ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಡಲಸಂಗಮ: ಹಸಿರಿನಿಂದ ಕಂಗೊಳಿಸುವ ಜಿಟಿಟಿಸಿ ಕೇಂದ್ರ

23 ವರ್ಷಗಳ ಹಿಂದೆ ಬಯಲು ಪ್ರದೇಶದಲ್ಲಿ ಆರಂಭವಾದ ಕೇಂದ್ರ
Published 21 ಜೂನ್ 2024, 6:09 IST
Last Updated 21 ಜೂನ್ 2024, 6:09 IST
ಅಕ್ಷರ ಗಾತ್ರ

ಕೂಡಲಸಂಗಮ: ಹಚ್ಚ ಹಸಿರಿನಿಂದ ಕೂಡಿರುವ ಕೂಡಲಸಂಗಮ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಮಲೆನಾಡಿನ ಅನುಭವ ನೀಡುತ್ತದೆ. ತರಬೇತಿ ಕೇಂದ್ರ ಪ್ರವೇಶಿಸಿದರೆ ಸಾಕು ಅಲ್ಲಿರುವ ಗಿಡ–ಮರಗಳು, ಆ ಸುಂದರ ಪರಿಸ ಮನಸ್ಸಿಗೆ ಮುದ ನೀಡುತ್ತದೆ.

12 ಎಕರೆ ವಿಶಾಲವಾದ ತರಬೇತಿ ಕೇಂದ್ರದಲ್ಲಿ ವಿವಿಧ ಜಾತಿಯ 600ಕ್ಕೂ ಅಧಿಕ ಮರ-ಗಿಡಗಳು ಇವೆ. ತಾಂತ್ರಿಕ ತರಬೇತಿ ಕೇಂದ್ರದ ಪ್ರತಿ ರಸ್ತೆ, ಕಟ್ಟಡಗಳ ಬದಿಯಲ್ಲಿ ಗಿಡ–ಮರಗಳಿದ್ದು, ಸುಂದರ ವಾತಾವರಣ ಮಕ್ಕಳ ಓದಿಗೆ ಪೂರಕವಾಗಿದೆ.

ತರಗತಿ ಕೊಠಡಿ, ಪ್ರಯೋಗಾಲಯ, ಆಡಳಿತ ಕಚೇರಿ, ವಸತಿ ನಿಲಯ, ಕ್ಯಾಂಟೀನ್‌, ಸಿಬ್ಬಂದಿ ನಿವಾಸಗಳ ಸುತ್ತಲೂ ಮರ-ಗಿಡಗಳು ಇವೆ. 2001ರಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ವಿಶೇಷಾಧಿಕಾರಿಯಾಗಿದ್ದ ಶಿವಾನಂದ ಜಾಮದಾರ ಅವರು ವಿಶೇಷ ಆಸಕ್ತಿ ವಹಿಸಿ ನೆಟ್ಟ ಸಸಿಗಳನ್ನು ತರಬೇತಿ ಕೇಂದ್ರದ ಸಿಬ್ಬಂದಿ ಪೋಷಿಸಿ, ಸಂರಕ್ಷಣೆ ಮಾಡಿದ ಪರಿಣಾಮ ಇಂದು ಬೃಹತ್‌ ಮರಗಳಾಗಿ ಬೆಳೆದಿವೆ. ಅಂದಿನಿಂದ ಇಂದಿನವರೆಗೆ ತರಬೇತಿ ಕೇಂದ್ರಕ್ಕೆ ಬಂದ ಪ್ರಾಚಾರ್ಯರು, ಉಪನ್ಯಾಸಕರು ಪರಿಸರ ಬೆಳೆಸುವ ಕಾರ್ಯ ಮಾಡುತ್ತಿದ್ದು, ಇಂದು ತರಬೇತಿ ಕೇಂದ್ರ ಸುಂದರ ಪರಿಸರವಾಗಿ ನಿರ್ಮಾಣವಾಗಿದೆ.

ತರಬೇತಿ ಕೇಂದ್ರದಲ್ಲಿ ಶ್ರೀಗಂಧ, ತೆಂಗು, ಮಾವು, ಚಿಕ್ಕು, ಬೇವಿನ ಮರ, ಬದಾಮಿ, ಗಾಳೆಮರ, ಹುಣಸೆ ಮರ, ನೆರಳೆ, ರುದ್ರಾಕ್ಷಿ, ಸಂಕೇಶ್ವರ, ಪೇರಲು, ಗಗನ ಮಲ್ಲಿಗೆ ಮುಂತಾದ ಮರಗಳು ಇವೆ. ವಿವಿಧ ಹೂವಿನ ಬಳ್ಳಿಗಳು ಕೇಂದ್ರಕ್ಕೆ ಬರುವವರನ್ನು ಆಕರ್ಷಿಸುತ್ತವೆ. 23 ವರ್ಷಗಳ ಹಿಂದೆ ಬಯಲು ಜಾಗದಲ್ಲಿ ಆರಂಭವಾದ ತರಬೇತಿ ಕೇಂದ್ರ ಇಂದು ಮರ ಗಿಡಗಳಿಂದ ಶೃಂಗಾರಗೊಂಡಿದೆ.

‘ನಮ್ಮ ತರಬೇತಿ ಕೇಂದ್ರದ ವಾತಾವರಣ ಹಚ್ಚ ಹಸಿರಿನಿಂದ ಕೂಡಿದ್ದು ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿದೆ’ ಎನ್ನುತ್ತಾರೆ ತರಬೇತಿ ಕೇಂದ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ ಇಂದುಮತಿ ಮಠ.

‘ನಮ್ಮದು ತಾಂತ್ರಿಕ ತರಬೇತಿ ಕೇಂದ್ರ, ಇಲ್ಲಿ ಪ್ರಾಯೋಗಿಕ ತರಬೇತಿ ಅಧಿಕವಾಗಿದ್ದು, ನಿತ್ಯ ಪ್ರಾಯೋಗಿಕ ತರಬೇತಿಯಲ್ಲಿ ತೊಡಗಿದ ವಿದ್ಯಾರ್ಥಿಗಳಿಗೆ ಇಲ್ಲಿಯ ಸುಂದರ ಪರಿಸರ ಮನಸ್ಸಿಗೆ ಆಹ್ಲಾದ ನೀಡುತ್ತದೆ. ಗಿಡ ಮರಗಳು ಅಧಿಕ ಇರುವುದರಿಂದ ಅಧಿಕ ಪಕ್ಷಿಗಳೂ ಇಲ್ಲಿವೆ. ವಿದ್ಯಾರ್ಥಿಗಳು ಮರ–ಗಿಡಗಳನ್ನು ಪೋಷಿಸಿ, ಬೆಳೆಸುವುದರ ಜೊತೆಗ ಪಕ್ಷಿಸಂಕುಲವನ್ನು ವೃದ್ಧಿಸುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಉಪನ್ಯಾಸಕ ಶಿವಕುಮಾರ ಎ.ಕೆ ಹೇಳಿದರು.

2020ರಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಧೀನ ಆಯುಕ್ತೆ ರಾಜಶ್ರೀ ಅಗಸರ ನಡೆಸಿದ  ಸಮೀಕ್ಷೆಯಲ್ಲಿ ಈ ತರಬೇತಿ ಕೇಂದ್ರದಲ್ಲಿ 323 ಮರ-ಗಿಡಗಳು ಇದ್ದವು. 2022ರಲ್ಲಿ 300 ಗಿಡಗಳನ್ನು ನೆಡಲಾಗಿದೆ.

ಕೂಡಲಸಂಗಮದ ಜಿಟಿಟಿಸಿ ಕೇಂದ್ರದ ಆವರಣದಲ್ಲಿರುವ ಗಿಡಗಳು
ಕೂಡಲಸಂಗಮದ ಜಿಟಿಟಿಸಿ ಕೇಂದ್ರದ ಆವರಣದಲ್ಲಿರುವ ಗಿಡಗಳು
ನಿತ್ಯವು ಗಿಡ ಮರಗಳನ್ನು ಪೋಷಿಸಿ ಬೆಳೆಸುವ ಕಾರ್ಯವನ್ನು ನಮ್ಮ ಸಿಬ್ಬಂದಿ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಪ್ರತಿ ವರ್ಷವೂ ಸಸಿ ನೆಡುವ ಕಾರ್ಯ ಮಾಡುತ್ತಿದ್ದೇವೆ
ಸುರೇಶ ರಾಠೋಡ ಪ್ರಾಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT