ಪೃಥ್ವಿಯಲ್ಲಿ ಪ್ರಕೃತಿ – ಎಂದರೆ ಚರಾಚರವಸ್ತುಗಳು, ಮನುಷ್ಯ ಹಾಗೂ ಅವನ ಚಟುವಟಿಕೆಗಳಲ್ಲಿ – ಸಮಾತೋಲನವಿದ್ದರೆ ಸುಖ. ಮನುಷ್ಯನು ಸಮತೋಲನದ ಲಕ್ಷ್ಮಣರೇಖೆಯನ್ನು ದಾಟಿದಾಗ ಪ್ರಕೃತಿಯ ವಿಕೋಪವನ್ನು ಅವನು ಅನುಭವಿಸಬೇಕಾಗುತ್ತದೆ. ಹೀಗೆ ಬಂದ ಒಂದು ಮಹಾಮಾರಿ ಈ ದಿನ ಇಡೀ ಭೂಮಿಯನ್ನೇ ಆವರಿಸಿದೆ. ಇಂತಹ ಅವಘಡಗಳು ಘಟಿಸದಿರಲೆಂದೇ ವೇದ-ಪುರಾಣಗಳಲ್ಲಿ ಪ್ರಕೃತಿಗೆ, ಪರಿಸರಕ್ಕೆ ಮಹತ್ತರ ಸ್ಥಾನವನ್ನು ನೀಡಲಾಗಿತ್ತೇ? ಧರ್ಮ, ಸಂಸ್ಕೃತಿ ಹಾಗೂ ಕಲೆಗಳ ಮೂಲಕ ಪ್ರಕೃತಿ ಸಂರಕ್ಷಣೆಯ ವಿಧಾನಗಳನ್ನು ಆಚರಣೆಯಲ್ಲಿ ತರುವ ಪ್ರಯತ್ನವನ್ನೂ ಈ ವಾಙ್ಮಯಗಳಲ್ಲಿ ನೋಡಬಹುದು.

ಭರತಖಂಡದಲ್ಲಿ ಮೊದಲಿಗೆ ಜೀವವನ್ನು ಪೋಷಿಸುವ ಪಂಚಭೂತಗಳ (ಆಕಾಶ, ಪೃಥ್ವಿ, ಅಗ್ನಿ, ಜಲ, ಹಾಗೂ ವಾಯು) ಆರಾಧನೆಯೇ ಮುಖ್ಯವಾಗಿತ್ತು; ಜೊತೆಗೆ ಸೂರ್ಯನ ಆರಾಧನೆಯೂ ಆಚರಣೆಯಲ್ಲಿತ್ತು. ತದನಂತರ ವ್ಯಕ್ತಿರೂಪ ದೇವ-ದೇವತೆಗಳನ್ನು ಪೂಜಿಸುವ ಆಚರಣೆ ಮತ್ತು ದೇವಾಲಯಗಳ ರಚನೆಯನ್ನು ಕಾಣುತ್ತೇವೆ. ಆದರೆ ದೇವಾಲಯಗಳು ಸಹ ಪ್ರಕೃತಿಯ ಮಡಿಲಲ್ಲೇ, ಎಂದರೆ ನದಿಯ ತೀರದಲ್ಲಿ, ವೃಕ್ಷಗಳ ನೆರಳಿನಲ್ಲೇ ಮೂಡಿದವು. ಪುರಾಣಗಳಲ್ಲಿ ಬರುವ ದೇವತೆಗಳಿಗೆ ಪ್ರಾಣಿ-ಪಕ್ಷಿಗಳೇ ವಾಹನಗಳು. ಶ್ರೀಕೃಷ್ಣನು ಪ್ರಕೃತಿಯ ಮಡಿಲಲ್ಲಿ ಬೆಳೆದವನು. ಬೋಧಿವೃಕ್ಷದ ಕೆಳಗೆ ಸಿದ್ಧಾರ್ಥನು ನಿರ್ವಾಣ ಸಾಧಿಸಿ ಬುದ್ಧನಾಗಿದ್ದು. ವನಗಳಲ್ಲೇ ಹಿಂದೆ ಗುರುಕುಲಗಳು, ಋಷ್ಯಾಶ್ರಮಗಳು ಕಂಗೊಳಿಸುತ್ತಿದ್ದವು. ವನಗಳು ಗಂಧರ್ವರು, ಯಕ್ಷರು ಇರುವ ತಾಣವೆಂದು ಪುರಾಣಗಳು ಹೇಳುತ್ತವೆ. ಸಾಂಸಾರಿಕ ಬದುಕಿನಿಂದ ಬಿಡುಗಡೆ ಎನಿಸಿರುವ ವಾನಪ್ರಸ್ಥಾಶ್ರಮ ಜೀವನದ ಕೊನೆಯ ಆಶ್ರಮವೆಂದು ಸನಾತನಧರ್ಮ ತಿಳಿಸುತ್ತದೆ.

ವೇದಗಳಲ್ಲಿ ಅರಣ್ಯವನ್ನು ತಾಯಿಯೆಂದು ಸಂಬೋಧಿಸಿ ವರ್ಣಿಸಿದ್ದಾರೆ. ಸರಸ್ವತಿ, ಸಿಂಧು, ಗಂಗೆ, ಯಮುನಾ ಮತ್ತಿತರ ನದಿಗಳನ್ನು, ನದಿಗಳ ಚಲನೆಯನ್ನು ಋಗ್ವೇದ ನದೀಸ್ತುತಿಯಲ್ಲಿ ಮಾಡಲಾಗಿದೆ. ಋಗ್ವೇದದಲ್ಲಿ ಬರುವ ಇನ್ನೊಂದು ಅಪೂರ್ವ ಸೂಕ್ತ ಅರಣ್ಯಾನೀದೇವಿಯದು. ಈ ನಿರಾಕಾರ ಸುಂದರಿ ಅರಣ್ಯನಗಳ ದೇವಿ. ನಿರ್ಜನ ಅರಣ್ಯದಲ್ಲಿ ವಾಸಿಸುವ ಈ ದೇವಿ ನಮಗೆ ಗೋಚರವಾಗುವುದು ಮರಗಳ ಮರ್ಮರದಲ್ಲಿ, ಹಕ್ಕಿಗಳ ಚಿಲಿಪಿಲಿಯಲ್ಲಿ ಹಾಗೂ ಪ್ರಾಣಿಗಳ ಕೂಗಿನಲ್ಲಿ. ಜನರು ಜೀವಸಾಧನೆಗೆ, ಕಟ್ಟಿಗೆಯನ್ನು, ಹಣ್ಣುಗಳನ್ನು ಅರಸಿ ಅವಳ ಹತ್ತಿರ ಬಂದರೆ, ಪಶುಗಳು ಮೇವಿಗಾಗಿ ಅರಸಿ ಬರುತ್ತವೆ; ಅರಣ್ಯಾನಿ ಯಾರೊಬ್ಬರನ್ನೂ ಶೋಷಿಸುವುದಿಲ್ಲ; ಅವಳು ಉಳುಮೆ ಇಲ್ಲದೆ ಹೇರಳವಾದ ಆಹಾರವನ್ನು, ಸುಗಂಧದ್ರವ್ಯವನ್ನು ಒದಗಿಸುವ ಮಾತೆ. ಅರಣ್ಯಾನಿ ಮಾನವಕುಲಕ್ಕೆ ಮಾತ್ರವಲ್ಲ ಮರಗಳಿಗೂ ಪ್ರಾಣಿ-ಪಕ್ಷಿಗಳಿಗೂ ತಾಯಿ ಎಂಬ ತತ್ವವನ್ನು ಋಗ್ವೇದ ಸಾರುತ್ತದೆ.

ಅಥರ್ವವೇದದಲ್ಲಿ ಬರುವ ಭೂಸೂಕ್ತದಲ್ಲಿ ಭೂಮಿಯನ್ನು ತಾಯಿಯೆಂದು, ಪರ್ಜನ್ಯನನ್ನು (ಮಳೆಯನ್ನು) ತಂದೆಯೆಂದು ಸ್ಮರಿಸಲಾಗಿದೆ. ಬೆಟ್ಟ-ಗುಡ್ಡಗಳನ್ನು, ಸಮುದ್ರಗಳನ್ನು, ನದಿಗಳನ್ನು, ಗಿಡ-ಮರಗಳನ್ನು, ಸಸ್ಯ-ಮೂಲಿಕೆಗಳನ್ನು ಹೊಂದಿರುವ ಭೂಮಿತಾಯಿ ನಮ್ಮಲ್ಲಿ ಜೀವವನ್ನು ತುಂಬುತ್ತಾಳೆ. ಭೂಸೂಕ್ತದಲ್ಲಿ ಋಷಿಗಳು ಮನುಸಂತಾನ, ಎಂದರೆ ಇಡಿಯ ಭೂಮಾತೆಯನ್ನು ಆವರಿಸದಿರಲೆಂದು ಬೇಡಿಕೊಳ್ಳುತ್ತಾರೆ. ಇದರ ತಾತ್ಪರ್ಯ: ಭೂಮಿಯ ಮೇಲೆ ಜನಸಂಖ್ಯಾಸ್ಫೋಟ ನಡೆಯದಿರಲಿ; ಪ್ರಕೃತಿಯ ಮೇಲೆ ಮನುಕುಲದ ಶೋಷಣೆ ನಡೆಯದಿರಲಿ ಎನ್ನುವುದು. ಮುಂಬರುವ ದಿನಗಳ ಬಗ್ಗೆ ಅವರಿಗೆ ಆಗಲೆ ಗೋಚರವಾಗಿತ್ತೇ?

ಈಗಲೂ ನಾವು ಭೂಸೂಕ್ತವನ್ನು ಮನೆ ಕಟ್ಟುವಾಗ ಪಠಿಸುತ್ತೇವೆ: ಆದರೆ ನಮಗೂ ಪ್ರಕೃತಿಗೂ ಭೂಮಿಗೂ ಇರುವ ಅಂತರ್ನಿಷ್ಠ ಸಂಬಂಧಗಳನ್ನು ನಾವು ಮರೆತಿದ್ದೀವಿ. ದುರಾಸೆಯಿಂದ ಉನ್ಮತ್ತನಾಗಿರುವ ಮನುಷ್ಯ ತನ್ನನ್ನು ಪೋಷಿಸುವ ಭೂಮಾತೆಯನ್ನೇ ಶೋಷಿಸುತ್ತಿದ್ದಾನೆ. ಈಗ ಬಂದಿರುವ ಮಹಾಮಾರಿಯ ಅಪಾಯಗಳಿಂದಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಮಾನವಕುಲವೇ ನಶಿಸಿಹೋದೀತು. ನಮ್ಮ ಪೂರ್ವಸೂರಿಗಳ ಜ್ಞಾನಭಂಡಾರದಲ್ಲಿರುವ ವಿವೇಕವನ್ನು ನಾವೂ ಪಡೆಯಬೇಕು; ಧರ್ಮದ ತತ್ವಗಳನ್ನು ಅರಿತು, ನಮ್ಮ ಅನಾಚಾರಗಳನ್ನು ತಿದ್ದುಕೊಂಡು, ಪ್ರಕೃತಿಯೊಂದಿಗೆ ಸಹಬಾಳ್ವೆಯ ಜೀವನವಿಧಾನವನ್ನು ರೂಪಿಸಿಕೊಂಡರಷ್ಟೆ ನಮಗೆ ಸುಖದ ಬದುಕು ಒದಗೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.