಧವಿದೆ. ಮನುಷ್ಯರು ಸಹ ದೇವರಂತೆ ಬದುಕು ರೂಪಿಸಿಕೊಳ್ಳಬೇಕೆಂಬ ಸದಾಶಯದಿಂದ ಶಿವ-ಪಾರ್ವತಿ, ಲಕ್ಷ್ಮಿ-ವಿಷ್ಣು, ಬ್ರಹ್ಮ-ಸರಸ್ವತಿ ಸಹಿತ ಎಲ್ಲಾ ದೇವಾನುದೇವತೆಗಳ ಸಂಸಾರ ಚಿತ್ರಣಗಳನ್ನು ಪುರಾಣಗಳಲ್ಲಿ ಕಟ್ಟಿಕೊಡಲಾಗಿದೆ.

ಆದರೆ ದೇವರುಗಳಂತೆ ಮನುಷ್ಯರು ಬದುಕುವುದನ್ನು ಬಿಟ್ಟು, ದೆವ್ವಗಳಂತೆ ದುರಾಚಾರ ರೂಢಿಸಿಕೊಂಡ ಪರಿಣಾಮವಾಗಿ ಸಂಸಾರಗಳು ಸಂಕೀರ್ಣವಾಗುತ್ತಹೋದವು. ಸಂಬಂಧಗಳು ಶಿಥಿಲವಾಗಿ ಅಲ್ಲಿ ಅಪನಂಬಿಕೆಯ ಬಿಳಲುಗಳು ಬಿಟ್ಟುಕೊಂಡವು. ಹೆತ್ತವರ ಮರೆವ ಮಕ್ಕಳು, ಕ್ಷುಲ್ಲಕ ಕಾರಣಕ್ಕೆ ಮನೆ ಒಡೆವ ದುರಾತ್ಮರು, ಒಡಹುಟ್ಟಿದವರನ್ನೇ ಸಹಿಸದ ಜನರು, ಅನ್ಯೋನ್ಯತೆ ಅರಿಯದ ದಂಪತಿಗಳು ಹೆಚ್ಚಾದರು. ಹಿರಿಯರನ್ನು ನೋಡಿ ಕಲಿವ ಮಕ್ಕಳು ಸಹ, ಸಂಬಂಧಗಳಿಗೆ ತಿಲಾಂಜಲಿ ಇಡುತ್ತಹೋದರು. ಇದರಿಂದ ಬಹುತೇಕ ಮನೆಗಳಲ್ಲಿ ಮಧುರವಾದ ಸಂಸಾರದ ಕಲರವಕ್ಕಿಂತ, ಕರ್ಕಶ ಕಲಹಗಳ ಸದ್ದೇ ಕೇಳಿ ಬರುತ್ತಿದೆ. ಜಗತ್ತಿನಲ್ಲಿ ರಕ್ತಸಂಬಂಧಕ್ಕಿಂತ ಸ್ನೇಹಸಂಬಂಧ ಗಟ್ಟಿಯಾಗಿರುತ್ತಿತ್ತು. ಈಗ ಸ್ನೇಹಸಂಬಂಧಗಳಲ್ಲೂ ಬಿರುಕು ಮೂಡುತ್ತಿವೆ.

ಯಾವುದೇ ಸಂಬಂಧ ಉತ್ತಮವಾಗಿ ಬೆಳೆಯಲು ನಂಬಿಕೆಯ ಬೇರು ಗಟ್ಟಿಯಾಗಿರಬೇಕು. ಆ ನಂಬಿಕೆಯ ಬೇರಿಗೆ ಧಕ್ಕೆಯಾದರೆ, ಸಂಬಂಧಗಳು ಚಿಗುರೊಡೆಯದೆ ಒಣಗುತ್ತವೆ. ನಂಬಿಕೆ ಇಲ್ಲದೆ ಮನುಷ್ಯ ಒಂದು ಹೆಜ್ಜೆ ಕೂಡ ಮುಂದಿಡಲಾರ. ಸುರಕ್ಷಿತವಾಗಿ ಚಾಲನೆ ಮಾಡುತ್ತೇನೆ ಎಂಬ ನಂಬಿಕೆಯಿಂದಲೇ ವಾಹನ ಚಲಾಯಿಸುತ್ತೇವೆ. ಅಪಘಾತವಾಗುತ್ತೆ ಅಂತ ಅಪನಂಬಿಕೆ ಇದ್ದರೆ ರಸ್ತೆಗೆ ಇಳಿಯುವುದೇ ಇಲ್ಲ. ದೇವರನ್ನು ನಂಬಿದರೆ ಒಳ್ಳೆಯದು ಆಗುತ್ತೋ, ಇಲ್ಲವೋ? ಆದರೆ ಕೆಟ್ಟದ್ದಂತೂ ಆಗುವುದಿಲ್ಲ ಎಂಬ ನಂಬಿಕೆಯಿಂದಲೇ ದೇವರನ್ನು ಪೂಜಿಸುತ್ತೇವೆ. ಒಳ್ಳೆಯದಾಗುತ್ತೆ ಅನ್ನೋ ನಂಬಿಕೆಯಿಂದಲೇ ದೇವರ ಮೇಲೆ ನಮ್ಮೆಲ್ಲಾ ಕಷ್ಟಗಳ ಭಾರ ಹಾಕಿ ನಾವು ನೆಮ್ಮದಿಯಾಗಿರುತ್ತೇವೆ. ಇಲ್ಲಿ ನಂಬಿಕೆ ಅನ್ನೋದೇ ದೇವರು. ನಂಬಿಕೆಯ ದೇವರನ್ನು ಸಂಬಂಧಗಳಲ್ಲಿ ಕಾಣದ ಮನುಷ್ಯರ ಬದುಕು ಜರ್ಜರಿತವಾಗುತ್ತಿದೆ.

ಸಂಬಂಧಗಳಲ್ಲಿ ನಂಬಿಕೆ ಕಾಣೆಯಾಗುವುದರ ಹಿಂದೆ ಮನುಷ್ಯರ ಕುತ್ಸಿತ ಬುದ್ಧಿಯ ಕೈವಾಡವಿದೆ. ’ತಾನು ನಂಬುವುದಿಲ್ಲ, ಪರರನ್ನು ನಂಬುವುದಿಲ್ಲ’ ಎಂಬ ನಾಣ್ನುಡಿಯಂತೆ, ಪರಸ್ಪರ ಅಪನಂಬಿಕೆಗಳಲ್ಲೇ ಮನಸ್ಸನ್ನು ಕೆಡಿಸಿಕೊಂಡಿರುವ ಮನುಷ್ಯರಿಂದ ವಿಶ್ವಾಸದ ವಾತಾವರಣ ನಿರ್ಮಾಣವಾಗುತ್ತಿಲ್ಲ. ಅನುಮಾನ-ಅಪನಂಬಿಕೆಗಳನ್ನ ವಿಜ್ಞಾನ ಮಾನಸಿಕ ರೋಗ ಎನ್ನುತ್ತೆ. ಹಾಗೇ, ವಿಕಾರ ಮನಸ್ಸಿನವರನ್ನ ಧರ್ಮಗಳು ಪಾಪಾತ್ಮರೆಂದು ಪರಿಗಣಿಸುತ್ತೆ. ನಂಬಿಕೆಯ ಚೌಕಟ್ಟಿನಲ್ಲಿ ಮಾನವಸೌಧ ಕಟ್ಟುವ ಸಮಾಜ ಸುಧಾರಕರ ಪ್ರಯತ್ನಕ್ಕೆ ಅಲ್ಪಬುದ್ಧಿಯ ಜನ ಅಡ್ಡಿಯಾಗಿದ್ದಾರೆ.

ದ್ವೇಷ-ಅಸೂಯೆ-ದುರಾಸೆಗಳಿಂದ ಬಳಲುವ ಜನರಲ್ಲೇ ಅಪನಂಬಿಕೆಗಳು ಹೆಚ್ಚು. ಇವರು ಹರಡುವ ಮಾನಸಿಕ ರೋಗಗಳು ಮನುಷ್ಯಸಂಬಂಧಗಳನ್ನು ಹಾಳುಗೆಡವುತ್ತಿವೆ. ಅನುಮಾನಗಳು ಉರಿಬಾಣಗಳಾಗಿ ಮಾನವರ ಎದೆಗೂಡಲ್ಲಿ ದ್ವೇಷದ ಬೆಂಕಿ ಹೊತ್ತಿಸುತ್ತಿವೆ. ಅಂತಸ್ತು-ಪ್ರತಿಷ್ಠೆಗಳ ಮೇಲಾಟದಲ್ಲಿ ಸಂಬಂಧಗಳು ಜಾಳಾಗಿ ಸಿರಿವಂತಿಕೆಯ ಸೊಕ್ಕು ಮೇರೆ ಮೀರುತ್ತಿದೆ. ಇದರ ಮಧ್ಯೆ ಮುನಿಸಿನ ಸೋಗೇ ಮನುಷ್ಯಸಂಬಂಧಗಳಿಗೆ ಕಿಚ್ಚನ್ನು ಹಚ್ಚುತ್ತಿದೆ. ಸಂಸಾರವೆಂಬ ವೃಕ್ಷದ ನಂಬಿಕೆಯ ಬೇರಿಗೆ ವಿಶ್ವಾಸದ ನೀರು ಬೆರೆತಾಗ ‘ಸಚ್ಚಿದಾನಂದ’ದ ಬದುಕು ಸಾಕಾರವಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.