ಈ ಬಾರಿ ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ಬಲವರ್ಧನೆಗೆ ಸರ್ಕಾರ ಶೇ 60ರಷ್ಟು ಅನುದಾನ ಮೀಸಲಿರಿಸಬೇಕು. ಕಳಸಾ–ಬಂಡೂರಿ ಮಹದಾಯಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಜಿಲ್ಲೆಯ ಎಪಿಎಂಸಿಗಳಲ್ಲಿ ಶೈತ್ಯಾಗಾರಗಳನ್ನು ನಿರ್ಮಿಸಬೇಕು. ನನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಗಳಿಗೆ ಚಾಲನೆ ಕೊಡಬೇಕು. ಬೆಳಗಾವಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಕೊಡಬೇಕು–ಸಿದಗೌಡ ಮೋದಗಿ ಅಧ್ಯಕ್ಷ ಭಾರತೀಯ ಕೃಷಿಕ ಸಮಾಜ(ಸಂಯುಕ್ತ) ರೈತ ಸಂಘಟನೆ
ಬೆಳಗಾವಿಯಲ್ಲಿರುವ ಕೈಗಾರಿಕೆಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಉದ್ಯೋಗ ಸೃಷ್ಟಿಗಾಗಿ ಕೈಗಾರಿಕೆ ವಸಾಹತು ಸ್ಥಾಪಿಸಬೇಕು. ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಮಹಾನಗರಕ್ಕೆ ಸಂಪರ್ಕ ವ್ಯವಸ್ಥೆ ಸುಧಾರಿಸಬೇಕು–ರಾಜೇಂದ್ರ ಪೋರವಾಲ್ ಅಧ್ಯಕ್ಷ ಬೆಳಗಾವಿ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆ ಸಂಸ್ಥೆ
ಸಂಚಾರದಟ್ಟಣೆ ನಿಯಂತ್ರಿಸಲು ಬೆಳಗಾವಿ ನಗರಕ್ಕೆ ಕನಿಷ್ಠ 6 ಕಿ.ಮೀ ರಸ್ತೆ ಮೇಲ್ಸೇತುವೆ ಅಗತ್ಯವಿದೆ. ಸಚಿವ ಸತೀಶ ಜಾರಕಿಹೊಳಿ ಈಚೆಗೆ ಸ್ಥಳವನ್ನೂ ಪರಿಶೀಲಿಸಿದ್ದಾರೆ. ಕಾಮಗಾರಿಯನ್ನು ಎರಡು ವರ್ಷಗಳಲ್ಲಿ ಮುಗಿಸಬೇಕು ಎಂದು ಅಧಿಕಾರಿಗಳಿಗೂ ಸೂಚಿಸಿದ್ದಾರೆ. ಈ ಬಜೆಟ್‌ನ ಪಟ್ಟಿಯಲ್ಲಿ ರಸ್ತೆ ಮೇಲ್ಸೇತುವೆಗಳನ್ನು ಸೇರಿಸಬೇಕು–ಅಶೋಕ ಚಂದರಗಿ ಅಧ್ಯಕ್ಷ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಬೆಳಗಾವಿ
ಬೆಳಗಾವಿಯ ಶಹಾಪುರ ವಡಗಾವಿಯಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಹಾಗಾಗಿ ನೇಕಾರರು ತಯಾರಿಸಿದ ಸೀರೆಗಳು ಮತ್ತು ಬಟ್ಟೆಗಳನ್ನು ಸರ್ಕಾರದ ವಿವಿಧ ಇಲಾಖೆಗಳಿಂದಲೇ ನೇರವಾಗಿ ಖರೀದಿಸಬೇಕು. ನೇಕಾರರ ಅಭಿವೃದ್ಧಿಗೆ ಸ್ಥಾಪಿಸಿದ ನಿಗಮಗಳನ್ನು ಪುನಶ್ಚೇತನಗೊಳಿಸಬೇಕು. ಇಲ್ಲಿ ಹೈಟೆಕ್ ಟೆಕ್ಸ್‌ಟೈಲ್ ತರಬೇತಿ ಕೇಂದ್ರ ಆರಂಭಿಸಬೇಕು. ನೇಕಾರರ ಸಬಲೀಕರಣಕ್ಕೆ ಒತ್ತು ಕೊಡಬೇಕು.–ಗಜಾನನ ಗುಂಜೇರಿ ಸಂಚಾಲಕ ಉತ್ತರ ಕರ್ನಾಟಕ ವೃತ್ತಿಪರ ನೇಕಾರರ ಹೋರಾಟ ಸಮಿತಿ
ಜಿಲ್ಲೆಯ ಬಹುಪಾಲು ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಕೈಯಲ್ಲೇ ಇವೆ. ಹೀಗಾಗಿ ರೈತರ ಕೂಗು ಅರಣ್ಯರೋದನವಾಗಿದೆ. ಒಂದೆಡೆ ಕಬ್ಬಿನ ದರ ಪರಿಷ್ಕರಣೆ ಆಗುತ್ತಿಲ್ಲ. ಇನ್ನೊಂದೆಡೆ ಬಿಲ್ ವಸೂಲಿಗೆ ಪರದಾಡುವ ಸ್ಥಿತಿ ಇದೆ. ಸದನದಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. –ಶ್ರೀಮಂತ ಮಲ್ಲಾಮರ್ಡಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.