ಸ್ವಾಮಿ ಹರ್ಷಾನಂದಜಿಮೂಲತಃ ಬೆಂಗಳೂರಿನವರು; ಪೂರ್ವಾಶ್ರಮದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಬಹಳ ಪ್ರತಿಭಾನ್ವಿತರು. ಯುವಿಸಿಇ ಕಾಲೇಜಿನ ಎಲೆಕ್ಟ್ರಿಕಲ್ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ತಾಂತ್ರಿಕ ಪದವಿ ಮುಗಿಸಿದರು. ಆದರೆ ಆ ವೇಳೆಗಾಗಲೇ ಅವರು ಶ್ರೀರಾಮಕೃಷ್ಣ-ವಿವೇಕಾನಂದ-ಶಾರದಾ ವಿಚಾರಧಾರೆಗೆ ಮನಸೋತಿದ್ದರು.

ಅಂದು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ತ್ಯಾಗೀಶಾನಂದಜಿ ಅವರ ಪ್ರಭಾವಕ್ಕೂ ಒಳಗಾಗಿದ್ದರು. ಅವರು ಆಶ್ರಮ ಸೇರಬೇಕೆಂದು ಬಹಳ ಉತ್ಸಾಹದಿಂದ ಇದ್ದರಾದರೂ ಅಲ್ಲಿ ಪ್ರವೇಶ ಪಡೆವ ವೇಳೆಯಲ್ಲೇ ತೀವ್ರ ಅನಾರೋಗ್ಯಕ್ಕೆ ಒಳಗಾದರು. ಆದರೆ ಅವರ ದೀಕ್ಷಾಗುರುಗಳಾದ ಸ್ವಾಮಿ ವಿರಜಾನಂದರ ಅಪಾರ ಕೃಪೆ ಪವಾಡದೋಪಾದಿಯಲ್ಲಿ ಅವರನ್ನು ಪಾರುಮಾಡಿತು.

ಅವರ ಆಧ್ಯಾತ್ಮಿಕ ಜೀವನ ಆರಂಭವಾದದ್ದು ಮಂಗಳೂರು ರಾಮಕೃಷ್ಣಾಶ್ರಮದಲ್ಲಿ. ಬಳಿಕ ಬೆಂಗಳೂರಿನಲ್ಲಿದ್ದರು. ಅನಂತರ ಮಹಾಸಂಘದ ಕೇಂದ್ರ ಕಚೇರಿ, ತರಬೇತಿ ಕೇಂದ್ರ ಇರುವ ಕೊಲ್ಕತ್ತದ ಬೇಲೂರು ಮಠದ ತರಬೇತಿ ಕೇಂದ್ರದ ಆಚಾರ್ಯರಾಗಿ ಕೆಲಕಾಲ ಸೇವೆ ಸಲ್ಲಿಸಿದರು. ಮುಂದೆ ಮೈಸೂರು ರಾಮಕೃಷ್ಣಾಶ್ರಮದಲ್ಲಿ ಸ್ವಲ್ಪ ಕಾಲವಿದ್ದು ಬಳಿಕ ಅಲಹಾಬಾದಿನ ಮಠದ ಅಧ್ಯಕ್ಷರಾಗಿ ಮುಂದುವರಿದರು.

ಓದಿ:ರಾಮಕೃಷ್ಣ ಮಠ: ಸ್ವಾಮಿ ಹರ್ಷಾನಂದಜಿ ನಿಧನ

1989ರಲ್ಲಿ ಬೆಂಗಳೂರು ಮಠಕ್ಕೆ ಅಧ್ಯಕ್ಷರಾಗಿ ನೇಮಕಗೊಂಡು 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು. ಈ ಅವಧಿಯಲ್ಲೇ ಬೆಂಗಳೂರು ಮಠ ಕೆಲವು ಮುಖ್ಯ ಮೈಲುಗಲ್ಲುಗಳನ್ನು ದಾಟಿತು.

ಶ್ರೀ ಶಾರದಾ ದೇವಿಯವರ ಬೆಂಗಳೂರು ಭೇಟಿಯ ಶತಮಾನೋತ್ಸವ, ಶ್ರೀ ವಿವೇಕಾನಂದರ ಬೆಂಗಳೂರು ಭೇಟಿಯ ಶತಮಾನೋತ್ಸವ, ಬೆಂಗಳೂರು ಆಶ್ರಮದ ಶತಮಾನೋತ್ಸವ, ಚಿಕಾಗೊ ಭಾಷಣಕ್ಕೆ 125 ವರ್ಷ ಸಂದ ಆಚರಣೆ, ನಿವೇದಿತಾ ಜನ್ಮಶತ ಮಾನೋತ್ಸವ, ವಿವೇಕಾನಂದ ಬಾಲಕಸಂಘ-ಯುವಕಸಂಘಗಳ ಸುವರ್ಣ ಮಹೋತ್ಸವ, ಇವುಗಳದೇ ವಜ್ರಮಹೋತ್ಸವ - ಇವೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸಿದ ದಕ್ಷರು ಸ್ವಾಮಿ ಹರ್ಷಾನಂದಜಿ.

ಸ್ವಾಮೀಜಿ ಸಂತರಷ್ಟೆ ಅಲ್ಲ, ಬರಹಗಾರರು, ಭಾಷಣಕಾರರು ಮತ್ತು ಸುಶ್ರಾವ್ಯ ಗಾಯಕರಾಗಿದ್ದರು. ಅವರ ಭಾಷಣ, ಬರಹ, ಗಾಯನಗಳು ಮಠಕ್ಕೆ ಬಹಳ ಜನರನ್ನು ಬರಮಾಡಿಕೊಂಡವು. ಬಂದ ಭಕ್ತರನ್ನು ಅಪಾರ ಪ್ರೀತಿಯಿಂದ ಕಾಣುತ್ತಿದ್ದ ಸ್ವಾಮೀಜಿ, ಬಹಳ ಘನವಾದ ವಿಚಾರಗಳನ್ನು ಸರಳವಾದ ರೀತಿಯಲ್ಲಿ ಅವರಿಗೆ ಮುಟ್ಟಿಸಿಬಿಡುತ್ತಿದ್ದರು. ಆಬಾಲವೃದ್ಧರಾದಿಯಾಗಿ ಜನರನ್ನು ಹಾಸ್ಯಮಿಶ್ರಿತ ಸರಳ ಮಾತುಗಳಿಂದ ಪ್ರಭಾವಿತಗೊಳಿಸುತ್ತಿದ್ದರು. ಆಶ್ರಮದ ವಿವಿಧ ಅಂಗಗಳಾದ ವಿವೇಕಾನಂದ ಬಾಲಕ ಸಂಘ, ವಿವೇಕಾನಂದ ಯುವಕ ಸಂಘ, ಶಿವನಹಳ್ಳಿಯ ಸೇವಾಕಾರ್ಯ, ಅಲ್ಲಿಯ ಶಾಲೆ, ರಾಮಕೃಷ್ಣ ವಿದ್ಯಾಕೇಂದ್ರ - ಇವೆಲ್ಲವನ್ನೂ ಏಕಕಾಲದಲ್ಲಿ ನಿಭಾಯಿಸುತ್ತಿದ್ದರು. ಜೊತೆಗೆ ಆಶ್ರಮದ ಆಧ್ಯಾತ್ಮಿಕ ಚಟುವಟಿಕೆ, ವಿಶೇಷ ದಿನಗಳ ಕಾರ್ಯಕ್ರಮಗಳು – ಇಷ್ಟೆಲ್ಲ ಇದ್ದರೂ ಸಮಾಧಾನಚಿತ್ತರು. ಇದರ ಜೊತೆಗೆ ಅವರ ಅಪಾರ ಬರವಣಿಗೆ, ಭಾಷಣಗಳು! ಪುಟ್ಟ ಪುಟ್ಟ ಪುಸ್ತಿಕೆಗಳ ಮೂಲಕ ಅವರು ಯುವಜನರ ಮನಸ್ಸನ್ನು ಓದಿನತ್ತ ಸೆಳೆಯುತ್ತಿದ್ದರು. ಅವರ ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಪಾಂಡಿತ್ಯ ಅತುತ್ತಮ ಮಟ್ಟದ್ದು. ಆದರೆ ಬರವಣಿಗೆ ಮಾತ್ರ ಬಹಳ ಸರಳ.

ಹಿಂದೂಧರ್ಮ–ಸಂಸ್ಕೃತಿಗಳನ್ನು ಪರಿಚಯಿಸುವ ಪುಟ್ಟ ಪುಸ್ತಕಗಳನ್ನು; ‘ಪ್ರಶ್ನೋತ್ತರ ರೂಪ ದಲ್ಲಿ ಹಿಂದೂ ಧರ್ಮ’, ‘ಗೀತಾ ಸಾರ ಸರ್ವಸ್ವ’, ‘ಸವಾಲು-ಸರಿಯುತ್ತರ’, ಹಿಂದೂ ದೇವ-ದೇವಿಯವರನ್ನು ಕುರಿತ ಕಿರು ಹೊತ್ತಗೆ ಗಳನ್ನು ರಚಿಸುವುದರ ಜೊತೆಗೇ ವಿದ್ವತ್ಪೂರ್ಣವಾದ, ಸಂಸ್ಕೃತದಲ್ಲೇ ರಚಿತವಾದ ‘ಈಶಾವಾಸ್ಯ ಉಪನಿಷತ್’ ಗ್ರಂಥ, ‘ನಾಮ ರಾಮಾಯಣ ಮಹಿಮಾ’, ಇವೆಲ್ಲಕ್ಕೂ ಮಿಗಿಲಾದ 35 ವರ್ಷಗಳ ಜ್ಞಾನತಪದ ಫಲವಾದ ‘ಎ ಕನ್ಸೈಸ್ ಎನ್ಸೈಕ್ಲೋಪಿಡಿಯಾ ಆಫ್ ಹಿಂದೂಯಿಸಮ್’ (ಮೂರು ಸಂಪುಟಗಳು) – ಇವು ಸ್ವಾಮೀಜಿ ಯವರ ಕೆಲವು ಕೃತಿಗಳು. ‘ಎನ್ಸೈಕ್ಲೋಪಿಡಿಯಾ‘ ಅವರ ಮೇರುಕೃತಿ.

1975ರಲ್ಲಿ ಇದರ ಬಗ್ಗೆ ಅವರ ಬರಹ ಆರಂಭವಾಗಿ 1989ರಲ್ಲಿ ಇದರ ಹಸ್ತಪ್ರತಿ ಅಚ್ಚಿನಮನೆ ಸೇರಿತು; 2008ರಲ್ಲಿ, ಮಾಜಿ ರಾಷ್ಟ್ರಪತಿ ಎ.ಪಿ.ಜೆ ಕಲಾಂ ಅವರಿಂದ ಸಂಪುಟಗಳು ಬಿಡುಗಡೆಗೊಂಡವು. ಇದರಲ್ಲಿ 3708 ವಿಷಯಗಳಿವೆ. ಪ್ರತಿಯೊಂದು ವಿಷಯವನ್ನೂ ಅವರು ಸಿದ್ಧಪಡಿಸಿದ ರೀತಿ, ವಿಷಯವಾರು ಕಾರ್ಡುಗಳ ಜೋಡಣೆ, ಕ್ರಮಬದ್ಧ ತಯಾರಿ - ಇವೆಲ್ಲವೂ ಅವರಲ್ಲಿದ್ದ ಒಬ್ಬ ಶ್ರೇಷ್ಠ ಸಂಶೋಧಕನನ್ನು ಬಿಂಬಿಸುತ್ತವೆ. ಅವರ ಮುದ್ದಾದ ಆಂಗ್ಲ ಮತ್ತು ಕನ್ನಡ ಕೈಬರಹ ನೋಡುವುದೇ ಕಣ್ಣಿಗೆ ಹಬ್ಬ. ಕರಡಚ್ಚು ತಿದ್ದುವುದರಲ್ಲೂ ಅಚ್ಚುಕಟ್ಟು.

ಹರ್ಷಾನಂದರು ಒಬ್ಬ ಸಾರಸ್ವತ ಸಂತ. ಇದೇ ತಿಂಗಳ ಒಂದರಂದು ಅವರ ಹೊಸ ಕೃತಿ ‘ಮೈನರ್ ಗೀತಾಸ್’ ಬಿಡುಗಡೆಯಾಗಿತ್ತು. ಅವರ 89 ವರ್ಷಗಳ ಜೀವನಪಯಣ ಕೊನೆ ಗೊಂಡಿದೆ; ಅವರ ಕೃತಿಗಳು ಜನಮಾನಸದಲ್ಲಿ ಶಾಶ್ವತವಾಗಿರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.