ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ಮೂಲ ಸ್ವರೂಪ ಕಳೆದುಕೊಂಡ ಕೆರೆಗಳು

ರಾಜಕಾಲುವೆ ಮೇಲಿನ ಚಪ್ಪಡಿ ಕಲ್ಲುಗಳು ಅನ್ಯರ ಪಾಲು
Published 22 ಜುಲೈ 2024, 7:24 IST
Last Updated 22 ಜುಲೈ 2024, 7:24 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಎಲ್ಲ ಕೆರೆಗಳಲ್ಲಿ ಗಿಡಗಂಟಿ ಬೆಳೆದು ನಿಂತು ಮೂಲ ರೂಪವನ್ನೇ ಕಳೆದುಕೊಂಡಿವೆ. ರಾಜ ಕಾಲುವೆಗಳೇ ಮಾಯವಾಗಿವೆ. ಕೂಡಲೇ ಕೆರೆಗಳ ಸ್ವಚ್ಛತೆ ಹಾಗೂ ರಾಜ ಕಾಲುವೆಗಳನ್ನು ಮರು ನಿರ್ಮಾಣ ಮಾಡಬೇಕಾಗಿದೆ.

ತಾಲ್ಲೂಕಿನಲ್ಲಿ ಸಣ್ಣ ಹಾಗೂ ದೊಡ್ಡ ಪ್ರಮಾಣದ ಒಟ್ಟು 430 ಕೆರೆಗಳಿವೆ. ಬಹುತೇಕ ಎಲ್ಲ ಕೆರೆಗಳಲ್ಲಿ ಜಾಲಿ, ಲಾಂಟಾನ, ಎಕ್ಕೆ, ಬೇಲಿ ಮತ್ತಿತರ ನಾನಾ ಬಗೆ ಗಿಡಗಳು ಹೆಮ್ಮರಗಳಂತೆ ಬೆಳೆದು ನಿಂತಿವೆ. ಕೆರೆಗಳು ತಮ್ಮ ಸ್ವರೂಪ ಕಳೆದುಕೊಂಡಿವೆ.

ಈ ಹಿಂದೆ ಹಳ್ಳಿಗಳಲ್ಲಿ ಮನೆಗೊಬ್ಬರಂತೆ ರಾಜ ಕಾಲುವೆಗಳನ್ನು ಸ್ವಚ್ಛ ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಭೂಮಿ ಬೆಲೆ ಹಾಗೂ ಜನರ ದುರಾಸೆಯಿಂದಾಗಿ ಕೆಲವು ಕಡೆ ರಾಜ ಕಾಲುವೆ ಒತ್ತುವರಿಯಾಗಿದ್ದರೆ ಮತ್ತೆ ಕೆಲವು ಕಡೆ ರಾಜ ಕಾಲುವೆಗಳ ಮೇಲಿನ ಚಪ್ಪಡಿ ಕಲ್ಲುಗಳನ್ನೇ ಕಿತ್ತು ಹಾಕಲಾಗಿದೆ.

ಬಹುತೇಕ ಕಡೆ ಜಾಲಿ ಹಾಗೂ ಗಾರೆ ಮುಳ್ಳಿನ ಮರಗಳು ಬೆಳೆದಿವೆ. ಕುರಿ, ಮೇಕೆ, ಎಮ್ಮೆ, ಹಸು ಮತ್ತಿತರ ಪ್ರಾಣಿಗಳು ಹುಲ್ಲು ಮೇಯಲೂ ಆಗದ ವಾತಾವರಣ ನಿರ್ಮಾಣವಾಗಿದೆ.

ನಂಗಲಿ ಕೆರೆ ಜಿಂಕೆ, ಕಾಡು ಹಂದಿ ಮತ್ತಿತರ ಪ್ರಾಣಿಗಳ ವಾಸಸ್ಥಳವಾಗಿತ್ತು. ಆದರೆ, ನಾಲ್ಕು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಕೆರೆ ತುಂಬಿದ್ದು ಪ್ರಾಣಿಗಳ ವಾಸಸ್ಥಾನ ಬದಲಾಗಿದೆ.

ಮಲ್ಲೆಕುಪ್ಪ ಕೆರೆಯಲ್ಲಿ ಜಾಲಿ, ಲಾಂಟಾನ, ಎಕ್ಕೆ, ಬೇಲಿ ಮತ್ತಿತರ ಗಿಡಗಳು ಪೊದೆಯಂತೆ ಬೆಳೆದು ನಿಂತಿದೆ. ಬೈರಕೂರು, ತಾಯಲೂರು, ಮಲ್ಲನಾಯಕನಹಳ್ಳಿ, ಮುಳಬಾಗಿಲು ಸೋಮೇಶ್ವರ, ನಗವಾರ, ಬ್ಯಾಟನೂರು, ಉಪ್ಪರಹಳ್ಳಿ, ಮಲ್ಲೆಕುಪ್ಪ ,ನಂಗಲಿ ಕೆರೆಗಳು ತ್ಯಾಜ್ಯದ ಕೇಂದ್ರಗಳಾಗಿ ಮಾರ್ಪಟ್ಟಿವೆ.

ಇನ್ನು ಕೆಲವು ಕೆರೆಗಳನ್ನು ರೈತರು ಒತ್ತುವರಿ ಮಾಡಿಕೊಂಡು ತರಕಾರಿ ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. 

ಮಲ್ಲೆಕುಪ್ಪ ಕೆರೆಯಲ್ಲಿ ಜಾಲಿ ಮರಗಳು ಪೊದೆಗಳಂತೆ ಆವರಿಸಿಕೊಂಡಿರುವುದು
ಮಲ್ಲೆಕುಪ್ಪ ಕೆರೆಯಲ್ಲಿ ಜಾಲಿ ಮರಗಳು ಪೊದೆಗಳಂತೆ ಆವರಿಸಿಕೊಂಡಿರುವುದು
ನಂಗಲಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜ ಕಾಲುವೆ ಮೇಲಿನ ಕಲ್ಲು ಚಪ್ಪಡಿಗಳು ಅನ್ಯರ ಪಾಲಾಗಿರುವುದು
ನಂಗಲಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜ ಕಾಲುವೆ ಮೇಲಿನ ಕಲ್ಲು ಚಪ್ಪಡಿಗಳು ಅನ್ಯರ ಪಾಲಾಗಿರುವುದು
ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ಗಿಡಗಂಟಿ ಒತ್ತುವರಿ ಕಸ ಕಡ್ಡಿ ತ್ಯಾಜ್ಯ ತುಂಬಿದ್ದರೆ ಕೆಲವು ಕೆರೆಗಳಂತೂ ಕೆರೆಗಳ ರೀತಿಯೇ ಕಾಣಿಸದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೆರೆಗಳನ್ನು ಸರ್ವೆ ಮಾಡಿ ಒತ್ತುವರಿ ತೆರವು ಹಾಗೂ ಸ್ವಚ್ಚತೆಗೆ ಮಾಡಿಸಲು ಕ್ರಮ ಕೈಗೊಳ್ಳಬೇಕಾಗಿದೆ.
ಪ್ರಭಾಕರ್ ಯಲುವಹಳ್ಳಿ
ಸುಮಾರು ಕೆರೆಗಳು ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ. ಇನ್ನು ಸುಮಾರು ಕೆರೆಗಳಲ್ಲಿ ಗಿಡಗಂಟಿಗಳಿಂದ ತುಂಬಿರುವುದು ತಿಳಿದು ಬಂದಿದೆ. ಕೆರೆಗಳ ಸರ್ವೆ ಮಾಡಿ ಒತ್ತುವರಿ ತೆರವು ಮಾಡಿಸಲಾಗುವುದು
ಬಿ.ಆರ್.ಮುನಿವೆಂಕಟಪ್ಪ ಗ್ರೇಡ್ 2 ತಹಶೀಲ್ದಾರ್
ರಾಜ ಕಾಲುವೆಗಳೇ ಇಲ್ಲ
ಕೆರೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ರಾಜ ಕಾಲುವೆಗಳೇ ಇಲ್ಲವಾಗಿದೆ.  ನಂಗಲಿ ಕೆರೆಯಿಂದ ಹಾದು ಹೋಗಿರುವ ರಾಜ ಕಾಲುವೆ ಮೇಲಿನ ಕಲ್ಲು ಚಪ್ಪಡಿಗಳು ಹಲವರ ಪಾಲಾಗಿವೆ. ಬೈರಕೂರು ಕೆರೆ ರಾಜ ಕಾಲುವೆಯನ್ನು ಸ್ಥಳೀಯರೊಬ್ಬರು ಒತ್ತುವರಿ ಮಾಡಿಕೊಂಡಿಕೊಂಡಿದ್ದಾರೆ.  ಕೆರೆಗಳಲ್ಲಿ ಆಳೆತ್ತರದ ಗುಂಡಿ ನಿರ್ಮಾಣವಾಗಿ ಬಹುತೇಕ ಕೆರೆಗಳ ರೂಪವೇ ಬದಲಾಗಿದೆ ಎಂದು ಬೈರಕೂರು ಶೇಖರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT