ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಚುನಾವಣಾ ಅಕ್ರಮ: ಸಮಾಜ ಕಲ್ಯಾಣ ಇಲಾಖೆಗೆ ದೂರು

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಳಕೆ ಬಗ್ಗೆ ದೂರು
Published 17 ಜುಲೈ 2024, 7:11 IST
Last Updated 17 ಜುಲೈ 2024, 7:11 IST
ಅಕ್ಷರ ಗಾತ್ರ

ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಳಸಿದ ಬಗ್ಗೆ ತನಿಖೆ ನಡೆಸಲು ಕೋರಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ನೀಡಿದ್ದ ದೂರನ್ನು ರಾಜ್ಯ ಚುನಾವಣಾ ಆಯೋಗ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ವರ್ಗಾಯಿಸಿದೆ.

ಚುನಾವಣೆ ಅಕ್ರಮಗಳ ತನಿಖೆ ಮತ್ತು ಮಹರ್ಷಿ ವಾಲ್ಮೀಕಿ ನಿಗಮಕ್ಕೆ ನೇರ ಸಂಬಂಧಪಡದ ಸಮಾಜ ಕಲ್ಯಾಣ ಇಲಾಖೆಗೆ ಚುನಾವಣಾ ಆಕ್ರಮದ ದೂರು ವರ್ಗಾವಣೆಯಾಗಿದ್ದು, ಗೊಂದಲ ಮತ್ತು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.

‘ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇದ್ದಾಗಲೇ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ₹ 84 ಕೋಟಿ ದುರ್ಬಳಕೆ ಆಗಿದೆ. ಆ ಹಣವು ಚುನಾವಣೆಗೂ ಬಳಕೆಯಾಗಿರುವ ಸಾಧ್ಯತೆ ಇದೆ. ನಿಗಮದ ನೌಕರರೊಬ್ಬರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಮಾಜಿ ಸಚಿವ ಬಿ.ನಾಗೇಂದ್ರ ಅವರ ಹೆಸರಿನ ಪ್ರಸ್ತಾಪವೂ ಆಗಿದೆ. ಇದೆಲ್ಲದರ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಧಾರವಾಡದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಜಿಲ್ಲಾ ಚುನಾವಣಾಧಿಕಾರಿ ಮತ್ತು ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇನೆ’ ಎಂದು ಅರುಣ್ ಹಿರೇಹಾಳ ‘ಪ್ರಜಾವಾಣಿ’ಗೆ ತಿಳಿಸಿದರು. ವೃತ್ತಿಯಿಂದ ‘ಡಿಸೈನಿಂಗ್‌ ಕನ್ಸಲ್ಟೆಂಟ್‌’ ಆಗಿರುವ ಅವರು ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 

‘ಸುಪ್ರೀಂ’ಗೆ ದೂರು:  ‘ನನ್ನ ದೂರನ್ನು ಸಮಾಜ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗಿದೆ. ಚುನಾವಣಾ ಆಯೋಗ ಕಾಂಗ್ರೆಸ್‌ ಪರ ಇದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿರುವ ಇ.ತುಕಾರಾಂ ಅವರ ರಕ್ಷಣೆಗೆ ಪ್ರಯತ್ನ ನಡೆದಿದೆ ಎಂಬುದನ್ನು ಇದು ಸಾಬೀತು ಪಡಿಸುತ್ತದೆ. ತುಕಾರಾಂ ಪರ ನಾಗೇಂದ್ರ ಸಕ್ರಿಯವಾಗಿ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರು. ನಿಗಮದ ಅವ್ಯವಹಾರದ ಹಣ ಬಳ್ಳಾರಿ ಮತ್ತು ರಾಯಚೂರು ಕ್ಷೇತ್ರಗಳ ಚುನಾವಣೆಯಲ್ಲಿ ಬಳಕೆಯಾಗಿದೆ. ಇದು ಎರಡೂ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಆದ ದ್ರೋಹ. ಇದನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು. ಎರಡೂ ಕ್ಷೇತ್ರದ ಕಾಂಗ್ರೆಸ್‌ ಸಂಸದರನ್ನು ಅನರ್ಹಗೊಳಿಸಬೇಕು‘ ಎಂದು ಅರುಣ್‌ ಹಿರೇಹಾಳ್‌ ಅವರು ಸುಪ್ರೀಂ ಕೋರ್ಟ್‌ಗೆ ಇ–ಮೇಲ್‌ ಮೂಲಕ ಮನವಿ ಸಲ್ಲಿಸಿದ್ದಾರೆ.

‘ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳುವ 30 ದಿನಗಳ ಒಳಗೆ ಅಭ್ಯರ್ಥಿಗಳು ಚುನಾವಣಾ ವೆಚ್ಚವನ್ನು ಚುನಾವಣಾಧಿಕಾರಿಗೆ ಸಲ್ಲಿಸಬೇಕು ಎಂಬುದು ನಿಯಮ. ಆದರೆ ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚದ ವಿವರಣೆ ಇನ್ನೂ ಬಹಿರಂಗವಾಗಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ಪಡೆಯಲು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್‌ ಕುಮಾರ್‌ ಮೀನಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರ ಸಂಪರ್ಕ ಸಾಧ್ಯವಾಗಲಿಲ್ಲ. 

ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿರುವ ಕುರಿತು ಪಕ್ಷೇತರ ಅಭ್ಯರ್ಥಿ ಅರುಣ್‌ ಹಿರೇಹಾಳ್‌ ಅವರು ಚುನಾವಣಾ ಆಯೋಗಕ್ಕೆ ಇ–ಮೇಲ್‌ ಮೂಲಕ ನೀಡಿದ್ದ ದೂರು
ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿರುವ ಕುರಿತು ಪಕ್ಷೇತರ ಅಭ್ಯರ್ಥಿ ಅರುಣ್‌ ಹಿರೇಹಾಳ್‌ ಅವರು ಚುನಾವಣಾ ಆಯೋಗಕ್ಕೆ ಇ–ಮೇಲ್‌ ಮೂಲಕ ನೀಡಿದ್ದ ದೂರು

ಚುನಾವಣಾ ಉಸ್ತುವಾರಿಯಾಗಿದ್ದ ನಾಗೇಂದ್ರ 

‘ಸಂಡೂರು ಶಾಸಕರಾಗಿದ್ದ ಇ. ತುಕಾರಾಂ ಅವರನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಬಲವಂತದಿಂದ ಕಣಕ್ಕಿಳಿಸಿತ್ತು. ಅವರ ಚುನಾವಣಾ ಉಸ್ತುವಾರಿಯನ್ನು ಬಿ. ನಾಗೇಂದ್ರ ವಹಿಸಿಕೊಂಡಿದ್ದರು. ತುಕಾರಾಂ ಸೇರಿ ಬಳ್ಳಾರಿ ಜಿಲ್ಲೆಯಿಂದ ಯಾರೂ ಸಹ ರಾಜ್ಯ ಸಚಿವ ಸಂಪುಟ ಸೇರಬಾರದು ಎಂಬುದು ಬಿ.ನಾಗೇಂದ್ರ ಉದ್ದೇಶವಾಗಿತ್ತು. ಹೀಗಾಗಿ ತುಕಾರಾಂ ಗೆಲುವಿಗೆ ನಾಗೇಂದ್ರ ಶ್ರಮಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ಚುನಾವಣಾ ಅಕ್ರಮದ ದೂರನ್ನು ಸಾಮಾಜ ಕಲ್ಯಾಣ ಇಲಾಖೆಗೆ ವರ್ಗಾಯಿಸಿದ್ದು ಅಚ್ಚರಿ ಮೂಡಿಸಿದೆ. ಇದು ಕಾಲಹರಣ ತಂತ್ರವೇ ಅಥವಾ ಯಾರೊಬ್ಬರ ರಕ್ಷಣೆಗೆ ಮಾಡಿದ ತಂತ್ರವೇ ತಿಳಿಯದು.
–ಅರುಣ್ ಹಿರೇಹಾಳ, ದೂರುದಾರ
ಸಮಾಜ ಕಲ್ಯಾಣ ಇಲಾಖೆಗೆ ದೂರು ವರ್ಗಾವಣೆಯಾದ ಬಗ್ಗೆ ನನಗೆ ಪ್ರತಿಕ್ರಿಯೆ ನೀಡಲಾಗದು. ಚುನಾವಣಾ ವೆಚ್ಚ ಅಂತಿಮಗೊಂಡಿದೆ. ಜಿಲ್ಲಾಡಳಿತ ಕಚೇರಿ ಸಂಪರ್ಕಿಸಬಹುದು. 
-ಪ್ರಶಾಂತ್‌ ಕುಮಾರ್‌ ಮಿಶ್ರಾ, ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT