ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಬಕವಿ ಬನಹಟ್ಟಿ: ಜವಾರಿ ಬದನೆಗೆ ಭಾರಿ ಬೇಡಿಕೆ

ಕೇವಲ ಹತ್ತು ಗುಂಟೆಯಲ್ಲಿ ಬೆಳೆ; ವರ್ಷವಿಡೀ ಆದಾಯ
Published 19 ಜುಲೈ 2024, 4:22 IST
Last Updated 19 ಜುಲೈ 2024, 4:22 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಮೂರು ದಶಕಗಳ ಹಿಂದೆ ಕೃಷ್ಣಾ ನದಿ ತೀರದ ರೈತರು ತಮ್ಮ ಹೊಲ ತೋಟಗಳಲ್ಲಿ ಜವಾರಿ ಬದನೆಕಾಯಿಯನ್ನು ಬೆಳೆಯುತ್ತಿದ್ದರು. ಈ ಭಾಗದ ಜನರು ಇವುಗಳನ್ನು ಗಡ್ಡೆ ಬದನೆಕಾಯಿ ಎಂದೇ ಕರೆಯುತ್ತಿದ್ದರು. ಅಂದು ಗಡ್ಡೆ ಬದನೆಕಾಯಿಗಳು ಬಹಳಷ್ಟು ಪ್ರಮಾಣದಲ್ಲಿ ದೊರೆಯುತ್ತಿದ್ದವು. ಈಗ ಕೇವಲ ಬೆರಳೆಣಿಕೆಯಷ್ಟು ರೈತರು ಇದನ್ನು ಬೆಳೆಯುತ್ತಿದ್ದಾರೆ. ಅವರಲ್ಲಿ ಜಗದಾಳ ಗ್ರಾಮದ ರೈತ ದಂಪತಿಗಳಾದ ರಮೇಶ ಕಬಾಡಗಿ ಮತ್ತು ಸವಿತಾ ಕಬಾಡಗಿ ಪ್ರಮುಖರು.

ಒಟ್ಟು 1 ಎಕರೆ ಜಮೀನಿದ್ದು ಅದರಲ್ಲಿ ತರಕಾರಿ, ಎಲೆಬಳ್ಳಿ ಬೆಳೆಯುತ್ತಾರೆ. 10 ಗುಂಟೆಯಲ್ಲಿ ವರ್ಷದುದ್ದಕ್ಕೂ ಜವಾರಿ ಬದನೆಕಾಯಿ ಬೆಳೆಯುತ್ತಾರೆ. ಇಂದು ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ತಳಿಯ ಬದನೆಕಾಯಿಗಿಂತ ಜವಾರಿ ಬದನೆಕಾಯಿಗಳ ಸಿಹಿ ಬೇರೆಯಾಗಿರುತ್ತದೆ.

ರಮೇಶ ತಮ್ಮ ತೋಟದಲ್ಲಿ ಕೇವಲ ಹತ್ತು ಗುಂಟೆಯಲ್ಲಿ ಅಂದಾಜು ಒಂದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನಾಟಿ ಮಾಡಿದ್ದಾರೆ. ನಾಟಿ ಮಾಡಿದ ಎರಡು ತಿಂಗಳ ನಂತರ ಕಾಯಿಗಳು ಬರಲಾರಂಭಿಸುತ್ತವೆ. ಬದನೆ ಗಿಡಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಮುಂದಿನ ಏಳೆಂಟು ತಿಂಗಳುಗಳ ಕಾಲ ಕಾಯಿಗಳು ಬರುತ್ತವೆ ಎನ್ನುತ್ತಾರೆ ರಮೇಶ ಕಬಾಡಗಿ.

ಈ ಬದನೆ ಬೀಜಗಳು ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ. ಒಂದೆರಡು ಗಿಡಗಳಲ್ಲಿಯ ಕಾಯಿಗಳನ್ನು ಹಾಗೆ ಬಿಟ್ಟಿರುತ್ತಾರೆ. ಇವು ದೊಡ್ಡದಾಗಿ ಬೆಳೆದು ಗಿಡದಲ್ಲಿಯೇ ಹಣ್ಣಾಗುತ್ತವೆ. ಇವು ಒಡೆಯುವುದಕ್ಕಿಂತ ಮೊದಲು ಅವುಗಳನ್ನು ಕಿತ್ತು, ಅವುಗಳಲ್ಲಿಯ ಬೀಜಗಳನ್ನು ಹೊರ ತೆಗೆದು ಶುಚಿಗೊಳಿಸಿ ಒಣಗಿಸುತ್ತಾರೆ. ನಂತರ ಬೂದಿಯಲ್ಲಿ ಕೂಡಿಸಿ ಬಟ್ಟೆಯಲ್ಲಿ ಕಟ್ಟಿಡುತ್ತಾರೆ. ನಂತರ ಅವುಗಳನ್ನು ನಾಟಿ ಮಾಡುತ್ತಾರೆ.

ನಿತ್ಯ ಅಂದಾಜು 30 ಕೆ.ಜಿ.ಗಳಷ್ಟು ಬದನೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಬರುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಜವಾರಿ ಬದನೆಕಾಯಿಯು ₹ 100 ರಿಂದ 120 ರವರೆಗೆ ಮಾರಾಟವಾಗುತ್ತದೆ. ದಿನಾಲು ಅಂದಾಜು ₹ 3000 ಗಳಿಸುತ್ತಾರೆ. ನಾಟಿ ಮಾಡುವುದು, ಮಲ್ಚಿಂಗ್ ಪೇಪರ್ ಹಾಕುವುದು, ಕಳೆ ಕೀಳುವುದು, ನೀರು, ಗೊಬ್ಬರ ಸೇರಿದಂತೆ ಅಂದಾಜು ₹ 25 ಸಾವಿರದಿಂದ ₹ 30 ಸಾವಿರದವರೆಗೆ ಖರ್ಚು ಮಾಡಿದ್ದಾರೆ.

ಒಂದು ಬೆಳೆ ಮುಕ್ತಾಯ ವಾಗುವಷ್ಟರಲ್ಲಿಯೇ ಮತ್ತೊಂದು ಕಡೆ ಭೂಮಿಯನ್ನು ತಯಾರು ಮಾಡಿರುತ್ತಾರೆ. ಇದರಿಂದಾಗಿ ವರ್ಷ ಪೂರ್ತಿ ಬದನೆಕಾಯಿಗಳನ್ನು ಬೆಳೆಯುತ್ತಾರೆ. ಇನ್ನೂ ಸ್ಥಳೀಯ ಮಾರುಕಟ್ಟೆಯಲ್ಲಿಯೇ ಭಾರಿ ಬೇಡಿಕೆ ಇರುವುದರಿಂದ ಕೆಲವು ಜನರು ಜಗದಾಳ ಮತ್ತು ನಾವಲಗಿ ಗ್ರಾಮದ ಮಧ್ಯದಲ್ಲಿರುವ ತೋಟಕ್ಕೆ ಬಂದು ಬದನೆಕಾಯಿಗಳನ್ನು ಖರೀದಿಸುತ್ತಿದ್ದಾರೆ. ತೋಟದಲ್ಲಿ ಬೆಳೆದ ಬದನೆಕಾಯಿಗಳನ್ನು ಪತ್ನಿ ಸವಿತಾ ಕಬಾಡಗಿ ಮಾರುಕಟ್ಟೆಯಲ್ಲಿ ಕುಳಿತು ಮಾರಾಟ ಮಾಡುತ್ತಾರೆ. ಬೆಂಗಳೂರು, ಮುಂಬೈ, ಬೆಳಗಾವಿ, ಹುಬ್ಬಳ್ಳಿ ಮತ್ತು ಪುಣೆ ಸೇರಿದಂತೆ ಅನೇಕ ನಗರಗಳಲ್ಲಿ ವಾಸಿಸುತ್ತಿರುವ ಈ ಭಾಗದ ಜನರಿಗೂ ಇಲ್ಲಿಯ ಬದನೆಕಾಯಿಗಳು ತಲುಪುತ್ತವೆ.

ಮಾರುಕಟ್ಟೆಗೆ ಸಿದ್ಧವಾದ ಜವಾರಿ ಬದನೆಕಾಯಿ

ಮಾರುಕಟ್ಟೆಗೆ ಸಿದ್ಧವಾದ ಜವಾರಿ ಬದನೆಕಾಯಿ

ಹದಿನೈದು ದಿನಗಳ ಹಿಂದೆ ನಮ್ಮಲ್ಲಿ ಬೆಳೆದ ಜವಾರಿ ಬದನೆಕಾಯಿಗಳನ್ನು ಬನಹಟ್ಟಿಯ ಒಬ್ಬರು ಲಂಡನ್‌ನಲ್ಲಿ ಇರುವ ತಮ್ಮ ಮಕ್ಕಳಿಗೂ ಕಳುಹಿಸಿದ್ದರು
-ರಮೇಶ ಕಬಾಡಗಿ,ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT