ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಳಕಲ್: ಬಗೆಹರಿಯದ ಮಾರುಕಟ್ಟೆ ಸಮಸ್ಯೆ; ಸಾರ್ವಜನಿಕರಿಗೆ ತೊಂದರೆ

Published 17 ಜುಲೈ 2024, 6:53 IST
Last Updated 17 ಜುಲೈ 2024, 6:53 IST
ಅಕ್ಷರ ಗಾತ್ರ

ಇಳಕಲ್: ನಗರದ ತರಕಾರಿ ಮಾರುಕಟ್ಟೆಯಲ್ಲಿ ಬಿಸಿಲು, ಮಳೆ, ಗಾಳಿ, ಧೂಳು, ಕೊಳಚೆ, ವಾಹನಗಳ ಭರಾಟೆ ಹಾಗೂ ನೂರಾರು ಬಿಡಾಡಿ ದನಗಳ ಭಯದ ನಡುವೆಯೇ ಕುಳಿತು ವ್ಯಾಪಾರಸ್ಥರು ತರಕಾರಿ ಮಾರುತ್ತಾರೆ. ಜನರು ಅಷ್ಟೇ ಕಷ್ಟಪಟ್ಟು ತರಕಾರಿ ಖರೀದಿಸುತ್ತಾರೆ.

ತರಕಾರಿ ಮಾರುಕಟ್ಟೆ ಮುಖ್ಯ ಬಜಾರದ ಪಶ್ಚಿಮ ತುದಿಗೆ ನಗರದ ಮಧ್ಯ ಭಾಗದಲ್ಲಿದೆ. 1925ರಲ್ಲಿ 20 ಸಾವಿರ ಜನಸಂಖ್ಯೆಗೆ ನಿರ್ಮಿಸಲಾದ ಸುಸಜ್ಜಿತ ‘ಶಾನನ್ ತರಕಾರಿ ಮಾರುಕಟ್ಟೆ’ 200 ಅಡಿ ಉದ್ದ, 100 ಅಡಿ ಅಗಲ ಇದ್ದು, ಇದು ಈಗ 1 ಲಕ್ಷ ಜನಸಂಖ್ಯೆ ಹೊಂದಿರುವ ನಗರಕ್ಕೆ ಚಿಕ್ಕದಾಗಿದೆ.

ವಾರದ ಸೋಮವಾರ ಮತ್ತು ಗುರುವಾರ ಇಲ್ಲಿ ಸಂತೆ ನಡೆಯುತ್ತದೆ. ಉಳಿದ ದಿನಗಳಲ್ಲೂ ರಸ್ತೆ ಬದಿಯಲ್ಲಿ ತರಕಾರಿ, ಹಣ್ಣು ಮಾರಾಟ ನಡೆಯುತ್ತದೆ. ಬಸವಣ್ಣ ಗುಡಿ ಹತ್ತಿರದ ಅಶೋಕ ಮೆಡಿಕಲ್ಸ್‌ದಿಂದ ಆರಂಭವಾಗಿ ರಾಮ ಮಂದಿರ ಮಾರ್ಗವಾಗಿ ಗಾಯತ್ರಿ ಕಲ್ಯಾಣ ಮಂಟಪದವರೆಗಿನ ರಸ್ತೆಯು ತರಕಾರಿ ಮಾರುಕಟ್ಟೆಯಾಗಿ ಪರಿವರ್ತನೆಯಾಗುತ್ತದೆ. ಮನೆ ಬಾಗಿಲಲ್ಲಿಯೇ ಸಂತೆ ನಡೆಯುವ ಕಾರಣ ಇಲ್ಲಿಯ ನಿವಾಸಿಗಳ ಖಾಸಗಿತನ ಹಾಗೂ ನೆಮ್ಮದಿಗೂ ಭಂಗ ಬಂದಿದೆ.

ನೂರಾರು ಹೆಣ್ಣು ಮಕ್ಕಳು ರಸ್ತೆಯ ಇಕ್ಕೆಲಗಳಲ್ಲಿ ಬಿಸಿಲು, ಮಳೆ, ಗಾಳಿ ಹಾಗೂ ವಾಹನಗಳ ಓಡಾಟದ ನಡುವೆ ಕುಳಿತು ತರಕಾರಿ ಮಾರಾಟ ಮಾಡುತ್ತಾರೆ. ಆಗಾಗ ನುಗ್ಗುವ ಬಿಡಾಡಿ ದನಗಳು ಹಾಗೂ ಹಂದಿಗಳು ಭಯ ಹುಟ್ಟಿಸುತ್ತವೆ. ಕೆಲವು ವರ್ಷಗಳ ಹಿಂದೆ ತರಕಾರಿ ಖರೀದಿಸಲು ಬಂದಿದ್ದ ನಾಗರಿಕರೊಬ್ಬರು ಬಿಡಾಡಿ ದನ ಗುದ್ದಿದ ಪರಿಣಾಮವಾಗಿ ಮೃತಪಟ್ಟ ಘಟನೆಯೂ ನಡೆದಿತ್ತು.

ನಗರದ ದಕ್ಷಿಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯ ಮೂಲಕ ಸಂತೆ ನಡೆಯುವ ದಿನ ಹೋಗುವವರು ಹರಸಾಹಸ ಪಡಬೇಕಿದೆ. ಬಸವಣ್ಣನ ಗುಡಿ ಹತ್ತಿರ ಪಾರ್ಕಿಂಗ್‌ ಮಾಡಲಾದ ವಾಹನಗಳು, ತರಕಾರಿ ಇಳಿಸಲು ಬರುವ ಮಿನಿ ಲಾರಿಗಳು ಹಾಗೂ ಹಣ್ಣು ಮಾರಾಟಗಾರರ ಒತ್ತುಬಂಡಿಗಳು ಸಂಪೂರ್ಣ ರಸ್ತೆಯನ್ನು ಆಕ್ರಮಿಸುತ್ತವೆ. ಪರಿಣಾಮವಾಗಿ ಬಜಾರದ ಮುಖ್ಯ ರಸ್ತೆಯು ಜನ ಹಾಗೂ ವಾಹನಗಳ ದಟ್ಟಣೆಯಿಂದ ಸ್ತಬ್ಧಗೊಳ್ಳುತ್ತಿದೆ.

ಬಳಕೆಯಾಗದ ಸೂಪರ್‌ ಮಾರ್ಕೆಟ್‌ : ನಗರದ ಹನಮಸಾಗರ ರಸ್ತೆಯ ಪಕ್ಕ, ಸಜ್ಜನ ಶಾಲೆ ಹತ್ತಿರ ನಗರಸಭೆಯಿಂದ ₹ 4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸೂಪರ್‌ ಮಾರ್ಕೆಟ್‌ ನಿರ್ಮಿಸಲಾಗಿದೆ. ಈ ವಾಣಿಜ್ಯ ಸಂಕೀರ್ಣದ ಒಳ ಆವರಣದಲ್ಲಿ ತರಕಾರಿ ಮಾರುಕಟ್ಟೆಗಾಗಿಯೇ 60ಕ್ಕೂ ಹೆಚ್ಚು ಕಟ್ಟೆಗಳನ್ನು ಕಟ್ಟಲಾಗಿದೆ. ಸಗಟು ವ್ಯಾಪಾರಸ್ಥರಿಗೂ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಪಾರ್ಕಿಂಗ್‌ಗೂ ಸ್ಥಳಾವಕಾಶವಿದೆ. ಆದರೆ ತರಕಾರಿ ಮಾರುಕಟ್ಟೆ ಈವರೆಗೂ ಇಲ್ಲಿಗೆ ಸ್ಥಳಾಂತರವಾಗಿಲ್ಲ. ಜತೆಗೆ ಸಗಟು ತರಕಾರಿ ವ್ಯಾಪಾರಸ್ಥರಿಗಾಗಿ ಎಪಿಎಂಸಿಯಲ್ಲಿ ಸಂತೆ ಕಟ್ಟೆ ಕಟ್ಟಲಾಗಿದೆ. ಅದು ಸಹ ಬಳಕೆ ಇಲ್ಲದೇ ಹಾಳಾಗುತ್ತಿದೆ.

‘ಅತ್ಯಂತ ಇಕ್ಕಟ್ಟಾದ ಸದ್ಯದ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯ ಪರಿಹಾರಕ್ಕೆ ವ್ಯವಸ್ಥೆಗಳಿದ್ದರೂ ನಗರಸಭೆಯು ತರಕಾರಿ ಮಾರುಕಟ್ಟೆಯ ಸ್ಥಳಾಂತರಕ್ಕೆ ಮುಂದಾಗುತ್ತಿಲ್ಲʼ ಎಂದು ಜೆಡಿಎಸ್‌ ಮುಖಂಡ ಉಮೇಶ ಶಿರೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಕೆ

ಸೂಪರ್ ಮಾರ್ಕೆಟ್‌ನಲ್ಲಿರುವ ತರಕಾರಿ ಮಾರಾಟದ ಕಟ್ಟೆಗಳನ್ನು ಲೀಲಾವು ಮೂಲಕ ವ್ಯಾಪಾರಸ್ಥರಿಗೆ ಹಂಚಿಕೆ ಮಾಡಬೇಕಿದೆ. ಪ್ರಸ್ತಾವವನ್ನು ಜಿಲ್ಲಾಧಿಕಾರಿ ಅನುಮತಿಗಾಗಿ ಕಳುಹಿಸಲಾಗಿದ್ದು ಕಟ್ಟೆಗಳ ಹರಾಜಿನ ನಂತರ ತರಕಾರಿ ಮಾರುಕಟ್ಟೆ ಸೂಪರ್ ಮಾರ್ಕೆಟ್‌ಗೆ ಸ್ಥಳಾಂತರಗೊಳ್ಳಲಿದೆ. ಶ್ರೀನಿವಾಸ ಜಾಧವ ಪೌರಾಯುಕ್ತರು ನಗರಸಭೆ ಇಳಕಲ್

ಇಳಕಲ್‌ನಲ್ಲಿ ಇಕ್ಕಟ್ಟಾದ ರಸ್ತೆಯ ಮೇಲೆ ತರಕಾರಿ ಮಾರಾಟ ನಡೆಯುತ್ತದೆ
ಇಳಕಲ್‌ನಲ್ಲಿ ಇಕ್ಕಟ್ಟಾದ ರಸ್ತೆಯ ಮೇಲೆ ತರಕಾರಿ ಮಾರಾಟ ನಡೆಯುತ್ತದೆ
ಇಳಕಲ್‌ನಲ್ಲಿ ಇಕ್ಕಟ್ಟಾದ ರಸ್ತೆಯ ಮೇಲೆ ತರಕಾರಿ ಮಾರಾಟ ನಡೆಯುತ್ತದೆ
ಇಳಕಲ್‌ನಲ್ಲಿ ಇಕ್ಕಟ್ಟಾದ ರಸ್ತೆಯ ಮೇಲೆ ತರಕಾರಿ ಮಾರಾಟ ನಡೆಯುತ್ತದೆ
ಇಳಕಲ್ ಸೂಪರ್ ಮಾರುಕಟ್ಟೆಯಲ್ಲಿರುವ ತರಕಾರಿ ಮಾರಾಟದ ಕಟ್ಟೆಗಳು
ಇಳಕಲ್ ಸೂಪರ್ ಮಾರುಕಟ್ಟೆಯಲ್ಲಿರುವ ತರಕಾರಿ ಮಾರಾಟದ ಕಟ್ಟೆಗಳು
ಇಳಕಲ್ ಸೂಪರ್ ಮಾರುಕಟ್ಟೆಯಲ್ಲಿರುವ ತರಕಾರಿ ಮಾರಾಟದ ಕಟ್ಟೆಗಳು
ಇಳಕಲ್ ಸೂಪರ್ ಮಾರುಕಟ್ಟೆಯಲ್ಲಿರುವ ತರಕಾರಿ ಮಾರಾಟದ ಕಟ್ಟೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT