ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Gandhi Jayanti: ದೊಡ್ಡಬಳ್ಳಾಪುರದಲ್ಲಿ ಬಾಪೂ ಹೆಜ್ಜೆ ಗುರುತು

ದಂಡಿ ಉಪ್ಪಿನ ಸತ್ಯಾಗ್ರಹ ನಡೆಗೆ ನೆನಪಿಸುವ ಗಾಂಧಿನಗರ ಪ್ರವೇಶ ದ್ವಾರ  
Published : 2 ಅಕ್ಟೋಬರ್ 2024, 4:05 IST
Last Updated : 2 ಅಕ್ಟೋಬರ್ 2024, 4:05 IST
ಫಾಲೋ ಮಾಡಿ
Comments

ದೊಡ್ಡಬಳ್ಳಾಪುರ: ಗಾಂಧಿ ಹೆಜ್ಜೆ ಗುರುತು ನಾಡಿನಾದ್ಯಂತ ಇರುವಂತೆ ದೊಡ್ಡಬಳ್ಳಾಪುರದಲ್ಲೂ ಮೂಡಿದೆ. ಇಲ್ಲಿಯೂ ಸ್ವಾತಂತ್ರ್ಯ ಚಳುವಳಿ ಸೇರಿದಂತೆ ನಂತರದ ದಿನಗಳಲ್ಲೂ ರೈತ, ದಲಿತ ಹಾಗೂ ಕನ್ನಡಪರ ಹೋರಾಟಗಳು ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಕಾರಣವಾಗಿದೆ.

ಗಾಂಧೀಜಿ ಅವರು ದೊಡ್ಡಬಳ್ಳಾಪುರದ ನೆಲದಲ್ಲಿ ನಿಂತು ಭಾಷಣ ಮಾಡಿದ್ದ ಸ್ಥಳಕ್ಕೆ ‘ಗಾಂಧಿನಗರ’ ಎಂದು ನಾಮಕರಣ ಮಾಡುವ ಮೂಲಕ ನಗರದ ಹಿರಿಯರು ಸ್ಮರಿಸಿದ್ದಾರೆ. ಹಾಗೆಯೇ ಸ್ವಾತಂತ್ರ್ಯದ 75ನೇ ವರ್ಷಾಚಣೆ ನೆನಪಿಗಾಗಿ ಗಾಂಧಿನಗರಕ್ಕೆ ಪ್ರವೇಶ ಮಾಡುವ ಮುಖ್ಯ ಪ್ರವೇಶ ದ್ವಾರದಲ್ಲಿ ‘ದಂಡಿ ಉಪ್ಪಿನ ಸತ್ಯಾಗ್ರಹ’ದ ನಡಿಗೆ ನೆನಪಿಸುವ ಸುಂದರ ಚಿತ್ರಗಳನ್ನು ನಿರ್ಮಾಣ ಮಾಡಿಸುವ ಮೂಲಕ ಗಾಂಧಿನಗರದ ಭಾಗದ ಹಿರಿಯ ನಗರಸಭೆ ಸದಸ್ಯ ಟಿ.ಎನ್‌.ಪ್ರಭುದೇವ್‌ ಅವರು ಇಂದಿನ ಪಿಳಿಗೆ ಗಾಂಧೀಜಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ.

ದೊಡ್ಡಬಳ್ಳಾಪುರಕ್ಕೆ ಗಾಂಧೀಜಿ ಅವರು ಎರಡು ಬಾರಿ ಆಗಮಿಸಿದ್ದರು. ಆದರೆ, 1936ರಲ್ಲಿ ಗಾಂಧೀಜಿ ಅವರು ಬಂದ ನಂತರದ ದಿನಗಳು ಮೈಸೂರು ರಾಜ್ಯದ ಸ್ವಾತಂತ್ರ್ಯ ಹೋರಾಟದಲ್ಲಿ ಹೊಸ ಬದಲಾವಣೆ ಪ್ರಾರಂಭವಾಗಲು ಕಾರಣವಾಗಿಯಿತು ದೊಡ್ಡಬಳ್ಳಾಪುರ.

ಬೆಂಗಳೂರು ನಗರ, ಕನಕಪುರ, ಚನ್ನಪಟ್ಟಣ ಮುಂತಾದ ಕಡೆ ನೂರಾರು ಸ್ವಾತಂತ್ರ್ಯ ಯೋಧರು ಸ್ವಾತಂತ್ರ್ಯ ಚಳವಳಿಗೆ ಧುಮುಕಲು ಪ್ರೇರಣೆಯಾಗಿದೆ. ಇಲ್ಲಿ ನಿಂತು ಗಾಂಧೀಜಿ ಅವರು ಆಡಿದ್ದ ಸ್ಫೂರ್ತಿದಾಯಕ ಮಾತುಗಳು ಎನ್ನುವುದನ್ನು ಇತಿಹಾಸಕಾರರು ನೆನೆಯುತ್ತಾರೆ.

ಅನಿಬೆಸೆಂಟ್‌ರ ಅನುಯಾಯಿ ಆಗಿದ್ದ ದೊಡ್ಡಬಳ್ಳಾಪುರದ ಟಿ.ಸಿದ್ಧಲಿಂಗಯ್ಯ,  ವಲ್ಲಭಭಾಯಿಪಟೇಲ್, ಕಮಲಾದೇವಿ ಚಟ್ಟೋಪಾಧ್ಯಾಯ ಒತ್ತಾಯದ ಮೇರೆಗೆ ಮೈಸೂರು ಸಂಸ್ಥಾನದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಲು ಗಾಂಧೀಜಿ ಅವರು ಇಲ್ಲಿಗೆ ಭೇಟಿ ನೀಡಿ ಹೋಗಿದ್ದು ಸಹ ಒಂದು ಕಾರಣವಾಗಿದೆ.

ಟಿ.ಸಿದ್ಧಲಿಂಗಯ್ಯ ನೇತೃತ್ವದಲ್ಲಿ ನಡೆದ ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ಕೆಂಗಲ್ ಹನುಮಂತಯ್ಯ, ಎಚ್.ಕೆ.ವೀರಣ್ಣಗೌಡ, ಟಿ.ವೆಂಕಟಪ್ಪ, ಎಸ್.ಕರಿಯಪ್ಪ, ಎಚ್‌.ಮುಗುವಾಳಪ್ಪ ಮೊದಲಾದವರು ಸ್ವಾತಂತ್ರ್ಯ ಯೋಧರಾಗಿ ನಿಂತವರು. ಈ ಬೆಳವಣಿಗೆಯಿಂದ ಮೈಸೂರು ಸಂಸ್ಥಾನದಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರತೆ ಪಡೆಯಲು ಕಾರಣವಾಯಿತು.

80ರ ದಶಕದ ಕೊನೆಯಲ್ಲಿ ಕೊಂಗಾಡಿಯಪ್ಪ ಕಾಲೇಜಿನ ಎನ್.ಎಸ್‌.ಎಸ್ ವಿದ್ಯಾರ್ಥಿಗಳಿಗೆ ಗಾಂಧಿ ವಿಚಾರ ತಿಳಿಸಲು ಪರ್ಯಾಯ ಅಭಿವೃದ್ಧಿ ಮಾದರಿಗಳನ್ನು ಪರಿಚಯಿಸಲಾಯಿತು. ಬದಲಿ ಬೇಸಾಯ ಪದ್ಧತಿ, ಅಧಿಕಾರ ವಿಕೇಂದ್ರೀಕರಣ ಕುರಿತು, ಪರಿಸರ ವ್ಯವಸ್ಥೆ ಬಗ್ಗೆ ಶಿಕ್ಷಣ ನೀಡಲು ಪ್ರತಿವರ್ಷ ವಿಶೇಷ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಿತು.

ಇದರಿಂದ ನೂರಾರು ಜನ ಯುವಕ, ಯುವತಿಯರು ಪಠ್ಯದಾಚೆಗಿನ ಪ್ರಜ್ಞಾವಂತರಾಗಿ ಬೆಳೆಯಲು ಮಾರ್ಗದರ್ಶಿಯಾಗಿದೆ. ಇದಕ್ಕೆ ಕಾರಣ ಈ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಗಾಂಧಿವಾದಿಗಳಾಗಿದ್ದ ಎಚ್.ಎಸ್.ದೊರೆಸ್ವಾಮಿ, ಸತ್ಯವ್ರತ, ಡಾ.ವಿಷ್ಣುಕಾಮತ್, ಪ್ರೊ.ಎಸ್‌.ನಾರಾಯಣನ್, ಡಾ.ಮಹಾದೇವ, ಸಿ.ನಾರಾಯಣಸ್ವಾಮಿ, ಪ್ರೊ.ಬಿ.ಕೆ.ಚಂದ್ರಶೇಖರ್, ರಾಮಚಂದ್ರಗುಹ, ಎಲ್.ನಾರಾಯಣರೆಡ್ಡಿ, ಡಾ.ಸೋಮಶೇಖರರೆಡ್ಡಿ ಮುಂತಾದ ಅನೇಕ ಪ್ರಸಿದ್ಧ ಚಿಂತಕರು, ಹೋರಾಟಗಾರರು ಭಾಗವಹಿಸಿದ್ದು.

ಯುವ ವಿದ್ಯಾರ್ಥಿ ಸಮುದಾಯ ಕ್ರಿಯಾಶೀಲ ವ್ಯಕ್ತಿತ್ವ ರೂಪಿಸಿಕೊಂಡು ಸ್ವತಂತ್ರವಾಗಿ ಆಲೋಚಿಸುವ ಸಾಮರ್ಥ್ಯ ಬೆಳೆಸಿದ್ದು ‘ಗಾಂಧಿ ಶಿಬಿರಗಳು’. ಗಾಂಧೀಜಿಯವರ ಹೋರಾಟ ಮನೋಭಾವ, ಸತ್ಯಪ್ರಿಯತೆ, ಸಾಮರಸ್ಯ, ಧಾರ್ಮಿಕ ಸಹಿಷ್ಣುತೆ, ಜಾತ್ಯತೀತ ಮನೋಭಾವ ಬೆಳೆಯಲು ಕಾರಣವಾಗಿದೆ.

ದೊಡ್ಡಬಳ್ಳಾಪುರಕ್ಕೆ ಗಾಂಧೀಜಿ ಅವರು 1934ರಲ್ಲಿ ಆಗಮಿಸಿದ್ದಾಗಿನ ಚಿತ್ರ
ದೊಡ್ಡಬಳ್ಳಾಪುರಕ್ಕೆ ಗಾಂಧೀಜಿ ಅವರು 1934ರಲ್ಲಿ ಆಗಮಿಸಿದ್ದಾಗಿನ ಚಿತ್ರ

ಚಳುವಳಿಗಳಿಗೆ ಬಲ

ಸ್ವಾತಂತ್ರ್ಯದ ನಂತರ ದೊಡ್ಡಬಳ್ಳಾಪುರದಲ್ಲಿ ಚಳವಳಿ ಕಾಲದ ಬಿಸಿ ಆರಲಿಲ್ಲ. ಹಳೆ ಕಾಂಗ್ರೆಸ್ಸಿಗರಾದ ನಾ.ನಂಜುಂಡಯ್ಯ ಅಂತರಹಳ್ಳಿ ನರಸಿಂಹಯ್ಯ ಕಮ್ಯುನಿಸ್ಟ್ ಪಕ್ಷದ ಎಚ್‌.ಮುಗುವಾಳಪ್ಪ ರಾಮಭದ್ರಯ್ಯ ಗಾಂಧೀಜಿ ಅವರ ಹೋರಾಟದ ಸ್ಫೂರ್ತಿ ಕುಗ್ಗದಂತೆ ದಶಕಗಳ ಕಾಲ ನೋಡಿಕೊಂಡವರು. ಈ ಎಲ್ಲ ಹಿರಿಯರ ಪರಿಶ್ರಮದ ಫಲವಾಗಿ ರೈತ ಹೋರಾಟ ಕನ್ನಡಪರ ಹೋರಾಟ ದಲಿತ ಚಳವಳಿ ಕಮ್ಯುನಿಸ್ಟ್ ಸಂಘಟನೆಗಳು ಇಂದಿಗೂ ಬಲವಾಗಿ ಬೇರೂರಿ ನಿಂತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT