ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷ್ಣೆ ಪ್ರವಾಹಕ್ಕೆ ಸೋತ ಗಡ್ಡಿ ಮಂದಿ

ಉಪಜೀವನಕ್ಕೆ ಸಾಕಿದ ಜಾನುವಾರಗಳು ಮೇವಿಲ್ಲದೆ ಪರದಾಡುವ ಸ್ಥಿತಿ
Published 31 ಜುಲೈ 2024, 7:12 IST
Last Updated 31 ಜುಲೈ 2024, 7:12 IST
ಅಕ್ಷರ ಗಾತ್ರ

ಜಮಖಂಡಿ: ಪ್ರತಿ ವರ್ಷ ಜುಲೈ- ಆಗಸ್ಟ್ ತಿಂಗಳು ಬರುತ್ತಿದ್ದಂತೆ ನದಿ ತೀರದ ಜನರಲ್ಲಿ ಆತಂಕ ಶುರುವಾಗುತ್ತದೆ.  ಕೃಷ್ಣಾ ನದಿ ನೀರು ಮನೆ ಹೊಕ್ಕು ಮನೆ ಮಂದಿ, ಸಾಮಗ್ರಿಯನ್ನೆ ಹೊರದಬ್ಬುತ್ತದೆ. ಇದರಿಂದ ಗಡ್ಡಿಯ ಜನರು ನದಿಗೆ ಸೋತು ಸುಣ್ಣವಾಗಿದ್ದಾರೆ.

ಪೂರ್ವಜರ ಹೊಲ ಮನೆ ಇದ್ದರು ಅವುಗಳನ್ನು ಬಿಟ್ಟು ಮನೆಯ ಸಾಮಗ್ರಿಗಳನ್ನು ಹೊತ್ತುಕೊಂಡು, ಸಾಕಿರುವ ಜಾನುವಾರುಗಳನ್ನು ಬೆನ್ನತ್ತಿಕೊಂಡು ಸಂಬಂಧಿಕರ ಕದ ತಟ್ಟುವುದು ಮಾತ್ರ ತಪ್ಪುತ್ತಿಲ್ಲ. ಸರ್ಕಾರ ತೆರೆದಿರುವ ಕಾಳಜಿ ಕೇಂದ್ರಕ್ಕೆ ಹೋಗಿ ಎಲ್ಲರೊಂದಿಗೆ ಇರಲು ಅವರಿಗೆ ಸ್ವಾಭಿಮಾನ  ಕಾಡುತ್ತದೆ. ಜಾನುವಾರಗಳಿಗೆ ಮೇವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ.

‘ಆಲಮಟ್ಟಿ– 519ರಲ್ಲಿ ಮುಳುಗಡೆಯಾಗಿ 160 ಎಕರೆ ಪ್ರದೇಶ ಮಾತ್ರ ಉಳಿದಿದೆ. ನಾವು ಪ್ರತಿವರ್ಷ ಬೆಳೆ ಮಾಡುತ್ತೇವೆ. ನದಿಯಲ್ಲಿ ನೀರು ಬಂದರೆ ಮಾಡಿದ ಬೆಳೆ ನೀರುಪಾಲಾಗುತ್ತದೆ. ಪ್ರತಿವರ್ಷ ಎಕರೆಗೆ ಕನಿಷ್ಠ ₹1 ಲಕ್ಷ ಆದಾಯ ಬಂದರೂ ₹1.6ಕೋಟಿ ನಷ್ಟವಾಗುತ್ತಿದೆ. ಆದರೆ ಸರ್ಕಾರ ನಮಗೆ ಬಿತ್ತನೆ ಮಾಡಿದಷ್ಟು ಪರಿಹಾರ ನೀಡುವುದಿಲ್ಲ. ನಮ್ಮ ಕಷ್ಟ ಸರ್ಕಾರಕ್ಕೆ ಯಾಕೆ ತಿಳಿಯುತ್ತಿಲ್ಲ’ ಎಂದು ರೈತ ಪಾಯಪ್ಪ ತೇರದಾಳ ಆಕ್ರೋಶ ವ್ಯಕ್ತಪಡಿಸಿದರು.

‘2005, 2019ರಲ್ಲಿ ಪ್ರವಾಹ ಬಂದಾಗ ನಮಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಡಿಸಿ, ಸಚಿವರು ಸೇರಿದಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಈ ಬಗ್ಗೆ ಇನ್ನೂ ಅಧಿಕಾರಿಗಳು ವರದಿ ತಯಾರಿಸಿ ವಿಶೇಷ ಅನುದಾನ ಮುಂಜೂರು ಮಾಡಿಸಲು ಮುಂದಾಗಿಲ್ಲ. ನಮ್ಮ ಮನೆ ಬಿಟ್ಟು ಬರುವಂತೆ ಹೇಳುತ್ತಾರೆ. ಬಂದ ನಂತರ ಯಾರೂ ಕೇಳುವವರು ಇರುವುದಿಲ್ಲ’ ಎಂದು ಅಣ್ಣಪ್ಪ ಹಿಪ್ಪರಗಿ ಆರೋಪಿಸಿದರು.

160 ಎಕರೆಗೆ ₹30 ಲಕ್ಷದಂತೆ ಹಾಗೂ ಮನೆಗಳಿಗೆ ಸರ್ಕಾರದ ನಿಯಮದಂತೆ ಪರಿಹಾರ ನೀಡಿದರೆ ₹60-₹70 ಕೋಟಿಯಲ್ಲಿ ಮುತ್ತೂರು ನಡುಗಡ್ಡೆ ಶಾಶ್ವತವಾಗಿ ಪರಿಹಾರವಾಗುತ್ತದೆ. ಪ್ರತಿವರ್ಷ ಬೋಟ್ ಗೆ ಇಂಧನ, ಮೇವು, ಕಾಳಜಿ ಕೇಂದ್ರ ಮಾಡಿ ಅನಾವಶ್ಯಕ ಖರ್ಚು ಮಾಡುವುದನ್ನು ಬಿಟ್ಟು ಶಾಶ್ವತ ಪರಿಹಾರ ನೀಡಲು ಅಧಿಕಾರಿಗಳು ಶ್ರಮಿಸಬೇಕು ನಮಗೆ ಆಲಮಟ್ಟಿ– 519ರ ವರೆಗೆ ಪರಿಹಾರ ನೀಡಿದ್ದಾರೆ. ಅಲ್ಲಿಯ ವರೆಗೆ ಮಾತ್ರ ನೀರು ನಿಲ್ಲಿಸಬೇಕು. ಅದನ್ನು ಬಿಟ್ಟು ಹೆಚ್ಚಿಗೆ ನಿಲ್ಲಿಸುವುದರಿಂದ ನಮ್ಮ ಜಮೀನಿನಲ್ಲಿ ನೀರು ನುಗ್ಗಿ ಪ್ರತಿವರ್ಷ ಲಕ್ಷಾಂತರ ಹಾನಿಯಾಗುತ್ತಿದೆ. ನಾವು ಬದುಕು ಕಟ್ಟಿಕೊಳ್ಳುವುದಾದರು ಹೇಗೆ’ ಎಂದು ಏಗಪ್ಪ ಹಿಪ್ಪರಗಿ ಪ್ರಶ್ನಿಸಿದರು.

‘ಮಹಿಳೆಯರು, ಮಕ್ಕಳನ್ನು ಕರೆದುಕೊಂಡು ಕಾಳಜಿ ಕೇಂದ್ರದಲ್ಲಿ ಇರಲು ಹೇಗೆ ಸಾಧ್ಯವಾಗುತ್ತದೆ, ಕಾಳಜಿ ಕೇಂದ್ರ ಹೆಸರಿಗಷ್ಟೆ ಮಾಡುತ್ತಾರೆ. ಸೊಳ್ಳೆಗಳ ಕಾಟ, ಹಸಿಬಿಸಿ ಊಟ ಎಲ್ಲವನ್ನು 2019ರಲ್ಲಿ ಕಂಡಿದ್ದೇವೆ. ನಾವು ಸಂಬಂಧಿಕರ ಮನೆಯಲ್ಲಿ ಇರುತ್ತೇವೆ. ಜಾನುವಾರಗಳ ಕಥೆ ಏನು? ಅವುಗಳಿಗೆ ಮೊದಲು ಮೇವು ನೀಡಲಿ’ ಎಂದು ಬಸಲಿಂಗ ಆಗ್ರಹಿಸಿದರು.

ಜಮಖಂಡಿ ತಾಲ್ಲೂಕಿನ ಮುತ್ತೂರ ಗ್ರಾಮದ ನಡುಗಡ್ಡೆ ಜಮೀನುಗಳ ಹಾದು ನೀರು ಹೋಗಿರುವುದು
ಜಮಖಂಡಿ ತಾಲ್ಲೂಕಿನ ಮುತ್ತೂರ ಗ್ರಾಮದ ನಡುಗಡ್ಡೆ ಜಮೀನುಗಳ ಹಾದು ನೀರು ಹೋಗಿರುವುದು
ತಹಶೀಲ್ದಾರಗೆ ಮನವಿ ಮಾಡಲಾಗಿದೆ. ಇನ್ನೂ ಮೇವು ಬಂದಿಲ್ಲ. ಬಂದ ನಂತರ ನೀಡಲಾಗುವುದು  
-ಜೆ.ಜಿ.ಸವದಿ ನೋಡಲ್‌ ಅಧಿಕಾರಿ

‘ಒಂದು ಕಡ್ಡಿ ಮೇವೂ ನೀಡಿಲ್ಲ’ 

‘ಮುತ್ತೂರು ನಡುಗಡ್ಡೆಯಿಂದ ಹೊರಗೆ ಬಂದು 5 ದಿನಗಳಾಯ್ತು. 11 ಜಾನುವಾರಗಳಿವೆ. ಎಲ್ಲ ವ್ಯವಸ್ಥೆ ಮಾಡಿಸುತ್ತೇವೆ ಎಂದು ತಾಲ್ಲೂಕು ಆಡಳಿತ ಕರೆದುಕೊಂಡು ಬಂದಿದ್ದಾರೆ. ಇಲ್ಲಿಯವರೆಗೆ ಒಂದು ಕಡ್ಡಿ ಮೇವು ನೀಡಿಲ್ಲ. ಬೆಳೆ ಪ್ರತಿವರ್ಷ ನಾಶವಾಗುತ್ತದೆ. ನಮ್ಮ ಉಪಜೀವನಕ್ಕಾಗಿ ಸಾಕಿರುವ ಜಾನುವಾರುಗಳು ಮೇವಿಲ್ಲದೆ ಪರದಾಡುತ್ತಿವೆ. ಇದಕ್ಕೆ ಏನು ಮಾಡಬೇಕು’  ಎಂದು ನಾಗೇಶ ಹಿಪ್ಪರಗಿ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT