ನಮ್ಮ ಎಲ್ಲ ಒಡಕುತನಗಳಿಗೂ ಕಾರಣವೇ ನಾವು ದಕ್ಕಿಸಿಕೊಂಡ ‘ನಾನು ಯಾರು’ ಎಂಬ ಪ್ರಶ್ನೆಗೆ ಉತ್ತರದಲ್ಲಿದೆ. ಈ ಎಲ್ಲ ಸಂಕುಚಿತ ಎಲ್ಲೆಗಳನ್ನು ಮೀರುವುದರಲ್ಲಿಯೇ ‘ನನ್ನ ಹಿತ’ವೂ ‘ಜಗದ ಹಿತ’ವೂ ಅಡಗಿದೆ

ಇಂದು ಜಗತ್ತಿನ ಬಹುಪಾಲು ರಾಷ್ಟ್ರಗಳು ಒಂದು ವಿಪತ್ತನ್ನಂತೂ ಸಮನಾವಾಗಿ ಎದುರಿಸುತ್ತಿವೆ. ಈ ದೃಷ್ಟಿಯಿಂದ ನೋಡಿದರೆ ವಸುಧೈವ ಕುಟುಂಬಕಮ್ ಎಂಬ ಮಾತು ವಿಪರೀತಾರ್ಥದಲ್ಲಿ ವಾಸ್ತವವಾದಂತಿದೆ! ಯಾವುದೋ ದೇಶದ ಯಾವುದೋ ಒಂದು ಊರಿಗೋ ಕುಟುಂಬಕ್ಕೋ ಸೀಮಿತವಾಗಬಹುದಾಗಿದ್ದ ಸಮಸ್ಯೆ ಈಗ ವಿಶ್ವವನ್ನೇ ಕಾಡುತ್ತಿದೆ. ಸಮಸ್ಯೆಯೇನೋ ವಿಶ್ವವ್ಯಾಪಕವಾಗಿದೆ; ಆ ಮೂಲಕ ಪ್ರಪಂಚವೇ ಒಂದು ಮನೆಯಂತಾಗಿದೆ, ದಿಟ. ಆದರೆ ಸಮಸ್ಯೆಯನ್ನು ಎದುರಿಸುವಲ್ಲಿ ಮಾತ್ರ ಒಂದು ಕುಟುಂಬವು ಹೊಂದಿರಬೇಕಾಗಿದ್ದ ಏಕತೆ ಮಾಯವಾಗಿದೆ. ಹೀಗಾಗಿ ಯಾವ ಅರ್ಥದಲ್ಲಿ ವಿಶ್ವವು ಒಂದು ಕುಟುಂಬದಂತೆ ನಡೆದುಕೊಳ್ಳಬೇಕಿತ್ತೋ ಆ ಅರ್ಥದಲ್ಲಿ ನಡೆದುಕೊಳ್ಳುತ್ತಿಲ್ಲ; ಕುಟುಂಬದ ಆದರ್ಶವೂ ಲಕ್ಷಣವೂ ಆದ ಸೌಹಾರ್ದ, ಸಾಹಚರ್ಯ, ಬಾಂಧವ್ಯ, ಏಕಾಭಿಪ್ರಾಯಗಳು ಮರೆಯಾಗಿವೆ. ಎಲ್ಲರೂ ಸಮಾನದುಃಖಿಗಳಾಗಿ ಎದುರಿಸುತ್ತಿರುವ ಈ ವಿಷಮಸಂದರ್ಭದಲ್ಲೂ ಕೇವಲ ಸ್ವಾರ್ಥದಿಂದಲೇ ಉದ್ಯುಕ್ತರಾಗುತ್ತಿರುವ ರಾಜಕಾರಣಿಗಳು, ಅಧಿಕಾರಿಗಳು, ರಾಷ್ಟ್ರನಾಯಕರು, ಜನಸಾಮಾನ್ಯರು, ವ್ಯಾಪಾರಿಗಳು ಮುಂತಾದವರನ್ನು ಕಂಡಾಗ ’ಮನೆ ಉಳಿದೀತು‘ ಎಂಬ ಆಶಾಭಾವಕ್ಕಿಂತಲೂ ’ಗೃಹಭಂಗವೇ ಆದೀತು‘ ಎಂಬ ಆತಂಕವೇ ನಮ್ಮನ್ನು ಹೆಚ್ಚಾಗಿ ಕಾಡದಿರದು. ಸ್ವಾರ್ಥಿಗಳ ಈ ಒಡೆದು ನಲಿಯುವ ಬುದ್ಧಿಗೆ ಕಾರಣವಾದರೂ ಏನು?

ಮನೆಯಲ್ಲಿರುವ ಸದಸ್ಯರಿಗೆ ನಾವೆಲ್ಲರೂ ಒಂದೇ ಮನೆಯವರು ಎಂಬ ವಿವೇಕ ಇಲ್ಲದಿರುವುದೇ ಹೌದು. ಇದನ್ನೇ ತಾತ್ತ್ವಿಕವಾಗಿ ವಿಸ್ತರಿಸಿ ಹೇಳುವುದಾದರೆ, ನಮಗಾರಿಗೂ ನಮ್ಮೆಲ್ಲರ ಮೂಲ ಒಂದೇ ಎಂಬ ಅರಿವು ಇಲ್ಲವಾಗಿದೆ. ಹೊರಗೆ ಕಾಣುತ್ತಿರುವ ಬಗೆಬಗೆಯ ವಿವರಗಳು ವಾಸ್ತವದಲ್ಲಿ ಅವು ತೋರಿಕೆಯ ಸತ್ಯ; ಆದರೆ ನಮ್ಮೆಲ್ಲರ ಅಂತರಂಗದಲ್ಲಿರುವ ಚೈತನ್ಯ, ಅದುವೇ ಶಾಶ್ವತ ಸತ್ಯ, ವೈಶ್ವಿಕ ಸತ್ಯ ಎಂಬ ಕಾಣ್ಕೆಯನ್ನು ಪಡೆಯದ ಹೊರತು ನಮ್ಮ ಮನೆಯನ್ನೂ ಮನವನ್ನೂ ತುಂಬಿರವ ಕತ್ತಲಿನಿಂದ ಬಿಡುಗಡೆ ಸಾಧ್ಯವಾಗದು. ಹೀಗೆ ಒಂದೇ ಚೇತನದ ಸಹಸ್ರ ಸಹಸ್ರ ಕಿಡಿಗಳಷ್ಟೆ ನಾವು ಎಂದು ಜಗತ್ತಿನಾದ್ಯಂತ ಹಲವರು ದಾರ್ಶನಿಕರು ಉಪದೇಶಿಸಿದ್ದಾರೆ. ಅಂಥವರಲ್ಲಿ ಒಬ್ಬರು ಶ್ರೀ ರಮಣ ಮಹರ್ಷಿ; ನಮ್ಮ ಕಾಲಕ್ಕೆ ತುಂಬ ಹತ್ತಿರದಲ್ಲಿಯೇ ಇದ್ದವರು (1879-1950); ತತ್ತ್ವದ ಬೆಳಕಾಗಿ ಅವರು ಎಂದೆಂದೂ ನಮ್ಮೊಂದಿಗೆ ಇರುತ್ತಾರೆನ್ನಿ!

ಬಾಲಕನಾಗಿದ್ದ ’ವೆಂಕಟರಮಣ‘ನು ’ರಮಣಮಹರ್ಷಿ‘ಯಾಗಿ ಪರಿವರ್ತನೆಯಾದ ಸಂದರ್ಭವೂ ಇಲ್ಲಿ ಮನನೀಯ. ವೆಂಕಟರಮಣನಿಗೆ ಒಂದು ದಿನ ಸಾವನ್ನು ಕುರಿತು ತೀವ್ರವಾದ ಜಿಜ್ಞಾಸೆ ಮೂಡಿತು; ಸಾವಿನ ಅನುಭವವೇ ಆಯಿತೆನ್ನಿ! ಸಾವು ಎಂದರೇನು? ಸಾವು ಬರುವುದು ಯಾವುದಕ್ಕೆ? ’ನಾನು‘ ಎನ್ನುವುದು ಏನು? ದೇಹವೇ ನಾನೇ? ದೇಹ ಸತ್ತರೆ ನಾನು ಸತ್ತಂತೆಯೆ? – ಇಂಥ ಹಲವು ಪ್ರಶ್ನೆಗಳು ಸಾವಿನ ಭಯದ ಜೊತೆಗೆ ಸೇರಿಕೊಂಡಿತು. ಬಳಿಕ ’ನಾನು‘ ಎಂಬುದರ ಬಗ್ಗೆಯೇ ಚಿಂತನೆಯೆಲ್ಲವೂ ಕೇಂದ್ರೀಕೃತವಾಯಿತು. ಸಾವಿನ ಭಯ ಮಾಯವಾಯಿತು; ಅರಿವಿನ ಆನಂದ ಸ್ಥಿರವಾಯಿತು. ಈ ವಿಚಾರಮಾರ್ಗದ ತಪಸ್ಸಿನ ದೆಸೆಯಿಂದ ವೆಂಕಟರಮಣ ಮುಂದೆ ’ರಮಣ ಮಹರ್ಷಿ‘ಗಳಾದರು.

’ನಾನು ಯಾರು?‘ ಈ ಪ್ರಶ್ನೆಗೆ ದಿಟವಾದ ಉತ್ತರ ಕಂಡುಕೊಳ್ಳುವುದರಲ್ಲಿಯೇ ನಮ್ಮ ಜೀವನಸಾರ್ಥಕತೆ ಇದೆ ಎಂದು ಪ್ರತಿಪಾದಿಸಿದವರು ರಮಣ ಮಹರ್ಷಿಗಳು. ಇಂದು ನಮ್ಮ ಒಡಕುನಡೆಗೂ ಭೇದಬುದ್ಧಿಗೂ ಪ್ರಧಾನ ಕಾರಣವಾಗಿರುವುದೇ ನಾವು ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ವಿಫಲರಾಗುತ್ತಿರುವುದರಿಂದ. ಹೌದು, ನಾವು ಉತ್ತರವನ್ನೇನೋ ಕಂಡುಕೊಳ್ಳುತ್ತಿದ್ದೇವೆ. ಆದರೆ ಏನೆಂದು? ’ನಾನು ಈ ಜಾತಿಯವನು, ಈ ಜಾತಿಯವನು‘, ’ಈ ಹೆಸರಿನವನು, ಆ ಹೆಸರಿನವನು‘, ’ಈ ದೇಶದವನು. ಆ ದೇಶದವನು‘, ’ಆ ಮತದವನು. ಈ ಮತದವನು‘, ’ಆ ವೃತ್ತಿಯವನು, ಈ ವೃತ್ತಿಯವನು‘, ’ನಾನು ಬಡವ, ನಾನು ಶ್ರೀಮಂತ‘, ’ನಾನು ಹೆಣ್ಣು, ನಾನು ಗಂಡು‘ – ಇಂಥ ವ್ಯಾವಹಾರಿಕ ಸ್ತರಗಳಲ್ಲಿ ನಮ್ಮನ್ನು ನಾವು ಕಾಣುತ್ತಿದ್ದೇವೆಯೇ ಹೊರತು ದಿಟವಾಗಿಯೂ ’ನಾನು ಯಾರು‘ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದೇವೆಯೆ? ನಾವು ಹೀಗೆ ಕಂಡುಕೊಳ್ಳುತ್ತಿರುವ ’ಉತ್ತರ‘ಗಳೆಲ್ಲವೂ ನಾವು ಸೃಷ್ಟಿಕೊಂಡಿರುವ ತೋರಿಕೆಯ ಗುರುತುಗಳೇ ವಿನಾ ಇವಾವುವೂ ನಮ್ಮ ದಿಟವಾದ ’ಸ್ವರೂಪ‘ ಅಲ್ಲ. ರಮಣ ಮಹರ್ಷಿಗಳು ನಮ್ಮನ್ನು ಆ ದಿಟದ ಕಡೆಗೆ ಮುನ್ನಡೆಸುತ್ತಾರೆ.

ಇಷ್ಟಕ್ಕೂ ’ನಾನು ಯಾರು‘ ಎಂಬ ಪ್ರಶ್ನೆಯ ಉತ್ತರದ ಬಗ್ಗೆ ನಾವು ಏಕಾದರೂ ಇಷ್ಟು ತಲೆಕೆಡಿಸಿಕೊಳ್ಳಬೇಕು?

ನಾವು ಮೊದಲೇ ನೋಡಿದಂತೆ ನಮ್ಮ ಎಲ್ಲ ಒಡಕುತನಗಳಿಗೂ ಕಾರಣವೇ ನಾವು ದಕ್ಕಿಸಿಕೊಂಡ ’ನಾನು ಯಾರು‘ ಎಂಬ ಪ್ರಶ್ನೆಗೆ ಉತ್ತರದಲ್ಲಿದೆ. ಈ ಎಲ್ಲ ಸಂಕುಚಿತ ಎಲ್ಲೆಗಳನ್ನು ಮೀರುವುದರಲ್ಲಿಯೇ ’ನನ್ನ ಹಿತ‘ವೂ ’ಜಗದ ಹಿತ‘ವೂ ಅಡಗಿದೆ ಎಂಬುದನ್ನು ನಾವು ಅರಿಯಬೇಕಿದೆ. ನನ್ನ ಹೆಸರು ‘ನಾನಲ್ಲ‘, ನನ್ನ ಜಾತಿ ’ನಾನಲ್ಲ‘, ನನ್ನ ಕುಲ ‘ನಾನಲ್ಲ‘, ನನ್ನ ದೇಶ ’ನಾನಲ್ಲ‘, ನನ್ನ ಮತ ’ನಾನಲ್ಲ‘ – ಈ ’ನೇತಿ ನೇತಿ‘ಮಾರ್ಗವೇ ನಮ್ಮನ್ನು ಅರಿವಿನ ಶಿಖರಕ್ಕೆ ಕೊಂಡೊಯ್ಯುವಂಥದ್ದು. ಇಡಿಯ ವಿಶ್ವವೇ ನಾನು, ನಾನು ಇಡಿಯ ವಿಶ್ವವೇ ಹೌದು – ಎಂಬ ಶಿಖರಾನುಭವವವೇ ನಮ್ಮ ಎಲ್ಲ ಸಂಕುಚಿತ–ಸ್ವಾರ್ಥಬುದ್ಧಿಗಳ ರೋಗವನ್ನು ಪರಿಹರಿಸಬಲ್ಲ ಪರಮೌಷಧ.

ರಮಣ ಮಹರ್ಷಿಗಳು ಒಮ್ಮೆ ಹೀಗೆಂದರು: ’ಅಹಂಭಾವಕ್ಕೆ ಪರಿಮಿತಿ ಉಂಟು; ಆತ್ಮ ಅದಕ್ಕೆ ಅತೀತವಾದುದು.‘

ಇಂದು ನಾವೆಲ್ಲರೂ ನಮ್ಮ ನಮ್ಮ ಅಹಂಭಾವಗಳಲ್ಲಿ, ಅಹಂಕಾರಗಳಲ್ಲಿ ಪ್ರತ್ಯೇಕಭಾವದಿಂದ ಮೆರೆಯುತ್ತಿದ್ದೇವೆ. ಈ ಪ್ರತ್ಯೇಕಭಾವ ನಾಶವಾಗದ ಹೊರತು ಆತ್ಮದ ಅರಿವಾಗದು; ಆತ್ಮದ ಸಾಕ್ಷಾತ್ಕಾರವಾಗದ ಹೊರತು ಆನಂದಾನುಭವ ಒದಗದು.

ಆತ್ಮ ಎಂದರೆ ಅದು ಎಲ್ಲರಲ್ಲೂ ಎಲ್ಲದರಲ್ಲೂ ಎಲ್ಲೆಲ್ಲೂ ಇರುವ ಚೈತನ್ಯ. ಈ ಚೈತನ್ಯದ ಆವಿಷ್ಕಾರಕ್ಕೆ ರಮಣರ ವಿಚಾರಮಾರ್ಗವೇ ರಾಜಮಾರ್ಗ. ಈಗ ಸಾವಿಗೆ ಮುಖಾಮುಖಿಗಳಾಗಿರುವ ನಮಗೆ ಅವರ ಕಾಣ್ಕೆ ಬದುಕನ್ನು ಕಟ್ಟಿಕೊಡುವ ವಿವೇಕದ ಸೋಪನವಾಗಿ ಒದಗುವುದರಲ್ಲಿ ಸಂದೇಹವಿಲ್ಲವೆನ್ನಿ!

ನಮಗಾರಿಗೂ ನಮ್ಮೆಲ್ಲರ ಮೂಲ ಒಂದೇ ಎಂಬ ಅರಿವು ಇಲ್ಲವಾಗಿದೆ. ಹೊರಗೆ ಕಾಣುತ್ತಿರುವ ಬಗೆಬಗೆಯ ವಿವರಗಳು ವಾಸ್ತವದಲ್ಲಿ ಅವು ತೋರಿಕೆಯ ಸತ್ಯ; ಆದರೆ ನಮ್ಮೆಲ್ಲರ ಅಂತರಂಗದಲ್ಲಿರುವ ಚೈತನ್ಯ, ಅದುವೇ ಶಾಶ್ವತ ಸತ್ಯ, ವೈಶ್ವಿಕ ಸತ್ಯ ಎಂಬ ಕಾಣ್ಕೆಯನ್ನು ಪಡೆಯದ ಹೊರತು ನಮ್ಮ ಮನೆಯನ್ನೂ ಮನವನ್ನೂ ತುಂಬಿರವ ಕತ್ತಲಿನಿಂದ ಬಿಡುಗಡೆ ಸಾಧ್ಯವಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.